ಇತ್ತೀಚಿನ ದಿನಗಳಲ್ಲಿ ಬೆಂಗಳೂರಿನ `ನಮ್ಮ ಮೆಟ್ರೋ’ದಲ್ಲಿ ಪ್ರವಾಸ ಮಾಡುವುದೆಂದರೆ, ಅದು ಯಾವುದೇ ದೂರದ ಪ್ರವಾಸಕ್ಕಿಂತ ಭಿನ್ನ ಎಂದೆನಿಸದಿರದು. ಏಕೆಂದರೆ ಅದು ಎಷ್ಟೊಂದು ಮನೋರಂಜಕ ಆಗಿರುತ್ತದೆಂದರೆ, ಅಲ್ಲಿ ಹತ್ತು ಹಲವು ಸಂಗತಿಗಳು, ರಹಸ್ಯ ವಿಷಯಗಳು ಕಿವಿಗೆ ಬೀಳುತ್ತವೆ. ಆ ರಹಸ್ಯಗಳನ್ನು ಕುತೂಹಲಕಾರಿ ಸಂಗತಿಗಳನ್ನು ಯಾರೊಬ್ಬರೂ ಬಾಯಿಬಿಟ್ಟು ಕೇಳುವುದಿಲ್ಲ. ಅವರೇ ತಮಗೆ ತಾವೇ ಎಳೆ ಎಳೆಯಾಗಿ ಬಹಿರಂಗಪಡಿಸುತ್ತಾರೆ.
ಕೆಲವು ದಿನಗಳ ಹಿಂದಿನ ಮಾತು, ನಾನು ನಾಯಂಡಹಳ್ಳಿ ಹತ್ತಿರದ ಮೈಸೂರು ರೋಡ್ ಸ್ಟೇಷನ್ ನಿಂದ ಮೆಟ್ರೊ ರೈಲು ಹತ್ತಿದ್ದೆ. ನಾನು ಇಳಿಯಬೇಕಾದ ಸ್ಟೇಷನ್ ಇಂದಿರಾನಗರ. ಹೀಗಾಗಿ ನನ್ನ ಬಳಿ ಸಾಕಷ್ಟು ಸಮಯಾವಕಾಶ ಇತ್ತು. ನಾನು ಪುಸ್ತಕ ಕೈಗೆತ್ತಿಕೊಂಡು ಓದಲು ಶುರು ಮಾಡಿದೆ. ಮುಂದಿನ ನಿಲ್ದಾಣ ದೀಪಾಂಜಲಿಯಲ್ಲಿ ಇಬ್ಬರು ಹುಡುಗಿಯರು ಹತ್ತಿದರು. ಅವರು ಎಷ್ಟು ಜೋರು ಜೋರಾಗಿ ಮಾತನಾಡಲು ಶುರು ಮಾಡಿದರೆಂದರೆ, ನನ್ನ ಗಮನ ಪುಸ್ತಕದಿಂದ ಅವರ ಮಾತುಗಳ ಕಡೆ ಹೋಯಿತು.
“ಈ ಲಿಪ್‌ಸ್ಟಿಕ್ ಬಹಳ ಚೆನ್ನಾಗಿದೆ, ನೀನೂ ಖರೀದಿಸು.”
“ಅದರ ಬೆಲೆ ಎಷ್ಟು?”
“ಕೇವಲ 300 ರೂ.”
“ಅಷ್ಟು ದುಬಾರಿಯೇ?” ಇನ್ನೊಬ್ಬಳು ಬಾಯಿ ತೆಗೆದಳು ಎಷ್ಟೊತ್ತಾದರೂ ಹಾಗೆಯೇ ಇದ್ದಳು. ನನಗದು ಬೇಕಿಲ್ಲ. 100 ರೂ.ದ್ದಾಗಿದ್ದರೆ ಬಹುಶಃ ನಾನು ತೆಗೆದುಕೊಳ್ಳುತ್ತಿದ್ದೇನೇನೊ!”
“ಸರಿ ಸರಿ… ನಾನು ನಿನಗೆ ಕಡಿಮೆ ದರದಲ್ಲಿ ಸಿಕ್ಕರೆ ತಂದುಕೊಡ್ತೀನಿ.”
ಆ ಬಳಿಕ ಇಬ್ಬರೂ ನಿಧಾನ ಧ್ವನಿಯಲ್ಲಿ ಮಾತಾಡತೊಡಗಿದರು. ಮತ್ತೆ ನಾನು ಪುಸ್ತಕದಲ್ಲಿ ಗಮನಹರಿಸಿದೆ. ಮತ್ತೆ ಕೆಲವೇ ನಿಮಿಷಗಳಲ್ಲಿ ಅವರ ಧ್ವನಿ ಪುನಃ ಕೇಳಿಸಿತು. ಈ ಸಲ ಅವರ ಧ್ವನಿ ಮತ್ತಷ್ಟು ರೋಚಕವಾಗಿತ್ತು.
“ನಾನು ಮದುವೆ ಮಾಡಿಕೊಂಡು ಒಂದು ಬಡ ಮನೆತನಕ್ಕೆ ಹೋಗಲು ಇಚ್ಛಿಸುತ್ತೇನೆ,” ಇನ್ನೊಂದು ಕಡೆ ಕುಳಿತು ಹುಡುಗಿ ಹೇಳಿದಳು.
“ಏಕೆ?” ಈ ಕಡೆಯ ಹುಡುಗಿ ಕೇಳಿದಳು.
“ಏಕೆಂದರೆ ಯಾವ ಮನೆಗೆ ನಾನು ಮದುವೆ ಮಾಡಿಕೊಂಡು ಹೋಗ್ತೀನೊ, ಅಲ್ಲಿ ನನ್ನದೇ ನಡೆಯಬೇಕು. ನಾನು ಕಷ್ಟಪಟ್ಟು ಮನೆ ನಡೆಸಬೇಕು. ಗಂಡ ನನಗೆ ಸಾಕಷ್ಟು ಪ್ರೀತಿ ಕೊಡಬೇಕು, ಗೌರವ ಕೊಡಬೇಕು. ಮತ್ತೆ ಕುಡಿದು ಬರಬಾರದು. ಅವನು ನನ್ನದೇ ಮಾತು ಕೇಳಬೇಕು.”
ಆ ಹುಡುಗಿಯ ಮಾತು ಕೇಳಿ ನನಗೆ ಜೋರಾಗಿ ನಗಬೇಕೆನ್ನಿಸಿತು. ಏಕೆಂದರೆ ಆ ಹುಡುಗಿಗೆ ಇನ್ನೂ 19 ಕೂಡ ಆಗಿರಲಿಲ್ಲ. ಅವಳಿಗೆ ಏನು ಬೇಕಾಗಿತ್ತು ಎನ್ನುವುದು ಅವಳ ಮಾತುಗಳಿಂದ ಅರ್ಥವಾಗುತ್ತಿತ್ತು. ಅವಳಿಗೆ ಬೇಕಾಗಿದ್ದುದು, ಗಂಡ ಮತ್ತು ಹಕ್ಕು ಮಾತ್ರ. ಈ ಕಡೆ ಕುಳಿತ ನಾನು ಅವಳಿಗೆ ಅಡುಗೆ ಹೇಗೆ ಎಂಬ ಯೋಚನೆ ಇದೆಯೋ ಇಲ್ಲವೋ ಎಂದೆನಿಸಿತು.
ಮಟ್ರೋದಲ್ಲಿ ಕೇಳಲು ಅದೊಂದೇ ಧ್ವನಿಯಾಗಿರಲಿಲ್ಲ. ವಿಜಯನಗರ ಸ್ಟೇಷನ್ ಬರುತ್ತಿದ್ದಂತೆ ಮಧ್ಯ ವಯಸ್ಸಿನ ಮಹಿಳೆಯೊಬ್ಬರು ಹತ್ತಿದರು. ಆಕೆ ಫೋನಿನಲ್ಲಿ ಬಹುಶಃ ತನ್ನ ಗೆಳತಿಯೊಂದಿಗೆ ಮಾತಾಡುತ್ತಿರಬಹುದು ಎನಿಸಿತು. ಆಕೆಯ ಮಾತುಗಳಲ್ಲಿ ಕೆಲವು ವಿಚಾರಗಳು ನನ್ನ ಕಿವಿಗೆ ಬಿದ್ದವು.
“ಅವರು ನನ್ನ ಬಗ್ಗೆ, ನನ್ನ ಮಕ್ಕಳ ಬಗ್ಗೆ ಬಹಳ ಅಸೂಯೆ ಪಡುತ್ತಾರೆ. ನನ್ನ ಹೆಣ್ಣು ಮಕ್ಕಳಂತೂ ಅವರನ್ನು ಕಣ್ಣೆತ್ತಿ ಕೂಡ ನೋಡುವುದಿಲ್ಲ. ಆದರೂ ಅವರಿಗೆ ಏನು ಸಮಸ್ಯೆಯೋ ಗೊತ್ತಿಲ್ಲ.”
ಮಾಗಡಿ ರೋಡ್ ಸ್ಟೇಶನ್ ನಲ್ಲಿ ಆ ಮಹಿಳೆ ಇಳಿದು ಹೋದರು. ಅಲ್ಲೊಬ್ಬರು ವಯಸ್ಸಾದ ಮಹಿಳೆ ಹತ್ತಿದರು. ನಾನು ಮೇಲೆದ್ದು ಅವರಿಗೆ ಸೀಟು ಬಿಟ್ಟುಕೊಟ್ಟೆ. ಅಲ್ಲಿಯೇ ಹತ್ತಿರದಲ್ಲಿ ಒಬ್ಬ ಹುಡುಗ ಹಾಗೂ ಹುಡುಗಿ ನಿಂತಿದ್ದರು. ಅವರು ಬಹುಶಃ ಫ್ರೆಂಡ್ಸ್ ಆಗಿರಬಹುದು. ಹುಡುಗಿ ತನ್ನ ಪಕ್ಕದ ಹುಡುಗನಿಗೆ ತನ್ನ ಚಾಟ್ಸ್ ತೋರಿಸುತ್ತಿದ್ದಳು. ಅವುಗಳನ್ನು ಯಾವುದೊ ಹುಡುಗ ಅವಳಿಗೆ ತೊಂದರೆ ಕೊಡಲು ಕಳಿಸಿದ್ದ ಅನಿಸುತ್ತೆ. ಅದರಿಂದ ಒಂದಷ್ಟು ಗಲಿಬಿಲಿಗೊಂಡವಳಂತೆ ಕಂಡುಬರುತ್ತಿದ್ದಳು. ಅವಳ ಆ ಗೆಳೆಯ ಆ ಸಂದೇಶಗಳನ್ನು ಓದಿ ಅವಳನ್ನು ಛೇಡಿಸುತ್ತಿದ್ದ. ಅವರ ಹತ್ತಿರದಲ್ಲಿಯೇ ನಿಂತಿದ್ದ ಇನ್ನೊಬ್ಬ ಹುಡುಗ ವಕ್ರನೋಟ ಬೀರಿ ಅವರ ಚಾಟ್ಸ್ ಓದಿ ತುಟಿಯಲ್ಲೇ ನಗು ಅರಳಿಸುತ್ತಿದ್ದ. ಕಳ್ಳತನದಿಂದ ಮೆಸೇಜ್ ಓದುವುದರಲ್ಲಿ ಬಹಳ ಖುಷಿ ಇದೆ ಎಂದು ಆ ಹುಡುಗ ತೋರಿಸಿಕೊಳ್ಳುತ್ತಿದ್ದ.
ಅವರೆಲ್ಲ ಇಳಿದು ಹೋಗುತ್ತಿದ್ದಂತೆ ನನ್ನ ಮುಂದೆ ಒಂದು ಜೋಡಿ ಪ್ರತ್ಯಕ್ಷವಾಯಿತು. ಅವರು ಆಡುತ್ತಿದ್ದ ಮಾತುಗಳು ಕೇವಲ ನನಗಷ್ಟೇ ಅಲ್ಲ, ಅಲ್ಲಿದ್ದ ಎಲ್ಲರಿಗೂ ಸ್ಪಷ್ಟವಾಗಿ ಕೇಳಿಸುತ್ತಿದ್ದವು.
“ನಿನಗೆ ಹೆದರಿಕೆ ಆಗುತ್ತಾ?” ಹುಡುಗ ಹುಡುಗಿಗೆ ಕೇಳಿದ.
“ಹೌದು, ಮೊದಲ ಸಲ ಅಲ್ವಾ? ಅದಕ್ಕೆ,” ಹುಡುಗಿ ಉತ್ತರಿಸಿದಳು.
“ಏ, ಏನೂ ಆಗಲ್ಲ. ಜಾಗ ಕೂಡ ಸರಿಯಾಗೇ ಇದೆ.”
“ಇಷ್ಟು ಜೋರು ಜೋರಾಗಿ ಮಾತಾಡಬೇಡ.”
“ಹಾಗಾದರೆ ಏನಾಯ್ತು? ಮೊದಲ ಸಲ ಮೀಟಿಂಗ್ ಗೆ ಹೋಗುತ್ತಿದ್ದೇವೆ. ಅದರಿಂದ ಏನಾಗುತ್ತದೆ?”
ಅಂದಹಾಗೆ ಹುಡುಗ ಮಾತನ್ನು ತೇಲಿಸಲು ಪ್ರಯತ್ನಿಸಿದ. ಅದರೆ ಅವರ ಹಾವಭಾವ ಹಾಗೂ ಕಣ್ಣೋಟಗಳು ಏನು ಹೇಳುತ್ತಿದ್ದವು ಎನ್ನುವುದು ಅಲ್ಲಿದ್ದವರೆಲ್ಲರಿಗೂ ಸ್ಪಷ್ಟವಾಗಿ ತಿಳಿಯುತ್ತಿತು. ಅವರ ನಡುವೆ, `ಸ್ವಲ್ಪ ಹೊತ್ತು ಏನು ಆಗೋಲ್ಲ,’ `ನಾನು ಆತುರ ತೋರಿಸುವುದಿಲ್ಲ,’ `ಲೆಟ್ಸ್ ನಾಟ್ ಟಾಕ್ ಅಬೌಟ್‌ಇಟ್ ಹಿಯರ್’ ನಂತಹ ಮಾತುಗಳೇ ಕೇಳಿಬಂದವು. ಎಂ.ಜಿ ರೋಡ್ ಸ್ಟೇಷನ್ ಬರುತ್ತಿದ್ದಂತೆ ಅವರಿಬ್ಬರೂ ಇಳಿದುಹೋದರು.
ಟ್ರಿನಿಟಿ ಸ್ಟೇಷನ್ ಬರುತ್ತಿದ್ದಂತೆ ಮೆಟ್ರೋದಲ್ಲಿ ಜನದಟ್ಟಣೆ ಸ್ವಲ್ಪ ಕಡಿಮೆಯಾಯಿತು. ನನಗೆ ಸೀಟ್ ಕೂಡ ಸಿಕ್ಕಿತು. ನನ್ನ ಪಕ್ಕದಲ್ಲಿಯೇ 60 ವರ್ಷದ ಮಹಿಳೆಯೊಬ್ಬರು ಬಂದು ಕುಳಿತರು. ಅವರು ವಾಟ್ಸ್ ಆ್ಯಪ್ ಮೆಸೇಜ್ ಓದುವುದರಲ್ಲಿ ತಲ್ಲೀನರಾಗಿದ್ದರು. ಅವರು ಫೋನನ್ನು ಎಷ್ಟು ಕೆಳಗೆ ಹಿಡಿದುಕೊಂಡಿದ್ದರೆಂದರೆ ಸಹಜವಾಗಿಯೇ ಅವರ ಮೆಸೇಜ್ ನೋಡಲು ಸಾಧ್ಯವಾಯಿತು. ಅವರ 3-4 ಮೆಸೇಜ್ ನೋಡುತ್ತಿದ್ದಂತೆ ನನಗೆ ಪ್ರಜ್ಞೆ ತಪ್ಪಿದಂತಾಯಿತು. ಅವರು ಯಾರೊಬ್ಬ ವ್ಯಕ್ತಿ ಜೊತೆಗಿನ ತಮ್ಮದೇ ವಿಷಯವನ್ನು ಮತ್ತೊಮ್ಮೆ ಓದಿ ಖುಷಿಪಡುತ್ತಿದ್ದರು. ಅದು ಅವರ ಖಾಸಗಿ ವಿಷಯ. ಅಂದರೆ ಸೆಕ್ಸ್ ಚಾಟ್ ಆಗಿತ್ತು. ಮೊದಲು ಬಹಳ ಆಶ್ಚರ್ಯವಾಯಿತು. ಬಳಿಕ ನಗು ಬರತೊಡಗಿತು. ನಾನು ಮನಸ್ಸಿನಲ್ಲಿಯೇ ಅವರಿಗೆ ಹೇಳತೊಡಗಿದೆ, `ಆಂಟಿ, ನೀವು ಹೇಳ್ತಿರೋದು ಸರಿ. ನೀವು ಸರಿಯಾಗೇ ಇದ್ದೀರಿ. ನಾನೊಬ್ಬಳು ಇದ್ದೀನಿ. ಇನ್ನೂ ಸಿಂಗಲ್ ಆಗಿಯೇ ಇದ್ದೇನೆ,’ ನನ್ನ ಮುಖದಲ್ಲಿನ ಮುಗುಳ್ನಗೆ ಕಂಡು ಅವರಿಗೆ ಗೊತ್ತಾಗಿ ಹೋಯ್ತೇನೊ…. ಅವರು ಹಲಸೂರಿನಲ್ಲಿ ಇಳಿದು ಹೋದರು.
ಈಗ ನನ್ನ ಪಕ್ಕಕ್ಕೆ ಒಬ್ಬಳು ಹುಡುಗಿ ಬಂದು ಕುಳಿತಳು. ಅವಳು ಬಹಳ ದುಃಖಿತಳಾಗಿರುವಂತೆ ಕಂಡುಬರುತ್ತಿತ್ತು. ಅವಳು ಕಿವಿಗೆ ಹ್ಯಾಂಡ್ಸ್ ಫ್ರೀ ಹಾಕಿಕೊಂಡಿದ್ದಳು. ಅದರಲ್ಲಿ ಬರುತ್ತಿದ್ದ ಹಾಡು ನನಗೆ ಎಷ್ಟು ಸ್ಪಷ್ಟವಾಗಿ ಕೇಳಿ ಬರುತ್ತಿತ್ತೆಂದರೆ, ಹ್ಯಾಂಡ್ಸ್ ಫ್ರೀ ನನ್ನ ಕಿವಿಗೆ ಅಳವಡಿಸಿದ್ದಾರೆ ಎಂಬಂತೆ ಕೇಳಿಸುತ್ತಿತು. ಅದು ಹಿಂದಿ ಹಾಡು, `ತುಮ್ ಸಾಥ್ ಹೋ ಯಾ ನ ಹೋ ಕ್ಯಾ ಫರ್ಕ್ ಹೈ ಬೇದರ್ದ್ ಥೀ ಜಿಂದಗಿ ಬೇದರ್ದ್ ಹೈ….. ಅಗರ್ ತುಮ್ ಸಾಥ್ ಹೋ…..’ ಹಾಡನ್ನು ಕೇಳಿ ಆಕೆಯ ಹೃದಯದ ಸ್ಥಿತಿ ಅರ್ಥವಾಗುತ್ತಿತ್ತು. ಬಹುಶಃ ಅವಳಿಗೆ ಬ್ರೇಕ್ ಅಪ್ ಆಗಿತ್ತು ಅನಿಸುತ್ತಿತ್ತು.
ಈಗ ನನ್ನ ಗಮನ ಇಬ್ಬರು ಗೆಳತಿಯರತ್ತ ಹೋಯಿತು. ಅವರ ಚೆನ್ನಾಟ ನೋಡಿ ನನಗೆ ನಗು ಕಮ್ಮಿ, ಇಂದಿನ ಪೀಳಿಗೆಯರೆಂಬ ಕಾರಣದಿಂದ ದುಃಖವಾಯಿತು. ಬಾಗಿಲು ತೆರೆಯುವ ಒಂದು ಕಡೆ ಒಬ್ಬಳು, ಇನ್ನೊಬ್ಬಳು ಇನ್ನೊಂದು ಕಡೆ ಕ್ಯಾಮೆರಾ ಹಿಡಿದುಕೊಂಡು ನಿಂತಿದ್ದರು.
“ಅತ್ತ ಹೊರಗಡೆ ನೋಡು,” ಆ ಕಡೆಯ ಗೆಳತಿ ಹೇಳಿದಳು.
“ಹೀಗೆ ಅಥವಾ ಕಣ್ಣು ಕೆಳಗೆ ಮಾಡಿ” ಇನ್ನೊಬ್ಬಳು ಹೇಳಿದಳು.
“ಕ್ಯಾಂಡಿಡ್ ಪೋಸ್ ಕೊಡು.”
“ಅಂದರೆ ನನಗೆ ಗೊತ್ತಿಲ್ಲದಂತೆ ಫೋಟೋ ತೆಗೆಯುವ ರೀತಿ ಅಂತೀಯಾ?”
“ಹೌದು. ಅದೇ ರೀತಿ.”
“ನೀನು ಈ ರೀತಿ ನಿಂತ್ಕೊಬೇಕು.”
“ಹೀಗಾ…..?”
“ಹಾಗಲ್ಲ ಹೀಗೆ…” ಎಂದು ಅವಳು ಸ್ಟೈಲನ್ನು ಸರಿಪಡಿಸಿದಳು.
ಅವರಿಬ್ಬರ ಫೋಟೋ ಸೆರೆಹಿಡಿಯುವ ಕಾರ್ಯ ಹೀಗೆಯೇ ಜಾರಿಯಲ್ಲಿತ್ತು. ಅಷ್ಟರಲ್ಲಿಯೇ ನಾನು ಇಳಿಯಲಿದ್ದ ಇಂದಿರಾನಗರ ಸ್ಟೇಶನ್ನಿನ ಅನೌನ್ಸ್ ಮೆಂಟ್ ಬರುತ್ತಿತ್ತು. ನಾನು ಇನ್ನೇನು ಎದ್ದೇಳಬೇಕು ಎನ್ನುವಷ್ಟರಲ್ಲಿ ನನಗೆ ಇಬ್ಬರು ಮಹಿಳೆಯರ ಧ್ವನಿ ಕಿವಿಗೆ ಬಿತ್ತು.
“ವರ್ಷಾ ಸುನಿಲ್ ನನ್ನು ಬಿಟ್ಟುಬಿಟ್ಟಳು. ಆದರೆ ಯಾವ ಕಾರಣಕ್ಕಾಗಿ ಎಂದು ಹೇಳಿದರೆ ನಿನಗೆ ತಲೆ ಗಿರ್ರೆನ್ನುತ್ತದೆ.”
“ಯಾವ ಕಾರಣಕ್ಕಾಗಿ?” ಮೊದಲನೇ ಮಹಿಳೆ ಅತ್ಯಂತ ಕುತೂಹಲದಿಂದ ಕೇಳಿದಳು.
“ಆ ಕಾರಣ ಹೇಳಿದರೆ ನಿನಗೆ ನಂಬಲು ಕೂಡ ಆಗುವುದಿಲ್ಲ.”
“ಏನು ಆ ಕಾರಣ ಬೇಗ ಹೇಳು.”
“ಸ್ವಲ್ಪ ಗೆಸ್ ಮಾಡಿ ನೋಡು.”
“ನನಗೆ ಹೊಳೀತಿಲ್ಲ. ನೀನೇ ಹೇಳು.”
ಆಗ ಮೆಟ್ರೋ ಆಟೋಮ್ಯಾಟಿಕ್ ಬಾಗಿಲು ತೆರೆದುಕೊಂಡಿತು. ನನಗೆ ಅದನ್ನು ಕೇಳಿಸಿಕೊಳ್ಳದೆಯೇ ಇಳಿಯಬೇಕಾಯಿತು. ವರ್ಷಾ ಯಾವ ಕಾರಣಕ್ಕಾಗಿ ಸುನಿಲ್ ನನ್ನು ಬಿಟ್ಟಳು….? ಈಗ ಈ ರಹಸ್ಯ ನನ್ನ ಇಡೀ ಜೀವನದೊಂದಿಗೆ ಉಳಿಯಲಿದೆ.
– ಸೀಮಾ