ಟೀಚರ್ : 6 ಅಡಿ ಉದ್ದ, 3 ಅಡಿ ಅಗಲ, 3 ಅಡಿ ಆಳದ ಹೊಂಡದಲ್ಲಿ ಎಷ್ಟು ಘನ ಮಣ್ಣು ಸಿಗುತ್ತದೆ?
ಗುಂಡ : ಬರೀ ಶೂನ್ಯ!
ಟೀಚರ್ : ಕೋಳಿ ಏಕೆ ಒಂದೆಡೆ ಬೆಚ್ಚಗಿನ ಜಾಗದಲ್ಲಿ ಕುಳಿತು ಮೊಟ್ಟೆ ಇಡುತ್ತದೆ?
ನಾಣಿ : ಗೋಡೆ ಮೇಲೆ ನಿಂತು ಮೊಟ್ಟೆ ಹಾಕಿದರೆ ಅದು ಒಡೆದೀತು ಅಂತ ಕೋಳಿಗೂ ಗೊತ್ತು!
ಟೀಚರ್ : ಗುಂಡ, ನಿನಗೆ ಇಂಗ್ಲಿಷ್ ಬರುತ್ತೆ ತಾನೇ?
ಗುಂಡ : ಏನೋ ಸುಮಾರಾಗಿ ಟೀಚರ್.
ಟೀಚರ್ : ಎಲ್ಲಿ, ಹಾಗಾದರೆ ಇದನ್ನು ಕನ್ನಡದಲ್ಲಿ ಹೇಳು : ಟುಮಾರೋ ಬೈ ದಿಸ್ ಟೈಂ ಐ ವಿಲ್ ಬಿ ಡೆಲಿವರಿಂಗ್ ಮೈ ಸ್ಪೀಚ್‌ಗುಂಡ : ಛೆ....ಛೇ! ಇದು ಗಂಡಸರಿಂದ ಆಗದ ಕೆಲಸ!
ನಾಣಿ ಮನೆಗೆ ಬರುವಾಗ ಹೊಸ ಕನ್ನಡಕ ಕೊಂಡು ತಂದ. ಆದರೆ ಹಾಕಿಕೊಂಡಿರಲಿಲ್ಲ, ಜೇಬಿನಲ್ಲಿ ಸ್ಟೈಲಾಗಿ ಸಿಗಿಸಿಕೊಂಡಿದ್ದ.
ಹೆಂಡತಿ ಕಾಣಿಸಿಕೊಂಡ ತಕ್ಷಣ ಮೂಗಿಗೆ ಕನ್ನಡಕ ಏರಿಸುತ್ತಿದ್ದ. ಇದನ್ನು ಅವಳು ಪ್ರತಿದಿನ ಗಮನಿಸುತ್ತಿದ್ದಳು.
ಮಾರನೇ ದಿನ ಕೇಳಿಯೇಬಿಟ್ಟಳು, ``ಇದೇನ್ರಿ, ಮನೆಗೆ ಬಂದ ಮೇಲೆ ಕನ್ನಡಕ ಹಾಕಿಕೊಳ್ತಿದ್ದೀರಾ? ಮೆಟ್ರೋ, ಬಸ್ಸಲ್ಲಿ ಬೇಡವೇನು?''
``ಬೇಡ.... ಅಲ್ಲೆಲ್ಲ ತೊಂದರೆ ಇಲ್ಲ. ಯಾವಾಗ ತಲೆನೋವು ಕಾಣಿಸುತ್ತೋ ಆಗ ಹಾಕಿಕೊಳ್ಳಿ ಅಂತ ಡಾಕ್ಟರ್ ಸಲಹೆ ನೀಡಿದ್ದಾರೆ!'' ತಕ್ಷಣ ನಾಣಿಗೆ ಧರ್ಮದೇಟು ಬಿತ್ತು ಅಂತ ಗೊತ್ತಾಯ್ತು ತಾನೇ?
ಇಡೀ ದಿನ ಬಾಸ್ ಕೈಲಿ ಬೈಸಿಕೊಂಡು ಬೈಸಿಕೊಂಡು ತಲೆ ರಾಡಿ ಮಾಡಿಕೊಂಡು ಸಂಜೆ 8 ಗಂಟೆಗೆ ಕಾಲೆಳೆಯುತ್ತಾ ಸೀನ ಮನೆಗೆ ಬಂದರೆ, ಹೆಂಡತಿಯ ತವರಿನ ಬಳಗ ಬಂದು ಝಾಂಡಾ ಊರುವುದೇ? ಬಂಧು ಬಳಗದವರಿಗೆ ಅವಳು ಮಾಡುತ್ತಿದ್ದ ಆದರೋಪಚಾರ ಕಂಡು ಇವನ ಪಿತ್ತ ನೆತ್ತಿಗೇರಿತು.
ಸಾಲದೆಂಬಂತೆ ಅವಳು ಪಲುಕಿದಳು, ``ರೀ, ನನ್ನ ತವರಿನವರಿಗೆ ಏನಾದರೂ ಸ್ಪೆಷಲ್ ತಂದು ಕೊಡ್ರೀ!'' ಸೀನ ಅಲ್ಲಿಂದ ಎದ್ದು ಹೊರಬಂದವನೇ ಸರಸರ ಓಲಾ ಬುಕ್ ಮಾಡಿ ಟ್ಯಾಕ್ಸಿ ತರಿಸಿಯೇಬಿಟ್ಟ.
``ಕಾರು ಬಂದಿದೆ, ಬೇಗ ಅವರಿಗೆ ಕೈ ತೊಳೆದುಕೊಳ್ಳಲು ಹೇಳು,'' ಎನ್ನುವುದೇ?
ಪ್ರಶ್ನೆ : ಕೊರೋನಾ ಕಾಲದ 2 ವಿಶೇಷತೆ ಏನು?
ಉತ್ತರ : ಮನೆ ಒಳಗೆಡ ಇದ್ದರೆ ಉಳಿಗಾಲ, ಹೊರಗಡೆ ಬಂದೆ ಕೊನೆಗಾಲ!
ಅಪ್ಪಟ ಕನ್ನಡದಲ್ಲಿ ದಿನಸಿ ಸಾಮಾನು ಹೆಸರು ಹೇಳಿ ಖರೀದಿಸಿದರೆ ಶೇ.30 ರಿಯಾಯಿತಿ ಎಂದು ಕನ್ನಡ ಸಾಹಿತ್ಯಪ್ರೇಮಿ ಕೆಂಪಯ್ಯ ತನ್ನ ಅಂಗಡಿ ಮುಂದೆ ಬೋರ್ಡ್ ಹಾಕಿಕೊಂಡಿದ್ದ. ಆ ಅಂಗಡಿಗೆ ತಿಮ್ಮ ಹೋದ.
ಕೆಂಪಯ್ಯ : ಸ್ವಲ್ಪ ಮಾತ್ರ ಆಂಗ್ಲ ಬಳಸದೆ ಏನಾದರೂ ಖರೀದಿಸಿದರೆ ಶೇ.30 ರಿಯಾಯಿತಿ ಕೊಡ್ತೀನಿ!
ತಿಮ್ಮ : `ಸೂಕ್ಷ್ಮಾತಿ ಸೂಕ್ಷ್ಮ ವಿಷಾಣು ಆಗಮನ ನಿರ್ಗಮನ ಅವಿರೋಧ ಮುಖ್ಯೋಷ್ಟನ್ಯಾಸಿಕಾಧಿ ರಕ್ಷಣಾರ್ಥ ಕರ್ಣದ್ವಯ ಸಮರ್ಥಿತ ದ್ವಿವಸ್ತ್ರ ಪಟ್ಟಿಕಾ' ಕೊಡಿ.
ಕೆಂಪಯ್ಯ : ಏನು ಕರ್ಮ ಇದು? ಅದೇನು ಇಂಗ್ಲಿಷ್ ನಲ್ಲಿ ಬೊಗಳು... 50% ಡಿಸ್ಕೌಂಟ್ ಕೊಡ್ತೀನಿ.
ತಿಮ್ಮ : ಮಾಸ್ಕ್ ಕೊಡ್ರೀ..... ಕೆಂಪಯ್ಯ!