`ನಮ್ಮ ನಡುವೆ ಅದೇನೊ ಆಕರ್ಷಣೆ ಇತ್ತು. ಇಂದು ಪುನಃ ನಿನ್ನನ್ನು ನೋಡಿ ಹೃದಯದ ಧಮನಿ ಧಮನಿಗಳಲ್ಲಿ ಎಂಥದೊ ಸಂಚಲನ ಆರಂಭವಾಯಿತು….’ ಸುಮಾಳನ್ನು ನೋಡುತ್ತಿದ್ದಂತೆ ಅಮಿತನ ಮನಸ್ಸಿನಲ್ಲಿ ಮೇಲ್ಕಂಡ ಸಾಲುಗಳು ಗೊತ್ತಿಲ್ಲದೆ ಹೊರಹೊಮ್ಮಿದವು.

ಅದೇ ಉದ್ದನೆಯ ಕೂದಲು, ಹಣೆಯಲ್ಲಿ ಉದ್ದನೆಯ ಬೊಟ್ಟು, ಕಣ್ಣುಗಳಲ್ಲಿ ಅದೆಷ್ಟೋ ಪ್ರಶ್ನೆಗಳು….. ತನ್ನ ಸೀರೆಯ ಸೆರಗನ್ನು ಸುಮಾ ಸಂಭಾಳಿಸುತ್ತಾ ಇತ್ತ ಕಡೆ ತಿರುಗಿದಾಗ, ಇಬ್ಬರ ಕಣ್ಣುಗಳು ಪರಸ್ಪರ ಮೇಳೈಸಿದವು.

ಅಮಿತ್‌ ಅವಳನ್ನೇ ತದೇಕ ದೃಷ್ಟಿಯಿಂದ ನೋಡುತ್ತ ಇದ್ದುಬಿಟ್ಟ. ಸುಮಾಳ ಕಣ್ಣುಗಳು ಅವನನ್ನು ಕ್ಷಣಾರ್ಧದಲ್ಲಿಯೇ ಗುರುತಿಸಿದ್ದವು. ಅಮಿತ್‌ ಅವಳಿಗೆ ಏನನ್ನೋ ಹೇಳಬೇಕೆಂದುಕೊಂಡಿದ್ದ. ಆದರೆ ಸುಮಾ ತನ್ನನ್ನು ತಾನು ಸಂಭಾಳಿಸಿಕೊಂಡು ತನ್ನ ದೃಷ್ಟಿಯನ್ನು ಬೇರೆ ಕಡೆ ತಿರುಗಿಸಿದಳು. ಒಂದು ಕ್ಷಣದಲ್ಲಿ ದೊರೆತ ಖುಷಿ ಮರುಕ್ಷಣದಲ್ಲಿ ತನ್ನ ಕೈಯಿಂದ ಜಾರಿಹೋಯಿತು ಎಂಬಂತೆ ಅಮಿತ್‌ ಗೆ ಭಾಸವಾಯಿತು. ಸುಮಾ ಕಳ್ಳದೃಷ್ಟಿಯಿಂದ ಅವನತ್ತ ನೋಡಿದಳು. ಅಮಿತ್‌ ಈಗಲೂ ಅವಳ ಕಡೆಯೇ ನೋಡುತ್ತಿದ್ದ.

“ಹಲೋ ಸುಮಾ,” ಅಮಿತ್‌ ಅವಳತ್ತ ನೋಡುತ್ತ ಅವಳ ಹತ್ತಿರ ಹೋದ.

“ಹಲೋ, ನೀವು ಹೇಗಿದೀರಾ?” ಮೆಲು ಧ್ವನಿಯಲ್ಲಿ ಸುಮಾ ಅವನನ್ನು ಕೇಳಿದಳು.

“ನೀನು ಬಿಟ್ಟು ಹೋಗುವಾಗ ಹೇಗಿದ್ದೆನೊ ಹಾಗೆಯೇ ಇದ್ದೇನೆ,” ಎಂದು ಅಮಿತ್‌ ಹೇಳಿದಾಗ, ಸುಮಾ ತನ್ನ ದೃಷ್ಟಿಯನ್ನು ಅವನತ್ತ ಹರಿಸಿ ಮುಗುಳ್ನಗುತ್ತಾ, “ಆದರೆ ಹಾಗೇನೂ ಅನಿಸುವುದಿಲ್ಲ. ಸ್ವಲ್ಪ ಬದಲಾಗಿದ್ದೀರಿ ಅಷ್ಟೇ,” ಎಂದಳು.

“ಹಾಗಾ….?” ಎಂದು ಅಮಿತ್‌ ನಕ್ಕ.

ಇಬ್ಬರೂ ನಾಲ್ಕು ವರ್ಷಗಳ ಬಳಿಕ ಭೇಟಿ ಆಗಿದ್ದರು. 4 ವರ್ಷಗಳ ಹಿಂದೆ ಹೀಗೆಯೇ ಅಮಿತ್‌ ಅವಳನ್ನು ಸ್ಟೇಷನ್‌ ನಲ್ಲಿ ಬೀಳ್ಕೊಂಡಿದ್ದ. ಅಂದು ಸುಮಾ ಅವನ ಜೀವನದಿಂದ ಬಹುದೂರ ಹೊರಟಿದ್ದಳು. ಅಮಿತ್‌ ಅವಳನ್ನು ತಡೆಯಲು ಪ್ರಯತ್ನಿಸಿದ್ದ. ಆದರೆ ಇಬ್ಬರ ಅಹಂ ಅದಕ್ಕೆ ಅಡ್ಡಿಯುಂಟು ಮಾಡಿತ್ತು. ಅವಳು ಹೊರಟಿದ್ದು ತನ್ನ ತವರುಮನೆಗೆ. ಆದರೆ ಅವಳು ಖಾಯಂ ಆಗಿ ಹೋಗುತ್ತಿದ್ದಳು ಎಂಬುದು ಇಬ್ಬರಿಗೂ ಗೊತ್ತಿತ್ತು. ಎರಡು ತಿಂಗಳಲ್ಲಿಯೇ ವಿಚ್ಛೇದನದ ಕಾಗದಪತ್ರಗಳು ಅಮಿತ್‌ ಗೆ ತಲುಪಿದ್ದವು. ಒಂದು ದೀರ್ಘ ಕಾನೂನು ಹೋರಾಟದ ಬಳಿಕ ಇಬ್ಬರ ದಾರಿಗಳು ಬೇರೆ ಬೇರೆ ಆಗಿಹೋದವು.

“ಟೀ ಕುಡಿತೀಯಾ ಅಥವಾ ಕಾಫಿ….?” ಹಳೆಯ ನೆನಪುಗಳನ್ನು ಸ್ಮರಿಸಿಕೊಳ್ಳುತ್ತಾ ಅಮಿತ್‌ ಕೇಳಿದ್ದ.

“ಕಾಫಿ……”

“ನೀನು ಟೀ ಸಹ ಕುಡಿತೀಯಾ ಅಲ್ವಾ?”

“ಬಟ್‌ ಐ ವಿಲ್ ‌ಫ್ರಿಫರ್‌ ಕಾಫಿ…..”

“ಅಫ್‌ ಕೋರ್ಸ್‌ ಈಗಲೇ ತೆಗೆದುಕೊಂಡು ಬರ್ತಿನಿ,” ಎಂದು ಹೇಳುತ್ತಾ ಹೋದ ಅಮಿತ್‌ ನನ್ನು ಹಿಂದಿನಿಂದ ಸುಮಾ ನೋಡುತ್ತಾ ಕುಳಿತುಬಿಟ್ಟಳು. ವಿಚ್ಛೇದನದ ಬಳಿಕ ಅವಳು ಮರು ಮದುವೆ ಮಾಡಿಕೊಂಡಿದ್ದಳು. ಆದರೆ ಅಮಿತ್‌ ಮಾತ್ರ ಇನ್ನೂ ಏಕಾಂಗಿಯಾಗಿಯೇ ಇದ್ದ. ಅವನು ತನ್ನ ಮನಸ್ಸಿನಿಂದ ಅವಳನ್ನು ತೆಗೆದುಹಾಕಲು ಆಗಿರಲಿಲ್ಲ. ಬಹುಶಃ ಇದೇ ಸ್ಥಿತಿ ಸುಮಾಳಿಗೂ ಇತ್ತು.

ಆದರೆ ಮದುವೆಯ ಬಳಿಕ ಆದ್ಯತೆಗಳು ಬದಲಾಗುತ್ತವೆ. ಸುಮಾಳ ಜೀವನದಲ್ಲೂ ಅದೇ ಆಗಿತ್ತು.

“ಮತ್ತೆ ಹೇಗಿದ್ದೀಯಾ? ಎಲ್ಲ ಹೇಗೆ ನಡೀತಾ ಇದೆ?” ಅವಳ ಕೈಗೆ ಕಾಫಿ ಕೊಟ್ಟು, ತನ್ನ ಟೀ ಕಪ್‌ನ್ನು ತುಟಿಗೇರಿಸುತ್ತಾ ಕೇಳಿದ.

ಅದಕ್ಕೆ ದೀರ್ಘ ನಿಟ್ಟುಸಿರು ಬಿಟ್ಟ ಸುಮಾ, “ಎಲ್ಲ ಸರಿಯಾಗಿ ನಡೀತಿದೆ. ಆದರೆ ಇತ್ತೀಚೆಗೆ ನನ್ನ ಆರೋಗ್ಯ ಒಂದಿಷ್ಟು ಕೈ ಕೊಡುತ್ತಿದೆ,” ಎಂದಳು.

“ಯಾಕೆ ಏನಾಯ್ತು?” ಎಂದು ಅಮಿತ್‌ ಚಿಂತೆಯ ಧ್ವನಿಯಲ್ಲಿ ಕೇಳಿದ.

“ಬೇರೇನೂ ಸಮಸ್ಯೆ ಇಲ್ಲ. ಆಸ್ತಮಾದಿಂದ ಒಂದಿಷ್ಟು ಸಮಸ್ಯೆಯಾಗಿ ಉಸಿರಾಟಕ್ಕೆ ತೊಂದರೆ ಆಗ್ತಿದೆ.”

“ಇತ್ತೀಚೆಗೆ ಕೊರೋನಾ ಹಬ್ಬುತ್ತಿದೆ. ಹೀಗಾಗಿ ನೀನು ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕು.”

“ಹೌದು ಅದನ್ನಂತೂ ಮಾಡುತ್ತಿರುವೆ. 2 ದಿನ ಬೆಂಗಳೂರಿನಲ್ಲಿ ಕೆಲಸ ಇದೆ. ಅದನ್ನು ಮುಗಿಸಿಕೊಂಡು ಕಲಬುರ್ಗಿಗೆ ಹೊರಟು ಬಿಡಬೇಕು. ಸಂಜಯ್‌ ಇನ್ನೂ ಕಲ್ಬುರ್ಗಿಯಲ್ಲೇ ಇದ್ದಾರಲ್ಲ.”

“ನಾನೂ ಕೂಡ ಕೆಲಸದ ನಿಮಿತ್ತ ಬೆಂಗಳೂರಿಗೆ ಬಂದಿದ್ದೆ. ನಾನೂ ಕೂಡ ವಾಪಸ್‌ ದಾವಣಗೆರೆಗೆ ಹೋಗಬೇಕಿದೆ.’

“ಅಂದಹಾಗೆ ಅಮಿತ್‌, ನನಗೆ ರಾತ್ರಿ 9ಕ್ಕೆ ಟ್ರೇನ್‌ಇದೆ. ಅದು ಇನ್‌ ಟೈಮ್ ಬರುತ್ತಾ ಇಲ್ವಾ ಸ್ವಲ್ಪ ಕೇಳಿ ಹೇಳ್ತೀರಾ?”

“ಹ್ಞಾಂ, ಈಗಲೇ ಕೇಳ್ತೀನಿ,” ಎಂದು ಹೇಳುತ್ತಾ ಅಮಿತ್‌ ಅತ್ತ ಕಡೆ ಹೊರಟ.

ಅವನು ಸ್ಟೇಷನ್‌ ಮಾಸ್ಟರ್‌ ಬಳಿ ಈ ಬಗ್ಗೆ ಕೇಳಿದಾಗ, ಲಾಕ್‌ ಡೌನ್‌ ಆಗಿರುವುದರಿಂದ ಎಲ್ಲ ಟ್ರೇನ್‌ ಗಳನ್ನು ರದ್ದುಗೊಳಿಸಲಾಗಿದೆ ಎಂಬ ಮಾಹಿತಿ ಸಿಕ್ಕಿತು.

ಅವನು ಹೇಳಿದ್ದನ್ನು ಕೇಳಿ ಅವಳು ಗಾಬರಿಗೊಳಗಾದಳು, “ಈಗೇನು ಮಾಡುವುದು? ಯಾವಾಗ ಟ್ರೇನ್‌ ಸಂಚಾರ ಶುರವಾಗುತ್ತದಂತೆ?”

“ನೋಡು ಸುಮಾ, ಮೇ 31ರ ತನಕ ಟ್ರೇನ್‌ ಗಳನ್ನು ರದ್ದುಗೊಳಿಸಲಾಗಿದೆ. ಈಗ ಎಲ್ಲವೂ ಬಂದ್‌ ಆಗಿವೆ.”

“ಈಗ ನಾನು ಎಲ್ಲಿಗೆ ಹೋಗಬೇಕು? ಇದೆಲ್ಲ ಏನಾಯ್ತು? ಹೋಟೆಲುಗಳಾದರೂ ಇರುತ್ತಾ ಇಲ್ವಾ?” ಸುಮಾ ಗಾಬರಿಗೊಂಡಿದ್ದಳು.

ಅವಳನ್ನು ಸಮಾಧಾನಪಡಿಸುತ್ತಾ ಅಮಿತ್‌, “ಸುಮಾ, ಗಾಬರಿ ಆಗಬೇಡ. ಇಲ್ಲಿ ನನ್ನ ಕಜಿನ್‌ ಬ್ರದರ್‌ ಮನೆ ಇದೆ. ಅದರ  ಬೀಗದ ಕೀ ನನ್ನ ಬಳಿಯೇ ಇದೆ. ಇಲ್ಲಿಗೆ ಬಂದಾಗಲೆಲ್ಲಾ ನಾನು ಅಲ್ಲಿಯೇ ಉಳಿದುಕೊಳ್ಳುವುದು. ಡೋಂಟ್‌ ವರಿ, ನೀನೂ ಕೂಡ ನನ್ನ ಜೊತೆಗೆ ಬಾ. ನನ್ನ ಮೇಲೆ ನಿನಗೆ ನಂಬಿಕೆ ಇದೆ ಅಲ್ವಾ?”

“ಓ.ಕೆ. ಡನ್‌. ಹೋಗೋಣ,” ಎಂದು ಹೇಳುತ್ತಾ ಅವಳು ಅವನ ಜೊತೆ ಹೋದಳು.

ಅಮಿತ್‌ ಅವಳನ್ನು ಕರೆದುಕೊಂಡು ತನ್ನ ಕಜಿನ್‌ ಮನೆಗೆ ಹೋದ. ಒಂದು ಬೆಡ್‌ ರೂಮಿನ ಆ ಮನೆಯ ಹೊರಗಡೆ ಸಾಕಷ್ಟು ಒಳ್ಳೆಯ ಲಾನ್‌ ಇತ್ತು. ಒಂದಷ್ಟು ಮರಗಳು ಸೊಗಸಾಗಿ ಕಾಣುತ್ತಿದ್ದವು. ಆ ಮನೆ ಚಿಕ್ಕದಾಗಿದ್ದರೂ ಬಹಳ ಸುಂದರವಾಗಿತ್ತು. ಮನೆ ತಲುಪಿದ ಬಳಿಕ ಅಲ್ಲಿ ಆದ ಸಮಸ್ಯೆ, ತಾನು ತನ್ನ ಮಾಜಿ ಗಂಡನ ನೆರವು ಪಡೆದದ್ದು ಹಾಗೂ ಅವನದ್ದೇ ಮನೆಯಲ್ಲಿ ಉಳಿದುಕೊಳ್ಳುವ ನಿರ್ಧಾರವನ್ನು ಪತಿ ಸಂಜಯ್‌ ಗೆ ತಿಳಿಸಿದಳು. ಅವಳು ಸುರಕ್ಷಿತವಾಗಿರುವುದನ್ನು ಕೇಳಿ ಸಂಜಯ್‌ ಗೆ ನಿರಾಳವಾಯಿತು.

“ಗುಡ್‌, ಥ್ಯಾಂಕ್ಸ್ ಅಮಿತ್‌,” ಮನೆಯನ್ನು ಸರಿಯಾಗಿ ಗಮನಿಸಿ ಹೇಳಿದಳು ಸುಮಾ.

“ನೀನು ಫ್ರೆಶ್‌ ಆಗು. ನೀನು ನನ್ನ ಮನೆಗೆ ಬಂದ ಗೆಸ್ಟ್. ಹೀಗಾಗಿ ನಾನೇ ನಿನಗೆ ಅಡುಗೆ ಮಾಡಿ ಬಡಿಸ್ತೀನಿ,” ಎಂದ.

“ನೀವು ಅಡುಗೆ ಮಾಡ್ತೀರಾ? ನಾವಿಬ್ಬರು ಜೊತೆಗಿದ್ದಾಗ ನೀವೆಂದೂ ಅಡುಗೆ ಮನೆಗೆ ಬರ್ತಾನೆ ಇರಲಿಲ್ಲ.”

“ಕಾಲ ಮತ್ತು ಪರಿಸ್ಥಿತಿಗಳು ಬಹಳಷ್ಟನ್ನು ಕಲಿಸಿಬಿಡುತ್ತವೆ ಸುಮಾ ಮೇಡಂ, ನೀವೊಮ್ಮೆ ನಾನು ಮಾಡಿದ ಅಡುಗೆ ರುಚಿ ಸವಿದು ನೋಡಿ…..”

“ವಾಹ್…! ವಾಹ್….!! ಬಹಳ ಚೆನ್ನಾಗಿ ಮಾತಾಡೋದನ್ನು ಕಲಿತುಬಿಟ್ಟಿದ್ದೀರಿ,” ಎಂದು ಹಳೆಯದನ್ನು ನೆನಪಿಸಿಕೊಂಡು ಹೇಳಿದಳು. ಬಳಿಕ ಅದನ್ನು ಹೇಳಬಾರದಿತ್ತು ಎಂದುಕೊಂಡಳು.

ನಂತರ ಮಾತು ಬದಲಿಸುತ್ತಾ, “ಅಂದಹಾಗೆ ಅಮಿತ್‌ ನಿಮ್ಮಲ್ಲಿ ಸಾಕಷ್ಟು ಬದಲಾವಣೆ ಬಂದಿದೆ,” ಎಂದಳು.

“ಥ್ಯಾಂಕ್ಯೂ” ಎಂದು ಮುಗುಳ್ನಕ್ಕು ತನ್ನ ಕೆಲಸದಲ್ಲಿ ಮಗ್ನನಾದ. ನಿಜವಾಗಿಯೂ ಅವನು ಸಾಕಷ್ಟು ರುಚಿಯಾದ ಆಹಾರ ಸಿದ್ಧಪಡಿಸಿದ್ದ.

ಸುಮಾ ಬಹಳ ಇಷ್ಟಪಟ್ಟು ಊಟ ಮಾಡಿದಳು. ಬಳಿಕ ಸಾಕಷ್ಟು ಮಾತುಕತೆ ನಡೆಸಿ ಹಳೆಯ ಎಷ್ಟೋ ನೆನಪುಗಳನ್ನು ಮಾಡಿಕೊಟ್ಟಳು. ಮಲಗುವ ಸಮಯ ಬಂದಾಗ ಅಮಿತ್‌ ಹೇಳಿದ, “ಸುಮಾ, ನೀನು ಬೆಡ್‌ ರೂಮಿನಲ್ಲಿ ಆರಾಮಾಗಿ ಮಲಗಿಕೊ,” ಎಂದ.

“ನೀವೆಲ್ಲಿ ಮಲಗಿಕೊಳ್ತೀರಾ…..?”

“ನಾನೇನು, ಎಲ್ಲಿಯಾದರೂ ಮಲಗಬಹುದು. ನಾನು ವರಾಂಡದಲ್ಲಿರುವ ಸೋಫಾದ ಮೇಲೆ ಅಡ್ಜೆಸ್ಟ್ ಮಾಡಿಕೊಳ್ತೀನಿ.”

“ಓಕೆ….” ಎನ್ನುತ್ತಾ ಸುಮಾ ಬೆಡ್‌ ಮೇಲೆ ಮಲಗಿದಳು. ಅವಳಿಗೆ ದಣಿವಾಗಿತ್ತು. ಆದರೂ ರಾತ್ರಿ ಮಗ್ಗಲು ಬದಲಿಸುತ್ತಿದ್ದಳು. ಅವಳ ಮನಸ್ಸಿನಾಳದಲ್ಲಿ ಹಳೆಯ ನೆನಪುಗಳು ಬರುತ್ತಲೇ ಇದ್ದವು. ಅವುಗಳಲ್ಲಿ ಕೆಲವು ಕಹಿ ನೆನಪುಗಳು, ಇನ್ನೂ ಕೆಲವು ಸಿಹಿ ನೆನಪುಗಳಿದ್ದವು.

ಅಮಿತನ ಸ್ಥಿತಿ ಕೂಡ ಅದೇ ಆಗಿತ್ತು. ಬೆಳಗ್ಗೆ 8 ಗಂಟೆಗೆ ಸುಮಾಳಿಗೆ ಎಚ್ಚರವಾಯಿತು. ಅವಳು ಎದ್ದು ಬಂದು ನೋಡಿದಾಗ, ಅಮಿತ್‌ ಸ್ನಾನ ಮುಗಿಸಿ, ತಿಂಡಿ ಸಿದ್ಧಪಡಿಸುತ್ತಿದ್ದ.

“ಅಬ್ಬಬ್ಬಾ, ಏನು ವಿಶೇಷ. ನಾನಂತೂ ಇಂಪ್ರೆಸ್ಡ್ ಆದೆ. ನೀವು ಅಪ್ಪಟ ಗೃಹಿಣಿ ಥರ ಆಗಿಬಿಟ್ಟಿದ್ದೀರಿ…..”

“ಮನೆಯವಳು ಬಿಟ್ಟು ಹೋದರೆ ಇನ್ನೇನಾಗುತ್ತೆ ಹೇಳಿ ಮೇಡಂ…. ಮಾಡಲೇಬೇಕಲ್ಲ ಈ ಹೊಟ್ಟೆಗಾಗಿ……” ಎಂದು ಅಮಿತ್ ಹೇಳಿದ.

ಸುಮಾ ಲಾನ್‌ ನಲ್ಲಿ ಸುತ್ತಾಡತೊಡಗಿದಳು. ಅಮಿತ್‌ ಟೀ ಮಾಡಿಕೊಂಡು ಬಂದ. ಸುಮಾ ಟೀ ಗುಟುಕರಿಸುತ್ತಾ, “ಅಮಿತ್‌, ನೀವು ಕೆಲಸ ಮಾಡ್ತಿರೋದನ್ನು ನೋಡಿ ನನಗೆ ಆಶ್ಚರ್ಯ ಆಗ್ತಿದೆ. ನೋಡಿ, ನಾನು ಒಂದು ವಿಷಯ ಸ್ಪಷ್ಟಪಡಿಸ್ತೀನಿ. ಮಧ್ಯಾಹ್ನದ ಅಡುಗೆ ನಾನು ಮಾಡ್ತೀನಿ. ರಾತ್ರಿಗೂ ಕೂಡ. ನೀವು ಕೇವಲ ಪಾತ್ರೆ ಸ್ವಚ್ಛ ಮಾಡಿ.”

“ನೀವು ಹೇಗೆ ಆಜ್ಞೆ ಮಾಡ್ತಿರೊ ಹಾಗೆ ಮೇಡಂ,” ಎಂದು ನಾಟಕೀಯವಾಗಿ ಹೇಳುತ್ತಾ ಅಮಿತ್‌ ನಕ್ಕ.

ಈ ರೀತಿಯಾಗಿ ಇಬ್ಬರೂ ಸೇರಿ ಲಾಕ್‌ ಡೌನ್‌ ನ ಸಮಯವನ್ನು ಪರಸ್ಪರರಿಗೆ ಸಹಾಯ ಮಾಡುತ್ತ ಕಳೆದರು. ಅಮಿತ್‌ ತನಗೆ ಸಾಧ್ಯವಿದ್ದಷ್ಟು ಮಟ್ಟಿಗೆ ಎಲ್ಲ ಕೆಲಸಗಳನ್ನು ತಾನೇ ಮಾಡುತ್ತಿದ್ದ. ಅವನಿಗೆ ಸುಮಾಳ ಆರೋಗ್ಯದ ಬಗ್ಗೆ ಚಿಂತೆ ಆಗುತ್ತಿತ್ತು. ಮನೆ ಗುಡಿಸುವುದು ಹಾಗೂ ಪಾತ್ರೆ ತೊಳೆಯುವ ಯಾವುದೇ ಕೆಲಸವನ್ನು ಅವಳಿಗೆ ಮಾಡಲು ಬಿಡುತ್ತಿರಲಿಲ್ಲ.

ಅದೊಂದು ದಿನ ಬೆಳಗ್ಗೆ ಸುಮಾಳ ಆರೋಗ್ಯ ಸ್ವಲ್ಪ ಹೆಚ್ಚಾಗಿಯೇ ಹದಗೆಟ್ಟಿತ್ತು. ತನ್ನ ಇನ್‌ ಹೇಲರ್‌ ಎಲ್ಲೂ ಸಿಗುತ್ತಿಲ್ಲವೆಂದು ಅವಳು ಹೇಳಿದಳು. ಅಮಿತ್‌ ತಕ್ಷಣವೇ ಮಾರ್ಕೆಟ್‌ಗೆ ಧಾವಿಸಿದ. ಒಂದು ಮೆಡಿಕಲ್ ಶಾಪಿನಲ್ಲಿ ಇನ್‌ ಹೇಲರ್‌ ಹಾಗೂ ಕೆಲವು ಅವಶ್ಯಕ ಔಷಧಿಗಳನ್ನು ಖರೀದಿಸಿ ತಕ್ಷಣ ಮನೆಗೆ ವಾಪಸ್ಸಾದ. ಈಗ ಒಂದೊಂದು ಕ್ಷಣ ಅಮೂಲ್ಯವಾಗಿತ್ತು. ಸಕಾಲಕ್ಕೆ ಇನ್ ಹೇಲರ್‌ ದೊರಕಿದ ಕಾರಣ ಅವಳಿಗೆ ಸಾಕಷ್ಟು ನಿರಾಳವೆನಿಸಿತು.

ಅಷ್ಟರವರೆಗೆ ಅಮಿತ್‌ ಒಂದು ಬೌಲಿ‌ನಲ್ಲಿ ಬಿಸಿನೀರು ತಂದು ಅದರಲ್ಲಿ 5-6 ಹನಿ ಲ್ಯಾವೆಂಡರ್‌ ಆಯಿಲ್ ‌ಹಾಕಿದ. ಅದನ್ನು ಸುಮಾಳಿಗೆ ಕೊಟ್ಟು ಹಬೆ ತೆಗೆದುಕೊಳ್ಳಲು ಹೇಳಿದ. ಅದರಿಂದಾಗಿ ಅವಳಿಗೆ ಸಾಕಷ್ಟು ಹಿತಕರ ಎನಿಸಿತು.

ಆ ಬಳಿಕ ಅಮಿತ್‌ ಒಂದು ಗ್ಲಾಸ್‌ ಬಿಸಿ ನೀರಿಗೆ ಒಂದು ಚಮಚ ಜೇನುತುಪ್ಪ ಬೆರೆಸಿ ನಿಧಾನವಾಗಿ ಕುಡಿಯಲು ಹೇಳಿದ. ಅದರಿಂದಾಗಿ ಸುಮಾಳ ಆರೋಗ್ಯದಲ್ಲಿ ಸಾಕಷ್ಟು ಚೇತರಿಕೆ ಕಾಣಿಸಿತು. ಅವಳ ಹಣೆಯನ್ನು ಪ್ರೀತಿಯಿಂದ ಸವರುತ್ತಾ, “ಇಂದಿನಿಂದ ನೀನು ಪ್ರತಿ ದಿನ ಅರಿಶಿನ ಅಥವಾ ಜೇನುತುಪ್ಪ ಬೆರೆಸಿದ ಬಿಸಿ ನೀರು ಕುಡಿಯಬೇಕು,” ಎಂದು ಹೇಳಿದ.

ಆಗ ಸುಮಾಳಿಗೆ ಅಮಿತ್‌ ನಿಜವಾಗಿಯೂ ತನ್ನನ್ನು ಪ್ರೀತಿಸುತ್ತಾನೆಂದು ಅರಿವಿಗೆ ಬಂತು. ತನ್ನಿಂದ ಪ್ರತ್ಯೇಕವಾಗಿಯೂ ಅವನಿನ್ನೂ ಹೃದಯಕ್ಕೆ ಹತ್ತಿರವಾಗಿದ್ದಾನೆಂದು ಅನಿಸಿತು.

ಅವಳು ಅಮಿತನ ಬಳಿ ಬಂದು ಕುಳಿತಳು. ಅವನ ಕೈಗಳನ್ನು ಹಿಡಿದು, “ನಾನು ನನ್ನ ಹಳೆಯ ದಿನಗಳನ್ನು ಪೂರ್ತಿಯಾಗಿ ಮರೆಯಲು ಇಚ್ಛಿಸುತ್ತೇನೆ. ಆದರೆ ಇವತ್ತಿನಿಂದ ನಾನು ನಿಮ್ಮೊಂದಿಗೆ ಕಳೆದ ಪ್ರೀತಿಭರಿತ ಕ್ಷಣಗಳನ್ನು ಸದಾ ನೆನಪಲ್ಲಿ ಇಟ್ಟುಕೊಳ್ಳಲು ಪ್ರಯತ್ನಿಸ್ತೀನಿ.  ರಿಯಲೀ ಐ ಮೀನ್‌ ಇಟ್‌.”

“ಸುಮಾ, ಎಕ್ಸ್ ಹಸ್ಬೆಂಡ್‌/ವೈಫ್‌ ಸ್ನೇಹಿತರಾಗಿ ಇರಬಾರದೆಂದು ಯಾರು ಹೇಳ್ತಾರೆ? ಇವತ್ತು ನೀನು ಜೀವನದಲ್ಲಿ ಸಾಕಷ್ಟು ಮುಂದುವರಿದಿರುವೆ. ಇನ್ನು ಮುಂದೆ ನಮ್ಮ ಹಳೆಯ ಜೀವನ ಪುನಃ ಬೆರೆಯಲಾರದು. ಆದಾಗ್ಯೂ ನಾವು ಹೊಸ ಸಂಬಂಧವನ್ನು ಹೊಂದಬಹುದಲ್ವಾ?”

ಆ ದಿನ ಮೊದಲ ಬಾರಿಗೆ ಇಬ್ಬರೂ ಪರಸ್ಪರರನ್ನು ತಬ್ಬಿಕೊಂಡು ಕಣ್ಣೀರು ಸುರಿಸಿದ್ದರು.

ಮರುದಿನ ಬೆಳಗ್ಗೆ ಸುಮಾ ಒಂದು ಹೂವನ್ನು ತೆಗೆದುಕೊಂಡು ಬಂದು ಅವನ ಹತ್ತಿರ ನಿಂತಳು.

“ಇದೇನಿದು?” ಎಂದು ಅವನು ಅಚ್ಚರಿಯಿಂದ ಕೇಳಿದ.

“ಹೂ! ಗುಲಾಬಿ ಹೂ…”

“ಅದು ಗೊತ್ತು. ಆದರೆ ಈ ಬಡಪಾಯಿಯ ಮೇಲೆ ಅಷ್ಟೊಂದು ಅಕ್ಕರೆ ತೋರಿಸುತ್ತಿರುವುದೇಕೆ?”

“ನಾವು ಇಂದೇ ಪ್ರಥಮ ಬಾರಿಗೆ ಭೇಟಿಯಾಗಿದ್ದು ಎಂಬುದನ್ನು ಮರೆತಿರಾ ಈಡಿಯಟ್‌” ಸುಮಾ ತುಂಟತನದ ಧ್ವನಿಯಲ್ಲಿ ಹೇಳಿದಳು.

“ಹೌದು. ನೆನಪಾಯ್ತು. ರಿಯಲೀ ನನಗೆ ಸರ್‌ಪ್ರೈಸ್‌ ಆಗ್ತಿದೆ. ನಿನಗೆ ಆವತ್ತಿನ ದಿನ ಹೇಗೆ ನೆನಪಾಯ್ತು?”

“ಹೌದು ನೆನಪಾಯ್ತು. ನಾವು ಇವತ್ತು ಅದನ್ನು ವಿಶೇಷವಾಗಿ ಆಚರಿಸೋಣ.”

“ಫೈನ್‌.”

ಆ ಬಳಿಕ ಇಬ್ಬರೂ ಸೇರಿ ಮನೆಯಲ್ಲಿ ಒಂದು ಆಕರ್ಷಕ ಡೇಟ್‌ಆರ್ಗನೈಸ್‌ ಮಾಡಿದರು. ಮನೆಯನ್ನು ಹೂಗಳಿಂದ ಅಲಂಕರಿಸಲಾಯಿತು. ಹಾಲ್ ‌ನಲ್ಲಿ ಟೇಬಲ್ ಮತ್ತು ಚೇರುಗಳನ್ನಿಟ್ಟು ಇಬ್ಬರೂ ಊಟ ಮಾಡಿದರು. ಇಬ್ಬರೂ ಪರಸ್ಪರರಿಗೆ ಇಷ್ಟವಾದ ಬಟ್ಟೆಗಳನ್ನು ಧರಿಸಿದರು. ಲಂಚ್‌ ಗಾಗಿ ಇಬ್ಬರಿಗೂ ಇಷ್ಟವಾದ ಪದಾರ್ಥಗಳನ್ನು ಆರ್ಡರ್‌ ಮಾಡುತ್ತಿದ್ದರು. ಒಬ್ಬರು ಹೊರಗಿನಿಂದ ಆರ್ಡರ್‌ ಮಾಡುತ್ತಿದ್ದರು. ಇನ್ನೊಬ್ಬರು ಅವರಿಗೆ ತಂದು ಬಡಿಸುತ್ತಿದ್ದರು. ಇಬ್ಬರೂ ಮೊದಲ ಭೇಟಿಯ ನೆನಪು ಮಾಡಿಕೊಳ್ಳುತ್ತಾ ಪರಸ್ಪರರಿಗಾಗಿ ಹಾಡಿದರು, ಗಿಫ್ಟ್ ಗಳನ್ನು ಕೊಟ್ಟರು. ತಮಾಷೆಯಿಂದ ಕೂಡಿದ ಮಾತುಗಳನ್ನು ಆಡಿದರು. ಬಳಿಕ ಸುಂದರ ಸಂಜೆಯ ಶುಭ ಹಾರೈಸುತ್ತಾ ಪರಸ್ಪರರಿಂದ ವಿದಾಯ ಪಡೆದರು.

ಇದೆಲ್ಲವನ್ನೂ ಅವರು ಎಷ್ಟೊಂದು ಮಜವಾಗಿ, ಫ್ರೆಂಡ್ಲಿ ಅಪ್ರೋಚ್‌ ಜೊತೆಗೆ ಮಾಡಿದರೆಂದರೆ, ಅವರಿಗೆ ಆ ಡೇಟ್‌ ಅತ್ಯಂತ ಸ್ಮರಣಾರ್ಹವಾಗಿ ಪರಿಣಮಿಸಿತು.

ರಾತ್ರಿ ಸುಮಾ ಅಮಿತ್‌ ಗೆ ತನ್ನ ಬಳಿಯೇ ಮಲಗಿಕೊಳ್ಳಲು ಆಹ್ವಾನ ನೀಡುತ್ತಾ, “ನಾನು ಇವತ್ತು ಒಂದು ಸುಂದರ ತಪ್ಪು ಮಾಡಲು ಇಚ್ಛಿಸುವೆ. ನಾನು ಕೇವಲ ಇವತ್ತಿಗಾಗಿ ಮಾತ್ರ ನನ್ನ ಗಂಡನಿಗೆ ಚೀಟ್‌ ಮಾಡುವೆ, ಅದೂ ಕೂಡ ನನ್ನ ಪ್ರೀತಿಯ ಗೆಳೆಯನಿಗಾಗಿ,” ಎಂದಳು.

ಈ ರೀತಿ ಇಬ್ಬರ ಜೀವನದಲ್ಲೂ ಲಾಕ್‌ ಡೌನ್‌ ಆ ದಿನ ಆಯುಷ್ಯದುದ್ದಕ್ಕೂ ಸ್ಮರಣಾರ್ಹ ದಿನವಾಗಿ ಉಳಿಯಿತು. ಹಳೆಯ ತಪ್ಪು ಕಲ್ಪನೆಗಳು ಹಾಗೂ ಕಹಿ ಘಟನೆಗಳು ನಿವಾರಣೆಯಾದವು. ಪರಸ್ಪರರ ಮೇಲೆ ಅಧಿಕಾರ ಇಲ್ಲದಿದ್ದರೂ ಅವರು ಪರಸ್ಪರರಿಗಾಗಿ ಏನು ಮಾಡಲೂ ಸಿದ್ಧರಿದ್ದರು. ಒಂದು ವಿಭಿನ್ನ ಬಗೆಯ ಕಂಫರ್ಟ್‌ ಲೆವೆಲ್ ‌ಇತ್ತು. ತೊಂದರೆದಾಯಕ ಆ ದಿನಗಳಿಗೆ ಅವರು ಹೊಸ ರಂಗು ತುಂಬಿದರು.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ