ಈಗ ಕಂಗಳಷ್ಟೇ ಮಾತನಾಡಬೇಕು :
ಇಗೊಳ್ಳಿ, ಇನ್ನು ಮುಂದೆ ಡ್ಯಾನ್ಸ್ ನಡೆದಾಗ ಹಾವ ಭಾವ ತುಟಿಗಳ ಮುಖಾಂತರವಲ್ಲ, ಕಂಗಳು ಕೈಗಳ ಮೂಲಕವಷ್ಟೇ ತೋರ್ಪಡಿಸಬೇಕು. ಇವರೇನೋ ಶಾಲಾ ಮಕ್ಕಳು, ಆದರೆ ಮುದ್ರೆಗಳು, ಭಾವ ಭಂಗಿಗಳಿಂದ ಸುರಿತ ನೃತ್ಯಪಟು ಎನಿಸುತ್ತಾರೆ. ಮಾಸ್ಕ್ ಸ್ಯಾನಿಟೈಸರ್ ವಿತ್ ಲೆಸ್ ಸೀಟಿಂಗ್, ಥಿಯೇಟರ್ ತೆರೆಯಲು ದಾರಿ ಮಾಡಿವೆ.
ಅಸಲಿ ಕಥೆಯೇ ಬೇರೆ :
ರಷ್ಯಾ ಉಕ್ರೇನ್ ನಂಥ ದೇಶಗಳಲ್ಲಿ, ಕುಟುಂಬಗಳು ಮುರಿದಿವೆ ಅಥವಾ ಚದುರಿಹೋಗಿವೆ. ಹೀಗಾಗಿ ಡೇಟಿಂಗ್ ಸೈಟ್ ಗಳ ದಂಧೆ ಲಾಭಕಾರಿಯಾಗಿ ಮುನ್ನುಗ್ಗುತ್ತಿವೆ. ಆದರೆ ಜನ ಇದರಲ್ಲಿ ಸಿಕ್ಕಿಬೀಳುತ್ತಾರೆ, ಏಕೆಂದರೆ ಪ್ರೊಫೈಲ್ ಏನೋ ಇದ್ದರೆ, ಅಸಲಿ ಸಂಗತಿ ಬೇರೆಯೇ ಆಗಿರುತ್ತದೆ. ಕೆಲವಂತೂ ಭೂಗತ ಅಪರಾಧಗಳಿಗೆ ನಂಟು ಹಾಕಿಕೊಂಡಿರುತ್ತವೆ. ಯೂಕ್ರೇನಿನ ಬ್ರೈಡ್ಸ್ ಲವರ್ಸ್ ಹೆಸರಿನ ಒಂದು ಸೈಟ್, ಕೆಲವು ವಿಶಿಷ್ಟ ಸಾಫ್ಟ್ ವೇರ್‌ಫಿಲ್ಟರ್ಸ್ ರೂಪಿಸಿದ್ದು, ಇದರಿಂದ ಸ್ಕ್ಯಾಮ್ ಫ್ರೀ ಡೇಟಿಂಗ್ ಸಾಧ್ಯವಂತೆ. ನಮ್ಮಲ್ಲಿ ಜಾತಕಗಳ ಮೂಲಕ ಹೀಗೆ ಗ್ಯಾರಂಟಿ ಕೊಡಲಾಗದು.
ಮುನಿದ ಪ್ರಕೃತಿ :
ಈ ಸಲವಂತೂ ಪ್ರಕೃತಿ ಸಿಕ್ಕಾಪಟ್ಟೆ ಮುನಿಸಿಕೊಂಡಿದೆ. ಭಾರತದಲ್ಲಿ ಮಾತ್ರವಲ್ಲದೆ, ಚೀನಾದಲ್ಲೂ ಅಗತ್ಯಕ್ಕಿಂತ ಹೆಚ್ಚು ಕುಂಭದ್ರೋಣ ಮಳೆ ಆಗಿದೆ. ಸಹಸ್ರಾರು ಮಂದಿ ಸತ್ತಿದ್ದಾರೆ. ಅಮೆರಿಕಾ ಯೂರೋಪುಗಳಲ್ಲೂ ಪ್ರವಾಹ ಉಕ್ಕಿ ಹರಿದಿದೆ. ಕೆಲವೆಡೆ ಅಂತೂ ಉಷ್ಣತೆ ಎಷ್ಟು ಹೆಚ್ಚಿತೆಂದರೆ ಎಲ್ಲೆಡೆ ಕಾಳ್ಗಿಚ್ಚು ಹರಡಿತು ಎಂದೇ ಹೇಳಬೇಕು. ಆಸ್ಟ್ರೇಲಿಯಾದಲ್ಲಿ ಇಲಿಗಳ ಕಾಟ ಮಿತಿ ಮೀರಿತು. ಈಗ ಮಾನವರು ತಮ್ಮ ವೈಭವ ಪ್ರದರ್ಶನಗಳಿಗಿಂತ ಪ್ರಕೃತಿ ವಿಕೋಪ ಎದುರಿಸಲಿಕ್ಕೇ ಹೆಚ್ಚು ಖರ್ಚು ಮಾಡಬೇಕಿದೆ. ಮನೆಯಲ್ಲಿ ರೋಗ ಕಾಡಿದಾಗ ಚಿಕಿತ್ಸೆ ಮುಖ್ಯವೋ, ಒಡವೆ ವೈಯಾರಗಳೋ?
ಅಪಾಯ ಇನ್ನೂ ತಪ್ಪಿಲ್ಲ :
ಅಮೆರಿಕಾದ ಅಲಾಸ್ಕಾ ಏರ್ ಲೈನ್ಸ್ ಸೇಫ್ಟಿ ಡ್ರಿಲ್ ಕಲಿಸಿದ್ದಲ್ಲದೆ, ಪ್ಯಾಸೆಂಜರ್ ಗಳಿಗೆ ತಮ್ಮದೇ ಸಿಬ್ಬಂದಿಯಿಂದ, ಸಂಗೀತ ನೃತ್ಯಗಳ ವಿಡಿಯೋ ಮಾಡಿಸಿ, ಕೋವಿಡ್ ಹೆಮ್ಮಾರಿ ಕಾಟ ಇನ್ನೂ ಮುಗಿದಿಲ್ಲ ಎಂದೇ ಸಾರುತ್ತಿದ್ದಾರೆ. ನಮ್ಮ ದೇಶದಲ್ಲಂತೂ ಫೋನ್ ಮಾಡಿದ ತಕ್ಷಣ ಕೊರೋನಾ ಕುರಿತ ದೊಡ್ಡ ಉಪದೇಶ ಸಿಗುತ್ತದೆ, ಜನ ಇದರಿಂದ ಬೇಸತ್ತು ಹೋಗಿದ್ದಾರೆ. ವಿದೇಶೀ ವಿಡಿಯೋಗಳಿಂದಲೂ ಜನ ಪಾಠ ಕಲಿಯುತ್ತಿಲ್ಲ, ಎಂಥ ಸುಂದರ ಗಗನಸಖಿ ಒತ್ತಿ ಹೇಳಿದರೂ ಸಹ!
ಭಯಪಟ್ಟವರು ಸತ್ತರೆಂದೇ ಲೆಕ್ಕ :
ಬೇಥಾನಿ ಹ್ಯಾಮಿಲ್ಟನ್ ಶೀಘ್ರವಾಗಿಯೇ ಸಾಗರದಲ್ಲಿ ಸರ್ಫಿಂಗ್ ಕೆರಿಯರ್ ಆರಂಭಿಸಿದ್ದಳು. ಆದರೆ ಅವಳು 13 ವರ್ಷದವಳಾಗಿದ್ದಾಗ, ಒಂದು ಟೈಗರ್ ಶಾರ್ಕ್ ಆಕ್ರಮಣ ನಡೆಸಿತ್ತು. ಇದರಿಂದಾಗಿ ಅವಳು ಎಡಗೈ ಕಳೆದುಕೊಂಡಳು. ಆದರೆ ಅವಳು ಧೈರ್ಯಗುಂದಲಿಲ್ಲ. ಬೇಥಾನಿ ಇದೀಗ ಸಾಗರಕ್ಕಿಳಿದು ಒಂದೇ ಕೈಯಿಂದಲೇ ಸರ್ಫಿಂಗ್ ಬ್ಯಾಲೆನ್ಸ್ ಸಾಧಿಸಿದ್ದಾಳೆ! ಸಾಗರವೆಂದರೆ ಅವಳಿಗೆ ಭಯವೇ ಇಲ್ಲ. ಈಗಲೂ ಅವಳು ವಿಶ್ವ ಪ್ರಸಿದ್ಧ ಚಾಂಪಿಯನ್ ಸರ್ಫರ್ ಎನಿಸುತ್ತಾಳೆ. ಅವಳ ಕುರಿತಾದ ಬಯೋಪಿಕ್ ಚಿತ್ರ ಸಹ ಬಂದಿದೆ! ಪ್ರತಿಯೊಬ್ಬರೂ ಜೀವನದಲ್ಲಿ ತಮ್ಮವರ ಸಾವು, ನೋವು, ವಿಚ್ಛೇದನ, ಒಂಟಿತನ, ಜಾಬ್ ಲಾಸ್, ಭೀಕರ ಕಾಯಿಲೆ ಇತ್ಯಾದಿ ಎದುರಿಸುತ್ತಿರುತ್ತಾರೆ. ಗಿಲ್ಟ್ ಫೀಲ್ ಆಗದೆ ಧೈರ್ಯವಾಗಿ ಅದನ್ನು ಎದುರಿಸಬೇಕಷ್ಟೆ.