“ದೇಶದಲ್ಲಿ ಲಕ್ಷಾಂತರ ಯುವಕರು ನಿರುದ್ಯೋಗಿಗಳಾಗಿ ಅಲೆದಾಡುತ್ತಿದ್ದಾರೆ. ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ದೇಶ ದುಸ್ಥಿತಿಯತ್ತ ಸಾಗುತ್ತಿದೆ. ಆದರ ಇಲ್ಲಿ ಜನ ನಿರುಪಯುಕ್ತ ವಿಷಯಗಳಲ್ಲಿ ತಮ್ಮ ಸಮಯ ಹಾಳು ಮಾಡಿಕೊಳ್ಳುತ್ತಿದ್ದಾರೆ. ಈ ಮಹಿಳೆಯರಿಗೆ ಬೇರೆ ಏನೂ ಕೆಲಸ ಉಳಿದಿಲ್ವಾ?

“ಯಾವಾಗ ಇವರ ಶೋಷಣೆ ಆಗಿತ್ತೊ ಆಗ ಏಕೆ ಇವರು ಧ್ವನಿ ಎತ್ತಲಿಲ್ಲ? ಈಗ ಏಕೆ ಕೂಗಾಡುತ್ತಿದ್ದಾರೆ? ಷಡ್ಯಂತ್ರ ಮಾಡುವ ಪುರುಷರ ವಿರುದ್ಧ ಬೇರೇನೂ ಇಲ್ಲಾ ಅಥವಾ ತಾವು ಪ್ರಸಿದ್ಧರಾಗಿರಬೇಕೆಂಬ ಕಾರಣದಿಂದ ಹೀಗೆ ಮಾಡುತ್ತಿರಬಹುದೆ? ಬಂದ್‌ಮಾಡು ಟಿ.ವಿ. ಅದರಲ್ಲೇನೂ ಹುರುಳಿಲ್ಲ,” ಎಂದು ಸಿಡಿಮಿಡಿಗೊಂಡ ಯೋಗೇಶ್‌ ತಾನೇ ಸ್ವತಃ ಆಫ್‌ ಮಾಡಿ, ರಿಮೋಟ್‌ ಒಂದೆಡೆ ಎಸೆಯುತ್ತ ಆಫೀಸ್‌ಗೆ ಹೋಗಲು ಸನ್ನದ್ಧನಾಗತೊಡಗಿದ.

“ಅಂದಹಾಗೆ ಈ ಮಹಿಳೆಯರು ವ್ಯರ್ಥವಾಗಿ ಕೂಗಾಡುತ್ತಿದ್ದಾರೆಯೇ? ನೀವು ಪುರುಷರು ಹಾಲಿನಷ್ಟು ಶುದ್ಧರೆ?” ಚಪಾತಿಯನ್ನು ತವಾ ಮೇಲೆ ಕುಕ್ಕುತ್ತಾ , “ಹೌದು ಅದು ಸ್ವಾಭಾವಿಕವೇ. ಯಾವ ಸಮಾಜದಲ್ಲಿ ಮಹಿಳೆಯ ಮೌನವನ್ನು ಅವಳ ಸಭ್ಯತೆ ಹಾಗೂ ಘನತೆಯ ವ್ಯಕ್ತಿತ್ವದ ಮೂಲಾಧಾರ ಎಂದು ಭಾವಿಸಲಾಗುತ್ತೊ, ಅಲ್ಲಿ ಶೋಷಣೆಯ ವಿರುದ್ಧ ಅವಳ ಕೂಗನ್ನು ಸುಳ್ಳೆಂದೇ ಭಾವಿಸಲಾಗುತ್ತದೆ,” ನೀಲಾ ಸ್ವಲ್ಪ ಆತುರದಿಂದಲೇ ಹೇಳಿದಳು.

“ನಾನು ಹಾಗೆ ಮಾಡುತ್ತಿಲ್ಲ. ಆದರೆ 10-20 ವರ್ಷ ಅಥವಾ 30 ವರ್ಷಗಳ ಹಿಂದಿನ ಮಾತನ್ನು ಕೆದಕುವುದು ಏಕೆ? ಆಗ ಇವರ ಜೊತೆ ಹಾಗಾಗಿದ್ದರೆ, ಆಗ ಏಕೆ ಇವರು ಧ್ವನಿ ಎತ್ತಲಿಲ್ಲ? ಈಗೇಕೆ ಕೂಗಾಡುತ್ತಿದ್ದಾರೆಂದು ನಾನು ಕೇಳ್ತಿರುವೆ,” ಎಂದು ಯೋಗೇಶ್ ಶರ್ಟ್‌ ಗುಂಡಿ ಹಾಕಿಕೊಳ್ಳುತ್ತಾ ಹೇಳಿದ.

ಯೋಗೇಶನ ಮಾತುಗಳ ಬಗ್ಗೆ ನೀಲಾಳಿಗೆ ಅಚ್ಚರಿಯೂ ಆಯಿತು. ಕೋಪ ಬಂತು. ಅವಳು ಹೇಳಿದಳು, “ನಿಮಗೆ ಇದು ಕೂಗಾಟ, ಅರಚಾಟ ಅನ್ನಿಸುತ್ತಿರಬಹುದು. ಆದರೆ ನನಗೆ ಇದರಲ್ಲಿ ವಾಸ್ತವ ಇದೆ ಅನ್ನಿಸುತ್ತಿದೆ. ಅಂದಹಾಗೆ ತಪ್ಪು ಕೇವಲ ಪುರುಷರದ್ದಷ್ಟೇ ಅಲ್ಲ, ಸಮಾಜದ್ದೂ ಇದೆ.

“ಒಂದುವೇಳೆ ಆಫೀಸಿನಲ್ಲಿ ಹುಡುಗಿಯರು ಶೋಷಣೆಯ ವಿರುದ್ಧ ಧ್ವನಿ ಎತ್ತಿದರೆ, ಅವರ ಉದ್ಯೋಗ ಹೊರಟು ಹೋಗುತ್ತದೆ. ಗೃಹಿಣಿ ಹೀಗೆ ಮಾಡಲು ಅವಳಿಗೆ ಧೈರ್ಯವಾದರೂ ಎಲ್ಲಿಂದ ಬರುತ್ತೆ? ಸಮಾಜ ಬಾಲ್ಯದಿಂದಲೇ ನಾಚಿಕೆ ಎಂಬ ಹೊದಿಕೆಯಲ್ಲಿರು ಎಂದು ಅವಳಿಗೆ ಕಲಿಸಿಕೊಟ್ಟಿರುತ್ತದೆ. ಆದರೆ ಪುರುಷರಿಗೆ ಮುಕ್ತ ಅವಕಾಶ ಏಕೆ? ಮಹಿಳೆಯರು ಏನು ಧರಿಸಬೇಕು? ಏನು ಧರಿಸಬಾರದು? ಎನ್ನುವುದು ಅವರವರ ಇಚ್ಛೆಯಾಗಬೇಕೇ ಹೊರತು ಬೇರೆಯವರು ಅದನ್ನು ನಿರ್ಧರಿಸಬಾರದು.”

“ನಿಜ ಹೇಳಬೇಕೆಂದರೆ, ಭಾರತದ ಇತಿಹಾಸದಲ್ಲಿ ಮೊದಲ ಬಾರಿಗೆ ಪುರುಷ ಭಯಭೀತನಾಗಿರವಂತೆ ಕಂಡುಬರುತ್ತಿದೆ. ಎಲ್ಲಿ ತನ್ನ ಹಳೆಯ ಇತಿಹಾಸ ಕೆದಕಿ ಬಿಡುತ್ತಾರೊ ಎಂದು ಅವನಿಗೆ ಅನಿಸತೊಡಗಿದೆ,” ಎಂದು ನೀಲೆ ಹೆಮ್ಮೆಯಿಂದ ತಲೆ ಎತ್ತಿ ಹೇಳಿದಳು, “ಸೀತೆಯ ಅಗ್ನಿಪರೀಕ್ಷೆ ಸಾಕಷ್ಟು ಸಲ ಆಯಿತು. ಈಗ ರಾಮನ ಸರದಿ. ಏಕೆಂದರೆ ಸ್ತ್ರೀ ಕೇವಲ ದೇಹವಷ್ಟೇ ಅಲ್ಲ, ಅವಳಲ್ಲಿ ಉಸಿರು ಹಾಗೂ ಸ್ಪಂದನ ಕೂಡ ಇದೆ. ಸ್ತ್ರೀಯರಿಗೆ ತಮ್ಮದೇ ಆದ ಅಸ್ತಿತ್ವ ಇದೆ ಎನ್ನುವುದು ಪುರುಷರಿಗೆ ಗೊತ್ತಾಗಬೇಕು. ಅವಳು ಕೋಪ ಸಹಿಸಿಕೊಳ್ಳುವುದಿಲ್ಲ, ಯೋಚಿಸುತ್ತಾಳೆ ಕೂಡ.”

ನೀಲಾಳ ಉದ್ದುದ್ದನೆಯ ಸಂಭಾಷಣೆ ಕೇಳಿ ಯೋಗೇಶನ ತಲೆ ಚಿಟ್ಟೆಂದಿತು. ಅವನು ಸಿಡಿಮಿಡಿಗೊಂಡು ಹೇಳಿದ, “ಈಗ ಸಾಕು….. ಹೀಗೆಯೆ ಭಾಷಣ ಬಿಗಿತಾ ಇರ್ತಿಯೋ ಅಥವಾ ತಿಂಡಿಗೆ ಏನಾದರೂ ಕೊಡ್ತಿಯೋ? ಇಂದು ನನಗೆ ಸಾಕಷ್ಟು ತಡವಾಗಿಬಿಟ್ಟಿದೆ.”

ತಿಂಡಿಯ ತಟ್ಟೆಯನ್ನು ಯೋಗೇಶನ ಮುಂದೆ ಇಡುತ್ತಾ ನೀಲಾ ಹೇಳಿದಳು, “ಅಂದಹಾಗೆ, ನೀವೇಕೆ ಇಷ್ಟು ಸಿಡಿಮಿಡಿಗೊಳ್ತಾ ಇದೀರಾ? ನೀವು ಕೂಡ ಯಾರ ಜೊತೆಗಾದರೂ…. ನಿಮ್ಮದೇ ಹಳೆಯ ಪುರಾಣವನ್ನು ಯಾರಾದರೂ ಕೆದಕಬಹುದೆಂಬ ಭಯ ನಿಮಗೆ ಕಾಡುತ್ತಿದೆಯೇ?”

ಆ ಮಾತು ಹೇಳುತ್ತಿದ್ದಂತೆ ಯೋಗೇಶನ ಗಂಟಲಲ್ಲಿ ತಿಂದ ತುತ್ತು ಸಿಲುಕಿಕೊಂಡಂತೆ ಭಾಸವಾಯಿತು. “ಹ್ಞೂಂ… ಹುಚ್ಚಿ ತರಹ ನೀನೇಕೆ ಈ ಮಾತುಗಳನ್ನು ಆಡ್ತಿರುವೆ? ಕಾರಣವಿಲ್ಲದೆ ನೀನೇಕೆ ನನ್ನನ್ನು ಇದರಲ್ಲಿ ಎಳೆಯುತ್ತಿರುವೆ? ಯಾರದ್ದೋ ಕೆಲಸಕ್ಕೆ ಅದರಲ್ಲಿ ನನ್ನನ್ನೇಕೆ ಹೊಣೆ ಮಾಡುತ್ತಿರುವೆ? ನಾನು ಏನು ಎನ್ನುವುದು ಎಲ್ಲರಿಗೂ ಗೊತ್ತು. ಅದಕ್ಕೆ ಸ್ಪಷ್ಟೀಕರಣ ಕೊಡುವ ಅಗತ್ಯ ನನಗಿಲ್ಲ.”

“ಹೌದು. ಜಗತ್ತಿಗೆ ಅವರ ಬಗ್ಗೆಯೂ ಗೊತ್ತು. ಯಾರ ಬಂಡವಾಳ ಬಯಲಾಯಿತೊ ಅವರ ಬಗ್ಗೆ ನಮ್ಮ ಸಾಹೇಬ್ರು ಯಾವುದಾದರೂ ಹುಡುಗಿ ಜೊತೆ. ನಾನು ಕೇವಲ ಅವರ ಬಗ್ಗೆ ಕೇಳ್ತಿರುವೆ ಅಷ್ಟೇ,” ಎಂದು ತಿಂಡಿ ಡಬ್ಬಿ ಅವನ ಕೈಗಿಡುತ್ತ ಹೇಳಿದಳು.

ನೀಲಾಳ ಮಾತುಗಳಿಂದ ಯೋಗೇಶನಿಗೆ ಕೋಪ ಉಕ್ಕಿ ಬಂತು. ಅವಳು ಕೈಗೆ ಕೊಟ್ಟ ಡಬ್ಬಿಯನ್ನು ಅವಳ ಮೇಲೆ ಎಸೆಯಬೇಕೆಂದು ಅನಿಸಿತು. ಜಗತ್ತಿನ ಪುರುಷರೆಲ್ಲ ಕೆಟ್ಟವರು, ಮಹಿಳೆಯರು ಮಾತ್ರ ಪಾವನ ಪವಿತ್ರರು ಎಂದು ಹೇಳಬೇಕೆನಿಸಿತು. ಆದರೆ ಅವನಿಗೆ ಅಷ್ಟು ಧೈರ್ಯವಾದರೂ ಎಲ್ಲಿಂದ ಬರಬೇಕು? ನೀಲಾ, ಮಹಿಳೆಯರ ಶೋಷಣೆಯ ಬಗ್ಗೆ ಕೇಳಿದರೆ ಸಾಕು ಉರಿದೇಳುತ್ತಾಳೆ. ಹಾಗಾಗಿ ಅವನು ಏನೂ ಮಾತನಾಡದೆ ಸುಮ್ಮನಾಗಿಬಿಟ್ಟ.

“ನಿನಗೆ ನಿನ್ನ ಗಂಡನ ಮೇಲೂ ವಿಶ್ವಾಸವಿಲ್ಲವೇ? ನಾನು ಕೆಳಮಟ್ಟಕ್ಕೆ ಇಳಿದುಬಿಟ್ಟೆನೆಂದು ನಿನಗೆ ಅನಿಸುತ್ತಾ, ಹಾಗಂತ ಈ ರೀತಿ ಮಾತಾಡ್ತೀಯಾ?”

ತನ್ನ ಮಾತುಗಳನ್ನು ಯೋಗೇಶ್‌ ಎಲ್ಲಿ ಮನಸ್ಸಿಗೆ ಹಚ್ಚಿಕೊಳ್ಳುತ್ತಾನೋ ಎಂದು ನೀಲಾ ತನ್ನನ್ನು ತಾನು ಶಾಂತಗೊಳಿಸುತ್ತ ಹೇಳಿದಳು.

“ನಾನು ಈ ಮಾತುಗಳನ್ನು ಹಾಗೆಯೇ ಹೇಳ್ತಿದ್ದೆ. ನಾನು ನಿಮ್ಮನ್ನು ಇಷ್ಟಪಡ್ತೀನಿ ತಾನೇ…..? ಈಗ ಹೊರಡಿ ಆಫೀಸಿಗೆ. ನಾನು ತಡ ಮಾಡಿದೆ ಅಂತ ನೀವು ದೂರುವ ಹಾಗೆ ಆಗಬಾರದು…..”

“ಅಂದಹಾಗೆ, ಇಂದು ನನಗೆ ಅರ್ಜೆಂಟ್‌ ಮೀಟಿಂಗ್‌ ಇದೆ,” ಎಂದು ಯೋಗೇಶ್‌ಮುಗುಳ್ನಗುತ್ತಾ ಹೇಳಿದನಲ್ಲದೆ, ಎಂದಿನಂತೆ ಬೈ ಬೈ ಎಂದು ಹೇಳುತ್ತಾ ಆಫೀಸಿನತ್ತ ಹೊರಟ. ಆದರೆ ಅವನ ಹಣೆಯ ಮೇಲೆ ಚಿಂತೆಯ ಗೆರೆಗಳು ಸ್ಪಷ್ಟವಾಗಿ ಕಂಡುಬರುತ್ತಿದ್ದವು. ತನ್ನ ಭವಿಷ್ಯದ ಬಗ್ಗೆ ಅವನಿಗೆ ಚಿಂತೆ ಕಾಡುತ್ತಿತ್ತು. ತಾನೂ ಕೂಡ ಮೀ ಟೂದ ಕಪಿಮುಷ್ಟಿಗೆ ಸಿಲುಕಿದರೆ ಏನಾಗಬಹುದು ಎಂದು ಯೋಚಿಸಿ ಅವನಿಗೆ ಆತಂಕ ಆಗುತ್ತಿತ್ತು. ನೀಲಾಳಂತೂ ಅದನ್ನು ಒಂದು ಕ್ಷಣ ಸಹಿಸಿಕೊಳ್ಳಲಾರಳು. ಅದಕ್ಕೆ ತಕ್ಕ ಶಿಕ್ಷೆ ಕೊಡಲು ಕೂಡ ಹಿಂದೇಟು ಹಾಕುವುದಿಲ್ಲ. ಮಕ್ಕಳ ದೃಷ್ಟಿಯಲ್ಲಿ ತನ್ನ ಇಮೇಜ್‌ ಕೂಡ ಹಾಳಾಗಿ ಹೋಗುತ್ತದೆ ಎನ್ನುವುದು ಬೇರೆ ಮಾತು.

ಯೋಗೇಶ್‌ ಮೀಟಿಂಗಿನಲ್ಲೂ ಅದರ ಬಗ್ಗೆಯೇ ಯೋಚಿಸುತ್ತಲಿದ್ದ. ಆಫೀಸಿನ ಕೆಲಸದಲ್ಲಿ ಇಂದು ಅವನಿಗೆ ಯಾವುದೇ ಸ್ವಾರಸ್ಯ ಎನಿಸುತ್ತಿರಲಿಲ್ಲ. ಆಫೀಸಿನ ಯಾವೊಬ್ಬ ಸಿಬ್ಬಂದಿಗೂ ಆ ಕೆಲಸ ಮಾಡಿ, ಈ  ಕೆಲಸ ಮಾಡಿ ಎಂದು ಹೇಳುತ್ತಿರಲಿಲ್ಲ. ಇಲ್ಲದಿದ್ದರೆ ಅವನು ಯಾರೊಬ್ಬರಿಗೂ ಉಸಿರಾಡೋಕೂ ಆಗದಷ್ಟು ಕೆಲಸ ಕೊಡುತ್ತಿದ್ದ.

“ಇಂದು ಬಾಸ್‌ ಯಾಕೆ ಸುಮ್ನೆ ಇದ್ದಾರಲ್ಲ, ಕೂಗಾಟ ಇಲ್ಲ, ಹಾರಾಟ ಇಲ್ಲ, ತಣ್ಣಗೆ ಕ್ಯಾಬಿನ್‌ ನಲ್ಲಿ ಕೂತಿದ್ದಾರೆ. ಗುಡ್ ಮಾರ್ನಿಂಗ್‌ ಹೇಳಿದರೂ ಅದಕ್ಕೆ ಅವರಿಂದ ಯಾವುದೇ ಪ್ರತಿಕ್ರಿಯೆ ದೊರಕಲಿಲ್ಲ. ಇವರ ಮೇಲೂ ಯಾವುದಾದರೂ ದೇವಿ ಮೀ ಟೂ ಕೇಸ್‌ ಹಾಕಿರಬಹುದಾ?” ಎಂದು ಸಂದೀಪ್‌ ನಗುತ್ತಾ ಹೇಳಿದಾಗ, ಉಳಿದವರು ಅವನ ಮಾತಿಗೆ ಗೊಳ್ಳೆಂದು ನಕ್ಕರು.

“ನಿಜಾನೇ ಹೇಳಿದೆ. ಇಲ್ಲದಿದ್ದರೆ ಬರ್ತಿದ್ದಂತೆ ನಮ್ಮ ಮೇಲೆ ಗುರಾಯಿಸ್ತಾ ಇದ್ರು. ಆದರೆ ಇವತ್ತು ತಲೆ ಕೆಳಗೆ ಹಾಕಿದ್ದಾರೆ. ಯಾವುದೊ ಚಿಂತೆಯಲ್ಲಿ ಮುಳುಗಿರುವಂತೆ ಕಂಡುಬರ್ತಿದೆ. ಅಂಥದ್ದೇನು ವಿಷಯ ಇರಬಹುದು?” ಯಾರೋ ಪುನಃ ಕೇಳಿದ.

“ಹೌದು. ಇವತ್ತು ನಿನ್ನನ್ನು ಗದರಿಸೋಕೆ ಕರೆದಿದ್ದಾರೆ ಎಂದು ನನಗನ್ನಿಸಿತ್ತು. ಆದರೆ ಇವತ್ತು ಅವರು ನನ್ನನ್ನು ಒಳ ಕರೆದು ನಾನು ಕೇಳಿದ ರಜೆ ಮಂಜೂರು ಮಾಡಿದ್ದಾಗಿ ಹೇಳಿದರು,” ಎಂದು ನಂದೀಶ್‌ ಹೇಳಿದಾಗ, ಎಲ್ಲರೂ ಅಚ್ಚರಿಗೊಳಗಾದರು. ಯಾರ ರಜೆಯನ್ನೂ ಯೋಗೇಶ್‌ ಅಷ್ಟು ಸುಲಭವಾಗಿ ಮಂಜೂರು ಮಾಡುತ್ತಿರಲಿಲ್ಲ. ಅದನ್ನು ತಗೊಂಡು ನಮಗೇನಾಬೇಕಾಗಿದೆ? ಅವನಿಗೆ ಹೆಂಡತಿ ಜೊತೆ ಜಗಳ ಆಗಿರಬೇಕು, ಎಂದು ಹೇಳುತ್ತ ಎಲ್ಲರೂ ತಮ್ಮ ತಮ್ಮ ಕೆಲಸಗಳಲ್ಲಿ ಮಗ್ನರಾದರು.

ತುಂಬಿದ ಮನಸ್ಸಿಂದ ಯೋಗೇಶ್‌ ಮನೆಗೆ ತಲುಪಿದಾಗ ನೀಲಾ ಯಾರೊಂದಿಗೊ ಫೋನಿನಲ್ಲಿ ಜೋರು ಜೋರಾಗಿ ಮಾತಾಡುತ್ತಿದ್ದಳು.

“ಆ ವ್ಯಕ್ತಿಯನ್ನು ಅಷ್ಟು ಸುಲಭವಾಗಿ ಬಿಡಬಾರದು. ಅವನು ತನ್ನನ್ನು ತಾನು ಏನೆಂದು ತಿಳಿದಿದ್ದಾನೆ? ತೋಳದಂತಹ ಮನುಷ್ಯ. ಸಂಸ್ಕಾರವಂತ ಮನುಷ್ಯನ ಹಾಗೆ ತಿರುಗುತ್ತಾನೆ. ಮೊಮ್ಮಕ್ಕಳನ್ನು ಹೊಂದಿದಾತ, ತನ್ನ ಮಗಳ ವಯಸ್ಸಿನ ಹುಡುಗಿಯ ಜೊತೆ ಎಂತಹ ಕೃತ್ಯ ಮಾಡಿದ್ದಾನೆ ನೋಡು.”

“ಏನಾಯ್ತು?” ಮೆಲ್ಲನೆಯ ಧ್ವನಿಯಲ್ಲಿ ಯೋಗೇಶ್‌ ಕೇಳಿದ.

“ನೀವು ಬಂದುಬಿಟ್ರಾ? ನಾನು ನಿಮಗೇ ಫೋನ್‌ ಮಾಡಲು ಹೊರಟಿದ್ದೆ. ನಮ್ಮ ಪಕ್ಕದ್ಮನೆಯ ರಮೇಶ್‌ ಅವರ ಮೇಲೆ ಒಬ್ಬ ಹುಡುಗಿ ಹರಾಸ್‌ ಮೆಂಟ್‌ ಕೇಸ್‌ ಹಾಕಿದ್ದಾಳೆ. ಅವರು ಅದೆಷ್ಟು ಸಂಸ್ಕಾರವಂತರಂತೆ ಪೋಸ್‌ ಕೊಡ್ತಿದ್ರು ನಿಮಗೇ ಗೊತ್ತಲ್ಲ.

“ಅಂತಹ ವ್ಯಕ್ತಿಯ ಮುಖಕ್ಕೆ ಕಪ್ಪು ಬಣ್ಣ ಸವರಿ, ಅವರನ್ನು ಸರ್ಕಲ್ ನಲ್ಲಿ ನಿಲ್ಲಿಸಿ ಚಪ್ಪಲಿಯಿಂದ ಹೊಡೆಯಬೇಕೆಂದು ನಾನು ಹೇಳ್ತೀನಿ. ಆ ವ್ಯಕ್ತಿಯ ಹೆಂಡತಿ ಜೋರು ಜೋರಾಗಿ ಕೂಗಿ ಹೇಳುತ್ತಿದ್ದಳು, ಆ ಹುಡುಗಿಯದೇ ತಪ್ಪು ಎಂದು. ಅವರು ಅವಳನ್ನು ನೌಕರಿಯಿಂದ ಕಿತ್ತು ಹಾಕಿದ್ರಂತೆ. ಅದರೆ ಅವಳು ಅವರ ಹೆಸರಿಗೆ ಕಳಂಕ ಹಚ್ಚಲು ಪ್ರಯತ್ನಿಸುತ್ತಿದ್ದಾಳೆ ಎಂದು ಅವಳು ಹೇಳ್ತಿದ್ದಳು. ನನಗೆ ಅವರ ಹೆಂಡತಿಯ ಮೇಲೂ ಕೋಪ ಬರ್ತಿದೆ. ಏಕೆಂದರೆ ಅವಳು ಅಪರಾಧಿಯನ್ನು ರಕ್ಷಿಸಲು ಪ್ರಯತ್ನಿಸಿದ್ದಾಳೆ. ಅವಳನ್ನು ಜೈಲಿಗೆ ಅಟ್ಟಬೇಕು,” ಎಂದು ನೀಲಾ ಕೋಪದಿಂದ ಹೇಳಿದಳು.

“ಬಹುಶಃ ರಮೇಶ್‌ ಸತ್ಯ ಹೇಳ್ತಿರಬಹುದು. ಆ ಹುಡುಗಿಯೇ ಸುಳ್ಳು ಹೇಳಿರಬಹುದು…..”

“ಸುಳ್ಳು……?” ಎಂದು ನೀಲಾ ಅವನ ಮಾತನ್ನು ಅರ್ಧದಲ್ಲಿ ತಡೆದು, “ಅವರು ಸತ್ಯ ಹೇಳ್ತಿರಬಹುದೆ? ಏಕೆ ಆ ಹುಡುಗಿ ಹುಚ್ಚಳಾ? ತನಗೆ ತಾನೇ ಅವಮಾನ ಮಾಡಿಕೊಳ್ಳಬೇಕಾ? ಏನಾದರೂ ಮಾಡಿರಲೇಬೇಕು. ಹೀಗಾಗಿ ಅವಳು ಮಾತಾಡಿರಬಹುದು….. ಹಾಗೆಂದೇ ಅಪರಾಧ ಮಾಡಿದವರು ಬಚಾವಾಗುತ್ತಾರೆ. ಏಕೆಂದರೆ ಅವರ ಹೆಂಡತಿ ಅವರನ್ನು ರಕ್ಷಿಸಲು ಗೋಡೆಯ ಹಾಗೆ ನಿಂತುಬಿಟ್ಟರೆ ಇನ್ನೇನಾಗುತ್ತದೆ? ಗಂಡ ಅಪರಾಧಿ ಆದರೂ….. ನಿಜ ಹೇಳ್ತೀನಿ. ಅವರ ಜಾಗದಲ್ಲಿ ನನ್ನ ಗಂಡ ಏನಾದರೂ ಇದ್ದಿದ್ದರೆ ಅವರನ್ನು ನಾನು ಸುಮ್ಮನೇ ಬಿಡುತ್ತಿರಲಿಲ್ಲ. ಜೈಲಿಗೆ ಅಟ್ಟಿಬಿಡುತ್ತಿದ್ದೆ!” ನೀಲಾಳ ಬಾಯಿಂದ ಅಂತಹ ಮಾತುಗಳನ್ನು  ಕೇಳಿ ಯೋಗೇಶ್‌ನ ರೋಮಗಳು ಎದ್ದು ನಿಂತವು.

“ಅವರಿಗೂ ಹೆಣ್ಣು ಮಕ್ಕಳಿದ್ದಾರೆ. ಅವರ ಜೊತೆ ಏನಾದರೂ ಈ ರೀತಿಯ ಘಟನೆ ನಡೆದಿದ್ದರೆ…. ಮಹಿಳೆ ಯಾವುದಾದರೂ ವಸ್ತು ಅಂತಾ ತಿಳಿದಿದ್ದಾರಾ ಇವರು? ಅವಳಿಗೆ ಇಷ್ಟವಿರದಿದ್ದರೂ ಅವಳನ್ನು ಹೀಗೆ ಉಪಯೋಗಿಸಿಕೊಳ್ಳೋದಾ?”

ಇಂದು ನೀಲಾಳ ಅವತಾರ ನೋಡಿ ಯೋಗೇಶನ ಮನಸ್ಸಿನಲ್ಲಿ ಕಂಪನ ಶುರುವಾಗಿತ್ತು. ಇದೆಲ್ಲದರಿಂದ ತಾನು ಹೇಗಾದರೂ ಪಾರಾಗಬೇಕೆಂದು ಅವನು ಮನಸ್ಸಿನಲ್ಲಿಯೇ ಪ್ರಾರ್ಥನೆ ಮಾಡಲು ಶುರು ಮಾಡಿದ್ದ.

“ಈಗ ನಿಮಗೇನಾಯ್ತು?” ಯೋಗೇಶನ ಮುಖ ಕುಂದಿರುವುದನ್ನು ನೋಡಿ ನೀಲಾ ಕೇಳಿದಳು, “ನಿಮಗೂ ಇದನ್ನು ಕೇಳಿ ದುಃಖ ಆಗಿರಬಹುದು ಅಲ್ವಾ? ಹೌದು. ಯಾವುದೇ ಸಜ್ಜನ ವ್ಯಕ್ತಿಗೆ ಇದನ್ನು ಕೇಳಿ ಹೀಗೆಯೇ ಅನಿಸುತ್ತೆ. ಆದರೆ ಏನಾಯ್ತು? ನಾವು ಅವರ ಬಗ್ಗೆ ಏನು ತಿಳಿದುಕೊಂಡಿದ್ದೆ. ಈಗ ಅವರ ಬಗ್ಗೆ ಕೇಳಿ ಆಶ್ಚರ್ಯ ಆಯ್ತು ಅಲ್ವಾ? ಯಾರ ಬಗ್ಗೆಯೂ ಏನೂ ಹೇಳಲಾಗದು,” ಎಂದು ಸಿಡಿಮಿಡಿಯ ಧ್ವನಿಯಲ್ಲಿ ಹೇಳುತ್ತಾ ನೀಲಾ ಅಡುಗೆಮನೆಯ ಕಡೆ ಧಾವಿಸಿದಳು.

ಯೋಗೇಶ್‌ ಅಲ್ಲಿಯೇ ಸೋಫಾದ ಮೇಲೆ ಧೊಪ್ಪೆಂದು ಕುಳಿತುಬಿಟ್ಟ. ಅವನು ಯೋಚಿಸತೊಡಗಿದ. ಸಂಸ್ಕಾರಿ ರಮೇಶ್‌ ಅಂಕಲ್ ಬಗ್ಗೆ ಇವತ್ತು ಅದೆಷ್ಟು ಛೀಮಾರಿಗಳು ಕೇಳಿ ಬರ್ತಿವೆ? ನಾಳೆ ನನ್ನ ಸರದಿ ಬರಬಾರದು. ಆಗ ನಾನು ನನ್ನ ಹೆಣ್ಣು ಮಕ್ಕಳ ಜೊತೆ ಹೇಗೆ ತಾನೇ ಕಣ್ಣಲ್ಲಿ ಕಣ್ಣಿಟ್ಟು ಮಾತಾಡಲು ಆಗುತ್ತೆ? ಅವನು ರೂಮಿಗೆ ಬಂದು ಕುಳಿತುಕೊಂಡ. ಅಲ್ಲಿಗೆ ಬಂದ ನೀಲಾ ಕೇಳಿದಳು, “ಏನಾದರೂ ತಿಂತೀರಾ?”

ಮಕ್ಕಳು ಮತ್ತು ನೀಲಾ ಮಲಗಿ ನಿದ್ರೆಗೆ ಶರಣಾದರು. ಆದರೆ ಯೋಗೇಶನ ಕಣ್ಣುಗಳು ಮಾತ್ರ ಇನ್ನೂ ಎಚ್ಚರದಿಂದಿದ್ದವು. ಆಕಸ್ಮಿಕವಾಗಿ ಅವನ ಎದೆಗೆ ಏನೊ ಚುಚ್ಚಿದಂತೆ ಪುನಃ ಶಾಂತವಾದಂತೆ ಅನಿಸುತ್ತಿತ್ತು. ಒಮ್ಮೆ ಅವನು ಮಕ್ಕಳತ್ತ ಕಣ್ತೆರೆದು ನೋಡುತ್ತಾನೆ. ಇನ್ನೊಮ್ಮೆ ಹೆಂಡತಿಯ ಕಡೆ ದೃಷ್ಟಿ ಹರಿಸುತ್ತಾನೆ. ಇಂದು ನೀಲಾ ಅವನಿಗೆ ಹೆಂಡತಿಯಂತಲ್ಲ, ಭದ್ರಕಾಳಿಯ ಥರ ಅನಿಸತೊಡಗಿದ್ದಳು. ಹೀಗಾಗಿ ಅವನು ಹಾಲಿನಲ್ಲಿ ಹೋಗಿ ನಿದ್ರಿಸಲು ಪ್ರಯತ್ನಿಸಿದ. ಆದರೆ ಅಲ್ಲೂ ಕೂಡ ನಿದ್ರೆ ಸುಳಿಯಲಿಲ್ಲ.

ಮನೆಯ ಒಂದೊಂದು ಸಾಮಗ್ರಿಗಳು ಅವನನ್ನು ಅಣಕಿಸತೊಡಗಿದ್ದವು. ಗಹಗಹಿಸಿ ನಗತೊಡಗಿದ್ದವು. ಹೇಗೆ ನದಿ ತದ್ವಿರುದ್ಧ ಹರಿಯುತ್ತಿದೆ? ಎಂದು ಕೇಳಿದಂತೆ ಅನಿಸತೊಡಗಿತು. ಯೋಗೇಶ್‌, ನೀವು ಕೂಡ ಅದರಿಂದ ಪಾರಾಗಲಾರಿರಿ. ಸ್ವಲ್ಪ ತಡವಾಗಬಹುದು ಸರಿ, ಆದರೆ ಕರ್ಮದ ಫಲ ಎಲ್ಲರಿಗೂ ದೊರಕಿಯೇ ದೊರಕುತ್ತದೆ. ನಿಮಗೂ ಅದೂ ದೊರೆಯುತ್ತದೆ. ಅವರ ಮಾತುಗಳನ್ನು ಕೇಳಿ ಅವನು ಗಾಬರಿಗೊಂಡು ಎದ್ದೇಳುತ್ತಿದ್ದ ಹಾಗೂ ದೀರ್ಘ ಉಸಿರು ತೆಗೆದುಕೊಳ್ಳುತ್ತಿದ್ದ. ಹೆದರಿಕೆಯಿಂದ ಅವನ ಸ್ಥಿತಿ ದಯನೀಯವಾಗುತ್ತಾ  ಹೊರಟಿತ್ತು. ಯೋಚಿಸಿಯೇ ಅವನು ಕಂಪಿಸಿ ಹೋಗುತ್ತಿದ್ದ. ತನ್ನ ತಪ್ಪು ಎಲ್ಲರೆದುರು ಬಂದರೆ ಆಗ ಏನಾಗಬಹುದು? ಆಗ ತನ್ನ ಗೃಹಸ್ಥ ಜೀವನ ನಾಶವಾಗಿ ಬಿಡುತ್ತದೆ.

`ಇಲ್ಲ ಇಲ್ಲ….. ಅಂಥದ್ದೇನೂ ಆಗುವುದಿಲ್ಲ. ಅವಳೆಂದೂ ಬಾಯಿ ಬಿಡುವುದಿಲ್ಲ. ಒಂದು ವೇಳೆ ಬಾಯಿಬಿಟ್ಟರೆ? ಆಗ ನಾನು ಅವಳನ್ನು ಸುಳ್ಳು ಎಂದು ಸಾಬೀತುಪಡಿಸಿ ಬಿಡುತ್ತೇನೆ. ಅವಳೇ ನನಗೆ ಬಲೆ ಹಾಕುತ್ತಿದ್ದಳು. ನಾನು ಅದಕ್ಕೆ ಬಗ್ಗದಿದ್ದಾಗ ನನ್ನ ಮೇಲೆ ಆರೋಪ ಹೊರಿಸುತ್ತಿದ್ದಾಳೆ. ಸಾಕ್ಷ್ಯ ಕೊಟ್ಟರೆ ಏನಾಗಬಹುದು? ಯಾರು ಸಾಕ್ಷಿ? ನನ್ನ ವಿರುದ್ದ ಸಾಕ್ಷ್ಯ ಕೊಡಲು ಎಷ್ಟು ಧೈರ್ಯ ಅವರಿಗೆ!’ ಅವನು ತನಗೆ ತಾನೇ ಪ್ರಶ್ನೆಗಳಿಗೆ ಉತ್ತರ ಕೊಡುತ್ತಿದ್ದ. ಮನಸ್ಸು ಗೊಂದಲದ ಗೂಡಾಗಿತ್ತು. ಮುಕ್ತಾಳ ಜೊತೆ ನಡೆಸಿದ ಒಂದೊಂದು ಘಟನೆಗಳು ಅವನ ಕಣ್ಮುಂದೆ ಚಲನಚಿತ್ರದ ಹಾಗೆ ಬಂದು ಹೋಗುತ್ತಿದ್ದವು.

ವಿಷಯ 7-8 ವರ್ಷಗಳ ಹಿಂದಿನದ್ದು. ಯಾವ ಕಂಪನಿಯಲ್ಲಿ ಯೋಗೇಶ್‌ ಬಾಸ್‌ಆಗಿದ್ದನೋ, ಅದೇ ಕಂಪನಿಯಲ್ಲಿ ಮುಕ್ತಾ ಒಂದು ಸಾಮಾನ್ಯ ಹುದ್ದೆಯಲ್ಲಿ ಕೆಲಸ ಮಾಡುತ್ತಿದ್ದಳು. ಯೋಗೇಶ್‌ ಬಾಸ್‌ ಆಗಿದ್ದರಿಂದ ಅವಳು ಅವನು ಹೇಳಿದ ಕೆಲಸಗಳನ್ನೆಲ್ಲ ಮಾಡಬೇಕಾಗುತ್ತಿತ್ತು. ಚಂದ್ರನಂತಹ  ಚೆಲುವೆ, ಕಪ್ಪನೆಯ ಉದ್ದನೆಯ ಕೂದಲು, ಸುಂದರ ಕಂಗಳು, ಸುಂದರ ಮೈಮಾಟ. ಯೋಗೇಶ್‌ ಕದ್ದುಮುಚ್ಚಿ ಅವಳನ್ನೇ ನೋಡುತ್ತಿರುತ್ತಿದ್ದ. ಮುಕ್ತಾಗೆ ಮಾತ್ರ ಅದು ಅಸಹಜ ಎಂಬ ಭಾವನೆ ಬರುತ್ತಿತ್ತು. ಅವಳು ತನ್ನ ಬಟ್ಟೆ ಸರಿಪಡಿಸುವುದರತ್ತ ಮಗ್ನಳಾಗುತ್ತಿದ್ದಳು.

Sarvasv_2

ತನ್ನ ಬಗ್ಗೆ ಯೋಗೇಶನ ವಿಚಾರ ಸರಿ ಇಲ್ಲ, ಹೀಗಾಗಿ ತನ್ನ ಕೆಲಸಗಳನ್ನೆಲ್ಲ ಮುಕ್ತಾ ಸಕಾಲಕ್ಕೆ ಮಾಡಿ ಮುಗಿಸುತ್ತಿದ್ದಳು. ಏಕೆಂದರೆ ಅವನು ಯಾವುದೇ ಮಾತು ಆಡುವುದಕ್ಕೆ ಅವಕಾಶ ಇರಬಾರದು ಎಂದು ಅವಳು ಭಾವಿಸುತ್ತಿದ್ದಳು. ಆದರೂ ಯೋಗೇಶ್‌ ಅವಳನ್ನು ಕ್ಯಾಬಿನ್‌ ಗೆ ಕರೆದು ಅವಳಿಗೆ ಕೊಡಬಾರದ ಕೆಲಸಗಳನ್ನು ಕೊಡುತ್ತಿದ್ದ. ಅವಳು ಕೆಲಸದಲ್ಲಿ ಮಗ್ನಳಾಗಿದ್ದಾಗ ಅವಳ ಮೇಲೆಯೇ ತನ್ನ ದೃಷ್ಟಿ ಇಟ್ಟಿರುತ್ತಿದ್ದ. ಯಾವಾಗಲಾದರೊಮ್ಮೆ ಮುಕ್ತಾ ತಲೆ ಎತ್ತಿ ನೋಡಿದರೆ ಯೋಗೇಶ್‌ ಅವಳ ಕಡೆಯೇ ನೆಟ್ಟ ದೃಷ್ಟಿಯಲ್ಲಿ ನೋಡುತ್ತಿದ್ದ. ಮುಕ್ತಾಳೇ ಸೋತು ತನ್ನ ದೃಷ್ಟಿಯನ್ನು ಬೇರೆ ಕಡೆ ಹರಿಸುತ್ತಿದ್ದಳು ಹಾಗೂ ಅಲ್ಲಿಂದ ಬೇರೆ ಕಡೆ ಹೊರಟು ಹೋಗುತ್ತಿದ್ದಳು.

ಮುಕ್ತಾಳಿಗೆ ಈಗ ಯೋಗೇಶನ ಬಳಿ ಹೋಗಲು ಕೂಡ ಹೆದರಿಕೆ ಆಗುತ್ತಿತ್ತು. ಈಚೆಗೆ ಮುಕ್ತಾ ಜೀನ್ಸ್, ಟೀ ಶರ್ಟ್‌ ಧರಿಸುವುದನ್ನು ಬಿಟ್ಟುಬಿಟ್ಟಿದ್ದಳು. ಉದ್ದೇಶಪೂರ್ವಕವಾಗಿಯೇ ಅವಳು ತನಗಿಷ್ಟವಾಗದ ಬಟ್ಟೆ ಧರಿಸುತ್ತಿದ್ದಳು. ಏಕೆಂದರೆ ಅವನ ದೃಷ್ಟಿ ತನ್ನ ಮೇಲೆ ಬೀಳದಿರಲಿ ಎನ್ನುವುದು ಅವಳ ಯೋಚನೆಯಾಗಿತ್ತು. ಆದರೆ ಅವನ ಕೆಟ್ಟ ಕಣ್ಣುಗಳು ಮಾತ್ರ ಅವಳನ್ನು ದಿಟ್ಟಿಸಿ ನೋಡುತ್ತಿದ್ದ.

ಎಷ್ಟೋ ಸಲ ಯೋಗೇಶನೇ ಉದ್ದೇಶಪೂರ್ವಕವಾಗಿ ಅವಳಿಗೆ ಡಿಕ್ಕಿ ಹೊಡೆಯುತ್ತಿದ್ದ. ಆದಾಗ್ಯೂ ಮುಕ್ತಾಳೇ ಸಾರಿ ಕೇಳುತ್ತಿದ್ದಳು. ಒಂದು ಸಲವಂತೂ ಅವನು ಅವಳ ಎದೆಯ ಮೇಲೆ ಕೈ ಇರಿಸಿದ್ದ. ಬಳಿಕ `ಸಾರಿ ಸಾರಿ…’ ಎಂದು ಹೇಳತೊಡಗಿದ.

ಯೋಗೇಶ್‌ ಉದ್ದೇಶಪೂರ್ವಕವಾಗಿ ಹಾಗೆ ಮಾಡಿದ್ದ ಎನ್ನುವುದನ್ನು ಮುಕ್ತಾ ಅರಿತಿದ್ದಳು. ಅವಕಾಶ ಸಿಕ್ಕಾಗೆಲ್ಲ ಮುಕ್ತಾಳನ್ನು ಸ್ಪರ್ಶಿಸುತ್ತಿದ್ದ. ಆದರೆ ಪಾಪ ಅವಳು ಏನೂ ಹೇಳದೆ ಹಾಗೆಯೇ ಮುಂದೆ ಹೋಗುತ್ತಿದ್ದಳು.

ತನ್ನ ಪರಿಸ್ಥಿತಿಯ ಬಗ್ಗೆ ಅವಳಿಗೆ ಅಳು ಬರುತ್ತಿತ್ತು. ಹುಡುಗಿಯಾಗಿರುವುದು ಅಷ್ಟು ದೊಡ್ಡ ಪಾಪವೇ? ಆರಂಭದಿಂದಲೇ ಅವನು ಅವಳ ಮೇಲೆ ಕಣ್ಣು ಹಾಕಿದ್ದ. ಈ ನೌಕರಿ ತನಗೆ ಅದೆಷ್ಟು ಮಹತ್ವದ್ದು ಎಂಬುದು ಅವಳಿಗೆ ತಿಳಿದಿತ್ತು. ಅವಳ ಮನೆಯಲ್ಲಿ ಅವಳನ್ನು ಹೊರತುಪಡಿಸಿ ಬೇರಾರೂ ನೌಕರಿ ಮಾಡುತ್ತಿರಲಿಲ್ಲ. ತಂದೆಯ ಅಕಾಲಿಕ ಸಾವು ಇಡೀ ಮನೆಯ ಜವಾಬ್ದಾರಿಯನ್ನು ಅವಳ ಹೆಗಲಿಗೆ ಹೊರೆಸಿಬಿಟ್ಟಿತ್ತು. ಇದೇ ಕಾರಣದಿಂದ ಯೋಗೇಶ್‌ ಹೊತ್ತಿಲ್ಲದ ಹೊತ್ತಿನಲ್ಲಿ ಅದರ ದುರ್ಲಾಭ ಪಡೆಯುತ್ತಿದ್ದ.

ಆ ದಿನ ಯೋಗೇಶ್‌ ಮುಕ್ತಾಳನ್ನು ಬಹಳ ಹೊತ್ತಿನ ತನಕ ಆಫೀಸಿನಲ್ಲಿ ಉಳಿಸಿಕೊಂಡಿದ್ದ. ತಾನೇ ಅವಳನ್ನು ಮನೆಗೆ ಬಿಡುವುದಾಗಿ ಹೇಳಿದ್ದ. ಆಫೀಸಿನ ಪ್ಯೂನ್‌ ಗೂ ಅವನು ಮನೆಗೆ ಹೋಗಲು ಹೇಳಿದ್ದ. ಮುಕ್ತಾ ಬೇಗ ಬೇಗ ತನ್ನ ಕೆಲಸ ಮುಗಿಸಿ ಮನೆಗೆ ಹೋಗಲು ಹೆಜ್ಜೆ ಹಾಕುತ್ತಿದ್ದಳು.

ಅಷ್ಟರಲ್ಲಿ ಹಿಂದಿನಿಂದ ಬಂದ ಯೋಗೇಶ್‌ ಅವಳನ್ನು ಬಾಚಿಕೊಂಡ.

“ಸರ್‌, ಇದೇನು ಮಾಡುತ್ತಿದ್ದೀರಿ ನೀವು? ಬಿಟ್ಟುಬಿಡಿ ನನ್ನನ್ನು,” ಎಂದು ಹೇಳುತ್ತ ತನ್ನ ಶಕ್ತಿ ಬಳಸಿ ಅವನಿಂದ ತಪ್ಪಿಸಿಕೊಂಡಳು. ಅವಳನ್ನು ಪುನಃ ತನ್ನ ಬಾಹುಗಳಲ್ಲಿ ಬಳಸಿಕೊಳ್ಳಲು ನೋಡಿದ, “ನಾನು ಈ ಅವಕಾಶಕ್ಕಾಗಿ ಬಹಳ ದಿನಗಳಿಂದ ಕಾಯುತ್ತಿದ್ದೆ,” ಎಂದು ಹೇಳತೊಡಗಿದ. ಅಷ್ಟರಲ್ಲಿ ಪ್ಯೂನ್‌ ಅಲ್ಲಿಗೆ ಬಂದದ್ದರಿಂದ ಮುಕ್ತಾ ಬಚಾವಾದಳು. ಇಲ್ಲದಿದ್ದರೆ ಯೋಗೇಶ್‌ ಅವಳನ್ನು ಬಿಡುತ್ತಲೇ ಇರಲಿಲ್ಲ. ಬಹುಶಃ ಆ ಪ್ಯೂನ್‌ ಕೂಡ ಯೋಗೇಶನ ದುಷ್ಟ ಉದ್ದೇಶ ಅರಿತಿದ್ದ ಅನಿಸುತ್ತೆ. ಹೀಗಾಗಿ ಅವನು, “ಊಟದ ಡಬ್ಬಿ ಮರೆತುಹೋಗಿದ್ದೆ, ತೆಗೆದುಕೊಡು ಹೋಗಲು ಬಂದೆ,” ಎನ್ನುತ್ತಾ ಒಳಬಂದ. ಆ ಕಾರಣದಿಂದ ಮುಕ್ತಾ ಪಾರಾದಳು.

ಯೋಗೇಶ್‌ ಆ ಪ್ಯೂನ್‌ ಗೆ ಮನಸ್ಸಿನಲ್ಲೇ ಬೈಗುಳದ ಮಳೆ ಸುರಿಸಿದ ಹಾಗೂ ಮರುದಿನವೇ ಮೈಗಳ್ಳ ಎಂಬ ನೆಪ ಹೇಳಿ ಅವನನ್ನು ಕೆಲಸದಿಂದ ತೆಗೆದು ಹಾಕಿದ. ಆದರೆ ಈಗ ಮುಕ್ತಾ ಬಹಳ ಎಚ್ಚರದಿಂದಿರುತ್ತಿದ್ದಳು. ಸಮಯಕ್ಕೆ ತಕ್ಕಂತೆ ಕೆಲಸ ಮಾಡುತ್ತಿದ್ದಳು. ಎಲ್ಲರ ಜೊತೆಗೇ ಹೊರಟು ಹೋಗುತ್ತಿದ್ದಳು. ಆದರೆ ಯೋಗೇಶ್‌ ಮಾತ್ರ ಅವಳನ್ನು ತನ್ನ ಕಪಿಮುಷ್ಟಿಗೆ ಹೇಗೆ ಸಿಲುಕಿಸಿಬೇಕೆಂದು ಹೊಂಚು ಹಾಕುತ್ತಿದ್ದ.

ಅಂದು ಯೋಗೇಶ್‌ ಮುಕ್ತಾಗೆ ಫೋನ್‌ ಮಾಡಿ ಹೇಳಿದ, “ಆಫೀಸ್‌ ಕೆಲಸಕ್ಕಾಗಿ ಮುಂದಿನ ವಾರ ಬೇರೆ ನಗರಕ್ಕೆ ಹೋಗಬೇಕಿದೆ. ನೀನು ಸಿದ್ಧಳಾಗಿರು,” ಎಂದ. ಆದರೆ ಅವಳು ನೆಪ ಹುಡುಕತೊಡಗಿದಳು.

“ನಾನು ನಿನಗೆ ಕೇಳ್ತಿಲ್ಲ, ಹೇಳ್ತಿರುವೆ. ನಿನ್ನ ಬಾಸ್‌ ನಿನ್ನನ್ನು ಹೊರಗಡೆ ಕರೆದುಕೊಂಡು ಹೋಗುತ್ತಿದ್ದಾನೆಂದು ಖುಷಿಪಡು. ಇಲ್ಲದಿದ್ದರೆ ನಿನ್ನಂತಹ ಹುಡುಗಿಯರನ್ನು ಯಾರು ತಾನೇ ಕೇಳುತ್ತಾರೆ,” ಎಂದು ವಿಚಿತ್ರ ರೀತಿಯಲ್ಲಿ ನಗುತ್ತಾ ಹೇಳಿದ.

ಯೋಗೇಶ್‌ ಅವಳ ದೇಹ ಸುಖ ಬಯಸುತ್ತಿದ್ದ. ಅದು ಮುಕ್ತಾಳ ಅರಿವಿಗೆ ಬಂದಿತ್ತು. ಹೀಗಾಗಿ ಎಷ್ಟು ಸಾಧ್ಯವೋ ಅಷ್ಟು ಅವನಿಂದ ದೂರ ಇರಲು ಪ್ರಯತ್ನ ಪಡುತ್ತಿದ್ದಳು. ಯೋಗೇಶ್‌ ಪ್ರಭಾವಿ ವ್ಯಕ್ತಿ ಎನ್ನುವುದೂ ಅವಳಿಗೆ ಗೊತ್ತಿತ್ತು. ಅವನು ಇಷ್ಟಪಟ್ಟರೆ ಅವಳನ್ನು ನೌಕರಿಯಿಂದ ಕಿತ್ತು ಹಾಕಬಹುದಿತ್ತು. ಹೀಗಾಗಿ ಅವಳು ಅವನ ವಿರುದ್ಧ ದೂರು ನೀಡಲು ಸಾಧ್ಯವಿರಲಿಲ್ಲ. ಅಮ್ಮನ ಮುಂದೆ ಈ ವಿಷಯವನ್ನು ಹೇಳಿಬಿಡೋಣವೆಂದು ಅವಳಿಗೆ ಒಮ್ಮೊಮ್ಮೆ ಅನಿಸುತ್ತಿತ್ತು. ಆದರೆ ಈ ವಿಷಯ ಕೇಳಿದರೆ ಅವರು ಜೀವಂತ ಶವವಾಗುತ್ತಿದ್ದರು ಎಂಬುದು ಗೊತ್ತಾಗಿ ಅವಳು ತನ್ನ ತುಟಿಗೆ ಹೊಲಿಗೆ ಹಾಕಿಕೊಂಡಿದ್ದಳು. ಹೀಗಾಗಿ ಅವಳು ತನ್ನ ದುರಸ್ಥಿಗೆ ಒಬ್ಬಳೇ ಕುಳಿತು ಅಳುತ್ತಿದ್ದಳು. ಒಮ್ಮೊಮ್ಮೆ ಅವಳಿಗೆ ನೌಕರಿಗೆ ರಾಜೀನಾಮೆ ಕೊಟ್ಟುಬಿಡೋಣ ಎನಿಸುತ್ತಿತ್ತು. ಇನ್ನೊಮ್ಮೆ ಆತ್ಮಹತ್ಯೆ ಮಾಡಿಕೊಳ್ಳುವುದು ಒಳ್ಳೆಯದು ಎನಿಸುತ್ತಿತ್ತು. ಆದರೆ ಅಮ್ಮ ಹಾಗೂ ತಮ್ಮ ತಂಗಿಯರ ಯೋಚನೆ ಬಂದಾಗ ಅವಳು ತನ್ನ ನಿರ್ಧಾರ ಬದಲಿಸಬೇಕಾಗಿ ಬರುತ್ತಿತ್ತು.

ತನಗೆ ಬೇರೆ ಕಡೆ ನೌಕರಿ ಸಿಕ್ಕಿಬಿಟ್ಟರೆ ಯೋಗೇಶನಂಥ ರಾಕ್ಷಸನಿಂದ ತನಗೆ ಮುಕ್ತಿ ಸಿಗಬಹುದು ಎಂದುಕೊಂಡಿದ್ದಳು. ಅವಳಿಗೆ ಮದುವೆ ಬೇರೆ ಆಗಲಿತ್ತು. ಹುಡುಗನ ಮನೆಯವರಿಗೆ ಈ ವಿಷಯವೇನಾದರೂ ಗೊತ್ತಾಗಿಬಿಟ್ಟರೆ ಮುಂದೆ ಏನಾಗಬಹುದು ಎಂಬ ಆತಂಕ ಅವಳನ್ನು ಕಾಡುತ್ತಿತ್ತು.

ಕೊನೆಗೊಮ್ಮೆ ಅವಳಿಗೆ ಬೇರೆ ಕಡೆ ನೌಕರಿ ಸಿಕ್ಕಿತು. ಕೆಲವು ತಿಂಗಳುಗಳ ಬಳಿಕ ಅವಳ ಮದುವೆ ಕೂಡ ಆಯಿತು. ಅವಳು ಉದ್ದೇಶಪೂರ್ವಕವಾಗಿ ತನ್ನ ಫೋನ್‌ ನಂಬರ್‌ ಕೂಡ ಬದಲಿಸಿಕೊಂಡಳು. ಏಕೆಂದರೆ ಭವಿಷ್ಯದಲ್ಲಿ ಯೋಗೇಶ್‌ ತನಗೆ ತೊಂದರೆ ಕೊಡದಿರಲಿ ಎನ್ನುವುದು ಅವಳ ದೂರಾಲೋಚನೆಯಾಗಿತ್ತು. ಕಳೆದುಹೋದ ಕಷ್ಟಗಳು ಹಾಗೂ ಬರಲಿರುವ ಸುಖದ ನಡುವೆ ಬಹುದೊಡ್ಡ ವ್ಯತ್ಯಾಸ ಇದೆ ಎನ್ನುವುದು ಅವಳ ಯೋಚನೆ. ಅದನ್ನು ಅವಳು ಹಾಗೆಯೇ ಬಿಟ್ಟುಕೊಡಲು ಸಾಧ್ಯವಿರಲಿಲ್ಲ. ಸೂತ್ರ ತಪ್ಪಿದ ಗಾಳಿಪಟವೊಂದು ಹಾಗೆಯೇ ಆಕಾಶದಲ್ಲಿ ಕಣ್ಮರೆಯಾಗುವುದು ಅದರ ಸೋಲಲ್ಲ, ಅದು ಗೆಲುವು. ಹಾಗೆಯೇ ಅವಳು ಮುಕ್ತಳಾಗಿ ಜೀವಿಸಲು ಇಷ್ಟಪಡುತ್ತಿದ್ದಳು.

ಆದರೆ ಯೋಗೇಶ್‌ ಇಂದು ತನ್ನಿಂದಾಗಿ ಭಯದಲ್ಲಿದ್ದಾನೆ ಎಂಬುದು ಮುಕ್ತಾಳಿಗೆ ಗೊತ್ತಿರಲಿಲ್ಲ. `ಮುಕ್ತಾ’ ಎಂಬ ಹೆಸರು ಕೇಳಿಯೇ ಅವನು ನಡುಗುತ್ತಲಿದ್ದಾನೆ ಎಂಬುದು ಮುಕ್ತಾಳಿಗೆ ಗೊತ್ತಿರಲಿಲ್ಲ. `ಮುಕ್ತಾ’ ಎಂಬ ಹೆಸರು ಕೇಳಿಯೇ ಅವನು ನಡುಗುತ್ತಲಿದ್ದ. ರಾತ್ರಿಯಿಡೀ ಅವನು ಮಲಗಲು ಸಾಧ್ಯವಾಗಿರಲಿಲ್ಲ. ಮುಕ್ತಾ ಹೆಸರಿನ ಯಮರಾಜ ಯಾವಾಗ ತನ್ನ ಮುಂದೆ ಕೋವಿ ಹಿಡಿದು ಧುತ್ತೆಂದು ನಿಲ್ಲುತ್ತಾನೆಂದು ಅವನು ಥರಗುಟ್ಟಿ ಹೋಗುತ್ತಿದ್ದ. ಯಾರಾದರೂ ಅಪರಿಚಿತ ವ್ಯಕ್ತಿಗಳು ಮನೆಗೆ ಬಂದರೆ ಅಥವಾ ಕೊರಿಯರ್‌ ನವನು ಏನಾದರೂ ಬಂದು ಕೊಟ್ಟುಹೋದರೆ ಮುಕ್ತಾಳೇ ಏನೂ ಕಳಿಸಿದ್ದಾಳೆಂದು ಅವನು ಭಾವಿಸುತ್ತಿದ್ದ. ಮನೆಯ ಡೋರ್‌ ಬೆಲ್ ಹೊಡೆದುಕೊಂಡರೆ ಅವನ ಎದೆಯಲ್ಲಿ ತೌಡು ಕುಟ್ಟಿದಂತೆ ಭಾಸವಾಗುತ್ತಿತ್ತು.

ನಿನ್ನೆಯ ಘಟನೆ ನಂತರ ನೀಲಾಳ ಕೈಗೆ ಒಬ್ಬ ವ್ಯಕ್ತಿ ಒಂದು ಕವರ್‌ ಕೊಟ್ಟುಹೋದ. ಮುಕ್ತಾಳೇ ಏನೋ ಕೊಟ್ಟಿದ್ದಾಳೆಂದು ಅವನು ಭಾವಿಸಿದ್ದ. ಆಗ ಅವನು ನೀಲಾಳಿಗೆ ಬಳಿ “ಯಾ….ರು? ಏನು….. ಏನಿದೆ ಅದರಲ್ಲಿ……?” ಅವನು ಗಾಬರಿಯಿಂದಲೇ ಕೇಳಿದ.

“ಏನೊ ಗೊತ್ತಿಲ್ಲ. ಬಹುಶಃ ಫೋಟೋ ಏನೋ ಇರಬೇಕು,” ಎಂದು ಲಕೋಟೆ ಹರಿಯುತ್ತಾ ಹೇಳಿದಳು.

ಆದರೆ ನೀಲಾ ಲಕೋಟೆ ಹರಿಯುವುದರೊಳಗೆ ಅವಳ ಕೈಯಿಂದ ಅದನ್ನು ಕಿತ್ತುಕೊಂಡುಬಿಟ್ಟ.

“ಅದೇನು ಹಾಗೆ ಹುಚ್ಚರ ಹಾಗೆ ಮಾಡ್ತಾ ಇದೀರಾ? ಏನಾಗಿದೆ ನಿಮಗೆ? ನಾನೇಕೆ ಇದನ್ನು ತೆರೆಯಬಾರದು? ನೀವು ಹೆದರುವುದನ್ನು ನೋಡಿದರೆ ಇದರಲ್ಲಿಯೇ ನಿಮ್ಮ ಯಾವುದೋ ಹಳೆಯ ರಹಸ್ಯ ಅಡಗಿದಂತೆ ಕಾಣುತ್ತದೆ.”

ನೀಲಾಳ ಮಾತುಗಳು ಅವನಿಗೆ ಬಾಣದಂತೆ ಚುಚ್ಚಿದ. ಕಳ್ಳನ ಮನಸ್ಸು ಹುಳ್ಳುಳ್ಳಗೆ ಎಂಬಂತೆ ಅವನ ವರ್ತನೆ ಇತ್ತು. ಪ್ರತಿಯೊಂದು ಸಂಗತಿಗೂ ಅವನಿಗೆ ಹೆದರಿಕೆ ಉಂಟಾಗುತ್ತಿತ್ತು. ಎಲ್ಲಿ ತನ್ನ ಕಳ್ಳತನ ಪತ್ತೆಯಾಗುತ್ತದೊ ಎಂಬ ಆತಂಕ ಅವನಲ್ಲಿತ್ತು. ಆ ಕವರ್‌ ನಲ್ಲಿ ಅಂಥದ್ದೇನು ಇಲ್ಲದಿರುವುದರಿಂದ ಅವನು ನೆಮ್ಮದಿಯ ನಿಟ್ಟುಸಿರು ಬಿಟ್ಟ.

ಮೀ ಟೂ ಪ್ರಚಾರ ಹೆಚ್ಚಾಗುತ್ತಾ ಹೊರಟಂತೆ ಅವನ ಎದೆಬಡಿತ ಕೂಡ ಹೆಚ್ಚುತ್ತಾ ಹೆಚ್ಚುತ್ತಾ ಅವನ ರಾತ್ರಿಯ ನಿದ್ರೆ ಹಾರಿಹೋಗುತ್ತಲಿತ್ತು. ಕ್ಷಣ ಕ್ಷಣ ಅವನು ಹೆದರಿಕೆಯ ನೆರಳಿನಲ್ಲಿ ಜೀವಿಸುತ್ತಿದ್ದ. ಒಮ್ಮಿಂದೊಮ್ಮೆಲೆ ಅವನು ನಿದ್ರೆಯಿಂದೆದ್ದು ಅತ್ತಿಂದಿತ್ತ ಸುತ್ತಾಡುತ್ತಿದ್ದ.

ಯೋಗೇಶನ ವರ್ತನೆಯಿಂದ ನೀಲಾಳಿಗೆ ಅಚ್ಚರಿಯಾಗಿತ್ತು. ಅವನಿಗೆ ಹುಚ್ಚುಗಿಚ್ಚು ಹಿಡಿದಿಲ್ಲ ತಾನೇ ಎಂದು ಅವಳಿಗೆ ಅನ್ನಿಸುತ್ತಿತ್ತು. ಆದರ ಯೋಗೇಶನ ಹೃದಯದ ಮಾತನ್ನು ಅವಳು ಅದು ಹೇಗೆ ತಿಳಿದುಕೊಳ್ಳಲು ಸಾಧ್ಯ? ಅದೆಷ್ಟು ವರ್ಷಗಳ ಹಿಂದೆ ಮಾಡಿದ್ದ ಪಾಪ ಈಗ ಅವನಿಗೆ ಗಂಟಲಲ್ಲಿ ಚಂಡಿನಂತೆ ಬಂದು ಸಿಲುಕಿಕೊಂಡಿತ್ತು. ಅವನು ಯೋಚಿಸುತ್ತಿದ್ದ, ಮುಕ್ತಾಳನ್ನು ಭೇಟಿಯಾಗಿ ಅವಳ ಕ್ಷಮೆ ಯಾಚಿಸಿದರೆ ಎಲ್ಲ ಸರಿಹೋಗುತ್ತದೆ ಎಂದು ಅವನಿಗೆ ಅನ್ನಿಸುತ್ತಿತ್ತು.

`ನಾನೇ ಸ್ವತಃ ಹೋಗಿ ಅವಳನ್ನು ಭೇಟಿ ಆಗ್ತೀನಿ. ಅವಳು ನನ್ನನ್ನು ಕ್ಷಮಿಸಿಬಿಡುತ್ತಾಳೆ, ಹೇಗೂ ಮಹಿಳೆಯರ ಹೃದಯ ವಿಶಾಲವಾಗಿರುತ್ತದೆ!’ ಬಹಳಷ್ಟು ಶೋಧದ ಬಳಿಕ ಅವನಿಗೆ ಮುಕ್ತಾಳ ವಿಳಾಸ ಕೂಡ ದೊರಕಿತು. ಆದರೆ ಮುಕ್ತಾ ವಕೀಲರ ಜೊತೆ ಪೊಲೀಸ್‌ ಠಾಣೆಗೆ ಹೋಗುತ್ತಿರುವುದನ್ನು ಕಂಡು ಅವನ ಜಂಘಾಬಲವೇ ಉಡುಗಿ ಹೋದಂತೆ ಭಾಸವಾಯಿತು. ಬಹುಶಃ ಅವಳು ತನ್ನ ವಿರುದ್ಧ ಶೋಷಣೆಯ ಕೇಸ್‌ ಹಾಕಲು ಹೋಗುತ್ತಿರುವಂತೆ ಅನಿಸಿತು. ದಾರಿಹೋಕ ಅವನನ್ನು ಹಿಡಿದುಕೊಳ್ಳದಿದ್ದರೆ ಅವನು ದಾರಿ ಮಧ್ಯದಲ್ಲಿಯೇ ಬಿದ್ದುಬಿಡುತ್ತಿದ್ದನೇನೋ….?

“ಧನ್ಯವಾದ ಅಣ್ಣ,” ಎಂದು ಆ ವ್ಯಕ್ತಿಗೆ ಹೇಳುತ್ತ ಯೋಗೇಶ್‌ ಠಾಣೆಯ ಹಿಂದೆ ಮುಂದೆಯೇ ಸುತ್ತತೊಡಗಿದ. ಮುಕ್ತಾ ಹೊರಗೆ ಬರುತ್ತಿದ್ದಂತೆ ಅವಳೊಂದಿಗೆ ಮಾತಾಡಬೇಕು, ಅವಳ ಕ್ಷಮೆ ಯಾಚಿಸಬೇಕು ಎಂದುಕೊಂಡಿದ್ದ. ಆದರೆ ಅವಳು ಯಾವ ದಾರಿಯಲ್ಲಿ ಹೇಗೆ ಹೊರಟುಹೋದಳೋ ಗೊತ್ತೇ ಆಗಲಿಲ್ಲ.

ಒಂದು ವಾರ ಕಳೆದರೂ ಅವನಿಗೆ ಮುಕ್ತಾಳ ಭೇಟಿಯಾಗಲಿಲ್ಲ. ಅವಳು ಪೊಲೀಸ್‌ ಠಾಣೆಗೆ ಏಕೆ ಹೋಗಿದ್ದಳು ಎನ್ನುವುದು ಕೂಡ ಗೊತ್ತಾಗಲಿಲ್ಲ. ಅದೊಂದು ದಿನ ಅವನಿಗೆ ಗೊತ್ತಾದ ವಿಷಯವೆಂದರೆ, ಮುಕ್ತಾ ತನ್ನ ತಮ್ಮನನ್ನು ಅವನ ಹೆಂಡತಿಯ ದೂರಿನಿಂದ ರಕ್ಷಿಸಲು ಪೊಲೀಸ್‌ ಠಾಣೆಗೆ ಬಂದಿದ್ದಳಂತೆ. ಅವಳು ಹೇಗೊ ಮಾಡಿ ತನ್ನ ತಮ್ಮನನ್ನು ಜೈಲು ಶಿಕ್ಷೆಯಿಂದ ಪಾರು ಮಾಡಲು ಅವಳ ವಕೀಲರ ಜೊತೆ ಠಾಣೆಗೆ ಹೋಗಿದ್ದಳು. ಅವನ ಹೆಂಡತಿ ತನ್ನನ್ನು ಗಂಡ ಹೊಡೆಯುತ್ತಾನೆ ಎಂದು ದೂರು ನೀಡಿದ್ದಳು. ಆ ವಿಷಯ ತಿಳಿದು ಯೋಗೇಶ್‌ ನೆಮ್ಮದಿಯ ನಿಟ್ಟುಸಿರುಬಿಟ್ಟ. ತಾನಿನ್ನು ಪಾರಾದೆ ಎಂದು ಅವನಿಗೆ ಅನ್ನಿಸಿತು. ಅಷ್ಟರಲ್ಲಿಯೇ ಅವನು ಫೋನ್‌ ರಿಂಗ್‌ಹೊಡೆದುಕೊಳ್ಳತೊಡಗಿತು. ತೆರೆದು ನೋಡಿದ್ರೆ ಅದು ನೀಲಾಳ ಫೋನ್‌ ಆಗಿತ್ತು. ನೀವಿನ್ನೂ ಏಕೆ ಮನೆಗೆ ಬಂದಿಲ್ಲ? ಎಲ್ಲಿದೀರಾ?” ಎಂದು ಕೇಳಿದಳು. ಬಳಿಕ ರಮೇಶ್‌ಅಂಕಲ್ ವಿಷಯ ಪ್ರಸ್ತಾಪಿಸಿದಳು.

“ಅವಳಿಗೆ ಜಾಮೀನು ಸಿಕ್ಕಿದೆ. ಆದರೆ ಅವರು ಪಾರಾಗಲು ಸಾಧ್ಯವಿಲ್ಲ. ಅವರು ಮಾಡಿದ ಪಾಪ ಒಂದು ದಿನ ಅವರನ್ನು ಮುಳುಗಿಸಿಯೇ ಬಿಡುತ್ತದೆ.”

ಈಗ ಯೋಗೇಶನಿಗೂ ಹೆದರಿಕೆ ಆಗತೊಡಗಿತು, `ಮುಕ್ತಾ ಒಂದು ವೇಳೆ ತನಗೆ ಎದುರು ಎದ್ದು ನಿಂತು ಬಿಟ್ಟರೆ ಏನು ಮಾಡುವುದು?’

ಇವತ್ತು ಯೋಗೇಶ್‌ ತನ್ನನ್ನು ತಾನು ಪಾರಾದ ವ್ಯಕ್ತಿ ಎಂದು ಭಾವಿಸುತ್ತಾನೆ. ಆದರೆ ಈಗಲೂ ಖಡ್ಗ ಅವನ ತಲೆಯ ಮೇಲೆಯೇ ತೂಗಾಡುತ್ತದೆ. ಮುಕ್ತಾ ಯಾವಾಗ ತನ್ನ ವಿರುದ್ಧ ಮೀಟೂ ಕೇಸ್‌ ಹಾಕಿ ಬಿಡುತ್ತಾಳೊ, ತನ್ನ ವಿರುದ್ಧ ತಿರುಗುಬಾಣವಾಗಿ ಪರಿಣಮಿಸುತ್ತದೋ. ಇನ್ನುಳಿದ ಜೀವನ ಹೆದರಿಕೆಯಲ್ಲಿ ಕಳೆದು ಹೋಗಲಿದೆ ಜೀವನ. ಭವಿಷ್ಯದಲ್ಲಿ ಅವನ ಜೊತೆ ಏನಾಗಬಹುದು ಅವನಿಗೆ ಗೊತ್ತಿಲ್ಲ.

 

 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ