ಕಮಲ್ ಮಗಳಿಗೂ ಹಣಕಾಸಿನ ಸಮಸ್ಯೆಯೇ?
ಇತ್ತೀಚೆಗೆ ಕಮಲ್ ಮಗಳು ಶೃತಿ ಹಾಸನ್, ಸಂದರ್ಶನ್‌ಒಂದರಲ್ಲಿ ತಾನು ಈ ಕೊರೋನಾ ಮಹಾಮಾರಿಯ ಮಧ್ಯೆಯೂ ರಿಸ್ಕ್ ತೆಗೆದುಕೊಂಡು ನಟಿಸಲು ಕಾರಣ, ತೀವ್ರ ಹಣಕಾಸಿನ ಮುಗ್ಗಟ್ಟು ಎಂದಾಗ ಮೀಡಿಯಾ ಮಂದಿ ಸುಸ್ತಾದರು. ಕಮಲ್ ರಂಥ ಶ್ರೀಮಂತ ದಿಗ್ಗಜರ ಮಗಳಾಗಿ ಈಕೆ ಹೀಗೆ ಹೇಳಿದರೆ ಸಣ್ಣಪುಟ್ಟ ಕಲಾವಿದರ ಪಾಡೇನು ಎಂದು ಎಲ್ಲರೂ ಬೆರಗಾದರು. ಅಸಲಿಗೆ, ಶೃತಿ ಹಣಕಾಸಿಗಾಗಿ ಎಂದೂ ತಂದೆಯನ್ನು ಅವಲಂಬಿಸಿದವಳಲ್ಲ. ಲಿವ್ ಇನ್ ಕಾರಣ ತಂದೆ ಮಗಳು ಪರಸ್ಪರ ವೈಯಕ್ತಿಕ ವಿಷಯಗಳಲ್ಲಿ ತೊಡಗಿಕೊಳ್ಳಲಾರದಷ್ಟು ದೂರವಾಗಿದ್ದಾರೆ. ಆದರೆ ಶೃತಿ ಸ್ವತಂತ್ರಳಾಗಿ, ತನ್ನ ಗಳಿಕೆಯಿಂದ ಬದುಕುವಂಥ ಸ್ವಾವಲಂಬಿ ಎದೆಗಾತಿ!
ಬಾಡಿ ಶೇಮಿಂಗ್ ನಾನು ಸಹಿಸಿದ್ದೇನೆ!

ಈ ಪುರುಷ ಪ್ರಧಾನ ಸಮಾಜದ ಅತಿ ಕೀಳು ಆಲೋಚನೆ ಎಂದರೆ, ತಾವೆಷ್ಟೇ ಕುರೂಪಿ ಆಗಿದ್ದರೂ, ಹೆಣ್ಣಿನಲ್ಲಿ ತುಸು ಕೊರತೆ ಕಾಣಿಸಿದರೆ ಅದನ್ನು ದೊಡ್ಡದಾಗಿ ಮೀಡಿಯಾ ಪೂರ್ತಿ ಬೊಬ್ಬೆ ಹೊಡೆಯುತ್ತಾರೆ. ಇಂಥ ಅಡ್ಡ ಹೆಸರು ಇಡುವ ಕ್ರಮವನ್ನೇ ಬಾಡಿ ಶೇಮಿಂಗ್ ಎನ್ನುತ್ತಾರೆ. ಹಿಂದೆಲ್ಲ ಸಾಮಾನ್ಯ ಮಹಿಳೆಯರು ಇದಕ್ಕೆ ಬಲಿಯಾಗುತ್ತಿದ್ದರು, ಇದೀಗ ಸೆಲೆಬ್ರಿಟಿಗಳೂ ಇದರಿಂದ ಹೊರತಲ್ಲ. ಇತ್ತೀಚೆಗೆ ಒಂದು ಸಂದರ್ಶನದಲ್ಲಿ ಜರೀನ್ ಖಾನ್ ಈ ಬಗ್ಗೆ ಹೇಳಿಕೊಂಡಿದ್ದಾಳೆ, ಬಹು ದಿನಗಳ ಕಾಲ ಬಾಲಿವುಡ್
ನಲ್ಲಿ ಆಕೆ ಇಂಥ ಹೀನಾಯ ಬಾಡಿ ಶೇಮಿಂಗ್ ಸಹಿಸಬೇಕಾಯಿತಂತೆ! ಕತ್ರಿನಾಳಂತೆಯೇ ಕಂಡುಬರುವ ಈಕೆ, ಅವಳ ದೇಹತೂಕದ ಕಾರಣ ಫ್ಯಾಟ್ರೀನಾ ಎಂದು ಟೀಕಿಸುತ್ತಿದ್ದರಂತೆ. ಹಾಗೆ ಹೇಳುವವರಿಗೆ ಇದು ತಮಾಷೆ ಇರಬಹುದು, ಆದರೆ ಅದರಿಂದ ಜರೀನಾಳಂಥೆ ಅದರ ನೋವು ಅನುಭವಿಸದರಿಗೆ ಮಾತ್ರ ಗೊತ್ತಾಗುವುದು.
ಈ ಶೋ ನಿಜಕ್ಕೂ ಐಡಲ್ ಅಂತೀರಾ?

ಇತ್ತೀಚೆಗೆ ಅಮಿತ್ ಕುಮಾರ್ ಸೋನಿ ಟಿವಿಯ `ಇಂಡಿಯನ್ ಐಡಲ್’ ಸಿಂಗಿಂಗ್ ಶೋಗೆ ಅತಿಥಿಯಲ್ಲದೆ ಹಾಗೇ ಹೋಗಿದ್ದಾಗ, ಅಲ್ಲಿ ಸ್ಪರ್ಧಿಗಳೆಲ್ಲ ಸೇರಿ ಅವರ ತಂದೆ ದಿ. ಕಿಶೋರ್ ಕುಮಾರ್‌ರಿಗೆ ಗೌರಾವರ್ಪಣೆ ಕಾರ್ಯಕ್ರಮ ನಡೆಸಿಕೊಟ್ಟರು. ಆದರೆ ಶೋ ಮುಗಿದ ತಕ್ಷಣವೇ ಅಮಿತ್ ಕುಮಾರ್ ಫೇಸ್ ಬುಕ್ ಮೂಲಕ, ಇದೊಂದು ಯೂಸ್ ಲೆಸ್, ಅನ್ ಫಿಟ್ ಕಾರ್ಯಕ್ರಮ ಎಂದು ಈ ಶೋ ಮಾನ ಹರಾಜಿಗೆ ಹಾಕಿದರು. ಇದಕ್ಕೆ ಸಂಬಂಧಿಸಿದ ಜನ ಶೋ ಮಾನ ಉಳಿಸಲು ತಕ್ಷಣ ಪ್ರತಿಕ್ರಿಯಿಸಿದರು. ಆದರೆ ಅದು ತಡವಾಗಿತ್ತು. ಟ್ರೋಲಿಗರು ನಾನಾ ರೀತಿಯಲ್ಲಿ ಈ ಶೋವನ್ನು ತೀವ್ಕವಾಗಿ ಖಂಡಿಸಲಾರಂಭಿಸಿದ್ದರು. ಕೆಲವರು ಈ ಶೋ ಪೂರ್ವ ನಿಯೋಜಿತ, ಚಾನೆಲ್ ಹೇಳಿದಂತೆ ಎಲ್ಲರೂ ಗಿಳಿಪಾಠ ಒಪ್ಪಿಸುತ್ತಾರೆ ಎಂದು ಟೀಕಿಸಿದರೆ, ಉಳಿದವರು ಈ ಚಾನೆಲ್ ತನ್ನ ಇಮೇಜ್ ಹೆಚ್ಚಿಸಿಕೊಳ್ಳಲು ಬಡ ಅಭ್ಯರ್ಥಿಗಳನ್ನು ಚೀಪ್ ಆಗಿ ಬಳಸಿಕೊಳ್ಳುತ್ತದೆ ಎಂದು ಖಂಡಿಸಿದರು. ಇಷ್ಟೆಲ್ಲ ಆದ ಮೇಲೆ ಈ ಶೋ ನಿಜಕ್ಕೂ ಐಡಲ್ ಅಂತೀರಾ ಎಂದು ಎಲ್ಲರೂ ಮೂಗು ಮುರಿಯುತ್ತಿದ್ದಾರೆ.
ಹೃತಿಕ್ ಈಗ ಬಯಸುತ್ತಿರುವುದೇನು?

ತಮಿಳು ಮೂಲದ `ವಿಕ್ರಂ ಬೇತಾಳ’ ಸೂಪರ್ ಹಿಟ್ ಚಿತ್ರ ಹಿಂದಿಯಲ್ಲಿ ರೀಮೇಕ್ ಆಗಲಿದೆ ಎಂದಾಗ ನಾಯಕನಾಗಲು ಒಪ್ಪಿದ್ದ ಹೃತಿಕ್, ಏನಾಯಿತೋ ಏನೋ…. ಇದಕ್ಕಿದ್ದಂತೆ ಈ ಚಿತ್ರಕ್ಕೆ ಬೆನ್ನು ತೋರಿಸಿದ! ಸುದ್ದಿಗಾರರ ಪ್ರಕಾರ, ಹೃತಿಕ್ ಈ ಕುರಿತಾಗಿ ಅಸಮಂಜಸನಾಗಿದ್ದನಂತೆ. ಏಕೆಂದರೆ ಇದೇ ಸಂದರ್ಭದಲ್ಲಿ ಈತ ತನ್ನ ಡಿಜಿಟಲ್ ಡೆಬ್ಯೂ ಬಗ್ಗೆ ಸಹ ಯೋಚಿಸುತ್ತಿದ್ದ. ಈ ಚಿತ್ರದ ಡೇಟ್ಸ್ ಈತನ OTT ಪ್ರಾಜೆಕ್ಟಿಗೆ ಕ್ಲಾಶ್ ಆಗತೊಡಗಿತು. ಹಾಗಿರುವಾಗ ಹೃತಿಕ್ ಆ ಚಿತ್ರ ಬಿಟ್ಟು ಈ OTT ಗೆ ಮಣೆ ಹಾಕಿದ್ದೇಕೆ? ಏಕೆಂದರೆ ಆತನಿಗೆ ಚೆನ್ನಾಗಿ ಅರಿವಾಗಿದೆ, ಈ ಕೊರೋನಾ ಇಷ್ಟರಲ್ಲಿ ಬಿಟ್ಟು ಹೋಗುವುದಂತ! ಹಾಗಾಗಿ ವಿಧಿಯಿಲ್ಲದೆ OTT ಪ್ರೇಕ್ಷಕ ಪ್ರಭುವಿಗೆ ಶರಣಾಗಿ, ಬರುತ್ತಿರುವ ಸಂಪಾದನೆಗೆ ಮುಳುವಾಗದಂತೆ ಎಚ್ಚರ ವಹಿಸಿದ್ದಾನೆ, ಗುಡ್ ಲಕ್ ಹೃತಿಕ್!
ನೋರಾ ಬಿಡಿ, ನಿಜಕ್ಕೂ ಬೋಲ್ಡ್!

ಇಲ್ಲಿಯವರೆಗೆ ನಾವೆಲ್ಲ ನೋರಾಳ ಬೋಲ್ಡ್ ನೆಸ್‌ನ್ನು ಕೇವಲ ಪರದೆ ಮೇಲೆ ಮಾತ್ರ ನೋಡಿದ್ದೇವೆ, ಆದರೆ ಅವಳು ನಿಜ ಜೀವನದಲ್ಲೂ ಎಷ್ಟು ಬೋಲ್ಡ್ ಎಂಬುದು ಇದೀಗ ಖಚಿತವಾಗಿದೆ. ಪ್ಯಾಲೆಸ್ಟೈನ್‌ಇಸ್ರೇಲ್ ನಡುವಣ ದ್ವೇಷ ದಳ್ಳುರಿ ಬಗ್ಗೆ ಟ್ವೀಟ್ ಮಾಡುತ್ತಾ ಇವಳು, ಇಸ್ರೇಲಿಗಳು ಪ್ಯಾಲೆಸ್ಟೈನ್ ರ ಜೀವನ ನರಕವಾಗಿಸಿದ್ದಾರೆ ಎಂದು ಕೆಂಡ ಕಾರಿದ್ದಾಳೆ. ಮಕ್ಕಳನ್ನು ಕಟ್ಟಿಕೊಂಡು ಮನೆಮಠ ಇಲ್ಲದ ಆ ಮಂದಿ ಬೀದಿ ಅಲೆಯುತ್ತಿರುವ ಬಗ್ಗೆ ಸಿಡಿದಿದ್ದಾಳೆ. ಹೀಗಿರುವಾಗ ಯಾರ ಮಾನವ ಹಕ್ಕುಗಳು ಹಿರಿದು ಎಂದು ಇಲ್ಲಿ ನಿರ್ಧರಿಸುವವರಾರು? ನೋರಾಳ ಈ ಪಬ್ಲಿಕ್ ಸಿಟ್ಟಿನಿಂದ ಅಲ್ಲಿನ ಪರಿಸ್ಥಿತಿ ಸುಧಾರಿಸಿತೋ ಇಲ್ಲವೋ, ಆದರೆ ಜನ ಟ್ರೋಲಿಗರಾಗಿ ಅವಳ ಪರ/ವಿರುದ್ಧ ಕೆಂಡ ಕಾರುತ್ತಾ ಶಾಂತಿ ಕಳೆದುಕೊಂಡಿದ್ದಾರೆ.
ಈ ಚಿತ್ರ ನಾನು ಮಾಡಲೇಬೇಕಿತ್ತು

ಫಾತಿಮಾ ಸನಾಳಿಗೆ ಆಮಿರ್ ಜೊತೆ ಫಿಲ್ಮಿ ಕೆರಿಯರ್ ಶುರು ಮಾಡುವ ಲಾಭವೋನೋ ಸಿಕ್ಕಿತು, ಆದರೆ ನಂತರ ಅವಳು ತನ್ನ ಸ್ವಪ್ರತಿಭೆಯಿಂದ ಶೈನ್ ಆಗತೊಡಗಿದಳು. ಇತ್ತೀಚೆಗೆ ಇವಳಿಗೆ 2017ರ ತಮಿಳಿನ ಹಿಟ್ `ಆರುವಿ’ ಚಿತ್ರದ ಹಿಂದಿ ರೀಮೇಕ್‌ನಲ್ಲಿ ಅವಕಾಶ ಸಿಕ್ಕಿದಾಗ, ತಕ್ಷಣ ಒಪ್ಪಿದಳು. ಇವಳಿಗೆ ಮಧ್ಯಮ ವರ್ಗದ ಹುಡುಗಿಯ ಈ ಪಾತ್ರ ಬಹಳ ಇಷ್ಟವಾಯಿತು. ಇವಳು ಈ ಪಾತ್ರದಿಂದ ತನ್ನ ಪ್ರತಿಭೆ ತೋರಿಸಲು ಮುಂದಾದಳು. ತಮಿಳರ ನಡುವೆ ಅತಿ ರೋಮಾಂಚಕ ಹಿಟ್ ಎನಿಸಿದ ಈ ಸ್ತ್ರೀ ಪ್ರಧಾನ ಚಿತ್ರ ಹಿಂದಿ ಪ್ರಭುಗಳಿಗೂ ಹಿಡಿಸೀತೇ…..? ಕಾಲವೇ ನಿರ್ಧರಿಸಬೇಕು.
ಶಾರೂಖ್ ಸಂಜಯ್ ಲವ್ ಸ್ಟೋರಿ

ಇದೇನು ಗೇ ಚಿತ್ರವೇ ಎಂದು ಹುಬ್ಬೇರಿಸದಿರಿ, ಇದು ಅಂಥ ಚಿತ್ರವಲ್ಲ. ಆದರೆ ಶೀರ್ಷಿಕೆಯಲ್ಲಿ ತಪ್ಪೂ ಇಲ್ಲ! ಕೊರೋನಾ ಕಾಟಕ್ಕೆ ಸಿಲುಕಿದ ಶಾರೂಖ್ ತತ್ತರಿಸಿ ಹೋಗಿದ್ದಾನೆ. ಇತ್ತೀಚೆಗೆ ಫ್ಲಾಪ್ ರಾಜಾ ಎನಿಸಿದ ಇವನ ಚಿತ್ರಗಳು ತೋಪಾಗುತ್ತಿರುವಾಗ ಕೊರೋನಾ ಮಖಾಡೆ ಮಲಗಿಸಿಬಿಟ್ಟಿತು. ಕೊರೋನಾ ಯಾವಾಗ ಮುಗಿಯುವುದೋ ಎಂದು ಅಸಹಾಯಕನಾಗಿ ಕಾಯುತ್ತಿದ್ದಾನೆ. ಆಗ ತಾನೇ ಚಿತ್ರಮಂದಿರ ತೆರೆಯುವುದು? ಇರಲಿ, ಇತ್ತೀಚೆಗೆ ಈತ `ಪಠಾಣ್’ ಚಿತ್ರದಲ್ಲಿ ನಟಿಸುತ್ತಿದ್ದು, ಸಂಜಯ್ ಲೀಲಾ ಬನ್ಸಾಲಿಯವರ ಒಂದು ಲವ್ ಸ್ಟೋರಿ ಆಧಾರಿತ ಚಿತ್ರದಲ್ಲೂ ನಟಿಸಲಿದ್ದಾನೆ. ಇಷ್ಟೇ, ಇಲ್ಲಿ ಸಂಜಯ್ ಜೊತೆಗಿನ ಲವ್ ಗುಟ್ಟು! ಆ್ಯಕ್ಷನ್ ಚಿತ್ರಗಳು ತೋಪಾದವು, ಇದರ ಗತಿ ಏನೋ…. ಎಂತೋ…..?
ಲಾಸ್ ನಿಜ, ಏನು ಮಾಡಲು ಸಾಧ್ಯ?

ಸಲ್ಮಾನ್ ತಾನು ಕಮಿಟ್ ಆದಂತೆ ಈದ್ ಹೊತ್ತಿಗೆ `ರಾಧೆ’ ಚಿತ್ರ ಬಿಡುಗಡೆ ಆಗುವಂತೆ ಮಾಡಿದ. ಈ ಸಲ ಈ ಚಿತ್ರ ದೇಶದ ಕೇವಲ ಮೂರೇ ಥಿಯೇಟರ್‌ನಲ್ಲಿ ರಿಲೀಸ್ ಆಯ್ತು! ಈತನ ಅಭಿಮಾನಿಗಳು OTTಯಲ್ಲಿ ನೋಡಿ ತೃಪ್ತರಾದರು. ಖಂಡಿತಾ ಈತನಿಗೆ ಈ ಸಲ 300-500 ಕೋಟಿಗಳೇನೂ ಕೈಹತ್ತುವುದಿಲ್ಲ. ಚಿತ್ರ ಡಬ್ಬದಲ್ಲೇ ಕೊಳೆಯುವುದರ ಬದಲು ರಿಲೀಸ್ ಆಗಲಿ ಎಂದು ಮಾಡಿದನಷ್ಟೆ. ಈ ತರಹ ಚಿತ್ರ ರಿಲೀಸ್ ಆದ್ದರಿಂದ ಸಾಕಷ್ಟು ಲಾಸ್ ಆಗುತ್ತಿದೆ ಎಂದು ಹಪಹಪಿಸಿದ, ಆದರೆ ಸದ್ಯಕ್ಕೆ ಬೇರೆ ದಾರಿ ಅಂತೂ ಏನಿಲ್ಲವಲ್ಲ….? `ಸೂರ್ಯವಂಶಿ’ ಚಿತ್ರದ ನಿರ್ಮಾಪಕರಿಗೆ ಈ ವಿಷಯ ಅರ್ಥವಾಗುತ್ತಿಲ್ಲವೇ? ಅವರು ಪ್ರೇಕ್ಷಕರಿಗೆ ಇಂದು, ನಾಳೆ ಎಂದು ಇದರ ರಿಲೀಸಿಂಗ್ ಡೇಟ್ ಮುಂದೂಡುತ್ತಲೇ ಇದ್ದಾರೆ!
ಅಜಯನ ಡಿಜಿಟಲ್ ಡೆಬ್ಯು

ಕೊರೋನಾ ಮಹಾಮಾರಿಯ ಪ್ರಹಾರ ಈ ವರ್ಷ ಘನಘೋರವಾಗಿ ಮುಂದುವರಿದಿದ್ದರಿಂದ ಬಾಲಿವುಡ್ ತಾರೆಯರೆಲ್ಲ ಧರಾಶಾಯಿಗಳಾಗಿದ್ದಾರೆ. OTT ಒಂದೇ ಸಿನಿಮವಾಗಿರುವ ಭವಿಷ್ಯ ಎಂದಾಗಿ ಹೋಗಿದೆ. ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿರುವ ಸಿಂಗಂ ಅಜಯ್ OTT ಕಡೆ ತಿರುಗಿದ್ದಾನೆ. ಇಷ್ಟರಲ್ಲಿ ಅಜಯ್ ದೇವಗನ್ ಡಿಸ್ನಿ ಹಾಟ್ ಸ್ಟಾರ್‌ಗಾಗಿ `ರುದ್ರ’ ಸರಣಿ ಚಿತ್ರಕ್ಕಾಗಿ ಪೊಲೀಸ್ ಆಫೀಸರ್ ಆಗಿ ಕಾಣಿಸಲಿದ್ದಾನೆ. OTTಯಿಂದ ಬಾಲಿವುಡ್ ಮಂದಿಗೆ ಆಹಾ ಓಹೋ ಎನ್ನುವ ಗಳಿಕೆ ಇರದಿದ್ದರೂ, ಚಿತ್ರದ ಶೂಟಿಂಗ್ ಮಾಡದೆ, ಮಾಡಿದ್ದನ್ನು ರಿಲೀಸ್ ಮಾಡದೆ ಇರಲಾದೀತೇ? ಕಾಲಾಯ ತಸ್ಮೈ ನಮಃ ಈಗಿನ್ನೂ ಆರಂಭ, ಮುಂದೆ ಇಡೀ ಭಾರತೀಯ ಎಲ್ಲಾ ಭಾಷೆಗಳ ತಾರೆಯರೂ ಇದಕ್ಕೆ ಶರಣು ಎನ್ನಲೇಬೇಕು!
ಶಾಶಾನ ಖುಷಿಯ ಫಂಡಾ

ಶಾಹಿದ್ ಕಪೂರ್ ಕೆಲವು ದಿನಗಳ ಹಿಂದೆ ಫೇಸ್ ಬುಕ್‌ನಲ್ಲಿ ಒಂದು ಫೋಟೋ ಪೋಸ್ಟ್ ಮಾಡಿದ್ದ. ಅದರಲ್ಲಿ ಒಂದು ಕುಟುಂಬದವರು ಒಂದೇ ಮಂಚದ ಮೇಲೆ ಅಡ್ಜಸ್ಟ್ ಮಾಡಿಕೊಂಡು ಮಲಗಿದ್ದರು! ಶಾಶಾ ಇದಕ್ಕೆ `ಹ್ಯಾಪಿನೆಸ್ ಈಸ್ ದಿ ಅಕ್ಸೆಪೆಟ್ಸಿನ್ಸ್ ಸಫರಿಂಗ್ಸ್’ ಎಂದು ಕ್ಯಾಪ್ಶನ್ ಹಾಕಿದ್ದ. ಅಂದ್ರೆ, ಕಷ್ಟಕ್ಕೆ ಅಡ್ಜಸ್ಟ್ ಆದಾಗ ಮಾತ್ರ ಅದರಲ್ಲಿ ಸುಖ ಸಿಕ್ಕೀತು! ಆಹಾ, ಶಾಹಿದ್ ಹೇಳಿದ ಮಾತು ಅಕ್ಷರಶಃ ಸತ್ಯ! ಕೊರೋನಾದ ಈ ಸಂಕಟದ ಕ್ಷಣಗಳಲ್ಲಿ ಜನರಿಗೆ ಇಂಥ ಭರವಸೆಯ ನುಡಿಗಳು ಅತ್ಯಗತ್ಯ ಬೇಕೇ ಬೇಕು, ಏನಂತೀರಿ?
ಇಮೇಜ್ ಬದಲಿಗೆ ಪ್ರಾಣ ಕಾಪಾಡಿ

ಮೋದೀಜಿ ಕೊರೋನಾದ ಈ ಸಂಕಷ್ಟ ಕಾಲದಲ್ಲಿ ಸರ್ಕಾರದ ಫ್ಲಾಪ್ ಹೆಜ್ಜೆಗಳು ಅದು ಬ್ಯಾಕ್ ಫುಟ್ ನಲ್ಲಿದ್ದರೆ ಜನತೆ ಫ್ರಂಟ್ ಪುಟ್ ನಲ್ಲಿದೆ ಎಂದು ಸಾಬೀತುಪಡಿಸಿದೆ. ಇಲ್ಲಿಯವರೆಗೂ ವಿಮರ್ಶಕರು ಮಾತ್ರ ಸರ್ಕಾರವನ್ನು ತೀವ್ರ ಖಂಡಿಸುತ್ತಿದ್ದರು. ಇದೀಗ ಸರ್ಕಾರಕ್ಕೆ ಬೆಂಬಲ ನೀಡುವವರೇ, ಅದರ ವಿರೋಧಿಗಳಿಗೆ ದುಃಸ್ವಪ್ನ ಆಗಿದ್ದವರೇ ಸರ್ಕಾರವನ್ನು ತರಾಟೆಗೆ ತೆಗೆದುಕೊಳ್ಳುವಂತಾಗಿದೆ. ಅನುಪಮ್ ಖೇರ್ ರಂಥ ಅನುಭವಿ, ಬುದ್ಧೀಜೀವಿ ಸರ್ಕಾರದ ಸಮರ್ಥಕರೇ ಇತ್ತೀಚೆಗೆ ಫೇಸ್ ಬುಕ್ ನಲ್ಲಿ, ಮೋದೀಜಿ ಈ ಸಮಯ ನಿಮ್ಮ ಇಮೇಜ್ ಬದಾಯಿಸುವುದಕ್ಕಲ್ಲ, ಜನತೆಯ ಪ್ರಾಣ ಉಳಿಸುವುದೇ ಮುಖ್ಯವಾಗಿದೆ ಎಂದಿದ್ದಾರೆ. ತನ್ನ ಅಭ್ಯಾಸಕ್ರಮದಂತೆ ಸರ್ಕಾರ, ತನ್ನ ವಿರೋಧಿಗಳ ಬಾಯಿ ಬಡಿಯುತ್ತದೆ ಅಥವಾ ಅಂಥವರ ಸೋಶಿಯಲ್ ಮೀಡಿಯಾ ಅಕೌಂಟ್ ಬುಡಕ್ಕೆ ಬೆಂಕಿ ಇಡುತ್ತದೆ. ಆದರೆ ತಮ್ಮ ಸಮರ್ಥಕರನ್ನು ಈ ಸಲ ಸರ್ಕಾರ ಹೇಗೆ ಬಗ್ಗು ಬಡಿಯುತ್ತದೋ ಕಾದು ನೋಡಬೇಕು.




 
  
         
    




 
                
                
                
                
                
                
               