ಅರಬ್‌ ಒಕ್ಕೂಟದಲ್ಲಿ ಜನರಿಗೆ ಮೋಸ ಮಾಡಿದ ಆರೋಪದಲ್ಲಿ ಒಬ್ಬ ಮಹಿಳೆಯನ್ನು ಬಂಧಿಸಲಾಯಿತು. ಅವಳ ವಿರುದ್ಧದ ಆರೋಪ ಏನು ಗೊತ್ತೆ? ತನ್ನದು ವಿಫಲ ಮದುವೆ, ತನ್ನ ಜೊತೆಗಿರುವ ಮಕ್ಕಳ ಪಾಲನೆ ಪೋಷಣೆಗಾಗಿ ಸಹಾಯ ಮಾಡಬೇಕೆಂದು ಆಕೆ ಸಾಮಾಜಿಕ ಜಾಲತಾಣಗಳಲ್ಲಿ ಮನವಿ ಮಾಡಿಕೊಂಡಿದ್ದಳು. ಅವಳ ಕಳಕಳಿಯ ಮನವಿಗೆ ಜನರು ಬಹಳ ಚೆನ್ನಾಗಿ ಸ್ಪಂದಿಸಿದರು. 17 ದಿನಗಳಲ್ಲಿ 50 ಸಾವಿರ ಡಾಲರ್‌ ಅಂದರೆ ಸುಮಾರು 35 ಲಕ್ಷ ರೂ.ಗಳ ಸಹಾಯ ಹರಿದು ಬಂತು. ತನ್ನ ಮಕ್ಕಳ ಭಾವಚಿತ್ರಗಳನ್ನು ಹಾಕಿ ಇವರಿಗಾಗಿ ಸಹಾಯ ಮಾಡಿ ಎಂದು ತನ್ನ ಅಕೌಂಟ್‌ ನಂಬರ್‌ ಕೊಟ್ಟಿದ್ದಳು. ಹೀಗಾಗಿ ಜನರು ಮನಃಪೂರ್ವಕವಾಗಿ ಸಹಾಯ ಮಾಡಿದ್ದರು.

ಆ ಮಹಿಳೆ ಮಕ್ಕಳ ಭಾವಚಿತ್ರ ಹಾಕಿ ಭಿಕ್ಷೆ ಬೇಡುತ್ತಿರುವುದು ಅವಳ ಮಾಜಿ ಪತಿಯ ಗಮನಕ್ಕೆ ಬಂತು. ಭಾವಚಿತ್ರದಲ್ಲಿರುವ ಮಕ್ಕಳು ಆ ಮಹಿಳೆಯ ಬಳಿ ಇಲ್ಲ, ತನ್ನ ಬಳಿ ಇದ್ದಾರೆ, ಅವರ ಪಾಲನೆ ಪೋಷಣೆಯ ಜವಾಬ್ದಾರಿ ತನ್ನದೇ ಆಗಿದೆಯೆಂದು ಮಹಿಳೆಯ ಪತಿ ದುಬೈ ಪೊಲೀಸರಿಗೆ ದೂರ ದಾಖಲಿಸಿದ. ಆಮೇಲೆ ಪೊಲೀಸರು ಅವಳನ್ನು ಬಂಧಿಸಿ ಕ್ರಮ ಜರುಗಿಸಿದರು.

7 ವರ್ಷದ ತೇಜಾ ಇಂದೋರ್‌ ನಲ್ಲಿ ತನ್ನ ತಂದೆಯೊಂದಿಗೆ ವಾಸಿಸುತ್ತಾನೆ. ಅವನು ಪೋಲಿಯೊಗ್ರಸ್ತ ಹುಡುಗ. ಆದರೆ ತನ್ನ ದೃಷ್ಟಿಯಲ್ಲಿ ಹಣ ಗಳಿಕೆಯ ಯಂತ್ರ. ಅವನ ತಂದೆ ಅವನನ್ನು ಭಿಕ್ಷೆ ನೀಡುವ ಗುಂಪಿಗೆ ಕೆಲವು ದಿನಗಳ ಮಟ್ಟಿಗೆ ಬಾಡಿಗೆ ರೂಪದಲ್ಲಿ ಕೊಡುತ್ತಾನೆ. ಆ ತಂಡ ಕೊಡುವ ಹಣವನ್ನು ತಂದೆ ಮಾದಕ ವ್ಯಸನಕ್ಕೆ ಬಳಸಿಕೊಳ್ಳುತ್ತಾನೆ.

ಅದೇ ರೀತಿಯ ಇನ್ನೊಂದು ಪ್ರಕರಣ. ಒಂದು ಮಗು ವಿಕಲಚೇತನ ಗೆಟಪ್‌ನಲ್ಲಿ ವೀಲ್‌ಚೇರ್‌ನಲ್ಲಿ ಕುಳಿತು, ತನ್ನನ್ನು ತಾನು ಅನಾರೋಗ್ಯಪೀಡಿತ ಎಂದು ಬಿಂಬಿಸಿ ಭಿಕ್ಷೆ ಬೇಡುತ್ತಿತ್ತು. ಅಲ್ಲಿಂದ ದಾಟಿ ಹೋಗುತ್ತಿದ್ದ ಒಬ್ಬ ವ್ಯಕ್ತಿಗೆ ಸಂದೇಹ ಉಂಟಾಗಿ, ಈ ಬಗ್ಗೆ ವಿಚಾರಿಸಿದಾಗ ಆ ಪ್ರಕರಣ ಬಯಲಾಯಿತು. ಪೊಲೀಸರು ಈ ಬಗ್ಗೆ ವಿಚಾರಿಸಿದಾಗ, ಆ ಹುಡುಗ ತನ್ನನ್ನು ಸಹಾರಾನ್‌ಪುರದಿಂದ ಜೈಪುರ್‌ಗೆ ಭಿಕ್ಷೆ ಬೇಡವೆಂದು ಕರೆತರಲಾಯಿತೆಂದು ಹೇಳಿದ. ಎಲ್ಲ ಮಕ್ಕಳು ಸೇರಿ ಪ್ರತಿದಿನ 1000-1500 ರೂ.ಗಳವರೆಗೆ ಕೊಡುತ್ತಾರೆ. 20% ಪಾಲನ್ನು ಭಿಕ್ಷೆಗೆ ನೇಮಿಸುವ ವ್ಯಕ್ತಿ ಮಕ್ಕಳ ಪೋಷಕರಿಗೆ ರವಾನಿಸುವ ವ್ಯವಸ್ಥೆ ಮಾಡುತ್ತಿದ್ದ.

ಮಕ್ಕಳಿಂದ 10,590 ರೂ., ಒಂದು ವೀಲ್‌ ಚೇರ್‌, ಬ್ಯಾಟರಿಗಳು, ಆ್ಯಂಪ್ಲಿಫೈರ್‌, ಸ್ಪೀಕರ್‌ ಮುಂತಾದವುಗಳನ್ನು ಪೊಲೀಸರು ವಶಪಡಿಸಿಕೊಂಡರು.

ಮಾಸ್ಟರ್‌ ಮೈಂಡ್‌ ಸಮೀರ್‌ ಉತ್ತರ ಪ್ರದೇಶದಿಂದ ವಿಕಲ ಚೇತರನ್ನು ರಾಜಸ್ಥಾನಕ್ಕೆ ಕರೆದುಕೊಂಡು ಹೋಗುತ್ತಿದ್ದ. ಅವರನ್ನು ರೈಲು ನಿಲ್ದಾಣದ ಹತ್ತಿರ ವಾಸ್ತವ್ಯದ ವ್ಯವಸ್ಥೆ ಮಾಡುತ್ತಿದ್ದ. ದೈಹಿಕವಾಗಿ ದುರ್ಬಲವಾಗಿರುವ ಅನಾರೋಗ್ಯ ಪೀಡಿತರಂತೆ ಭಾಸವಾಗುವವರನ್ನು ವೀಲ್‌ ಚೇರ್‌ ಮೇಲೆ ಕೂರಿಸುತ್ತಿದ್ದ. ಅವರಿಗೆ ಹರಿದು ಚಿಂದಿಯಾದ, ಅತ್ಯಂತ ಕೊಳೆ ಬಟ್ಟೆಯನ್ನು ತೊಡಲು ಕೊಡುತ್ತಿದ್ದ. ಒಬ್ಬ ಹುಡುಗನನ್ನು ವೀಲ್‌ ಚೇರ್‌ ನೂಕಲು ಸಿದ್ಧನಾಗಿಸುತ್ತಿದ್ದ. ವೀಲ್‌ ಚೇರ್‌ಗೆ ಬ್ಯಾಟರಿ, ಆ್ಯಂಪ್ಲಿಫೈರ್‌ ಹಾಗೂ ಪುಟ್ಟ ಸ್ಪೀಕರ್‌ ಒಂದನ್ನು ಅಳವಡಿಸಲಾಗಿರುತ್ತಿತ್ತು. ಸ್ಪೀಕರ್‌ನಲ್ಲಿ ವೀಲ್‌‌ಚೇರ್‌ ಮೇಲೆ ಕುಳಿತ ಹುಡುಗ ಹೃದಯ ರೋಗದಿಂದ ಬಳಲುತ್ತಿದ್ದಾನೆ. ಅದರ ಚಿಕಿತ್ಸೆಗಾಗಿ ಹಣದ ವ್ಯವಸ್ಥೆ ಅಗತ್ಯವಿದೆ ಎಂದು ಹೇಳಲಾಗುತ್ತಿತ್ತು.

ಎಷ್ಟು ಹೆಚ್ಚು ಮಕ್ಕಳೊ, ಅಷ್ಟು ಲಾಭ

ನಮ್ಮ ದೇಶದಲ್ಲಿ ಭಿಕ್ಷುಕರದ್ದೇ ಆದ ಕೆಲವು ಗ್ಯಾಂಗ್‌ ಗಳಿವೆ ಎನ್ನುವುದು ಅನೇಕ ಜನರಿಗೆ ಗೊತ್ತಿಲ್ಲ. ತಮ್ಮ ಗುಂಪಿನಲ್ಲಿ ಹೆಚ್ಚೆಚ್ಚು ಜನರಿರಬೇಕು, ಅದರಲ್ಲೂ ಮಕ್ಕಳ ಸಂಖ್ಯೆ ಹೆಚ್ಚಿಗೆ ಇರಬೇಕು ಎನ್ನುವುದು ಅವರ ಉದ್ದೇಶವಾಗಿರುತ್ತದೆ. ಮಕ್ಕಳಿದ್ದರೆ ಅವರಿಗೆ ಹೆಚ್ಚು ಲಾಭವಾಗುತ್ತದೆ. ಗ್ಯಾಂಗ್‌ನ ಮುಖಂಡನಿಗೆ ಮಕ್ಕಳಿಗೆ ಹೆಚ್ಚು ಹಣ ಕೊಡಬೇಕಾದ ಅಗತ್ಯ ಉಂಟಾಗುವುದಿಲ್ಲ.

ಭಿಕ್ಷೆ ಬೇಡವೆಂದೇ ಮಕ್ಕಳನ್ನು ಅಂಗವಿಕಲರನ್ನಾಗಿಸಿ, ಅವರ ಕೈಗೆ ಊರುಗೋಲು ಕೊಡಲಾಗುತ್ತದೆ. ಏಕೆಂದರೆ ಜನರು ಕರುಣೆಯಿಂದ ಹಣ ಕೊಡುತ್ತಾರೆ. ಮಹಾ ನಗರಗಳಲ್ಲಂತೂ ಭಿಕ್ಷುಕರ ಉಪಟಳ ಸ್ವಲ್ಪ ಹೆಚ್ಚಾಗಿಯೇ ಇದೆ. ನಗರದ ಮುಖ್ಯ ರೈಲು ನಿಲ್ದಾಣ, ಬಸ್‌ ನಿಲ್ದಾಣ, ಅತ್ಯಂತ ಹೆಚ್ಚು ವಾಹನ ಸಂಚರಿಸುವ ಸಿಗ್ನಲ್ ಪಾಯಿಂಟ್‌ಗಳನ್ನು ಇವರು ಆಕ್ರಮಿಸಿಕೊಂಡಿರುತ್ತಾರೆ. ಅದೊಂದು ರೀತಿ ಮಾಫಿಯಾದಂತಾಗಿಬಿಟ್ಟಿದೆ.

ಕೆಲವರು ಮೂಲತಃ ಅಂಗವಿಕಲರಾಗಿರುವುದಿಲ್ಲ. ಅವರನ್ನು ಅಂಗವಿಕಲರಂತೆ ಕಾಣಲು ಕೈಯಲ್ಲಿ ಊರುಗೋಲು ಕೊಡುತ್ತಾರೆ. ಭಿಕ್ಷುಕರ ಮಾಫಿಯಾ ಜನರು ಸಂಜೆಯಾಗುತ್ತಿದ್ದಂತೆ ಹೊರಬಂದು ಭಿಕ್ಷೆ ಬೇಡುವುದರಿಂದ ಹಣ ಸಂಗ್ರಹಿಸಿಕೊಂಡು ಹೋಗುತ್ತಾರೆ. ಆ ಬಳಿಕ ಅವರಿಗೆ ತಿನ್ನಲು ಒಂದಿಷ್ಟು ಹಣ ಕೊಟ್ಟು ಉಳಿದ ಹಣವನ್ನು ತೆಗೆದುಕೊಳ್ಳುತ್ತಾರೆ.

ಯಾವ ಭಿಕ್ಷುಕರನ್ನು ಯಾವ ಸಿಗ್ನಲ್‌ಗಳಲ್ಲಿ ಯಾವ ದೇವಸ್ಥಾನಗಳ ಮುಂದೆ ನಿಲ್ಲಿಸಬೇಕೆಂದು ಭಿಕ್ಷುಕರ ಮಾಫಿಯಾ ಮುಖಂಡರು ಮೊದಲೇ ನಿರ್ಧರಿಸುತ್ತಾರೆ. ಬೇರೆ ಗುಂಪಿನ ಭಿಕ್ಷುಕರು ಅಲ್ಲಿಗೆ ಬಂದರೆ ಅವರನ್ನು ಅಲ್ಲಿಂದ ಬಲವಂತವಾಗಿ ಹಿಂದೆ ಕಳಿಸಲಾಗುತ್ತದೆ.

ಧಾರ್ಮಿಕ ಸ್ಥಳಗಳಲ್ಲಿ ಭಿಕ್ಷುಕರ ಮಾಫಿಯಾ

ಅತ್ಯಂತ ದಯನೀಯ ಸ್ಥಿತಿಯಲ್ಲಿ ಕಂಡು ಬರುವವರನ್ನು ದೇವಸ್ಥಾನಗಳ ಮುಂಭಾಗದಲ್ಲಿ ಕೂರಿಸಲಾಗುತ್ತದೆ. ಏಕೆಂದರೆ ಇಂಥ ಭಿಕ್ಷುಕರಿಗೆ ಕರುಣೆಯಿಂದ ಸ್ವಲ್ಪ ಹೆಚ್ಚಿಗೆ ಕೊಡಲಿ ಎನ್ನುವುದು ಅವರ ಅಪೇಕ್ಷೆಯಾಗಿರುತ್ತದೆ. ದೇವಸ್ಥಾನಗಳ ಮುಂದೆ ಕುಳಿತುಕೊಳ್ಳುವ ಭಿಕ್ಷುಕರಿಗೆ ಹೇಗೆ ಮಾತನಾಡಬೇಕು, ಭಿಕ್ಷೆ ಹಾಕಿದ ಬಳಿಕ ಹೇಗೆ ಪ್ರತಿಕ್ರಿಯೆ ಕೊಡಬೇಕು ಎನ್ನುವುದರ ಬಗ್ಗೆ ತರಬೇತಿ ಕೊಡಲಾಗಿರುತ್ತದೆ.

ಎಕ್ಸ್ ಪರ್ಟ್‌ ಭಿಕ್ಷುಕರ ಪಾಶ್‌ ಏರಿಯಾಗಳು

ಪ್ರತಿಷ್ಠಿತ ಏರಿಯಾಗಳ ಸರ್ಕಲ್‌ ಗಳು ಹಾಗೂ ಮಾರುಕಟ್ಟೆಗಳಲ್ಲಿ ಅತ್ಯಂತ ಚಾಣಾಕ್ಷರಾಗಿರುವ ಭಿಕ್ಷುಕರನ್ನೇ ಭಿಕ್ಷುಕ ಮಾಫಿಯಾಗಳು ಕಳಿಸಿಕೊಡುತ್ತವೆ. ಏಕೆಂದರೆ ಚಾಣಾಕ್ಷಮತಿಯ ಭಿಕ್ಷುಕರು ಜನರ ಜೇಬಿನಿಂದ ಹಣ ಹೇಗೆ ಹೊರತೆಗೆಸಬೇಕು ಎನ್ನುವುದನ್ನು ಚೆನ್ನಾಗಿ ತಿಳಿದುಕೊಂಡಿರುತ್ತಾರೆ.

ಅಪರಾಧಿಗಳ ಭಿಕ್ಷೆಯ ಹೊಂದಾಣಿಕೆ

ನಗರಗಳಲ್ಲಿ ಭಿಕ್ಷುಕರ ಸಂಖ್ಯೆ ಹೆಚ್ಚುವುದರ ಜೊತೆಗೆ ಅಪರಾಧಿಗಳಿಗೆ ರಕ್ಷಣೆ ಕೂಡ ದೊರಕುತ್ತದೆ. ಎಷ್ಟೋ ಸಲ ಯಾವುದಾದರೂ ಅನಾಹುತಕ್ಕೆ ಕಾರಣವಾಗುವ ಅಪರಾಧಿಗಳು ಈ ಭಿಕ್ಷುಕರ ನಡುವೆ ಅಡಗಿ ಕುಳಿತುಕೊಳ್ಳುತ್ತಾರೆ. ಪೊಲೀಸರಿಗೆ ಅವರ ಸುಳಿವು ಸಿಗುವುದು ಕೂಡ ಕಷ್ಟಕರವಾಗುತ್ತದೆ. ರೈಲ್ವೆ ನಿಲ್ದಾಣ, ಬಸ್‌ ನಿಲ್ದಾಣ ಹಾಗೂ ಇತರ ನಿರ್ಜನ ಸ್ಥಳಗಳಿಂದ ದಾಟಿ ಹೋಗುವ ಪ್ರಯಾಣಿಕರೇ ಅವರ ಮುಖ್ಯ ಟಾರ್ಗೆಟ್‌ ಆಗಿರುತ್ತದೆ. ಬಳಿಕ ಅವರು ಭಿಕ್ಷುಕರ ನಡುವೆ ಹೋಗಿ ಮಲಗಿಬಿಡುತ್ತಾರೆ. ಪೊಲೀಸರು ಎಷ್ಟೋ ಸಲ ಇಂತಹ ತಂಡಗಳ ಮುಖವಾಡವನ್ನು ಕಳಚಿದ್ದಾರೆ.

ದೆಹಲಿಯ ಭಿಕ್ಷಾ ಪ್ರವೃತ್ತಿಯ ಬಗ್ಗೆ ಸ್ವಾಯತ್ತ ಸಂಸ್ಥೆಯೊಂದು ನಡೆಸಿದ ಅಧ್ಯಯನದ ವರದಿ ದಂಗುಬಡಿಸುವಂತಿದೆ. ಕೇವಲ ದೆಹಲಿಯೊಂದರಲ್ಲಿಯೇ ಭಿಕ್ಷೆ ಬೇಡುವ ಮಕ್ಕಳ ಸಂಖ್ಯೆ 3 ಲಕ್ಷಕ್ಕೂ ಹೆಚ್ಚು ಇದೆ. ಇದರ ಹಿಂದೆ ಒಂದಲ್ಲ ಅನೇಕ ಮಾಫಿಯಾಗಳು ಸಕ್ರಿಯವಾಗಿರುವುದು ಸ್ಪಷ್ಟವಾಗುತ್ತದೆ. ನಾವು ಇವರಿಗೆ ಭಿಕ್ಷೆ ಕೊಟ್ಟು ಪುಣ್ಯದ ಕೆಲಸ ಮಾಡುತ್ತಿದ್ದೇವಾ…?

ಭಿಕ್ಷುಕರ ಗ್ಯಾಂಗ್‌ಗಳು ಮಕ್ಕಳಿಗೆ ಭಿಕ್ಷೆಯ ಟ್ರೇನಿಂಗ್‌ ಅಷ್ಟೇ ಅಲ್ಲ, ಅಪರಾಧದ ತರಬೇತಿ ಕೂಡ ನೀಡುತ್ತಿವೆ.

ಒಂದು ಮಗು ಆಕಸ್ಮಿಕವಾಗಿ ವಾಹನದ ಮುಂದೆ ಪ್ರತ್ಯಕ್ಷವಾಗುತ್ತದೆ. ಗಾಡಿಯಿಂದ ಚಾಲಕ ಇಳಿದು ವಾಹನದ ಮುಂದೆ ಹೋಗುತ್ತಿದ್ದಂತೆ ಇನ್ನೊಂದು ಮಗು ಕಿಟಕಿಯಿಂದ ಅಲ್ಲಿರುವ ಮೊಬೈಲ್‌, ಅತ್ಯಂತ ಬೆಲೆಬಾಳುವ ವಸ್ತುಗಳನ್ನು ಎಗರಿಸಿಕೊಂಡು ಹೋಗುತ್ತದೆ. ಇಂತಹ ಮಕ್ಕಳು ಆ ಗ್ಯಾಂಗ್‌ನಿಂದ ತರಬೇತಿ ಪಡೆದಿರುತ್ತವೆ.

ಸುಶಿಕ್ಷಿತ ಭಿಕ್ಷುಕರು

ಭಿಕ್ಷುಕ ತಂಡದಲ್ಲಿ ಕೇವಲ ಚಿಕ್ಕಮಕ್ಕಳಷ್ಟೇ ಅಲ್ಲ, ಸುಶಿಕ್ಷಿತರು ಕೂಡ ಸೇರಿಕೊಂಡಿದ್ದಾರೆ. ದೇಶದಲ್ಲಿ ಪದವೀಧರ ಹಾಗೂ ಡಿಪ್ಲೋಮಾ ಕೋರ್ಸ್‌ ಮುಗಿಸಿದರು ಭಿಕ್ಷುಕರ ಗ್ಯಾಂಗ್‌ ಸೇರಿಕೊಂಡಿದ್ದಾರೆಂದು ಒಂದು ವರದಿ ತಿಳಿಸಿದೆ. ರಸ್ತೆಯಲ್ಲಿ ಭಿಕ್ಷೆ ಬೇಡುವ ಸುಮಾರು 78,000 ಜನರ ಬಳಿ ಪ್ರೊಫೆಶನ್‌ ಡಿಗ್ರಿಗಳಿವೆ.

2011ರ ಜನಗಣತಿ ಅಂಕಿಅಂಶಗಳ ಪ್ರಕಾರ, ಯಾವುದೇ ಉದ್ಯೋಗ ಮಾಡದ ಶೈಕ್ಷಣಿಕ ಅಂಕಿಅಂಶಗಳನ್ನು ಜಾರಿಗೊಳಿಸಲಾಯಿತು. ಅವರ ಪ್ರಕಾರ ದೇಶದಲ್ಲಿ 3.72 ಲಕ್ಷಕ್ಕಿಂತ ಹೆಚ್ಚು ಭಿಕ್ಷುಕರಿದ್ದು, ಸುಮಾರು 79,000 ಜನರು ಅಂದರೆ ಶೇ.21ರಷ್ಟು ಭಿಕ್ಷುಕರು 12ನೇ ತರಗತಿ ಪಾಸಾಗಿದ್ದಾರೆ. ಇವುಗಳಲ್ಲಿ ಸುಮಾರು 3000 ಭಿಕ್ಷುಕರು ಹೇಗಿದ್ದಾರೆಂದರೆ, ಅವರ ಬಳಿ ಯಾವುದಾದರೂ ಟೆಕ್ನಿಕ್‌ ಅಥವಾ ಪ್ರೊಫೆಶನಲ್ ಕೋರ್ಸ್‌ಗಳ ಡಿಗ್ರಿಗಳಿವೆ. ಅದರಲ್ಲಿ ಕೆಲವು ಭಿಕ್ಷುಕರು ಹೇಗಿದ್ದಾರೆಂದರೆ, ಅವರು ಎರಡು ಹೊತ್ತಿನ ಊಟಕ್ಕಾಗಿ ಭಿಕ್ಷೆ ಬೇಡುವುದಿಲ್ಲ. ಆಸ್ತಿಪಾಸ್ತಿ ಮಾಡಲೆಂದೇ ಭಿಕ್ಷಾವೃತ್ತಿಗೆ ಇಳಿದಿದ್ದಾರೆ. ಕೆಲವು ಭಿಕ್ಷುಕರು ಈಗ ಕೋಟ್ಯಧಿಪತಿಗಳಾಗಿದ್ದಾರೆ.

ಏಕೆ ಭಿಕ್ಷೆ ಬೇಡುತ್ತಾರೆ?

ಹೈದರಾಬಾದ್‌ನಲ್ಲಿ ಎಂಬಿಎ ಉತ್ತೀರ್ಣ ಫರ್ಜೋನಾ ಹೆಸರಿನ ಒಬ್ಬ ಯುವತಿ ಭಿಕ್ಷೆ ಬೇಡುವಾಗ ಸಿಕ್ಕಿಬಿದ್ದಿದ್ದಾಳೆ. ಅವಳು ಈ ಮುಂಚೆ ಲಂಡನ್ನಿನಲ್ಲಿ ಅಕೌಂಟ್‌ ಆಫೀಸರ್‌ ಆಗಿದ್ದಳು. ಈಗ ಅವಳು ತನ್ನ ಆರ್ಕಿಟೆಕ್ಟ್ ಪುತ್ರನೊಂದಿಗೆ ವಾಸಿಸುತ್ತಿದ್ದಾಳೆ. ಜೀವನದಲ್ಲಿ ಬೇಸತ್ತ ಆಕೆ ಒಬ್ಬ ಬಾಬಾನ ಬಳಿ ಹೋದಾಗ ಆಕೆ ಅವಳನ್ನು ಭಿಕ್ಷೆ ಬೇಡಲು ಹಚ್ಚಿದ ಎಂದು ತಿಳಿದುಬಂತು. ಅದೇ ರೀತಿ ಗ್ರೀನ್‌ ಕಾರ್ಡ್‌ ಹೋಲ್ಡರ್‌ ರಬಿಯಾ ಹೈದರಾಬಾದ್‌ನ ಒಂದು ದರ್ಗಾದ ಮುಂದೆ ಭಿಕ್ಷೆ ಬೇಡುವಾಗ ಸಿಕ್ಕಿಬಿದ್ದಳು. ತನ್ನ ಸಂಬಂಧಿಕರೊಬ್ಬರು ತನ್ನ ಅಪಾರ ಪ್ರಮಾಣದ ಆಸ್ತಿಯನ್ನು ದೋಚಿದರೆಂದು ಆಕೆ ಹೇಳಿದಳು.

ಆಂಧ್ರ ಪ್ರದೇಶದ ಗುಂಟೂರು ಜಿಲ್ಲೆಯ 27 ವರ್ಷದ ಓರ್ವ ಸುಶಿಕ್ಷಿತ ಭಿಕ್ಷುಕನ ಹೇಳಿಕೆಯ ಪ್ರಕಾರ, ತನ್ನ ಕುಟುಂಬದ ಆರ್ಥಿಕ ಸ್ಥಿತಿ ಅತ್ಯಂತ ಹೀನಾಯವಾಗಿದ್ದರಿಂದ ಅವನು ಓದನ್ನು ಅರ್ಧದಲ್ಲಿಯೇ ಬಿಟ್ಟು ಮುಂಬೈಗೆ ಬಂದ. ಕೆಲಸವೇನೊ ಸಿಕ್ಕಿತು. ಆದರೆ ಅದು ಕೂಲಿ ಕೆಲಸ. ಬಳಿಕ ಅವನು ಕೆಲಸ ಬಿಟ್ಟು ಭಿಕ್ಷೆಗೆ ಇಳಿದ. ಅವನಿಗೆ ಎಷ್ಟೊಂದು ಆದಾಯ ಬರುತ್ತದೆಂದರೆ, ತನ್ನ ಮನೆಯವರಿಗೂ ಕೂಡ ನೆರವಾಗುತ್ತಾರೆ.

ಭಿಕ್ಷೆ ಬೇಡುವ ದಂಧೆ

bheekh-mangane-ke-tareeke

ಭಿಕ್ಷೆ ಬೇಡು ದಂಧೆ ಇಂದು ಬಡವರ ವಿವಶತೆಯಲ್ಲ. ಓದು ಬರಹ ಬಲ್ಲ ಎಲ್ಲಕ್ಕೂ ಸುಲಭ ಆದಾಯದ ಮೂಲವಾಗಿದೆ. ಭಿಕ್ಷೆ ಬೇಡುವ ನಾಚಿಕೆಯಿಂದ ತಲೆ ತಗ್ಗಿಸುವುದರ ಮೂಲಕ ಅಲ್ಲ, ಬಲವಂತವಾಗಿ ಹಣ ಕೇಳತೊಡಗಿದಾಗ ಎದುರಿಗಿನ ವ್ಯಕ್ತಿ ನಾಚಿ ಹಣ ಕೊಡುತ್ತಾನೆ. ಕೊಡದಿದ್ದರೆ ಕೆಟ್ಟದಾಗಿ ಬೈಗುಳದ ಭಾಷೆ ಬಳಸುತ್ತಾರೆ.

ಭಿಕ್ಷೆ ಬೇಡುವುದನ್ನು ಕಾನೂನು ರೀತ್ಯ ಅಪರಾಧ ಎಂದು ಘೋಷಿಸಿದಾಗ್ಯೂ ಕೂಡ ಭಿಕ್ಷುಕರ ಸಂಖ್ಯೆ ಹೆಚ್ಚುತ್ತಲೇ ಹೊರಟಿದೆ. ಯಾವ ಮಕ್ಕಳ ಕೈಯಲ್ಲಿ ಪುಸ್ತಕ ಇರಬೇಕೊ, ಅವರ ಕೈಗೆ ಭಿಕ್ಷೆಯ ತಟ್ಟೆ ಕೊಡಲಾಗುತ್ತಿದೆ. ಕೆಲವು ತಾಯಿ ತಂದೆಯರೇ ತಮ್ಮ ಮಕ್ಕಳನ್ನು ಈ ದುಷ್ಟ ವರ್ತುಲಕ್ಕೆ ಸಿಲುಕಿಸುತ್ತಿದ್ದಾರೆ. ಕೆಲವರು ಮಕ್ಕಳನ್ನು ಅಂಗವಿಕಲರನ್ನಾಗಿಸಿ ಭಿಕ್ಷೆ ಬೇಡಿಸುತ್ತಾರೆ.

ಉತ್ತರ ಪ್ರದೇಶದಲ್ಲಿ ಎಂತಹ ಒಂದು ಗ್ರಾಮವಿದೆ ಎಂದರೆ, ಅಲ್ಲಿ ಪುರುಷರು ಭಿಕ್ಷೆ ಬೇಡುತ್ತಾರೆ. ಯಾವೊಬ್ಬ ಪುರುಷ ಭಿಕ್ಷೆ ಬೇಡಲು ಸಿದ್ಧನಾಗದಿದ್ದರೆ, ಅವರ ಮದುವೆಗೆ ಸಮುದಾಯ ಅವಕಾಶ ಕೊಡುವುದಿಲ್ಲ.

ಆ ಸಮಾಜದ ಮನಸ್ಥಿತಿ ಹೇಗಾಗಿ ಬಿಟ್ಟಿದೆಯೆಂದರೆ, ನೌಕರಿ ಮಾಡುವುದಕ್ಕಿಂತ ಭಿಕ್ಷೆ ಬೇಡುವುದೇ ಉತ್ತಮ ಎಂದು ಭಾವಿಸಲಾಗುತ್ತದೆ. ನೌಕರಿಯಿಂದ ತಿಂಗಳಿಗೆ 10-12 ಸಾವಿರ ಬಂದರೆ, ಭಿಕ್ಷೆಯಿಂದ ಅದರ ಎರಡು ಮೂರು ಪಟ್ಟು ದೊರಕುತ್ತದೆ.

ಭಿಕ್ಷುಕರ ಮಾಫಿಯಾ ಬಹು ದೊಡ್ಡ ದಂಧೆಯಾಗಿದ್ದು, ದೇಶದಲ್ಲಿ ಪ್ರತಿವರ್ಷ 48,000 ಮಕ್ಕಳು ಕಾಣೆಯಾಗುತ್ತಾರೆ. ಅದರಲ್ಲಿ ಅರ್ಧದಷ್ಟು ಮಕ್ಕಳು ವಾಪಸ್‌ ಸಿಗುವುದೇ ಇಲ್ಲ. ಬಹಳಷ್ಟು ಮಕ್ಕಳನ್ನು ಅಪರಾಧ ಹಾಗೂ ಭಿಕ್ಷಾ ವೃತ್ತಿಗೆ ನೂಕಲಾಗುತ್ತದೆ.

ಕೆಟ್ಟ ಪದ್ಧತಿ ನಿವಾರಣೆ ಹೇಗೆ?

ಕಾನೂನು ತಜ್ಞರು ಭಿಕ್ಷಾ ಮಾಫಿಯಾ ಬಗ್ಗೆ ಕಠಿಣ ಕಾನೂನು ರೂಪಿಸಬೇಕೆಂದು ಹೇಳುತ್ತಾರೆ. ಆದರೆ ಸಮಾಜಶಾಸ್ತ್ರಜ್ಞರು ಮಾತ್ರ ಮಕ್ಕಳನ್ನು ಆಶ್ರಯ ಕೇಂದ್ರದಲ್ಲಿರಿಸಿ ಕಾನೂನು ಮಾಡಬೇಕು, ಭಿಕ್ಷೆ ಬೇಡುವುದು ಗೌರವಪೂರ್ವಕ ವೃತ್ತಿಯಲ್ಲ ಎಂಬುದನ್ನು ಅವರಿಗೆ ಮನದಟ್ಟು ಮಾಡಿಕೊಡಬೇಕು ಎನ್ನುತ್ತಾರೆ.

ದೇಶದ ಶಿಕ್ಷಣ ತಜ್ಞರು ಹೇಳುವುದೇನೆಂದರೆ, ಶಿಕ್ಷಣ ಹಾಗೂ ಉದ್ಯೋಗ ನೀಡಿಕೆ ನಡುವಣ ಸರಿಯಾದ ಸಮತೋಲನ ಇಲ್ಲದ್ದಿದ್ದರೆ, ಈ ಸಮಸ್ಯೆ ಎದುರಾಗುತ್ತಿರಲಿಲ್ಲ. ಸುಶಿಕ್ಷಿತ ಭಿಕ್ಷುಕರ ಸಂಖ್ಯೆ ಇನ್ನೂ ಹೆಚ್ಚಿಗೆ ಇರಬಹುದೆಂದು ಅವರು ಸಂದೇಹ ವ್ಯಕ್ತಪಡಿಸುತ್ತಾರೆ. ಭಿಕ್ಷಾಟನೆಯನ್ನು ಒಳ್ಳೆಯ ವೃತ್ತಿ ಎಂದು ಭಾವಿಸಲಾಗುವುದಿಲ್ಲ. ಹೀಗಾಗಿ ಹೆಚ್ಚು ಶಿಕ್ಷಣ ಪಡೆದ ಭಿಕ್ಷುಕರು ತಮ್ಮ ಶೈಕ್ಷಣಿಕ ಸ್ಥಿತಿಗತಿಯ ಬಗ್ಗೆ ಸುಳ್ಳು ಹೇಳುತ್ತಾರೆ. ಮೊದಮೊದಲು ಅವರು ವಿವಶರಾಗಿ ಭಿಕ್ಷೆ ಬೇಡುತ್ತಾರೆ. ಮುಂದೆ ಅದೇ ಅವರ ಅಭ್ಯಾಸವಾಗುತ್ತದೆ. ಭಿಕ್ಷುಕರನ್ನು ಉದ್ಯೋಗದಲ್ಲಿ ತೊಡಗಿಸುವುದು ಕಷ್ಟದ ಕೆಲಸವಲ್ಲ, ಎಲ್ಲಿಯವರೆಗೆ ಶಿಕ್ಷಣ ನೀತಿಯಲ್ಲಿ ಬದಲಾವಣೆ ಆಗುವುದಿಲ್ಲ, ಅಲ್ಲಿಯವರೆಗೆ `ಸ್ಕಿಲ್ ಇಂಡಿಯಾ’ ಅಥವಾ ಭಿಕ್ಷುಕ ಮುಕ್ತ ಭಾರತದ ಕನಸು ನನಸಾಗುವುದು ಕಷ್ಟ.

ಮಹಾರಾಷ್ಟ್ರ ಸರ್ಕಾರ ರಾಜ್ಯವನ್ನು ಭಿಕ್ಷುಕ ಮುಕ್ತ ರಾಜ್ಯವನ್ನಾಗಿಸುವ ನಿಟ್ಟಿನಲ್ಲಿ ಕಾರ್ಯ ಪ್ರವೃತ್ತವಾಗಿದೆ.

ಭಿಕ್ಷುಕರನ್ನು ಬಂಧಿಸಿ ಅವರನ್ನು ಪುನರ್ವಸತಿ ಕೇಂದ್ರಕ್ಕೆ ಕಳಿಸಿ ಕೊಡಲಾಗುತ್ತದೆ. ಆದರೆ ಬಹಳಷ್ಟು ಭಿಕ್ಷುಕರು ಜಾಮೀನು ಪಡೆದು ಹೊರಹೋಗುತ್ತಾರೆ. ಹೀಗಾಗಿ ಭಿಕ್ಷುಕರ ಕೇಂದ್ರದಲ್ಲಿ 4 ವರ್ಷದಲ್ಲಿ 38%ರಷ್ಟು ಭಿಕ್ಷುಕರ ಸಂಖ್ಯೆ ಕಡಿಮೆಯಾಗಿದೆ.

ಭಿಕ್ಷುಕರು ಈಗ ವಕೀಲರನ್ನು ಇಟ್ಟುಕೊಂಡು 35 ಸಾವಿರ ರೂ. ಜಾಮೀನಿನ ಮೇಲೆ ಹೊರಬರುತ್ತಿದ್ದಾರೆ. ಕಳೆದ ವರ್ಷವಷ್ಟೇ ಪುಣೆಯಲ್ಲಿ 60 ಹಾಗೂ ಬೇರೆ ಕಡೆ 200ರಷ್ಟು ಭಿಕ್ಷುಕರು ಜಾಮೀನು ಪಡೆದಿದ್ದರು. ನ್ಯಾಯಾಧೀಶರ ಮುಂದೆ ಅವರು ಭಿಕ್ಷೆ ಬೇಡುವುದಿಲ್ಲ ಎಂದು ಹೇಳುತ್ತಾರಾದರೂ, ಬಿಡುಗಡೆ ಆಗುತ್ತಿದ್ದಂತೆ ಪುನಃ ಅದೇ ವೃತ್ತಿಯಲ್ಲಿ ನಿಕಟರಾಗುತ್ತಾರೆ.

ಅಪರಾಧ ವಿಭಾಗದ ಸಹಾಯಕ ಪೊಲೀಸ್‌ ಆಯುಕ್ತ ಭಾನು ಪ್ರತಾಪ್‌ ಹೇಳುವುದೇನೆಂದರೆ, ಭಿಕ್ಷುಕರಿಗೆ `ಈಸಿ ಮನಿ’ಯ ಅಭ್ಯಾಸ ಆಗಿಬಿಟ್ಟಿದೆ. ನಗದು ಜಮೆ ಮಾಡಿ, ದಂಡದ ರಸೀದಿ ಪಡೆದು ಇಲ್ಲಿ ಜಾಮೀನಿನ ಮೊತ್ತವನ್ನು ತಕ್ಷಣವೇ ಚುಕ್ತಾ ಮಾಡಿ ಬೇಗನೇ ಅಲ್ಲಿಂದ ಹೊರಡುತ್ತಾರೆ. ಹೀಗಾಗಿ ಪುನರ್ವಸತಿ ಕೇಂದ್ರದಲ್ಲಿ ಅವರ ಸಂಖ್ಯೆ ನಿರಂತರವಾಗಿ ಕಡಿಮೆಯಾಗುತ್ತದೆ.

ಭಿಕ್ಷಾಟನೆಯನ್ನು ಅಪರಾಧ ಎಂದು ಪರಿಗಣಿಸಬೇಕೋ, ಬೇಡವೋ ಎಂಬ ಚರ್ಚೆ ಹಲವು ಸಲ ಉಚ್ಚ ನ್ಯಾಯಾಲಯಗಳಲ್ಲಿ ಎದ್ದಿದೆ. ಆದರೆ ಭಿಕ್ಷೆ ಬೇಡುವುದನ್ನು ಅಪರಾಧದ ಶ್ರೇಣಿಯಿಂದ ಹೊರಗಿಡುವ ಕುರಿತಂತೆ ಕಲ್ಪಿಸಲಾದ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳ ಕುರಿತಂತೆ ಇರುವ ತೀರ್ಪುಗಳಲ್ಲಿ ಸರ್ಕಾರ ಅವರಿಗೆ ಆಹಾರ ಮತ್ತು ಉದ್ಯೋಗ ನೀಡುವ ನಿಟ್ಟಿನಲ್ಲಿ ವಿಫಲವಾದರೆ, ಭಿಕ್ಷೆ ಬೇಡುವುದನ್ನು ಅಪರಾಧ ಎಂದು ಹೇಗೆ ಪರಿಗಣಿಸಲು ಸಾಧ್ಯ? ಒಬ್ಬ ವ್ಯಕ್ತಿ ಕೇವಲ ತನ್ನ ಅಗತ್ಯಗಳಿಗಾಗಿ ಮಾತ್ರ ಭಿಕ್ಷೆ ಬೇಡುತ್ತಾರೆ ಹೊರತು, ಹವ್ಯಾಸಕ್ಕಾಗಿ ಅಲ್ಲ.

ಕೇಂದ್ರ ಸರ್ಕಾರ ನ್ಯಾಯಾಲಯಕ್ಕೆ ತಿಳಿಸಿರುವ ಪ್ರಕಾರ, ಬಾಂಬೆ ಪ್ರಿಲೆನ್ಷನ್‌ ಆ್ಯಕ್ಟ್ ನಲ್ಲಿ ಸಾಕಷ್ಟು ಪ್ರಾಧಾನಗಳಿವೆ. ಈ ಅಧಿನಿಯಮದ ಪ್ರಕಾರ ಭಿಕ್ಷೆ ಬೇಡುವುದನ್ನು ಅಪರಾಧ ಎಂದು ಹೇಳಲಾಗಿದೆ. ಒಂದು ವೇಳೆ ವ್ಯಕ್ತಿಯೊಬ್ಬ ತನ್ನ ಬಡತನದ ಕಾರಣದಿಂದ ಭಿಕ್ಷೆ ಬೇಡುತ್ತಿದ್ದರೆ, ಅದನ್ನು ಅಪರಾಧ ಎಂದು ಹೇಳಬಾರದು. ದೆಹಲಿಯಲ್ಲೂ ಕೂಡ ಅದು ಅಪರಾಧ. ಮೊದಲ ಸಲ ಭಿಕ್ಷೆ ಬೇಡುವಾಗ ಸಿಕ್ಕಿಬಿದ್ದರೆ, 3 ವರ್ಷದ ಜೈಲು ಶಿಕ್ಷೆಯಾಗಬಹುದು.

ಭಿಕ್ಷಾಟನೆಯ ಕುರಿತಂತೆ ಎಂತಹ ಒಂದು ಕಾನೂನಿನ ಅಗತ್ಯ ಇದೆಯೆಂದರೆ, ಅದು ಅವರು ಪುನರ್ವಸತಿ ಹಾಗೂ ಸುಧಾರಣೆಗೆ ಒತ್ತು ನೀಡಬೇಕೆ ವಿನಾ ಅದನ್ನು ಕಾನೂನು ಬಾಹಿರ ಎಂದು ಪರಿಗಣಿಸವುದರ ಕುರಿತಂತೆ ಅಲ್ಲ. ವಿವಶತೆಯಿಂದ ಭಿಕ್ಷೆ ಬೇಡುವವರಿಗೆ ಸ್ವಯಂ ಉದ್ಯೋಗದ ತರಬೇತಿ ನೀಡುವುದರ ಮೂಲಕ ಅವರನ್ನು ಸ್ವಾವಲಂಬಿ ಆಗಿಸುವುದರ ಕಡೆ ಸರ್ಕಾರಗಳು ಹೆಜ್ಜೆ ಹಾಕಬೇಕಿದೆ.

– ಶಕುಂತಲಾ

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ