ಕಂಗನಾ ರಾಣಾವತ್‌ ಳನ್ನೂ ಸೇರಿಸಿ ಬಾಲಿವುಡ್‌ ನಲ್ಲಿ ಇಂದು ಹಲವು ನಟಿಯರು ನ್ಯಾಪೋಟಿಸಮ್ ಕುರಿತು ಕೆಂಡ ಕಾರುತ್ತಿರುತ್ತಾರೆ. ಇವರುಗಳ ಆರೋಪವೆಂದರೆ, ಬಾವುಲಿಡ್‌ ನ ನ್ಯಾಪೋಟಿಸಮ್ ಕಾರಣ, ಎಷ್ಟೋ ಅಪ್ಪಟ ಪ್ರತಿಭಾಶಾಲಿಗಳಿಗೆ ಬೇಕೆಂದೇ ಎತ್ತಂಗಡಿ ಮಾಡಿಸಿ, ಇತರೇ ತುಚ್ಛ ಕಾರಣಗಳಿಗಾಗಿ ಅಭಿನಯದ ಗಂಧಗಾಳಿ ಅರಿಯದ ಬೇರೆ ನಟನಟಿಯರನ್ನು ಮೆರೆಸುತ್ತಿದ್ದಾರೆ ಅಂತ.

ಆದರೆ ಮಧ್ಯಪ್ರದೇಶ ರಾಜ್ಯದ ಭೋಪಾಲ್ ನಗರದ ಮಧ್ಯಮ ವರ್ಗದ ಕುಟುಂಬದವಳಾದ ಹಾಗೂ 2008ರಲ್ಲಿ `ಮೂರ್ತಿಕಲೆ/ಚಿತ್ರಕಲೆ’ಯಲ್ಲಿ ರಾಷ್ಟ್ರಪತಿಗಳಿಂದ ಪ್ರಶಸ್ತಿ, ಪದಕ ಗಳಿಸಿದ ನಟಿ ಇಂದಿರಾ ತಿವಾರಿ, 2018ರ ಆಗಸ್ಟ್ ನಲ್ಲಿ ರಾಷ್ಟ್ರೀಯ ನಾಟ್ಯ ವಿದ್ಯಾಲಯದಲ್ಲಿ ಕಲಿಕೆ ಪೂರೈಸಿದ ಎರಡೇ ವರ್ಷಗಳಲ್ಲಿ, ಸುಮನ್‌ ಮುಖ್ಯೋಪಾಧ್ಯಯರು ನಿರ್ದೇಶಿಸಿದ `ನಝರ್‌ ಬಂದ್‌’ ಚಿತ್ರದಿಂದ ಎಂಟ್ರಿ ಪಡೆದು, ಸುಧೀರ್‌ ಮಿಶ್ರಾರ `ಸೀರಿಯಸ್‌ ಮ್ಯಾನ್‌,’ ಪಾಲ್‌ ರತನ್‌ ರಾಜ್‌ ರ `ಪುಷ್ಟಿ’ ಸಂಜಯ್‌ ಲೀಲಾ ಭನ್ಸಾಲಿಯರ `ಗಂಗೂಬಾಯಿ ಕಾಠಿಯಾವಾಡಿ’ ಚಿತ್ರಗಳಲ್ಲಿ ನಟಿಸಿ ಸೈ ಎನಿಸಿದ್ದಾಳೆ.

ಚಿಕ್ಕಂದಿನಲ್ಲೇ ತಂದೆಯನ್ನು ಕಳೆದುಕೊಂಡ ಇವಳನ್ನು ತಾಯಿ ಸಾಕಿ ಸಲಹಿದರು. 2010ರಲ್ಲಿ ಪ್ರಕಾಶ್‌ರ ಭೋಪಾಲ್‌ ಗೆ `ಆರಕ್ಷಣ್’ ಚಿತ್ರದ ಶೂಟಿಂಗ್‌ ಗೆ ಬಂದಿದ್ದಾಗ, ಅವರು ಅಮಿತಾಭ್‌ ಮಗಳಾಗಿ ಇಂದಿರಾ ನಟಿಸಲು ಸಣ್ಣ ಅವಕಾಶ ನೀಡಿದ್ದರು. ಅಲ್ಲಿಂದ ಶುರುವಾಯ್ತು, ಇಂದಿರಾಳ ನಾಟ್ಯ ವಿದ್ಯಾಲಯ ಹಾಗೂ ಸಿನಿಮಾ ಕೆರಿಯರ್‌.

ನೀನು ಪೇಂಟಿಂಗ್‌, ಮೂರ್ತಿಕಲೆ, ಶಾಸ್ತ್ರೀಯ ಸಂಗೀತ, ನೃತ್ಯ, ನಟನೆ….. ಎಲ್ಲ ಕಲಿತಿದ್ದೀಯ. ಆದರೆ ಅಭಿನಯವನ್ನೇ ಕೆರಿಯರ್ಆಗಿಸಿಕೊಂಡದ್ದೇಕೆ?

ನಟನೆ ಬಿಟ್ಟು ಉಳಿದೆಲ್ಲ ಈಗಲೂ ನನ್ನ ನೆಚ್ಚಿನ ಹವ್ಯಾಸಗಳೇ! ನಾನು ಕಥಕ್‌ ನೃತ್ಯ, ಹಿಂದೂಸ್ಥಾನಿ ಸಂಗೀತ ಇನ್ನೂ ಅಭ್ಯಾಸ ಮಾಡುತ್ತಿದ್ದೇನೆ. `ನಝರ್‌ ಬಂದ್‌’ ಚಿತ್ರದ ನಂತರ ಬಾಲಿವುಡ್‌ ನಲ್ಲೇ ಕೆರಿಯರ್‌ ಮುಂದುವರಿಸಲು ಬಯಸಿದೆ.

ಭೋಪಾಲ್, ದೆಹಲಿ, ಮುಂಬೈ…. ಅಂತರ ಇದೆ ಅನ್ಸುತ್ತಾ?

ನನಗೆ ಅಂಥ ಯಾವ ವಿಶೇಷ ವ್ಯತ್ಯಾಸ ಕಾಣಿಸಲಿಲ್ಲ. ನಾನು ಯಾವುದೇ ಹೆಜ್ಜೆ ಇಟ್ಟರೂ ಅಮ್ಮ ಈ ಬಗ್ಗೆ ಏನೆಂದುಕೊಳ್ಳುತ್ತಾರೋ ಎಂದೇ ಚಿಂತಿಸುವೆ. ದೆಹಲಿಯ ರಾಷ್ಟ್ರೀಯ ನಾಟ್ಯ ವಿದ್ಯಾಲಯದಲ್ಲಿದ್ದುಕೊಂಡೇ `ನಝರ್‌ ಬಂದ್‌’ ಚಿತ್ರದ ನಾಯಕಿಯಾಗಿ ತೊಡಗಿದಾಗ, ಅದರಲ್ಲಿ ಹೀರೋ ಜೊತೆಗೆ ಬೋಲ್ಡ್ ಸೀನ್ಸ್ ಮಾಡಬೇಕಾದಾಗ, ನಿರ್ದೇಶಕರಿಗೆ ನನ್ನ ಇತಿಮಿತಿ ತಿಳಿಸಿ, ಅಷ್ಟರಲ್ಲಿ ಉಳಿದುಕೊಂಡಿರುವೆ.

ಮುಂಬೈಗೆ ಬಂದಾಗ ಇಲ್ಲಿನ ಗ್ಲಾಮರ್‌ನನ್ನನ್ನು ಬೆಚ್ಚಿ ಬೀಳಿಸಿತು. ಸುಧೀರ್‌, ಸಂಜಯ್‌ ರಂಥ ಮಹಾನ್‌ ನಿರ್ದೇಶಕರ ಕೈ ಕೆಳಗೆ ಕೆಲಸ ಮಾಡಿದೆ. ಇಂಥವರುಗಳ ಚಿತ್ರಗಳಲ್ಲಿ ಪಳಗಿ, ನಾನೀಗ ಮೈ ಚಳಿ ಬಿಟ್ಟು ನಟಿಸಲು ಮುಂದಾಗಿದ್ದೇನೆ.

ನಿನಗೆ `ಸೀರಿಯಸ್‌ಮ್ಯಾನ್‌’ ಚಿತ್ರದಲ್ಲಿ ಪ್ಲಾರ್ಟ್‌ ಫಾರ್ಮ್ ಸಿಕ್ಕಿತು. `ನಝರ್‌ ಬಂದ್‌’ ಥಿಯೇಟರ್‌ ನಲ್ಲಿ ಹೆಸರು ಗಳಿಸಿತು.

ಮುಂದೆ ನಿನ್ನ ಆಯ್ಕೆ ಯಾವ ಕಡೆ?

ಮೊದಲು ಥಿಯೇಟರ್‌ ಚಿತ್ರಗಳನ್ನೇ ಆರಿಸುವೆ. ನಾಟ್ಯ ವಿದ್ಯಾಲದಲ್ಲಿದ್ದಾಗಲೇ ಮೊದಲ ಚಿತ್ರದಲ್ಲಿ ಪೂರ್ಣ ಪ್ರಮಾಣದ ನಾಯಕಿಯಾದೆ. ಇದಕ್ಕಾಗಿ ಮೊದಲ ಬಾರಿಗೆ ಕೋಲ್ಕತಾಗೆ ಹೋಗಿ ಶೂಟಿಂಗ್‌ ನಡೆಸಿದೆ. ಆಗಿನಿಂದ ನಾಟಕ, ಸಿನಿಮಾ ಎರಡರಲ್ಲೂ ತೊಡಗಿರುವೆ. ವೇದಿಕೆ ಏರಿ ಡ್ರಾಮಾ ಥಿಯೇಟರ್‌ ನಿಭಾಯಿಸಬೇಕಾಗುವುದಕ್ಕೂ, ಸಿನಿಮಾ ಬೇಸಿಕ್ಸ್ ಗೂ ಇವರು ಸೂಕ್ಷ್ಮ ವ್ಯತ್ಯಾಸ ತಿಳಿಸಿಕೊಟ್ಟರು.

`ನಝರ್‌ ಬಂದ್‌’ನಂಥ ಪೂರ್ಣ ನಾಯಕಿ ಪ್ರಧಾನ ಚಿತ್ರದಲ್ಲಿ ಯಶಸ್ಸು ಗಳಿಸಿದ ಮೇಲೆ `ಸೀರಿಯಸ್‌ ಮ್ಯಾನ್‌’ ನಂಥ ಚಿತ್ರದಲ್ಲಿ ನಾಯಕನ ಹಿಂದೆ ಓಡುವ ಚಿತ್ರ ಬೇಕಿತ್ತೇ? ಸುಧೀರ್‌ಮಿಶ್ರಾರ ಈ ಚಿತ್ರದಲ್ಲಿ ನಟಿಸಲು ಬೇರೆ ಕಾರಣ ಇತ್ತು. ಆಗ ನನಗೆ ಧಾರಾವಾಹಿ ಆಫರ್‌ ಸಹ ಬಂತು. ನನಗೆ ಅದು ಬೇಕಿರಲಿಲ್ಲ. ಆಗ ಕಾಸ್ಟಿಂಗ್‌ ಡೈರೆಕ್ಟರ್‌ ಮುಖೇಶ್‌ ಛಾಬ್ರಾ ಫೋನ್‌ ಮಾಡಿ ಸುಧೀರರ ಈ ಚಿತ್ರ ಬಿಡಬೇಡ ಎಂದು ಕಿವಿಮಾತು ಹೇಳಿದರು. ನಾನಂತೂ ಅವರ `ಹಜಾರೋ ಖ್ಯಾಯಿಶ್‌ ಐಸೆ ಭೀ’ ಚಿತ್ರ ನೋಡಿದಾಗಿನಿಂದ ಕಟ್ಟಾ ಅಭಿಮಾನಿಯಾಗಿ, ಅವರ ಚಿತ್ರದಲ್ಲಿನ ಪಾತ್ರಕ್ಕಾಗಿ ಕಾಯುತ್ತಿದ್ದೆ. ನವಾಜುದ್ದೀನ್‌ ಅಂಥ ಮೇರುನಟರ ಜೊತೆ ಅವಕಾಶ ಬಿಡ್ತಾರಾ?

ಚಿತ್ರದ ನಂತರ ಬಾಲಿವುಡ್ನಲ್ಲಿ ಎಂಥ ಪ್ರತಿಕ್ರಿಯೆ ಇತ್ತು?

`ಸೀರಿಯಸ್‌ ಮ್ಯಾನ್‌’ ಚಿತ್ರದಲ್ಲಿ ನಾನು ಒಬ್ಬ ಆದರ್ಶ ಪತ್ನಿ, 8 ವರ್ಷದ ಮಗುವಿನ ತಾಯಿಯಾಗಿ ಗ್ಲಾಮರ್‌ ಇಲ್ಲದೆ ನಟಿಸಿದೆ. ಈ ಚಿತ್ರದ ಶೂಟಿಂಗ್‌ ನಲ್ಲಿದ್ದಾಗಲೇ ಲೀಲಾ ಭನ್ಸಾಲಿಯವರ `ಗಂಗೂಬಾಯಿ’ ಚಿತ್ರದ ಆಫರ್‌ ಬಂತು. ಈ ಚಿತ್ರ ಬಹಳ ಜನರ ಮೆಚ್ಚುಗೆ ಗಳಿಸಿತು. ನನ್ನ ಅಸಹಾಯಕ ಗೃಹಿಣಿಯ ಪಾತ್ರ ಪ್ರಶಂಸನೀಯ ಎನಿಸಿತು.

ಅನುರಾಗ್‌ ಕಶ್ಯಪ್‌ ರಂಥ ಹಿರಿಯ ನಿರ್ದೇಶಕರು ನನಗೆ ಫೋನ್‌ ಮಾಡಿ ಈ ಡೀಗ್ಲಾಮರಸ್‌ ಪಾತ್ರ ವಹಿಸಿದ್ದಕ್ಕೆ ಅಭಿನಂದಿಸಿದರು. ಉತ್ತಮ ಚಿತ್ರಕಥೆ ತಮಗೆ ದೊರೆತ ತಕ್ಷಣ ನನಗೊಂದು ಪಾತ್ರ ನೀಡುವುದಾಗಿ ಹೇಳಿದರು. ಮನೋಜ್‌ ಬಾಜ್‌ಪೇಯಿಯಂಥ ಬುದ್ಧಿಜೀವಿ ನಟರು ಈ ಪಾತ್ರ ಹೊಗಳಿದರು. ಅದಾದ ಮೇಲೆ ನನಗೆ ಹೆಚ್ಚಾಗಿ ಬೋಲ್ಡ್ ಸೀನ್ಸ್, ತಾಯಿ ಪಾತ್ರ, ದಕ್ಷಿಣ ಭಾರತೀಯ ಗೃಹಿಣಿಯ ಪಾತ್ರಗಳೇ ದೊರಕತೊಡಗಿದವು….. ಅಂಥವನ್ನೆಲ್ಲ ನಿರಾಕರಿಸಿದೆ. ಕೆಲವು ದಿನಗಳ ಹಿಂದೆ ಒಂದು ರೇಡಿಯೋ ನನಗೆ `ಸೀರಿಯಸ್‌ ಮ್ಯಾನ್‌’ ಚಿತ್ರದಲ್ಲಿನ ಉತ್ತಮ ಪೋಷಕ ಪಾತ್ರಕ್ಕಾಗಿ ಪ್ರಶಸ್ತಿ ನೀಡಿದಾಗ, ಹೆಮ್ಮೆ ಎನಿಸಿತು.

ನಿನ್ನ ಮೊದಲ ಚಿತ್ರ `ನಝರ್ಬಂದ್‌’ ಸಹ ಅಂತಾರಾಷ್ಟ್ರೀಯ ಚಿತ್ರ ಸಮಾರಂಭದಲ್ಲಿ ದೊಡ್ಡ ಸುದ್ದಿ ಮಾಡಿತಲ್ಲವೇ?

ಹೌದು, ನನ್ನ ಕೆರಿಯರ್‌ ನ ಮೊದಲ ಚಿತ್ರವೇ ವಿಶ್ವ ಪ್ರೀಮಿಯರ್‌`ಬುಸಾನ್‌ ಇಂಟರ್‌ ನ್ಯಾಷನಲ್ ಫಿಲ್ಮ್ ಫೆಸ್ಟಿವ್’ನಲ್ಲಿ ನಡೆಯಿತು. ನಂತರ `ನ್ಯೂಯಾರ್ಕ್‌ ಇಂಡಿಯನ್‌ ಫಿಲ್ಮ್ ಫೆಸ್ಟಿವ್‌’ನಲ್ಲೂ ಇದರ ಪ್ರದರ್ಶನ ನಡೆಯಿತು. ಇದೀಗ ಈ ಚಿತ್ರ `ಲಂಡನ್‌ ಇಂಟರ್‌ ನ್ಯಾಷನಲ್ ಫಿಲ್ಮ್ ಫೆಸ್ಟಿವ್‌’ಗೆ ಹೊರಟು ನಿಂತಿದೆ.

ಮೇಲ್ನೋಟಕ್ಕೆ ಇದೊಂದು ಪ್ರೇಮ ಚಿತ್ರವೆನಿಸಿದರೂ ಪ್ರೇಮದ ಕುರಿತು ಇದೇನು ಹೇಳುತ್ತದೆ?

ಇದು ಸಾಧಾರಣ ಅಲ್ಲ, ಜಟಿಲ ಪ್ರೇಮಕಥೆ ಎಂದೇ ಹೇಳಬೇಕು. ಇಬ್ಬರು ಅಪರಿಚಿತರು ತಮ್ಮ ಗುರಿ ತಲುಪುವ ತಯಾರಿಯಲ್ಲಿರುತ್ತಾರೆ, ಆದರೆ ಆ ಗುರಿ ಮಾತ್ರ ಯಾವಾಗ ಒಂದೇ ಆಯ್ತು ಎಂಬುದು ಅವರಿಗೆ ಗೊತ್ತೇ ಆಗಲ್ಲ. ಜೀವನದ ಎಷ್ಟೋ ಏರಿಳಿತಗಳ ನಂತರ ಮಾನವತೆ ಒಂದೇ ಮುಖ್ಯ ಎಂದು ಸಾಬೀತಾಗುತ್ತದೆ. ಯಾರನ್ನೇ ಆಗಲಿ, ನಿಮ್ಮ ಕಪಿಮುಷ್ಟಿಯಲ್ಲಿ ನಿಯಂತ್ರಿಸಲಾಗದು ಎಂಬುದನ್ನೂ ಇದು ಸಾರುತ್ತದೆ.

ಲೀಲಾ ಬನ್ಸಾಲಿಯವರ `ಗಂಗೂಬಾಯಿ’ ಚಿತ್ರದ ಕುರಿತು……ಅವರ ಈ ಅಮೋಘ ಚಿತ್ರದಲ್ಲಿ ನಾನು ಆಲಿಯಾ ಭಟ್‌ ಜೊತೆ ನಟಿಸಿದ್ದೇನೆ. ಈ ಚಿತ್ರ ನನಗೆ ಒಂದು ಹೊಸ ಇಮೇಜ್‌ ತಂದುಕೊಟ್ಟಿತು. ರಿಲೀಸ್‌ ಆಗದ ಈ ಚಿತ್ರದ ಕುರಿತು ಇದಕ್ಕಿಂತ ಹೆಚ್ಚಿಗೆ ಹೇಳಲಾರೆ.

ಕವಿ, ಕಲಾವಿದರು ಹೆಚ್ಚಿನ ಕಲ್ಪನೆ ಮಾಡಿಕೊಳ್ಳುತ್ತಾರೆ. ಹಾಗಾದರೆ ನಿನ್ನ ಕಲ್ಪನೆ ಪ್ರಕಾರ ಯಾವ ವಿಶೇಷ ಪಾತ್ರ ನಿಭಾಯಿಸ ಬಯಸುವೆ?

ಈ ಕುರಿತಾಗಿ ನನಗಂತೂ ಚಿತ್ರವಿಚಿತ್ರ ಕಲ್ಪನೆಗಳಿವೆ. ಎಲ್ಲಾ ಕಲೆಗಳಲ್ಲೂ ನಿಪುಣಳಾದಂಥ ರಾಣಿಯ ಪಾತ್ರ ಬೇಕು. ಕೆಲವರಂತೂ ನನ್ನನ್ನು ಕಂಡು, ನಿನ್ನಲ್ಲಿ ಸ್ಮಿತಾ ಪಾಟೀಲ್‌, ಶಬಾನಾ ಆಜ್ಮಿಯರಂಥ ಪ್ರತಿಭೆ ಬೆರೆತಿದೆ ಎನ್ನುತ್ತಾರೆ. ಅವರ ಆ ನಿರೀಕ್ಷೆಯನ್ನು ನಾನೆಂದೂ ಹುಸಿಗೊಳಿಸಲಾರೆ.

ಇಂದಿನ ಕಾಲಕ್ಕೆ ತಕ್ಕಂತೆ ನಾವೇಕೆ ಹಳೆಯ ನಾಟಕಗಳನ್ನು ಪ್ರಸ್ತುತಪಡಿಸಬಾರದು?

ಆದರೆ ನಾವು ಅಪ್‌ ಡೇಟೆಡ್‌ ಆಗಿಲ್ಲ. ಇಂದಿನ ಪೀಳಿಗೆಗೆ ಹಳೆಯ ನಾಟಕಗಳ ಕಥಾ ಹಂದರದ ಬಗ್ಗೆ ಹೇಳಲು, ನಮ್ಮಂಥ ಕಲಾವಿದರು ಅಪ್‌ ಡೇಟ್‌ ಆಗಲೇಬೇಕು. ಇಂದಿನ ಪೀಳಿಗೆಯವರ ಬಳಿ ಬೇಕಾದಷ್ಟು ಮಾಹಿತಿ ಇರುತ್ತದೆ.

ಸ್ಮಿತಾ, ಶಬಾನಾರಂಥ ಪ್ರತಿಭೆಯುಳ್ಳ ನೀನು ಬೋಲ್ಡ್ ಸೀನ್ಸ್ ಬೇಡ, ನಿನ್ನದೇ ಆದ ಇತಿಮಿತಿ ಇದೆ ಅಂತೀಯ. ಹಾಗಿರುವಾಗ ಸ್ಮಿತಾ ತರಹದ ಪಾತ್ರ ಮಾಡಲು ನಿನ್ನಿಂದ ಆದೀತೇ?

ಇಂದಿನ ಕಾಲದವರಿಗೆ ಬೋಲ್ಡ್ ಪಾತ್ರಗಳೆಂದರೆ, ಬಿಚ್ಚಮ್ಮನ ಗ್ಲಾಮರಸ್‌ ಪಾತ್ರಗಳು! ಆ ಕಾಲದಲ್ಲಿ ಅವರು ಮಾಡಿದ್ದು ಸ್ತ್ರೀ ಪ್ರಧಾನ ಗಟ್ಟಿ ಪಾತ್ರಗಳು. ಅವರ ಕಾಲದ ಬೋಲ್ಡ್ ನೆಸ್‌ ಗೂ ಇಂದಿರ ಪರಿಕಲ್ಪನೆಗೂ ಅಜಗಜಾಂತರ ವ್ಯತ್ಯಾಸವಿದೆ. ಮೂಲಕಥೆ, ಚಿತ್ರಕಥೆಯಲ್ಲಿ ಬೋಲ್ಡ್ ದೃಶ್ಯಗಳು ಅನಿವಾರ್ಯ ಎಂದರೆ ನನಗೆ ಆಕ್ಷೇಪಣೆ ಇಲ್ಲ. ಅದನ್ನು ಡ್ರೀಂ ಸಾಂಗ್‌ ಹೆಸರಲ್ಲಿ ಮಳೆಯಲ್ಲಿ ನೆನೆಯುವುದು, ಮನರಂಜನೆಗಾಗಿ ನದಿಯಲ್ಲಿ ಸ್ನಾನದ ದೃಶ್ಯಗಳು ನನಗೆ ಖಂಡಿತಾ ಬೇಕಿಲ್ಲ!

ನೀನು ಕವಿತೆ ಬರೆಯುವುದೂ ಉಂಟೇ?

ಬಾಲ್ಯದಿಂದಲೂ ನನಗೆ ಅದರಲ್ಲಿ ಆಸಕ್ತಿ ಉಂಟು. ನಾನು ಯಾವ ಮೂಡ್‌ ನಲ್ಲಿದ್ದರೂ ಕವಿತೆ ಬರೆಯಬಲ್ಲೆ. ಒಂದು ಸಲ ಕುಳಿತರೆ ಪೂರ್ತಿ ಬರೆದು ಮುಗಿಸುವೆ. ನನ್ನ ಚಿತ್ರ ಬಿಡಿಸಿದಾಗೆಲ್ಲ, ಅದರ ಕೆಳಗೊಂದು ಕವಿತೆ ಬರೆದು ಅದನ್ನು FBಗೆ ಹಾಕ್ತೀನಿ. ಇದು ನನ್ನ ಮೆಚ್ಚಿನ ಹವ್ಯಾಸ.

ಕಥೆ, ಕಾದಂಬರಿ, ಸಾಹಿತ್ಯದ ಹುಚ್ಚೂ ಇದೆಯೇ?

ಖಂಡಿತಾ ಇದೆ, ಸದಾ ಕಾದಂಬರಿ ಓದುತ್ತಾ ಇರುತ್ತೇನೆ. ಇದರಿಂದ ಸಿನಿಮಾಗೆ ಬೇಕಾದ ಉತ್ತಮ ಕಥೆಗಳ ಬಗ್ಗೆ ಯೋಚಿಸುತ್ತೇನೆ. ನನಗೆ ಹೊಸ ಹೊಸ ಭಾಷೆ ಕಲಿಯಲು ಇಷ್ಟ. ಇದೀಗ ನನಗೆ ಮರಾಠಿ, ಬಂಗಾಳಿ ಚಿತ್ರಗಳ ಆಫರ್ಸ್‌ ಬರುತ್ತಿವೆ, ಆ ಭಾಷೆಗಳ ಜೊತೆ ಪ್ರೊಫೆಶನಲ್ ಇಂಗ್ಲಿಷ್‌ ಸಹ ಕಲಿಯುತ್ತಿದ್ದೇನೆ.

ಪ್ರತಿನಿಧಿ

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ