ರಾತ್ರಿ 10 ಗಂಟೆಯಾಗಿತ್ತು. ಮಾಯಾಳ ಮನೆಯ ಮುಂದೆ ಒಂದು ದೊಡ್ಡ ಕಾರು ಬಂದು ನಿಂತಿತು. ಸ್ಲೀವ್ ಲೆಸ್ ಟಾಪ್ ಹಾಗೂ ಜೀನ್ಸ್ ಧರಿಸಿದ್ದ ಮಾಯಾ ಮೆಟ್ಟಿಲುಗಳನ್ನು ಇಳಿಯುತ್ತ ಹೊರಗೆ ಬಂದಳು. ಅಷ್ಟರಲ್ಲಿ ಎದುರು ಮನೆಯ ಶರ್ಮಿಳಾ ಆಂಟಿ ಎದುರಿಗೆ ಬಂದರು. ಅವರು ಅಮ್ಮನ ಆಪ್ತ ಸ್ನೇಹಿತೆ. ಅವರು ತಮ್ಮ ಜವಾಬ್ದಾರಿ ಅರಿಯುವತ್ತ ಮಾಯಾಳನ್ನು ಕೇಳಿದರು, “ಮಾಯಾ, ಇಷ್ಟೊತ್ತಿನಲ್ಲಿ ಎಲ್ಲಿಗೆ ಹೋಗ್ತಿದೀಯಮ್ಮ? ಜನ ಏನು ಮಾತನಾಡಬಹುದು ಅನ್ನುವುದು ನಿನಗೆ ಗೊತ್ತಾ?”
ಮಾಯಾ ನಗುತ್ತಲೇ ಅವರ ಕೈಯನ್ನು ತನ್ನ ಕೈಯಲ್ಲಿಟ್ಟುಕೊಂಡು, “ಆಂಟಿ ನಾನು ಆಫೀಸ್ಗೆ ಹೋಗ್ತಿದೀನಿ. ನನ್ನ ಕನಸು ನನಸು ಮಾಡಿಕೊಳ್ಳಲು, ಪತ್ರಕರ್ತೆಯ ಜವಾಬ್ದಾರಿ ನಿಭಾಯಿಸಲು. ಜನ ಏನು ಹೇಳುತ್ತಾರೆ ಎಂಬ ಗೊಡವೆ ನನಗೆ ಬೇಕಿಲ್ಲ. ನನ್ನದೇ ಆದ ಆದ್ಯತೆಗಳಿವೆ, ನನ್ನದೇ ಆದ ಜೀವನವಿದೆ. ಅದನ್ನು ಜೀವಿಸುವ ಹಕ್ಕು ನನಗಿದೆ. ಇದಕ್ಕೂ ಜನರಿಗೂ ಏನು ಸಂಬಂಧ? ಬೇರೆಯವರು ಎಲ್ಲಿ ಏನು ಮಾಡುತ್ತಾರೆ ಎಂದು ನಾನೆಂದಾದರೂ ಕೇಳಿದ್ದೀನಾ?”
ಶರ್ಮಿಳಾ ಆಂಟಿ ಮಾಯಾಳಿಂದ ಈ ತೆರನಾದ ಉತ್ತರ ಅಪೇಕ್ಷಿಸಿರಲಿಲ್ಲ. ಅವರು ಸ್ವಲ್ಪ ಹೊತ್ತು ನಿಂತಲ್ಲಿಯೇ ನಿಂತಿದ್ದರು. ಮಾಯಾ ತನ್ನ ಜೀವನಕ್ಕೆ ಹೊಸ ಹುರುಪು ತುಂಬಲು ಮುಂದೆ ಸಾಗಿದಳು.
32 ವರ್ಷದ ಮಾಯಾ ಬೆಂಗಳೂರಿನಲ್ಲಿ ಏಕಾಂಗಿಯಾಗಿ ವಾಸಿಸುತ್ತಿದ್ದಳು. ಕೆಲಸದ ನಿಮಿತ್ತ ಅವಳು ರಾತ್ರಿ ಕೂಡ ಹೊರಗೆ ಹೋಗಬೇಕಾಗಿ ಬರುತ್ತಿತ್ತು. ಶರ್ಮಿಳಾ ಆಂಟಿ ಇತ್ತೀಚಿಗಷ್ಟೇ ಮಾಯಾ ವಾಸಿಸುತ್ತಿದ್ದ ಅಪಾರ್ಟ್ಮೆಂಟ್ಗೆ ಶಿಫ್ಟ್ ಆಗಿದ್ದರು.
ಮೇಲಿಂದ ಮೇಲೆ ಟೀಕೆ
ಸಾಮಾನ್ಯವಾಗಿ ಹಿರಿಯರು ಮಾಯಾಳಂತಹ ಹುಡುಗಿಯರಿಗೆ ಬಗೆಬಗೆಯ ಬುದ್ಧಿಮಾತು ಹೇಳುತ್ತಿರುತ್ತಾರೆ. ಉದಾಹರಣೆಗೆ, “ಇಂತಹ ಬಟ್ಟೆ ಧರಿಸಿ ಹೋಗುವುದಾ? ಜನ ಏನು ಹೇಳಬಹುದು ಅನ್ನುವ ಕಲ್ಪನೆ ನಿನಗಿದೆಯಾ?” “ಅಷ್ಟೊಂದು ಹುಡುಗರ ನಡುವೆ ನೀನು ಏಕಾಂಗಿಯಾಗಿ ಹೇಗಿರ್ತೀಯಾ?” “ಕ್ಲಬ್ ನಲ್ಲಿ ಹುಡುಗರ ಜೊತೆ ಡ್ಯಾನ್ಸ್ ಮಾಡಲು ನಿನಗೆ ಸ್ವಲ್ಪ ಸಂಕೋಚ ಆಗುವುದಿಲ್ಲವೇ? ಜನ ಏನು ಅನ್ನಬಹುದು ಎಂದು ಕಿಂಚಿತ್ತೂ ಕಲ್ಪನೆ ಕೂಡ ನಿನಗಿಲ್ಲವೇ?” “ಇಷ್ಟು ಅಪರಾತ್ರಿಯಲ್ಲಿ ಮನೆಯಿಂದ ಹೊರಗೆ ಹೋಗ್ತಿದೀಯಾ? ತಲೆಯ ಮೇಲೆ ಸೆರಗನ್ನಾದರೂ ಹಾಕಿಕೊ, ಹೀಗೆಯೇ ಹೋದರೆ ಜನ ನಿನ್ನ ಬಗ್ಗೆ ಏನನ್ನಬಹುದು?” “ಹುಡುಗಿಯರು ಇಷ್ಟು ಜೋರು ಜೋರಾಗಿ ನಗುವುದು ಶೋಭಿಸುವಂತಹ ಸಂಗತಿಯಲ್ಲ.”
ಜನರ ಬಾಯಿಗೆ ಲಂಗುಲಗಾಮು ಇಲ್ಲ. ಹುಡುಗಿ ಏಕಾಂಗಿಯಾಗಿದ್ದರೂ ಮಾತನಾಡುತ್ತಾರೆ, ಲಿವ್ ಇನ್ನಲ್ಲಿ ಇದ್ದರೂ ಏನಾದರೂ ಹೇಳುತ್ತಾರೆ. ಮಗು ಆಗದಿದ್ದರೂ ಟೀಕಿಸುತ್ತಾರೆ. ಉದ್ಯೋಗಕ್ಕೆ ಹೋದರೂ ಮಾತನಾಡುತ್ತಾರೆ. ಹುಡುಗರ ಜೊತೆ ನಗುತ್ತಾ ಮಾತನಾಡಿದರೂ ಹಂಗಿಸುತ್ತಾರೆ. ರಾತ್ರಿ ಮನೆಯಿಂದ ಹೊರಗೆ ಹೋದರೆ ಏನಾದರೂ ಹೇಳುತ್ತಾರೆ.
ಸಮಾಜದ ಚಿಂತೆ ಏಕೆ?
ಜನರ ಮಾತುಗಳಿಗೆ ಚಿಂತಿಸಬೇಡಿ. ಏಕೆಂದರೆ ನಾವು ಪ್ರಾಣಿಗಳಲ್ಲ, ಮನುಷ್ಯರು. ನಾವು ನಮ್ಮದೇ ಆದ ವಿಶೇಷತೆಗಳೊಂದಿಗೆ ವಿಚಾರಗಳೊಂದಿಗೆ ಜನಿಸಿದ್ದೇವೆ. ನಾವು ಬೇರೊಬ್ಬರ ನಕಲು ಮಾಡುವುದಿಲ್ಲ. ಅದಕ್ಕಾಗಿ ನಾವು ಪ್ರತಿಯೊಬ್ಬರೂ ವಿಭಿನ್ನ ರೀತಿಯ ಕನಸು ಕಾಣುತ್ತೇವೆ. ಅವನ್ನು ಈಡೇರಿಸಿಕೊಳ್ಳುತ್ತ ನಾವು ಸದಾ ಹೆಜ್ಜೆ ಹಾಕುತ್ತಿರುತ್ತೇವೆ. ಅದರ ಹಕ್ಕು ಕೂಡ ನಮಗಿದೆ.
ನೀವು ಪ್ರತಿಯೊಬ್ಬರನ್ನೂ ಖುಷಿಯಿಂದಿಡಲು ಸಾಧ್ಯವಿಲ್ಲ. ಯಾರದೋ ಒಬ್ಬರ ದೃಷ್ಟಿಯಲ್ಲಿ ನೀವು ತಪ್ಪು ಮಾಡುತ್ತಿದ್ದೀರಿ ಎಂದರೆ, ವಾಸ್ತವದಲ್ಲಿ ಅದು ಸರಿ ಎಂದೇನಲ್ಲ. ನೀವು ಪ್ರತಿಯೊಬ್ಬರ ದೃಷ್ಟಿಯಲ್ಲಿ ಸರಿಯಾಗಿರಲು ಸಾಧ್ಯವಿಲ್ಲ. ನಿಮ್ಮ ಬಳಿ ಹೆಚ್ಚು ಸಮಯವಿಲ್ಲ. ಹಾಗಾಗಿ ಬೇರೆಯವರ ಯೋಚನೆಗೆ ಅನುಗುಣವಾಗಿ ಜೀವಿಸಲು ಸಮಯ ಹಾಳು ಮಾಡಿಕೊಳ್ಳಬೇಡಿ.
ನೀವು ಗೆದ್ದರೆ ಜನ ಅದರ ಶ್ರೇಯಸ್ಸನ್ನು ತಮ್ಮ ಪಾಲಿಗೆ ತೆಗೆದುಕೊಳ್ಳಲು ಹಿಂದೇಟು ಹಾಕುವುದಿಲ್ಲ. ನೀವು ಸೋತರೆ ಜನರು ಅದನ್ನು ಕೇವಲ ನಿಮ್ಮ ತಲೆಗೆ ಕಟ್ಟುತ್ತಾರೆ. ಹಾಗಾಗಿ ಜನ ಏನು ಹೇಳುತ್ತಾರೆ ಎಂಬುದರ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಳ್ಳಬೇಡಿ.
ವಾಸ್ತವದಲ್ಲಿ ಯಾರೊಬ್ಬರಿಗೂ ನಿಮ್ಮ ಬಗ್ಗೆ ಕಾಳಜಿಯಿಲ್ಲ. ಯಾರದ್ದೊ ಯೋಚನೆಗೆ ಸಿಲುಕಿ ನಿಮ್ಮ ಜೀವನವನ್ನು ತೊಂದರೆಗೀಡು ಮಾಡಿಕೊಂಡರೆ, ಆಗ ಯಾರೊಬ್ಬರೂ ನಿಮ್ಮ ನೆರವಿಗೆ ಬರುವುದಿಲ್ಲ. ಹಾಗಾಗಿ ನಿಮ್ಮ ಯೋಚನೆಗೆ ಅನುಗುಣವಾಗಿ ಜೀವನವನ್ನು ರೂಪಿಸಿಕೊಳ್ಳಿ.
ಯಾರು ತಮ್ಮ ಹೃದಯದ ಮಾತನ್ನು ಆಲಿಸುತ್ತಾರೊ, ಅವರೇ ಗೆಲುವು ಸಾಧಿಸುತ್ತಾರೆ. ನೀವು ಇತಿಹಾಸದ ಪುಟಗಳನ್ನು ತಿರುಗಿಸಿ ನೋಡಿದಾಗ, ಯಾವುದೇ ಒಬ್ಬ ವ್ಯಕ್ತಿ ತನ್ನ ಕನಸನ್ನು ಬೆನ್ನಟ್ಟಿ ಕಠಿಣ ಪರಿಶ್ರಮ ಮಾಡಿದಾಗ ಮಾತ್ರ ಯಶಸ್ಸು ಕಂಡಿರುವುದು ನಮ್ಮ ಗಮನಕ್ಕೆ ಬರುತ್ತದೆ.
ಹಸ್ತಕ್ಷೇಪ ಎಂಬ ಅಸಹನೀಯ ನೋವು
ನಾವು ಯಾವುದಾದರೂ ಹೊಸ ಕೆಲಸಕ್ಕೆ ಕೈ ಹಾಕಬೇಕೆಂದಾಗ ಅಥವಾ ನಿರ್ಧಾರಿತ ಮಾನದಂಡಗಳ ವಿರುದ್ಧ ಏನನ್ನಾದರೂ ವಿಶೇಷ ಮಾಡಬೇಕೆಂಬ ಅಭಿಲಾಷೆ ಉಂಟಾದಾಗ ಬಹಳಷ್ಟು ಜನರು ಹೆದರುತ್ತಾರೆ. ಏಕೆಂದರೆ ಅವರಿಗೆ ಬೇರೆಯವರು ಏನಿನ್ನುತ್ತಾರೆ ಎಂಬ ಭಯ ಕಾಡುತ್ತಿರುತ್ತದೆ. ಇಲ್ಲಿ ಜನರೆಂದರೆ ಸಮಾಜ ಎಂದರ್ಥ. ಸಮಾಜವನ್ನು ಹುಟ್ಟುಹಾಕಿರುವವರು ನಾವೇ. ನಾವೆಲ್ಲ ಪರಸ್ಪರ ಒಬ್ಬರನ್ನೊಬ್ಬರು ಅವಲಂಬಿಸಿರುತ್ತೇವೆ. ಆದರೆ ಈ ಅವಲಂಬಿಕೆ ಎನ್ನುವುದು ಸಕಾರಾತ್ಮಕ ಅರ್ಥದಲ್ಲಿ ಇರಬೇಕು. ಅದು ಇನ್ನೊಬ್ಬರ ಯಶಸ್ಸಿಗೆ ಪೂರಕವಾಗಿರಬೇಕು. ಅವರ ಮುಖದಲ್ಲಿ ನಗು ಚಿಮ್ಮಿಸಬೇಕು. ಪರಸ್ಪರ ದುಃಖವನ್ನು ನಿವಾರಿಸುವಂತಾಗಬೇಕು.
ಸಮಾಜ ನಮ್ಮ ಮೇಲೆ ಕಣ್ಣಿಡತೊಡಗಿದಾಗ, ತೊಂದರೆ ಶುರುವಾಗುತ್ತದೆ. ಅದು ನಕಾರಾತ್ಮಕ ರೂಪದ ಹಸ್ತಕ್ಷೇಪ ಆಗಿರುತ್ತದೆ. ಇದರಿಂದಾಗಿ ಸಾಮಾಜಿಕ ಸೌಹಾರ್ದತೆ ಹಾಗೂ ಪರಸ್ಪರ ಹೊಂದಾಣಿಕೆ ಹದಗೆಡುತ್ತದೆ. ಅದು ವ್ಯಕ್ತಿಯೊಬ್ಬನ ಹಕ್ಕುಗಳ ಮೇಲೂ ನೇರವಾದ ಪೆಟ್ಟು ಕೊಡುತ್ತದೆ.
ಒಬ್ಬ ವ್ಯಕ್ತಿ ಇನ್ನೇನು ಯಶಸ್ಸಿನ ಗುರಿ ತಲುಪುತ್ತಿದ್ದಾನೆ ಎಂದಾಗಲೇ ಕೆಲವು ಸಂಕುಚಿತ ಮನೋಭಾವದ ಜನರು ಅನಗತ್ಯ ಹಸ್ತಕ್ಷೇಪ ಉಂಟು ಮಾಡಿ, ಆ ವ್ಯಕ್ತಿಯ ಕನಸನ್ನು ನುಚ್ಚು ನೂರು ಮಾಡುತ್ತಾರೆ. ಆ ನೋವು ಅವರನ್ನು ಜೀವನವಿಡೀ ಕಾಡುತ್ತಿರುತ್ತದೆ.
ಹಸ್ತಕ್ಷೇಪಕ್ಕೂ ಮಿತಿ ಇರಲಿ
ನಿಮ್ಮ ಜೀವನದಲ್ಲಿ ಯಾರಾದರೂ ಹಸ್ತಕ್ಷೇಪ ಮಾಡುತ್ತಿದ್ದಾರೆಂದರೆ, ಅದಕ್ಕೂ ಒಂದು ಮಿತಿ ಎನ್ನುವುದು ಇರಬೇಕು. ಜೀವನ ನಿಮ್ಮದು, ಗುರಿ ನಿಮ್ಮದು, ಅದರ ನಿರ್ಧಾರ ನಿಮ್ಮದೇ ಆಗಬೇಕು. ನಿಮ್ಮ ಭವಿಷ್ಯದ ಚಿಂತೆ ನಿಮ್ಮ ಮನೆಯವರು, ಹಿತಚಿಂತಕರನ್ನು ಹೊರಪಡಿಸಿ ಅದು ಬೇರೆಯವರಿಗೆ ಇರಬಾರದು.
ನೀವೊಮ್ಮೆ ಯೋಚಿಸಿ, ನೀವೇ ಯಾರದಾದರೂ ಜೀವನದಲ್ಲಿ ಹಸ್ತಕ್ಷೇಪ ಮಾಡಲು ಶುರು ಮಾಡಿದರೆ ಅವರು ಅದನ್ನು ಸ್ವೀಕರಿಸುತ್ತಾರೆಯೆ? ಇಲ್ಲ ತಾನೇ? ಹಾಗಾದರೆ ನೀವೇಕೆ ಅದನ್ನು ಒಪ್ಪಿಕೊಳ್ಳಬೇಕು?
ಪುರುಷಪ್ರಧಾನ ಸಮಾಜದ ಯೋಚನೆ
ಅಂದಹಾಗೆ ಪುರುಷಪ್ರಧಾನ ಸಮಾಜದಲ್ಲಿ ಪುರುಷ ಮಹಿಳೆಯನ್ನು ತನ್ನ ಆಸ್ತಿ ಎಂಬಂತೆ ಭಾವಿಸುತ್ತಾನೆ. ಅವಳು ತನ್ನ ಅಧೀನದಲ್ಲಿ ಇರಬೇಕು. ತಾನು ಹೇಳಿದಂತೆ ಕೇಳಬೇಕು ಎಂದುಕೊಳ್ಳುತ್ತಾನೆ. ಲೈಂಗಿಕ ಪಾವಿತ್ರ್ಯತೆಯ ಹೆಸರಿನಲ್ಲಿ ಹಲವು ನಿರ್ಬಂಧಗಳನ್ನು ಹೇರಲು ಹವಣಿಸುತ್ತಾನೆ. ಆ ನಿರ್ಬಂಧದ ಬೇಡಿಕೆಗೆ ಮಹಿಳೆ ಸಿಲುಕಿಕೊಳ್ಳುತ್ತಾಳೆ. ಧಾರ್ಮಿಕ ಮುಖಂಡರು ಇಂತಹ ನಿರ್ಬಂಧಗಳ ದುರ್ಲಾಭ ಪಡೆದುಕೊಳ್ಳಲು ಪ್ರಯತ್ನಿಸುತ್ತಾರೆ. ಬೇರೆ ಬೇರೆ ತೆರನಾದ ಸ್ತ್ರೀ ವಿರೋಧಿ ನಿಯಮ ಕಾನೂನುಗಳು ಹಾಗೂ ನಿರ್ಬಂಧಗಳ ಉದ್ದನೆಯ ಪಟ್ಟಿಯನ್ನು ಮುಂದಿಟ್ಟುಕೊಂಡು ಅವರು ತಮ್ಮ ಬೇಳೆ ಬೇಯಿಸಿಕೊಳ್ಳುತ್ತಾರೆ.
ಓದುಬರಹ ಬಲ್ಲ ಹುಡುಗಿಯರು ಅವರ ಮಾತನ್ನು ಒಪ್ಪತೊಡಗಿದಾಗ ಮುಂದೊಮ್ಮೆ ಎಂತಹ ಸ್ಥಿತಿ ಬರುತ್ತದೆಂದರೆ, ಅವರಿಗೆ ಉಸಿರುಗಟ್ಟಿದಂತಾಗುತ್ತದೆ. ಸ್ವಾತಂತ್ರ್ಯದ ಮುಕ್ತ ವಾತಾವರಣದಲ್ಲಿ ಜೀವಿಸುವುದಿರಲಿ, ಅವರು ತಮ್ಮದೇ ಆದ ಅಸ್ತಿತ್ವವನ್ನು ಕೂಡ ಕಳೆದುಕೊಳ್ಳುತ್ತಾರೆ.
ಧಾರ್ಮಿಕ ಗುತ್ತಿಗೆದಾರರ ವಾಸ್ತವ
ಧಾರ್ಮಿಕ ಆದೇಶಗಳು, ಮಹಿಳೆಯರ ಸುರಕ್ಷತೆಯ ಹೆಸರಿನಲ್ಲಿ, ಜಾತಿಧರ್ಮದ ಗೌರವ ಕಾಪಾಡುವ ಹೆಸರಿನಲ್ಲಿ ಮಹಿಳೆಯರಿಗೆ ಬಹು ದೊಡ್ಡ ಕಂಟಕವಾಗಿ ಪರಿಣಮಿಸಿದೆ. ಹರಿಯಾಣ ರಾಜಾಸ್ಥಾನದಲ್ಲಂತೂ ಗರ್ಭದಲ್ಲಿದ್ದಾಗಲೇ ಹೆಣ್ಣು ಶಿಶುವೊಂದು ಖಚಿತಪಡಿಸಿಕೊಂಡು ಅದನ್ನು ಹೊಟ್ಟೆಯಲ್ಲಿಯೇ ಸಾಯಿಸಿಬಿಡುತ್ತಾರೆ. ಇಂಥವರ ಕಪಿಮುಷ್ಟಿಯಲ್ಲಿ ಮಹಿಳೆಯರು ಹೇಗೆ ತಾನೇ ಸುರಕ್ಷಿತವಾಗಿರಲು ಸಾಧ್ಯ? ಬೇರೆಯವರನ್ನು ಪ್ರೀತಿಸಿದರೆಂಬ ಆರೋಪದ ಮೇಲೆ ಅವಳ ಜೀವವನ್ನೇ ತೆಗೆದುಬಿಡುತ್ತಾರೆ. ಫೋನ್ ಬಳಸಿದರೆಂಬ ಕಾರಣಕ್ಕೂ ಅವರಿಗೆ ಸಜೆ ನೀಡಿದ ಉದಾಹರಣೆಗಳಿವೆ. ಪೊಲೀಸರ ಈ ರೀತಿಯ ಪಹರೆ ಅತ್ಯಂತ ಭಯಾನಕ ಹಾಗೂ ನೋವುದಾಯಕ ಆಗಿರುತ್ತದೆ.
ಈಗಲೂ ನಮ್ಮ ಸಮಾಜ ಎರಡು ಬಗೆಯ ಜೀವನ ಮೌಲ್ಯಗಳಿಂದ ಸಂಚಾಲಿತವಾಗಿದೆ. ಒಂದನೆಯದು, ಜಾತಿವಾದಿ ಪಿತೃ ಪ್ರಧಾನ ಸಮಾಜ. ಅದು ಸಂಪೂರ್ಣವಾಗಿ ಅಸಮಾನತೆಯಿಂದ ಕೂಡಿದೆ. ಮಹಿಳೆಯರ ವಿರುದ್ಧ ಹತ್ತು ಹಲವು ಆದೇಶಗಳನ್ನು ಹೊರಡಿಸುತ್ತಿರುತ್ತದೆ.
ಎರಡನೆಯದು, ಸಂವಿಧಾನ ನಮಗೆ ದೊರಕಿಸಿ ಕೊಟ್ಟ ಹಕ್ಕುಗಳ ಆಧಾರದ ಮೇಲೆ ನಾವು ಸ್ವತಂತ್ರವಾಗಿ ಸಮಾನತೆಯಿಂದ ಬದುಕಲು ಸಾಧ್ಯವಾಗಿದೆ. ಅದರ ಆಧಾರದ ಮೇಲೆಯೇ ಮಹಿಳೆಯರು ಮುಂದೆ ಹೆಜ್ಜೆ ಹಾಕಲು ಸಾಧ್ಯವಾಗಿದೆ.
ದೇಶದ ಮುಂದಿರುವ ಅತ್ಯಗತ್ಯ ದೊಡ್ಡ ಸವಾಲೆಂದರೆ, ಈ ಸಕಲು, ಅಸಮಾನತೆ ಆಧಾರಿತ ಸಾಮಾಜಿಕ ಮೌಲ್ಯಗಳನ್ನು ಹತ್ತಿಕ್ಕಿ ಸಮಾನತೆಯ ಮೌಲ್ಯಗಳನ್ನು ಸ್ಥಾಪಿಸುವಂತಾಗಬೇಕು.
ಜನರು ಏನು ಹೇಳುತ್ತಾರೆ ಎಂಬುದರ ಬಗ್ಗೆ ಮಹಿಳೆಯರಷ್ಟೇ ಕೇಳಿಸಿಕೊಳ್ಳಬೇಕಾಗುತ್ತದೆ. ಜನರ ಪ್ರಶ್ನೆಗಳು ಮಹಿಳೆಯರನ್ನೇ ಕೇಂದ್ರೀಕೃತ ಮಾಡಿಕೊಂಡಿರುತ್ತವೆ. ಹುಡುಗಿಯರು ಏನು ಮಾಡುತ್ತಾರೆ, ಎಲ್ಲಿಗೆ ಹೋಗುತ್ತಾರೆ ಎಂಬುದನ್ನು ಪ್ರಶ್ನೆ ಮಾಡಲಾಗುತ್ತದೆ. ಆದರೆ ಇದು ಎಲ್ಲಿಯ ತನಕ? ಸಕಲ ನಿಯಮಗಳು ಅಡೆತಡೆಯನ್ನು ಕಿತ್ತೊಗೆಯುವ ತನಕ. ಸಮಾನತೆಯ ಹಕ್ಕಿನ ದಾರಿಯಲ್ಲಿ ನಡೆಯುವ ತನಕ. ಆಗಲೇ ಪ್ರಗತಿಯ ದಾರಿ ತೆರೆದುಕೊಳ್ಳುತ್ತದೆ.
– ಪಂಕಜಾ