ಚಳಿಗಾಲದ ಮಜಾ ಅಂದ್ರೆ ಕೇವಲ ಬೆಚ್ಚಗಿನ ಉಡುಗೆ ಧರಿಸಿ, ಬಿಸಿ ಬಿಸಿ ಪಕೋಡ ತಿನ್ನುತ್ತಾ ಕಾಫಿ ಹೀರುವುದಷ್ಟೇ ಅಲ್ಲ ಅಥವಾ ಎಳೆ ಬಿಸಿಲಿನಲ್ಲಿ ತಿರುಗಾಡುತ್ತಾ ಟೈಂಪಾಸ್ ಮಾಡುವುದಲ್ಲ. ಮುಖ್ಯವಾಗಿ ಈ ಚಳಿಗಾಲದಲ್ಲಿ ಡ್ರೈಸ್ಕಿನ್, ಒಡೆದ ತುಟಿಗಳು, ಶುಷ್ಕ ಕೈಗಳು ಹಾಗೂ ನಿರ್ಜೀವ ಕೂದಲಿನ ಸಮಸ್ಯೆಗಳನ್ನೆದುರಿಸಿ ಗೆಲ್ಲಬೇಕಿರುವುದು ಅತಿ ಮುಖ್ಯ. ಹೆಣ್ಣು ಗೃಹಿಣಿ ಅಥವಾ ಉದ್ಯೋಗಸ್ಥ ವನಿತೆಯಾಗಿರಲಿ, ಇಬ್ಬರ ಬಳಿಯೂ ತಮ್ಮ ಚರ್ಮದ ಸೌಂದರ್ಯ ಸಂರಕ್ಷಣೆಗೆ ಸಮಯವೇ ಇರುವುದಿಲ್ಲ.
ಚಳಿಗಾಲದಲ್ಲಿ ಬಿಸಿಲಿನ ತಾಪ ತುಸು ಕಡಿಮೆ ಆಗಿರುತ್ತದೆ, ಹೀಗಾಗಿ ಹೆಚ್ಚಿನ ಮಹಿಳೆಯರು ಮಾಯಿಶ್ಚರೈಸರ್ ಮತ್ತು ಸನ್ ಸ್ಕ್ರೀನ್ ಲೋಶನ್ ಹಚ್ಚುವುದನ್ನೇ ಬಿಟ್ಟುಬಿಡುತ್ತಾರೆ. ಆದರೆ ಚಳಿಗಾಲದಲ್ಲೂ ಚರ್ಮವನ್ನು ಹಾನಿಕಾರಕ UV ಕಿರಣಗಳಿಂದ ರಕ್ಷಿಸಬೇಕಾದುದು ಅನಿವಾರ್ಯ. ಇದರೊಂದಿಗೆ ತಿಳಿದುಕೊಳ್ಳಬೇಕಾದ ಇನ್ನೊಂದು ಮುಖ್ಯ ವಿಚಾರವೆಂದರೆ, ನಿಮ್ಮ ಚರ್ಮ ಯಾವ ಪ್ರಕಾರದ್ದು ಮತ್ತು ಅದರ ಸಂರಕ್ಷಣೆ ಮಾಡುವ ವಿಧಾನ ಯಾವುದೆಂಬುದು.
ಸಾಮಾನ್ಯವಾಗಿ ಚಳಿಗಾಲದ ಶುಷ್ಕ ಹವೆ ಅಥವಾ ರೂಂ ಹೀಟರ್ಸ್‌ನ ಬಿಸಿ ಹವೆ ನಮ್ಮ ಚರ್ಮದ ಮೇಲಿನ ಪದರದ ಎಲ್ಲಾ ನೈಸರ್ಗಿಕ ತೈಲಾಂಶನ್ನೂ ಒಣಗಿಸಿಬಿಡುತ್ತವೆ. ಅಸಲಿಗೆ ತ್ವಚೆಯ ಈ ನೈಸರ್ಗಿಕ ತೈಲಾಂಶ ಅದರ ನ್ಯಾಚುರಲ್ ವಾಟರ್ ಬ್ಯಾಲೆನ್ಸ್ ನ್ನು ಕಾಪಾಡಲು ರೋಧಕದಂತೆ ಕೆಲಸ ಮಾಡುತ್ತದೆ.
ಹೀಗಿರುವಾಗ ಚರ್ಮ ಹೆಚ್ಚು ಟೈಟ್ ಆದಷ್ಟೂ, ನಿಮಗೆ ನಿಮ್ಮ ಚರ್ಮದ ಡ್ರೈನೆಸ್ ಅರಿವಾಗುತ್ತಾ ಹೋಗುತ್ತದೆ. ಆಗ ಅದು ನಿಸ್ತೇಜವಾಗಿ ಕಾಣುತ್ತದೆ. ಈ ಡ್ರೈನೆಸ್ ಕಾರಣದಿಂದಲೇ ನಮಗೆ ಆಗಾಗ ಉರಿ ಅಥವಾ ನವೆ ಅನಿಸುತ್ತದೆ.
ಹೀಗಾಗಿ ಹೆಚ್ಚಿನ ಹೆಂಗಸರು ಈ ಡ್ರೈನೆಸ್ ನಿಂದ ಮುಕ್ತರಾಗಲು ಮಾಯಿಶ್ಚರೈಸರ್ ಅಷ್ಟೇ ಬಳಸಿದರೆ ಸಾಕೆಂದುಕೊಳ್ಳುತ್ತಾರೆ, ಆದರೆ ಖಂಡಿತಾ ಅಷ್ಟು ಮಾತ್ರ ಸಾಲದು. ನಿಮ್ಮ ಸ್ಕಿನ್ ಕೇರ್ ರೊಟೀನ್ ನಲ್ಲಿ ಸ್ವಲ್ಪ ಬದಲಾವಣೆ ಮಾಡಿಕೊಂಡು, ನೀವು ಚಳಿಗಾಲಕ್ಕೆ ಸಂಬಂಧಿಸಿದ ಸಮಸ್ಯೆಗಳಿಂದ ಮುಕ್ತಿ ಪಡೆಯಬಹುದು. ಡ್ರೈ ಸ್ಕಿನ್ ಅಧಿಕ ಡಾರ್ಕ್ ಮತ್ತು ಟ್ಯಾನ್ ಆಗುತ್ತದೆ, ಹೀಗಾಗಿ ಚಳಿಗಾಲದಲ್ಲಿ ಅದನ್ನು ಹೆಚ್ಚು ಗಮನಿಸಿಕೊಳ್ಳಬೇಕಾದುದು ಅನಿವಾರ್ಯ.
ಚಳಿಗಾಲದಲ್ಲಿ ತ್ವಚೆಯ ತೈಲಗ್ರಂಥಿಗಳು ಸಕ್ರಿಯವಾಗಿ ಇರುವುದಿಲ್ಲ. ಹೀಗಾಗಿ ಅದರಿಂದ ತಯಾರಾಗುವ ನೈಸರ್ಗಿಕ ತೈಲಾಂಶ ಸಾಕಷ್ಟು ಪ್ರಮಾಣದಲ್ಲಿ ಚರ್ಮದ ಮೇಲ್ಪದರಕ್ಕೆ ತಲುಪುದಿಲ್ಲ. ಡ್ರೈನೆಸ್ ಕಾರಣ ಚರ್ಮದ ಸೌಂದರ್ಯ ಹಾಳಾಗುತ್ತದೆ. ಹೀಗಾಗಿ ಅದಕ್ಕೆ ಕೃತಕವಾಗಿ ಆರ್ದ್ರತೆ ಒದಗಿಸುವ ಅಗತ್ಯವಿದೆ.
ಚಳಿಗಾಲದಲ್ಲಿ ಎಂದೂ ಸೋಪು ಬಳಸಿ ಸ್ನಾನ ಮಾಡಬಾರದು. ಅದರ ಬದಲು ಫೇಸ್ ವಾಶ್, ಬಾಡಿವಾಶ್ ಅಥವಾ ಶವರ್ ಜೆಲ್‌ಬಳಸಬೇಕು. ಹೆಚ್ಚು ಕೆಮಿಕಲ್ಸ್ ಬೆರೆತಿರುವಂಥ ಸಾಬೂನು ಅಥವಾ ಅದರಂಥ ಉತ್ಪನ್ನಗಳನ್ನು ಬಳಸಬಾರದು. ಮನೆಯಿಂದ ಹೊರಗೆ ಹೊರಡುತ್ತೀರಾದರೆ SPF 30ರ ಸನ್ ಸ್ಕ್ರೀನ್ ಲೋಶನ್ ಬಳಸಲೇಬೇಕು ಅನಿಸಿದರೆ ಅದರ ವ್ಯಾಲ್ಯೂ ನ್ಯೂಟ್ರಲ್ ಆಗಿರಬೇಕು. ಸ್ನಾನ ಆದ ತಕ್ಷಣ ಮೈಗೆಲ್ಲ ಕೋಲ್ಡ್ ಕ್ರೀಂ ಹಚ್ಚಿಕೊಳ್ಳಿ. ತ್ವಚೆಗೆ ಪೂರಕವಾದ ಅಂಶಗಳನ್ನುಳ್ಳಂಥ ಕೋಸ್ಡ್ ಕ್ರೀಂ ಹಾಗೂ ಮಾಯಿಶ್ಚರೈಸರ್ ನ್ನಷ್ಟೇ ಬಳಸಬೇಕು. ಅಂದರೆ ಕೊಲ್ಯಾಜೆನ್, ಲ್ಯಾಕ್ಟಿಕ್ ಆ್ಯಸಿಡ್ ಅಥವಾ ಯೂರಿಯಾ ಮುಂತಾದವು ಇರಬೇಕು. ಯಾವ ಉತ್ಪನ್ನಗಳಲ್ಲಿ ಆಲ್ಕೊಹಾಲ್, ಕ್ಲೇ, ಗ್ಲಿಸರಿನ್ ಇರುತ್ತದೋ ಅಂಥವನ್ನು ಬಳಸಬಾರದು, ಏಕೆಂದರೆ ಇಂಥ ಚರ್ಮದ ಡ್ರೈನೆಸ್‌ನ್ನು ಹೆಚ್ಚಿಸುತ್ತವೆ.
ತ್ವಚೆಯ ಆರ್ದ್ರತೆ ಉಳಿಸಿಕೊಳ್ಳಿ
ನೀವು ಉದ್ಯೋಗಸ್ಥೆ ಆಗಿದ್ದರೆ, ಹೊರಗೆ ಹೊರಡುವಾಗ ನಿಮ್ಮ ಹ್ಯಾಂಡ್ ಬ್ಯಾಗಿನಲ್ಲಿ ಅಗತ್ಯವಾಗಿ ಬಾದಾಮಿ ತೈಲ ಬೆರೆತ ಮಾಯಿಶ್ಚರೈಸರ್‌ನ್ನು ಸದಾ ಇಟ್ಟುಕೊಂಡಿರಿ. ದಿನವಿಡೀ ಇದನ್ನು 3-4 ಸಲ ಮುಖಕ್ಕೆ ಹಚ್ಚಿಕೊಳ್ಳಬೇಕು. ಇದರಲ್ಲಿ ಧಾರಾಳವಾಗಿ ವಿಟಮಿನ್ `ಇ’ ತುಂಬಿದ್ದು, ಚರ್ಮ ಶುಷ್ಕವಾಗುವುದನ್ನು ಅದು ತಪ್ಪಿಸುತ್ತದೆ.
ಮನೆಯಲ್ಲೇ ತಯಾರಿಸಿ ಮಾಯಿಶ್ಚರೈಸರ್
ನೀವು ಮನೆಯಲ್ಲೇ ನಿಮಗಾಗಿ ಮಾಯಿಶ್ಚರೈಸರ್ ತಯಾರಿಸಿಕೊಳ್ಳಬಹುದು. ಇದಕ್ಕಾಗಿ ಮೊದಲು 10-12 ಬಾದಾಮಿ ಬೀಜಗಳನ್ನು ತಣ್ಣಗಿನ ಹಾಲಿನಲ್ಲಿ 1-2 ತಾಸು ನೆನೆಹಾಕಿ, ನುಣ್ಣಗೆ ಪೇಸ್ಟ್ ಮಾಡಿಡಿ. ಅದಕ್ಕೆ 1 ಕಪ್ ಓಟ್ಸ್ ಪೌಡರ್, ನೀಟಾಗಿ ತುರಿದ 1 ಸಣ್ಣ ಸೌತೇಕಾಯಿ, ಅರ್ಧ ಕಪ್ ಬೀಟ್ ಮಾಡಿದ ಹಾಲಿನ ಕೆನೆ ಬೆರೆಸಿಕೊಳ್ಳಿ. ಈ ಮಿಶ್ರಣವನ್ನು ಚೆನ್ನಾಗಿ ಕದಡಿಕೊಂಡು ಒಂದು ಡಬ್ಬಿಯಲ್ಲಿ ಸಂಗ್ರಹಿಸಿ ಇಡಿ. ಇದನ್ನು ಪ್ರತಿದಿನ ಮುಖಕ್ಕೆ ಹಚ್ಚಿ 10 ನಿಮಿಷ ಹಾಗೇ ಬಿಡಿ, ನಂತರ ತಣ್ಣೀರಿನಿಂದ ತೊಳೆಯಿರಿ. ಹೀಗೆ ಸತತ 3-4 ವಾರ ಮಾಡುವುದರಿಂದ ನಿಮ್ಮ ಮುಖಕ್ಕೆ ಅಪೂರ್ವ ಕಾಂತಿ ಬರುತ್ತದೆ, ಮುಖ ಹಿಗ್ಗಿ ಅರಳುತ್ತದೆ.
ಚಳಿಗಾಲದಲ್ಲಿ ಅಗತ್ಯವಾಗಿ ಆಲಿವ್ ಆಯಿಲ್ ಬಳಸಬೇಕು. ನಿಮ್ಮ ಸ್ನಾನದ ಬಕೆಟ್ ನೀರಿಗೆ ಇದರ 4-5 ಹನಿ ಬೆರೆಸಿಕೊಳ್ಳಿ. ಆದರೆ ಕುದಿಯುವಂಥ ಬಿಸಿ ನೀರನ್ನು ಎಂದೂ ಬಳಸಬಾರದು, ಉಗುರುಬೆಚ್ಚಗೆ ಇದ್ದರೆ ಸಾಕು. ನೀರು ಹೆಚ್ಚು ಬಿಸಿ ಇದ್ದಷ್ಟೂ ತ್ವಚೆ ಹೆಚ್ಚು ಡ್ರೈ ಆಗುತ್ತದೆ. ಸ್ನಾನದ ನಂತರ 1 ಮಗ್ ನೀರಿಗೆ 1 ಚಮಚ ಜೇನುತುಪ್ಪ ಬೆರೆಸಿ ಇಡೀ ದೇಹವನ್ನು ತೊಳೆಯಿರಿ. ಇದರಿಂದ ದೇಹ ಕೋಮಲವಾಗುತ್ತದೆ, ನೀವು ಇಡೀ ದಿನ ಹೆಚ್ಚು ಫ್ರೆಶ್ ಆಗಿರುತ್ತೀರಿ.
ಅರ್ಧರ್ಧ ಕಪ್ ಫ್ರೆಶ್ ಕ್ರೀಂ ಹಾಗೂ ಆಲಿವ್ ಆಯಿಲ್ ಗೆ 4-5 ಚಮಚ ವಿನಿಗರ್ ಬೆರೆಸಿಕೊಂಡು ಪೇಸ್ಟ್ ರೆಡಿ ಮಾಡಿ. ಪ್ರತಿ ರಾತ್ರಿ ಮಲಗುವ ಮುನ್ನ ಇದನ್ನು ಮುಖ ಕೈ ಕಾಲಿಗೆ ಹಚ್ಚಿಕೊಳ್ಳಿ, ಮಸಾಜ್ ಮಾಡಿ. ಮಾರನೇ ಬೆಳಗ್ಗೆ ಒಂದು ಒಳ್ಳೆ ಸ್ಕ್ರಬರ್ ನಿಂದ ಮುಖವನ್ನು ಉಜ್ಜಿ ತೊಳೆಯಿರಿ. ಇದರಿಂದ ಮೃತ ಜೀವಕೋಶ (ಡೆಡ್ ಸೆಲ್ಸ್) ತೊಲಗಿಸುವುದು ಸುಲಭವಾಗುತ್ತದೆ. ಮನೆಯಲ್ಲೇ ಸ್ಕ್ರಬರ್ ತಯಾರಿಸಲು ಹೀಗೆ ಮಾಡಿ. 2 ಚಮಚ ಕಡಲೆಹಿಟ್ಟಿಗೆ 1 ಚಮಚ ಸಣ್ಣರವೆ ಹಾಗೂ ಮೊಸರು ಬೆರೆಸಿಕೊಂಡು ಮಿಶ್ರಣ ಸಿದ್ಧಪಡಿಸಿ. ಇದು ಒಂದು ಉತ್ತಮ ಸ್ಕ್ರಬರ್. ಇಷ್ಟು ಮಾತ್ರವಲ್ಲದೆ ಸಮಯ ಸಿಕ್ಕಿದಾಗ, ಆ್ಯಲೋವೆರಾದ ತಿರುಳನ್ನು ಮುಖಕ್ಕೆ ಹಚ್ಚಿಕೊಳ್ಳುತ್ತಿರಿ. ನಿಂಬೆರಸಕ್ಕೆ ಗ್ಲಿಸರಿನ್, ಗುಲಾಬಿ ಜಲ ಬೆರೆಸಿ ಬಿಡುವಾಗಿದ್ದಾಗ ಮುಖ, ಮೈಕೈಗೆ ಹಚ್ಚುತ್ತಿರಿ.
ಅಗತ್ಯ ಸಲಹೆಗಳು
ಚಳಿಗಾಲ ಸಮೀಪಿಸುತ್ತಿದ್ದಂತೆ ಮೃದು ಹಾಗೂ ಸಕೋಮಲ ತ್ವಚೆ ಪಡೆಯಲು, ನೀವು ಹಚ್ಚು ಮಾಯಿಶ್ಚರೈಸರ್ ಪ್ರಮಾಣವನ್ನು ಹೆಚ್ಚಿಸಿ. ಸಾಮಾನ್ಯವಾಗಿ ಮಾಯಿಶ್ಚರೈಸರ್ ಆಯಿಲ್, ವಾಟರ್, ಮಿನರಲ್ ಹಾಗೂ ಸ್ಟೆಬಿಲೈಝಿಂಗ್ ಏಜೆಂಟ್ಸ್ ಗಳ ಮಿಶ್ರಣವಾಗಿರುತ್ತದೆ. ಹೀಗಾಗಿ ಚರ್ಮದ ಮೇಲೆ ತೈಲಾಂಶ ಉಳಿಸಿಕೊಳ್ಳಲು ಇದು ನೆರವಾಗುತ್ತದೆ ಮತ್ತು ತ್ವಚೆಯ ನೈಸರ್ಗಿಕ ತೇವಾಂಶ ಹಿಂಗಲು ಬಿಡುವುದಿಲ್ಲ. ಜೊತೆಗೆ ನಿಯಮಿತವಾಗಿ ಬಾದಾಮಿ ಎಣ್ಣೆಗೆ ಎಳ್ಳೆಣ್ಣೆ, ಕೊಬ್ಬರಿ ಎಣ್ಣೆ ಬೆರೆಸಿ ಬಾಡಿ ಮಸಾಜ್‌ಮಾಡಿಕೊಳ್ಳಿ. ಪ್ರತಿದಿನ ಹೀಗೆ ಮಸಾಜ್ ಮಾಡಿಕೊಳ್ಳಲಾಗದಿದ್ದರೆ ಕನಿಷ್ಠ 4-5 ಹನಿ ಈ ಮಿಶ್ರಣವನ್ನು ನೀರಿಗೆ ಬೆರೆಸಿ ಸ್ನಾನ ಮಾಡಿ.
ಸಾಮಾನ್ಯವಾಗಿ ನಾವು ಬೇಸಿಗೆಗಿಂತ ಚಳಿಗಾಲದಲ್ಲಿ ನೀರನ್ನು ಕಡಿಮೆ ಪ್ರಮಾಣದಲ್ಲಿ ಸೇವಿಸುತ್ತೇವೆ. ಇದರ ಕಾರಣ ಚರ್ಮ ನಿಸ್ತೇಜವಾಗುತ್ತದೆ. ಹೀಗಾಗಿ ನೀವು ಕೆಲಸಗಳಲ್ಲಿ ಎಷ್ಟೇ ಬಿಝಿ ಇರಲಿ, ದಿನವಿಡೀ 10-12 ಗ್ಲಾಸ್ ನೀರನ್ನು ಅಗತ್ಯವಾಗಿ ಕುಡಿಯಬೇಕು. ದೇಹಕ್ಕೆ ನೀರಿನ ಪೂರೈಕೆ ಅಮೃತ ಸಮಾನ ಎಂಬುದರಲ್ಲಿ ಉತ್ಪ್ರೇಕ್ಷೆ ಇಲ್ಲ. ಇದು ದೇಹದ ಆರ್ದ್ರತೆ ಕಾಪಾಡುವ ಜೊತೆಗೆ, ಒಳಗಿನ ವಿಷಯುಕ್ತ ಪದಾರ್ಥಗಳ್ನು ಹೊರಗೆ ದಬ್ಬಲು ಸಹಾಯ ಮಾಡುತ್ತದೆ.
ಚಳಿಗಾಲದಲ್ಲಿ ಬೆವರುವಿಕೆ ಕಡಿಮೆ. ಹೀಗಾಗಿ ರೋಮ ರಂಧ್ರಗಳು ಮುಚ್ಚಿಹೋಗುತ್ತವೆ. ಇದಕ್ಕಾಗಿ ನೀವು ಡೀಪ್ ಕ್ಲೆನ್ಸಿಂಗ್ ಮಿಲ್ಕ್ ನಿಂದ ಚರ್ಮವನ್ನು ಸ್ವಚ್ಛಗೊಳಿಸಿ. ಒಂದಿಷ್ಟು ಕಡಲೆಹಿಟ್ಟಿಗೆ ಅಚ್ಚ ಹಸುವಿನ (ಹಸಿ) ಹಾಲು ಬೆರೆಸಿಕೊಂಡು, ಅದರಿಂದ ಮುಖಕ್ಕೆ ಲೇಪನ ಹಚ್ಚಿಕೊಳ್ಳಿ. ಅರ್ಧ ಗಂಟೆ ಬಿಟ್ಟು ತಣ್ಣೀರಿನಿಂದ ತೊಳೆಯಿರಿ. ಈ ಫೇಸ್ ಮಾಸ್ಕನ್ನು ರೊಟೀನ್ ಸ್ಕಿನ್ ಕೇರ್ ನ ಭಾಗವಾಗಿಸಿ. ಇಂದಿನ ಮಾರುಕಟ್ಟೆಯಲ್ಲಿ ಇಂಥ ಎಷ್ಟೋ ರೆಡಿಮೇಡ್ ಮಾಸ್ಕ್ ಗಳು ಸಿಗುತ್ತವೆ, ದುಬಾರಿಯಾದ ಅವುಗಳ ಬದಲಿಗೆ ಮನೆಯಲ್ಲೇ ಇದನ್ನು ಹೀಗೆ ತಯಾರಿಸಿ :
ಅರ್ಧ ಕಪ್ ಗೋಧಿ ತೌಡಿಗೆ 2 ಚಮಚ ಬಾದಾಮಿ ಪುಡಿ, 1-1 ಚಮಚ ಜೇನುತುಪ್ಪ, ಮೊಟ್ಟೆಯ ಹಳದಿ ಭಾಗ, ಮೊಸರು, ಹಾಲಿನ ಕೆನೆ ಬೆರೆಸಿಕೊಳ್ಳಿ. ಈ ಪೇಸ್ಟನ್ನು ಪ್ರತಿದಿನ ದೇಹವಿಡೀ ಹಚ್ಚಿಕೊಳ್ಳಿ (ಮುಖ್ಯವಾಗಿ ತೆರೆದ ಭಾಗಗಳಿಗೆ). 1 ತಾಸಿನ ನಂತರ ಅದನ್ನು ತೊಳೆಯಿರಿ. 3-4 ದಿನ ಈ ಪೇಸ್ಟ್ ನ್ನು ಫ್ರಿಜ್ ನಲ್ಲಿರಿಸಿ ಬಳಸುತ್ತಿರಬಹುದು. ಇದರಿಂದ ಡೆಡ್ ಸೆಲ್ಸ್ ತೊಲಗಿ, ಚರ್ಮದಲ್ಲಿ ಹೊಸ ಕಾಂತಿ ಉಕ್ಕುತ್ತದೆ.
ಚಳಿಗಾಲದಲ್ಲಿ ತುಟಿ ಒಡೆಯುವ ಸಮಸ್ಯೆ ಮಾಮೂಲಿ. ಒಮ್ಮೊಮ್ಮೆ ಅಲ್ಲಿಂದ ರಕ್ತ ಜಿನುಗುವುದೂ ಉಂಟು. ಹೀಗಾದಾಗ ದಿನದಲ್ಲಿ 5-6 ಸಲ ಲಿಪ್ ಬಾಮ್ ಹಚ್ಚಲು ಮರೆಯದಿರಿ. ಆದಷ್ಟೂ SPF ಯುಕ್ತ ಲಿಪ್ ಬಾಮ್ ನ್ನೇ ಬಳಸಿರಿ.
ಸಾಮಾನ್ಯವಾಗಿ ಉದ್ಯೋಗಸ್ಥ ವನಿತೆಯರು ಅವಸರದಲ್ಲಿ ಬೆಳಗಿನ ಹೊತ್ತು, ಏನೋ ಒಂದಿಷ್ಟು ಬಾಯಿಗೆ ತಿಂಡಿ ತುರುಕಿಕೊಂಡು ಓಡುತ್ತಿರುತ್ತಾರೆ. ಆದರೆ ಚಳಿಗಾಲದಲ್ಲಿ ತ್ವಚೆಯ ಆರೋಗ್ಯ ಸುಸ್ಥಿತಿಯಲ್ಲಿರಬೇಕೆಂದರೆ, ಸದಾ ಬ್ಯಾಲೆನ್ಸ್ಡ್ ಫುಡ್ ಸೇವಿಸಿ, ಇದರಲ್ಲಿ ಪ್ರೋಟೀನ್ ವಿಟಮಿನ್ ಪ್ರಮಾಣಗಳು ಸರಿಯಾಗಿರಲಿ. ಇದಕ್ಕಾಗಿ ಹಸಿ ತರಕಾರಿ ಮತ್ತು ಹಣ್ಣುಗಳನ್ನು ಧಾರಾಳವಾಗಿ ಸೇವಿಸಿ.
– ಸುಮತಿ ಜಿ.
ಚರ್ಮದ ವಿವಿಧ ಪ್ರಕಾರಗಳು
ಶುಷ್ಕ ತ್ವಚೆ : ಈ ಬಗೆಯ ಡ್ರೈ ಸ್ಕಿನ್ ಮೇಲ್ಮೈನಲ್ಲಿ ಬಿಗಿಯಾಗಿ ಎಳೆದಂತೆ ಕಾಣಿಸುತ್ತದೆ, ಒರಟೊರಟಾಗಿ ಇರುತ್ತದೆ. ಮುಖ್ಯವಾಗಿ ಇಂಥವರು ಕೆಮಿಕಲ್ಸ್ ಬೇಸ್ಡ್ ಸಾಬೂನನ್ನು ಬಳಸಲೇಬಾರದು. ಇಂಥ ಚರ್ಮ ಬಹಳ ತೆಳು, ಅಪರೂಪಕ್ಕೆ ಸಣ್ಣಪುಟ್ಟ ರಂಧ್ರಗಳೂ ಕಾಣಬಹುದು. ಈ ಬಗೆಯ ಚರ್ಮ ಆಗಾಗ ಉರಿ, ನವೆ, ಪೊರೆ ಸುಲಿಯುವಿಕೆ ಇತ್ಯಾದಿ ಸಮಸ್ಯೆಗಳಿಗೆ ಗುರಿಯಾಗುತ್ತಿರುತ್ತದೆ. ಚಳಿಗಾಲದ ತೀವ್ರ ಪರಿಣಾಮಗಳು ಮೊದಲು ಇದರ ಮೇಲೇ ಆಗುವುದು. ಇಂಥ ಚರ್ಮದ ಆರೈಕೆ ಸರಿಯಾಗಿ ನಡೆಯದಿದ್ದರೆ, ಬಹು ಬೇಗ ಸುಕ್ಕುಗಳು ಹೆಚ್ಚುತ್ತವೆ.
ತೈಲೀಯ ತ್ವಚೆ : ಈ ಬಗೆಯ ಆಯ್ಲಿ ಸ್ಕಿನ್ ಜಿಡ್ಡು ಜಿಡ್ಡಾಗಿ ಹೊಳೆಯುತ್ತಿರುತ್ತದೆ. ಇಂಥದರ ಮೇಲೆ ಮೊಡವೆ, ಬ್ಲ್ಯಾಕ್ ಹೆಡ್ಸ್ ಬೇಗ ಮೂಡುತ್ತವೆ. ಇದರಲ್ಲಿ ದೊಡ್ಡದಾದ ಓಪನ್ ಪೋರ್ಸ್ ಸ್ಪಷ್ಟ ಕಾಣಿಸಿಕೊಳ್ಳುತ್ತವೆ.
ಮಿಶ್ರಿತ ತ್ವಚೆ : ಇಂಥ ಮಿಕ್ಸ್ಡ್ ಸ್ಕಿನ್ ಸಾಮಾನ್ಯವಾಗಿ ಎಲ್ಲಾ ಹೆಂಗಸರಲ್ಲೂ ಕಂಡುಬರುತ್ತದೆ. ಇದು ಹಣೆ, ಮೂಗು ಮತ್ತು ಗಲ್ಲಗಳ ಬಳಿ ಹೆಚ್ಚು ಹೊಳೆಯುತ್ತಾ, ಕೆನ್ನೆ ಮತ್ತು ಮುಖದ ಇತರ ಭಾಗಗಳಲ್ಲಿ ಡ್ರೈ ಮತ್ತು ಸಾಮಾನ್ಯವಾಗಿ ಇರುತ್ತದೆ.
ಮೇಲಿನ ಯಾವ ಬಗೆಯ ಚರ್ಮವೇ ನಿಮ್ಮದಾಗಿರಲಿ, ಇಲ್ಲಿ ಹೇಳಿದ ಸಲಹೆಗಳನ್ನು ಶಿಸ್ತಾಗಿ ಪಾಲಿಸಿ ಸಮಸ್ಯೆಗಳಿಂದ ಮುಕ್ತರಾಗಿ.