ಸ್ನೇಹಾ ಆಫೀಸಿನಿಂದ ಹೊರಡುತ್ತಿದ್ದಂತೆ, ಕಪಿಲ್ ‌ಬೈಕಿನಲ್ಲಿ ಅವಳಿಗಾಗಿ ಕಾಯುತ್ತಿದ್ದ. ಸ್ನೇಹಾ ಅತ್ತಿತ್ತ ಓಲಾಡುತ್ತಾ ಅವನ ಹಿಂದೆ ಕುಳಿತು ಮುಖಕ್ಕೆ ಸ್ಕಾರ್ಫ್‌ ಕಟ್ಟಿಕೊಂಡಳು. ಸ್ವಲ್ಪ ದೂರ ಹೋಗುತ್ತಿದ್ದಂತೆ ಅವಳು ಅವನ ಕತ್ತಿಗೊಂದು ಕಿಸ್‌ ಕೊಟ್ಟಳು. ನಿರ್ಜನ ಪ್ರದೇಶ ಬರುತ್ತಿದ್ದಂತೆಯೇ ಕಪಿಲ್ ‌ಬೈಕ್‌ನ್ನು ಒಂದು ಕಡೆ ನಿಲ್ಲಿಸಿದ. ಸ್ನೇಹಾ ನಗುತ್ತಲೇ ಬೈಕಿನಿಂದ ಇಳಿದಳು. ಕಪಿಲ್ ‌ತನ್ನ ಹೆಲ್ಮೆಟನ್ನು ತಲೆಯಿಂದ ತೆಗೆಯುತ್ತಿದ್ದಂತೆ ಸ್ನೇಹಾ ಅವನ ಕೊರಳಿಗೆ ತನ್ನ ಬಾಹುಗಳನ್ನು ಚಾಚಿದಳು. ಕಪಿಲ್ ಕೂಡ ಅವಳ ಸೊಂಟ ಬಳಸಿ ತನ್ನೆಡೆಗೆ ಎಳೆದುಕೊಂಡ. ಇಬ್ಬರೂ ಬಹಳ ಹೊತ್ತು ಅದೇ ಸ್ಥಿತಿಯಲ್ಲಿದ್ದರು.

ಉಸಿರಾಟದ ಏರುಪೇರನ್ನು ನಿಯಂತ್ರಣಕ್ಕೆ ತಂದುಕೊಳ್ಳುತ್ತ ಸ್ನೇಹಾ, “ನೋಡು, ನಾವೀಗಲೇ ನಮ್ಮ ಮನೆಗೆ ಹೋಗಬೇಕು,” ಎಂದಳು.

“ಮನೆಗಾ? ಏಕೆ?” ಕಪಿಲ್ ‌ಅಚ್ಚರಿಯಿಂದ ಕೇಳಿದ.

“ಹೌದು. ಮನೆಯಲ್ಲಿ ಯಾರೂ ಇಲ್ಲ. ಅದಕ್ಕೆ ಬಾ ಅಂತೀರೋದು.”

“ನಿನ್ನ ಅಮ್ಮ ಅಪ್ಪ ಎಲ್ಲಿ ಹೋದರು?”

“ಯಾರೊ ಸಂಬಂಧಿಕರ ನಿಧನ ಆಗಿದೆ. ಊರಿಗೆ ಹೋಗಿದ್ದಾರೆ. ಬರೋಕೆ ರಾತ್ರಿ ಆಗುತ್ತೆ.”

“ಹಾಗಾದರೆ ನಡಿ, ನಾವೇಕೆ ತಡ ಮಾಡಬೇಕು? 15 ದಿನಗಳಿಂದ ಮಾಡಲಾಗದ್ದನ್ನು ಇವತ್ತು ಮಾಡಲು ಆದೀತಾ ಎಂದು ನಾನು ಯೋಚಿಸುತ್ತಿರುವೆ. ಈ ಮಹಾನಗರದಲ್ಲಿ ಜಾಗ ಸಿಗೋದೇ ಇಲ್ಲ. ಕಳೆದ ಬಾರಿ ನನ್ನ ಮನೆಯಲ್ಲಿ ಯಾರೂ ಇರಲಿಲ್ಲ. ಆಗ ಅವಕಾಶ ಸಿಕ್ಕಿತ್ತು,” ಎಂದು ಕಪಿಲ್ ‌ಹೇಳಿದ.

“ಬಾ…. ಬಾ…. ಹೋಗೋಣ. ಈಗ ಮಾತು ಕಡಿಮೆ, ಮತ್ತೇನೋ ಮಾಡುವ ಮೂಡಿನಲ್ಲಿ ನಾನಿದ್ದೇನೆ.” ಕಪಿಲ್ ‌ಅತ್ಯಂತ ಉತ್ಸಾಹದಿಂದ ತನ್ನ ಬೈಕ್‌ನ್ನು ಸ್ನೇಹಾಳ ಮನೆಯ ಕಡೆ ಓಡಿಸಿದ. ರಸ್ತೆಯುದ್ದಕ್ಕೂ ಸ್ನೇಹಾ ಮುಖಕ್ಕೆ ಸ್ಕಾರ್ಫ್‌ ಕಟ್ಟಿಕೊಂಡೇ ಕಪಿಲ್ ‌ನ ಸೊಂಟ ಬಳಸಿ ಕುಳಿತುಕೊಂಡಳು. ಇಬ್ಬರೂ ಪ್ರೇಮಿಗಳು ತಮ್ಮದೇ ಆದ ಲೋಕದಲ್ಲಿ ಕಳೆದುಹೋಗಿದ್ದರು.

ಇಬ್ಬರ ಅಫೇರ್‌ಎರಡು ವರ್ಷಗಳಿಂದ ನಡೆಯುತ್ತಿತ್ತು. ಇಬ್ಬರ ಆಫೀಸುಗಳು ಒಂದೇ ಕಟ್ಟಡದಲ್ಲಿದ್ದವು. ಅದೇ ಬಿಲ್ಡಿಂಗಿನ ಕೆಫೆಟೆರಿಯಾ ಇಲ್ಲವೇ ಲಿಫಅಟ್ ನಲ್ಲಿ ಆಗಾಗ ಅವರ ಭೇಟಿ ಆಗುತ್ತಿತ್ತು. ಇಬ್ಬರೂ ಪರಸ್ಪರರನ್ನು ನೋಡಿಯೇ ಇಷ್ಟಪಟ್ಟಿದ್ದರು. ಸ್ನೇಹಾಳ ಬೋಲ್ಡ್ ನೆಸ್‌ ಅವನಿಗೆ ಬಹಳ ಇಷ್ಟವಾಗುತ್ತಿತ್ತು. ಕಪಿಲ್‌ನ ಶಾಂತ ಸ್ವಭಾವದ ಬಗ್ಗೆ ಸ್ನೇಹಾ ಬಹಳ ಪ್ರಭಾವಿತಳಾಗಿದ್ದಳು. ಈ ಎರಡು ವರ್ಷಗಳಲ್ಲಿ ಅವರು ಅದೆಷ್ಟು ಸಲ ದೈಹಿಕ ಸಾಮೀಪ್ಯ ಹೊಂದಿದ್ದರೊ ಲೆಕ್ಕವಿಲ್ಲ.

ಸ್ನೇಹಾ ಜೀವನವನ್ನು ಮುಕ್ತವಾಗಿ ಜೀವಿಸಲು ಇಷ್ಟಪಡುತ್ತಿದ್ದಳು. ಅದೆಷ್ಟೋ ಸಲ ಅವಳ ಜೀವನದ ರೀತಿ ನೀತಿ ನೋಡಿಯೇ ಅವನಿಗೆ ಅಚ್ಚರಿಯಾಗುತ್ತಿತ್ತು. ಸ್ನೇಹಾಳ ಮನೆಯಲ್ಲಿ ಅವಳ ಅಪ್ಪ ಅಮ್ಮ ಇಬ್ಬರೂ ಉದ್ಯೋಗಿಗಳಾಗಿದ್ದರು. ತಮ್ಮ ಕಾಲೇಜಿಗೆ ಹೋಗುತ್ತಿದ್ದ. ಇತ್ತ ಕಪಿಲ್ ‌ತನ್ನ ತಾಯಿ ತಂದೆಗೆ ಏಕೈಕ ಮಗ. ಅಮ್ಮ  ಗೃಹಿಣಿ, ಅಪ್ಪ ಬಿಲ್ಡರ್‌ ಆಗಿದ್ದರು. ಅವರ ಮನೆ ಪರಿಸ್ಥಿತಿ ಚೆನ್ನಾಗಿಯೇ ಇತ್ತು. ಯಾವುದೇ ಕೊರತೆ ಇರಲಿಲ್ಲ.

ಕಪಿಲ್ ‌ಸ್ನೇಹಾಳ ಬಗ್ಗೆ ತನ್ನ ಮನೆಯಲ್ಲಿ ತಿಳಿಸಿದ್ದ. ಅವಳನ್ನು ಸೊಸೆಯಾಗಿ ತಂದುಕೊಳ್ಳಲು ಅವರಿಗೆ ಯಾವುದೇ ಆಕ್ಷೇಪ ಇರಲಿಲ್ಲ. ಸ್ನೇಹಾ ಕೂಡ ಆಗಾಗ ಕಪಿಲ್ ಮನೆಗೆ ಹೋಗಿ ಬರುವುದು ನಡೆಯುತ್ತಿತ್ತು. ಆದರೆ ಸ್ನೇಹಾಳ ಮನೆಯಲ್ಲಿ ಮಾತ್ರ ಕಪಿಲ್ ಬಗ್ಗೆ ಯಾವುದೇ ವಿಷಯ ತಿಳಿದಿರಲಿಲ್ಲ.

ಎಂದಿನಂತೆ ಕಪಿಲ್ ‌ಸ್ನೇಹಾಳ ಬಿಲ್ಡಿಂಗ್‌ ನಿಂದ ಸ್ವಲ್ಪ ದೂರದಲ್ಲಿದ್ದ ಒಂದು ಶಾಪಿಂಗ್‌ ಕಾಂಪ್ಲೆಕ್ಸ್ ಹತ್ತಿರ ಬೈಕ್‌ ಪಾರ್ಕ್‌ ಮಾಡಿದ. ಮೊದಲು ಸ್ನೇಹಾ ಒಳಬಂದಳು. ಸ್ವಲ್ಪ ಹೊತ್ತಿನ ಬಳಿಕ ಕಪಿಲ್ ‌ಅವಳ ಮನೆಯೊಳಗೆ ಬಂದ. ಮೊದಲೂ ಕೂಡ ಮನೆಯಲ್ಲಿ ಯಾರೂ ಇಲ್ಲದ ವೇಳೆ ಅವರು ಈ ರೀತಿ ಸೇರುತ್ತಿದ್ದರು. ಮನೆಯೊಳಗೆ ಬರುತ್ತಿದ್ದಂತೆ ಕಪಿಲ್ ‌ಅವಳನ್ನು ಬರಸೆಳೆದು ಅಪ್ಪಿಕೊಂಡು, ಪ್ರೀತಿಯ ಮಳೆ ಸುರಿಸತೊಡಗಿದ. ಆ ಮಳೆಯಲ್ಲಿ ಅವಳು ಸಂಪೂರ್ಣ ತೊಯ್ದುಹೋದಳು.

ಸ್ವಲ್ಪ ಹೊತ್ತಿನ ಬಳಿಕ ಕಪಿಲ್ ‌ಸ್ನೇಹಾಳಿಗೆ, “ನಾನು ನಿನ್ನನ್ನು ಬಿಟ್ಟು ಇರಲಾಗದು. ನಾವು ಮದುವೆ ಮಾಡಿಕೊಳ್ಳಬೇಕು. ಅದಕ್ಕೆ ನೀನೇಕೆ ವಿಳಂಬ ಮಾಡುತ್ತಿರುವೆ?” ಎಂದು ಕೇಳಿದ.

ಸ್ನೇಹಾ ತನ್ನದೇ ಆದ ಬೋಲ್ಡ್ ಗತ್ತಿನಲ್ಲಿ, “ನಿನಗೇಕೆ ಮದುವೆ ಚಿಂತೆ, ಮದುವೆಯ ಬಳಿಕ ಏನು ಸಿಗಬೇಕಿತ್ತೋ, ಅದು ಈಗಲೇ ಸಿಗುತ್ತಿದೆಯಲ್ಲ….?” ಎಂದಳು.

“ಅದು ಹಾಗಲ್ಲ, ನನಗೆ ಹೀಗೆ ಕಳ್ಳತನದಿಂದ ಬೇಕಿಲ್ಲ. ನಮ್ಮದೇ ಮನೆಯಲ್ಲಿ ನಿನ್ನ ಜೊತೆ ಮುಕ್ತವಾಗಿ ಇರಬೇಕಿದೆ.”

“ಆದರೆ ನನಗೆ ಮದುವೆಯ ಮೂಡ್‌ ಇಲ್ಲ ಕಪಿಲ್‌!”

“ಎಲ್ಲಿಯವರೆಗೆ ಹೀಗೆಯೇ ಕಾಯಿಸ್ತಾ ಇರ್ತೀಯಾ?”

“ಆದರೆ ನಾನು ನಿನಗೆಂದೂ ಬೇಗ ಮದುವೆಯಾಗುತ್ತೇನೆಂದು ಹೇಳಿಲ್ಲವಲ್ಲ……!”

“ಆದರೆ ನಾನಂತೂ ನಿನ್ನೊಂದಿಗೇ ಮದುವೆಯಾಗುತ್ತೇನೆ. ನನಗೆ ನಿನ್ನನ್ನು ಬಿಟ್ಟು ಇರಲು ಆಗುವುದಿಲ್ಲ. ಏಕೆಂದರೆ ನಾನು ನಿನ್ನನ್ನು ಮಾತ್ರ ಪ್ರೀತಿಸುತ್ತೇನೆ.”

“ಓಹ್‌ ಕಪಿಲ್‌!” ಎಂದವಳೇ ತನ್ನೆರಡೂ ಕೈಗಳಿಂದ ಅವನ ಕೊರಳನ್ನು ಬಳಸಿ, “ನಾನು ನಿನಗೆ ಕಾಫಿ ಕುಡಿಸ್ತೀನಿ,” ಎನ್ನುತ್ತಾ ಇಬ್ಬರಿಗೂ ಕಾಫಿ ತೆಗೆದುಕೊಂಡು ಬಂದಳು.

ಇಬ್ಬರೂ ರೋಮಾಂಚಕಾರಿ ಸ್ಥಿತಿಯಲ್ಲಿ ಕಾಫಿ ಕುಡಿದರು. ಸ್ವಲ್ಪ ಹೊತ್ತಿನ ಬಳಿಕ ಕಪಿಲ್ ‌ಹೊರಟುಹೋದ. ಅವರು ಸದಾ ಸಂಪರ್ಕದಲ್ಲಿರಲು ವಾಟ್ಸ್ ಆ್ಯಪ್‌ ಅಂತೂ ಇದ್ದೇ ಇತ್ತು.

ಅವರ ದೈನಂದಿನ ದಿನಚರಿಯೆಂದರೆ ಕಪಿಲ್ ‌ಅವಳನ್ನು ಅವಳ ಮನೆಯ ತನಕ ಬಂದು ಬಿಟ್ಟು ಹೋಗುತ್ತಿದ್ದ. ಕಪಿಲ್ ‌ಮನೆಗೆ ಹೋದ ಬಳಿಕ ತಾನು ಸ್ನೇಹಾ ಜೊತೆಗೇ ಇದ್ದೆ ಎಂದು ಹೇಳುತ್ತಿದ್ದ.

ಆಗ ಅಮ್ಮ, “ಕಪಿಲ್‌, ನೀವೇಕೆ ಇಬ್ಬರೂ ಮದುವೆಯಾಗಬಾರದು ಇಬ್ಬರೂ ಜಾಬ್‌ ನಲ್ಲಿದ್ದೀರಾ, ತಡ ಮಾಡುತ್ತಿರುವುದೇಕೆ?” ಎಂದರು.

“ಅಮ್ಮಾ, ಸ್ನೇಹಾಳಿಗೆ ಈಗಲೇ ಮದುವೆ ಬೇಡವಾಗಿದೆ.”

“ಯಾವಾಗ ಮದುವೆಯಾಗಬೇಕು ಎನ್ನುವುದು ಅವಳ ಯೋಚನೆ ಅವಳ ಮನೆಯವರು ಏನೆನ್ನುತ್ತಾರೆ?”

“ಸ್ನೇಹಾ ತನ್ನ ಮನೆಯವರಿಗೆ ಈ ವಿಷಯ ಇನ್ನೂ ತಿಳಿಸಿಯೇ ಇಲ್ಲ.”

“ಇದೇನು ವಿಷಯ ಅವಳದು?”

“ಇರಲಿ ಬಿಡಮ್ಮಾ, ಸ್ನೇಹಾಗೆ ಹೇಗೆ ಸರಿ ಕಾಣುತ್ತೋ ಹಾಗೇ ಮಾಡಲಿ. ಬಹುಶಃ ಅವಳು ಇನ್ನಷ್ಟು ಸಮಯ ತೆಗೆದುಕೊಳ್ಳಬಹುದು.”

“ಕಪಿಲ್‌, ನನ್ನ ಮನಸ್ಸಿನಲ್ಲಿ ಮತ್ತೊಂದು ವಿಚಾರ ಬರ್ತಿದೆ. ನೀನು ಅವಳನ್ನು ಹೇಗೆ ನಿರ್ವಹಿಸ್ತೀಯಾ? ಅಂತ. ಅವಳು ಸಾಕಷ್ಟು ಬೋಲ್ಡ್, ನೀನು ನೋಡಿದರೆ ಸಾದಾಸೀದಾ….”

“ಹಾಗೇನಿಲಮ್ಮಾ, ಅವಳು ಈ ಕಾಲದ ಹುಡುಗಿ. ಅವಳು ಬೋಲ್ಡ್ ಆಗಿರುವುದು ತಪ್ಪೇನಲ್ಲ. ನೀವು ಚಿಂತೆ ಮಾಡಬೇಡಿ. ಅವಳಿಗೆ ಇನ್ನಷ್ಟು ಸಮಯ ಬೇಕಿರಬಹುದು.”

“ಆದರೆ ನೀನೀಗ ಮದುವೆಯ ಬಗ್ಗೆ ಸೀರಿಯಸ್‌ಆಗಿ ಯೋಚಿಸು.”

“ಸರಿಯಮ್ಮ….. ನಾನು ಅವಳೊಂದಿಗೆ ಮಾತನಾಡ್ತೀನಿ.”

ಎರಡು ದಿನಗಳ ಬಳಿಕ ಸ್ನೇಹಾ ಕಪಿಲ್ ‌ಗೆ, “ಕಪಿಲ್‌, ಲಾಟರಿ ಹೊಡೆಯಿತು. ನನ್ನ ತಮ್ಮ ತನ್ನ ಗೆಳೆಯರ ಜೊತೆಗೆ ಪಿಕ್ನಿಕ್ ಹೋಗ್ತಿದ್ದಾನೆ. ನನ್ನ ತಾತನ ಆರೋಗ್ಯ ಸರಿ ಇಲ್ಲ. ಅಮ್ಮ ಅಪ್ಪ ಅವರನ್ನು ನೋಡಲು ಹೋಗ್ತಿದ್ದಾರೆ. ನೀನೂ ಕೂಡ ನಿಮ್ಮ ಮನೆಯಲ್ಲಿ ಟೂರ್‌ ಹೋಗ್ತಿರುವೆ ಎಂದು ಹೇಳು. ಇಬ್ಬರೂ ಆಫೀಸಿಗೆ ರಜೆ ಹಾಕಿ ಮನಸೋಕ್ತ ಖುಷಿ ಅನುಭವಿಸೋಣ…..” ಎಂದಳು.

“ನಿಜವಾಗ್ಲೂ…….?”

“ಲೈಫ್‌ ಎಂಜಾಯ್‌ ಮಾಡೋಣ. ಹೊರಗಿನಿಂದ ಊಟ ತಿಂಡಿ ಆರ್ಡರ್‌ ಮಾಡೋಣ. ಇನ್ನೇನಿದ್ರೂ ಬರೀ ಮಜವೋ ಮಜಾ……!”

ಕಪಿಲ್ ಸ್ನೇಹಾಳನ್ನು ಹೃದಯಪೂರ್ವಕವಾಗಿ ಬಯಸುತ್ತಿದ್ದ. ಅವಳು ಹೇಗೆ ಹೇಳಿದಳೋ ಅವನು ಹಾಗೆಯೇ ಮಾಡಿದ. ಟೂರ್ ಹೋಗುತ್ತಿರುವುದಾಗಿ ಹೇಳಿ ಬ್ಯಾಗಿನೊಂದಿಗೆ ಸ್ನೇಹಾಳ ಮನೆಗೆ ಬಂದ. ಇಬ್ಬರೂ ಮನಸೋಕ್ತವಾಗಿ ರೊಮ್ಯಾನ್ಸ್ ನಡೆಸಿದರು. ಯಾವಾಗ ಮನಸ್ಸಾಗುತ್ತಿತ್ತೋ ಆಗ ಪರಸ್ಪರರಲ್ಲಿ ಕಳೆದುಹೋಗುತ್ತಿದ್ದರು.

“ಸ್ನೇಹಾ, ನಿನ್ನೊಂದಿಗೆ ಕಳೆದ ಕ್ಷಣಗಳೇ ನನ್ನ ಜೀವನ. ನೀನು ಖಾಯಂ ಆಗಿ ನನ್ನ ಜೀವನ ಪ್ರವೇಶಿಸಬೇಕು. ಈಗ ನನಗೆ ತಡಮಾಡಲು ಆಗುವುದಿಲ್ಲ. ನಿನ್ನ ತಾಯಿ ತಂದೆಯರನ್ನು ಯಾವಾಗ ಭೇಟಿ ಮಾಡಿಸ್ತೀಯಾ ಹೇಳು…..?” ಎಂದು ಕೇಳಿದ.

“ನೀನು ಯಾವಾಗಲೂ ಮದುವೆ ಮದುವೆ ಅಂತಿರ್ತಿಯಾ. ಮದುವೆ ಮಾಡಿಕೊಳ್ಳುವ ತೊಂದರೆ ಏನಾಗಿದೆ? ನಾನು ನಿನಗೆ ಅದೆಷ್ಟೋ ಸಲ ಹೇಳಿದ್ದೀನಿ…. ನನಗೆ ಮದುವೆ ಮಾಡಿಕೊಳ್ಳುವ ಮೂಡ್‌ ಇಲ್ಲ ಎಂದು,” ಸ್ನೇಹಾ ಅವನನ್ನು ಪ್ರೀತಿಯಿಂದಲೇ ಸಿಡುಕುತ್ತಾ ಹೇಳಿದಳು.

ಈಗ ಕಪಿಲ್ ‌ಗಂಭೀರ ಸ್ವರದಲ್ಲಿ, “ಸ್ನೇಹಾ, ನೀನು ಯಾವಾಗಲೂ ಹೀಗೇಕೆ ಹೇಳ್ತಾ ಇರ್ತೀಯಾ……? ನನ್ನ ಅಮ್ಮ ನನಗೆ ಆಗಾಗ ಮದುವೆ ಮಾಡಿಕೊಳ್ಳಲು ಒತ್ತಡ ಹೇರುತ್ತಾ ಇರ್ತಾರೆ. ಅವರು ಹೇಳೋದರಲ್ಲಿ ತಪ್ಪೇನಿದೆ…?” ಎಂದ.

ಸ್ನೇಹಾ ಕೂಡ ಗಂಭೀರವಾಗಿ, “ನೋಡು ಕಪಿಲ್‌, ನಾನು ಕೆಲವು ವರ್ಷಗಳ ಕಾಲ ಮದುವೆಯ ಬಂಧನದಲ್ಲಿ ಸಿಲುಕಿಕೊಳ್ಳಲು ಇಷ್ಟಪಡುವುದಿಲ್ಲ. ನನಗಿನ್ನೂ 26 ವರ್ಷ. ಲೈಫ್‌ಎಂಜಾಯ್‌ ಮಾಡುತ್ತಿರುವೆ,” ಎಂದಳು.

“ಆದರೆ ನನಗೆ 30 ಆಗ್ತಿದೆ. ಇಂದಲ್ಲ ನಾಳೆ ನಾನು ಮದುವೆ ಮಾಡಿಕೊಳ್ಳಲೇಬೇಕು. ಇಬ್ಬರೂ ಇಷ್ಟೊಂದು ಹತ್ತಿರವಾಗಿದ್ದೇವೆ. ಹೀಗಿ ಕಳ್ಳತನದಿಂದ ನಾವು ಎಲ್ಲಿಯವರೆಗೆ ಭೇಟಿ ಆಗ್ತಿರಬೇಕು…..?”

“ಇವತ್ತಲ್ಲ ನಾಳೆ ನಾವು ಮದುವೆ ಆಗಲೇಬೇಕು ಎಂದು ನಾನು ಯಾವಾಗ ಹೇಳಿದೆ?”

“ಅಂದರೆ……?”

“ನೋಡು ಕಪಿಲ್‌, ಈವರೆಗೆ ನಾನು ನಿನ್ನನ್ನು ನನ್ನ ಅಮ್ಮ ಅಪ್ಪನನ್ನು ಭೇಟಿ ಮಾಡಿಸಿಲ್ಲ. ಏಕೆಂದರೆ ನಮ್ಮಿಬ್ಬರ ಅರೇಂಜ್ಡ್ ಮ್ಯಾರೇಜ್‌ ಸಾಧ್ಯವೇ ಇಲ್ಲ. ಇದಕ್ಕೆ ನಮ್ಮಿಬ್ಬರ ಜಾತಿ ಬೇರೆ ಬೇರೆ ಆಗಿರೋದೇ ಕಾರಣ. ನನಗೆ ಈ ವಯಸ್ಸಿನಲ್ಲಿ ಜಾತಿಯ ಬಗ್ಗೆ ಟೆನ್ಶನ್‌ ಬೇಕಿಲ್ಲ. ನಾವು ಪ್ರೀತಿ, ರೊಮ್ಯಾನ್ಸ್, ಸೆಕ್ಸನ್ನಂತೂ ಎಂಜಾಯ್‌ ಮಾಡುತ್ತಲೇ ಇದ್ದೇವೆ. ಹಾಗಿದ್ದೂ ನೀನು ಮದುವೆಗಾಗಿ ಏಕೆ ಬೆನ್ನು ಬಿದ್ದಿದ್ದೀಯಾ ಅಂತೀನಿ. ನಾವು ಮದುವೆ ಮಾಡಿಕೊಳ್ಳುವುದು ಸಾಧ್ಯವಿಲ್ಲ ಅನಿಸ್ತಿದೆ.”

no-gilt-trip-story2

 

“ನೀನು ನನ್ನನ್ನು ಪ್ರೀತಿಸುವುದಿಲ್ಲವೇ….?”

“ಮಾಡುತ್ತಲೇ ಇದ್ದೀನಲ್ಲ……!”

“ನಾವು ಜೊತೆ ಜೊತೆಗಿರಲು ಮದುವೆ ಏಕೆ ಮಾಡಿಕೊಳ್ಳಬಾರದು ಎಂದು ನಿನಗೇಕೆ ಅನಿಸುವುದಿಲ್ಲ……?”

“ಇಲ್ಲ…. ಅದಕ್ಕೆ ನನ್ನ ಮನಸ್ಸು ಒಪ್ಪುವುದಿಲ್ಲ.”

“ನಾನು ಇನ್ನೂ ಎಷ್ಟು ದಿನ ಕಾಯಬೇಕು ಅಂತೀಯಾ? ಹೇಳು, ನಾನು ನಿನಗಾಗಿ ಕಾಯ್ತೀನಿ.”

“ಇಲ್ಲ, ನನಗೆ ಗೊತ್ತಿಲ್ಲ,” ಕಪಿಲ್‌ಪುನಃ ಗಂಭೀರನಾಗಿ ಕುಳಿತುಕೊಳ್ಳುತ್ತಿದ್ದಂತೆ ಸ್ನೇಹಾ ತುಂಟತನದ ಮಾತುಗಳ ಮೂಲಕ ಮತ್ತೆ ಅವನ ಜೊತೆ ಮಾತಿಗಿಳಿದಳು, “ನಾನು ನಿನಗೆ ಪುನಃ ಪುನಃ ಹೇಳ್ತೀನಿ. ಮದುವೆಯ ಹಠ ಬಿಡು. ಲೈಫ್‌ ಎಂಜಾಯ್ ಮಾಡು.”

“ಅಂದರೆ ನೀನು ನನ್ನನ್ನು ಮದುವೆ ಮಾಡಿಕೊಳ್ಳುವುದಿಲ್ಲವೇ?”

“ಇಲ್ಲ….”

“ಇದೆಲ್ಲ ಏನು ಸ್ನೇಹಾ? ನನಗಂತೂ ನಿನ್ನ ಧೋರಣೆ ಅರ್ಥ ಆಗ್ತಿಲ್ಲ. ನೀನು ಎರಡು ವರ್ಷಗಳಿಂದ ನನ್ನ ಜೊತೆ ರಿಲೇಶನ್‌ ಶಿಪ್‌ನಲ್ಲಿರುವೆ. ಈ ಎರಡು ವರ್ಷಗಳಲ್ಲಿ ನಾವು ಅದೆಷ್ಟು ಬಾರಿ ಸೇರಿರಬಹುದು ಲೆಕ್ಕವಿಲ್ಲ. ಆದರೂ ನೀನು ಮದುವೆ ಮಾಡಿಕೊಳ್ಳುವುದಿಲ್ಲ ಎಂದು ಏಕೆ ಹೇಳುತ್ತಿರುವೆ?”

“ನಾವಿಬ್ಬರೂ ಪರಸ್ಪರ ಸೇರಿದ್ದೇವೆ. ಸಮಾಗಮ ನಡೆಸಿದ್ದೇವೆಂದರೆ ಯಾವ ತಪ್ಪು ಮಾಡಿದ ಹಾಗೆ? ನಾವಿಬ್ಬರೂ ಒಬ್ಬರನ್ನೊಬ್ಬರು ಇಷ್ಟಪಟ್ಟು ಹತ್ತಿರ ಬಂದೆವು. ಇದರಲ್ಲಿ ಮದುವೆ ಮಾತು ಎಲ್ಲಿಂದ ಬಂತು…..?”

“ಹಾಗಾದರೆ ನೀನು ಯಾರನ್ನು ಮದುವೆಯಾಗಲು ಹೊರಟಿರುವೆ?”

“ನನಗೆ ಅದರ ಬಗ್ಗೆ ಗೊತ್ತಿಲ್ಲ. ನಾನು ನಿನ್ನನ್ನು ಮದುವೆಯಾಗುತ್ತೇನೆ ಎಂದು ತಿಳಿದು ನಿನ್ನೊಂದಿಗೆ ಸೆಕ್ಸ್ ನಡೆಸುತ್ತಿಲ್ಲ ಕಪಿಲ್‌, ಈಗ ಆ ಕಾಲ ಹೋಯಿತು. ಅವನು ತನ್ನನ್ನು ಮದುವೆ ಆಗುತ್ತಾನೆಂದು ಅವನಿಗೆ ನಿಕಟ ಬರಲು ಅವಕಾಶ ಕೊಡುತ್ತಾಳೆಂದಲ್ಲ, ಈಗ ಅದೆಲ್ಲ ಇಲ್ಲ. ನಾನಂತೂ ಹಾಗೆ ಯೋಚಿಸುವವಳೇ ಅಲ್ಲ. ನಾನೀಗ ಜೀವನನ್ನು ಕೇವಲ ಎಂಜಾಯ್‌ ಮಾಡುವ ಮೂಡ್ ನಲ್ಲಿದ್ದೇನೆ. ನನಗೆ ಗೃಹ ಜೀವನ ನಡೆಸುವ ಮೂಡ್‌ ಇಲ್ಲ. ನೀನೂ ಕೂಡ ಮದುವೆ ಮದುವೆ ಎಂದು ಹೇಳೋದು ಬಿಟ್ಟು ಲೈಫ್ ಎಂಜಾಯ್‌ ಮಾಡು….” ಎಂದಳು.

“ಇಲ್ಲ ಸ್ನೇಹಾ. ಈ ಸಂಬಂಧಕ್ಕೆ ಏನಾದರೂ ಹೆಸರು ಇಡಬೇಕು ಎಂದು ನನಗನಿಸುತ್ತಿದೆ.”

“ಹಾಗಾದರೆ, ನಿನ್ನನ್ನು ಈಗಲೇ ಮದುವೆಯಾಗುವ ಹುಡುಗಿಯನ್ನು ಹುಡುಕಿ ಮದುವೆ ಆಗು,” ಎಂದು ಕೋಪದಿಂದ ಹೇಳಿದಳು ಸ್ನೇಹಾ.

“ಹೀಗೆ ಹೇಳಬೇಡ ಸ್ನೇಹಾ, ನಾನು ನಿನ್ನನ್ನು ಬಿಟ್ಟು ಇರಲಾರೆ,” ಕಪಿಲ್ ‌ಭಾವುಕನಾಗಿ ಹೇಳಿದ.

“ಇವೆಲ್ಲ ಹೇಳು ಮಾತುಗಳು. ದಿನ ಸಾವಿರಾರು ಹೃದಯಗಳು ಸೇರುತ್ತವೆ. ಮತ್ತೆ ಅಷ್ಟೇ ಹೃದಯಗಳು ತುಂಡರಿಲ್ಪಡುತ್ತಿರುತ್ತವೆ. ಇದೆಲ್ಲಾ ಸಾಮಾನ್ಯವಾಗಿ ನಡೆಯುವಂಥದ್ದೇ……”

ಕಪಿಲ್ ‌ನ ಕಣ್ಣಾಲಿಗಳು ತುಂಬಿ ಕೆನ್ನೆಯ ತನಕ ಹರಿದವು. ಅದನ್ನು ನೋಡಿ ಸ್ನೇಹಾ ನಗುತ್ತಾ, “ಇದೇನು ಕಪಿಲ್ ‌ನೀನು ಇಷ್ಟು ಭಾವುಕನಾದರೆ ಹೇಗೆ? ರಿಲ್ಯಾಕ್ಸ್….”

“ನನ್ನನ್ನು ಬಿಟ್ಟು ದೂರ ಹೋಗಬೇಡ ಸ್ನೇಹಾ…. ನಾನು ನಿನ್ನನ್ನು ನಿಜವಾಗಿಯೂ ಪ್ರೀತಿಸುತ್ತಿರುವೆ,” ಎನ್ನುತ್ತಾ ಅವಳನ್ನು ಬಾಹುಗಳಲ್ಲಿ ಬಳಸಿಕೊಂಡು ಚುಂಬಿಸಿದ. ಸ್ನೇಹಾ ಕೂಡ ಅವನ ಬಾಹುಗಳಲ್ಲಿ ಸೇರಿಕೊಂಡಳು. ಸ್ವಲ್ಪ ಹೊತ್ತು ಅವರ ರೊಮ್ಯಾನ್ಸ್ ನಡೆಯುತ್ತಿತ್ತು. ಮರುದಿನ ಕಪಿಲ್ ‌ತನ್ನ ಮನೆಗೆ ಹೊರಟು ನಿಂತಾಗ, “ಕಪಿಲ್ ‌ಬೀ ಪ್ರಾಕ್ಟಿಕಲ್,” ಎಂದಳು ಸ್ನೇಹಾ.

ಕಪಿಲ್ ‌ಅವಳತ್ತ ದಿಟ್ಟಿಸಿ ನೋಡಿದಾಗ, ಅವಳು ನಗುತ್ತಾ, “ಪ್ರಾಕ್ಟಿಕಲ್ ಆಗುದರಲ್ಲೇ ಜಾಣತನವಿದೆ. ಎಮೋಶನ್‌ ಆಗಿ ಗಿಲ್ಟ್ ಟ್ರಿಪ್‌ ಮೇಲೆ ಕಳಿಸುವ ಪ್ರಯತ್ನ ಮಾಡಬೇಡ,” ಎಂದಳು.

ಕೆಲವು ದಿನ ಹೀಗೆಯೇ ಕಳೆದವು. ಸ್ನೇಹಾ ತನ್ನಿಂದ ದೂರವಾಗಲು ಯತ್ನಿಸುತ್ತಿದ್ದಾಳೆಂದು ಅವನಿಗೆ ಅನಿಸತೊಡಗಿತು. ಅವನು ಯಾವಾಗಲಾದರೂ ಫೋನ್‌ ಮಾಡಿದರೆ, “ನೀನು ಹೋಗು. ನನಗೆ ಸ್ವಲ್ಪ ಅರ್ಜೆಂಟ್‌ ಮೀಟಿಂಗ್‌ ಇದೆ. ಸ್ವಲ್ಪ ತಡವಾಗುತ್ತೆ,” ಎನ್ನುತ್ತಿದ್ದಳು. ಯಾವಾಗಾದರೂ ಭೇಟಿಯಾದರೆ ತರಾತುರಿಯಲ್ಲಿರುತ್ತಿದ್ದಳು. ಅವನ ಜೊತೆ ಬೈಕಿನಲ್ಲಿ ಕುಳಿತುಕೊಂಡರೂ ಮೌನವಾಗಿಯೇ ಇರುತ್ತಿದ್ದಳು. ಮೊದಲಿನ ಹಾಗೆ ಬೈಕಿನಲ್ಲಿ ಹೋಗುವಾಗ ತುಂಟಾಟ, ರೊಮ್ಯಾನ್ಸ್ ಏನೂ ಇರುತ್ತಿರಲಿಲ್ಲ. ಅಪರಿಚಿತರ ಹಾಗೆ ದೂರ ದೂರ ಕುಳಿತುಕೊಳ್ಳುತ್ತಿದ್ದಳು. ಈ ಬಗ್ಗೆ ಕಪಿಲ್ ‌ಕೇಳಿದರೆ ಆಫೀಸಿನ ಸ್ಟ್ರೆಸ್‌ ಎನ್ನುತ್ತಿದ್ದಳು. ಅವಳು ತನ್ನಿಂದ ದೂರ ಆಗುತ್ತಿದ್ದಾಳೆಂದು ಕಪಿಲ್ ‌ಗೆ ಸ್ಪಷ್ಟವಾಗುತ್ತಿತ್ತು. ಫೋನ್‌ ಮಾಡಿದರೂ ಕೂಡ ರಿಸೀವ್ ‌ಮಾಡುತ್ತಿರಲಿಲ್ಲ. ಏನಾದರೂ ನೆಪ ಹೇಳುತ್ತಿದ್ದಳು.

ಅದೊಂದು ದಿನ ಕಪಿಲ್ ‌ಒಂದು ನಿರ್ಜನ ರಸ್ತೆಯಲ್ಲಿ ಬೈಕ್‌ ನಿಲ್ಲಿಸಿ, “ಸ್ನೇಹಾ, ನೀನು ನನ್ನಿಂದ ದೂರ ಆಗುತ್ತಿರುವುದೇಕೆ? ನಿನ್ನ ಈ ಅಪರಿಚಿತ ವರ್ತನೆಯನ್ನು ನನ್ನಿಂದ ಸ್ವಲ್ಪವೂ ಸಹಿಸಿಕೊಳ್ಳಲು ಆಗುವುದಿಲ್ಲ,” ಎಂದ.

ಸ್ನೇಹಾ ಕೂಡ ಈಗ ತನ್ನ ಮನಸ್ಸಿನ ಮಾತನ್ನು ಸ್ಪಷ್ಟಪಡಿಸತೊಡಗಿದಳು, “ಕಪಿಲ್‌, ನೀನು ಬಹಳ ಎಮೋಶನ್‌. ನೀನು ಈವರೆಗಿನ ನಮ್ಮ ಸಂಬಂಧವನ್ನು ಮದುವೆಯ ರೂಪದಲ್ಲಿ ನೋಡುತ್ತಿರುವೆ. ನನಗೆ ಇನ್ನೂ ಅನೇಕ ವರ್ಷಗಳ ತನಕ ಮದುವೆಯಾಗುವ ಯೋಚನೆಯೇ ಇಲ್ಲ. ಈಗ ನನಗೆ ನನ್ನ ಕೆರಿಯರ್‌ ಬಗ್ಗೆ ಗಮನ ಕೊಡಬೇಕಿದೆ. ಮದುವೆಯ ಸಂಕೋಲೆಯಲ್ಲಿ ಸಿಲುಕುವ ಅಪೇಕ್ಷೆ ನನಗಿಲ್ಲ. ನಿನ್ನ ಮದುವೆಯ ಅಪೇಕ್ಷೆಯಿಂದ ನನಗೆ ಬೋರ್‌ಆಗಿದೆ. ನಿನ್ನಂತಹ ಎಮೋಶನ್‌ ವ್ಯಕ್ತಿಯ ಜೊತೆಗೆ ನನಗೆ ಹೊಂದಾಣಿಕೆ ಆಗಲಿಕ್ಕಿಲ್ಲ ಅನಿಸುತ್ತೆ. ಹಾಗಾಗಿ ನಾನು ನಿನ್ನೊಂದಿಗೆ ಬ್ರೇಕ್‌ ಅಪ್‌ ಮಾಡಿಕೊಳ್ಳುತ್ತಿರುವೆ. ನಾನು ನಿನಗೆ ಇದನ್ನೇ ಹೇಳಲು ಇಚ್ಛಿಸುತ್ತಿದ್ದೆ,” ಎಂದಳು.

ಕಪಿಲ್ ‌ನ ಕಂಠ ತುಂಬಿ ಬಂತು, “ಹೀಗೆ ಹೇಳಬೇಡ ಸ್ನೇಹಾ, ನಾನು ನಿನ್ನನ್ನು ಬಿಟ್ಟು ಇರುವ ಕಲ್ಪನೆ ಕೂಡ ಮಾಡಲು ಆಗುವುದಿಲ್ಲ.”

“ಈ ಎಲ್ಲ ಡೈಲಾಗ್‌ ಸಿನಿಮಾಗಳಿಗೆ ಇರಲಿ. ಯಾರೂ ಯಾರಿಲ್ಲದೆ ಸಾಯವುದಿಲ್ಲ. ಇವತ್ತು ಕೊನೆಯ ಸಲ ಮನೆಗೆ ಬಿಡು. ಅಂಡ್ ಆಲ್ ದಿ ಬೆಸ್ಟ್ ಫಾರ್‌ ಯುವರ್‌ ಫ್ಯೂಚರ್‌. ಒಬ್ಬ ಒಳ್ಳೆಯ ಹುಡುಗಿಯನ್ನು ನೋಡಿ ಮದುವೆಯಾಗು. ನನ್ನನ್ನು ಮರೆತುಬಿಡು. ನಾನು ನಿನ್ನ ಮದುವೆಗೂ ಬರ್ತೀನಿ. ನನ್ನ ಹುಡುಗ ಇನ್ನೊಬ್ಬ ಹುಡುಗಿಯನ್ನು ಮದುವೆಯಾಗಬಾರದು ಎಂದು ಹೇಳುವವಳಲ್ಲ ಈ ಸ್ನೇಹಾ,” ಎಂದು ಹೇಳುತ್ತಾ ಸ್ನೇಹಾ ಜೋರಾಗಿ ನಕ್ಕಳು.

ಕಪಿಲ್ ‌ಅವಳನ್ನು ಅವಳ ಮನೆಯವರೆಗೂ ರೊಬೊಟ್‌ನ ಹಾಗೆ ಬಿಟ್ಟು ಬಂದ.

“ಬೈ ಕಪಿಲ್‌,” ಎಂದು ಹೇಳುತ್ತಾ ಸ್ನೇಹಾ ಅದೇ ಗತ್ತಿನಲ್ಲಿ ತನ್ನ ಮನೆಯ ಕಡೆ ಹೆಜ್ಜೆ ಹಾಕಿದಳು. ಅವಳು ಪುನಃ ಕಪಿಲ್ ‌ನತ್ತ ತಿರುಗಿ ಕೂಡ ನೋಡಲಿಲ್ಲ. ಅವಳು ಕಣ್ಣಿಂದ ಮರೆಯಾಗುವವರೆಗೂ ಕಪಿಲ್ ‌ಅವಳನ್ನೇ ನೋಡುತ್ತಾ ಇದ್ದ. ಕಪಿಲ್ ‌ತನ್ನ ಮನೆಗೆ ಹೊರಟ. ಅವನ ಕಣ್ಣಿಂದ ನೀರು ಸುರಿಯುತ್ತಿತ್ತು. ಅವನು ನಿಜವಾಗಿಯೂ ಸ್ನೇಹಾಳನ್ನು ಪ್ರೀತಿಸುತ್ತಿದ್ದ. ಅವಳಿಲ್ಲದ ಜೀವನ ನಡೆಸುವ ಕಲ್ಪನೆ ಕೂಡ ಮಾಡಿರಲಿಲ್ಲ. ಸೋತು ಸುಣ್ಣಾದವನಂತೆ ಮನೆ ತಲುಪಿದ. ಅವನ ಜೋಲುಬಿದ್ದ ಮುಖ ಕಂಡು ಅಮ್ಮ ಗಾಬರಿಗೊಳಗಾದರು. ಆರೋಗ್ಯದ ನೆಪ ಹೇಳಿ ಅವನು ಎರಡು ದಿನ ಮನೆಯಲ್ಲಿಯೇ ಉಳಿದಾಗ ಎಲ್ಲರಿಗೂ ಚಿಂತೆಯಾಯಿತು. ಅವನು ಏನೂ ತಿನ್ನುತ್ತಿರಲಿಲ್ಲ, ಮಾತೂ ಕೂಡ ಆಡುತ್ತಿರಲಿಲ್ಲ.

ತಾಯಿ ಸುಧಾ, ಮಗನ ಸ್ಥಿತಿ ನೋಡಲಾಗದೆ ಅವನ ಆತ್ಮೀಯ ಗೆಳೆಯ ಮೋಹನನಿಗೆ ಫೋನ್‌ ಮಾಡಿ ಮನೆಗೆ ಬರಹೇಳಿದರು. ಅವನಿಗೆ ಸ್ನೇಹಾಳ ಜೊತೆಗಿನ ಸಂಬಂಧದ ಬಗ್ಗೆ ತಿಳಿದಿತ್ತು. ಅವನು ಸಾಕಷ್ಟು ಹೊತ್ತು ಕಪಿಲ್ ನ ಹಾಸಿಗೆಯ ಬಳಿಯೇ ಕುಳಿತಿದ್ದ. ಕಪಿಲ್ ಏನೂ ಮಾತನಾಡಲಿಲ್ಲ. ಅವನು ಕಲ್ಲಿನಂತಾಗಿಬಿಟ್ಟಿದ್ದ. ಬಹಳ ಹೊತ್ತಿನ ಬಳಿಕ ಮೋಹನ್‌ ನ ಕೆಲವು ಪ್ರಶ್ನೆಗಳಿಗೆ ರೋದಿಸುತ್ತಲೇ ಉತ್ತರಿಸತೊಡಗಿದ.

“ಸ್ನೇಹಾ, ನನ್ನನ್ನು ಬಿಟ್ಟುಬಿಟ್ಟಿದ್ದಾಳೆ. ಹಾಗಾಗಿ…..” ಎಂದು ಬಿಕ್ಕಳಿಸತೊಡಗಿದ.

ಮೋಹನ್‌ ಬಹಳ ಹೊತ್ತಿನ ತನಕ ಅವನಿಗೆ ತಿಳಿಸಿ ಹೇಳುತ್ತಿದ್ದ.

ಮರುದಿನ ಬೆಳಗ್ಗೆ ಮನೆಯಲ್ಲಿ ಶೋಕ ವಾತಾವರಣ ಪಸರಿಸಿತ್ತು. ಕಪಿಲ್ ರಾತ್ರಿ ತನ್ನ ಕೈನ ನರವನ್ನು ಕತ್ತರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದ. ಅವನು ಒಂದು ಹಾಳೆಯಲ್ಲಿ ಹೀಗೆ ಬರೆದಿದ್ದ, `ಸಾರಿ ಮಮ್ಮಿ, ನನ್ನನ್ನು ಕ್ಷಮಿಸಿ. ಸ್ನೇಹಾ ನನ್ನನ್ನು ಬಿಟ್ಟುಬಿಟ್ಟಿದ್ದಾಳೆ. ನನಗೆ ಅವಳನ್ನು ಬಿಟ್ಟು ಇರಲು ಆಗುವುದಿಲ್ಲ. ಅಪ್ಪ ನನ್ನನ್ನು ಕ್ಷಮಿಸಿ.’

ಅಪ್ಪ ಅಮ್ಮ ಬಿಕ್ಕಿ ಬಿಕ್ಕಿ ಅಳುತ್ತಿದ್ದರು. ಅದು ಅತ್ಯಂತ ಕಷ್ಟದ ಗಳಿಗೆಯಾಗಿತ್ತು.

“ಒಬ್ಬ ಹುಡುಗಿಗಾಗಿ ಇವನು ನಮ್ಮನ್ನೇ ಬಿಟ್ಟುಹೋದನಲ್ಲ. ಇನ್ನು ಮುಂದೆ ನಮಗೆ ಯಾರು ಗತಿ?” ಎಂದು ಅವರು ರೋದಿಸುತ್ತಿದ್ದರು.

ವಿಷಯ ತಿಳಿದು ಸ್ನೇಹಿತ ಮೋಹನ್‌ ಕೂಡ ಅಲ್ಲಿಗೆ ಬಂದ. ಗೆಳೆಯನನ್ನು ಕಂಡು ಅವನಿಗೆ ಕಣ್ಣೀರು ಉಕ್ಕಿ ಬಂತು. ಅಕ್ಕಪಕ್ಕದವರು, ಸ್ನೇಹಿತರು, ಸಂಬಂಧಿಕರು ಎಲ್ಲರೂ ಅಲ್ಲಿ ಜಮಾಯಿಸತೊಡಗಿದರು.

ಮೋಹನ್‌ ಗೆ ಸ್ನೇಹಾಳ ಮೇಲೆ ವಿಪರೀತ ಕೋಪ ಬಂದಿತ್ತು. ಅದೊಂದು ದಿನ ಸಂಜೆ ಮೋಹನ್‌ ಸ್ನೇಹಾಳ ಆಫೀಸಿನ ಬಳಿ ನಿಂತು ಅವಳಿಗಾಗಿ ಕಾಯುತ್ತಿದ್ದ. ಅವಳು ಹೊರಬರುತ್ತಿದ್ದಂತೆ ಅವನು ತನ್ನ ಪರಿಚಯ ಹೇಳಿಕೊಂಡು ಕಪಿಲ್ ‌ನ ಆತ್ಮಹತ್ಯೆಯ ಬಗ್ಗೆ ತಿಳಿಸಿದ.

ಅದಕ್ಕವಳು, “ನನಗೆ ಈ ವಿಷಯದ ಬಗ್ಗೆ ದುಃಖವೇನೋ ಆಗಿದೆ. ಆದರೆ ನನಗೆ ಗಿಲ್ಟಿ ಫೀಲ್ ‌ಮಾಡಿಕೊಳ್ಳುವ ಅವಶ್ಯಕತೆ ಇಲ್ಲ. ಏಕೆಂದರೆ ಅವನು ದುರ್ಬಲನಾಗಿದ್ದ. ನಾನು ಹೇಳಿದ ವಾಸ್ತವ ಸಂಗತಿಯನ್ನು ಸಹಿಸಿಕೊಳ್ಳದೇ ಹೋದ. ಇದರಲ್ಲಿ ನನ್ನದೇನೂ ತಪ್ಪಿಲ್ಲ. ಅವನ ಆತ್ಮಹತ್ಯೆಗೆ ನನ್ನನ್ನು ನಾನು ತಪ್ಪಿತಸ್ಥೆ ಎಂದು ಖಂಡಿತಾ ಭಾವಿಸಿಕೊಳ್ಳಲಾರೆ. ನನ್ನನ್ನು ಗಿಲ್ಟ್ ಟ್ರಿಪ್‌ ಗೆ ಕಳಿಸಬೇಡಿ ಓಕೆನಾ….?” ಎಂದು ಹೇಳುತ್ತಾ ಅವಳು ನೇರವಾಗಿ ಹೆಜ್ಜೆ ಹಾಕಿದಳು.

ಮೋಹನ್‌ ಅವಳನ್ನೇ ಅಚ್ಚರಿಯಿಂದ ನೋಡುತ್ತಾ ನಿಂತ.

 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ