“ಸ್ನೇಹ ಎಂತಹದೊಂದು ಕಟ್ಟಡವೆಂದರೆ, ಅದು ವಿಶ್ವಾಸವೆಂಬ ಅಡಿಪಾಯದ ಮೇಲೆ ನಿಂತಿರುತ್ತದೆ. ಅದು ನದಿಯ ದಡಗಳನ್ನು ಜೋಡಿಸುವ ಸೇತುವೆಯಂತಿದ್ದು, ಆ ದಡ ಸ್ತ್ರೀಯೋ, ಪುರುಷನೊ ಎಂಬ ಮಾನದಂಡ ಹೊಂದಿರುವುದಿಲ್ಲ,” ವಾಟ್ಸ್ ಆ್ಯಪ್‌ ನಲ್ಲಿ ಬಂದ ಸಂದೇಶವೊಂದನ್ನು ಪ್ರೇರಣಾ ತನ್ನ ಗಂಡನಿಗೆ ಎತ್ತರದ ಧ್ವನಿಯಲ್ಲಿ ಓದಿ ಹೇಳಿದಳು.

“ಒಬ್ಬ ಸ್ತ್ರೀ ಹಾಗೂ ಪುರುಷ ಎಂದಿಗೂ ಪರಸ್ಪರ ಸ್ನೇಹಿತರಾಗುವುದಿಲ್ಲ….. ಅದು ಕೇವಲ ತನ್ನ ಕಾಮನೆಯನ್ನು ಸಜ್ಜನಿಕೆಯ ಮುಖವಾಡವನ್ನು ಹಾಕಿಸುವ ಕೆಟ್ಟ ಮಾನಸಿಕತೆಯ ಹೊರತು ಬೇರೇನೂ ಅಲ್ಲ,” ಎಂದು ಸೋಮಶೇಖರ್‌ ಎಂದಿನಂತೆ ಹೇಳುತ್ತಾ ತನ್ನ ಸಿಡಿಮಿಡಿತನ ಹೊರಹಾಕಿದ.

ಪ್ರೇರಣಾಳ ಮುಖ ಇಳಿದುಹೋಯಿತು. ಅವಳು ಫೋನ್‌ ಚಾರ್ಜಿಗೆ ಹಾಕಿ, ಬಾಥ್‌ ರೂಮಿನತ್ತ ಹೆಜ್ಜೆ ಹಾಕಿದಳು.

ಪ್ರೇರಣಾ ಹಾಗೂ ಸೋಮಶೇಖರನ ಮದುವೆಯಾಗಿ 5 ವರ್ಷಗಳೇ ಆಗಿದ್ದವು. ಅವರ ನಡುವೆ ದೈಹಿಕ ಅಂತರ ಮೊದಲ ರಾತ್ರಿಯೇ ಕೊನೆಗೊಂಡಿತ್ತು. ಆದರೆ ಹೃದಯದ ನಡುವಿನ ಅಂತರ ಈವರೆಗೂ ಸ್ಪಷ್ಟವಾಗಿ ನಿರ್ಧಾರವಾಗಿರಲಿಲ್ಲ. ಅಂದಹಾಗೆ ಇಬ್ಬರ ನಡುವೆ ಅಷ್ಟೇನೂ ಮತಭೇದ ಇರಲಿಲ್ಲ. ಆದರೆ ಸ್ತ್ರೀ-ಪುರುಷರ ನಡುವಿನ ಸಂಬಂಧದ ಕುರಿತಂತೆ ಸೋಮಶೇಖರನ ವಿಚಾರಗಳು ಈಗಲೂ ಪುರಾತನ ಯುಗದ್ದಾಗಿದ್ದವು. ಪ್ರೇರಣಾ ಸ್ತ್ರೀ-ಪುರುಷರ ಬಗೆಗೆ ಏನಾದರೂ ಹೇಳಲು ಹೋದರೆ, ಸೋಮಶೇಖರ್‌ ಅದೇ ರೀತಿಯಲ್ಲಿ ಕೆಂಡಾಮಂಡಲನಾಗುತ್ತಿದ್ದ.

ಇಬ್ಬರೂ ಬೇರೆ ಬೇರೆ ಬಹುರಾಷ್ಟ್ರೀಯ ಕಂಪನಿಗಳಲ್ಲಿ ಕೆಲಸ ಮಾಡುತ್ತಿದ್ದರು. ಬೆಳಗ್ಗೆ ಹೊತ್ತು ಇಬ್ಬರಿಗೂ ಧಾವಂತದ ಸಮಯಾಗಿರುತ್ತಿತ್ತು. ಮನೆಗೆ ಮರಳುವ ಹೊತ್ತಿಗೆ ಇಬ್ಬರಿಗೂ ರಾತ್ರಿಯಾಗಿರುತ್ತಿತ್ತು. ವಾರಾಂತ್ಯದಲ್ಲಿ ಇಬ್ಬರಿಗೂ ರಜೆಯೇನೋ ದೊರಕುತ್ತಿತ್ತು. ಆದರೆ ವಾರವಿಡೀ ಉಳಿದ ಕೆಲಸಗಳಿಗಾಗಿ ಆ ಎರಡೂ ದಿನಗಳು ಕಳೆದು ಹೋಗುತ್ತಿದ್ದವು. ಸೋಮಶೇಖರನಿಗೆ ಅಷ್ಟೇನೂ ಕಷ್ಟಕರ ಎನಿಸುತ್ತಿರಲಿಲ್ಲ. ಏಕೆಂದೆರ ಅವನು ಮೊದಲಿನಿಂದಲೇ ಅಂತರ್ಮುಖಿ ಸ್ವಭಾವದವನಾಗಿದ್ದ. ಆದರೆ ಮಾತುಗಳ ಅಭಾವದಿಂದ ಪ್ರೇರಣಾ ತನ್ನ ಮನದ ಸಿಕ್ಕುಗಳನ್ನು ಬಿಡಿಸಿಕೊಳ್ಳಲು ಚಡಪಡಿಸುತ್ತಿದ್ದಳು.

ಪ್ರೇರಣಾ ತನ್ನ ಹೃದಯಕ್ಕೆ ಹತ್ತಿರವಾಗುವಂತಹ ಸ್ನೇಹಿತನ ಅಗತ್ಯವಿತ್ತು. ಅಂತಹ ಸ್ನೇಹಿತನ ಎದುರು ಅವಳು ತನ್ನ ಪ್ರತಿಯೊಂದು ರಹಸ್ಯವನ್ನು ಹಂಚಿಕೊಳ್ಳಬೇಕೆಂದು ಅಪೇಕ್ಷಿಸುತ್ತಿದ್ದಳು. ಪ್ರತಿಯೊಂದು ಕಷ್ಟದ ಸಂದರ್ಭದಲ್ಲೂ ಆ ವ್ಯಕ್ತಿಯಿಂದ ಸಲಹೆ ಪಡೆಯಬಹುದು. ಖುಷಿಯ ಕ್ಷಣಗಳಲ್ಲಿ ಅವನೊಂದಿಗೆ ನಗುನಗುತ್ತಾ ಕಾಲ ಕಳೆಯಬಹುದು. ದುಃಖದ ಸಂದರ್ಭದಲ್ಲಿ ಅವನ ಹೆಗಲಿಗೊರಗಿ ದುಃಖ ಮರೆಯಬೇಕು ಎನ್ನುವುದು ಅವಳ ಮನದಿಚ್ಛೆಯಾಗಿತ್ತು.

ಅಂತಹ ಸ್ನೇಹಿತನೊಬ್ಬನ ಕಲ್ಪನೆಯನ್ನು ಪ್ರೇರಣಾ ಸೋಮಶೇಖರ್‌ ಜೊತೆಗೆ ಹಂಚಿಕೊಂಡಾಗ ಅವನು ಕೆಂಡಾಮಂಡಲನಾಗುತ್ತಿದ್ದ.

“ಗಂಡ ಇದ್ದಾನಲ್ಲ. ಸುಖದುಃಖದಲ್ಲಿ ಜೊತೆ ನಿಭಾಯಿಸಲು, ಅದಕ್ಕಾಗಿ ಪ್ರತ್ಯೇಕ ಪುರುಷನ ಅಗತ್ಯವೇನಿದೆ? ಸ್ನೇಹಿತ ಅಂದರೆ ಪುರುಷನೇ ಏಕಾಗಿರಬೇಕು, ಮಹಿಳೆ ಏಕಾಗಿರಬಾರದು? ಅಮ್ಮ ಅಥವಾ ಅಕ್ಕ ತಂಗಿಗಿಂತ ಒಳ್ಳೆಯ ಸ್ನೇಹಿತೆ ಬೇರಾರೂ ಇರಲು ಸಾಧ್ಯ,” ಎಂದು ಹೇಳುತ್ತಾ ಅವಳನ್ನು ಸುಮ್ಮನಾಗಿಸಿಬಿಡುತ್ತಿದ್ದ.

“ಗಂಡ ಎಂದೂ ಸ್ನೇಹಿತನಾಗುವುದಿಲ್ಲ. ಏಕೆಂದರೆ ಅವನ ಪ್ರೀತಿಯಲ್ಲಿ ಹಕ್ಕಿನ ಭಾವನೆ ಇರುತ್ತದೆ. ಹೆಂಡತಿಯ ಕುರಿತಂತೆ ಅಧಿಪತ್ಯದ ಭಾವನೆ ಇರುತ್ತದೆ. ಮಹಿಳೆಯರಲ್ಲಿ ಸ್ವಾಭಾವಿಕವಾಗಿಯೇ ಅಸೂಯೆಯ ಭಾವನೆ ಇದ್ದೇ ಇರುತ್ತದೆ. ಅಮ್ಮ ಸೋದರಿಯೇ ಆಗಿದ್ದರೂ ಸರಿ. ಇನ್ನು ಅಮ್ಮನ ಬಗ್ಗೆ ಹೇಳಬೇಕೆಂದರೆ, ಅವರ ಮಾತುಗಳು ಯಾವಾಗಲೂ ನೈತಿಕತೆಯ ಹೂಡಿಕೆಯಿಂದ ಆವೃತ್ತವಾಗಿರುತ್ತದೆ. ಅವರು ಹೃದಯದ್ದಲ್ಲ, ಮನಸ್ಸಿನ ಮಾತುಗಳನ್ನಷ್ಟೇ ಆಡುತ್ತಾರೆ. ನನಗೆಂಥ ಸ್ನೇಹಿತ ಬೇಕೆಂದರೆ ಅವನ ಬಂಧನದಲ್ಲೂ ಸ್ವಾತಂತ್ರ್ಯದ ಅನುಭವ ಉಂಟಾಗಬೇಕು……”

ಪ್ರೇರಣಾ ಅದೆಷ್ಟೋ ಹೇಳಿದರೂ ಸೋಮಶೇಖರ್‌ ತಿಳಿಸಿ ಹೇಳಲು ಸಾಧ್ಯವಾಗುತ್ತಿರಲಿಲ್ಲ. ಯಾವುದೇ ಒಬ್ಬ ಮಹಿಳೆಗೆ ಪುರುಷ ಸ್ನೇಹಿತ ದೈಹಿಕ ಅಗತ್ಯಗಳಿಗಲ್ಲ ಭಾವನಾತ್ಮಕ ಅಗತ್ಯವಾಗಿರುತ್ತಾನೆ.

ಇದೇ ದಿನಗಳಲ್ಲಿ ರವಿ ಪ್ರೇರಣಾಳ ಜೀವನದಲ್ಲಿ ಪ್ರವೇಶ ಮಾಡಿದ. ಮಾರ್ಕೆಟಿಂಗ್‌ ಭಾಗದಲ್ಲಿ ಜಾಯಿನ್‌ ಮಾಡಿದ ರವಿ ಎಷ್ಟು ಆಕರ್ಷಕ ವ್ಯಕ್ತಿತ್ವ ಹೊಂದಿದ್ದನೊ, ಅವನ ವರ್ತನೆ ಕೂಡ ಅಷ್ಟೇ ಒಳ್ಳೆಯದಾಗಿರುತ್ತಿತ್ತು. ಅವನದು ಹಸನ್ಮುಖಿ ಸ್ವಭಾವ. ಅವನನ್ನು ನೋಡಿ ಪ್ರೇರಣಾಗೆ ಏನು ಅನಿಸುತ್ತಿತ್ತೆಂದರೆ, ತನ್ನ ಕಣ್ಣುಗಳ ನೋಟ ಹಾಗೂ ಮುಗುಳ್ನಗೆಯಿಂದಲೇ ಅರ್ಧ ಸಂವಾದ ಮಾಡಬಹುದು ಎನಿಸುತ್ತಿತ್ತು.

ರವಿ ಕ್ರಮೇಣ ಇಡೀ ಆಫೀಸಿನ ಅಚ್ಚುಮೆಚ್ಚಿನ ವ್ಯಕ್ತಿಯಾಗಿಬಿಟ್ಟಿದ್ದ. ಅವನು ಪ್ರೇರಣಾಳ ಹೃದಯದ ಮುಚ್ಚಿದ ಬಾಗಿಲನ್ನು ಯಾವಾಗ ತಟ್ಟಿದನೊ ಗೊತ್ತೇ ಆಗಲಿಲ್ಲ. ರವಿಯ ಆ ನಡತೆಯ ಬಗ್ಗೆ ಆಶ್ಚರ್ಯವಾಗಿತ್ತು. ಸೋಮಶೇಖರನ ಸ್ವಭಾವದ ಬಗ್ಗೆ ಚೆನ್ನಾಗಿ ಪರಿಚಿತಳಾಗಿದ್ದ ಪ್ರೇರಣಾ ರವಿಗಾಗಿ ತನ್ನ ಹೃದಯದ ಬಾಗಿಲನ್ನು ಗಟ್ಟಿಯಾಗಿ ಮುಚ್ಚಿಕೊಂಡಿದ್ದಳು. ಆದರೆ ರವಿಯನ್ನು ಬಾಗಿಲಲ್ಲೇ ತಡೆಯಲು ಅವನೇನೂ ಹಣವಾಗಿರಲಿಲ್ಲ. ಅವನು ಒಂಥರಾ ಸುವಾಸನೆಯಾಗಿದ್ದ. ಸುವಾಸನೆಯನ್ನು ಯಾರಾದರೂ ತಡೆಯಲು ಆಗುತ್ತದೆಯೇ? ಅಂತಹ ಸ್ತ್ರೀ-ಪುರುಷರ ನಡುವಿನ ಸ್ನೇಹ ಸಂಬಂಧ ಇಬ್ಬರಲ್ಲೂ ಶುರುವಾಯಿತು. ಆ ಸಂಬಂಧಕ್ಕೆ ತನ್ನ ಮನಸ್ಸು ಒಗ್ಗದಂತೆ ನೋಡಿಕೊಳ್ಳಲು ಪ್ರೇರಣಾ ಅದೆಷ್ಟೋ ಸಲ ಪ್ರಯತ್ನಿಸಿದ್ದಳು. ಅವನ ಕೋಮಲ ಭಾವನೆಯನ್ನು ಅರ್ಥ ಮಾಡಿಕೊಳ್ಳಲು ಅವಳು ಅದೆಷ್ಟೋ ಸಲ ಪತಿಯ ಟೀಕೆಟಿಪ್ಪಣಿಗಳಿಂದ ತನ್ನನ್ನು ತಾನು ಜರ್ಝರಿತಳಾಗಿಸಿಕೊಂಡಿದ್ದಳು.

ಪ್ರೇರಣಾ ತನ್ನ ಜೀವನವೆಂಬ ಪುಸ್ತಕದ ಎಂದೂ ಓದದ ಪುಟಗಳನ್ನು ಓದತೊಡಗಿದಳು. ಅದೆಷ್ಟೋ ಸುಂದರವಾಗಿದ್ದವು. ಆ ಮುಚ್ಚಿದ ಪುಟಗಳು, ಕಾಮನಬಿಲ್ಲಿನ ರಂಗುಗಳಲ್ಲಿ ಮಿಂದು ಬಂದಂಥವು, ಸುವಾಸನೆ ಬೀರುವಂಥವು. ರೆಕ್ಕೆಗಳಂತೆ ಹಗುರವಾದಂಥವು, ಸೂರ್ಯನ ಕಿರಣಗಳಂತೆ ಹೊಳಪುಳ್ಳ. ಮಂಜುಗಡ್ಡೆಯಂತೆ ತಂಪು, ಕಲ್ಲುಸಕ್ಕರೆಯಂತೆ ಮಧುರ. ರವಿಯ ಜೊತೆಗಿದ್ದಾಗ ತಂದೆಯಂತಹ ವಾತ್ಸಲ್ಯ, ತಾಯಿಯಂತಹ ಮಮತೆ, ಅಣ್ಣನಂತಹ ಪ್ರೀತಿ, ಅಕ್ಕನಂತಹ ಸ್ನೇಹ ಹೀಗೆ ಪ್ರೀತಿಯ ಎಲ್ಲ ಭಾಗಳು ಅವನಲ್ಲಿ ಮಿಳಿತವಾಗಿದ್ದವು. ಅವನಲ್ಲಿಲ್ಲದ್ದು ಏನೆಂದರೆ ಹಕ್ಕಿನ ಭಾವನೆ ಹಾಗೂ ಅಧಿಪತ್ಯದ ಭಾವನೆ…….

ಪ್ರೇರಣಾ ರವಿಯ ಅಡಿಕ್ಟ್ ಆಗತೊಡಗಿದ್ದಳು. ಅವನೊಂದಿಗೆ ಮಾತನಾಡದೆ ಅವಳ ದಿನ ಆರಂಭಾಗುತ್ತಲೇ ಇರಲಿಲ್ಲ. ಪ್ರತಿಯೊಂದು ಕೆಲಸಕ್ಕಾಗಿ ರವಿಯ ಸಲಹೆ ತೆಗೆದುಕೊಳ್ಳುವುದು ಅವಳಿಗೆ ಅತ್ಯಗತ್ಯ ಎನಿಸುತ್ತಿತ್ತು. ಈಗ ಅವಳು ರವಿಯ ಜೊತೆಗೆ ಕ್ರೀಡೆಯಿಂದ ಹಿಡಿದು ಸಿನಿಮಾದ ತನಕ, ಸಾಮಾಜಿಕ ವಿಷಯಗಳಿಂದ ಹಿಡಿದು ರಾಜಕೀಯ ವಿಷಯ ಹಾಗೂ ವೈಯಕ್ತಿಕ ವಿಷಯಗಳಿಂದ ಹಿಡಿದು ಸಾರ್ವಜನಿಕ ವಿಷಯಗಳ ತನಕ ಏನೆಲ್ಲ ವಿಷಯಗಳ ಬಗ್ಗೆ ಮುಕ್ತವಾಗಿ ಚರ್ಚಿಸುತ್ತಿದ್ದಳು.

ಅವರಿಬ್ಬರ ನಡುವೆ ಸ್ತ್ರೀ-ಪುರುಷರಾಗಿರುವ ಭೇದವೇ ಕಂಡುಬರುತ್ತಿರಲಿಲ್ಲ. ಅವರು ಇಬ್ಬರೂ ವ್ಯಕ್ತಿಗಳ ಹಾಗೂ ಪವಿತ್ರ ಸಂಬಂಧ ನಿಭಾಯಿಸುತ್ತಿದ್ದರು. ಅವರಿಬ್ಬರೂ ಫೋನಿನಲ್ಲಿದ್ದಾಗ ನಿಮಿಷಗಳು ಹೇಗೆ ಗಂಟೆಗಳಲ್ಲಿ ಬದಲಾಗುತ್ತಿದ್ದವೋ ಗೊತ್ತೇ ಆಗುತ್ತಿರಲಿಲ್ಲ. ಸಾಮಾಜಿಕ ಜಾಲತಾಣಗಳಲ್ಲೂ ಇಬ್ಬರ ನಡುವೆ ಸಂತೋಷಗಳು ನಿರಂತರವಾಗಿ ವಿನಿಮಯವಾಗುತ್ತಿತ್ತು. ಆದರೆ ಇಬ್ಬರೂ ಮರ್ಯಾದೆಯ ಉಲ್ಲಂಘನೆ ಮಾಡುತ್ತಿರಲಿಲ್ಲ. ಅವರ ಸಂದೇಶಗಳಲ್ಲಿ ಅಥವಾ ಮಾತುಕಥೆಯಲ್ಲಿ ಅಶ್ಲೀಲತೆ ಒಂದಿಷ್ಟೂ ಕಂಡುಬರುತ್ತಿರಲಿಲ್ಲ.

ಅವರಿಬ್ಬರ ನಡುವಿನ ಸ್ನೇಹ ಇಬ್ಬರು ವ್ಯಕ್ತಿಗಳ ನಡುವೆ ಇದ್ದಂತಿತ್ತು. ಆದರೆ ಸೋಮಶೇಖರನ ಸ್ವಭಾವವನ್ನು ಪ್ರೇರಣಾ ಹೇಗೆ ತಾನೇ ಮರೆಯಲು ಸಾಧ್ಯ? ಒಬ್ಬ ವ್ಯಕ್ತಿ ಸಭ್ಯನಾಗಲು ತನ್ನ ಅಭ್ಯಾಸಗಳನ್ನು ಬದಲಿಸಿಕೊಳ್ಳಬೇಕಾಗುತ್ತದೆ. ಆದರೆ ತನ್ನ ಮೂಲ ಸ್ವಭಾವ ಬದಲಿಸಿಕೊಳ್ಳುವುದು ಅಸಾಧ್ಯ. ಸೋಮಶೇಖರ್‌ ಬಗ್ಗೆ ಯೋಚಿಸುತ್ತ ರವಿಯ ಸ್ನೇಹವನ್ನು ತಾನೆಲ್ಲಿ ಕಳೆದುಕೊಂಡು ಬಿಡುತ್ತೇನೋ ಎಂಬ ಆತಂಕ ಅವಳನ್ನು ಕಾಡುತ್ತಿತ್ತು. ಹೀಗಾಗಿ ಅವಳು ರವಿಯ ಜೊತೆಗಿನ ಸ್ನೇಹವನ್ನು ಗಂಡನಿಂದ ಬಚ್ಚಿಟ್ಟಿದ್ದಳು.

ರಾತ್ರಿ ಬಹಳ ಹೊತ್ತಿನ ತನಕ ಲ್ಯಾಪ್‌ ಟಾಪ್‌ ನಲ್ಲಿ ಕೆಲಸ ಮಾಡಿದ ಪ್ರೇರಣಾಳ ಕಣ್ಣುಗಳು ಬೆಳಗ್ಗೆ ಬೇಗ ತೆರೆದುಕೊಳ್ಳಲಿಲ್ಲ. ಅವಳು ಬೇಗ ಬೇಗ ಚಹಾತಿಂಡಿ ಮುಗಿಸಿ ಇಬ್ಬರಿಗೂ ಡಬ್ಬಿ ಪ್ಯಾಕ್‌ ಮಾಡಿ ಸ್ನಾನಕ್ಕೆ ತೆರಳಿದಳು. ನಂತರ ಆತುರಾತುರದಲ್ಲಿ ತಿಂಡಿ ತಿಂದು ಬ್ಯಾಗ್‌ ಹೆಗಲಿಗೇರಿಸಿದಳು.

`ಇವತ್ತು ಬಹಳ ತಡವಾಯ್ತಲ್ಲ……’ ಎಂದು ತನಗೆ ತಾನೇ ಹೇಳಿಕೊಳ್ಳುತ್ತಾ, ಸೋಮಶೇಖರನಿಗೆ ಬೈ ಹೇಳಿ ಮನೆಯಿಂದ ಹೊರಗೆ ಹೆಜ್ಜೆ ಹಾಕಿದಳು.

ಸೋಮಶೇಖರ್‌ ಸ್ವಲ್ಪ ಹೊತ್ತಿನ ಬಳಿಕ ಆಫೀಸಿಗೆ ಹೋಗಲಿದ್ದ. ಹೀಗಾಗಿ ಅವನು ನಿರಾಳವಾಗಿ ಕುಳಿತು ತಿಂಡಿ ತಿನ್ನುತ್ತಿದ್ದ.

ಕಾರ್ನರಿನಲ್ಲಿಯೇ ಆಟೋ ಸಿಕ್ಕಿದ್ದರಿಂದ ಅವಳು ನೆಮ್ಮದಿಯ ನಿಟ್ಟುಸಿರುಬಿಟ್ಟಳು. ಆಟೋ ಡ್ರೈವರ್‌ ಸ್ವಲ್ಪ ಫಾಸ್ಟ್ ಹೋಗಪ್ಪ, ಇಲ್ಲದಿದ್ದರೆ ನನ್ನ ಟ್ರೇನ್‌ ಮಿಸ್‌ ಆಗುತ್ತದೆ. ನನಗಿವತ್ತು ಪ್ರೆಸೆಂಟೇಶನ್‌ ಕೊಡಬೇಕು. ಸಕಾಲಕ್ಕೆ ಆಫೀಸಿಗೆ ಹೋಗದೇ ಇದ್ದರೆ ಬಾಸ್‌ ಬಹಳ ಸಿಟ್ಟಾಗುತ್ತಾರೆ, ಎಂದಳು.

ಪ್ರೇರಣಾ ಆಟೋದವನಿಗೆ ಹೇಳುತ್ತಿದ್ದಳೊ, ತನಗೆ ತಾನೇ ಹೇಳಿಕೊಳ್ಳುತ್ತಿದ್ದಳೊ ಗೊತ್ತಿಲ್ಲ. ಆದರೆ ಅವಳ ಗೊಣಗುವಿಕೆಯನ್ನು ಕೇಳಿಸಿಕೊಂಡ ಆಟೋದವನು ತನ್ನ ವೇಗ ಹೆಚ್ಚಿಸಿಕೊಂಡ. ಮೆಟ್ರೋ ಸ್ಟೇಷನ್‌ ತಲುಪುತ್ತಿದ್ದಂತೆಯೇ ಅವಳಿಗೆ ಟ್ರೇನ್‌ ಸಿಕ್ಕಿತು. ಜೊತೆಗೆ ಸೀಟ್‌ ಕೂಡ.

ನಿರಾಳವಾಗಿ ಕುಳಿತುಕೊಳ್ಳುತ್ತಿದ್ದಂತೆಯೇ ಅವಳಿಗೆ ರವಿಯ ನೆನಪಾಯಿತು. ಅವಳು ಮುಗುಳ್ನಗುತ್ತಾ ಮೊಬೈಲ್ ಫೋನ್ ಕೈಗೆತ್ತಿಕೊಳ್ಳಲೆಂದು ಪರ್ಸಿಗೆ ಕೈ ಹಾಕಿದಳು. ಆದರೆ ಅಲ್ಲಿ ಮೊಬೈಲ್ ಫೋನ್‌ ಇರಲಿಲ್ಲ. ಅವಳು ಮತ್ತೆ ಮತ್ತೆ ಪರ್ಸ್‌ ಹುಡುಕಿ ನೋಡಿದಳು. ಆದರೆ ಅದು ಅದರಲ್ಲಿ ಇಟ್ಟಿದ್ದರೆ ತಾನೇ ಸಿಗುವುದು?

`ಛೇ….! ಇದೇನಾಗಿಹೋಯ್ತು? ನಾನು ಮೊಬೈಲ್ ಚಾರ್ಜರ್‌ಗೆ ಹಾಕಿದ್ದೆ. ಹಾಗೆಯೇ ಬಿಟ್ಟುಬಂದೆ. ಇಷ್ಟು ದೊಡ್ಡ ತಪ್ಪನ್ನು ನಾನು ಹೇಗೆ ಎಸಗಲು ಸಾಧ್ಯ?’ ಎಂದು ಯೋಚಿಸಿ ಅವಳ ಮುಖದ ಮೇಲಿನ ಉತ್ಸಾಹವೇ ಕುಗ್ಗಿಹೋಯಿತು.

ಈಗ ನಾನೇನು ಮಾಡಲಿ? ಒಂದು ವೇಳೆ ಸೋಮಶೇಖರ್‌ ಕುತೂಹಲದಿಂದ ನನ್ನ ಫೋನ್‌ ಚೆಕ್‌ ಮಾಡಿದರೇನು ಮಾಡುವುದು? ರವಿ ಕಳಿಸಿದ ಸಂದೇಶಗಳನ್ನು ಪರಿಶೀಲಿಸಿದರೆ ಏನು ಗತಿ? ಸೋಮಶೇಖರ್‌ ತನ್ನ ಮೊಬೈಲನ್ನು ಅವಶ್ಯವಾಗಿ ಚೆಕ್‌ ಮಾಡಿಯೇ ಮಾಡುತ್ತಾರೆ. ತನ್ನ ಮೊಬೈಲ್ ‌ಸ್ಕ್ರೀನನ್ನು ಅನ್‌ ಲಾಕ್‌ ಮಾಡುವುದನ್ನು ಕೂಡ ಅವನಿಗೆ ಹೇಳಿದ್ದಳು. ಅದನ್ನು ಹೇಳದೇ ಇದ್ದಿದ್ದರೆ ಎಷ್ಟು ಚೆನ್ನಾಗಿರುತ್ತಿತ್ತು ಎಂದು ಈಗ ಅವಳಿಗೆ ಅನಿಸತೊಡಗಿತು.

ಏನು ಮಾಡಲಿ ಈಗ…..? ಮನೆಗೆ ವಾಪಸ್‌ ಹೋಗಿ ಫೋನ್‌ ತೆಗೆದುಕೊಂಡು ಬರಲಾ? ಆದರೆ ಗಂಡ ಈವರೆಗೆ ತನ್ನ ಫೋನ್ ನೋಡಿಯೇ ನೋಡಿರುತ್ತಾರೆ. ಒಂದು ವೇಳೆ ಅವರು ರವಿಯ ಸಂದೇಶಗಳನ್ನು ಓದಿದ್ದರೆ ಅವರನ್ನು ತಾನು ಎದುರಿಸುವುದು ಹೇಗೆ……?

ಪ್ರೇರಣಾಳಿಗೆ ಏನನ್ನೂ ನಿರ್ಧರಿಸಲು ಆಗುತ್ತಿರಲಿಲ್ಲ. ಅವಳು ಸೋತು ಬರಲಿರುವ ಸ್ಥಿತಿಯನ್ನು ಕಾಲದ ವಶಕ್ಕೆ ಒಪ್ಪಿಸಿ ತನ್ನನ್ನು ತಾನು ಎದುರಿಸಲು ಮಾನಸಿಕವಾಗಿ ಸನ್ನದ್ಧುಗೊಳಿಸತೊಡಗಿದಳು.

ರವಿ ಟೂರಿಗೆ ಹೋಗಿದ್ದಾನೆ. ಅವಶ್ಯವಾಗಿ ತನಗೆ ಕಾಲ್ ‌ಮಾಡುತ್ತಾನೆ. ಆಫೀಸಿಗೆ ಹೋಗುತ್ತಿದ್ದಂತೆ ಲ್ಯಾಂಡ್‌ ಲೈನಿನಿಂದ ರವಿಗೆ ಕಾಲ್ ಮಾಡಿ, `ಮೊಬೈಲ್ ಮರೆತು ಬಂದಿದ್ದು, ಅದಕ್ಕೆ ಕಾಲ್ ಮಾಡಬೇಡ,’ ಎಂದು ಹೇಳಬೇಕು, ಪ್ರೇರಣಾಳ ಮೆದುಳು ಬಹಳ ವೇಗವಾಗಿ ಯೋಚಿಸುತ್ತಿತ್ತು.

ಈಗ ಏನಾಗುತ್ತೋ ಅದನ್ನು ಎದುರಿಸಬೇಕು. ಒಂದು ವೇಳೆ ತನ್ನ ಖಾಸಗಿತನನ್ನು ಗೌರವಿಸುತ್ತಾ ತನ್ನ ಮೊಬೈಲ್‌ ಚೆಕ್‌ ಮಾಡದೇ ಇದ್ದರೆ ಆಗ ಯಾವುದೇ ಟೆನ್ಶನ್‌ ಇಲ್ಲ. ಒಂದು ವೇಳೆ ಅವರು ಮೊಬೈಲ್ ಚೆಕ್‌ ಮಾಡಿದ್ದರೆ, ರವಿಯ ಬಗ್ಗೆ ಕೇಳಿದರೆ ಅದಕ್ಕೆ ಸೂಕ್ತ ಉತ್ತರ ಕೊಡಬೇಕು. ರವಿಯ ಜೊತೆಗಿನ ಸ್ನೇಹವನ್ನು ತಾನು ಒಪ್ಪಿಕೊಂಡೇ ಒಪ್ಪಿಕೊಳ್ತೀನಿ. ಪರಿಣಾಮ ಏನೇ ಆಗಲಿ, ತಾನು ರವಿಯ ಸ್ನೇಹವನ್ನು ಮನಸ್ಸಿನಲ್ಲಿಯೇ ನಿರ್ಧರಿಸಿಬಿಟ್ಟಿದ್ದಳು. ಈಗ ಅವಳ ಮನಸ್ಸು ಹಗುರವಾದಂತೆ ಭಾಸವಾಗುತ್ತಿತ್ತು.

ಅವಳು ಅದೆಷ್ಟೇ ಗಟ್ಟಿ ಮನಸ್ಸು ಮಾಡಿಕೊಂಡು ಬಂದಿದ್ದರೂ ಮನೆಯ ಒಳಗೆ ಆವರಿಸಿಕೊಂಡಿದ್ದ ಕತ್ತಲು ಅವಳ ಧೈರ್ಯವನ್ನು ಕುಸಿಯುವಂತೆ ಮಾಡಿತು. ಅವಳಿಗೆ ಯಾವುದರ ಭಯವಿತ್ತೊ, ಅದೇ ಆಯಿತು.

“ಇದೆಲ್ಲ ಎಷ್ಟು ದಿನಗಳಿಂದ ನಡೆಯುತ್ತಿದೆ? ಆ ನಿಕೃಷ್ಟ ವ್ಯಕ್ತಿಗೆ ಇಂತಹ ವೈಯಕ್ತಿಕ ಸಂದೇಶ ಕಳಿಸಲು ಅದೇನು ಧೈರ್ಯ. ನೀನೇ ಅವನಿಗೆ ಹೀಗೆ ಕಳಿಸಲು ಪ್ರೇರೇಪಿಸಿರಬೇಕು. ನಮ್ಮದೇ ವಸ್ತು ನಕಲಿ ಆಗಿರುವಾಗ, ನಾವು ಬೇರೆಯವರ ಮೇಲೆ ಆರೋಪ ಹೊರಿಸಿ ಏನು ಪ್ರಯೋಜನ?” ಸೋಮಶೇಖರನ ಧ್ವನಿಯಲ್ಲಿ ಕೋಪ, ನಿರಾಶೆ, ಅಸೂಯೆ ಎಲ್ಲ ಸೇರಿಕೊಂಡಿದ್ದವು.

“ನೀವು ಬೆರಳು ಮಾಡಿ ತೋರಿಸುವಂತೆ ನಮ್ಮಿಬ್ಬರ ನಡುವೆ ಅಂತಹ ಸಂಬಂಧವೇನೂ ಇಲ್ಲ. ರವಿ ನನ್ನ ಸ್ನೇಹಿತ. ಸ್ನೇಹದ ಮಾನದಂಡಗಳು ನಿಮಗೆಲ್ಲಿ ಗೊತ್ತಾಗಬೇಕು,” ಎಂದು ಹೇಳುವುದರ ಮೂಲಕ ವಾದ ವಿವಾದಕ್ಕೆ ಅಂತ್ಯಹಾಡುವ ದೃಷ್ಟಿಯಿಂದ ಹೇಳಿದಳು.

ಆದರೆ ಇಷ್ಟೊಂದು ದೊಡ್ಡ ವಿಷಯ ಅಷ್ಟು ಸುಲಭದರಲ್ಲಿ ಹೇಗೆ ಮುಗಿಯಲು ಸಾಧ್ಯ? ಪ್ರೇರಣಾಳ ಒಪ್ಪಿಗೆಯ ಮಾತುಗಳು ಬೆಂಕಿಗೆ ತುಪ್ಪ ಸುರಿದಂತೆ ಆಗಿಬಿಟ್ಟಿತು. ಸೋಮಶೇಖರನ ಪುರುಷ ಮನಸ್ಸಿನ ಅಹಂನ್ನು ಕೆಣಕಿತು. ಅವನು ನಿರಂತರವಾಗಿ ಕಹಿ ಕಕ್ಕತೊಡಗಿದವು. ಪ್ರೇರಣಾ ಅದನ್ನು ತನ್ನ ಅಂತರಂಗದಲ್ಲಿ ಸೇರಿಸಿಕೊಳ್ಳತೊಡಗಿದ್ದಳು. ಇಬ್ಬರ ನಡುವೆ ಒಂದು ರೀತಿಯ ಶೂನ್ಯ ವಾತಾವರಣ ಪಸರಿಸಿತು. ಆ ರಾತ್ರಿ ಅಡುಗೆ ಮಾಡಲು ಆಗಲಿಲ್ಲ.

ಆ ಘಟನೆಯ ಬಳಿಕ ಸೋಮಶೇಖರ್‌ ತನ್ನ ವರ್ತನೆಯ ಬಗ್ಗೆ ಕ್ಷಮೆ ಯಾಚಿಸಿದ. ಆದರೆ ಪ್ರೇರಣಾ ತನ್ನಷ್ಟಕ್ಕೇ ತಾನು ಸೀಮಿತಗೊಂಡಳು. ಅವಳು ಮನೆಯಲ್ಲಿ ಎಷ್ಟು ಹೊತ್ತು ಇರುತ್ತಿದ್ದಳೊ ಒಂದು ಯಂತ್ರದಂತೆ ತನ್ನ ಕೆಲಸ ಕಾರ್ಯಗಳನ್ನು ನಿರ್ವಹಿಸುತ್ತಿದ್ದಳು. ಊಟತಿಂಡಿಯ ಬಗೆಗೇ ಆಗಿರಬಹುದು, ಸುತ್ತಾಡುವುದೇ ಆಗಿರಬಹುದು, ಯಾರನ್ನೇ ಭೇಟಿಯಾಗಬಹುದಾಗಿರಬಹುದು ಅಷ್ಟೇ ಏಕೆ, ಹಾಸಿಗೆಯಲ್ಲೂ ಅವಳು ತನ್ನಿಚ್ಛೆಯನ್ನು ಹೇಳಿಕೊಳ್ಳುತ್ತಿರಲಿಲ್ಲ. ಯಾವುದೇ ಮಾತಿಗೂ ಪ್ರತಿವಾದ ಕೂಡ ಮಾಡುತ್ತಿರಲಿಲ್ಲ. ತನ್ನ ಕರ್ತವ್ಯವನ್ನಷ್ಟೇ ನಿಭಾಯಿಸುತ್ತಿದ್ದಳು.

ಪ್ರತಿದಿನ ಅವಳು ಮನೆಯಿಂದ ಆಫೀಸಿಗೆ ಹೇಗೆ ಹೋಗುತ್ತಿದ್ದಳೆಂದರೆ ಯಾವುದೊ ಒಂದು ಪಕ್ಷಿ ಪಂಜರದಿಂದ ಮುಕ್ತಿ ಪಡೆದು ಮುಕ್ತ ಆವಕಾಶದಲ್ಲಿ ವಿವಹರಿಸಿದಂತೆ….. ಸಂಜೆ ಮನೆಗೆ ವಾಪಸ್‌ ಆಗುತ್ತಿದ್ದಂತೆ ಆಮೆಯ ಹಾಗೆ ತನ್ನೊಳಗೆ ತಾನೇ ಸೀಮಿತಳಾಗಿಬಿಡುತ್ತಿದ್ದಳು.

ಸೋಮಶೇಖರ್‌ ಜೊತೆಗಿನ ಸಂಬಂಧದಲ್ಲಿ ಮೊದಲಿನ ಉತ್ಸಾಹ ಇಲ್ಲದಿರುವುದರಿಂದ ಪ್ರೇರಣಾಳ ಮನಸ್ಸಿನಲ್ಲಿ ಗೊಂದಲ, ಕಳವಳ, ಬೇಗುದಿ ಹೆಚ್ಚಾಗುತ್ತ ಹೊರಟಿತ್ತು. ಅವಳ ಅಂತರಂಗದಲ್ಲಿ ಅದೆಷ್ಟು ಅಲ್ಲೋಲ ಕಲ್ಲೋಲ ಉಂಟಾಗಿತ್ತೆಂದರೆ ಅದನ್ನು ಅವಳು ಯಾರ ಮುಂದಾದರೂ ಹೇಳಿಕೊಳ್ಳ ಬೇಕೆನಿಸುತ್ತಿತ್ತು. ಅವಳು ಇದೆಲ್ಲವನ್ನು ರವಿಯ ಜೊತೆಗೆ ಹಂಚಿಕೊಳ್ಳಬೇಕು ಎಂದುಕೊಂಡಿದ್ದಳು. ಆದರೆ ರವಿ ಊರಲ್ಲಿಯೇ ಇರಲಿಲ್ಲ.

kuchh-aise-bandhan-hote-hai-2

ಅವಳು ರವಿಯ ವಿವಶತೆಯನ್ನು ಅರ್ಥ ಮಾಡಿಕೊಳ್ಳುತ್ತಿದ್ದಳು. ಅವನಿಗೂ ತನ್ನದೇ ಆದ ಜೀವನ. ತನ್ನದೇ ಆದ ಆದ್ಯತೆಗಳು ಇದ್ದವು. ಆದರೆ ಹೃದಯದ ಮಾತನ್ನು ಕೇಳಿಸಿಕೊಳ್ಳುವವರಾರು? ಅವಳಿಗಂತೂ ಯಾವಾಗಲೂ ಒಬ್ಬ ಸಂಗಾತಿ, ಅದರಲ್ಲೂ ಯಾವುದೇ ಷರತ್ತು ಹಾಕದ ವ್ಯಕ್ತಿ ಬೇಕಿತ್ತು. ಅವಳು ಅದೆಷ್ಟೋ ಸಲ ಸೋಮಶೇಖರ್‌ ಕಡೆ ಕೈಯೊಡ್ಡುತ್ತಿದ್ದಳು. ಆದರೆ ಅವನು ಸ್ವಾಭಿಮಾನದ ಕಾಲುಗಳಲ್ಲಿ ಕೋಳ ಹಾಕಿಬಿಡುತ್ತಿದ್ದ. ರವಿ ಹಾಗೂ ಸೋಮಶೇಖರ್‌ ನಡುವಿನ ಉಯ್ಯಾಲೆಯಲ್ಲಿ ಪ್ರೇರಣಾಳ ನಿರಾಶೆ ಖಿನ್ನತೆಯತ್ತ ಸಾಗುತ್ತಿತ್ತು.

ರಾತ್ರಿ ಬಹಳ ಹೊತ್ತಿನ ತನಕ ಎಚ್ಚರದಿಂದಿದ್ದ ಪ್ರೇರಣಾ ಇಂದು ಬೆಳಗ್ಗೆ ಎದ್ದಾಗ ಅವಳ ತಲೆ ಭಾರವಾದಂತೆ ಭಾಸವಾಗುತ್ತಿತ್ತು. ಎದ್ದೇಳಲು ಪ್ರಯತ್ನಿಸಿದಾಗ ತಲೆ ತಿರುಗಿ ಕೆಳಗೆ ಬಿದ್ದಳು. ಸೋಮಶೇಖರ್‌ ಜಿಗಿದು ಒಮ್ಮಲೆ ಹತ್ತಿರ ಬಂದ. ಆದರೆ ಏನೋ ಯೋಚಿಸಿ ಒಮ್ಮೆಲೆ ನಿಂತುಬಿಟ್ಟ. ಪ್ರೇರಣಾ ಪುನಃ ಎದ್ದೇಳಲು ಪ್ರಯತ್ನಿಸಿದಳು. ಆದರೆ ಈ ಸಲ ಯಶಸ್ವಿಯಾಗಲಿಲ್ಲ. ಹಾಗಾಗಿ ಅವಳು ನಿರಾಶೆಯಿಂದ ಸೋಮಶೇಖರ್‌ ಕಡೆ ನೋಡಿದಳು. ಅವನು ಒಂದು ಕ್ಷಣ ವಿಳಂಬ ಮಾಡದೇ ಅವಳತ್ತ ಧಾವಿಸಿ ತನ್ನ ಬಾಹುಗಳಿಂದ ಎತ್ತಿಹಿಡಿದ.

“ಅರೆ ಪ್ರೇರಣಾ, ನಿನಗೆ ತೀವ್ರ ಜ್ವರ ಬಂದಿದೆ,” ಪತಿಯ ಕಾಳಜಿ ಅವಳಿಗೆ ಬಹಳ ಇಷ್ಟಾಯಿತು. ಅಂದಹಾಗೆ, ಈಗ ರವಿ ತನ್ನ ಜೊತೆಗೆ ಇದ್ದಿದ್ದರೆ ಎಷ್ಟು ಚೆನ್ನಾಗಿರುತ್ತಿತ್ತು ಎಂದು ಯೋಚಿಸಿ ಉಸಿರೆಳೆದುಕೊಂಡಳು. ಅಷ್ಟು ಹೊತ್ತಿಗೆ ಸೋಮಶೇಖರ್‌ ಅವಳಿಗಾಗಿ ಶುಂಠಿ ಚಹಾ ಮಾಡಿಕೊಂಡು ಬಂದ. ಪ್ರೇರಣಾ ಅವನತ್ತ ಕೃತಜ್ಞತೆಯಂದ ನೋಡಿದಳು. ಸೋಮಶೇಖರ್‌ ತಕ್ಷಣವೇ ಫೋನ್‌ ಮಾಡಿ ಡಾಕ್ಟರ್‌ನ್ನು ಕರೆಸಿದ. ಡಾಕ್ಟರ್‌ ಅವಳಿಗೆ ಔಷಧಿ ಬರೆದುಕೊಟ್ಟು ಕೆಲವು ದಿನ ವಿಶ್ರಾಂತಿ ಪಡೆಯಲು ಸಲಹೆ ನೀಡಿದರು.

ಸೋಮಶೇಖರ್‌ ಪ್ರೇರಣಾಳ ಆಫೀಸಿಗೆ ಫೋನ್‌ ಮಾಡಿ 1 ವಾರದ ರಜೆಗೆ ಮನವಿ ಮಾಡಿಕೊಂಡ. ತಾನೂ ಕೂಡ ಆಫೀಸಿನಿಂದ ರಜೆ ಪಡೆದುಕೊಂಡ. ಸೋಮಶೇಖರ್‌ ಚಿಕ್ಕ ಮಗುವಿನಂತೆ ಪ್ರೇರಣಾಳ ಕಾಳಜಿ ವಹಿಸುತ್ತಿದ್ದ. ಆದರೆ ಪ್ರೇರಣಾಗೆ ಆಗಾಗ ರವಿ ನೆನಪು ಬರುತ್ತಿತ್ತು. ಅವಳು ಆಗಾಗ ರವಿಯ ಸಂದೇಶ ಬರಬಹುದೇನೊ ಎಂಬಂತೆ ಪೋನಿನತ್ತ ನೋಡುತ್ತಿದ್ದಳು.

ಸೋಮಶೇಖರ್‌ ತನ್ನ ಬಳಿ ಇರುವುದರಿಂದ ರವಿ ಫೋನ್‌ ಮಾಡಲು ಆಗುತ್ತಿಲ್ಲ ಎಂದು ಅವಳು ಭಾವಿಸಿದಳು. ಆದರೆ ವಾಟ್ಸ್ ಆ್ಯಪ್‌ ನಲ್ಲಿ ಸಂದೇಶವನ್ನಾದರೂ ಕಳಿಸಬಹುದಿತ್ತಲ್ಲ ಎಂದು ಮನಸ್ಸಿನಲ್ಲಿಯೇ ಅಂದುಕೊಂಡಳು.

ಪ್ರೇರಣಾ ಮೇಲಿಂದ ಮೇಲೆ ತನ್ನ ಮೊಬೈಲ್ ಚೆಕ್‌ ಮಾಡುತ್ತಿದ್ದಳು. ಆದರೆ ಪ್ರತಿಸಲ ಅವಳ ನಿರಾಶೆ ಹೆಚ್ಚುತ್ತಾ ಹೊರಟಿತ್ತು. ಮಧ್ಯಾಹ್ನ ಆಗುವ ಹೊತ್ತಿಗೆ ರವಿಯ ನಿರ್ಲಕ್ಷ್ಯತೆಯ ಬಗ್ಗೆ ಅವಳಿಗೆ ಕೋಪ ಉಕ್ಕೇರಿ ಬರುತ್ತಿತ್ತು. ನಮ್ಮಿಬ್ಬರ ನಡುವಿನ ಸಂಬಂಧ ಎಷ್ಟು ಪವಿತ್ರವಾಗಿದೆ, ಆದರೂ ಅವನಿಗೆ ಈ ಹೆದರಿಕೆ ಏಕೆ? ಅಗತ್ಯವಿದ್ದು ಸ್ಪಂದಿಸದ್ದಿದರೆ ಆ ಸಂಬಂಧಕ್ಕೆ ಬೆಲೆಯಾದರೂ ಏನಿದೆ? ಅದರಲ್ಲಿ ಯಾವುದೇ ಡೆಪ್ತ್ ಇರಲಿಲ್ಲವೇ? ಅದು ಅವನಿಗೆ ಕೇವಲ ಟೈಮ್ ಪಾಸ್‌ ಆಗಿತ್ತೆ? ಪ್ರೇರಣಾ ಇಂತಹ ಅನೇಕ ಪ್ರಶ್ನೆಗಳ ಜಾಲದಲ್ಲಿ ಸಿಲುಕಿ ಕಸಿವಿಸಿಗೊಂಡಳು.

ಒಮ್ಮೆಲೆ ಅವಳ ಯೋಚನೆಯ ದಿಸೆಯೇ ಬದಲಾಗಿಹೋಯಿತು. ಸೋಮಶೇಖರ್‌ ತನ್ನೊಂದಿಗಿದ್ದಾಗ ತಾನೆಷ್ಟು ಆತ್ಮವಿಶ್ವಾಸಭರಿತಳಾಗಿರುತ್ತೇನೆ. ಆದರೆ ರವಿಯ ಜೊತೆಗೆ ಸ್ನೇಹದ ಸಂಬಂಧ ಇದ್ದಾಗಲೂ ಅವಳಿಗೇನೊ ಅಪರಿಚಿತ ಭಯ ಕಾಡುತ್ತಿತ್ತು. ಅದೆಷ್ಟು ಜನರಿಗೆ ಸ್ಪಷ್ಟೀಕರಣ ಕೊಡುತ್ತಿರಬೇಕು. ಸೋಮಶೇಖರ್‌ ತನ್ನೆಲ್ಲ ಅಗತ್ಯಗಳಿಗೆ ಸ್ಪಂದಿಸುತ್ತಿದ್ದ, ಜೊತೆಗೇ ಇರುತ್ತಿದ್ದ. ಆದರೆ ರವಿ ಜೊತೆಗಿದ್ದೂ ಕೂಡ ಹೀಗೆ ಮಾಡಲು ಆಗುತ್ತಿರಲಿಲ್ಲ. ಕೊನೆಗೊಮ್ಮೆ ಸಾಮಾಜಿಕ ವಿವಶತೆಯೂ ಒಂದು ರೀತಿಯ ಬಂಧನವೇ ಆಯ್ತಲ್ಲ.

ಆ ಬಳಿಕ ಪ್ರೇರಣಾ ತನಗೆ ಗೊತ್ತಿಲ್ಲದೆಯೇ ಇಬ್ಬರ ನಡುವಿನ ಸಂಬಂಧವನ್ನು ತೂಗಿ ನೋಡತೊಡಗಿದಳು. ಅದರಲ್ಲೂ ಸೋಮಶೇಖರನ ತಕ್ಕಡಿಯ ತಟ್ಟೆಯೇ ಭಾರ ಎನಿಸತೊಡಗಿತು.

ಸೆಕ್ಸ್ ಹಾಗೂ ಜೊತೆ ಜೊತೆಗಿರುವುದರ ಹೊರತಾಗಿ, ವಿವಾಹದಲ್ಲಿ ಎಂತಹ ಕೆಲವು ಸಂಬಂಧಗಳಿರುತ್ತವೆಯೆಂದರೆ, ಅವನ್ನು ಶಬ್ದಗಳಲ್ಲಿ ವ್ಯಾಖ್ಯಾನಿಸಲು ಆಗುವುದಿಲ್ಲ. ರವಿ ಅವಳ ಮಾನಸಿಕ ಅಗತ್ಯವೇನೊ ಆಗಿದ್ದಾನೆ. ಆದರೆ ಅವನ ಜೊತೆ ತನ್ನ ಸಂಬಂಧಗಳಿಗೆ ಯಾವುದೇ ಮಾನ್ಯತೆ ಇರದಿರುವಾಗ, ತಾನು ರವಿಯ ಜೊತೆಗಿನ ಸಂಬಂಧವನ್ನು ಕೊನೆಗೊಳಿಸಿಕೊಳ್ಳಬೇಕೆ? ತಾನು ತನ್ನ ಮನಸ್ಸನ್ನು ಹತ್ಯೆ ಮಾಡಿಕೊಳ್ಳಬೇಕೆ? ಹಾಗಿದ್ದರೆ ತಾನು ಜೀವಿಸುವುದು ಹೇಗೆ? ಪ್ರೇರಣಾಳ ಮಾನಸಿಕ ದ್ವಂದ್ವ ಕೊನೆಗೊಳ್ಳುವ ಮಾತೇ ಎತ್ತುತ್ತಿರಲಿಲ್ಲ. ಅಷ್ಟರಲ್ಲಿ ಸೋಮಶೇಖರ್‌ ಕೋಣೆಯೊಳಗೆ ಬಂದು ಕೇಳಿದ, “ಈಗ ಹೇಗೇನಿಸುತ್ತಿದೆ? ಸೂಪ್‌ ಮಾಡಿಕೊಂಡು ಬಂದೆ. ಬಿಸಿ ಬಿಸಿಯಿರುವಾಗಲೇ ಕುಡಿ. ಬಹಳ ಹಿತಕರ ಎನಿಸುತ್ತೆ,” ಎಂದು ಹೇಳುತ್ತ ಅವಳಿಗೆ ಆಸರೆ ಕೊಟ್ಟು ಎಬ್ಬಿಸಿದ.

ಪ್ರೇರಣಾ ಗಮನಕೊಟ್ಟು ಅವನ ಕಣ್ಣುಗಳಲ್ಲಿ ನೋಡಿದಳು. ಆ ಕಣ್ಣುಗಳಲ್ಲಿ ಯಾವುದೇ ಕಪಟತನ ಕಂಡುಬರಲಿಲ್ಲ. ತನಗಾಗಿ ಪ್ರೀತಿ ಹಾಗೂ ಆಪ್ತಭಾವ ಕಂಡು ಅವಳು ಪುಳಕಿತಳಾದಳು. ಆದರೆ ಭಾವನೆಯ ಹಿಂದೆಯೂ ಈಗಲೂ ಸ್ವಾಮಿತ್ವದ ಭಾವನೆ ಎದ್ದು ಕಾಣುತ್ತಿತ್ತು.

`ನನಗೆ ನಿಮ್ಮ ಪ್ರೀತಿಯ ಸ್ವೀಕೃತಿ ಇದೆ. ನಮ್ಮಿಬ್ಬರ ನಡುವಿನ ಪ್ರೀತಿಯಲ್ಲಿ ಎಷ್ಟರ ಕೊರತೆ ಇದೆಯೊ, ಅಷ್ಟನ್ನು ಭರ್ತಿ ಮಾಡಿಕೊಳ್ಳಲು ಮಾತ್ರ ನಾನು ರವಿಯ ಜೊತೆಗೆ ಸ್ನೇಹ ಇಟ್ಟುಕೊಳ್ತೀನಿ. ನಮ್ಮಿಬ್ಬರ ಸಂಬಂಧ ಶಾಶ್ವತ ಸತ್ಯ. ಆದರೆ ಪ್ರತಿಯೊಂದು ಸಂಬಂಧ ಅಗತ್ಯವಿದೆ. ಸ್ನೇಹ ಸಂಬಂಧ ಕೂಡ ಈ ಸಂಬಂಧದಲ್ಲಿ ನಿಮ್ಮ ಹಕ್ಕುಗಳ ಅತಿಕ್ರಮಣ ಎಂದೂ ಆಗುವುದಿಲ್ಲ ಎನ್ನುವುದು ನನ್ನ ಭರವಸೆ. ನೀವು ನನ್ನನ್ನು ಅರ್ಥ ಮಾಡಿಕೊಳ್ಳಲು ಪ್ರಯತ್ನಿಸ್ತಿಯಲ್ಲ,’ ಎಂದು ಮನಸ್ಸಿನಲ್ಲೇ ಯೋಚಿಸುತ್ತಾ ಪ್ರೇರಣಾ ಸೋಮಶೇಖರ್‌ನ ಹೆಗಲಿಗೆ ಒರಗಿದಳು.

“ನಾನು ಪ್ರೀತಿಯ ಬಂಧನವನ್ನು ಸ್ವಲ್ಪ ಹೆಚ್ಚೇ ಬಿಗಿ ಮಾಡಿದ್ದೆ. ನಿನಗಾಗ ಉಸಿರುಗಟ್ಟಿದಂತೆ ಆಗಿರಬೇಕು. ಅದನ್ನು ಸ್ವಲ್ಪ ಸಡಿಲಗೊಳಿಸುತ್ತೇನೆ. ನನ್ನನ್ನು ಕ್ಷಮಿಸ್ತೀಯಾ ತಾನೇ?” ಎಂದು ಹೇಳುತ್ತಾ ಸೋಮಶೇಖರ್‌ ಅವಳನ್ನು ತನ್ನ ಬಾಹುಗಳಲ್ಲಿ ಬಂಧಿಸಿದ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ