ನಾವೊಂದಷ್ಟು ಮಹಿಳೆಯರು ಆಶಾ ಇನ್ಛಿನೈಟ್‌ ಸಂಸ್ಥೆಯ ಮೂಲಕ ಸರ್ಕಾರಿ ಶಾಲೆಗೆ ಹೋಗಿ ಮಕ್ಕಳಿಗೆ ಇಂಗ್ಲಿಷ್‌ ಪಾಠ ಹೇಳಿಕೊಡುತ್ತಿದ್ದೆ. ನಮಗೆ ಪಾಠ ಹೇಳಿ ಕೊಡಲು ಸಂಸ್ಥೆಯರು ಸಹಾಯ, ನಿರ್ದೇಶನ ಎಲ್ಲವನ್ನೂ ನೀಡುತ್ತಿದ್ದರು. ಆದರೆ ಕೊರೋನಾ ಬಂದ ಮೇಲೆ ಮನೆಯಿಂದ ಹೊರಗೆ ಹೋಗುವುದೇ ನಿಂತುಹೋಯಿತು. ಶಾಲೆಗಳನ್ನು ಮುಚ್ಚಿದರು.

IMG-20210902-WA0033-(1)

ಲಾಕ್‌ ಡೌನ್‌ ನಲ್ಲಿ ಮನೆಯಲ್ಲಿಯೇ ಕುಳಿತು ನಿಜವಾಗಿ ಮನಸ್ಸು ಜಡ್ಡು ಹಿಡಿಯಿತು. ಮನೆಯಿಂದ ಹೊರಗೆ ಕಾಲಿಡಲು ಭಯ. ನಾವು ಹಿರಿಯ ನಾಗರಿಕರು. ನಮಗೆ ಹೊರಗೆ ಹೋಗಲಿಕ್ಕೆ ಇದ್ದುದೇ ಪಾರ್ಕುಗಳು ಮತ್ತು ಅಲ್ಲಿ ಸಿಗುವ ಗೆಳತಿಯರು. ಪಾರ್ಕುಗಳನ್ನು ಮುಚ್ಚಿದ್ದಾರೆ. ದಿನ ಬೆಳಗಾದರೆ ಟಿ.ವಿಯಲ್ಲಿ ಹಿರಿಯರು ಮನೆಯಲ್ಲೇ ಇರಿ ಎನ್ನುವ ಸಂದೇಶಗಳು.

IMG-20210902-WA0033

ಮನೆಯ ನಾಲ್ಕು ಗೋಡೆಗಳ ಒಳಗಿದ್ದು ಬಹಳ ಬೇಸರವೆನಿಸುತ್ತಿತ್ತು. ಆದರೆ ಮನೆಯಲ್ಲಿಯೇ ಇದ್ದು ಏನು ಮಾಡುವುದು ಎಂದು ಯೋಚಿಸಿದಾಗ ನಮ್ಮ ಸಹಕಾರಕ್ಕೆ ಬಂದದ್ದು ನಮ್ಮ ಸಂಸ್ಥೆ, ಅವರ ನಿರ್ದೇಶನದ ಮೇರೆಗೆ ಮೊಬೈಲ್‌ ನ ಮೂಲಕ ಈ ಮಕ್ಕಳಿಗೆ ಮತ್ತು ಅವರ ಜೊತೆಗೆ ಅಗತ್ಯವಿರುವ ಮಿಕ್ಕ ಮಕ್ಕಳಿಗೆ ಅಂದರೆ ಕೆಲಸದವರ ಮಕ್ಕಳು, ಆಟೋ ಡ್ರೈವರ್‌ ಗಳ ಮಕ್ಕಳು ಎಲ್ಲರಿಗೂ ಪಾಠ ಹೇಳಿಕೊಡಲು ಆರಂಭಿಸಿದೆವು. ಮೊದಲು ನಾವು ಶಾಲೆಗೆ ಹೋಗುತ್ತಿದ್ದುದು ಸ್ವಲ್ಪ ಜನ ಅಂದರೆ ಒಂದಿಪ್ಪತ್ತು ಜನ. ಆದರೆ ಆ ಸಂಖ್ಯೆ ಈಗ ನೂರವೈತ್ತಕ್ಕಿಂತ ಹೆಚ್ಚಾಗಿದೆ. ಕಲಿಸುವವರು ಬೇರೆ ಬೇರೆ ರಾಜ್ಯದ ಮಹಿಳೆಯರೂ ಸಹ ಆಗಿದ್ದಾರೆ. ನಮ್ಮ ಸಂಸ್ಥೆಯ ಮೂಲಕ ನಾವು ಇಂಗ್ಲಿಷಿನ ಜೊತೆ ಕನ್ನಡವನ್ನೂ ಕಲಿಸುತ್ತಿದ್ದೇವೆ. ಬಡ ಮಕ್ಕಳಿಗೆ ಇಂಗ್ಲಿಷ್‌ ಭಾಷೆ ದುಬಾರಿಯಾಗುವುದನ್ನು ಇದು ತಪ್ಪಿಸಿತು.

IMG_20210901_094412

ಅಂತೆಯೇ ಬೆಂಗಳೂರಿಗೆ ಬಂದು ನಮ್ಮವರೇ ಆಗಿದ್ದರೂ ಕನ್ನಡ ಕಲಿಯದ ಬೇರೆ ರಾಜ್ಯದವರು, ಅವರ ಮಕ್ಕಳು ಮತ್ತು ಸಾಫ್ಟ್ ವೇರ್‌ ಕಂಪನಿಯ ಉದ್ಯೋಗಿಗಳಿಗೆ ಕನ್ನಡ ಕಲಿಸುತ್ತಿದ್ದೇವೆ. ನಮ್ಮ ಗುಂಪು ಬೆಳೆಯುತ್ತಲೇ ಇದೆ. ಇಂಗ್ಲಿಷ್‌ ಓದುವುದು ಮತ್ತು ಬರೆಯುವುದು, ಜೊತೆಗೆ ಕನ್ನಡ ಮಾತನಾಡಲು ಕಲಿಸುವುದು. ಈ ರೀತಿ ನಾವು ಮಾಡುತ್ತಿರುವ ಕೆಲಸಗಳು ಮತ್ತು ಜನರು ಹೆಚ್ಚಾಗುತ್ತಲೇ ಇದ್ದಾರೆ. ಕೊರೋನಾ ಬರದಿದ್ದರೆ ಖಂಡಿತ ನಾವು ಇಷ್ಟೊಂದು ಕೆಲಸ ಮಾಡುತ್ತಲೇ ಇರಲಿಲ್ಲವೇನೋ? ಕೊರೋನಾದಿಂದ ಮೊಬೈಲ್ ‌ಮೂಲಕ ಕನ್ನಡ, ಇಂಗ್ಲಿಷ್‌ ಕಲಿಸಲು ಅವಕಾಶವಾಯಿತು. ತನ್ಮೂಲಕ ಅವರಿಗೆ ನಮ್ಮ ಸಂಸ್ಕೃತಿಯ ಪರಿಚಯವನ್ನೂ ಮಾಡುತ್ತಿದ್ದೇವೆ ಎನ್ನುವ ಸಂತಸ ನಮ್ಮದು. ಮನೆಯಲ್ಲಿ ಸುಮ್ಮನೆ ಕುಳಿತು ನ್ಯೂಸ್‌ ನೋಡಿ ಆತಂಕ ಪಡುತ್ತಿದ್ದವರಿಗೆ ಸಮಯದ ಸದುಪಯೋಗವಾಯಿತು.

ಈ ಬಗ್ಗೆ ಎಲ್ಲರಿಗೂ ಸಂತೋಷವೇ ಆಗಿದೆ. ಕೊರೋನಾದಿಂದ ಮನೆಯಲ್ಲಿಯೇ ಕುಳಿತು ಚಿಂತಿಸುತ್ತಿದ್ದವರಿಗೆ, ನಾವು ಒಂದು ಒಳ್ಳೆಯ ಕೆಲಸ ಮಾಡುತ್ತಿದ್ದೇವೆ ಎನ್ನುವ ಸಮಾಧಾನ ಆಗಿದೆ.

ಸಿ.ವಿ. ವೀರಾ ರಮಣ್

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ