ಮೊದಲನೆಯದೇ ಖ್ಯಾತ ನಿರ್ದೇಶಕ ಪ್ರೇಮ್ ಅವರ `ಜೋಗಯ್ಯ’ ಚಿತ್ರದಲ್ಲಿ ಬಾಲನಟಿಯಾಗಿ ನಟಿಸಿದ್ದು ಪರದೆ ಮೇಲೆ ಕಾಣಿಸಿಕೊಂಡಿದ್ದು ಅದೇ ಮೊದಲು ಎಂದು ಹೆಮ್ಮೆಯಿಂದ ಹೇಳಿಕೊಳ್ಳುವ ಮೇಘನಾ ಇಂದು ನಟಿಯಾಗಿ ಪರಿಚಿತ. ಹಾಸನ ಮೂಲದ ಹುಡುಗಿ. ಸಕಲೇಶಪುರ ಹತ್ತಿರದ ನೆರೆಯವರು. ತೋಟದಲ್ಲಿ ಬೆಳೆದ ಹುಡುಗಿಯಾದರೂ ವಿದ್ಯಾಭ್ಯಾಸ ಹಾಸನ, ಬೆಂಗಳೂರಿನಲ್ಲಾಯಿತಂತೆ. ಸ್ಕೂಲಿನಲ್ಲಿದ್ದಾಗಲೇ ಡ್ಯಾನ್ಸ್, ಡ್ರಾಮಾ ಕಡೆ ಹೆಚ್ಚು ಒಲವು. ಕಲ್ಚರ್ ಆ್ಯಕ್ಟಿವಿಟೀಸ್ ಜಾಸ್ತಿ. ಹಾಗಾಗಿ ನಾಯಕಿಯಾಗುವ ಆಸೆ ಚಿಗುರಿದ್ದು ಸಹಜ. ಬೆಂಗಳೂರಿನಲ್ಲಿದ್ದರೂ ತನ್ನೂರಿನ ತೋಟದಲ್ಲಿ ಹೆಚ್ಚು ಸಮಯ ಕಳೆಯಲು ಆಸೆಪಡುತ್ತಾಳಂತೆ.
`ಜೋಗಯ್ಯ’ ಚಿತ್ರದ ನಂತರ ಸಾಕಷ್ಟು ಚಿತ್ರಗಳಲ್ಲಿ ಬಾಲನಟಿಯಾಗಿ ನಟಿಸಿದ ನಂತರ ರಥ, ಜೈ ಭಜರಂಗಬಲಿ ಚಿತ್ರದಲ್ಲಿ ಪ್ರೆಸ್ ರಿಪೋರ್ಟರ್ ಆಗಿ ಪಾತ್ರ ವಹಿಸಿದೆ ಎಂದು ಹೇಳುವ ಮೇಘನಾ, “ನಾನು ಸಿನಿಮಾ ರಂಗಕ್ಕೆ ಎಂಟ್ರಿ ಕೊಟ್ಟಾಗ ತುಂಬಾ ಎನ್ ಕರೇಜ್ ಮಾಡಿದರೆಂದರೆ ದಶರಥಚಂದ್ರು. ಇವರು ಪ್ರೇಮ್ ರವರಿಗೆ ಬಹಳ ಬೇಕಾದವರು. ಅವರ ಚಿತ್ರಗಳಿಗೆ ಕೆಲಸ ಮಾಡಿದ್ದಾರೆ. ಪ್ರೇಮ್ ರ ಆಪ್ತರು ಎಂದೇ ಹೇಳಬಹುದು. ಅವರ ಪ್ರೋತ್ಸಾಹದಿಂದ ಸಾಕಷ್ಟು ಕಲಿತಿದ್ದೇನೆ. ಈ ಮೂಲಕ ಅವರಿಗೆ ಕೃತಜ್ಞತೆ ಸಲ್ಲಿಸುತ್ತೇನೆ,” ಎನ್ನುತ್ತಾಳೆ.
“ನನ್ನ ಬಳಿ ಸಾಕಷ್ಟು ಸಿನಿಮಾಗಳಿವೆ. ನನ್ನ ತಾಯಿ ಕೂಡ ಒಂದು ಸಿನಿಮಾ ನಿರ್ಮಾಣ ಮಾಡಿದ್ದಾರೆ. ಚಿತ್ರದ ಹೆಸರು `ಅಲ್ಪವಿರಾಮ’ ಅಂತ. ಕಿಶೋರ್, ಕೃಷಿತಾ, ಪಾಂಡು ಹಾಗೂ ನಾನು ನಟಿಸಿದ್ದೀವಿ. ಒಂದು ಸಾಂಗ್ ಬಾಕಿ ಇದೆ ಅಷ್ಟೇ. ಲಾಕ್ ಡೌನ್ ತೆರವಾದ ನಂತರ ಶೂಟ್ ಮಾಡುವ ಪ್ಲಾನ್ ಇದೆ. ಸದ್ಯಕ್ಕೆ ನಾನು ಅಜ್ಜಿ ಮನೆ ತೋಟದಲ್ಲಿದ್ದೇನೆ. ಮನೆಯಲ್ಲಿ ಎಲ್ಲರೂ ನನ್ನ ವೃತ್ತಿಯನ್ನು ಗೌರವಿಸಿ, ಪ್ರೋತ್ಸಾಹಿಸುತ್ತಾರೆ. ಅನೇಕ ನಟಿಯರು ಚಿತ್ರಗಳಿಲ್ಲ ಎಂದು ಕೊರಗುತ್ತಿರುವಾಗ ನಾನು ತುಂಬಾನೇ ಲಕ್ಕಿ. ಸಾಕಷ್ಟು ಚಿತ್ರಗಳಿವೆ,” ಎನ್ನುತ್ತಾಳೆ ಮೇಘನಾ.
“ನಾನು ನಟಿಸುತ್ತಿರುವ `ಲೀಸಾ’ ಎನ್ನುವ ಚಿತ್ರದ ಬಗ್ಗೆ ಭಾರಿ ನಿರೀಕ್ಷೆ ಇದೆ. ಟೇಶಿ ವೆಂಕಟೇಶ್ ಅವರ `ಬೆಸ್ಟ್ ಫ್ರೆಂಡ್ಸ್’ ಚಿತ್ರದಲ್ಲೂ ಬೋಲ್ಡ್ ಪಾತ್ರವಿತ್ತು. ಲೆಸ್ಬಿಯನ್ ಬಗ್ಗೆ ಕಥೆ. ಈ ಸಿನಿಮಾ ಬಗ್ಗೆ ಒಳ್ಳೆಯ ಮಾತುಗಳು ಕೇಳಿ ಬಂದವು. ಗಾಂಧಿ ನಗರದಲ್ಲೂ ಸುದ್ದಿ ಮಾಡಿತು. ಆದರೆ ದೊಡ್ಡ ಸಿನಿಮಾ ಎದುರು ರಿಲೀಸ್ ಮಾಡಿದ್ದರಿಂದ ನಿರೀಕ್ಷೆ ಮಾಡಿದಷ್ಟು ಯಶಸ್ಸು ಕಾಣಲಿಲ್ಲ. ಆದರೆ ಒಂದು ಒಳ್ಳೆಯ ಸಿನಿಮಾದಲ್ಲಿ ನಟಿಸಿದ ತೃಪ್ತಿ ತಂದಿದೆ.”
ಬರಲಿರುವ ಚಿತ್ರಗಳ ಬಗ್ಗೆ ಕೇಳಿದಾಗ, “ನಾನು ನಟಿಸಿರುವ `ಪದ್ಮಾವತಿ’ ಎನ್ನುವ ಚಿತ್ರ ರೆಡಿಯಾಗ್ತಿದೆ. ನಟ ತಿಲಕ್ ಜೊತೆಗೆ `ವರ್ಣತರಂಗ’ ಎನ್ನುವ ಚಿತ್ರ, ನಟ, ನಿರ್ದೇಶಕ ಮೋಹನ್ ಚಿತ್ರ `ಲೋಫರ್ಸ್’ ನಲ್ಲೂ ನಟಿಸುತ್ತಿದ್ದೇನೆ.
“ಸಿನಿಮಾ ರಂಗ ಹಾಗೆ ಹೀಗೆ ಅಂತ ಕೆಲವರು ಕಂಪ್ಲೇಂಟ್ ಮಾಡ್ತಾರೆ. ಆದರೆ ಇಲ್ಲಿನತನಕ ಅಂಥ ಕೆಟ್ಟ ಅನುಭವ ನನಗಾಗಿಲ್ಲ. ಒಳ್ಳೆಯ ಸ್ವಾಗತ ಸಿಕ್ಕಿತು. ಪ್ರೊಡಕ್ಷನ್ ಹೌಸ್‌ನಲ್ಲಿ ಪ್ರತಿಯೊಬ್ಬರೂ ಮನೆ ಹುಡುಗಿಯಂತೆ ನೋಡಿಕೊಳ್ತಾರೆ. ನಾನೇನು ಅಂತಹ ದೊಡ್ಡ ಹೆಸರು ಮಾಡಿಲ್ಲ. ಆದರೂ ಅವಕಾಶಗಳು ಹುಡುಕಿಕೊಂಡು ಬಂದಿವೆ,” ಎಂದು ಸಂತಸಪಡುತ್ತಾಳೆ.
ನಿನ್ನ ರೋಲ್‌ಮಾಡೆಲ್ ಯಾರು?
ನನಗೆ ಹಿರಿಯ ಕಲಾವಿದೆ ಕಲ್ಪನಾರವರ ನಟನೆ ತುಂಬಾ ಇಷ್ಟ. ಅವರ ಚಿತ್ರಗಳನ್ನು ನೋಡ್ತಾ ಸಾಕಷ್ಟು ಕಲಿತಿದ್ದೇನೆ. ಅವರನ್ನು ಬಿಟ್ಟರೆ ನನ್ನ ಆಲ್ ಟೈಂ ಫೇವರಿಟ್ ತಾರೆ ರಕ್ಷಿತಾ. ಅವರ ಅಭಿನಯ, ಡ್ಯಾನ್ಸ್, ಸ್ಕ್ರೀನ್ ಮೇಲೆ ಮಿಂಚುತ್ತಿದ್ದ ರೀತಿ ಎಲ್ಲ ಇಷ್ಟ. ನನ್ನ ಅಭಿಮಾನದ ಬಗ್ಗೆ ಹೇಳಿದಾಗ ಖಂಡಿತಾ ಭೇಟಿಯಾಗೋಣ ಬಾ ಎಂದು ಆಹ್ವಾನಿಸಿದರು.
ನಾಯಕರಲ್ಲಿ ಯಾರ ಜೊತೆ ನಟಿಸಲು ಇಷ್ಟ?
ದರ್ಶನ್ ಸರ್ ಅಂದ್ರೆ ತುಂಬಾ ಇಷ್ಟ. ಅವರ ಗುಣ, ಹೆಲ್ಪ್ ಮಾಡೋ ರೀತಿ ಎಲ್ಲದರಿಂದ ಸ್ಛೂರ್ತಿ ಸಿಗುತ್ತದೆ. ನನಗಿರೋ ಒಂದೇ ಒಂದು ಆಸೆಯೆಂದರೆ ಅವರ ಜೊತೆ ನಟಿಸೋದು. ಅದೊಂದೇ ಸಾಕು ಆಮೇಲೆ ಲೈಫ್ ನಲ್ಲಿ ಸೆಟಲ್ ಆಗಿಬಿಡ್ತೀನಿ. ನಾನು ಸಮಾಜ ಸೇವೆ ಬಗ್ಗೆ ತುಂಬಾ ಕನಸು ಕಟ್ಟಿಕೊಂಡಿದ್ದೇನೆ. ಒಂದು ಕಲಾ ಶಾಲೆ ತೆರೆದು ಅಲ್ಲಿ ಆಸಕ್ತಿ ಇರುವ ಬಡ ಮಕ್ಕಳಿಗೆ ಕಲಾಸೇವೆ ಮಾಡೋದು.
ಹೀಗೆ ಸಾಕಷ್ಟು ಕನಸು, ಆಸೆಗಳನ್ನು ಹೊತ್ತಿರುವ ಮೇಘನಾಳಿಗೆ ಇನ್ನಷ್ಟು ಅವಕಾಶಗಳು ಸಿಗಲಿ. ಹಾಗೆಯೇ ಆಕೆಯ ಕನಸುಗಳು ನನಸಾಗಲಿ ಎಂದು ಗೃಹಶೋಭಾ ಹಾರೈಸುತ್ತಾಳೆ.
– ಸರಸ್ವತಿ ಜಾಗೀರ್‌ದಾರ್