ಯಾವುದೇ ಒಬ್ಬ ಮಹಿಳೆಯ ಬಟ್ಟೆಗಳ ಬಗ್ಗೆ, ಆಕೆಯ ರಾಜಕೀಯ ಪರ್ಯಾಯಗಳು, ಉದ್ಯೋಗ, ಮನರಂಜನೆಗಳ ಬಗ್ಗೆ ಟೀಕಿಸಲಾಗುತ್ತದೆ. ಅಂದಹಾಗೆ ಈ ಟೀಕೆ ಅವಳ ನಿರ್ಣಯ ತೆಗೆದುಕೊಳ್ಳುವ ಸಾಮರ್ಥ್ಯದ್ದಾಗಿರುತ್ತದೆ. ನಿನ್ನಲ್ಲಿ ಅಷ್ಟು ಬುದ್ಧಿಯಿಲ್ಲ, ನೀನು ಅಂತಹ ನಿರ್ಣಯ ತೆಗೆದುಕೊಳ್ಳಲು ಆಗುವುದಿಲ್ಲ ಎಂದು ಸಮಾಜ ಬಿಂಬಿಸಲು ಪ್ರಯತ್ನಿಸುತ್ತದೆ. ನೀನು ಶತ ಶತಮಾನಗಳಷ್ಟು ಹಳೆಯ ಸಂಪ್ರದಾಯಗಳನ್ನು ಮೀರಿ ಹೋಗಲು ಸಾಧ್ಯವಿಲ್ಲ ಎನ್ನುತ್ತದೆ.
ನಮ್ಮ ಸಮಾಜ ಇಬ್ಬಗೆಯ ಮಾನದಂಡದ ಚಾಂಪಿಯನ್ ಆಗಿದೆ. ಅದು ಒಮ್ಮೊಮ್ಮೆ ಕಪಟತನದಿಂದ ಮಹಿಳೆಯನ್ನು ಪುರುಷನ ವಶದಲ್ಲಿರುವಂತೆ ಮಾಡುತ್ತದೆ. ಇನ್ನು ಕೆಲವೊಮ್ಮೆ ಒಬ್ಬ ಬಲಿಷ್ಠ, ನಗುಮೊಗದ ಪುರುಷನನ್ನು ದುರ್ಬಲ ಹಾಗೂ ಖಿನ್ನತೆಗೆ ದೂಡುತ್ತದೆ. ಪ್ರತಿಯೊಂದು ಕೆಡುಕಿಗೆ, ಅದರಲ್ಲೂ ನೈಸರ್ಗಿಕ ದುರಂತಗಳಿಗೂ ಯಾವುದಾದರೂ ಮಹಿಳೆಯನ್ನು ಹೊಣೆಗಾರರನ್ನಾಗಿಸುವ ಸಂಚು ಅನಾದಿಕಾಲದಿಂದಲೂ ನಡೆದುಕೊಂಡು ಬರುತ್ತಿದೆ. ಕೆಲವೊಂದು ಕಡೆ ಮಹಿಳೆಯನ್ನು ನಗ್ನಗೊಳಸಿ ಊರೆಲ್ಲ ಮೆರವಣಿಗೆ ಮಾಡಲಾಗುತ್ತದೆ. ಮತ್ತೆ ಕೆಲವು ಕಡೆ ಅವುಗಳನ್ನು ಮಾಟಗಾತಿ ಎಂದು ಹೇಳಿ ಚಿತ್ರಹಿಂಸೆ ನೀಡಿ ಹತ್ಯೆ ಸಹ ಮಾಡಲಾಗುತ್ತದೆ.
ನೀವು ಎಂದಾದರೂ ಇಂತಹ ಕಾರಣಗಳಿಂದ ಯಾವುದಾದರೂ ಪುರುಷನಿಗೆ ಚಿತ್ರಹಿಂಸೆ ನೀಡಿದ್ದನ್ನು ಕಂಡಿದ್ದೀರಾ? ಕೇಳಿದ್ದೀರಾ? ತಪ್ಪು ಯಾರದ್ದೇ ಆಗಿರಲಿ, ಅದರ ಹೊಣೆಯನ್ನು ಮಹಿಳೆಯ ತಲೆಗೆ ಕಟ್ಟುತ್ತಿರುವುದೇಕೆ? ನಮ್ಮ ಸಮಾಜ ಲಿಂಗ ಸಮಾನತೆಯಲ್ಲಿ ಬಹಳ ಹಿಂದುಳಿದಿದೆ. ಅಭಿವೃದ್ಧಿ ಹೊಂದಿದ ದೇಶಗಳಲ್ಲಿ ಮಹಿಳೆಯರನ್ನು ಕೇವಲ ಮಹಿಳೆಯರೆಂದು ಭಾವಿಸದೆ, ಪುರುಷರಂತೆ ಒಬ್ಬ ವ್ಯಕ್ತಿಯೆಂದು ಪರಿಗಣಿಸಲಾಗುತ್ತದೆ.
ಇದೇ ಕಾರಣವೆಂಬಂತೆ ಪುರುಷರಿಗೆ ಏನೊಂದು ಹಕ್ಕು ಹಾಗೂ ಅಧಿಕಾರಗಳು ದೊರೆತಿವೆಯೋ, ಅವು ಮಹಿಳೆಯರಿಗೂ ದೊರೆತಿವೆ. ಅತ್ಯಾಚಾರ ಆದ ಬಳಿಕ ಮಹಿಳೆಯನ್ನು ಸಂತ್ರಸ್ತೆ ಎಂದು ಪರಿಗಣಿಸಲಾಗುತ್ತದೆಯೇ ವಿನಾ, ಅವಳದ್ದೇ ತಪ್ಪು ಎಂದು ಹೇಳಲಾಗುವುದಿಲ್ಲ. ನಮ್ಮ ಸಮಾಜ ಹಾಗೂ ಅದರಲ್ಲಿ ಅಡಕವಾಗಿರುವ ಧರ್ಮ ಸಾಮಾನ್ಯವಾಗಿ ಮಹಿಳೆಯನ್ನೇ ಅವಳ ಮೇಲಾಗಿರುವ ದೌರ್ಜನ್ಯಕ್ಕೆ ಹೊಣೆಯಾಗಿಸುತ್ತದೆ.
ಇದು ಸರಿಯೇ? ಖಾಪ್ ಪಂಚಾಯತ್‌ಗಳು, ಮುಖಂಡರು, ಊರಿನ ಮುಖ್ಯಸ್ಥರು, ಅಷ್ಟೇ ಏಕೆ ಸ್ವತಃ ಮಹಿಳೆಯರು ಮಹಿಳೆಯರನ್ನೇ `ತಪ್ಪಿತಸ್ಥೆ’ ಎಂದು ಘೋಷಿಸುತ್ತಾರೆ. ಆಕೆ ಧರಿಸುವ ಬಟ್ಟೆ, ಕತ್ತಲಾದ ಬಳಿಕ ಹೊರಗೆ ಹೋಗುವುದು, ನಿರ್ಜನ ರಸ್ತೆಯಲ್ಲಿ ಸಾಗುವುದು ಇವೆಲ್ಲವನ್ನು ಅಪರಾಧಕ್ಕೆ ಕಾರಣ ಎಂದು ಗೂಬೆ ಕೂರಿಸಲಾಗುತ್ತದೆ. ಅತ್ಯಾಚಾರದಂತಹ ಘಟನೆಯ ಸಂದರ್ಭದಲ್ಲಿ ಅಪರಾಧಿಗಳ ತಪ್ಪಿನ ಜೊತೆಗೆ ಸಂತ್ರಸ್ತೆಯಿಂದಾದ ನಿರ್ಲಕ್ಷ್ಯತೆಯನ್ನು ಹುಡುಕತೊಡಗುತ್ತವೆ. ಇದು ಸರಿಯೇ? ಹುಡುಗರ ಹಾಗೆ ಹುಡುಗಿಯರಿಗೂ ಹೊರಗೆ ಹೋಗಲು, ನೌಕರಿ ಮಾಡಲು ಪಾರ್ಟಿ ಮಾಡಲು ಅಥವಾ ತಮ್ಮವರೊಂದಿಗೆ ಖುಷಿಯಿಂದಿರಲು ಅವಕಾಶ ಇರಬೇಕು. ಏಕೆಂದರೆ ಅವರೂ ಕೂಡ ಹುಡುಗರ ಹಾಗೆ ಸಮಾಜದ ಒಂದು ಭಾಗವಾಗಿದ್ದಾರೆ. ಆದರೆ ನಮ್ಮ ಸಮಾಜದಲ್ಲಿ ಇಬ್ಬಗೆಯ ಮಾನದಂಡ ಅನುಸರಿಸಲಾಗುತ್ತದೆ. ಅದು ಅತ್ಯಂತ ಪುರಾತನ. ಇದು ಅತ್ಯಂತ ಆಳವಾಗಿ ಬೇರೂರಿದೆ.
ಒಂದು ಹಳೆಯ ಗಾದೆ ಮಾತಿದೆ, `ಕತ್ತಿ ಕಲ್ಲಂಗಡಿಯ ಮೇಲೆ ಬೀಳಲಿ, ಕಲ್ಲಂಗಡಿ ಕತ್ತಿಯ ಮೇಲೆ ಬೀಳಲಿ, ಕತ್ತರಿಸುವುದು ಕಲ್ಲಂಗಡಿಯೇ’ ಸಾಮಾನ್ಯವಾಗಿ ಹುಡುಗಿಯರ ಸುರಕ್ಷತೆಗಾಗಿಯೂ ಇದೇ ಗಾದೆ ಅನುಸರಿಸಲಾಗುತ್ತದೆ. ಅವರ ದೃಷ್ಟಿಯಲ್ಲಿ ಜೀವಂತಿಕೆಯಿಂದ ನಳನಳಿಸುವ ಹುಡುಗಿಯರು ಹಾಗೂ ನಿರ್ಜೀವ ಕಲ್ಲಂಗಡಿಗೂ ಯಾವುದೇ ವ್ಯತ್ಯಾಸವಿಲ್ಲವೇ?
ಹುಡುಗಿಯರಿಗೆ ಸುರಕ್ಷಿತ ಸಮಾಜ ನಿರ್ಮಿಸಿಕೊಡುವ ಬದಲಿಗೆ, ನಮ್ಮ ಸಮಾಜ ಅವರನ್ನು ಮನೆಯೊಳಗೆ ಬಂಧಿಯಾಗಿ ತಮ್ಮ ಹೊಣೆಗಾರಿಕೆಯ ಪುರಾವೆಯನ್ನು ಕೊಡುತ್ತದೆ. ನಾವು ನಮ್ಮ ಹಳ್ಳಿಗಳು, ನಗರಗಳನ್ನು ಹುಡುಗಿಯರಿಗಾಗಿ ಸುರಕ್ಷಿತವಾಗಿ ಏಕೆ ಮಾಡಬಾರದು?
ತಪ್ಪಿನ ಹೊಣೆ ಮಹಿಳೆಯರ ಮೇಲೆ
ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆಯ ಸುದ್ದಿ ಬಹಿರಂಗವಾಗುತ್ತಿದ್ದಂತೆ, ಎಲ್ಲಕ್ಕೂ ಮೊದಲು ಮೀಡಿಯಾ, ಆತನ ಗರ್ಲ್ ಫ್ರೆಂಡ್ ರಿಯಾ ಚಕ್ರವರ್ತಿಯ ಬೆನ್ನು ಬಿದ್ದಿತು. ಆಕೆ ಆತನನ್ನು ತನ್ನ ನಿಯಂತ್ರಣದಲ್ಲಿಟ್ಟುಕೊಂಡಿದ್ದಳು. ಆತನ ಬಳಿ ಬರುವ ಹೋಗುವವರ ಮೇಲೆ ಕಣ್ಣಿಟ್ಟಿದ್ದಳು. ರಿಯಾ ಸುಶಾಂತ್ ಗೆ ಪರಿಪೂರ್ಣವಾಗಿ ತನ್ನನ್ನು ಅವಲಂಬಿಸುವಂತೆ ಮಾಡಿದ್ದಳು ಎಂದು ಅನೇಕ ಸುದ್ದಿಗಳು ಪಸರಿಸಿದ್ದವು. ಆ ಬಳಿಕ ಬಂದ ಸುದ್ದಿಯೆಂದರೆ, ಸುಶಾಂತ್ ಸಿಂಗ್ ಡ್ರಗ್ಸ್ ತೆಗೆದುಕೊಳ್ಳುತ್ತಾನೆ ಎಂದು. ಅದಕ್ಕೂ ರಿಯಾಳನ್ನೇ ಹೊಣೆಗಾರಳನ್ನಾಗಿ ಮಾಡಲು ಪ್ರಯತ್ನ ಪಡಲಾಯಿತು.
ಈಗ ಈ ಸ್ಥಿತಿಯನ್ನು ತದ್ವಿರುದ್ಧ ಮಾಡಿ ನೋಡಿ. ಒಂದು ವೇಳೆ ಡ್ರಗ್ಸ್ ಸೇವನೆ ಮಾಡುವ ಯುವತಿ ಆತ್ಮಹತ್ಯೆ ಮಾಡಿಕೊಂಡಿದ್ದರೆ ಆಕೆಯ ಬಾಯ್ ಫ್ರೆಂಡ್ ಕೂಡ, ರಿಯಾ ಸುಶಾಂತ್‌ಗೆ ಹೇಗೆ ಮಾಡಿದ್ದಳೊ, ಹಾಗೆಯೇ ಮಾಡಿದ್ದರೆ ಆಗ ನಮ್ಮ ಸಮಾಜದ ಪ್ರತಿಕ್ರಿಯೆ ಹೇಗಿರುತ್ತಿತ್ತು? ಆ ಹುಡುಗಿ ಡ್ರಗ್ಸ್ ತೆಗೆದುಕೊಳ್ಳುತ್ತಿರುವುದರ ಬಗ್ಗೆ ಬೆರಳು ತೋರಿಸುತ್ತಿರಲಿಲ್ಲವೇ? ತನ್ನ ಸ್ಥಿತಿಗೆ ಅವಳನ್ನೇ ಹೊಣೆಗಾರಳನ್ನಾಗಿ ಮಾಡುತ್ತಿರಲಿಲ್ಲವೇ? ನನಗನ್ನಿಸುತ್ತೆ, ಆಕೆಯ ಬಾಯ್ ಫ್ರೆಂಡ್‌ನನ್ನು ಕೇರಿಂಗ್, ಪ್ರೀತಿ ತೋರಿಸುವ ವ್ಯಕ್ತಿ ಎಂದು ಹೇಳುತ್ತಿದ್ದರು.
ಸುಶಾಂತ್ ಸಿಂಗ್ ನ ಕುಟುಂಬದ ವಕೀಲರು ಹೇಳಿದ್ದೇನೆಂದರೆ, ರಿಯಾಳ ವಿಡಿಯೋ ಅವಳ ಹೇಳಿಕೆಯಲ್ಲ, ಆಕೆಯ ಬಟ್ಟೆಗಳ ಕುರಿತಾಗಿದೆ. ಜೀವನದಲ್ಲಿ ಅವರು ಇಂತಹ ಬಟ್ಟೆ ಧರಿಸಿರಲಾರರು ಅನಿಸುತ್ತೆ. ಅವರ ಉದ್ದೇಶ ತಮ್ಮನ್ನು ತಾವು ಸೀದಾಸಾದಾ ಮಹಿಳೆ ಎನ್ನುವುದನ್ನು ತೋರಿಸಿಕೊಳ್ಳುವುದಾಗಿತ್ತು.
ಅವರ ಈ ಹೇಳಿಕೆಯನ್ನು ಹಿರಿಯ ವಕೀಲ ಕರುಣಾ ನಂದಿ ಅವರು ಕಾನೂನಿನ ವ್ಯಾಪ್ತಿಯಲ್ಲಿ ಮಹಿಳೆಯನ್ನು ಕಡೆಗಣಿಸುವುದಾಗಿದೆ ಎಂದು ಹೇಳಿದರು. ಕಡಿಮೆ ಬಟ್ಟೆ ಎಂದರೆ ಅಪರಾಧಿ, ಸಲ್ವಾರ್ ಕಮೀಜ್ ಅಪರಾಧವನ್ನು ಬಚ್ಚಿಡುವುದು ಎಂದರ್ಥ? ಎಂದು ಅವರು ಉಲ್ಲೇಖಿಸಿದರು.
ಕೆಲವು ತಿಂಗಳುಗಳ ಹಿಂದೆ ಸುನಿಲ್ ಗವಾಸ್ಕರ್ ವಿರಾಟ್ ಕೋಹ್ಲಿ ಬಗ್ಗೆ ಕೊಟ್ಟಿದ್ದ ಹೇಳಿಕೆ ಗಮನಿಸಿ. ವಿರಾಟ್ ಕೊಹ್ಲಿ ತೀರಾ ಕೆಟ್ಟದಾಗಿ ಆಡಿದುದಕ್ಕೆ ಅನುಷ್ಕಾ ಶರ್ಮಾ ಕಾರಣ ಎಂದು ಹೇಳಿದ್ದರು. ಹಾಗೊಂದು ವೇಳೆ ಅನುಷ್ಕಾ ಶರ್ಮಾರ ಯಾವುದಾದರೊಂದು ಸಿನಿಮಾ ಗಲ್ಲಾಪೆಟ್ಟಿಗೆಯಲ್ಲಿ ಸೋತು ಹೋಗಿದ್ದರೆ ಅದಕ್ಕೆ ವಿರಾಟ್ ಕೊಹ್ಲಿಯರನ್ನು ಹೊಣೆಗಾರರನ್ನಾಗಿ ಮಾಡಲಾಗುತ್ತಿತ್ತೇ? ಬಹುಶಃ ಇಲ್ಲ ಅಲ್ಲವೇ? ಸಮಾಜ ಹೇಳುವುದೇನೆಂದರೆ, ಮದುವೆಯ ಬಳಿಕ ಅನುಷ್ಕಾ ಶರ್ಮಾ ತನ್ನ ಕೆಲಸದ ಬಗ್ಗೆ ಜವಾಬ್ದಾರಿ ತೋರಿಸಲಿಲ್ಲ. ಮದುವೆಯ ಬಳಿಕ ಆಕೆ ಅಷ್ಟೊಂದು ಕಷ್ಟಪಡುವುದಿಲ್ಲ. ಅಷ್ಟೊಂದು ಎಚ್ಚರಿಕೆಯಿಂದ ಇರುವುದಿಲ್ಲ.
ಇಲ್ಲಿನ ಅರ್ಥ ಸ್ಪಷ್ಟ. ತಪ್ಪು ಮಹಿಳೆಯದ್ದೇ ಆಗಿರಬಹುದು ಅಥವಾ ಅವಳ ಸಂಗಾತಿಯದ್ದು. ಆದರೆ ಆ ತಪ್ಪನ್ನು ಕೇವಲ ಮಹಿಳೆಯ ತಲೆಗೆ ಕಟ್ಟಲಾಗುತ್ತದೆ.
ಸೌಂದರ್ಯವೆಂಬ ಹೊರೆ
ನಮ್ಮಲ್ಲಿ ಎಲ್ಲೆಡೆ ಸುಂದರ ಮುಖಗಳ ಪ್ರಶಂಸೆ, ಕುರೂಪಿ ಆಗಿರುವುದರ ಬಗ್ಗೆ ಕೀಳರಿಮೆ ಮತ್ತು ಸೌಂದರ್ಯ ಬೆಳಗಿಸುವ ಉಪಾಯಗಳ ಪ್ರಸ್ತುತೀಕರಣದ ಕಾರಣದಿಂದ ಸೌಂದರ್ಯ ಎನ್ನುವುದು ಒಂದು ಹೊರೆ ಎಂದು ಭಾಸವಾಗುತ್ತದೆ. ಮಹಿಳೆ ಎಷ್ಟೇ ಓದಿದವಳಾಗಿರಬಹುದು. ತನ್ನ ಕೆಲಸದಲ್ಲಿ ನಿಪುಣಳಾಗಿರಬಹುದು. ಆದರೆ ಒಂದಿಷ್ಟು ಸುಂದರಳಾಗಿ ಇದ್ದಿದ್ದರೆ ಚೆನ್ನಾಗಿರುತ್ತಿತ್ತು ಎಂಬ ಅಭಿಪ್ರಾಯ ಮಹಿಳೆಯರನ್ನು ಹಿಂದೆ ತಳ್ಳುವ ಕೆಲಸ ಮಾಡುತ್ತದೆ.
ಒಂದು ಪ್ರಚಲಿತ ವಿಚಾರಧಾರೆಯೇನೆಂದರೆ, ಮಹಿಳೆಯೊಬ್ಬಳು ಮುಖದಿಂದ ಸುಂದರಳಾಗಿದ್ದರೆ, ಆಕೆ ಮೆಂಟಲೀ ಕೋತಿ ಥರ ಇರುತ್ತಾಳೆ. ಅವಳಿಗೆ ಅವಕಾಶ ಸಿಗುವುದು ಅವಳ ಸೌಂದರ್ಯದ ಕಾರಣದಿಂದ ಅವಳು ಹೆಚ್ಚೇನೂ ಕೆಲಸ ಮಾಡಲು ಆಗದು. ಏಕೆಂದರೆ ಅರ್ಹತೆಯ ಹೆಸರಿನಲ್ಲಿ ಕೇವಲ ಸೌಂದರ್ಯ ಒಂದೇ ಅಲ್ಲವೇ? ಆದರೆ ಅದೇ ಪುರಷನೊಬ್ಬ ಮುಂದುವರಿಯಲು ಕೇವಲ ಅರ್ಹತೆಗೇ ಶ್ರೇಯಸ್ಸು ಕೊಡಲಾಗುತ್ತದೆ.
ಮಹಿಳೆಯರಿಗೆ ಸುಂದರವಾಗಿರಲು, ಸರಿಯಾದ ಫಿಗರ್ ಕಾಯ್ದುಕೊಂಡು ಹೋಗುವುದು ಅದೆಷ್ಟು ಹೊರೆಯಾಗುತ್ತದೆ ಎಂದರೆ, ಕೀಳರಿಮೆ ಅವರನ್ನು ಆರಿಸಿಕೊಳ್ಳುತ್ತದೆ.
ಮಹಿಳೆಯರು ಮಗುವಿಗೆ ಜನ್ಮ ಕೊಡುತ್ತಾರೆ. ಆಗಲೂ ಅವರ ದೊಡ್ಡ ಹೊಟ್ಟೆ ಅವರ ಸಂಕೋಚಕ್ಕೆ ಕಾರಣವಾಗುತ್ತದೆ. ದೊಡ್ಡ ಹೊಟ್ಟೆಯ ಕಾರಣದಿಂದ ಆಕೆಗೆ ಇಂತಿಂಥ ಡ್ರೆಸ್ ಹೊಂದುವುದಿಲ್ಲ ಎಂದು ಹೇಳಲಾಗುತ್ತದೆ. ಅದೇ ಒಬ್ಬ ಪುರುಷ ಗುಡಾಣದಂತಹ ಹೊಟ್ಟೆಯ ಮೇಲೆ ಬಿಗಿಯಾದ ಶರ್ಟ್ ಹಾಗೂ ಟೀಶರ್ಟ್ ಧರಿಸಿದರೆ ಅವನಿಗೆ ಇದರ ಬಗ್ಗೆ ಯಾರೂ ಏನೂ ಹೇಳುವುದಿಲ್ಲ.
ರಾಜಕೀಯದಲ್ಲಿ ಮಹಿಳೆಯರು
ರಾಜಕೀಯದಲ್ಲಿ ಮಹಿಳೆಯರು ಹಿಡಿತ ಸಾಧಿಸಲು ಪ್ರಯತ್ನ ನಡೆಸಿರುವಾಗ ಅವರು ಕೂಡ ಪುರುಷರ ಟೀಕೆಗೆ ಒಳಗಾಗುತ್ತಾರೆ. ಪ್ರಿಯಾಂಕಾ ಗಾಂಧಿ ಕಾಂಗ್ರೆಸ್‌ನ ಪ್ರಧಾನ ಕಾರ್ಯದರ್ಶಿಯಾಗಿ ನೇಮಕಗೊಂಡಾಗ ಭಾಜಪಾದ ಕೆಲವು ಹಿರಿಯ ಮುಖಂಡರು ಹೀಗೆ ಟೀಕೆ ಮಾಡಿದ್ದರು.“ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಚಾಕ್ಲೆಟಿನಂತಹ ಮುಖವನ್ನು ಹೊರತರುತ್ತಿದೆ.”
“ಇದರಿಂದ ಉತ್ತರ ಪ್ರದೇಶಕ್ಕಾಗುವ ಲಾಭವೆಂದರೆ, ಕಾಂಗ್ರೆಸ್‌ನ ಚುನಾವವಣೆ ಸಭೆಯಲ್ಲಿ ಕುರ್ಚಿಗಳು ಖಾಲಿ ಉಳಿಯುವುದಿಲ್ಲ.”
“ಓಟವನ್ನು ಮುಖದ ಸೌಂದರ್ಯ ಬಲದಿಂದ ಗೆಲ್ಲಲಾಗುವುದಿಲ್ಲ.”
ಮಹಿಳಾ ಮುಖಂಡರು ಕೇವಲ ಸೌಂದರ್ಯದ ವ್ಯಾಖ್ಯೆಯಲ್ಲಿ ಫಿಟ್ ಆಗದಿದ್ದರೂ ಅವರಿಗೆ ಗೌರವ ದೊರೆಯುತ್ತದೆಂದಲ್ಲ, ಸಮಾಜವಾದಿ ಪಾರ್ಟಿ ಮುಖಂಡ ಮುಲಾಯಂ ಸಿಂಗ್ ಯಾದವ್ ರಾಜಾಸ್ಥಾನದ ಮಾಜಿ ಮುಖ್ಯಮಂತ್ರಿ ವಸುಂಧರಾ ರಾಜೆ ಸಿಂಧಿಯಾ ಕುರಿತು, `’ಅವರೀಗ ಸಾಕಷ್ಟು ದಪ್ಪಗಾಗಿದ್ದಾರೆ, ವಿಶ್ರಾಂತಿ ಪಡೆಯುವುದು ಸೂಕ್ತ,” ಎಂದು ಹೇಳಿಕೆ ಕೊಟ್ಟರು. ಪಾರ್ಟಿ ಯಾವುದೇ ಇರಬಹುದು, ವ್ಯಕ್ತಿ ಯಾರೇ ಆಗಿರಬಹುದು, ಅವರ ದೃಷ್ಟಿಕೋನ ಮಾತ್ರ ರಾಜಕಾರಣದಲ್ಲಿ ಮಹಿಳೆ ಪುರುಷನಿಗಿಂತ ಕಡಿಮೆ ಎನ್ನುವುದಾಗಿರುತ್ತದೆ. ಅದಕ್ಕಾಗಿ ಅವರು ಯಾವುದೇ ರೀತಿಯ ತರ್ಕ ಮುಂದೊಡ್ಡಬಹುದು. ಯಾವುದಾದರೊಂದು ಸ್ಥಳದಲ್ಲಿ ನಿಮ್ಮ ದೇಹದ ಬಗ್ಗೆ ಕೀಳುಮಟ್ಟದ ಮಾತುಗಳು ಕೇಳಿಬಂದರೆ, ನಿಮ್ಮ ಕೆಲಸವನ್ನು ಅದೇ ನೆಲೆಯಲ್ಲಿ ಕೀಳಾಗಿ ಕಾಣುತ್ತಿದ್ದರೆ, ನೀವು ಅಲ್ಲಿಯೇ ಉಳಿದುಕೊಳ್ಳಲು ಇಚ್ಛಿಸುತ್ತೀರಾ? ಬಹುಶಃ ಇಲ್ಲ ಅಲ್ಲವೇ? ಆದರೆ ಈ ಮಹಿಳೆಯರನ್ನು ನೋಡಿ, ಅವರು ಆ ದಾರಿಯಲ್ಲಷ್ಟೇ ನಡೆಯುತ್ತಿಲ್ಲ ಅದಕ್ಕೆ ಗಟ್ಟಿಯಾಗಿ ಅಂಟಿಕೊಂಡು ಕುಳಿತುಕೊಂಡಿದ್ದಾರೆ. ಅವರ ಸಂಖ್ಯೆ ಈಗಲೂ ಕಡಿಮೆಯಿದೆ. ಮೊದಲ ಲೋಕಸಭೆಯಲ್ಲಿ ಶೇ.4 ರಿಂದ ಹಿಡಿದು ಈಗ 17ನೇ ಲೋಕಸಭೆಯಲ್ಲಿ ಸುಮಾರು 14% ಸಂಸದೆಯರಿದ್ದಾರೆ.
ಈಗ ಆಸುಪಾಸಿನ ಚಿಕ್ಕದೇಶಗಳ ಅಂಕಿಅಂಶಗಳನ್ನು ಗಮನಿಸೋಣ. ನೇಪಾಳದಲ್ಲಿ ಶೇ.38ರಷ್ಟು, ಬಾಂಗ್ಲಾ, ಪಾಕಿಸ್ತಾನದಲ್ಲಿ ಶೇ.20ರಷ್ಟು ಮಹಿಳೆಯರಿದ್ದಾರೆ. ಆಫ್ರಿಕಾ ಖಂಡದ ರುವಾಂಡಾ ಸಂಸತ್ತಿನಲ್ಲಿ ಶೇ.63ರಷ್ಟು ಮಹಿಳೆಯರಿದ್ದಾರೆ. ನಾವು ಕೂಡ ನಮ್ಮ ಅಪೇಕ್ಷೆಯ ಗುರಿಗೆ ರೆಕ್ಕೆಯನ್ನೇಕೆ ಕೊಡಬಾರದು? ಆರ್ಥಿಕ ಓಟದಲ್ಲಿ ಹಿನ್ನಡೆ ಆರ್ಥಿಕ ಓಟದಲ್ಲಿ ಮಹಿಳೆಯರ ಸ್ಥಿತಿ ಇಷ್ಟೊಂದು ಹೀನಾಯ ಆಗಿರುವುದೇಕೆ? ಇದರ ಮುಖ್ಯ ಕಾರಣ ಕೌಟುಂಬಿಕ ಕೆಲಸಗಳನ್ನು ನಮ್ಮ ಸಮಾಜ ಆರ್ಥಿಕ ದೃಷ್ಟಿಕೋನದಿಂದ ನೋಡುವುದಿಲ್ಲ. ಪುರುಷ ನೌಕರಿ ಮಾಡುತ್ತಾನೆ. ಮಹಿಳೆ ಮನೆ ಸಂಭಾಳಿಸುತ್ತಾಳೆ. ಮನೆಗೆಲಸಗಳು, ಮನೆಗೆ ಅಗತ್ಯ ಸಾಮಾನುಗಳ ಖರೀದಿ, ಮಕ್ಕಳನ್ನು ಪೋಷಿಸುವುದು, ಓದಿಸುವುದು, ವೃದ್ಧರ ನಿರ್ವಹಣೆ, ಮನೆ ಸ್ವಚ್ಛತೆ…. ಹೀಗೆ ಅದೆಷ್ಟೋ ಕೆಲಸಗಳು ಈಗ ಪಟ್ಟಿಯಲ್ಲಿ ಸೇರುತ್ತವೆ.
ಅಂತಾರಾಷ್ಟ್ರೀಯ ಕಾರ್ಮಿಕ ಸಂಘಟನೆಯ ಪ್ರಕಾರ, ಮಹಿಳೆಯೊಬ್ಬಳು ಪ್ರತಿದಿನ 4 ಗಂಟೆ 25 ನಿಮಿಷಗಳಷ್ಟು ವೇತನರಹಿತವಾಗಿ ಕೆಲಸ ಮಾಡುತ್ತಾಳೆ. ಪುರುಷ ಮಾಡುವುದು ಕೇವಲ 1 ಗಂಟೆ 23 ನಿಮಿಷ. ಒಂದು ವೇಳೆ ಇದೇ ಕೆಲಸಗಳನ್ನು ಹೊರಗಿನವರಿಂದ ಮಾಡಿಸಿಕೊಂಡಿದ್ದರೆ, ಅದೆಷ್ಟು ಹಣ ಖರ್ಚಾಗುತ್ತಿತ್ತು ಎಂದು ಹೇಳುವುದು ಕಷ್ಟ.
ಮಹಿಳೆಯೊಬ್ಬಳು ಯಾವುದೇ ಬೇಸರವಿಲ್ಲದೆ ಇವೆಲ್ಲ ಕೆಲಸಗಳನ್ನು ನಿಭಾಯಿಸುತ್ತಾಳೆಂದರೆ, ಅವಳಿಗೆ ಕೇವಲ ಹೊಣೆಗಾರಿಕೆಯಷ್ಟೇ ಬರುತ್ತದೆ. ಹಾಗೊಂದು ವೇಳೆ ಮನೆ ಖರ್ಚಿನಿಂದ ಒಂದಷ್ಟು ಮೊತ್ತವನ್ನು ಉಳಿಸಿಟ್ಟುಕೊಳ್ಳುತ್ತಾಳೆಂದರೆ, ನಮ್ಮ ಸಮಾಜ ಅದಕ್ಕೆ ಕಳ್ಳತನ ಎಂದು ಹಣೆಪಟ್ಟಿ ಕಟ್ಟುತ್ತದೆ. ನೋಟು ಅಮಾನ್ಯೀಕರಣ ಸಂದರ್ಭ ಅವರ ಈ ಉಳಿತಾಯವನ್ನು ಕೊಚ್ಚಿಕೊಂಡು ಹೋಗುವಂತೆ ಮಾಡಿತ್ತು.
ಕೊರೋನಾ ಕಾಲ ಬಹಳಷ್ಟು ಮಹಿಳೆಯರ ನೌಕರಿ ಕಿತ್ತುಕೊಂಡಿತು. ಏಕೆಂದರೆ ಬಹಳಷ್ಟು ಮಹಿಳೆಯರು ಅಸಂಘಟಿತ ವಲಯದಲ್ಲಿ ಕೆಲಸ ಮಾಡುತ್ತಾರೆ. ಅಲ್ಲಿ `ವರ್ಕ್ ಫ್ರಮ್ ಹೋಮ್’ ಸಾಧ್ಯವಿಲ್ಲ. ಇಂತಹ ಸ್ಥಿತಿಯಲ್ಲಿ ಒತ್ತಡ ಹಾಗೂ ಆರ್ಥಿಕ ತೊಂದರೆಗಳಿಂದ ಸುತ್ತುವರಿದ ಮಹಿಳೆಯರು ಕೌಟುಂಬಿಕ ದೌರ್ಜನ್ಯಕ್ಕೆ ತುತ್ತಾಗದೇ ಇನ್ನೇನಾದೀತು?
ಧರ್ಮ/ಸಮಾಜದ ಕೆಂಗಣ್ಣು
ಧರ್ಮದ ಪ್ರಕಾರ, ಯಾವ ಮಹಿಳೆ ತನ್ನ ತಂದೆ, ಗಂಡ ಹಾಗೂ ಮಗ ಹೇಳಿದಂತೆ ಕೇಳುತ್ತಾಳೊ ಅವಳೇ ಒಳ್ಳೆಯವಳು. ಅಂತಹ ಸ್ತ್ರೀಯ ಗುಣಗಾನ ಮಾಡಿದ ಅದೆಷ್ಟು ಕಥೆಗಳು ನಮಗೆ ಸಿಗುತ್ತವೆ. ಪ್ರತಿಯೊಂದು ಧರ್ಮ ಮಹಿಳೆಯರಿಗೆ, ಶಿಕ್ಷಣ ಹಾಗೂ ಜ್ಞಾನ ನೀಡುತ್ತದೆ. ಮನೆಯ ಪುರುಷರಿಗೆ ಅದೆಲ್ಲ ಏನೂ? ಇಲ್ಲ. ವ್ರತ, ಉಪವಾಸ, ಮನೆಗೆಲಸಗಳು ಉಳಿದ ಸಮಯವನ್ನು ಧರ್ಮದಲ್ಲಿ ತೊಡಗಿಸುವುದು. ಪ್ರಶ್ನೆ ಮಾಡಬೇಡ, ಕೇವಲ ಆಜ್ಞೆ ಪಾಲಿಸುವ ಇವೆಲ್ಲ ಕೇವಲ ಮಹಿಳೆಯರಿಗೆ ಮಾತ್ರ ಬರೆಯಲ್ಪಟ್ಟಿವೆ. ಆದರೆ ಇದಕ್ಕೆಲ್ಲ ಒಂದು ಪ್ರಶಂಸೆಯ ಮಾತಿಲ್ಲ. ಹಾಗೊಮ್ಮೆ ಮಹಿಳೆ ಮನೆಗೆಲಸದಲ್ಲಿ ನಿಪುಣಳಾಗಿರದಿದ್ದರೆ ಅವಳ ಬಗ್ಗೆ ಲಘುವಾಗಿ ಮಾತನಾಡಲಾಗುತ್ತದೆ.
ಅಡುಗೆ ಕೆಲಸ, ರೀತಿರಿವಾಜುಗಳ ನಿರ್ವಹಣೆ, ಧರ್ಮದ ಕೆಲಸಗಳಲ್ಲಿ ಪಾಲ್ಗೊಳ್ಳುವಿಕೆ ಹೀಗೆ ಧರ್ಮ ಆಕೆಯನ್ನು ಪ್ರಗತಿಪಥದಲ್ಲಿ ಸಾಗದ ಹಾಗೆ ನಾಲ್ಕು ಗೋಡೆಗಳ ಮಧ್ಯೆ ಬಂಧಿಸಿಟ್ಟಿದೆ.
ಗೀತಾದ ಒಂದು ಉಪದೇಶದಲ್ಲಿ ಹೀಗೆ ಹೇಳಲಾಗಿದೆ. ಅಧರ್ಮಾಭಿವಾತ್ಕಷ್ಣ ಪ್ರದುಷ್ಯಂತ ಕುಲಸ್ತ್ರೀಯ :
ಸ್ತ್ರೀಷು ಗುಷ್ಟಾಸು ವಾಷ್ಣೇಯ ಜಾಯತೆ ವರ್ಣಸಂಕರ
ಇದರರ್ಥ, ಹೇ ಕೃಷ್ಣ, ಪಾಪ ಹೆಚ್ಚುವುದರಿಂದ ಕುಲದ ಸ್ತ್ರೀಯರು ಹೆಚ್ಚು ದೂಷಿತರಾಗುತ್ತಾರೆ ಹಾಗೂ ಹೇ, ಾರ್ಷ್ಣೇಯ, ಸಿ್ತ್ರೂೕೕನಿ ದೂಷಿತಗೊಳ್ಳುದರಿಂದ ರ್ಣಸಂಕರ ಉತ್ಪನ್ನಾಗುತ್ತದೆ.ಮತ್ತೊಂದು ಶ್ಲೋಕ ಹೇಳುವುದೇನೆಂದರೆ, ಈ ವರ್ಣಸಂಕರ ಕಾರಕ ದೋಷಗಳಿಂದ ಕುಲಘಾತಿಗಳ ಸನಾತನ ಕುಲಧರ್ಮ ಹಾಗೂ ಜಾತಿ ನಷ್ಟವಾಗುತ್ತದೆ.
ಇದರ ಅರ್ಥ ಸ್ಪಷ್ಟ. ಕುಲದ ಶುದ್ಧತೆ ಗೌರವ ಹಾಗೂ ಗುಣವನ್ನು ನಷ್ಟಗೊಳಿಸುವ ಹೊಣೆಗಾರಿಕೆಯನ್ನು ಕೇವಲ ಮಹಿಳೆಯ ತಲೆಗೆ ಕಟ್ಟಲಾಗುತ್ತದೆ. ಪುರುಷರ ಅಲೆಮಾರಿತನಕ್ಕೂ ಇದಕ್ಕೂ ಯಾವುದೇ ಸಂಬಂಧವಿಲ್ಲ. ಕೇವಲ ಸ್ತ್ರೀ ಮಾತ್ರ ತನಗೆ ತಾನೂ ಕಣ್ಣು ಮುಚ್ಚಿಕೊಂಡು ಮುಂದೆ ಸಾಗಬೇಕು.
ಬೈಗುಳ ಕೇವಲ ಮಹಿಳೆಯರಿಗಷ್ಟೇ
ಅದೇ ರೀತಿ ಬೈಗುಳುಗಳು ಕೂಡ ನಮ್ಮ ಪಿತೃ ಪ್ರಧಾನ ಸಮಾಜದ ಕೊಡುಗೆಯಾಗಿದೆ. ಹೀಗಾಗಿ ಪ್ರತಿಯೊಂದು ಬೈಗುಳಗಳು ಕೂಡ ಮಹಿಳೆಯರನ್ನೇ ಟಾರ್ಗೆಟ್ ಮಾಡುತ್ತವೆ. ಯಾವ ಸಮಾಜದಲ್ಲಿ ಮಹಿಳೆಯರನ್ನು ದೇವಿಯರ ಹಾಗೆ ಪೂಜೆ ಮಾಡುವ ಮಾತು ಕೇಳಿಬರುತ್ತದೊ, ಅದೇ ಪುರುಷರಿಂದ ಸಂಬೋಧಿಸಲ್ಪಡುವ ಬೈಗುಳಗಳು ತಾಯಿ, ಸೋದರಿಯರನ್ನು ಗುರಿಯಾಗಿಸುವುದು ಎಷ್ಟು ಸರಿ?
ಹಿಂದಿ ಭಾಷೆಯಲ್ಲಿ ಉಪಯೋಗಿಸಲ್ಪಡುವ `ಕುಲಟಾ ಕುಲಕ್ಷಿಣಿ’ ಉಪನಾಮಗಳು ಪುರುಷರಿಗೆ ಇಲ್ಲವೇ ಇಲ್ಲ. ಕೇರಳ ವಿಶ್ವವಿದ್ಯಾಲಯದ ಸಹಾಯಕ ಪ್ರಾಧ್ಯಾಪಕಿ ಟಿ. ವಿಜಯಲಕ್ಷ್ಮೀ ಹೇಳುವುದೇನೆಂದರೆ, `ವೇಶ್ಯೆ’ ಈ ಶಬ್ದಕ್ಕೆ ಪುಲ್ಲಿಂಗ ಶಬ್ದವೇ ಇಲ್ಲ.
2017ರಲ್ಲಿ ಅವರು ತಮ್ಮ ಕವಿತೆಗಳಲ್ಲಿ ವೇಸಿ (ವೇಶ್ಯೆ) ಶಬ್ದಕ್ಕೆ `ವೇಸನ್’ (ಪುಲ್ಲಿಂಗ) ಎಂಬ ಶಬ್ದವನ್ನು ಬಳಸಿದರು.
ಭಾಷಾ ವಿಜ್ಞಾನದ ಸಮಾಜ ಶಾಸ್ತ್ರಜ್ಞ ಹೇಮಂತ್ ದತ್ತ ಕಂಡುಕೊಂಡಿದ್ದೇನೆಂದರೆ, ಮಲಯಾಳಂ ಹಾಗೂ ಅಸ್ಸಾಮಿ ಭಾಷೆಯಲ್ಲಿ `ಓಕ್ಸೋಟಿ’ ಅಂದರೆ ವ್ಯಭಿಚಾರಿಣಿ ಅಥವಾ `ಬೊನೊರಿ’ ಅಂದರೆ ಚಾರಿತ್ರ್ಯಹೀನ ಮಹಿಳೆ ಶಬ್ದಗಳಿಗೆ ಯಾವುದೇ ಪುಲ್ಲಿಂಗ ಶಬ್ದ ಇಲ್ಲವೆನ್ನುವುದು ಅವರ ಗಮನಕ್ಕೆ ಬಂತು.
2016ರಲ್ಲಿ ನಟಿ ಶ್ರುತಿ ಹಾಸನ್ ಒಂದು ವಿಡಿಯೋ `ಬೀ ದಿ ಬಿಚ್’ ಮಾಡಿದ್ದರು. ಅದರಲ್ಲಿ ಅವರು ಬಿಚ್ ಅಂದರೆ ಹೆಣ್ಣು ನಾಯಿ ಅದೊಂದು ರೀತಿಯಲ್ಲಿ ಬೈಗುಳದಂತೆ ಉಪಯೋಗವಾಗುವುದರ ಬಗ್ಗೆ ಒಂದು ವ್ಯಾಖ್ಯೆ ನೀಡಿದರು. ಅಂತಹ ಮಹಿಳೆ ತನ್ನದೇ ನಿಯಮಾನುಸಾರ ಜೀವಿಸುವ ಧೈರ್ಯ ಹೊಂದಿರುತ್ತಾಳೆ ಎಂದು ಅವರು ತಿಳಿಸಿದ್ದರು.
ಮದುರೈನ ಸಮಾಜ ಶಾಸ್ತ್ರಜ್ಞ, ಚಿತ್ರರಾಜ್ ಜೋಸೆಫ್ ಹೇಳುವುದೇನೆಂದರೆ, ಕೇವಲ ಪುರುಷರಷ್ಟೇ ಅಲ್ಲ, ಮಹಿಳೆಯರು ಕೂಡ ಅಂತಹ ಬೈಗುಳಗಳನ್ನು ಬಳಕೆ ಮಾಡುತ್ತಾರೆ. ಏಕೆಂದರೆ ಅವರೂ ಕೂಡ ಈ ಪಿತೃಪ್ರಧಾನ ಸಮಾಜದ ಭಾಗವಾಗಿದ್ದಾರೆ ಅಲ್ಲವೇ? ಅವರ ಪ್ರಕಾರ ಯಾವ ಮಹಿಳೆಯರಿಗೆ ತಮ್ಮ ಸ್ವಾತಂತ್ರ್ಯ ಹಾಗೂ ಅಸ್ತಿತ್ವದ ಮೇಲೆ ನಂಬಿಕೆ ಇರುವುದಿಲ್ಲ. ಅವರು ಬೇರೆ ಪುರುಷರು ಹಾಗೂ ಮಹಿಳೆಯರೊಂದಿಗೆ ಜಗಳವಾಡುವ ಸಂದರ್ಭದಲ್ಲಿ ಇಂತಹ ಬೈಗುಳಗಳನ್ನು ಧಾರಾಳವಾಗಿ ಬಳಸುತ್ತಾರೆ. ಅದು ಮಹಿಳೆಯರ ಚಾರಿತ್ರ್ಯ ಹಾಗೂ ಆಕೆಯ ಜನನ ಸಾಮರ್ಥ್ಯ, ಅವರ ದೈಹಿಕ ರಚನೆ ಮುಂತಾದವುಗಳನ್ನು ಗುರಿಯಾಗಿಸುತ್ತದೆ.
`ಪೀಪಲ್ಸ್ ಲಿಂಗ್ವಿ ಸ್ಟಿಕ್ ಸರ್ವೇ ಆಫ್‌ಇಂಡಿಯಾ’ದ ಚೇರ್‌ಮನ್ ಗಣೇಶ್ ದೇವಿ ಒಂದು ರೋಚಕ ಸತ್ಯವನ್ನು ಹೊರಗೆಡವಿದ್ದಾರೆ. ಭಾರತೀಯ ಭಾಷೆಯಲ್ಲಿ ಗುಣ ಈ ಶಬ್ದವನ್ನು ಪುಲ್ಲಿಂಗ ಎಂತಲೂ `ಗಲತೀ’ (ತಪ್ಪು) ಶಬ್ದನ್ನು ಸ್ತ್ರೀಲಿಂಗದ ರೂಪದಲ್ಲಿ ಬರೆಯುವುದನ್ನು ಗಮನಿಸಿದ್ದಾರೆ.
ಅಮೂಲ್ಯ ಗುಣದ ನಿರಾಕರಣೆ
ಮುನ್ನುಗ್ಗುತ್ತಿರುವ ಮಹಿಳೆಯರ ಧೈರ್ಯವನ್ನು `ಗಂಡೆದೆ’ ಎಂದು ಹೇಳುವುದರ ಮೂಲಕ ಸಮಾಜ ಅವಳ ಸ್ತ್ರೀತ್ವದ ಗುಣವನ್ನು ಎಲ್ಲಿಯವರೆಗೆ ನಿರಾಕರಿಸುತ್ತದೆ? ಮಗಳು ಒಳ್ಳೆಯ ನೌಕರಿ ಗಿಟ್ಟಿಸಿಕೊಂಡರೆ `ಮಗನಂತೆ’ ಅವಳು ಮನೆಯ ಜವಾಬ್ದಾರಿ ನಿಭಾಯಿಸುತ್ತಿದ್ದರೆ, ಅವಳು ಮಗನ ಹಾಗೆ ಕುಟುಂಬ ನೋಡಿಕೊಳ್ಳುತ್ತಿದ್ದಾಳೆ ಎಂದು ಹೇಳಲಾಗುತ್ತದೆ. ಅದೇ ಒಬ್ಬ ಹುಡುಗ ಭಾವುಕ ಪ್ರವೃತ್ತಿಯನಾದರೆ, ಅವನನ್ನು `ಮಹಿಳೆಯರ ಹಾಗೆ ದುರ್ಬಲ’ ಎಂದು ಹೀಯಾಳಿಸಲಾಗುತ್ತದೆ. ಮಹಿಳೆಯರಿಗೆ `ಪುರುಷೋಚಿತ’ ಎನ್ನುವುದು ಒಂದು ಪದವಿಯಂತಾಗಿಬಿಟ್ಟಿದೆ. ಆದರೆ `ಕೈಗೆ ಬಳೆ ತೊಡಿಸುವುದು’ ಪುರುಷರಿಗೆ ಬೈಗುಳ ಆದಾಗ್ಯೂ ನಮ್ಮ ಸಮಾಜದಲ್ಲಿ ಮಹಿಳೆಯರಿಗೆ ಬಳೆಗಳು ಹಾಗೂ ಇತರೆ ಶೃಂಗಾರ ಸಾಧನಗಳು ಅತ್ಯವಶ್ಯಕ ಎಂದು ಹೇಳಲಾಗುತ್ತದೆ. ಅವೇ ಆಕೆಯ ವ್ಯಕ್ತಿತ್ವದ ಪರಿಪೂರ್ಣ ಭಾಗ ಎಂದು ಭಾವಿಸಲಾಗುತ್ತದೆ. ವಿಧವೆಯ ಮುಖ ನೋಡುವುದು ಅಪಶಕುನ ಎಂದು ಹೇಳಲಾಗುತ್ತದೆ. ಆದರೆ ವಿಧುರರಿಗೆ ಇಂತಹ ಯಾವುದೇ ಬಾಧೆ ಇರುವುದಿಲ್ಲ.
ಲಿಂಗ ಅಸಮಾನತೆ ಏಕೆ?
ಲಿಂಗ ಅಸಮಾನತೆಯ ಬಗೆಗಿನ ಒಂದು ಅಧ್ಯಯನದಲ್ಲಿ ಮಾರ್ಥಾ ಜೋಶಿ ಹೀಗೆ ಹೇಳುತ್ತಾರೆ, ಆಫೀಸುಗಳಲ್ಲಿ ಉನ್ನತ ಹುದ್ದೆಗಳಲ್ಲಿರುವ ಪುರುಷರ ಬಿಗಿ ಧೋರಣೆಯನ್ನು ಪ್ರಶಂಸೆ ಮಾಡಲಾಗುತ್ತದೆ. ಅದೇ ಮಹಿಳೆಯೊಬ್ಬಳು ಈ ರೀತಿಯ ಧೋರಣೆಯನ್ನು ಕೋಪಿಷ್ಠೆ ಹಾಗೂ ನಕಾರಾತ್ಮಕ ಧೋರಣೆಯವಳೆಂದು ನೋಡಲಾಗುತ್ತದೆ. ಮಹಿಳೆಯರಿಂದ ಹೆಚ್ಚು ಸಂವೇದನಾಶೀಲತೆಯ ಅಪೇಕ್ಷೆ ಮಾಡಲಾಗುತ್ತದೆ. ಜೊತೆಗೆ ಅವರ ಒಂದು ಆದರ್ಶ ವರ್ತನೆ, ಗೌರವದಾಯಕ ಅಂತರ ಹಾಗೂ ಮೌನವಾಗಿ ಕೆಲಸ ಮಾಡುವ ಅಪೇಕ್ಷೆ ಇಟ್ಟುಕೊಳ್ಳಲಾಗುತ್ತದೆ.
ಯಾವುದೇ ಒಬ್ಬ ಮಹಿಳೆಯ ಬಟ್ಟೆಗಳ ಬಗ್ಗೆ ಆಕೆಯ ರಾಜಕೀಯ ಪರ್ಯಾಯಗಳ ಆಕೆಯ ಉದ್ಯೋಗ ಆಕೆಯ ಮನರಂಜನೆಗಳ ಬಗ್ಗೆ ಟೀಕಿಸಲಾಗುತ್ತದೆ. ಅಂದಹಾಗೆ ಈ ಟೀಕೆ ಅವಳ ನಿರ್ಣಯ ತೆಗೆದುಕೊಳ್ಳುವ ಸಾಮರ್ಥ್ಯದ್ದಾಗಿರುತ್ತದೆ. ನಿನ್ನಲ್ಲಿ ಅಷ್ಟು ಬುದ್ಧಿಯಿಲ್ಲ, ನೀನು ಅಂತಹ ನಿರ್ಣಯ ತೆಗೆದುಕೊಳ್ಳಲು ಆಗುವುದಿಲ್ಲ ಎಂದು ಸಮಾಜ ಬಿಂಬಿಸಲು ಪ್ರಯತ್ನಿಸುತ್ತದೆ. ನೀನು ಶತ ಶತಮಾನಗಳಷ್ಟು ಹಳೆಯ ಸಂಪ್ರದಾಯಗಳನ್ನು ಮೀರಿ ಹೋಗಲು ಸಾಧ್ಯವಿಲ್ಲ. ನೀನು ಈವರೆಗೆ ಏನನ್ನು ಮಾಡುತ್ತ ಬಂದಿರುವೆಯೋ ಅದನ್ನೇ ಮಾಡುತ್ತಿರು ಹೊಸದಾಗಿ ಯೋಚಿಸಲು ಅಥವಾ ಮಾಡಲು ನಿನಗೆ ಅನುಮತಿ ಇಲ್ಲ. ಆದರೆ ಇದೆಲ್ಲ ಎಲ್ಲಿಯವರೆಗೆ ನಡೆಯುತ್ತಿರುತ್ತದೆ?
ನಾವು ನಮ್ಮ ಮನೆಗಳಲ್ಲಿ ಹೆಂಡತಿಯಾಗಿ, ತಾಯಿಯಾಗಿ, ಗೃಹಿಣಿಯಾಗಿ ಬದಲಾವಣೆ ತರಬೇಕಿದೆ. ನಾವು ನಮ್ಮ ಪುತ್ರಿಯರನ್ನು ಹಸುವಿನಂತೆ ಸಾಧುವಲ್ಲ, ಸಿಂಹಿಣಿಯಂತೆ ಉಗ್ರ ರೂಪ ತಾಳುವಂತೆ ಮಾಡಬೇಕು. ಧರ್ಮ ಹಾಗೂ ಸಮಾಜದ ದ್ವಂದ್ವ ಕೊನೆಗೊಳಿಸುವುದನ್ನೇ ನಾವೇ ನಿರ್ಧರಿಸಬೇಕಿದೆ.
– ಪ್ರಾಚಿ
ಧರ್ಮ ಹಾಗೂ ಸಮಾಜದ ಹೊಡೆತಕ್ಕೆ ಸಿಲುಕುವ ಮಹಿಳೆ ಯಾವ ಮಹಿಳೆ ತನ್ನ ಅಪ್ಪ, ಗಂಡ ಹಾಗೂ ಮಗ ಹೇಳಿದಂತೆ ಕೇಳುತ್ತಾಳೆ ಅವಳೇ ಒಳ್ಳೆಯಳು. ಇಂತಹ ಮಹಿಳೆಯರ ಕುರಿತಂತೆ ಅದೆಷ್ಟು ಕಥೆಗಳು ಹೆಣೆಯಲ್ಪಟ್ಟಿವೆ. ಪ್ರತಿಯೊಂದು ಧರ್ಮ ಮಹಿಳೆಯರಿಗೆ ಜ್ಞಾನ ಹಾಗೂ ಶಿಕ್ಷಣ ದೊರಕಿಸಿಕೊಡುತ್ತದೆ. ಮನೆಯ ಗಂಡಸರಿಗಾಗಿ ವ್ರತ ಉಪವಾಸ ಮಾಡುವುದು, ಪ್ರಶ್ನೆ ಮಾಡದಿರುವುದು, ಕೇವಲ ಆಜ್ಞೆ ಪಾಲಿಸುವ ಇವೇ ಮಹಿಳೆಯರ ಹಣೆಬರಹದಲ್ಲಿ ಬರೆಯಲ್ಪಟ್ಟಿವೆ. ಮನೆಗೆಲಸ ಕೇವಲ ಮಹಿಳೆಯರದ್ದಷ್ಟೇ ಎಂದು ಹೇಳಲ್ಪಡುವ ಸಮಾಜ ಅದಕ್ಕಾಗಿ ಅವಳನ್ನು ಕಿಂಚಿತ್ತೂ ಪ್ರಶಂಸೆ ಮಾಡುವುದಿಲ್ಲ. ಮನೆಗೆಲಸದಲ್ಲಿ ನಿಪುಣಳಿರದ ಮಹಿಳೆಯನ್ನು ಅವಹೇಳನ ಮಾಡಲಾಗುತ್ತದೆ. ಧರ್ಮ ಮಹಿಳೆಯನ್ನು ಪ್ರಗತಿಪಥದಲ್ಲಿ ಮುನ್ನಡೆಯುವುದನ್ನು ತಡೆದು, ಕೇವಲ ನಾಲ್ಕು ಗೋಡೆಗಳ ನಡುವೆ ಬಂಧಿಯಾಗಿಸುತ್ತದೆ.
ಯಾವುದೇ ಒಬ್ಬ ಮಹಿಳೆಯ ಬಟ್ಟೆಗಳ ಬಗ್ಗೆ ಆಕೆಯ ರಾಜಕೀಯ ಪರ್ಯಾಯಗಳ ಆಕೆಯ ಉದ್ಯೋಗ ಆಕೆಯ ಮನರಂಜನೆಗಳ ಬಗ್ಗೆ ಟೀಕಿಸಲಾಗುತ್ತದೆ. ಅಂದಹಾಗೆ ಈ ಟೀಕೆ ಅವಳ ನಿರ್ಣಯ ತೆಗೆದುಕೊಳ್ಳುವ ಸಾಮರ್ಥ್ಯದ್ದಾಗಿರುತ್ತದೆ. ನಿನ್ನಲ್ಲಿ ಅಷ್ಟು ಬುದ್ಧಿಯಿಲ್ಲ, ನೀನು ಅಂತಹ ನಿರ್ಣಯ ತೆಗೆದುಕೊಳ್ಳಲು ಆಗುವುದಿಲ್ಲ ಎಂದು ಸಮಾಜ ಬಿಂಬಿಸಲು ಪ್ರಯತ್ನಿಸುತ್ತದೆ. ನೀನು ಶತ ಶತಮಾನಗಳಷ್ಟು ಹಳೆಯ ಸಂಪ್ರದಾಯಗಳನ್ನು ಮೀರಿ ಹೋಗಲು ಸಾಧ್ಯವಿಲ್ಲ.