ಗುಂಡ : ಇತ್ತು ಎಣ್ಣೆ ಅಂಗಡಿಗೆ ಹೋಗಿ ಬಾಟಲಿ ಹಿಡಿದುಕೊಂಡು ಬರೋವಾಗ ಎದುರಿಗೆ ನಮ್ಮ ತಂದೆ ಬಂದು ಬಿಡುವುದೇ?

ಸೀನ : ಓ…. ಹಾಗಾದರೇ ನಿನಗೆ ಎರ್ರಾಬಿರ್ರಿ ಒದೆ ಬಿತ್ತು ಅನ್ನು.

ಗುಂಡ : ನಾನು ಕಿಲಾಡಿ…. ಹಾಗೆಲ್ಲ ಸಿಕ್ಕಿ ಹಾಕಿಕೊಳ್ತೀನಾ?

ಸೀನ : ಏನು ಮಾಡಿದೆ?

ಗುಂಡ : ರಸ್ತೆ ಮಧ್ಯೆ ಅದನ್ನು ಅವರಿಗೆ ಕೊಟ್ಟು, `ಹ್ಯಾಪಿ ಬರ್ತ್‌ ಡೇ ಪಪ್ಪ!’ ಅಂತ ಅವರ ಪಾದ ಮುಟ್ಟಿ ನಮಸ್ಕಾರ ಮಾಡಿಬಿಟ್ಟೆ.

ನಿಂಗಯ್ಯ ತನ್ನ 10 ಮಕ್ಕಳ ಸಮೇತ ಹಳ್ಳಿ ಬಸ್ಸು ಹತ್ತಿದ. ಕ್ಷಣ ಮಾತ್ರದಲ್ಲಿ ಇಡೀ ಬಸ್ಸು ಅಲ್ಲೋಲ ಕಲ್ಲೋಲ ಆಗುವಷ್ಟು ಅವು ಗಲಾಟೆ ಮಾಡಿದವು. ಎಲ್ಲರೂ ಮುಖ ಕಿವುಚಿದರು.

ಮುಂದಿನ ಸ್ಟಾಪಿನಲ್ಲಿ ಒಬ್ಬ ತಾತಾ ಕೋಲು ಊರಿಕೊಂಡು ಅಂತೂ ಇಂತೂ ಹೇಗೋ ಕಷ್ಟಪಟ್ಟು ಬಸ್ಸೇರಿ ಒಳಗೆ ಬಂದಾಗ, ವಿಧಿಯಿಲ್ಲದೆ ಸಿಡುಕುತ್ತಾ ನಿಂಗಯ್ಯ ಸೀಟು ಬಿಟ್ಟುಕೊಟ್ಟ.

ನಿಂಗ : ಬಸ್ಸಿಗೆ ಬರುವ ಬದಲು ತೆಪ್ಪಗೆ ಒಂದು ಕೋಣೆಯಲ್ಲಿ ಮಲಗಿರಬಾರದೇ ತಾತಾ…..

ತಾತಾ : ಕಳೆದ 10 ವರ್ಷಗಳಿಂದ ನೀನೂ ನಿನ್ನ ಹೆಂಡ್ತಿ ಬೇರೆ ಬೇರೇ ಕೋಣೆಯಲ್ಲಿ ತೆಪ್ಪಗೆ ಮಲಗಿದ್ದಿದ್ದರೆ,  ಇಂದು ಈ ಬಸ್ಸು ಎಷ್ಟೋ ಪ್ರಶಾಂತವಾಗಿರುತ್ತಿತ್ತು!

ಮಾಡರ್ನ್‌ ಮಾಲತಿ ಒಂದು ಬಸ್ಸು ಹತ್ತಿ ಸ್ಟ್ಯಾಂಡಿಂಗ್‌ ನಲ್ಲಿ ನಿಂತು ಸಾಕಾಗಿ ಕೇಳಿದಳು, “ಈ ಡಬ್ಬಾ ಯಾವಾಗ ಹೊರಡುತ್ತದೆ?”

ಅವಳತ್ತ ಕೆಕ್ಕರಿಸಿಕೊಂಡು ನೋಡಿದ ಡ್ರೈವರ್‌, “ಇನ್ನಷ್ಟು ಕಸ ತುಂಬಿದ ಮೇಲೆ!” ಎನ್ನುವುದೇ…..?

ಟೀಚರ್‌ : ಎಲ್ಲಿ, ಯಾರಾದರೂ ಸೀನಿಯರ್‌ ಮತ್ತು ಜೂನಿಯರ್‌ ಪದಗಳಿಗಿರುವು ವ್ಯತ್ಯಾಸ ತಿಳಿಸುವಿರಾ?

ಗುಂಡ : ಟೀಚರ್‌, ಸಮುದ್ರದ ಹತ್ತಿರ ವಾಸ ಮಾಡುವವರಿಗೆ ಸೀನಿಯರ್‌ ಅಂತಲೂ, (ಮೈಸೂರಿನಂಥ) ಮೃಗಾಲಯದ ಹತ್ತಿರ ವಾಸ ಮಾಡುರಿಗೆ ಜೂನಿಯರ್‌ ಅಂತಲೂ ಹೇಳಬಹುದು!

ಕಾಲೇಜು ಹುಡುಗ : ನಿನ್ನ ದುಪಟ್ಟಾ ಮೇಲೆ ಎಳೆದುಕೋ…… ನೆಲ ಗುಡಿಸುತ್ತಾ ಹೋಗುತ್ತಿದೆ.

ಕಾಲೇಜು ಕನ್ಯೆ : ಅದು ತನ್ನ ಕರ್ತವ್ಯ ನಿರ್ವಹಿಸುತ್ತಿದೆ. ನಾನು ಹೆಜ್ಜೆ ಇಟ್ಟ ಪಾದದ ಗುರುತನ್ನು ಯಾರೂ ಚುಂಬಿಸಬಾರದು ಅಂತ ಅದು ಆ ಜಾಗ ಸವರಿ, ಆ ಗುರುತನ್ನು ಅಳಿಸಿ ನನ್ನ ಪಾವಿತ್ರ್ಯ ಎತ್ತಿ ಹಿಡಿಯುತ್ತಿದೆ!

ಹುಡುಗ : ಕರ್ಮಕಾಂಡ…. ಮುಂದಿನ ತಿರುವಿನಲ್ಲಿ ರೈಲ್ವೆ ಬ್ರಿಜ್‌ ಇದೆ. ರೈಲು ಬಂದಾಗ ನಮ್ಮ ತಲೆ ಮೇಲೆ ಹಾದು ಹೋಗುತ್ತೆ ಅಂತ ಹೇಳಿದ್ದು!

ಹುಡುಗಿ : ಅಯ್ಯೋ……..! `ನನ್ನನ್ನು ಪ್ರೇಮಿಸುವೆಯಾ?’ ತನಗೆ ಗೊತ್ತಿದ್ದ ಹುಡುಗಿ ವಾಟ್ಸ್ ಆ್ಯಪ್‌ ಮೆಸೇಜಿನಲ್ಲಿ ಕೇಳಿದಾಗ, ಆಕಾಶಕ್ಕೆ ಏಣಿ ಹಾಕಿದ ಕಿಟ್ಟಿ, `ಹೌದು, ಹೌದು, ಹೌದು….’ ಎಂದು 10 ಸಲ  ರಿಪ್ಲೈ ಕೊಟ್ಟರೂ ಸುಡಾಗಾಡು ನೆಟ್‌ ವರ್ಕ್‌ ಅದನ್ನು ಮುಂದಕ್ಕೆ ಕಳುಹಿಸದೆ ತಡೆಹಿಡಿಯಿತು. (ಸೆಂಡ್‌ ಬಟನ್‌ ಒತ್ತಿ ಒತ್ತಿ ಕಿಟ್ಟಿಗೆ ಕೈ ನೋವು ಬಂತು) ಕಾದೂ ಕಾದೂ ಸಾಕಾದ ಆ ಹುಡುಗಿ ಅರ್ಧ ಗಂಟೆ ಬಿಟ್ಟು, `ಹಾಗಾದರೆ ನಿನಗೆ ರಾಖಿ ಕಟ್ಟಿಬಿಡುವೆ. ನನ್ನನ್ನು ತಂಗಿಯಾಗಿ ಒಪ್ಪಿಕೋ,’ ಎಂದಾಗ, ಕಿಟ್ಟಿ ಬೇರೇನೋ ಟೈಪ್‌ ಮಾಡು ಮೊದಲು, ನೆಟ್‌ ವರ್ಕ್‌ ಕ್ಷಣಾರ್ಧದಲ್ಲಿ ಸರಿ ಹೋಗಿ ಎಲ್ಲಾ ಮೆಸೇಜುಗಳೂ ಸರ ಸರ ಹೋಗಿಬಿಡುವುದೇ…..?

ಸೀನ : ಹುಡುಗಿಯ ನಗು ಮತ್ತು ರಸ್ತೆ ಬದಿ ಮಲಗಿರುವ ನಾಯಿಯ ಮೌನವನ್ನು ಎಂದೂ ತಪ್ಪಾಗಿ, ಲೈಟಾಗಿ ತೆಗೆದುಕೊಳ್ಳಲೇಬಾರದು. ಅದರ ಅರ್ಥವೇ ಬೇರೆ ಇರುತ್ತೆ.

ನಾಣಿ : ಅದು ಯಾಕೆ ಅಂತ…..?

ಸೀನ : ನಾಯಿಗೆ ಹಾಕಿದ ಬಿಸ್ಕತ್ತು, ಹುಡುಗಿಗೆ ತೋರಿದ ಲವ್ ಯಾವಾಗ ಬೇಕಾದರೂ ಎಡವಟ್ಟಾಗಿ ಎಗರಿ ಬೀಳಬಹುದು!

ಪೊಲೀಸ್‌ : ಅಲ್ಲಯ್ಯ, ನಿನ್ನ ಎದುರೇ ಆ ಕಳ್ಳ ಈ ಹುಡುಗಿಯ ಪರ್ಸ್‌ ಹೊಡೆದುಕೊಂಡು ಹೋಗುತ್ತಿದ್ದರೆ ಅದನ್ನು ನೋಡಿಕೊಂಡೂ ಸುಮ್ಮನಿದ್ದೀಯಲ್ಲ…. ನೀನೆಂಥ ಗಂಡಸು ಅಂತೀನಿ.

ವೆಂಕ : ಅಯ್ಯೋ ಬಿಡಿ, ಆ ಹುಡುಗಿ ನನ್ನ ಕ್ಲಾಸ್‌ ಮೇಟ್‌. ಅವಳ ಸ್ಟೇಟಸ್‌ ನಲ್ಲಿ ಏನಿದೆ ಗೊತ್ತಾ… `ಮೈಂಡ್‌ ಯುವರ್‌ ಓನ್‌ ಬಿಸ್‌ ನೆಸ್‌! ನನ್ನ ಸಮಸ್ಯೆ ನಾನು ಎದುರಿಸಬಲ್ಲೆ…. ನೆವರ್‌ ಅಂಡರ್‌ ಎಸ್ಟಿಮೇಟ್‌ ಎ ಫೀಮೇಲ್‌!’

ಪೊಲೀಸ್‌ : ಹಾಗಿದ್ದರೆ ಸರಿಯಾಗೇ ಮಾಡಿದ್ದೀಯಾ ಬಿಡು ಮಗಾ!

ಕಿಟ್ಟಿ : ಸನ್ಯಾಸಿಗೂ ಸಂಸಾರಿಗೂ ಏನು ವ್ಯತ್ಯಾಸ?

ನಾಣಿ : ಹುಲಿಯ ಚರ್ಮ ಹಾಕಿ ಅದರ ಮೇಲೆ ಕುಳಿತು ಧ್ಯಾನ ಮಾಡುವವನು ಸನ್ಯಾಸಿ, ಹುಲಿಯ ಜೊತೆ ನಿತ್ಯ ಬದುಕುವವನು ಸಂಸಾರಿ!

ನಾಣಿ : ಮದುವೆ ಆದ ಗಂಡಸಿನ ಸ್ಥಿತಿ ಹೇಗೆ ಇದ್ದರೂ ಜನ ಆಡಿಕೊಳ್ಳೋದು ತಪ್ಪಲ್ಲ!

ಸೀನ : ಯಾಕೆ ಹಾಗೆ ಹೇಳ್ತೀಯಾ?

ನಾಣಿ : ಗಂಡ ತಾನಾಗಿ ಹೆಂಡತಿಯನ್ನು ಹೊಡೆದರೆ  `ಥೂ… ನಾಚಿಕೆ ಅಗಲ್ವಾ? ಹೆಣ್ಣಿನ ಮೇಲೆ ಕೈ ಮಾಡೋಕ್ಕೆ’ ಅಂತಾರೆ. ಅದೇ ಗಂಡ ಆದವನು ಹೆಂಡತಿ ಕೈಲಿ ಹೊಡೆಸಿಕೊಳ್ಳುತ್ತಿದ್ದರೆ, `ಥೂ… ನಾಚಿಕೆ ಆಗಲ್ವಾ…. ಹೆಣ್ಣಿನ ಕೈಲಿ ಹೊಡೆತ ತಿನ್ನೋಕ್ಕೆ’ ಅಂತಾರೆ.

ಗುಂಡ : ಹುಡುಗ ಪದೇ ಪದೇ ಕನ್ನಡಿ ನೋಡ್ತಿದ್ರೆ ಏನರ್ಥ?

ಸೀನ : ಅವನು ಜಿಮ್ ಗೆ ಹೋಗ್ತಿದ್ದಾನೆ ಅಂತ ಅಥವಾ ಯಾರೋ ಹುಡುಗಿಗೆ ಬಕರಾ ಆಗಿದ್ದಾನೆ ಅಂತ.

ಗುಂಡ : ಅದೇ ಹುಡುಗಿ ಕನ್ನಡಿ ನೋಡ್ತಾ ಇದ್ದರೆ….?

ಸೀನ : ಯಾರೋ ಅಮಾಯಕನನ್ನ ಬಕರಾ ಮಾಡಿದ್ದಾಳೆ ಅಂತ!

ಜಡ್ಜ್ : ನಾಚಿಕೆ  ಆಗಲ್ವೇನಯ್ಯ ನಿನಗೆ…. 5ನೇ ಸಲ ಕೋರ್ಟಿಗೆ ನಿನ್ನನ್ನು ಹಾಜರುಪಡಿಸಿದ್ದಾರೆ. ಎಷ್ಟು ಸಲ ಇಲ್ಲಿಗೆ ಬರಬೇಕು ಅಂತಿದ್ದೀಯಾ?

ಕಳ್ಳ : ಕ್ಷಮಿಸಬೇಕು ಮಹಾಸ್ವಾಮಿ, ನಿಮ್ಮಂಥ ಹಿರಿಯರೇ ದಿನಾ ಬರುವಾಗ ನಮ್ಮಂಥವರದು ಯಾವ ಲೆಕ್ಕ…..?

ಗುಂಡ : ಅಲ್ಲಯ್ಯ, ಈ ಎಮ್ಮೆ ಕಣ್ಣಿಗೆ ಏನೋ ಆಗಿಹೋಗಿದೆ. ಇಂಥದ್ದಕ್ಕೆ ಹೋಗಿ 25 ಸಾವಿರ ಅಂತೀಯಲ್ವಾ?

ತಿಮ್ಮ : ನೀನೇನು ಅದರ ಹಾಲು ಕರೆಯಬೇಕೇ ಅಥವಾ ಅದರ ಮುಖ ನೋಡಿ ಕಣ್ಣು ಹೊಡೆಯಬೇಕೇ?

ಗುಂಡ : ನಮ್ಮ ಮನೆ ನಾಯಿ ಮೊಟ್ಟೆ ಇಡುತ್ತೆ ಗೊತ್ತಾ?

ನಾಣಿ : ಇದೇನು ಕರ್ಮ! ಈ ಕೊರೋನಾ ಕಾಲದಲ್ಲಿ ನಾಯಿ ಮೊಟ್ಟೆ ಇಡಲು ಆರಂಭಿಸಿತೇ?

ಗುಂಡ : ಹಾಗಲ್ಲ…. ಅದು ಈ ಮಿ. ಗುಂಡನ ಸ್ಟೈಲ್‌…. ನಮ್ಮ ಕೋಳಿ ಹೆಸರು `ನಾಯಿ!’

ಪತ್ನಿ : ನಾನೇ `ಕಾಲ’ ಆಗಿದ್ರೆ ಎಂಥ ಚೆನ್ನಾಗಿರ್ತಿತ್ತು! ಇಡೀ ಸಮಾಜ ನನ್ನನ್ನು ಬಹಳ ಗೌರವಿಸುತ್ತಿತ್ತು…..

ಪತಿ : ಖಂಡಿತಾ ಇಲ್ಲ…. ಜನ ನಿನ್ನನ್ನು ನೋಡಿ ಹೆದರುತ್ತಿದ್ದರು.

ಪತ್ನಿ : ಏಕೆ ಹಾಗೆ ಹೇಳ್ತೀರಿ?

ಪತಿ : ಜನ ಆಗಾಗ `ಥೂ…. ಎಂಥ ಕೆಟ್ಟ ಕಾಲ ಬಂತಪ್ಪ…. ಕೊರೋನಾ ಹೋಗೋದೆ ಇಲ್ಲ!’ ಅನ್ನೋದನ್ನು ನೀನು ಕೇಳಿಸಿಕೊಳ್ಳಬೇಕೇ……?

ಫೋನಿನಲ್ಲಿ ಗುಂಡ ಗುಂಡಿ ಲವ್ ಮಾಡಿಕೊಳ್ತಿದ್ರು.

ಗುಂಡಿ : ನಾನಂತೂ ನಿನ್ನ ಬಹಳ ಬಹಳ `ಐ ಲವ್ ಯೂ….!’

ಗುಂಡ : ಅದೇ…. ಎಷ್ಟು ಅಂತ?

ಗುಂಡಿ : ಅದೇ….. ನೀನು ನನ್ನನ್ನು ಲವ್ ಮಾಡುವಷ್ಟು!

ಗುಂಡ : ಓಹೋ…. ನೀನೂ ನನ್ನ ಹಾಗೇ ಟೈಂಪಾಸ್‌ ಮಾಡ್ತಿದ್ದೀಯಾ?

ಗುಂಡಿ : ಕ್ಷಣಾರ್ಧದಲ್ಲಿ ಗುಂಡನ ನಂಬರ್‌ ಬ್ಲಾಕ್‌ ಮಾಡಿದಳಂತೆ!

 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ