ನನ್ನ ಹುಟ್ಟೂರು ಮಲೆನಾಡು. ನಮ್ಮ ಊರು ಚಿಕ್ಕಮಗಳೂರು. ನಮ್ಮ ಊರ ಸುತ್ತಮುತ್ತ ಕಾಫಿ ತೋಟಗಳು. ಜೊತೆಗೆ ಸೀತಾಳಯ್ಯನ ಗಿರಿ, ಮುಳ್ಳಯ್ಯನ ಗಿರಿ, ಕೆಮ್ಮಣ್ಣ ಗುಂಡಿ, ನಮ್ಮ ಊರಿನ ಸುತ್ತಮುತ್ತಲೂ ಗಿರಿ ಶಿಖರಗಳೇ. ಪಶ್ಚಿಮ ಘಟ್ಟಗಳು ನಮಗೆ ಬಹಳ ಹತ್ತಿರ. ಕುದುರೆಮುಖ ಇನ್ನೂ ಹತ್ತಿರ. ನಮ್ಮೂರ ಸುತ್ತ ಹಸಿರೇ ಹಸಿರು. ಯುಗಾದಿ ಹಬ್ಬ ಬಂದಿತೆಂದರೆ ನಮ್ಮ ಕಾಫೀ ತೋಟಕ್ಕೆ ಮಳೆ ಬಂತೆ? ಎಂದು ಸ್ವಲ್ಪ ಎತ್ತರದ ಸ್ಥಳದಲ್ಲಿ ನಿಂತು ನಮ್ಮ ತಂದೆ ಕಣ್ಣು ಹಾಯಿಸುತ್ತಿದ್ದರು. ಗಿರಿಯ ಕಡೆ ಮೋಡ ಇದ್ದರೆ, ನಮ್ಮ ತೋಟಕ್ಕೂ ಮಳೆ ಆಗುತ್ತದೆಯೆಂದು ನಮ್ಮ ತಂದೆಗೆ ಸಮಾಧಾನ. ಏಕೆಂದರೆ ಒಳ್ಳೆಯ ಮಳೆ ಬಂದರೆ ಒತ್ತಾಗಿ ಹೂ ಬಿಡುತ್ತದೆ, ಫಸಲು ಚೆನ್ನಾಗಿ ಬರುತ್ತದೆ ಎನ್ನುವ ಕಳಕಳಿ. ಒಟ್ಟಾರೆ ಬರುವ ಫಸಲಿನ ಮೇಲೆ ನಮ್ಮ ಅವಲಂಬನೆ. ಇದು ಎಲ್ಲಾ ಕೃಷಿಕರ, ತೋಟಗಾರರ ಹಣೆಬರಹ. ತೋಟ ಎಂದರೆ ಅವರಿಗೆ ಜೀವನ. ಆದರೆ ಮಕ್ಕಳಿಗೆ ಮಜಾ ಅಷ್ಟೇ, ತೋಟಕ್ಕೆ ಹೋಗುವುದೆಂದರೆ ನಮಗೆ, ಚಿಕ್ಕವರಿಗೆ ಬಲು ಸಂತೋಷ. ಫಸಲಿನ ಬಗ್ಗೆ ನಮಗೆ ಗೊತ್ತಾಗುತ್ತಲೂ ಇರಲಿಲ್ಲ. ನಾವು ಅದರ ಬಗ್ಗೆ ತಲೆ ಕೆಡಿಸಿಕೊಳ್ಳುತ್ತಲೂ ಇರಲಿಲ್ಲ.

ಮಲೆನಾಡಿನ ವೈಭವ

IMG_20210519_091308

ವರ್ಷಕ್ಕೊಮ್ಮೆ ನಮ್ಮ ದೊಡ್ಡಪ್ಪನ ತೋಟದ ಮನೆಯಲ್ಲಿ ಸತ್ಯನಾರಾಯಣ ವ್ರತ ಮಾಡಿದಾಗ ನಮ್ಮ ಊರಿಗೆ ಹತ್ತಿರವೇ ಇದ್ದ ತೋಟಕ್ಕೆ ನಾವೆಲ್ಲರೂ ಜೀಪಿನಲ್ಲಿ ಹೋಗುತ್ತಿದ್ದೆವು. ನಮ್ಮ ತೋಟಗಳ ದಾರಿಗೆ ಕಾರಿನಂತಹ ಸೂಕ್ಷ್ಮ ವಾಹನದಲ್ಲಿ ಹೋಗುವುದು ಕಷ್ಟವೇ ಇತ್ತು. ಆದ್ದರಿಂದ ಕಾಫಿ ತೋಟದವರೆಲ್ಲಾ ಇಟ್ಟುಕೊಳ್ಳುತ್ತಿದ್ದುದು ಜೀಪೇ. ಎಲ್ಲರಿಗೂ ಒಂದು ಜೀಪ್‌ ಇರುತ್ತಿತ್ತು. ತೋಟಕ್ಕೆ ಹೋಗಿ ಬರಲು ಬೇಕೇ ಬೇಕಲ್ಲಾ. ಅಂತೂ ದೊಡ್ಡಪ್ಪನ ತೋಟಕ್ಕೆ ಎಲ್ಲರೂ ಜೀಪಿನಲ್ಲಿ ಹೋಗುವ ಪರಿಪಾಠ ಪ್ರತಿವರ್ಷ ಇರುತ್ತಿತ್ತು. ನಮ್ಮ ಅಕ್ಕಪಕ್ಕದ ಮನೆಯವರನ್ನೂ ಕರೆಯುತ್ತಿದ್ದರು. ಸತ್ಯನಾರಾಯಣ ವ್ರತವಾದ ನಂತರ ಎಲ್ಲರಿಗೂ ಭರ್ಜರಿ ಊಟವಾಗುತ್ತಿತ್ತು. ನಂತರ ನಾವುಗಳೆಲ್ಲಾ ಅಲ್ಲಿದ್ದ ಉಪ್ಪು ನೇರಳೆ, ಪೀಚಸ್‌ ಹಣ್ಣುಗಳನ್ನು ತಿಂದು ಅಲ್ಲಿಯೇ ಮನೆಯ ಮುಂದಿನ ಕಣದಲ್ಲಿ ಆಟವಾಡುತ್ತಿದ್ದೆವು. ಎಲ್ಲರಿಗೂ ಖುಷಿಯೋ ಖುಷಿ. ಕತ್ತಲಾಗುವ ತನಕ ಆಟವಾಡಿ ನಂತರ ಕಾಫಿ ಕುಡಿದ ಮೇಲೆಯೇ ನಮ್ಮ ದಂಡು ಮನೆಗೆ ಹೊರಡುತ್ತಿದ್ದುದು. ನಂತರ ಮುಂದಿನ ವರ್ಷ ಯಾವಾಗ ಬರುತ್ತದೋ? ಅವರು ಯಾವಾಗ ಸತ್ಯನಾರಾಯಣ ವ್ರತ ಮಾಡುತ್ತಾರೋ? ಎಂದು ಕಾಯುವ ಹಾಗೆ ಆಗುತ್ತಿತ್ತು. ಅಷ್ಟು ಮಜಾ ಇರುತ್ತಿತ್ತು.

IMG_20210519_091530

ನಮ್ಮ ತಂದೆಯವರೂ ಕಾಫಿ ತೋಟ ತೆಗೆದುಕೊಂಡ ಮೇಲೆ ಅದನ್ನು ನೋಡಿಕೊಳ್ಳಲು ನಮ್ಮ ಅಣ್ಣನ ಮನೆಯವರೂ ಅಲ್ಲಿಯೇ ಹೋಗಿ ಇದ್ದುದರಿಂದ ನಮ್ಮ ರಜಾ ದಿನಗಳೆಲ್ಲಾ ಕಾಫಿ ತೋಟದಲ್ಲೇ ಆಗುತ್ತಿತ್ತು. ಕಾಫಿ ತೋಟವೇ ಅಜ್ಜನ ಮನೆಯೂ ಆಗಿಬಿಟ್ಟಿತ್ತು. ಆಗಲೂ ಸಹ ಅಜ್ಜ ಬಿಡಿಸಿಕೊಡುತ್ತಿದ್ದ ಸವಿಯಾದ ಹಲಸಿನ ತೊಳೆಗಳು, ಕಣದಲ್ಲಿ ಗಂಡು ಮಕ್ಕಳ ಹಾಗೆ ಚಿನ್ನಿ ದಾಂಡು ಆಡುವುದು, ಎಲ್ಲವೂ ನನಗೆ ಖುಷಿ ಕೊಡುತ್ತಿತ್ತು. ಬೇಸಿಗೆ ರಜೆಯಲ್ಲಿ ಹೋದಾಗ ಗಿಡಗಳಿಗೆ ಮಲ್ಲಿಗೆ ಮಾಲೆಯಂತೆ ಹೆಣೆದ ಬೆಳ್ಳನೆಯ ಹೂಗಳನ್ನು ನೋಡಲು ಎರಡು ಕಣ್ಣುಗಳು ಸಾಲದು. ಕ್ರಿಸ್ಮಸ್‌ ರಜೆಗೆ ಹೋದಾಗ ಕೆಂಪನೆಯ ಹೊಳೆಯುವ ಹಣ್ಣುಗಳನ್ನು ತುಂಬಿಕೊಂಡ ಕಾಫಿ ಗಿಡಗಳು, ಕೊಯ್ದ ಹಣ್ಣುಗಳನ್ನು ವಾರ್ಚ್‌ ಮೆಂಟ್‌ ತೊಟ್ಟಿಯಲ್ಲಿ ಹಣ್ಣುಗಳ ಸಿಪ್ಪೆಯನ್ನು ಬೇರ್ಪಡಿಸುವ ಕ್ರಮ, ಎಲ್ಲ ನಮಗೆ ನೋಡಲು ಸಿಗುತ್ತಿತ್ತು. ಅವೆಲ್ಲವನ್ನೂ ನೋಡಲು ನಮಗೆ ಏನೋ ಕುತೂಹಲ. ರಜೆ ಮುಗಿದ ತಕ್ಷಣ ಊರಿಗೆ ವಾಪಸ್‌, ಮತ್ತೆ ಮಾಮೂಲಿ ಶಾಲೆ, ಓದು ಎಲ್ಲವೂ ತೋಟವನ್ನು ಮರೆಸಿಯೇ ಬಿಡುತ್ತಿದ್ದವು.

ಎಲ್ಲೆಲ್ಲೂ ಹಸಿರ ಸಿರಿ

IMG_20181109_144104-(1)

ಮದುವೆಯಾದ ನಂತರ ಸೇರಿದ್ದು ಅರಕಲಗೂಡು. ಅದೂ ಸಹ ಮಲೆನಾಡೇ. ನಮ್ಮ ಮಾನವರ ತೆಂಗಿನ ತೋಟದಲ್ಲಿ ಮೆಣಸು, ಏಲಕ್ಕಿ, ಅಡಕೆ ಮರಗಳು, ವೀಳ್ಯದ ಬಳ್ಳಿಗಳು ಎಲ್ಲವೂ ಇದ್ದವು. ಆದರೆ ಸಂಸಾರದ ಸುಳಿ ಮತ್ತು ಮಕ್ಕಳ ಪಾಲನೆ ಪೋಷಣೆಯ ನಡುವೆ ತೋಟಕ್ಕೆ ಹೋಗುತ್ತಿದ್ದುದು ಬಹಳ ಅಪರೂಪ. ಆದರೆ ವರ್ಷಕ್ಕೊಮ್ಮೆ ಧಾತ್ರಿ ಸಂತರ್ಪಣೆಯಲ್ಲಿ ನಮ್ಮ ಬಂಗಲೆ ತೋಟಕ್ಕೆ ಹೋಗಿ, ಅಲ್ಲಿ ಊರೆಲ್ಲವೂ ಹಸಿರಿನ ಮಡಿಲಲ್ಲಿ, ತೆಂಗಿನ ಮರಗಳ ಕೆಳಗೆ ಕುಳಿತು ಒಟ್ಟಿಗೆ ಊಟ ಮಾಡುತ್ತಿದ್ದೆವು ಅಷ್ಟೇ. ಆದರೆ ಮಕ್ಕಳ ವಿದ್ಯಾಭ್ಯಾಸಕ್ಕೆಂದು ಬೆಂಗಳೂರಿಗೆ ಬಂದಾಗ ಈ ಮಲೆನಾಡಿನ ವಾಸಕ್ಕೆ ಒಂದು ಅಂತಿಮ ಗೀತೆಯನ್ನು ಹಾಡಬೇಕಾಯಿತು. ಬೆಂಗಳೂರಿನಲ್ಲಿ ಲಾಲ್ ‌ಬಾಗ್‌, ಕಬ್ಬನ್‌ ಪಾರ್ಕ್‌ ಅಷ್ಟೇ ಹಸಿರಿನ ಸಾನ್ನಿಧ್ಯವನ್ನು ನೀಡುತ್ತಿದ್ದುದು. ಜೊತೆಗೆ ಒಂದಷ್ಟು ಪಾರ್ಕುಗಳು ಹಸಿರನ್ನು ನೆನಪಿಸುತ್ತಿದ್ದವು.

IMG_20210519_091818-(1)

ನಮ್ಮದೇ ಒಂದು ಪುಟ್ಟ ಮನೆಯನ್ನು ಕಟ್ಟಿಸಿಕೊಂಡಾಗ ಇದ್ದ ಜಾಗದಲ್ಲೇ ಒಂದಷ್ಟು ಗಿಡಗಳನ್ನು ನೆಟ್ಟು, ಅಲ್ಲಿ ಬೆಳೆದ ದೊಡ್ಡಪತ್ರೆಯ ಚಟ್ನಿ ಮತ್ತು ಬೇಳೆ ಸಾರು ಮಾಡಿ ಊಟಕ್ಕೆ ಬಡಿಸಿದ್ದುದುಂಟು. ಎಲ್ಲರೂ ಚಟ್ನಿ ಚೆನ್ನಾಗಿದೆ ಅಂತ ಹೇಳಿ ಊಟ ಮಾಡಿದಾಗ ನನ್ನ ಎದೆ ಅಭಿಮಾನದಿಂದ ಉಬ್ಬಿದುದಂತೂ ನಿಜವೇ ಸರಿ.

ನಗರದ ಮನೆಯಲ್ಲೂ ಹಸಿರು

IMG_20181109_143726

ಮುಂದೆ ಮಗ ಇನ್ನೂ ದೊಡ್ಡ ಮನೆ ಕಟ್ಟಿಸಿದಾಗ ಮಗನ ಹಿಂದೆ ನಾವು ಹೊರಟಿದ್ದಾಯಿತು. ಮನೆಯೇನೋ ದೊಡ್ಡದೇ ಆದರೆ ಒಂದು ಗಿಡ ಹಾಕಲೂ ಸ್ಥಳವಿರಲಿಲ್ಲ. ಆದರೂ ಮನೆಯ ಮುಂದೆ ಕುಂಡಗಳಲ್ಲಿ ಒಂದಷ್ಟು ಗಿಡಗಳನ್ನು ಸೊಸೆ ಬೆಳೆಸಿದ್ದಳು. ಆದರೆ ನಾನಂತೂ ಆ ವಿಷಯಕ್ಕೆ ತಲೆ ತೂರಿಸಿರಲಿಲ್ಲ. ಸಂತೋಷದ ವಿಷಯವೆಂದರೆ ಬೆಂಗಳೂರಿನಲ್ಲಿ ಪಾರ್ಕುಗಳಿಗಂತೂ ಕೊರತೆ ಇರಲಿಲ್ಲ. ನಮ್ಮ ಮನೆಯ ಹತ್ತಿರವೇ ಎರಡು ಪಾರ್ಕುಗಳಿದ್ದವು. ದಿನನಿತ್ಯ ಎರಡು ಬಾರಿ ಅಲ್ಲಿಗೆ ಹೋಗುತ್ತಿದ್ದೆವು.

IMG-20200904-WA0023

ಅಲ್ಲೊಂದಷ್ಟು ಗೆಳೆಯ, ಗೆಳತಿಯರ ಬಳಗವಾಯಿತು. ದೇವರ ತಲೆಯ ಮೇಲೆ ಹೂ ಹಾಕುವುದನ್ನು ತಪ್ಪಿಸಿದರೂ ನಾವು ಪಾರ್ಕಿಗೆ ಹೋಗುವುದನ್ನು ತಪ್ಪಿಸುತ್ತಿರಲಿಲ್ಲ. ಅಷ್ಟೊಂದು ಆಸೆ ನಮಗೆ ಅಲ್ಲಿಗೆ ಹೋಗಲಿಕ್ಕೆ, ನಾವು ಹೊಸ ಮನೆಗೆ ಹೋದ ಮೇಲೆ, ಪಾರ್ಕಿನ ಭೇಟಿ, ಮಿಕ್ಕ ಸಮಯದಲ್ಲಿ ಸಾಮಾನು ತರುವುದು, ನಾವಿಬ್ಬರೇ ಕ್ಯಾಬಿನಲ್ಲಿ ಮಾಲ್, ಚಲನಚಿತ್ರ, ನಾಟಕಗಳಿಗೆ ಹೋಗುವುದು ಚೆನ್ನಾಗಿ ನಡೆದಿತ್ತು. ಎಲ್ಲ ಚೆನ್ನಾಗಿದೆ ಎಂದಾಗ ಏನಾದರೂ ಆಗಲೇಬೇಕಲ್ಲವೇ? ಆಗ ಇದ್ದಕ್ಕಿದ್ದಂತೆ ಆವರಿಸಿತು ಕೊರೋನಾ. ನಮ್ಮನ್ನು ಮನೆಯಿಂದ ಹೊರಗೆ ಹೋಗದಂತೆ ಕಟ್ಟುಪಾಡು ಮಾಡಿತು. ದಿನನಿತ್ಯ ಟಿ.ವಿ. ಯಲ್ಲಿ ಕೊರೋನಾ ಪಾಸಿಟಿವ್ ಆಗಿ ಸತ್ತವರ ಸಂಖ್ಯೆ, ಅವರಿಗೆ ಆಸ್ಪತ್ರೆಯಲ್ಲಿ ಬೆಡ್‌ ಸಿಗದೇ ಆದ ಫಜೀತಿ, ಅದರ ಜೊತೆಗೆ ಪಾಸಿಟಿವ್ ‌ಆದಾಗ ಭರಿಸಬೇಕಾದ ವೆಚ್ಚ, ಎಲ್ಲರೂ ಬಾಯಿ ಮುಚ್ಚಿಕೊಂಡು ಮನೆಯಲ್ಲಿಯೇ ಇರುವಂತೆ ಮಾಡಿತು. ಎಲ್ಲಕ್ಕೂ ಭಯ, ಭಯ, ಭಯ!

ಕೊರೋನಾ ಮಧ್ಯೆ ಹಸಿರು

 

ಮನೆಯಲ್ಲಿಯೇ ಕಾಲ ಕಳೆಯಬೇಕಾಗಿ ಬಂದಾಗ, ಕೆಲಸದವರೂ ಇಲ್ಲದೆ ಇರುವಾಗ ನಮಗೆ ಹೆಂಗಸರಿಗೆ ಕೈ ತುಂಬಾ ಕೆಲಸ. ಆದರೆ ಗಂಡಸರಿಗೆ ನಿಜಕ್ಕೂ ಕಷ್ಟವೇ ಸರಿ. ಎಷ್ಟೂ ಅಂತ ಟಿ.ವಿ ನೋಡುವುದು, ಎಷ್ಟು ಪುಸ್ತಕ ಓದುವುದು, ಟಿ.ವಿ ಹಾಕಿದರೆ ಬರಿ ಕೊರೋನಾದೇ ಸುದ್ದಿ. ಇಡೀ ವಿಶ್ವದಾದ್ಯಂತ ಅದರ ಹಾವಳಿ. ಜನ ಆಸ್ಪತ್ರೆಯಲ್ಲಿ ಸ್ಥಳವಿಲ್ಲದೆ ದಾರಿ, ರಸ್ತೆಗಳಲ್ಲಿಯೇ ಸಾನ್ನಪ್ಪುವುದು, ಅದೂ ಅಭಿವೃದ್ಧಿ ಹೊಂದಿದ ರಾಷ್ಟ್ರಗಳಲ್ಲೇ, ನೋಡಿದರೆ ಎದೆಯಲ್ಲಿ ನಡುಕ ಬರುತ್ತಿತ್ತು. ಆಗ ಮಗ ತಾರಸಿಯಲ್ಲಿ ಸ್ವಲ್ಪ ಸೊಪ್ಪು, ತರಕಾರಿ ಬೆಳೆಯೋಣ ಎಂದು ಒಂದಷ್ಟು ಡಬ್ಬ, ಟ್ರೇ ಮತ್ತು ಕುಂಡಗಳನ್ನು ತಂದು ತಾರಸಿಯಲ್ಲಿ ಇರಿಸಿದ. ನಿಜ ಹೇಳಬೇಕೆಂದರೆ ನನಗೇನೂ ಅಷ್ಟೊಂದು ಆಸಕ್ತಿ ಇರಲಿಲ್ಲ. ಅದಕ್ಕೆ ನೀರು ಹಾಕಬೇಕು, ಗೊಬ್ಬರ ಹಾಕಬೇಕು ಎಲ್ಲ ಕೆಲಸವೇ. ವಯೋಮಾನದ ಕಾರಣ ಇರಬೇಕು ನಾನು ಆ ವಿಷಯಕ್ಕೆ ಸ್ಪಂದಿಸಲೇ ಇಲ್ಲ. ಆದರೂ ಮಗ ಎಲ್ಲವನ್ನೂ ತರಿಸಿದ. ಅವರ ತಂದೆಗೆ ಬೇಸರವಾಗಬಾರದು. ಕಾಲ ಕಳೆಯಲು ಅನುಕೂಲವಾಗಬೇಕು ಎನ್ನುವುದು ಅವನ ಉದ್ದೇಶ.

IMG-20210519-WA0021

ಈ ಕೊರೋನಾದ ಸಮಯದಲ್ಲಿ ಅವರು ಹೊರಗೆ ಹೋಗದೆ ಇರುವುದರಿಂದ ಅವರಿಗೊಂದು ಟೈಮ್ ಪಾಸ್‌ ಎಂದು ಅವನ ಅಭಿಪ್ರಾಯ. ಒಂದಷ್ಟು ಮಣ್ಣು, ಗೊಬ್ಬರ, ಬೀಜಗಳು ಬಂದು ಬಿದ್ದಿತು. ಒಬ್ಬ ಬಂದು ಎಲ್ಲವನ್ನೂ ಒಪ್ಪ ಮಾಡಿದ. ಬೀಜಗಳನ್ನು ಹಾಕಿದ. ಸಣ್ಣಗೆ ಸಸಿಗಳು ಹೊರಹೊಮ್ಮ ತೊಡಗಿದವು. ನೋಡಲು ಸಂತೋಷವೆನಿಸುತ್ತಿತ್ತು. ನಾನು ಮತ್ತು ನಮ್ಮವರು ಪ್ರತಿ ದಿನ ಬೆಳಗ್ಗೆ ಎದ್ದು ರಾಗಿ ಗಂಜಿ ಕುಡಿದು, ತಾರಸಿಗೆ ಹೋದರೆ ಗಿಡಗಳಿಗೆ ನೀರು ಹಾಕಿ, ಸ್ವಲ್ಪ ಸೊಪ್ಪು ಕುಯ್ದುಕೊಂಡು, ಒಂದೆರಡು ಎಲೆ ದೊಡ್ಡಪತ್ರೆ ಮತ್ತು ತುಳಸಿಯನ್ನು ತಿಂದು, ಹೂಗಳನ್ನು ಕೊಯ್ದುಕೊಂಡು ಬರುತ್ತಿದ್ದೆ. ಇದು ನಮ್ಮ ದಿನ ನಿತ್ಯದ ಪರಿಪಾಠವಾಯಿತು.

IMG-20210519-WA0046

ಆದರೆ ಸ್ವಲ್ಪ ದಿನಗಳಾದ ಮೇಲೆ ಅದನ್ನು ನೋಡಿಕೊಳ್ಳಲು ಬರುತ್ತಿದ್ದವರು ಬರುವುದು ನಿಂತುಹೋಯಿತು. ಗಿಡಗಳಿಗೆ ಸ್ವಲ್ಪ ಹುಳು ಬರುವುದು ಪ್ರಾರಂಭವಾಯಿತು. ಅದಕ್ಕೆ ಔಷಧಿ ತಂದಿದ್ದಾಯಿತು. ಅದನ್ನು ಹಾಕಬೇಕು, ಈ ರೀತಿ ಕೆಲಸ ಜಾಸ್ತಿಯಾಯಿತು. ಇವರಿಗೂ ಬೇಸರ ಯಾವಾಗಲೂ, `ನಮಗೆ ಇಷ್ಟು ಗಿಡಗಳನ್ನು ನೋಡಿಕೊಳ್ಳೋಕೇ ಕಷ್ಟ. ರೈತರಿಗೆ ಇದು ಜೀವನ, ಅವರಿಗೆ ಸರಿಯಾಗಿ ಫಸಲು ಬಾರದಿದ್ದರೆ, ಅವರ ಜೀವನ ಹೇಗೆ? ಅದಕ್ಕೇ ಅವರು ಆತ್ಮಹತ್ಯೆ ಮಾಡಿಕೊಳ್ಳೋದು,’ ಎನ್ನುವ ದಿನನಿತ್ಯದ ಇವರ ಭಾಷಣ ಕೇಳುವುದಾಯಿತು. ಅವರು ತಾರಸಿಗೆ ಬಂದ ತಕ್ಷಣ, `ಇದು ಬಹಳ ಕಷ್ಟ, ಇದರಿಂದ ಪ್ರಯೋಜನವಿಲ್ಲ,’ ಎನ್ನುವ ವರಾತ ಹೆಚ್ಚಾಯಿತು. ಗಿಡಗಳಿಗೆ ನೀರು ಹಾಕುತ್ತಿದ್ದರು, ಒಣಗಿದ ಎಲೆಗಳನ್ನು ತೆಗೆಯುತ್ತಿದ್ದರು. ಆಗಾಗ ಗಿಡಗಳಿಗೆ ಔಷಧಿಯನ್ನೂ ಹಾಕುವುದು ಎಲ್ಲವನ್ನೂ ಅವರೇ ಮಾಡುತ್ತಿದ್ದರೂ, ಮಾತಾಡುವುದನ್ನು ಮಾತ್ರ ಬಿಡುತ್ತಿರಲಿಲ್ಲ. ಅದರ ಜೊತೆ `ನನಗೆ ಈ ಗಿಡಗಳನ್ನು ನೋಡಿಕೊಳ್ಳೋಕೆ ಆಗಲ್ಲ. ಯಾರಾದರೂ ಬಂದು ಮಾಡಿದರೂ ಅವರ ಮುಂದೆ ಕುಳಿತು ಕೆಲಸ ಮಾಡಿಸೋಕೇ ಆಗಲ್ಲ,’ ಎನ್ನುತ್ತಿದ್ದರು. ಅವರ ವಯಸ್ಸೂ ಕಾರಣವಿರಬಹುದು. ಆಗ ಸೊಸೆ ಇವರ ಮಾತು ಗಮನಿಸಿ, `ನಿಮಗೆ ಆಗದಿದ್ದರೆ ಅವುಗಳನ್ನೆಲ್ಲಾ ಯಾರಿಗಾದರೂ ಕೊಟ್ಟು ಬಿಡೋಣ ಬಿಡಿ,’ ಎನ್ನಲು ಪ್ರಾರಂಭ ಮಾಡಿದಳು. ನನಗೆ ಬಿಸಿ ತುಪ್ಪ ಉಗುಳಲೂ ಆಗದು, ನುಂಗಲೂ ಆಗದು ಎನ್ನುವಂತೆ ಆಯಿತು.

ಮಗ ಟ್ರೇ, ಮಣ್ಣು, ಗೊಬ್ಬರ ತರಿಸುವಾಗ ನನಗಂತೂ ಅದರಲ್ಲಿ ಸ್ವಲ್ಪ ಆಸಕ್ತಿ ಇರಲಿಲ್ಲ. ನಾನು ಮಲೆನಾಡಿನಲ್ಲಿ ಹುಟ್ಟಿ ಬೆಳೆದಳಾದರೂ ಹಸಿರನ್ನು ನೋಡಿ ಸಂತಸ ಪಡುತ್ತಿದ್ದೆನೇ ಹೊರತು ಯಾವ ಗಿಡಗಳನ್ನು ಬೆಳೆದು ಗೊತ್ತಿರಲಿಲ್ಲ. ಸುಮ್ಮನೆ ಹಾಕಿದರೆ ಎದ್ದು ಬಿಡು ದೊಡ್ಡಪತ್ರೆ ಮತ್ತು ಕೆಲವು ದಾಸವಾಳದ ಗಿಡಗಳನ್ನು ಬೆಳೆಸಿ ಗೊತ್ತೇ ಹೊರತು ಮತ್ತೇನೂ ಗೊತ್ತಿರಲಿಲ್ಲ. ನಮ್ಮ ಹಳೆಯ ಮನೆಯಲ್ಲಿಯೂ ನನ್ನ ಕೆಲಸ ಬಹಳ ಕಡಿಮೆ ಇತ್ತು. ನಮ್ಮವರೇ ಆಗಾಗ ಮನೆಯ ಮುಂದೆ ಗಾಡಿಯಲ್ಲಿ ಗಿಡ ಬಂದರೆ ಸ್ವಲ್ಪ ಗಿಡಗಳನ್ನು ಕೊಂಡುಕೊಂಡು, ಅವನಿಗೇ ಸ್ವಲ್ಪ ದುಡ್ಡು ಕೊಟ್ಟು ಅವನ ಹತ್ತಿರವೇ ಗಿಡ ಹಾಕಿಸಿ, ಸ್ವಲ್ಪ ಗೊಬ್ಬರವನ್ನೂ ಹಾಕಿಸುತ್ತಿದ್ದರು. ಆದರೆ ಈ ಎಲ್ಲದರಲ್ಲಿ ನನ್ನ ಕೊಡುಗೆ ಅಥವಾ ಕೆಲಸ ಬಹಳ ಕಡಿಮೆ ಅಥವಾ ಇಲ್ಲವೇ ಇಲ್ಲ ಎನ್ನಬಹುದು. ಆದರೆ ಈ ತಾರಸಿ ತೋಟದಲ್ಲಿ ಅದರ ಸ್ವರೂಪವೇ ಬೇರೆ, ನಾವು ಬೆಳೆಯುತ್ತಿದ್ದುದೇ ಬೇರೆ.

ತಾರಸಿ ತೋಟದ ಸೊಬಗು

 

ನಿಜ ಹೇಳಬೇಕೆಂದರೆ ಈವರೆಗೂ ಗಿಡಗಳ ಬಗ್ಗೆ ನಾನು ಚಿಂತಿಸುತ್ತಲೇ ಇಲ್ಲ. ನಾನೇನೂ ಮಾಡುತ್ತಲೂ ಇರಲಿಲ್ಲ. ಆ ಗಿಡಗಳ ಕೆಲಸವೆಲ್ಲಾ ಮಾಡುತ್ತಿದ್ದುದು ನನ್ನವರೇ. ಗಿಡಗಳಿಗೆ ನೀರು ಹಾಕಿ, ಅಲ್ಲಿ ಬೆಳೆದ ಒಂದೆರಡು ದೊಡ್ಡ ಪತ್ರೆ ಎಲೆಗಳನ್ನು ತೊಳೆದು, ಅವರೂ ತೆಗೆದು ತಿಂದು ನನಗೂ ಕೊಡುತ್ತಿದ್ದರು. ನಂತರ ಒಂದೆರಡು ತುಳಸಿ ಎಲೆಗಳನ್ನೂ ಇಬ್ಬರೂ ತಿನ್ನುತ್ತಿದ್ದೆವು. ಅದರ ಜೊತೆಗೆ ಅಲ್ಲಿ ಬೆಳೆದ ಒಂದೆರಡು ಚೆರಿ ಟೊಮೇಟೊಗಳನ್ನು ತಿನ್ನುತ್ತಿದ್ದೆವು. ಇದರ ಜೊತೆಗೆ ಸ್ವಲ್ಪ ಸೊಪ್ಪು ಪ್ರತಿದಿನ ಕೊಯ್ದುಕೊಡು ಹೋಗಿ ಅದನ್ನು ಬೇಯಿಸಿ ಇಬ್ಬರೂ ಸೊಪ್ಪಿನ ರಸವನ್ನು ಕುಡಿಯುತ್ತಿದ್ದೆವು. ಈವರೆಗೂ ಮಲಬದ್ಧತೆಗಾಗಿ ಔಷಧಿ ಸೇವಿಸುತ್ತಿದ್ದ ಅವರಿಗೆ ಸೊಪ್ಪಿನ ರಸ ಕುಡಿಯುವುದರಿಂದ ಔಷಧಿಯ ಅಗತ್ಯವೇ ನಿಂತುಹೋಯಿತು.

ವಾರಕ್ಕೆರಡು ಬಾರಿ ಮನೆಯಲ್ಲಿ ಬೆಳೆದ ಸೊಪ್ಪಿನಿಂದಲೇ, ಸೊಪ್ಪಿನ ಹುಳಿ, ಮರಸೊಪ್ಪು, ಪಲ್ಯ ಎಲ್ಲ ಮಾಡುತ್ತಿದ್ದೆವು. ಇಷ್ಟೆಲ್ಲಾ ಅನುಕೂಲವಿರುವಾಗ ಅದನ್ನು ನಿಲ್ಲಿಸಲು ನನಗೆ ಮನಸ್ಸು ಬರಲಿಲ್ಲ. ಈವರೆಗೂ ಹಾಯಾಗಿ ಎಕ್ಸರ್‌ ಸೈಜ್‌ ಮಾಡಿ ಕಾಲ ಕಳೆಯುತ್ತಿದ್ದ ನಾನು ಸ್ವಲ್ಪ ಮಟ್ಟಿಗೆ ಆ ಗಿಡಗಳ ವಿಷಯವನ್ನು ಮನಸ್ಸಿಗೆ ಹಚ್ಚಿಕೊಳ್ಳಲು ಪ್ರಾರಂಭ ಮಾಡಿದೆ.

`ನಿಮಗೆ ಎಷ್ಟಾಗುತ್ತದೋ ಅಷ್ಟು ನೀರು ಹಾಕಿ. ಮಿಕ್ಕ ಗಿಡಗಳಿಗೆ ನಾನು ನೀರು ಹಾಕುತ್ತೇನೆ,’ ಎಂದೆ. ಒಣಗಿದ ಎಲೆಗಳನ್ನು ತೆಗೆಯಲು ಶುರು ಮಾಡಿದೆ. ಸೊಪ್ಪು ಕೊಯ್ದು ನಂತರ ಅದು ಮತ್ತೆ ಬೆಳೆಯುವುದಿಲ್ಲ ಎಂದು ಗೊತ್ತಾದಾಗ ಅದನ್ನು ಕಿತ್ತುಹಾಕಿ ಮನೆಯಲ್ಲಿದ್ದ ಕೊತ್ತಂಬರಿ ಬೀಜಗಳನ್ನೇ ತಂದು ಆ ಮಣ್ಣಿಗೆ ಹಾಕಿದೆ. ಅದು ಸರಿಯಾಗಿ ಬಾರದಿದ್ದಾಗ `ಅದನ್ನು ಚಪಾತಿ ಮಾಡುವ ಲಟ್ಟಣಿಗೆಯಲ್ಲಿ ಸ್ವಲ್ಪ ಅರೆದು ಹಾಕಬೇಕು,’ ಎಂದು ಯಾರೋ ಹೇಳಿದಾಗ ಅದನ್ನೂ ಮಾಡಿದೆವು. ಹತ್ತಿರದ ಅಂಗಡಿಗೆ ಹೋಗಿ ಕೊರೋನಾದ ಕಾರಣ ಹೊರಗೆ ನಿಂತುಕೊಂಡೇ  ಸ್ವಲ್ಪ ಬೀಜ ಖರೀದಿ ಮಾಡಿ ತಂದೆ. ಒಂದಿಷ್ಟು ಬೀಜಕ್ಕೆ ಅರವತ್ತು ರೂ.ಗಳನ್ನು ಕೊಟ್ಟಾಗ ಪಾಪ ರೈತರು ಬೀಜಗಳನ್ನು ಹೇಗೆ ಕೊಳ್ಳಬೇಕು ಎನ್ನಿಸಿತು. ದಂಟು ಸೊಪ್ಪಿನ ಗಿಡದಲ್ಲಿ ಹೂ ಬೀಜಗಳನ್ನು ಕಂಡಾಗ ಅದನ್ನೂ ಬೀಜಗಳಂತೆ ಉಪಯೋಗಿಸಬಹುದೇ ಎಂದು ಸ್ವಲ್ಪ ತಲೆ ಕೆಡಿಸಿಕೊಂಡೆ.

Untitled-1

ಮನೆಯ ಮುಂದೆ ಗಾಡಿಯಲ್ಲಿ ಬರುವ ಸೊಪ್ಪನ್ನು ಬೇಯಿಸಿದಾಗ, ಡಿಡಿಟಿ ವಾಸನೆ ಬಂದರೆ ಅನೇಕ ಸಲ ಬೇಯಿಸಿದ ಸಾರನ್ನು ಬಿಸಾಡುವುದಾಗುತ್ತಿತ್ತು. ಈಗ ಮನೆಯಲ್ಲೇ ಬೆಳೆಯುವ ಅವಕಾಶವಿದ್ದಾಗ ಸುಮ್ಮನಿರುವುದಾದರೂ ಹೇಗೆ ಅಲ್ಲವೇ? ಸ್ವಲ್ಪ ಮೈ ಬಗ್ಗಿಸಿದರಾಯಿತು ಎಂದುಕೊಂಡೆ. ನನಗೆ ಬೇಡ, ನಾನೇನು ಮಾಡಲ್ಲ ಎನ್ನುವ ನಾನೇ ಪೂರ್ಣವಾಗಿ ನನ್ನನ್ನು ನಾನು ಈ ಕಾಯಕದಲ್ಲಿ ತೊಡಗಿಸಿಕೊಂಡೆ. ಈ ಭೂಮಿಯ ನಂಟೆ ಅಷ್ಟೇ ಏನೋ? ಹೇಗೇ ಅದು ನಮ್ಮನ್ನು ಸೆಳೆದುಬಿಡುತ್ತದೆ. ಈಗ ದಿನ ನಿತ್ಯ ಒಂದೊಂದು ಟ್ರೇಯನ್ನು ಖಾಲಿ ಮಾಡಿ ಹೊಸ ಗಿಡಗಳನ್ನು ಹಾಕುತ್ತಿದ್ದೇವೆ. ಈಗ ಬೆಳೆದಿರುವ ಸೊಪ್ಪು ಮುಗಿಯುವ ಹೊತ್ತಿಗೆ ಮತ್ತಷ್ಟು ಸೊಪ್ಪು ಸಿದ್ಧವಾಗಬೇಕೂ ಎನ್ನುವುದೇ ನಮ್ಮ ಉದ್ದೇಶ. ಒಟ್ಟಾರೆ ನಾವೇ ಬೆಳೆದ ಸೊಪ್ಪನ್ನು ತಿನ್ನುವಾಗ ಅದರ ಮಜವೇ ಬೇರೆ ಮತ್ತು ಆರೋಗ್ಯಕ್ಕೆ ಒಳ್ಳೆಯದೂ ಸಹ. ಏನಾದರಾಗಲೀ ನಾನೂ ಅಖಾಡಾಕ್ಕೆ ಇಳಿದುಬಿಟ್ಟಿದ್ದೇನೆ. ನಿಜಕ್ಕೂ ನಾವು ಬೆಳೆಸಿದ ಹುಲುಸಾದ ಗಿಡಗಳನ್ನು ಕಂಡಾಗ ಮನಕ್ಕಾಗುವ ಸಂತಸಕ್ಕೆ ಸಮಾನ ಯಾವುದೂ ಇಲ್ಲ.

ಬೇಯಿಸಿದ ಸೊಪ್ಪಿನ ರಸಕ್ಕೆ ಸ್ವಲ್ಪ ಉಪ್ಪು, ನಿಂಬೆ ರಸ, ಒಂದು ಚಿಟಕಿ ಇಂಗು ಹಾಕಿದರೆ ಕುಡಿಯಲು ರುಚಿ ಮತ್ತು ಆರೋಗ್ಯಕ್ಕೂ ಒಳ್ಳೆಯದು. ನಾನಂತೂ ತಿನ್ನುವುದು ಮನೆಯಲ್ಲಿ ಬೆಳೆದ ಸೊಪ್ಪೇ, ಸಾಧ್ಯವಾದರೆ ನೀವು ಪ್ರಯತ್ನಿಸಿ.

– ಮಂಜುಳಾ ರಾಜ್‌

 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ