ಪ್ರತಿಯೊಂದು ನಗರಕ್ಕೂ ತನ್ನದೇ ಆದ ವೈಶಿಷ್ಟ್ಯತೆ, ಆಕರ್ಷಣೆ ಇದ್ದೇ ಇರುತ್ತದೆ. ಕೆಲವು ನಗರಗಳು ತಮ್ಮ ಇತಿಹಾಸದಿಂದ ನಿಮ್ಮ ಮನಸೆಳೆದರೆ, ಮತ್ತೆ ಕೆಲವು ನಗರಗಳು ತಮ್ಮ ವರ್ತಮಾನದಿಂದ ಚಕಿತಗೊಳಿಸುತ್ತದೆ. ಇಂತಹದೇ ನೈಸರ್ಗಿಕ ದೃಶ್ಯಗಳು ಮತ್ತು ಆಧುನಿಕತೆಯ ಸಮ್ಮಿಶ್ರಣನ್ನೊಳಗೊಂಡ ಟೊರಾಂಟೊ ನಗರ ಪ್ರವಾಸಿಗರ ಆಕರ್ಷಣೆಯ ಕೇಂದ್ರಬಿಂದುವಾಗಿದೆ.

ಟೊರಾಂಟೊದ ಸಿಎನ್‌ ಟವರ್‌ 555  ಮೀಟರ್‌ ಎತ್ತರವಿದ್ದು, ಇದು ಜಗತ್ತಿನ ಅತಿ ಎತ್ತರದ ಕಟ್ಟಡಗಳಲ್ಲೊಂದು. ಇಲ್ಲಿರುವ ಗಾಜಿನ 6 ಲಿಫ್ಟ್ ಗಳು 58 ಸೆಕೆಂಡ್‌ಗಳಲ್ಲಿ ಅಬ್ಸರ್ವೇಶನ್‌ ಡೆಕ್‌ ತನಕ ತಲುಪಿಸುತ್ತವೆ.

1994ರಲ್ಲಿ ನಿರ್ಮಾಣವಾದ ಈ ಬೃಹತ್‌ ಕಟ್ಟಡದ ನೆಲವನ್ನು ಗಾಜಿನಿಂದ ಸಿದ್ಧಪಡಿಸಲಾಗಿದ್ದು, ಅದು ಜಗತ್ತಿನಲ್ಲಿಯೇ ಪ್ರಥಮ ಪ್ರಯತ್ನ ಎಂದು ಹೇಳಲಾಗುತ್ತದೆ. ಪ್ರವಾಸಿಗರು ಮೇಲೆ ಹೋದಂತೆ, ಕಾಲ ಕೆಳಗಿನ ನೆಲವನ್ನು ನೋಡುವ ಅವಕಾಶವನ್ನು ಒದಗಿಸಿಕೊಡುತ್ತದೆ.

ಟವರಿನ ಅಬ್ಸರ್ವೇಶನ್‌ ಡೆಕ್‌ ನಿಂದ 160 ಕಿ.ಮೀ. ದೂರದ ನಯಾಗರಾ ಫಾಲ್ಸನ್ನು ಕಣ್ತುಂಬಿಸಿಕೊಳ್ಳಬಹುದು. ಗಾಳಿ ಇರದೇ ಇದ್ದರೆ ಒಂಟಾರಿಯಾ ಲೇಕ್‌ನ್ನು ದಾಟಿ ನ್ಯೂಯಾರ್ಕ್‌ ಸ್ಟೇಟನ್ನು ಕೂಡ ನೋಡಬಹುದು.

ಇಲ್ಲಿನ 360 ಹೋಟೆಲು‌ಗಳು ಪ್ರತಿ 72 ನಿಮಿಷಗಳಿಗೊಮ್ಮೆ ಸಂಪೂರ್ಣ ಪರಿಭ್ರಮಣ ಮಾಡುತ್ತಾ 1000 ಅಡಿ ಕೆಳಗಿನ ಟೊರಾಂಟೊ ನಗರದ ಬದಲಾದ ದೃಶ್ಯವನ್ನು ನೋಡುವ ಆನಂದ ದೊರಕಿಸಿಕೊಡುತ್ತವೆ.

ವಿಶಿಷ್ಟ ಅನುಭವ

ಸೇಂಟ್‌ ಲಾರೆನ್ಸ್ ಬಜಾರ್‌ : ಇದು ಇಲ್ಲಿನ ಮತ್ತೊಂದು ಪ್ರಮುಖ ಆಕರ್ಷಣೆ. ಇಲ್ಲಿ 3 ಐತಿಹಾಸಿಕ ಕಟ್ಟಡಗಳಿವೆ. ಇಲ್ಲಿ ಆ್ಯಂಟಿಕ್ ಬಜಾರ್‌, ಫುಡ್‌ ಕೋರ್ಟ್‌ ಹಾಗೂ ಪಬ್ಲಿಕ್‌ ಪ್ಲೇಸ್‌ ಗಳಿವೆ. ಮಾರುಕಟ್ಟೆಯಲ್ಲಿ 50 ಬಗೆಯ ಫುಡ್‌ ಜಾಯಿಂಟ್‌ ಗಳಿವೆ. ಇಲ್ಲಿ 200 ವರ್ಷಗಳಷ್ಟು ಹಳೆಯ ಆ್ಯಂಟಿಕ್‌ ಮಾರ್ಕೆಟ್‌ ಹಾಗೂ ಫಾರ್ಮರ್ಸ್‌ ಮಾರ್ಕೆಟುಗಳು ಸೇರುತ್ತವೆ. ಅದು ಕೂಡ ಶನಿವಾರ ಹಾಗೂ ಭಾನುವಾರಗಳಂದು ಮಾತ್ರ.

ಈಡನ್‌ ಸೆಂಟರ್‌ : ಇದು 1979ರಲ್ಲಿ ನಿರ್ಮಾಣವಾಗಿದ್ದು, ಇಟಲಿಯ ಮಿಲಾನ್‌ ನಗರದ `ಗ್ಲಾಸ್‌ ರೂಫ್‌ ಗೆಲೆರಿಯಾ’ ಮಾದರಿಯಲ್ಲಿ ಸಿದ್ಧವಾಗಿದೆ. ಇಲ್ಲಿ ಬಹುಮಹಡಿ ಶಾಪಿಂಗ್‌ ಸೆಂಟರ್‌ಗಳಿಗೆ ಹಲವು ಬಗೆಯ ಅಂಗಡಿಗಳು, ಹೋಟೆಲುಗಳು, ಸಿನಿಮಾ ಮಂದಿರಗಳಿವೆ. ಬ್ಲೂರ್‌ ರಾರ್ಕ್‌ ವಿಲೆ ಟೊರಾಂಟೊದ ಸುಪ್ರಸಿದ್ಧ ಶಾಪಿಂಗ್‌ ಏರಿಯಾ ಆಗಿದೆ.

ನದಿ ದಂಡೆಗೆ ಹೊಂದಿಕೊಂಡಿರುವ ಮಹಾನಗರಗಳ ಹಾಗೆ ಟೊರೊಂಟೊದ ಡೌನ್‌ ಟೌನ್‌ ವಾಟರ್‌ ಫ್ರಂಟ್‌ ಕೂಡ 10 ಎಕರೆ ಸ್ಥಳದಲ್ಲಿ ವ್ಯಾಪಿಸಿದೆ. ಹಾರ್ಬರ್ ಫ್ರಂಟ್‌ ಸೆಂಟರ್‌ನಲ್ಲಿ ಆರ್ಟ್‌ ಗ್ಯಾಲರಿಗಳು, ಥಿಯೇಟರ್‌ ಕ್ರಾಫ್ಟ್ ಬೊಟಿಕ್‌ ಗಳು, ಆಫೀಸ್‌ ಗಳು, ಹೋಟೆಲುಗಳು ಕಾರ್ಯ ನಿರ್ವಹಿಸುತ್ತಿದ್ದು, ಪ್ರವಾಸಿಗರನ್ನು ಆಕರ್ಷಿಸುತ್ತವೆ.

ರಾಯಲ್ ಅಂಟಾರಿಯೊ ಸಂಗ್ರಹಾಲಯ ಕೆನಡಾದ ಅತಿದೊಡ್ಡ ವಸ್ತು ಸಂಗ್ರಹಾಲಯವಾಗಿದ್ದು, ಇದು ಜಗತ್ತಿನ 10 ವಸ್ತು ಸಂಗ್ರಹಾಲಯಗಳಲ್ಲಿ ಒಂದೆನಿಸಿಕೊಂಡಿದೆ. ನೈಸರ್ಗಿಕ ಇತಿಹಾಸದ ಜೊತೆಗೆ ಸಾಂಸ್ಕೃತಿಕ ಇತಿಹಾಸವನ್ನು ಬಿಂಬಿಸುವ ರಾಯಲ್ ಅಂಟಾರಿಯೊ ಉತ್ತರ ಅಮೆರಿಕಾದ ಅತ್ಯುನ್ನತ ಆರ್ಟ್‌ ಮ್ಯೂಸಿಯಂ ಆಗಿದೆ.

ಅತಿ ದೊಡ್ಡ ಆಕರ್ಷಣೆ 1969ರಲ್ಲಿ ಸ್ಥಾಪನೆಗೊಂಡ ವಿಜ್ಞಾನ ಕೇಂದ್ರದಲ್ಲಿ ಪರಿಸರ, ಇನ್‌ ಫರ್ಮೇಶನ್‌ ಹೈವೆ ಮುಂತಾದವುಗಳ ಬಗ್ಗೆ ವೈವಿಧ್ಯಮಯ ಪ್ರದರ್ಶನಗಳು ಏರ್ಪಡಾಗುತ್ತಿರುತ್ತವೆ. ಇತಿಹಾಸ ಅಥವಾ ವಾಸ್ತುಕಲೆಯ ಪ್ರೇಮಿಗಳಿಗೆ ಕಾಸಾ ಲೋಮಾ ವಿಶಿಷ್ಟತೆಯ ಅನುಭವ ನೀಡುತ್ತದೆ. 1900ರಲ್ಲಿ ಟೊರಾಂಟೊದ ಶ್ರೀಮಂತ ವ್ಯಾಪಾರಿ ಸರ್‌ ಹೆನ್ರಿ ಫಿಲ್ಯಾಟ್‌ ಕ್ಯಾಲಿಫೋರ್ನಿಯಾದ ಹರ್ಸಕ್ಸ್ ಕ್ಯಾಸ್ಟಲ್ ಮಾದರಿಯಲ್ಲಿ ಈ ಮ್ಯೂಸಿಯಂನ್ನು ಸ್ಥಾಪಿಸಿದರು.

ಬೆಟ್ಟದ ಮೇಲೆ 5 ಎಕರೆ ಪ್ರದೇಶದಲ್ಲಿ ನಿರ್ಮಾಣವಾಗಿರುವ ಪ್ರಸಿದ್ಧ ಅರಮನೆ ಯೂರೋಪಿಯನ್‌ ವೈಭವವನ್ನು ಬಿಂಬಿಸುತ್ತದೆ. ರಾಜ ಮನೆತನದ ಸುಖ ಸೌಲಭ್ಯಗಳು, ಆಧುನಿಕವಾಗಿ ಅಲಂಕರಿಸಿರುವ ಕೋಣೆಗಳು, 800 ಅಡಿ ಸುರಂಗ ಮಾರ್ಗ, ಟವರ್‌ ಹಾಗೂ ಅಲ್ಲಿನ ತೋಟದ ಅಂದಚೆಂದ ಮನ ಸೆಳೆಯುತ್ತದೆ.

ಅಂಟಾರಿಯೊ ಪ್ಲೇಸ್‌ : 90 ಎಕರೆ ಪ್ರದೇಶದಲ್ಲಿ ನಿರ್ಮಾಣವಾಗಿರುವ ಇದು ಸಾಂಸ್ಕೃತಿಕ ಹಾಗೂ ಬಹುಮಹಡಿ ಮನರಂಜನಾ ಸ್ಥಳವಾಗಿದೆ. ಈ ರೈಡ್‌ ಎಲ್ಲರಿಗೂ ಮನರಂಜನೆ ನೀಡುವ ಅದ್ಭುತ ತಾಣವಾಗಿದೆ.

ಕೆನಡಾದ ಶಾಸ್ತ್ರೀಯ ಪ್ರದರ್ಶನಗಳು ಕೆನಡಿಯನ್‌ ನ್ಯಾಷನಲ್ ಎಕ್ಸಿಬಿಷನ್‌ ನಲ್ಲಿ ನಡೆಯುತ್ತವೆ. ಕಳೆದ 130 ವರ್ಷಗಳಿಂದ ಇಲ್ಲಿ ಪ್ರತಿ ವರ್ಷ 18 ದಿನಗಳ ಕಾಲ ಎಕ್ಸಿಬಿಷನ್‌ ನಡೆಯುತ್ತದೆ. ಅದು ಎಲ್ಲ ವಯಸ್ಸಿನವರಿಗೂ ಮನರಂಜನೆ ನೀಡುತ್ತದೆ. ಇಲ್ಲಿ ಹಲವು ಬಗೆಯ ಶಿಕ್ಷಣ ಸಂಸ್ಥೆಗಳಿದ್ದು, ಪ್ರತಿ ವರ್ಷ ವಿದ್ಯಾರ್ಜನೆಗೆಂದು ಸಾಕಷ್ಟು ಸಂಖ್ಯೆಯ ವಿದ್ಯಾರ್ಥಿಗಳು ಕೆನಡಾಕ್ಕೆ ಬರುತ್ತಾರೆ.

ಅಂಟಾರಿಯೊ ಲೇಕಿನ 350 ಎಕರೆ ಪ್ರದೇಶದಲ್ಲಿ `ದಿ ಎಕ್ಸ್ ಎಕ್ಸಿಬಿಷನ್‌’ ಮನರಂಜನೆ, ಸಫಾರಿ, ಆಟ ಹಾಗೂ ಕೃಷಿ ಚಟುವಟಿಕೆಗಳಿಗೆ ಹೇಳಿ ಮಾಡಿಸಿದ ತಾಣವಾಗಿದೆ.

ಇಲ್ಲಿ ಪ್ರತಿ ವರ್ಷ ನವೆಂಬರ್‌ ನಲ್ಲಿ ಚಳಿಗಾಲದ ಅಗ್ರಿಫೇರ್‌ ನಡೆಯುತ್ತದೆ. ನೀವು ಟೊರಾಂಟೊ ನಗರದ ಡೌನ್‌ ಟೌನ್‌ ನಲ್ಲಿದ್ದು, ನಗರದ ಜಂಜಾಟಗಳಿಂದ ಕೆಲವು ಗಂಟೆಗಳ ಕಾಲ ಶಾಂತರಾಗಿರಲು ಬಯಸುತ್ತೀರೆಂದರೆ, ಐತಿಹಾಸಿಕ ಡಿಸ್ಟಿಲರಿ ಡಿಸ್ಟ್ರಿಕ್ಟ್ ಅಂತಹ ಒಂದು ವಿಶಿಷ್ಟ ಸ್ಥಳ. ಇಲ್ಲಿ ಕೇವಲ ನಡಿಗೆ ಮಾತ್ರದಿಂದ ಸುತ್ತಾಡಬಹುದು. ಇಲ್ಲಿ ಅತಿ ದೊಡ್ಡ ಔದ್ಯೋಗಿಕ ವಸ್ತು ಸಂಗ್ರಹಾಲಯವಿದ್ದು ಇದು ಕಲೆ ಹಾಗೂ ಔದ್ಯೋಗಿಕ ಸಂಸ್ಕೃತಿಯ ಉತ್ತೇಜನಕ್ಕೆ ಸಮರ್ಪಿತವಾಗಿದೆ. ಇಲ್ಲಿಯೂ ಕೂಡ ಆರೋಗ್ಯ ಕೇಂದ್ರಗಳು, ರೆಸ್ಟೋರೆಂಟ್‌ ಗಳು ಹಾಗೂ ಇತರೆ ಸೌಲಭ್ಯಗಳು ಹೇರಳ ಪ್ರಮಾಣದಲ್ಲಿವೆ. ಇಲ್ಲಿ ಪ್ರತಿವರ್ಷ ಜೂನ್‌ ನಲ್ಲಿ `ಬೂಸ್ ಫೆಸ್ಟಿವಲ್‌’ ನಡೆಯುತ್ತದೆ.

ರೋಮಾಂಚಕ ವಾತಾವರಣ

ಉತ್ತರ ಅಮೆರಿಕದ ಎರಡನೇ ಅತಿ ದೊಡ್ಡ ಚೈನಾ ಟೌನ್‌ ಟೊರಾಂಟೊದಲ್ಲಿದೆ. ಆಭರಣಗಳು, ಬಟ್ಟೆಗಳು ಹಾಗೂ ಗೃಹಬಳಕೆ ವಸ್ತುಗಳು ಇಲ್ಲಿ ಅತಿ ಅಗ್ಗದ ದರದಲ್ಲಿ ಲಭಿಸುತ್ತವೆ. ಇದರ ಹೊರತಾಗಿ ಇಲ್ಲಿ ಚೈನೀಸ್‌ ಮತ್ತು ಭಾರತೀಯ ಖಾದ್ಯಗಳು ಲಭಿಸುತ್ತವೆ.

ರೋಜರ್ಸ್‌ ಸೆಂಟರ್‌

ಮೊದಲು ಸ್ಕೈ ರೋವ್‌ ಹೆಸರಿನಿಂದ ಕರೆಯಲ್ಪಡುತ್ತಿತ್ತು. ಇದು ವಿಶಿಷ್ಟ `ರೊಟ್ರ್ಯಾಕೈಬ್‌ ರೂಫ್‌’ ಹಿತಕರ ವಾತಾವರಣದಲ್ಲಿ ಮಾತ್ರ ತೆರೆಯುತ್ತದೆ. ಮಳೆಗಾಲ ಹಾಗೂ ಚಳಿಗಾಲದಲ್ಲಿ ಇದು ಸ್ಥಗಿತಗೊಂಡಿರುತ್ತದೆ. ಅಷ್ಟೊಂದು ದೊಡ್ಡ ರೂಫ್‌ತೆರೆಯುವುದು ಮುಚ್ಚುವುದು ನಿಜಕ್ಕೂ ಅಚ್ಚರಿದಾಯಕ ಸಂಗತಿಯೇ ಹೌದು. ಇಲ್ಲಿ ಬಹು ದೊಡ್ಡ ಪ್ರಮಾಣದಲ್ಲಿ ಮನರಂಜನಾ ಕಾರ್ಯಕ್ರಮಗಳು ನಡೆಯುತ್ತಿರುತ್ತವೆ. ಟೊರಾಂಟೊ ಝೂ ಕೆನಡಾದ ಅತಿ ದೊಡ್ಡ ಪ್ರಾಣಿ ಸಂಗ್ರಹಾಲಯವಾಗಿದೆ. ಇದು 7-10 ಎಕರೆ ಪ್ರದೇಶದಲ್ಲಿ ವ್ಯಾಪಿಸಿದೆ. ಇಲ್ಲಿ 5000ಕ್ಕೂ ಹೆಚ್ಚು ಪ್ರಾಣಿಗಳು ತಮ್ಮದೇ ಆದ ನೈಸರ್ಗಿಕ ವಾತಾವರಣದಲ್ಲಿ ವಾಸಿಸುತ್ತವೆ.

ಇಲ್ಲಿ ಸ್ಪ್ಲಾಶ್‌ ಐಲೆಂಡ್‌ ಹಾಗೂ ವಾಟರ್‌ ಸೈಡ್‌ ಥಿಯೇಟರ್‌ ಕೂಡ ಇದೆ.

ಕೆನಡಾದ ವಂಡರ್‌ ಲ್ಯಾಂಡ್‌ ಇಲ್ಲಿನ ಅತಿದೊಡ್ಡ ಥೀಮ್ ಪಾರ್ಕ್‌ ಆಗಿದೆ. ಇಲ್ಲಿನ ರೋಮಾಂಚಕ ವಾತಾವರಣದಲ್ಲಿ 200ಕ್ಕೂ ಹೆಚ್ಚು ಆಕರ್ಷಣೆಗಳಿದ್ದು, 65ಕ್ಕೂ ಹೆಚ್ಚು ರೈಡ್ಸ್ ಮತ್ತು ರೋಲರ್‌ ಕೋಸ್ಟರ್ಸ್ ಇವೆ. ಇಲ್ಲಿ ಸ್ಪ್ಲಾಶ್‌ ಜೊತೆಗೆ 20 ಎಕರೆ ಪ್ರದೇಶದಲ್ಲಿ ವಾಟರ್‌ ಪಾರ್ಕ್‌ ಕೂಡ ಇದೆ.

ರಮಣೀಯ ಸ್ಥಳ

20 ಕಾರಂಜಿಗಳು ಮತ್ತು ಕಣ್ಣು ಕುಕ್ಕುವಂತಹ ಯಾಂಗ್‌ ಡುಂಡಸ್‌ ಸ್ಕ್ವೇರ್‌ ಇಲ್ಲಿನ ಒಂದು ಅದ್ವಿತೀಯ ಕೇಂದ್ರಬಿಂದು. ಇದು ಸಾರ್ವಜನಿಕ ಮುಕ್ತ ಸ್ಥಳದ ರೂಪದಲ್ಲಿ ಬಳಸಲು ನಿಗದಿಪಡಿಸಿದ ಸ್ಥಳ. ಸಮುದಾಯ ಸಮಾರಂಭಗಳು, ಸಂಗೀತ, ನಾಟಕ ಮುಂತಾದ ಚಟುವಟಿಕೆಗಳಿಗೆ ಬಳಸಿಕೊಳ್ಳಬಹುದು.

ಟೊರಾಂಟೊ ಐಲ್ಯಾಂಡ್

ಟೊರಾಂಟೊ ಡೌನ್‌ ಟೌನ್‌ ಯಾಂಗ್‌ ಸ್ಟ್ರೀಟಿನಿಂದ 10 ನಿಮಿಷದ ಬೋಟ್‌ ದಾರಿಯಲ್ಲಿ 3 ನಡುಗಡ್ಡೆಗಳು ಸಿಗುತ್ತವೆ. ಅವುಗಳಲ್ಲಿ ಸೆಂಟರ್‌ ಐಲ್ಯಾಂಡ್‌ ಅತಿ ಹೆಚ್ಚು ಪ್ರಸಿದ್ಧವಾಗಿದೆ.

ಸೆಂಟರ್‌ ಐಲ್ಯಾಂಡ್‌ ಅತ್ಯಂತ ರಮಣೀಯ ಸ್ಥಳವಾಗಿದೆ. ಇದು ಸಿಟಿ ಸ್ಕೈ ಲೈನಿನ ವಿಹಂಗಮ ಸ್ಥಳವನ್ನು ಪ್ರಸ್ತುತಪಡಿಸುತ್ತದೆ. ಸೆಂಟರ್‌ ಐಲ್ಯಾಂಡ್‌ 600 ಎಕರೆ ಪಾರ್ಕ್‌ ಲ್ಯಾಂಡಿನಲ್ಲಿದೆ. ಇಲ್ಲಿ ನೀವು ಒಂದು ಪುಟ್ಟ ದೋಣಿಯನ್ನು ಬಾಡಿಗೆಗೆ ಪಡೆದು ಚಲಾಯಿಸಬಹುದು.

ರಿವರ್‌ ಡೆಲ್‌ ಫಾರ್ಮ್

ಡೌನ್‌ ಟೌನಿನ 7 ಎಕರೆ ಪ್ರದೇಶದಲ್ಲಿದೆ. ಇಲ್ಲಿ ಹಸುಗಳು, ಕುದುರೆಗಳು, ಹಂದಿಗಳು, ಕೋಳಿಗಳ ವೈವಿದ್ಯಮಯ ತಳಿಗಳನ್ನು ಕಾಣಬಹುದು.

ಬ್ಯಾಕ್‌ ಕ್ರಾಕ್‌ ಪೋನಿಯಲ್ ವಿಲೇಜ್‌ ನಿಮ್ಮನ್ನು 18ನೇ ಶತಮಾನಕ್ಕೆ ಕೊಂಡೊಯ್ಯುತ್ತದೆ. ಇಲ್ಲಿ ನಿರ್ಮಿಸಿರುವ 40 ಮನೆಗಳು ಪರಂಪರೆಗಳನ್ನು ಬಿಂಬಿಸುತ್ತವೆ.

– ಡಾ. ಸ್ನೇಹಾ 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ