ಕೊರೋನಾ ಹಾಗೂ ಮಂದಗತಿಯ ಕಾರಣದಿಂದ ಉದ್ಯೋಗಸ್ಥ ಮಹಿಳೆಯರ ಸಂಖ್ಯೆ ನಿರಂತರವಾಗಿ ಕುಸಿಯುತ್ತ ಹೊರಟಿದೆ. ಅಧ್ಯಯನಗಳ ಪ್ರಕಾರ ನಮ್ಮಲ್ಲಿ ಉದ್ಯೋಗಸ್ಥ ಮಹಿಳೆಯರ ಸಂಖ್ಯೆ ಭಾರಿ ಕಡಿಮೆ. ಭಾರತದಲ್ಲಿ ಕೆಲಸ ಮಾಡುವ ವಯೋಮಾನದ 67% ಪುರುಷರಿಗೆ ಹೋಲಿಸಿದಲ್ಲಿ ಮಹಿಳೆಯರ ಸಂಖ್ಯೆ ಕೇಲ 9% ಮಾತ್ರ ಇದೆ.

ಸ್ವಾತಂತ್ರ್ಯಾ ನಂತರದ 74 ವರ್ಷಗಳ ಬಳಿಕ ಉದ್ಯೋಗ ಕ್ಷೇತ್ರದಲ್ಲಿ ಮಹಿಳೆಯರ ಪಾಲ್ಗೊಳ್ಳುವಿಕೆ ಕಡಿಮೆಯೇ. ಅದರಲ್ಲೂ ವಿಶೇಷವಾಗಿ ಯುವ ಜನಾಂಗದ ಮಹಿಳೆಯರಲ್ಲಿ ಉದ್ಯೋಗ ಪಡೆಯುವ ನಿಟ್ಟಿನಲ್ಲಿ ಹತ್ತು ಹಲವು ಆಡ್ಡಿ ಆತಂಕಗಳು ಉಂಟಾಗುತ್ತವೆ.

ಮಹಿಳೆಯರು ಟೆಕ್ನಿಕ್‌ ಹಾಗೂ ಲೋಕೇಶನ್‌ ಟ್ರೇನಿಂಗ್‌ ಪಡೆಯುತ್ತಿರಬಹುದು. ಆದರೆ ಕಾರ್ಯ ಸ್ಥಳಗಳಲ್ಲಿ ಮಾತ್ರ ಈಗಲೂ ಲೈಂಗಿಕ ಅಸಮಾನತೆಯನ್ನು ಕಾಣುವಂತಾಗಿದೆ. ಈಗಲೂ ಅವರ ಪಾಲಿಗೆ ಕಡಿಮೆ ವೇತನದ ನೌಕರಿಗಳು ಮಾತ್ರ ದೊರಕುತ್ತಿವೆ.

ಕೊರೋನಾದ ಹೊಡೆತ

ಇತ್ತೀಚಿನ ವರ್ಷಗಳಲ್ಲಿ ಮಹಿಳೆಯರಿಗಾಗಿ ಫಾರ್ಮ್‌ ಉದ್ಯೋಗಗಳಲ್ಲಿ ಕೆರಿಯರ್‌ ರೂಪಿಸಿಕೊಳ್ಳುತ್ತಿರುವ ಸಂಖ್ಯೆ ಗಣನೀಯವಾಗಿ ಏರುತ್ತಿತ್ತು. ಆದರೆ ಅದೀಗ ಕಡಿಮೆಯಾಗುತ್ತ ಹೊರಟಿದೆ. ಕಾಂಟ್ರ್ಯಾಕ್ಟ್ ಆಧಾರಿತ ಉದ್ಯೋಗಗಳೇ ಹೆಚ್ಚಾಗಿವೆ. ಸಿಎಂಐಇಯ ಅಧ್ಯಯನದ ಪ್ರಕಾರ, ಉದ್ಯೋಗಸ್ಥ ಮಹಿಳೆಯರಿಗೆ ಇದು ಅತ್ಯಂತ ಸಂಕಷ್ಟದ ಸಮಯ.ಕೊರೋನಾದ ಕಾರಣದಿಂದ ಮಾರುಕಟ್ಟೆಯಲ್ಲಿ ಉದ್ಯೋಗ ಸೃಷ್ಟಿ ಕಡಿಮೆಯಾಗಿದೆ. ಉದ್ಯೋಗ ವಯೋಮಾನದ ಶೇ.11ರಷ್ಟು ಮಹಿಳೆಯರಿಗೆ ಹೋಲಿಸಿದರೆ ಶೇ.71 ರಷ್ಟು ಪುರುಷರು ಕೆಲಸ ಮಾಡುತ್ತಿದ್ದಾರೆ. ಇದರ ಹೊರತಾಗಿ ಮಹಿಳೆಯರಲ್ಲಿ ನಿರುದ್ಯೋಗ ಪ್ರಮಾಣ ಶೇ.17ರಷ್ಟಿದೆ, ಪುರುಷರಲ್ಲಿ ಈ ಪ್ರಮಾಣ ಶೇ.6ರಷ್ಟು ಮಾತ್ರ ಇದೆ. ಇದರರ್ಥ ಇಷ್ಟೇ, ಅತ್ಯಂತ ಕಡಿಮೆ ಸಂಖ್ಯೆಯ ಮಹಿಳೆಯರು ಉದ್ಯೋಗ ಶೋಧ ನಡೆಸುತ್ತಿದ್ದು, ಅವರಿಗೂ ಕೂಡ ಪುರುಷರಿಗೆ ಹೋಲಿಸಿದಲ್ಲಿ ಅತ್ಯಂತ ಕಡಿಮೆ ಉದ್ಯೋಗಗಳು ದೊರಕುತ್ತಿವೆ. ಉದ್ಯೋಗ ಕ್ಷೇತ್ರದಲ್ಲಿ ಮಹಿಳೆಯರ ಬಗ್ಗೆ ತೋರಿಸುತ್ತಿರುವ ಭೇದಭಾವದ ಕಾರಣದಿಂದ ಹೀಗಾಗುತ್ತಿದೆ.

ಸಿಎಂಐಇ ಅಂಕಿ ಅಂಶಗಳ ಪ್ರಕಾರ, 2019-20ರಲ್ಲಿ ಮಹಿಳಾ ಶ್ರಮಜೀವಿಗಳ ಸಂಖ್ಯೆ ಕೇವಲ ಶೇ.10.7 ಇತ್ತು. ಅದು ಕಳೆದ ವರ್ಷದ ಲಾಕ್‌ ಡೌನ್‌ ಗೂ ಮುಂಚೆ ಏಪ್ರಿಲ್ 2020ರಲ್ಲಿ 13.9% ಇತ್ತು. ಆ ಬಳಿಕ ಉದ್ಯೋಗ ಹಾನಿಯ ಸ್ಥಿತಿ ತಲುಪಿತು. ನವೆಂಬರ್‌ 2020ರ ತನಕ ಹೆಚ್ಚಿನ ಪುರುಷರು ಮರಳಿ ಉದ್ಯೋಗ ಪಡೆದುಕೊಂಡರು. ಆದರೆ ಮಹಿಳೆಯರ ಬಾಬತ್ತಿನಲ್ಲಿ ಮಾತ್ರ ಹೀಗಾಗಲಿಲ್ಲ. ನವೆಂಬರ್‌ 2020ರ ತನಕ ಶೇ.4.9ರಷ್ಟು ಮಹಿಳೆಯರು ನೌಕರಿ ಕಳೆದುಕೊಂಡಿದ್ದರು. ಅದರಲ್ಲಿ ಅತ್ಯಲ್ಪ ಪ್ರಮಾಣದ ಮಹಿಳೆಯರು ಮಾತ್ರ ನೌಕರಿ ವಾಪಸ್‌ ಪಡೆದುಕೊಂಡರು.

ಆನ್‌ ಲೈನ್‌ ನೆಟ್‌ ವರ್ಕ್‌ ಸಂಸ್ಥೆ

`ಲಿಂಕ್ಡ್ ಇನ್‌ ಆಪರ್ಚುನಿಟಿ 2021’ರ ಸಮೀಕ್ಷೆಯಲ್ಲಿ ಇದೇ ವಿಷಯದ ಬಗ್ಗೆ ಸ್ಪಷ್ಟನೆ ದೊರಕಿತು. ಕೋವಿಡ್‌ ಕಾರಣದಿಂದಾಗಿ ಮಹಿಳೆಯರು ಹೆಚ್ಚು ಪ್ರಭಾವಿತರಾದರು ಹಾಗೂ ಹೆಚ್ಚು ಒತ್ತಡ ಅನುಭವಿಸಬೇಕಾಗಿ ಬಂತು.

ಸಮೀಕ್ಷೆಯಲ್ಲಿ 1865 ವಯೋಮಾನದ ಮಹಿಳೆಯರು ಪಾಲ್ಗೊಂಡಿದ್ದರು. ಅವರಲ್ಲಿ ಆಸ್ಟ್ರೇಲಿಯಾ, ಭಾರತ, ಜಪಾನ್‌, ಚೀನಾ ಸೇರಿದಂತೆ 7 ದೇಶಗಳ ಜನರು ಸೇರಿದ್ದರು. ಕೊರೋನಾದ ಕಾರಣದಿಂದ ಬೇರೆ ದೇಶಗಳಿಗೆ ಹೋಲಿಸಿದರೆ ಭಾರತದ ಮಹಿಳೆಯರೇ ಹೆಚ್ಚಿನ ಸಂಖ್ಯೆಯಲ್ಲಿ ತೊಂದರೆಗೊಳಗಾಗಿದ್ದರು. ಶೇ.90ರಷ್ಟು ಮಹಿಳೆಯರು ಕೊರೋನಾ ಕಾರಣದಿಂದ ಒತ್ತಡದಲ್ಲಿದ್ದಾರೆ. ಪೂರ್ತಿ ಏಷ್ಯಾ ಖಂಡದ ದೇಶಗಳಲ್ಲಿ ಮಹಿಳೆಯರು ತಮ್ಮ ಕೆಲಸ ಹಾಗೂ ಸಂಬಳಕ್ಕಾಗಿ ಹೆಚ್ಚು ಸಂಘರ್ಷ ಮಾಡಬೇಕಾಗಿ ಬಂದಿದೆ. ಅಷ್ಟೇ ಅಲ್ಲ, ಹಲವು ಕಡೆ ಪಕ್ಷಪಾತವನ್ನು ಎದುರಿಸಬೇಕಾಗಿ ಬರುತ್ತಿದೆ. ಶೇ.22ರಷ್ಟು ಮಹಿಳೆಯರು ಹೇಳುವುದೇನೆಂದರೆ, ತಮಗೆ ಪುರುಷರಷ್ಟು ಮಹತ್ವ ನೀಡಲಾಗುತ್ತಿಲ್ಲ.

ದೇಶದ ಶೇ.37ರಷ್ಟು ಉದ್ಯೋಗಸ್ಥ ಮಹಿಳೆಯರು ಹೇಳುವುದೇನೆಂದರೆ, ತಮಗೆ ಪುರುಷರಿಗಿಂತ ಕಡಿಮೆ ಅವಕಾಶಗಳು ದೊರಕುತ್ತಿವೆ. ಇದಕ್ಕೆ ಶೇ.25ರಷ್ಟು ಪುರುಷರು ಒಪ್ಪಿಗೆ ಸೂಚಿಸುತ್ತಾರೆ. ಪುರುಷರಿಗೆ ಹೋಲಿಸಿದರೆ ತಮಗೆ ಕಡಿಮೆ ವೇತನ ದೊರಕುತ್ತಿವೆ ಎನ್ನುವುದು ಮಹಿಳೆಯರ ದೂರು.

ಆಫೀಸು/ಮನೆಯ ಜವಾಬ್ದಾರಿ

kamkaji-mahila2

ಮಹಿಳೆಯರು ಉದ್ಯೋಗಕ್ಕಾಗಿ ಶೋಧ ಮಾಡಲು ಹೊರಟರೆ ಅವರಿಗೆ ಅವಕಾಶಗಳು ಸಿಗುವುದೇ ಕಡಿಮೆ. ಒಂದು ವೇಳೆ ನೌಕರಿ ದೊರೆತರೂ ಮನೆ ಹಾಗೂ ತಾಯ್ತನದ ಜವಾಬ್ದಾರಿಗಳ ಕಾರಣದಿಂದ ನೌಕರಿ ಮಾಡಲು ಅಡೆತಡೆಗಳು ಉಂಟಾಗುತ್ತವೆ. ಮನೆಯವರು ಅವರಿಗೆ ಮನೆ ಸಂಭಾಳಿಸಿಕೊಂಡು ಹೋಗಲು ಸಲಹೆ ನೀಡುತ್ತಾರೆ.

ಉದ್ಯೋಗದಲ್ಲಿ ಅವರ ಶ್ರಮವನ್ನು ನಿರ್ಲಕ್ಷ್ಯ ಮಾಡಲಾಗುತ್ತದೆ. ಮನೆಗೆ ಮರಳಿ ಆಕೆ ನಗುಮೊಗದಿಂದ ಮನೆಗೆಲಸಗಳನ್ನು ಮಾಡಬೇಕು, ಮಕ್ಕಳ ಜವಾಬ್ದಾರಿಯನ್ನು ನಿಭಾಯಿಸಬೇಕು ಎಂದು ಅಪೇಕ್ಷಿಸಲಾಗುತ್ತದೆ. ಇದೇ ಕಾರಣದಿಂದ ಹುಡುಗಿಯರು ಹೆಚ್ಚಿನ ಜವಾಬ್ದಾರಿಗಳ ಕೆಲಸ ನಿಭಾಯಿಸಲು ಹಿಂದೇಟು ಹಾಕುತ್ತಾರೆ.

ಉದ್ಯೋಗಸ್ಥರು ಕೂಡ ಹುಡುಗಿಯರಿಗೆ ಹೆಚ್ಚಿನ ಜವಾಬ್ದಾರಿಯುಳ್ಳ ಹುದ್ದೆ ಕೊಡಲು 100 ಸಲ ಯೋಚಿಸುತ್ತಾರೆ. ಮದುವೆಯ ಬಳಿಕ ಆ ಜವಾಬ್ದಾರಿ ನಿಭಾಯಿಸಲು ಅವರಿಗೆ ಕಷ್ಟಕರವಾಗಿ ಪರಿಣಮಿಸಬಹುದು. ಹೀಗಾಗಿ ಅವರನ್ನು ಕಡಿಮೆ ಜವಾಬ್ದಾರಿಯುಳ್ಳ ಕೆಲಸಗಳಿಗೆ ನೇಮಿಸುತ್ತಾರೆ.

ಮೂರನೇ ಎರಡರಷ್ಟು ಮಹಿಳೆಯರು ಕುಟುಂಬ ಹಾಗೂ ಮನೆ ಜವಾಬ್ದಾರಿಗಳ ಕಾರಣದಿಂದ ಕೆಲಸದಲ್ಲಿ ಭೇದ ಭಾವ ಎದುರಿಸಬೇಕಾಗಿ ಬರುತ್ತಿದೆ.

ಕಡಿಮೆ ವೇತನದ ನೌಕರಿ

ಮನೆಯವರು ಕೂಡ ಮಗಳು ಹಾಗೂ ಸೊಸೆಯಂದಿರಿಗೆ ಎಂತಹ ಉದ್ಯೋಗದ ಅಪೇಕ್ಷೆ ಮಾಡುತ್ತಾರೆಂದರೆ, ಕೆಲಸಕ್ಕಾಗಿ ಹೆಚ್ಚು ಸಮಯ ಕೊಡುವಂತಿರಬಾರದು ಹಾಗೂ ಮನೆ ಸಮೀಪವೇ ಕೆಲಸ ಸಿಗುವಂತಿರಬೇಕು. ಸಂಬಳ ಕಡಿಮೆಯಿದ್ದರೂ ನಡೆಯುತ್ತೆ ಎಂಬ ಧೋರಣೆ ತಾಳುತ್ತಾರೆ. ನಿನ್ನ ಸಂಬಳದಿಂದ ಮನೆ ನಡೆಯುತ್ತಿಲ್ಲ ಎಂಬ ತರ್ಕವನ್ನು ಮನೆಯವರು ಮಂಡಿಸುತ್ತಿರುತ್ತಾರೆ.

ಇವೆಲ್ಲ ಸಂಗತಿಗಳು ಮಹಿಳೆಯರನ್ನು ಕಡಿಮೆ ಸಂಬಳದತ್ತ ದೂಡುತ್ತಿವೆ. ಮನೆ ಹಾಗೂ ಮಕ್ಕಳ ಜವಾಬ್ದಾರಿಯಲ್ಲಿ ನಿರತರಾಗಿರುವ ಮಹಿಳೆಯರು ಕ್ರಮೇಣ ಉದ್ಯೋಗ ಹಾಗೂ ಕೆರಿಯರ್‌  ಕನಸು ಕಾಣುವುದನ್ನು ಮರೆತೇ ಬಿಡುತ್ತಾರೆ ಹಾಗೂ ತಮ್ಮನ್ನು ತಾವು ಮನೆಮಟ್ಟಿಗೆ ಸೀಮಿತಗೊಳಿಸಿಕೊಳ್ಳುತ್ತಾರೆ.

ಮಹಿಳೆಯರು ಮದುವೆಯ ಬಳಿಕ ನೌಕರಿ ಮಾಡದೇ ಇರುವ ಅಥವಾ ಕಡಿಮೆ ಸಂಬಳದ ನೌಕರಿ ಮಾಡುವ ಒಂದು ಕಾರಣ ಇದೇ ಆಗಿರುತ್ತದೆ. ಏಕೆಂದರೆ ಅವರು ನೌಕರಿ ಮಾಡಲು ಇಷ್ಟಪಟ್ಟರೂ ಅವರ ಮೇಲೆ ಅದೆಷ್ಟೋ ನಿರ್ಬಂಧಗಳನ್ನು ಹೇರಲಾಗುತ್ತದೆ.

ಹೀಗಾಗಿ ಮನೆಯ ಹಿರಿಯರು ಉದ್ಯೋಗ ಮಾಡುವ ಮಹಿಳೆಯರಿಗೆ ಸಂಜೆ 7 ಗಂಟೆಯೊಳಗೆ ಮನೆಗೆ ಬಂದು ಸೇರಬೇಕೆಂದು ಎಚ್ಚರಿಕೆ ಕೊಡುತ್ತಾರೆ. ಮೀಟಿಂಗ್‌ ಹಾಗೂ ಅಗತ್ಯ ಕೆಲಸಗಳಿಗಾಗಿ ಹೊರಗಡೆ ಹೋಗಬೇಕಾಗಿ ಬಂದರೆ ಮಹಿಳೆಯರಿಗೆ ಅವರ ಮನೆಯವರು ಅನುಮತಿ ಕೊಡುವುದಿಲ್ಲ. ಮನೆಯ ಯಾರಾದರೂ ಅನಾರೋಗ್ಯ ಪೀಡಿತರಾದರೆ ಮಹಿಳೆ ತನ್ನ ಕೆಲಸಕ್ಕೆ ರಜೆ ಹಾಕಬೇಕಾಗಿ ಬರುತ್ತದೆ.

ಯಾವುದೇ ಮನೆಯಲ್ಲಿ ಪುರುಷನನ್ನೇ ಮನೆಯ ಮುಖ್ಯ ಗಳಿಸುವ ವ್ಯಕ್ತಿ ಎಂದು ಭಾವಿಸಲಾಗುತ್ತದೆ. ಮಹಿಳೆಯರಿಗೆ ಮುಂದೆ ಹೋಗುವ ಅವಕಾಶಗಳು ಕಡಿಮೆ ಸಿಗುತ್ತವೆ. ಹಾಗೆಂದೇ ಅವರು ಕಡಿಮೆ ವೇತನ ದೊರೆಯುವ ನೌಕರಿಗಳನ್ನು ಮಾಡುತ್ತಾರೆ. ಮನೆಗೆಲಸ ಮಾಡುತ್ತಲೇ ಸುಲಭವಾಗಿ ಕೆಲಸ ಮಾಡುವಂತಹ ನೌಕರಿಗಳನ್ನು ಹುಡುಕಲು ಅವರಿಗೆ ಸಲಹೆ ನೀಡಲಾಗುತ್ತದೆ.

ನಗರಗಳಲ್ಲಿ ದಯನೀಯ ಸ್ಥಿತಿ

SMG-02729AI24260

ಸಿಎಂಐಇ ಕಂಜೂಮರ್‌ ಪಿರಮಿಡ್ಸ್ ಹೌಸ್‌ ಹೋಲ್ಡ್ ಸಮೀಕ್ಷೆಯಲ್ಲಿ ಭಾರತೀಯ ಮಹಿಳೆಯರ ವರ್ಕ್‌ ಫೋರ್ಸಿನಲ್ಲಿ ಪಾಲ್ಗೊಳ್ಳುವಿಕೆಯ ಸಂದರ್ಭದಲ್ಲಿ 2 ಅನಪೇಕ್ಷಿತ ಟ್ರೆಂಡುಗಳು ಗೋಚರಿಸುತ್ತವೆ. ಮೊದಲನೆಯದು, ನಗರದ ಸಾಕ್ಷರ ಮಹಿಳೆಯರಿಗೆ ಹೋಲಿಸಿದರೆ, ಗ್ರಾಮೀಣ ಭಾಗದ ಮಹಿಳೆಯರೇ ಹೆಚ್ಚಿನ ಪ್ರಮಾಣದಲ್ಲಿ ಉದ್ಯೋಗ ನಿಮಿತ್ತ ಹೊರಗೆ ಹೋಗುತ್ತಿದ್ದಾರೆ.

2019-2020ರಲ್ಲಿ ಉದ್ಯೋಗ ಮಾಡುವ ಗ್ರಾಮೀಣ ಮಹಿಳೆಯರ ಸಂಖ್ಯೆ 11.3 ರಷ್ಟಿತ್ತು. ಅದೇ ನಗರ ಪ್ರದೇಶದ ಮಹಿಳೆಯರ ಸಂಖ್ಯೆ 9.7 ರಷ್ಟಿತ್ತು. ಹಾಗೆ ನೋಡಿದರೆ, ಎರಡೂ ಸ್ಥಿತಿಗಳು ಸರಿಯಿಲ್ಲ. ಆದರೆ ಓದುಬರಹ ಬಲ್ಲ ಟ್ರೆಂಡ್‌ ಮಹಿಳೆಯರಿಗೆ ಹೆಚ್ಚು ಉತ್ತಮ ಉದ್ಯೋಗದ ಅಪೇಕ್ಷೆ ಮಾಡುವುದು ಸ್ವಾಭಾವಿಕವೇ ಆಗಿದೆ. ಆದರೆ ವಾಸ್ತವ ಅದಕ್ಕೆ ತದ್ವಿರುದ್ಧವಾಗಿದೆ. ಎರಡನೇ ಸಂಗತಿಯೆಂದರೆ, ಯುವ ಮಹಿಳೆಯರಿಗೆ ಸೂಕ್ತ ಉದ್ಯೋಗಾವಕಾಶ ದೊರೆಯುಲ್ಲಿ ಕಷ್ಟಗಳು ಎದುರಾಗುತ್ತಿವೆ.

ಮತ್ತೊಂದು ಅಧ್ಯಯನದ ಪ್ರಕಾರ, ನಗರ ಪ್ರದೇಶದ ಜನಸಂಖ್ಯೆಗೆ ಹೋಲಿಸಿದರೆ ಹಳ್ಳಿಯ ಮಹಿಳೆಯರೇ ಮನೆಯಿಂದ ಹೊರಗೆ ಹೋಗಿ ಕೆಲಸ ಮಾಡುತ್ತಾರೆ. ಗ್ರಾಮೀಣ ಭಾಗದ ಶೇ.35ಕ್ಕಿಂತ ಹೆಚ್ಚು ಮಹಿಳೆಯರು ಮನೆಯಿಂದ ಹೊರಗೆ ಹೋಗಿ ಕೆಲಸ ಮಾಡುತ್ತಾರೆ. ಇವರಲ್ಲಿ ಶೇ.45ರಷ್ಟು ಮಹಿಳೆಯರು ವರ್ಷಕ್ಕೆ 50,000 ರೂ. ಸಹ ಗಳಿಸಲು ಆಗುವುದಿಲ್ಲ. ಅದರಲ್ಲಿ ಶೇ.26 ರಷ್ಟು ಮಾತ್ರ ತಮ್ಮ ಇಚ್ಛೆಗೆ ತಕ್ಕಂತೆ ಕೆಲಸ ಮಾಡುತ್ತಾರೆ.

ನಗರ ಪ್ರದೇಶದಲ್ಲಿ ವಾರ್ಷಿಕ ಆದಾಯ 2 ರಿಂದ 5 ಲಕ್ಷ ರೂ. ಇರುವ ಕುಟುಂಬಗಳ ಶೇ.13ರಷ್ಟು ಮಹಿಳೆಯರು ಮಾತ್ರ ಉದ್ಯೋಗಕ್ಕೆ ಹೋಗುತ್ತಾರೆ. 5 ಲಕ್ಷ ರೂ. ಆದಾಯಕ್ಕಿಂತ ಹೆಚ್ಚು ಆದಾಯ ಇವರು ಕುಟುಂಬಗಳಲ್ಲಿ ಈ ಶೇಕಡವಾರು ಪ್ರಮಾಣ ಶೇ.9 ಆಗಿದೆ. ಅದೇ ಗ್ರಾಮೀಣ ಭಾಗದ 50,000 ರೂ.ಗಳಿಂದ 5 ಲಕ್ಷ ರೂ. ಆದಾಯವಿರುವ ಕುಟುಂಬಗಳಲ್ಲಿ ಮಹಿಳೆಯರು ಕೆಲಸ ಮಾಡುವ ಪ್ರಮಾಣ ಶೇ.1619 ಇದೆ.

ದೌರ್ಜನ್ಯ/ಲೈಂಗಿಕ ಶೋಷಣೆ

IB190602_190602110535807_SM671821

ಇತ್ತೀಚೆಗಷ್ಟೇ ಒಂದು ಎನ್‌ಜಿಓ ಅಂಕಿಅಂಶಗಳನ್ನು ಬಹಿರಂಗಪಡಿಸಿತು. ಅದು ಭಾರತೀಯ ಕಾರ್ಖಾನೆಗಳಲ್ಲಿ ಮಹಿಳೆಯರ ಮೇಲಾಗುತ್ತಿರುವ ದೌರ್ಜನ್ಯವನ್ನು ಆಧರಿಸಿತ್ತು. ಕಾರ್ಖಾನೆಗಳಲ್ಲಿ ಕೆಲಸ ಮಾಡುತ್ತಿರುವ 11,500 ಸ್ತ್ರೀಯರು, ಪುರುಷರು ಹಾಗೂ ಅಲ್ಲಿನ ಮ್ಯಾನೇಜರ್‌ ಗಳನ್ನು ಸಮೀಕ್ಷೆಯಲ್ಲಿ ಒಳಪಡಿಸಲಾಗಿತ್ತು. ಅವರ ಬಗ್ಗೆ ಲೈಂಗಿಕ ಅಸಮಾನತೆ ತೋರಿಸಲಾಗುತ್ತದೆ. ಭಾರತೀಯ ಸಮಾಜದಲ್ಲಿ ಆಗುತ್ತಿರುವ ಭೇದಭಾವ, ದೌರ್ಜನ್ಯ ಹಾಗೂ ಲೈಂಗಿಕ ಶೋಷಣೆಯ ಬಗ್ಗೆ ಈ ಅಂಕಿಅಂಶಗಳು ಸ್ಪಷ್ಟವಾಗಿ ಹೇಳುತ್ತವೆ.

ಈ ಅಧ್ಯಯನದಲ್ಲಿ ಪಾಲ್ಗೊಂಡ ಶೇ.34ರಷ್ಟು ಪುರುಷರು ಹಾಗೂ ಹೆಣ್ಣುಮಕ್ಕಳು ತಾವು ದೌರ್ಜನ್ಯಕ್ಕೆ ಅರ್ಹರು ಎಂದು ಹೇಳಿಕೊಳ್ಳುತ್ತಾರೆ. ಇನ್ನು ಶೇ.36ರಷ್ಟು ಉದ್ಯೋಗಿ, ಒಬ್ಬ ಸೂಪರ್‌ ವೈಸರ್‌ ಯಾವುದೇ ಮಹಿಳಾ ಉದ್ಯೋಗಿಗೆ ಸಜೆಸ್ಟಿವ್ ಕಮೆಂಟ್ಸ್ ಕೊಡುತ್ತಾನೊ, ಅದಕ್ಕೆ ಅವಳು ಆಸಕ್ತಿ ತೋರಿಸಿದರೆ ಅದು ಸೆಕ್ಷುಯಲ್ ಹೆರಾಸ್‌ಮೆಂಟ್‌ ಅಲ್ಲ. ಅಷ್ಟೇ ಅಲ್ಲ, ವರದಿಯ ಪ್ರಕಾರ, ಶೇ.28ಕ್ಕಿಂತ ಹೆಚ್ಚು ಜನರು, ಒಬ್ಬ ಗಂಡ ತನ್ನ ಹೆಂಡತಿಯ ಮೇಲೆ ದೌರ್ಜನ್ಯ ನಡೆಸಿದರೆ ಅದನ್ನು ನ್ಯಾಯ ಸಮ್ಮತ ಎಂದು ಹೇಳುತ್ತಾರೆ.

ಈ ಅಧ್ಯಯನದಲ್ಲಿ ಇಂತಹ ಹಲವು ಕಾರಣಗಳನ್ನು ಹೇಳಲಾಗಿದೆ. ಆ ಕಾರಣಗಳಿಂದಾಗಿ ಮನೆ ಅಥವಾ ಆಫೀಸಿನಲ್ಲಿ ಮಹಿಳೆಯರ ಮೇಲೆ ದೌರ್ಜನ್ಯ ನಡೆಯುತ್ತದೆ. ಮಹಿಳೆಯರನ್ನು ಆರಂಭದಿಂದಲೇ ಪುರುಷರ ಮೇಲೆ ಅವಲಂಬಿತರು ಎಂದು ಹೇಳಲಾಗುತ್ತದೆ. ಹೀಗಾಗಿ ಅವರು ಮನೆ ಹಾಗೂ ಆಫೀಸಿನಲ್ಲಿ ಅವಮಾನಕಾರಕ ಸ್ಥಿತಿಯನ್ನು ಎದುರಿಸಬೇಕಾಗಿ ಬರುತ್ತಿದೆ ಎನ್ನುವುದು ಅತ್ಯಂತ ಸ್ವಾಭಾವಿಕ ಸಂಗತಿ. ಹುದ್ದೆಯೇ ಆಗಿರಬಹುದು ಅಥವಾ ಸಂಬಳ ಎರಡೂ ಬಾಬತ್ತಿನಲ್ಲಿ ಆಕೆ ಪುರುಷನಿಗೆ ಸರಿಸಮಾನ ಅರ್ಹತೆ ಹೊಂದಿದ್ದರೂ ಕೂಡ ಆಕೆಗೆ ಕೆಳಗಿನ ಸ್ಥಾನ ನೀಡಲಾಗುತ್ತದೆ.

ಯೋಚನೆಯಲ್ಲಿ ಬದಲಾವಣೆ

kamkaji-mahila

ಯುಎನ್‌ಡಿಪಿಯ ಒಂದು ವರದಿಯಲ್ಲಿ 75 ದೇಶಗಳ ಅಧ್ಯಯನ ನಡೆಸಲಾಯಿತು. ಈ ದೇಶಗಳಲ್ಲಿ ವಿಶ್ವದ ಶೇ.80ರಷ್ಟು ಜನಸಂಖ್ಯೆ ಇದೆ. ಈ ಅಂಕಿಅಂಶಗಳನ್ನು ವಿಶ್ಲೇಷಣೆ ಮಾಡಿದಾಗ ಕಂಡುಬಂದ ಸಂಗತಿಯೆಂದರೆ, ಮಹಿಳೆಯರಿಗೆ ಸಮಾನತೆ ಪಡೆದುಕೊಳ್ಳುವ ನಿಟ್ಟಿನಲ್ಲಿ ಬಹಳಷ್ಟು ಅದೃಶ್ಯ ಅಡೆತಡೆಗಳನ್ನು ಎದುರಿಸಬೇಕಾಗಿ ಬರುತ್ತದೆ.

ವರದಿಯಲ್ಲಿ ಪ್ರಸ್ತುತಪಡಿಸಿದ ಅಂಕಿಅಂಶಗಳ ಪ್ರಕಾರ, ಇದರಲ್ಲಿ ಪಾಲ್ಗೊಂಡ ಸುಮಾರು ಅರ್ಧಕ್ಕಿಂತ ಹೆಚ್ಚು ಜನರು ಅಭಿಪ್ರಾಯಪಟ್ಟಿದ್ದೇನೆಂದರೆ, ಪುರುಷರೇ ಶ್ರೇಷ್ಠ ರಾಜಕೀಯ ಮುಖಂಡರಾಗಿರುತ್ತಾರೆ. ಶೇ.40ಕ್ಕಿಂತ ಹೆಚ್ಚಿನ ಜನರು ಪುರುಷರೇ ಅತ್ಯುತ್ತಮ ನಿರ್ವಹಣೆಗಾರರಾಗಿರುತ್ತಾರೆ. ಅರ್ಥ ವ್ಯವಸ್ಥೆ ಮಂದಗತಿಯಲ್ಲಿದ್ದಾಗ ಆ ರೀತಿಯ ನೌಕರಿ ಅಥವಾ ನಿರ್ವಹಣೆಯ ಹೊಣೆ ಪುರುಷರಿಗೆ ದೊರಕಬೇಕು ಎನ್ನುವುದು ಅವರ ಅಭಿಪ್ರಾಯ.

ಸಾಮಾನ್ಯವಾಗಿ ಕಂಡುಬರುವ ಸಂಗತಿಯೆಂದರೆ, ಒಂದು ಮನೆಯಲ್ಲಿ ಹುಡುಗ ಹುಡುಗಿ ಇಬ್ಬರೂ ಇದ್ದರೆ, ಹುಡುಗನಿಗೆ ನೌಕರಿಯ ಕಾರಣದಿಂದ ಬೇರೆ ನಗರಕ್ಕೆ ಹೋಗಬೇಕಾಗಿ ಬಂದರೆ ಅದಕ್ಕೇನೂ ಸಮಸ್ಯೆ ಇರುವುದಿಲ್ಲ. ಅದೇ ಹುಡುಗಿ ನೌಕರಿ ನಿಮಿತ್ತ ಹೊರಗೆ ಹೋಗಬೇಕೆಂದರೆ ಅವಳಿಗೆ ಅನುಮತಿ ಸಿಗುವುದಿಲ್ಲ. ಅದೇ ನಗರದಲ್ಲಿ ಯಾವುದಾದರೂ ಚಿಕ್ಕಪುಟ್ಟ ನೌಕರಿ ಮಾಡಿಕೊಂಡು ಮನೆಯವರ ಕಣ್ಮುಂದೆಯೇ ಇರಬೇಕಾಗುತ್ತದೆ.

ಈಗಲೂ ಸಾಮಾಜಿಕ ಬಂಧನಗಳ ಕಾರಣದಿಂದ ಮಹಿಳೆಯರು ಇಷ್ಟಪಟ್ಟು ಕೂಡಾ ಆರ್ಥಿಕ ಬೆಳವಣಿಗೆಯಲ್ಲಿ ತಮ್ಮ ಪಾಲುದಾರಿಕೆ ಕೊಡಲು ಆಗುವುದಿಲ್ಲ. ನಾವು ಎಷ್ಟೇ ಆರ್ಥಿಕ ಸ್ವಾತಂತ್ರ್ಯದ ಬಗ್ಗೆ ಮಾತನಾಡಿದರೂ ಸಹ, ಎಲ್ಲಿಯವರೆಗೆ ಮಹಿಳೆಯರ ಉನ್ನತಿ ಹಾಗೂ ಸ್ವಾತಂತ್ರ್ಯದ  ಕುರಿತಂತೆ ಮುಕ್ತತೆ ಬರುವುದಿಲ್ಲವೋ ಅಲ್ಲಿಯವರೆಗೆ ಆರ್ಥಿಕ ಸ್ವಾತಂತ್ರ್ಯ ಅಪೂರ್ಣವಾಗಿಯೇ ಕಂಡುಬರುತ್ತದೆ.

– ಪಂಕಜಾ

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ