ತಾನು ಗರ್ಭವತಿ ಆದಾಗಿನಿಂದ ಹುಟ್ಟಿದ ಮಗುವಿನ ಸರ್ವತೋಮುಖ ಬೆಳವಣಿಗೆಗಾಗಿ ತಾಯಿ ತನ್ನ ಇಡೀ ಜೀವನ ಸವೆಸುತ್ತಾಳೆ. ತನ್ನ ಮಗುವಿಗೆ ಯಾವುದು ಒಳ್ಳೆಯದ್ದು, ಕೆಟ್ಟದ್ದು, ಎಂಥ ಆಹಾರ, ದೈಹಿಕ ಮಾನಸಿಕ ವಿಕಾಸಕ್ಕಾಗಿ ಏನೆಲ್ಲ ಮಾಡಬೇಕು ಇತ್ಯಾದಿ ಎಲ್ಲದರ ಬಗೆ ಸದಾ ಚಿಂತಿಸುತ್ತಲೇ ಕೆಲಸ ಮಾಡುತ್ತಾಳೆ.

ಹೀಗಿರುವಾಗ ಮಗು ಸ್ವಲ್ಪ ಅನಾರೋಗ್ಯಕ್ಕೆ ಈಡಾದರೂ ತಾಯಿ ಚಡಪಡಿಸುತ್ತಾ ಅದನ್ನು ಸರಿದಾರಿಗೆ ತರಲು ಹೋರಾಡುತ್ತಾಳೆ. ಮಗುವಿನ ಸರ್ವತೋಮುಖ ಸಂರಕ್ಷಣೆ ತಾಯಿಯಿಂದ ಮಾತ್ರ ಸಾಧ್ಯ. ಮಗು ಸದಾ ಲವಲವಿಕೆಯಿಂದ ಖುಷಿಯಾಗಿರಲಿ, ಆರೋಗ್ಯಕರ ಆಗಿರಲಿ ಎಂದು ಅಹರ್ನಿಶಿ ದುಡಿಯುತ್ತಾಳೆ.

ಹೀಗಿರುವಾಗ ಯಾರೋ ನಿಮ್ಮ ಮಗುವಿನ ರಕ್ತ ಸದಾ ಹೀರುತ್ತಿದ್ದಾರೆ ಎಂದು ನಾವು ತಿಳಿಸಿದರೆ, ಆಕೆ ಹೇಗೆ ತಾನೇ ನೆಮ್ಮದಿಯಾಗಿ ನಿದ್ರಿಸಲು ಸಾಧ್ಯ? ಅಸಲಿ ವಿಷಯ ಎಂದರೆ ಇಲ್ಲಿ ನಾವು ಹೇನಿನ ಬಗ್ಗೆ ಹೇಳುತ್ತಿದ್ದೇವೆ. ಮಕ್ಕಳು ಶಾಲೆ ಹಾಗೂ ಬೇರೆ ಕಡೆ ಆಟ ಆಡುವಾಗ ಇತರ ಮಕ್ಕಳಿಂದ ಸಹಜವಾಗಿಯೇ ಇವರ ತಲೆಗೆ ಹೇನು ಬಂದುಬಿಡುತ್ತದೆ, ಮಗುವಿನ ರಕ್ತ ಹೀರುತ್ತಾ ಇರುತ್ತದೆ. ಹೀಗಾಗಿ ಮಗು ತನ್ನ ಓದು, ಆಟೋಟ ಬಿಟ್ಟು ಸದಾ ತಲೆ ತುರಿಸುತ್ತಾ ಇದ್ದುಬಿಡುತ್ತದೆ.

ಮಗುವಿನ ತಲೆಗೂದಲಲ್ಲಿ ಬೆವರು, ಇತರ ಕಲ್ಮಶ, ಜಿಡ್ಡು ಸೇರುತ್ತಿದ್ದಂತೆ ಕಲುಷಿತ ಪರಿಸರದಿಂದಾಗಿ ಸಹಜವಾಗಿಯೇ ಹೇನು ಮಗುವಿನ ತಲೆ ಆಕ್ರಮಿಸುತ್ತದೆ. ಮಕ್ಕಳು ಪರಸ್ಪರ ಟೋಪಿ, ಬಾಚಣಿಗೆ, ತಲೆದಿಂಬು ಇತ್ಯಾದಿ ಏನೇ ಬದಲಾಯಿಸಿಕೊಂಡರೂ ಈ ರಗಳೆ ತಪ್ಪಿದ್ದಲ್ಲ.

ಹೇನಿನ ನಿವಾರಣೆ ಹೇಗೆ?

ನಿಮ್ಮ ಮಗು ಸಹ ಹೀಗೆ ಹೇನು ಪಡೆದು ಮನೆಗೆ ಬಂದರೆ, ನೀವು ಮಗುವಿನ ಫ್ರೆಂಡ್ಸ್ ಬಗ್ಗೆ ಗದರುವ ಬದಲು, ಅದರ ತಲೆಯಲ್ಲಿನ ಹೇನಿನ ನಿವಾರಣೆಗೆ ಯತ್ನಿಸುವುದು ಲೇಸು. ಅಂದಹಾಗೆ ಮಾರುಕಟ್ಟೆಯಲ್ಲಿ ದೊರಕುವ ಆ್ಯಂಟಿ ಲೈಸ್‌ ಕೆಮಿಕಲ್ಸ್ ಬಳಸಿ ಮಗುವಿನ ತಲೆಗೆ ಹಚ್ಚಿದರೆ, ಅದರ ರಾಸಾಯನಿಕ ಮಗುವಿಗೆ ಹಾನಿಕರವೇನೋ ಎಂದು ಯೋಚಿಸಬಹುದು. ಹೀಗಾಗಿ ಚಿಂತೆ ಬಿಡಿ, ಯಾವುದು ಹಾನಿಕಾರಕ ಕೆಮಿಕಲ್ಸ್ ರಹಿತವೋ ಅಂಥ ಔಷಧಿಯ ಶ್ಯಾಂಪೂ, ಹೇರ್‌ ಆಯಿಲ್‌, ಮನೆಮದ್ದು ಬಳಸಿ, ಈ ಸಮಸ್ಯೆ ನಿವಾರಿಸಿಕೊಳ್ಳಬಹುದು.

ಸಾಮಾನ್ಯವಾಗಿ ಜನ ಹೇನಿನ ನಿವಾರಣೆಗಾಗಿ ನಿಮಗೆ ಮಗುವಿನ ತಲೆಗೆ ಬೇವಿನ ಎಣ್ಣೆ, ಟೀಟ್ರೀ ಆಯಿಲ್‌, ಬೇಕಿಂಗ್‌ ಸೋಡ, ವಿನಿಗರ್‌ ಇತ್ಯಾದಿ ಮನೆಮದ್ದು ಬಳಸಲು ಹೇಳತ್ತಲೇ ಇರುತ್ತಾರೆ. ಆದರೆ ಇವೆಲ್ಲ ಒಂದು ಹಂತದವರೆಗೆ ಮಾತ್ರ ಹೇನು ನಿವಾರಿಸಬಲ್ಲದು, ಕೆಲವು ದಿನಗಳಾದ ಮೇಲೆ ಅವು ಮತ್ತೆ ಕಾಣಿಸಿದರೆ ಆಶ್ಚರ್ಯವಿಲ್ಲ. ಏಕೆಂದರೆ ಪ್ರತಿ ಹೇನೂ ಪ್ರತಿದಿನ 8-10 ಮೊಟ್ಟೆ ಇಡುತ್ತಿರುತ್ತದೆ.

ಆದ್ದರಿಂದ ನೀವು ಬಳಸುವ ಇಂಥ ಪ್ರಾಡಕ್ಟ್ಸ್ ಆದಷ್ಟೂ ಹರ್ಬಲ್ ಆಗಿದ್ದರೆ ಲೇಸು. ಮುಖ್ಯವಾಗಿ ಅದರಲ್ಲಿ ಸೀಗೇಕಾಯಿ, ಚಿಗರೆಪುಡಿ, ಅಂಟುವಾಳದ ಕಾಯಿಯೂ ಗುಣಾಂಶಗಳು ಇರಬೇಕು. ಮುಖ್ಯ ಚಿಗರೆಪುಡಿಯ ಅಂಶ ಹಾಗೂ ಸೀಗೇಪುಡಿ ಇರಲೇಬೇಕು. ಅಂಟುವಾಳ ಕೂದಲನ್ನು ಸಶಕ್ತಗೊಳಿಸುತ್ತದೆ.

ಹೇಗೆ ಬಳಸುವುದು?

ಮೊದಲು ಮಗುವಿನ ಕೂದಲನ್ನು ಸಾಧಾರಣ ಹರ್ಬಲ್ ಶ್ಯಾಂಪೂನಿಂದ ತೊಳೆಯಿರಿ.

ಕೂದಲನ್ನು ಒಣ ಟವೆಲ್ ‌ನಿಂದ ಒರೆಸಿಕೊಳ್ಳಿ, ಬಹಳ ಡ್ರೈ ಆಗಬೇಕಾದ ಅಗತ್ಯವಿಲ್ಲ.

ಕೂದಲಿಗೆ ಉತ್ತಮ ಗುಣಮಟ್ಟದ ಆ್ಯಂಟಿ ಲೈಸ್‌ ಕ್ರೀಂ ಹಚ್ಚಿರಿ. ಕಿವಿಗಳ ಹಿಂಭಾಗದಲ್ಲಿಯೂ ಇದನ್ನು ಚೆನ್ನಾಗಿ ಹಚ್ಚಬೇಕು.

ಹೀಗೆ 15-20 ನಿಮಿಷ ಕೂದಲಲ್ಲಿ ಕ್ರೀಂ ನೆನೆಯಲು ಬಿಡಿ.

ನಂತರ ಬಿಸಿ ನೀರಿನಿಂದ ಕೂದಲು ತೊಳೆದು, ಒರೆಸಿರಿ.

ಹೇನು ನಾಶಕವಾಗಿ ಬಳಸುವ ಜೆಸೂರ್‌ ಬಾಚಣಿಗೆ ಬಳಸಿ. ತುಸು ಒದ್ದೆ ಇರುವಾಗಲೇ ಕೂದಲನ್ನು ಬಾಚಬೇಕು. ಅದರಲ್ಲಿ ಎಲ್ಲಾ ಸತ್ತ ಹೇನುಗಳೂ ಬಿದ್ದುಬಿಡುತ್ತವೆ.

ತಲೆ ಸ್ನಾನ ಮಾಡಿಸುವಾಗ ಮಗುವಿಗೆ ಅಗತ್ಯ ಸೀಗೆ ಚಿಗರೆ ಪುಡಿ ಬೆರೆತ ಮಿಶ್ರಣ ಬಳಸಲು ಮರೆಯದಿರಿ.

– ಸ್ನೇಹಲತಾ

 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ