ವೆಜ್‌ ಬಿರಿಯಾನಿ

ಸಾಮಗ್ರಿ : 2 ಕಪ್‌ ಬಾಸುಮತಿ ಅಕ್ಕಿ, 1 1/2 ಕಪ್‌ ಮಿಶ್ರ ತರಕಾರಿ ಹೋಳು (ಆಯ್ಕೆ ನಿಮ್ಮದು), 150 ಗ್ರಾಂ ತಾಜಾ ಹಸಿಬಟಾಣಿ, 3-4 ಈರುಳ್ಳಿ, 4-5 ಹಸಿ ಮೆಣಸು, ಒಗ್ಗರಣೆಗೆ ತುಪ್ಪ, ಸಾಸುವೆ, ಜೀರಿಗೆ, ಸೋಂಪು, ಏಲಕ್ಕಿ, ಲವಂಗ, ಚಕ್ಕೆ, ಕಾಳುಮೆಣಸು, ಕರಿಬೇವು, 4-5 ಹುಳಿ ಟೊಮೇಟೊ, ರುಚಿಗೆ ತಕ್ಕಷ್ಟು ಉಪ್ಪು, ಖಾರ, ಮೊಸರು, ಗರಂಮಸಾಲ, ಚಾಟ್‌ ಮಸಾಲ, ಅರ್ಧ ಕಪ್ ಡ್ರೈ ಫ್ರೂಟ್ಸ್, ಜೊತೆಗೆ ಸೌತೆ, ಟೊಮೇಟೊ ರಾಯ್ತಾ.

ವಿಧಾನ : ಮೊದಲು ಬಾಸುಮತಿ ಅಕ್ಕಿ ತೊಳೆದು ಅರ್ಧ ಗಂಟೆ ನೆನೆಯಲು ಬಿಡಿ. ಕುಕ್ಕರಿನಲ್ಲಿ ತುಸು ತುಪ್ಪ ಬಿಸಿ ಮಾಡಿ ಅರ್ಧ ಭಾಗ ಬಾದಾಮಿ, ಗೋಡಂಬಿ ಚೂರು ಹಾಕಿ ಹುರಿದ ಮೇಲೆ ನೆನೆದ ಅಕ್ಕಿ, ಉಪ್ಪು, ಉದುರಾಗಿ ಬರುವಷ್ಟು ನೀರು ಬೆರೆಸಿ 1 ಸೀಟಿ ಕೂಗಿಸಿ. ದೊಡ್ಡ ಬಾಣಲೆಯಲ್ಲಿ ಉಳಿದ ತುಪ್ಪ ಬಿಸಿ ಮಾಡಿ ತರಕಾರಿ ಹೋಳು ಹಾಕಿ ಚೆನ್ನಾಗಿ ಬಾಡಿಸಿ, ಇದರಲ್ಲಿ ಬಟಾಣಿ ಸಹ ಬೇಯಿಸಿ, ಎಲ್ಲವನ್ನೂ ಬಟ್ಟಲಿಗೆ ಹಾಕಿಡಿ. ಅದೇ ಬಾಣಲೆಯಲ್ಲಿ ಇನ್ನಷ್ಟು ತುಪ್ಪ ಬಿಸಿ ಮಾಡಿ ಎಲ್ಲಾ ಸಾಮಗ್ರಿ ಹಾಕಿ ಹೆಚ್ಚಿದ ಹಸಿ ಮೆಣಸಿನ ಜೊತೆ ಒಗ್ಗರಣೆ ಚಟಪಟಾಯಿಸಿ. ನಂತರ ಈರುಳ್ಳಿ ಹಾಕಿ ಬಾಡಿಸಿ. ನಂತರ ಇದಕ್ಕೆ ಉಪ್ಪು, ಖಾರ, ಮಸಾಲೆ ಹಾಕಿ ಕೆದಕಿ ಮೊಸರು ಬೆರೆಸಿ ಕೈಯಾಡಿಸಿ. 1-2 ಕುದಿ ಬಂದಾಗ, ಎಲ್ಲಾ ತರಕಾರಿ ಹಾಕಿ ಕೆದಕಬೇಕು. ಕೊನೆಯಲ್ಲಿ ಅನ್ನ ಸೇರಿಸಿ ಎಲ್ಲ ಚೆನ್ನಾಗಿ ಬೆರೆತುಕೊಳ್ಳುವಂತೆ ಕೆದಕಿ ಕೆಳಗಿಳಿಸಿ. ಇದರ ಮೇಲೆ ಕೊ.ಸೊಪ್ಪು, ಹುರಿದ ಡ್ರೈ ಫ್ರೂಟ್ಸ್, ಬಾಡಿಸಿದ ಎಕ್ಸ್ ಟ್ರಾ ಈರುಳ್ಳಿಯಿಂದ ಅಲಂಕರಿಸಿ ಟೊಮೇಟೊ ರಾಯ್ತಾ ಜೊತೆ ಸವಿಯಲು ಕೊಡಿ.

ಪಂಜಾಬಿ ಛೋಲೆ

Punjabi-Chole-1

 

ಮೂಲ ಸಾಮಗ್ರಿ : ಅರ್ಧರ್ಧ ಸೌಟು ರೀಫೈಂಡ್‌ ಎಣ್ಣೆ, ಬೆಣ್ಣೆ, ತುಸು ಜೀರಿಗೆ, ಧನಿಯಾ, 1 ಕಪ್‌ ಕಡಲೆಕಾಳು (ಹಿಂದಿನ ಸಂಜೆ ನೆನೆಸಿ ಮಾರನೇ ದಿನ ಬೇಯಿಸಿ), ಒಂದಿಷ್ಟು ಹೆಚ್ಚಿದ ಬೆಳ್ಳುಳ್ಳಿ, ಈರುಳ್ಳಿ, ರುಚಿಗೆ ತಕ್ಕಷ್ಟು ಉಪ್ಪು, ಖಾರ, ಗರಂಮಸಾಲ, ಶುಂಠಿ-ಬೆಳ್ಳುಳ್ಳಿ ಪೇಸ್ಟ್, ಹೆಚ್ಚಿದ ಹಸಿ ಮೆಣಸು, ಕೊ.ಸೊಪ್ಪು, ಪುದೀನಾ, ಕರಿಬೇವು, ಟೊಮೇಟೊ ಪೇಸ್ಟ್, 4-5 ಹೆಚ್ಚಿದ ಟೊಮೇಟೊ, 1 ನಿಂಬೆಹಣ್ಣು, ಅಲಂಕರಿಸಲು ತುಸು ಶುದ್ಧ ತುಪ್ಪ, ಹೆಚ್ಚಿದ ಈರುಳ್ಳಿ, ಕೊ.ಸೊಪ್ಪು, ಪುದೀನಾ.

ಮಸಾಲೆ ಸಾಮಗ್ರಿ : 1 ನಿಂಬೆ ಗಾತ್ರ ಹುಣಿಸೆಹಣ್ಣು (ಕಿವುಚಿ ರಸ ತೆಗೆಯಿರಿ), 1-2 ಈರುಳ್ಳಿ, 3-4 ಎಸಳು ಬೆಳ್ಳುಳ್ಳಿ, ಉಪ್ಪು, ಖಾರ, ಹೆಚ್ಚಿದ ಕೊ.ಸೊಪ್ಪು.

ವಿಧಾನ : ಮೊದಲು ಕಡಲೆಕಾಳನ್ನು 4-5 ಸೀಟಿ ಬರುವಂತೆ ಹದನಾಗಿ ಬೇಯಿಸಿ. ಒಂದು ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ, ಬೆಣ್ಣೆ ಹಾಕಿ. ನಂತರ ಇದಕ್ಕೆ ಜೀರಿಗೆ, ಹೆಚ್ಚಿದ ಬೆಳ್ಳುಳ್ಳಿ, ಕೊ.ಸೊಪ್ಪು, ಹಸಿ ಮೆಣಸು, ಟೊಮೇಟೊ, ಈರುಳ್ಳಿ, ಶುಂಠಿ-ಬೆಳ್ಳುಳ್ಳಿ ಪೇಸ್ಟ್, ಉಪ್ಪು, ಖಾರ, ಅರಿಶಿನ, ಉಳಿದ ಡ್ರೈ ಮಸಾಲೆ, ಟೊಮೇಟೊ ಪೇಸ್ಟ್, ಹುರಿದ ಧನಿಯಾ ಇತ್ಯಾದಿ ಒಂದೊಂದಾಗಿ ಹಾಕಿ ಬಾಡಿಸಿ.

ನಂತರ (ನೀರಿನ ಸಮೇತ) ಬೆಂದ ಕಡಲೆಕಾಳು ಬೆರೆಸಿ ಕೈಯಾಡಿಸಿ. ಆಮೇಲೆ ಹಸಿ ಮಸಾಲೆಗೆ ಬೇಕಾದ ಎಲ್ಲಾ ಸಾಮಗ್ರಿ ಸೇರಿಸಿ ಪೇಸ್ಟ್ ಮಾಡಿ, ಕಿವುಚಿದ ಹುಣೀಸೆ ರಸ ಇದಕ್ಕೆ ಬೆರೆಸಿ ಕೆದಕಬೇಕು. ಮಂದ ಉರಿಯಲ್ಲಿ ಚೆನ್ನಾಗಿ ಕೆದಕುತ್ತಾ ಕುದಿಸಬೇಕು. ಕೆಳಗಿಳಿಸಿ ಹೆಚ್ಚಿದ ಕೊ.ಸೊಪ್ಪು, ನಿಂಬೆರಸ ಬೆರೆಸಿ, ಚಿತ್ರದಲ್ಲಿರುವಂತೆ ಅಲಂಕರಿಸಿ ಚಪಾತಿ ಪೂರಿ ಜೊತೆ ಸವಿಯಲು ಕೊಡಿ.

ಸ್ಪೈಸಿ ದಂ ಆಲೂ

ಸಾಮಗ್ರಿ : 1-2 ಸಣ್ಣ ಆಲೂ, 2 ಕಪ್‌ ಹುಳಿ ಮೊಸರು, 1 ದೊಡ್ಡ ಚಮಚ ಗೋಡಂಬಿ ಪುಡಿ, ರುಚಿಗೆ ತಕ್ಕಷ್ಟು ಉಪ್ಪು, ಖಾರ, ಶುಂಠಿ-ಬೆಳ್ಳುಳ್ಳಿ ಪೇಸ್ಟ್, ಧನಿಯಾ ಪುಡಿ, ಸೋಂಪು ಪುಡಿ, ಏಲಕ್ಕಿ ಪುಡಿ, ಜೀರಿಗೆ ಪುಡಿ, ಗರಂಮಸಾಲ, ಚಾಟ್‌ ಮಸಾಲ, 1-2 ಲವಂಗದೆಲೆ, ಅರಿಶಿನ, ಒಂದಿಷ್ಟು ಹೆಚ್ಚಿದ ಕೊ.ಸೊಪ್ಪು, ಪುದೀನಾ, ಕರಿಬೇವು, ಕರಿಯಲು ಎಣ್ಣೆ.

ವಿಧಾನ : ಮೊದಲು ಆಲೂ ಸಿಪ್ಪೆ ಹೆರೆದು, ಪೋರ್ಕಿನಿಂದ ಅಲ್ಲಲ್ಲಿ ಚುಚ್ಚಿ ಉಪ್ಪು ನೀರಿಗೆ ಹಾಕಿ 15 ನಿಮಿಷ ಬಿಡಿ. ನಂತರ ಹೊರತೆಗೆದು ಫ್ಯಾನಿನಡಿ ಒಣಗಿಸಿ, ಕಾದ ಎಣ್ಣೆಯಲ್ಲಿ ಇಡಿಯಾಗಿ ಕರಿಯಿರಿ. ಒಂದು ದೊಡ್ಡ ಬಟ್ಟಲಿಗೆ ಮೊಸರು ಹಾಕಿ, ಮೇಲೆ ತಿಳಿಸಿದ ಎಲ್ಲಾ ಮಸಾಲೆ ಸಾಮಗ್ರಿ ಸೇರಿಸಿ ಕದಡಿಕೊಳ್ಳಿ. ಅದೇ ಬಾಣಲೆಯಲ್ಲಿ ಅರ್ಧ ಸೌಟು ಎಣ್ಣೆ ಉಳಿಸಿ, ಬಿಸಿ ಮಾಡಿ. ಅದಕ್ಕೆ ಒಗ್ಗರಣೆ ಸಾಮಗ್ರಿ, ಲವಂಗದೆಲೆ ಹಾಕಿ. ಇದಕ್ಕೆ ಮೊಸರಿನ ಮಿಶ್ರಣ ಬೆರೆಸಿ ಮಂದ ಉರಿಯಲ್ಲಿ ಕೈಯಾಡಿಸಿ. ಅರ್ಧ ಕಪ್‌ ನೀರು ಬೆರೆಸಿ ಕುದಿಸಿರಿ. ನಂತರ ಇದಕ್ಕೆ ಆಲೂ ಬೆರೆಸಿ ಮಂದ ಉರಿಯಲ್ಲಿ ಕೈಯಾಡಿಸುತ್ತಾ ಕುದಿಸಿರಿ. ಗ್ರೇವಿ ಸಾಕಷ್ಟು ಗಟ್ಟಿಯಾದಾಗ ಕೆಳಗಿಳಿಸಿ, ಕೊ.ಸೊಪ್ಪು/ಪುದೀನಾ ಉದುರಿಸಿ ಬಿಸಿಯಾಗಿ ಚಪಾತಿ, ಪೂರಿ ಜೊತೆ ಸವಿಯಿರಿ.

ಆಲೂ ಸೋರೆಯ ಕೋಫ್ತಾ

Kofta-Curry

ಸಾಮಗ್ರಿ : 500 ಗ್ರಾಂ ಸೋರೆಕಾಯಿ ತುರಿ, ಬೇಯಿಸಿ ಮಸೆದ 400 ಗ್ರಾಂ ಆಲೂ, 100 ಗ್ರಾಂ ಕಡಲೆಹಿಟ್ಟು, ಒಂದಿಷ್ಟು ಹೆಚ್ಚಿದ ಹಸಿ ಮೆಣಸು, ಶುಂಠಿ, ಬೆಳ್ಳುಳ್ಳಿ, 5-6 ಈರುಳ್ಳಿ, ಕರಿಯಲು ಎಣ್ಣೆ, ರುಚಿಗೆ ತಕ್ಕಷ್ಟು ಉಪ್ಪು, ಖಾರ, ಅರಿಶಿನ, ಗರಂಮಸಾಲ, ಚಾಟ್‌ ಮಸಾಲ, ಧನಿಯಾ ಪುಡಿ, ಮೆಂತ್ಯಪುಡಿ, ಕಾಳುಮೆಣಸು, 2 ಈರುಳ್ಳಿಗಳ ಪೇಸ್ಟ್, 3 ಕಪ್‌ ಟೊಮೇಟೊ ಪೇಸ್ಟ್, ಶುಂಠಿ ಬೆಳ್ಳುಳ್ಳಿ ಪೇಸ್ಟ್.

ವಿಧಾನ : ಮೊದಲು ತುಸು ಎಣ್ಣೆಯಲ್ಲಿ ತುರಿದ ಸೋರೆ ಹಾಕಿ ಬಾಡಿಸಿ ತೆಗೆಯಿರಿ. ಇದಕ್ಕೆ ಮಸೆದ ಆಲೂ, ಕಡಲೆಹಿಟ್ಟು, ಹಸಿ ಮೆಣಸು, ಕಾಳು ಮೆಣಸಿನಪುಡಿ, ಶುಂಠಿ, ಬೆಳ್ಳುಳ್ಳಿ ಎಲ್ಲಾ ಹಾಕಿ ತುಸು ನೀರು ಚಿಮುಕಿಸುತ್ತಾ, ಪಕೋಡ ತರಹ ಗಟ್ಟಿ ಕಲಸಿಡಿ. ಇದನ್ನು ಸಣ್ಣ ಉಂಡೆಗಳಾಗಿಸಿ ಕಾದ ಎಣ್ಣೆಯಲ್ಲಿ ಕರಿಯಿರಿ, ಕೋಫ್ತಾ ರೆಡಿ. ಗ್ರೇವಿಗಾಗಿ ಬಾಣಲೆಯಲ್ಲಿ ತುಸು ಎಣ್ಣೆ, ತುಪ್ಪ ಬಿಸಿ ಮಾಡಿ. ಇದಕ್ಕೆ ಮೊದಲು ಈರುಳ್ಳಿ ಪೇಸ್ಟ್, ನಂತರ ಶುಂಠಿ ಬೆಳ್ಳುಳ್ಳಿ ಆಮೇಲೆ ಟೊಮೇಟೊ ಪೇಸ್ಟ್ ಹಾಕಿ ಬಾಡಿಸಿ. ನಂತರ ಎಲ್ಲಾ ಮಸಾಲೆ ಹಾಕಿ ಮಂದ ಉರಿಯಲ್ಲಿ ಕೆದಕಬೇಕು. ಅರ್ಧ ಕಪ್‌ ನೀರು ಬೆರೆಸಿ ಕದಡುತ್ತಾ ಗ್ರೇವಿ ಕುದಿಸಿರಿ. ನಂತರ ಇದಕ್ಕೆ ಕೋಫ್ತಾ ಬೆರೆಸಿ 2-3 ನಿಮಿಷ ನಿಧಾನ ಕೈಯಾಡಿಸುತ್ತಾ ಕುದಿಸಿ ಕೆಳಗಿಳಿಸಿ. ಮೇಲೆ ಕೊ.ಸೊಪ್ಪು ಉದುರಿಸಿ ಬಿಸಿಯಾಗಿ ಸವಿಯಿರಿ.

ಸ್ಪೆಷಲ್ ಮಲಾಯಿ ಬ್ರೋಕ್ಲಿ

Malai-Broccoli

ಸಾಮಗ್ರಿ : 500 ಗ್ರಾಂ ಬ್ರೋಕ್ಲಿ, 250 ಗ್ರಾಂ ತುರಿದ ಚೀಸ್‌, 1 ಕಪ್‌ ಮೊಸರು, ರುಚಿಗೆ ತಕ್ಕಷ್ಟು ಉಪ್ಪು, ಬಿಳಿ ಮೆಣಸು, ಏಲಕ್ಕಿ ಪುಡಿ, ಜಾವಿತ್ರಿ ಪುಡಿ, ತಾಜಾ ಕ್ರೀಂ, ಖಾರದ ಪುದೀನಾ ಚಟ್ನಿ, ತುಪ್ಪ.

ವಿಧಾನ : ಮೊದಲು ಪಾತ್ರೆಯಲ್ಲಿ ನೀರು ಬಿಸಿ ಮಾಡಿ, ತುಸು ಉಪ್ಪು, ಏಲಕ್ಕಿಪುಡಿ ಹಾಕಿ ಹೆಚ್ಚಿದ ಬ್ರೋಕ್ಲಿ ಸೇರಿಸಿ ಕುದಿ ನೀರಲ್ಲಿ ಬ್ಲ್ಯಾಂಚ್‌ ಮಾಡಿ, ಬ್ರೋಕ್ಲಿ ಬೇರ್ಪಡಿಸಿ. ಒಂದು ಬಾಣಲೆಯಲ್ಲಿ ತುಸು ತುಪ್ಪ ಬಿಸಿ ಮಾಡಿ ಬ್ರೋಕ್ಲಿ ಬಾಡಿಸಿ. ಇದಕ್ಕೆ ಮೊಸರು, ಕ್ರೀಂ ಚೀಸ್‌, ಉಪ್ಪು, ಮೆಣಸು, ಜಾವಿತ್ರಿ ಪುಡಿ ಸೇರಿಸಿ ಮಂದ ಉರಿಯಲ್ಲಿ ಬಾಡಿಸಿ, ಕೆಳಗಿಳಿಸಿ. ಸಾಧ್ಯವಾದರೆ ತಂದೂರ್‌ ಬಳಸಿ ಅಥವಾ ಓವನ್ನಿನಲ್ಲಿ ಗ್ರಿಲ್ ‌ಮಾಡಲೂಬಹುದು.

ಪನೀರ್‌ ಬಟರ್‌ ಮಸಾಲ

ಸಾಮಗ್ರಿ : 250 ಗ್ರಾಂ ಪನೀರ್‌, 3-4 ಟೊಮೇಟೊ, 2-3 ಹಸಿ ಮೆಣಸು, ತುಸು ಶುಂಠಿ, 2 ಈರುಳ್ಳಿ, 7-8 ಎಸಳು ಬೆಳ್ಳುಳ್ಳಿ, ಅರ್ಧ ಕಪ್‌ ಕ್ರೀಂ, ಅರ್ಧ ಸೌಟು ಬೆಣ್ಣೆ, ರುಚಿಗೆ ತಕ್ಕಷ್ಟು ಉಪ್ಪು, ಖಾರ, ಧನಿಯಾ ಪುಡಿ, ಕಸೂರಿಮೇಥಿ, ಗರಂಮಸಾಲ, ಜೀರಿಗೆ ಪುಡಿ.

ವಿಧಾನ : ಮೊದಲು ಮಿಕ್ಸಿಗೆ ಹೆಚ್ಚಿದ ಈರುಳ್ಳಿ, ಬೆಳ್ಳುಳ್ಳಿ, ಟೊಮೇಟೊ, ಹಸಿ ಮೆಣಸು, ಶುಂಠಿ ಹಾಕಿ ಪೇಸ್ಟ್ ಮಾಡಿ. ಬಾಣಲೆ ಬಿಸಿ ಮಾಡಿ, ಬೆಣ್ಣೆ ಕರಗಿಸಿ. ಇದರಲ್ಲಿ ಪನೀರ್‌ ತುಂಡುಗಳನ್ನು ಲಘು ಬಾಡಿಸಿ ತೆಗೆಯಿರಿ. ಅದಕ್ಕೆ ಎಲ್ಲಾ ಮಸಾಲೆ ಹಾಕಿ ಮಂದ ಉರಿಯಲ್ಲಿ ಕೆದಕಬೇಕು. ನಂತರ ರುಬ್ಬಿದ ಪೇಸ್ಟ್ ಹಾಕಿ ಕೈಯಾಡಿಸಿ. ಆಮೇಲೆ ಉಪ್ಪು, ಕ್ರೀಂ ಸೇರಿಸಿ ಕೆದಕಬೇಕು. ಇದಕ್ಕೆ ಅರ್ಧ ಕಪ್‌ ನೀರು ಬೆರೆಸಿ ಚೆನ್ನಾಗಿ ಕೆದಕುತ್ತಾ ಕುದಿಸಬೇಕು. ಕೊನೆಯಲ್ಲಿ ಪನೀರ್‌ ತುಂಡು ಬೆರೆಸಿ ಮತ್ತೆರಡು ನಿಮಿಷ ಕೈಯಾಡಿಸಿ. ಬೆಣ್ಣೆ ಉಳಿದಿದ್ದನ್ನೂ ಸೇರಿಸಿಬಿಡಿ. ಕೆಳಗಿಳಿಸಿ, ಕ್ರೀಂ, ಕೊ.ಸೊಪ್ಪಿನಿಂದ ಅಲಂಕರಿಸಿ ಸವಿಯಲು ಕೊಡಿ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ