ಕೊರೋನಾ ಹಾಗೂ ಮಂದಗತಿಯ ಕಾರಣದಿಂದ ಉದ್ಯೋಗಸ್ಥ ಮಹಿಳೆಯರ ಸಂಖ್ಯೆ ನಿರಂತರವಾಗಿ ಕುಸಿಯುತ್ತ ಹೊರಟಿದೆ. ಅಧ್ಯಯನಗಳ ಪ್ರಕಾರ ನಮ್ಮಲ್ಲಿ ಉದ್ಯೋಗಸ್ಥ ಮಹಿಳೆಯರ ಸಂಖ್ಯೆ ಭಾರಿ ಕಡಿಮೆ. ಭಾರತದಲ್ಲಿ ಕೆಲಸ ಮಾಡುವ ವಯೋಮಾನದ 67% ಪುರುಷರಿಗೆ ಹೋಲಿಸಿದಲ್ಲಿ ಮಹಿಳೆಯರ ಸಂಖ್ಯೆ ಕೇಲ 9% ಮಾತ್ರ ಇದೆ.
ಸ್ವಾತಂತ್ರ್ಯಾ ನಂತರದ 74 ವರ್ಷಗಳ ಬಳಿಕ ಉದ್ಯೋಗ ಕ್ಷೇತ್ರದಲ್ಲಿ ಮಹಿಳೆಯರ ಪಾಲ್ಗೊಳ್ಳುವಿಕೆ ಕಡಿಮೆಯೇ. ಅದರಲ್ಲೂ ವಿಶೇಷವಾಗಿ ಯುವ ಜನಾಂಗದ ಮಹಿಳೆಯರಲ್ಲಿ ಉದ್ಯೋಗ ಪಡೆಯುವ ನಿಟ್ಟಿನಲ್ಲಿ ಹತ್ತು ಹಲವು ಆಡ್ಡಿ ಆತಂಕಗಳು ಉಂಟಾಗುತ್ತವೆ.
ಮಹಿಳೆಯರು ಟೆಕ್ನಿಕ್ ಹಾಗೂ ಲೋಕೇಶನ್ ಟ್ರೇನಿಂಗ್ ಪಡೆಯುತ್ತಿರಬಹುದು. ಆದರೆ ಕಾರ್ಯ ಸ್ಥಳಗಳಲ್ಲಿ ಮಾತ್ರ ಈಗಲೂ ಲೈಂಗಿಕ ಅಸಮಾನತೆಯನ್ನು ಕಾಣುವಂತಾಗಿದೆ. ಈಗಲೂ ಅವರ ಪಾಲಿಗೆ ಕಡಿಮೆ ವೇತನದ ನೌಕರಿಗಳು ಮಾತ್ರ ದೊರಕುತ್ತಿವೆ.
ಕೊರೋನಾದ ಹೊಡೆತ
ಇತ್ತೀಚಿನ ವರ್ಷಗಳಲ್ಲಿ ಮಹಿಳೆಯರಿಗಾಗಿ ಫಾರ್ಮ್ ಉದ್ಯೋಗಗಳಲ್ಲಿ ಕೆರಿಯರ್ ರೂಪಿಸಿಕೊಳ್ಳುತ್ತಿರುವ ಸಂಖ್ಯೆ ಗಣನೀಯವಾಗಿ ಏರುತ್ತಿತ್ತು. ಆದರೆ ಅದೀಗ ಕಡಿಮೆಯಾಗುತ್ತ ಹೊರಟಿದೆ. ಕಾಂಟ್ರ್ಯಾಕ್ಟ್ ಆಧಾರಿತ ಉದ್ಯೋಗಗಳೇ ಹೆಚ್ಚಾಗಿವೆ. ಸಿಎಂಐಇಯ ಅಧ್ಯಯನದ ಪ್ರಕಾರ, ಉದ್ಯೋಗಸ್ಥ ಮಹಿಳೆಯರಿಗೆ ಇದು ಅತ್ಯಂತ ಸಂಕಷ್ಟದ ಸಮಯ.ಕೊರೋನಾದ ಕಾರಣದಿಂದ ಮಾರುಕಟ್ಟೆಯಲ್ಲಿ ಉದ್ಯೋಗ ಸೃಷ್ಟಿ ಕಡಿಮೆಯಾಗಿದೆ. ಉದ್ಯೋಗ ವಯೋಮಾನದ ಶೇ.11ರಷ್ಟು ಮಹಿಳೆಯರಿಗೆ ಹೋಲಿಸಿದರೆ ಶೇ.71 ರಷ್ಟು ಪುರುಷರು ಕೆಲಸ ಮಾಡುತ್ತಿದ್ದಾರೆ. ಇದರ ಹೊರತಾಗಿ ಮಹಿಳೆಯರಲ್ಲಿ ನಿರುದ್ಯೋಗ ಪ್ರಮಾಣ ಶೇ.17ರಷ್ಟಿದೆ, ಪುರುಷರಲ್ಲಿ ಈ ಪ್ರಮಾಣ ಶೇ.6ರಷ್ಟು ಮಾತ್ರ ಇದೆ. ಇದರರ್ಥ ಇಷ್ಟೇ, ಅತ್ಯಂತ ಕಡಿಮೆ ಸಂಖ್ಯೆಯ ಮಹಿಳೆಯರು ಉದ್ಯೋಗ ಶೋಧ ನಡೆಸುತ್ತಿದ್ದು, ಅವರಿಗೂ ಕೂಡ ಪುರುಷರಿಗೆ ಹೋಲಿಸಿದಲ್ಲಿ ಅತ್ಯಂತ ಕಡಿಮೆ ಉದ್ಯೋಗಗಳು ದೊರಕುತ್ತಿವೆ. ಉದ್ಯೋಗ ಕ್ಷೇತ್ರದಲ್ಲಿ ಮಹಿಳೆಯರ ಬಗ್ಗೆ ತೋರಿಸುತ್ತಿರುವ ಭೇದಭಾವದ ಕಾರಣದಿಂದ ಹೀಗಾಗುತ್ತಿದೆ.
ಸಿಎಂಐಇ ಅಂಕಿ ಅಂಶಗಳ ಪ್ರಕಾರ, 2019-20ರಲ್ಲಿ ಮಹಿಳಾ ಶ್ರಮಜೀವಿಗಳ ಸಂಖ್ಯೆ ಕೇವಲ ಶೇ.10.7 ಇತ್ತು. ಅದು ಕಳೆದ ವರ್ಷದ ಲಾಕ್ ಡೌನ್ ಗೂ ಮುಂಚೆ ಏಪ್ರಿಲ್ 2020ರಲ್ಲಿ 13.9% ಇತ್ತು. ಆ ಬಳಿಕ ಉದ್ಯೋಗ ಹಾನಿಯ ಸ್ಥಿತಿ ತಲುಪಿತು. ನವೆಂಬರ್ 2020ರ ತನಕ ಹೆಚ್ಚಿನ ಪುರುಷರು ಮರಳಿ ಉದ್ಯೋಗ ಪಡೆದುಕೊಂಡರು. ಆದರೆ ಮಹಿಳೆಯರ ಬಾಬತ್ತಿನಲ್ಲಿ ಮಾತ್ರ ಹೀಗಾಗಲಿಲ್ಲ. ನವೆಂಬರ್ 2020ರ ತನಕ ಶೇ.4.9ರಷ್ಟು ಮಹಿಳೆಯರು ನೌಕರಿ ಕಳೆದುಕೊಂಡಿದ್ದರು. ಅದರಲ್ಲಿ ಅತ್ಯಲ್ಪ ಪ್ರಮಾಣದ ಮಹಿಳೆಯರು ಮಾತ್ರ ನೌಕರಿ ವಾಪಸ್ ಪಡೆದುಕೊಂಡರು.
ಆನ್ ಲೈನ್ ನೆಟ್ ವರ್ಕ್ ಸಂಸ್ಥೆ
`ಲಿಂಕ್ಡ್ ಇನ್ ಆಪರ್ಚುನಿಟಿ 2021'ರ ಸಮೀಕ್ಷೆಯಲ್ಲಿ ಇದೇ ವಿಷಯದ ಬಗ್ಗೆ ಸ್ಪಷ್ಟನೆ ದೊರಕಿತು. ಕೋವಿಡ್ ಕಾರಣದಿಂದಾಗಿ ಮಹಿಳೆಯರು ಹೆಚ್ಚು ಪ್ರಭಾವಿತರಾದರು ಹಾಗೂ ಹೆಚ್ಚು ಒತ್ತಡ ಅನುಭವಿಸಬೇಕಾಗಿ ಬಂತು.
ಸಮೀಕ್ಷೆಯಲ್ಲಿ 1865 ವಯೋಮಾನದ ಮಹಿಳೆಯರು ಪಾಲ್ಗೊಂಡಿದ್ದರು. ಅವರಲ್ಲಿ ಆಸ್ಟ್ರೇಲಿಯಾ, ಭಾರತ, ಜಪಾನ್, ಚೀನಾ ಸೇರಿದಂತೆ 7 ದೇಶಗಳ ಜನರು ಸೇರಿದ್ದರು. ಕೊರೋನಾದ ಕಾರಣದಿಂದ ಬೇರೆ ದೇಶಗಳಿಗೆ ಹೋಲಿಸಿದರೆ ಭಾರತದ ಮಹಿಳೆಯರೇ ಹೆಚ್ಚಿನ ಸಂಖ್ಯೆಯಲ್ಲಿ ತೊಂದರೆಗೊಳಗಾಗಿದ್ದರು. ಶೇ.90ರಷ್ಟು ಮಹಿಳೆಯರು ಕೊರೋನಾ ಕಾರಣದಿಂದ ಒತ್ತಡದಲ್ಲಿದ್ದಾರೆ. ಪೂರ್ತಿ ಏಷ್ಯಾ ಖಂಡದ ದೇಶಗಳಲ್ಲಿ ಮಹಿಳೆಯರು ತಮ್ಮ ಕೆಲಸ ಹಾಗೂ ಸಂಬಳಕ್ಕಾಗಿ ಹೆಚ್ಚು ಸಂಘರ್ಷ ಮಾಡಬೇಕಾಗಿ ಬಂದಿದೆ. ಅಷ್ಟೇ ಅಲ್ಲ, ಹಲವು ಕಡೆ ಪಕ್ಷಪಾತವನ್ನು ಎದುರಿಸಬೇಕಾಗಿ ಬರುತ್ತಿದೆ. ಶೇ.22ರಷ್ಟು ಮಹಿಳೆಯರು ಹೇಳುವುದೇನೆಂದರೆ, ತಮಗೆ ಪುರುಷರಷ್ಟು ಮಹತ್ವ ನೀಡಲಾಗುತ್ತಿಲ್ಲ.