ನನ್ನ ಗೆಳತಿ ಶಿಲ್ಪಾಳ ಅತ್ತೆ ಹೆಚ್ಚು ಕಡಿಮೆ ಹಿಟ್ಲರ್‌ ಸ್ವಭಾವದವರು. ಅವರು ತಮ್ಮ ಸೊಸೆಯನ್ನು ಮನೆಯ ಕೆಲಸದಾಳು ಎಂಬಂತೆ ಭಾವಿಸಿದ್ದಾರೆ. ಶಿಲ್ಪಾಳ ಗಂಡ ಸುಹಾಸ್‌ ಅಮ್ಮನ ಆಜ್ಞೆ ಪಾಲಿಸು ಮಗ. ಅವನು ತನ್ನ ಅಮ್ಮನ ಅಮಾನವೀಯ ವರ್ತನೆಯ ಬಗ್ಗೆ ಒಂದು ಶಬ್ದ ಕೂಡ ತುಟಿಬಿಚ್ಚಿ ಮಾತನಾಡುವುದಿಲ್ಲ. ತನ್ನ ಹೆಂಡತಿಯ ಪರ ವಹಿಸಿ ಎಂದೂ ಮಾತನಾಡುವುದಿಲ್ಲ. ಒಂದು ವೇಳೆ ಶಿಲ್ಪಾಳೇನಾದರೂ ಅಮ್ಮನ ಬಗ್ಗೆ ದೂರು ಹೇಳಿದರೆ, ಅವನು ಅವಳಿಗೇ ನಾಲ್ಕು ಮಾತು ಹೇಳಿ ಸುಮ್ಮನಾಗಿಸುತ್ತಾನೆ. ಅವನ ಉತ್ತರ ಯಾವಾಗಲೂ ರೆಡಿಮೇಡ್‌ ಆಗಿರುತ್ತದೆ. `ಇರುವುದಿದ್ದರೆ ಇವರು, ಇಲ್ಲದಿದ್ದರೆ ತಕ್ಷಣ ಹೊರಟುಹೋಗು….’ ಅದೊಂದು ಸಲ ಅವಳು ಗಂಡ ಹಾಗೂ ಅತ್ತೆಯ ವರ್ತನೆಗೆ ರೋಸಿ ಹೋಗಿ ತನ್ನ ತವರಿಗೆ ಹೊರಟು ಹೋದಳು. ಆದರೆ ಸಮಾಜದ ದೃಷ್ಟಿಯಲ್ಲಿ ಶಿಲ್ಪಾಳದ್ದೇ ತಪ್ಪು. ಏಕೆ ಏಕೆಂದರೆ ತಪ್ಪು ಯಾವಾಗಲೂ ಸೊಸೆಯದ್ದೇ ಆಗಿರುತ್ತದೆ.

ಸಮಾಜದ ಇಬ್ಬಗೆಯ ಧೋರಣೆ

ಸಾಮಾನ್ಯವಾಗಿ ಕೇಳಿ ಬರುವ ಸುದ್ದಿಗಳೇನೆಂದರೆ, ಸೊಸೆ ಒಳ್ಳೆಯಳಾಗಿರಲಿಲ್ಲ. ಅವಳ ಕುಮ್ಮಕ್ಕಿನಿಂದಾಗಿ ಮಗ ತನ್ನ ತಾಯಿಯನ್ನು ಮನೆಯಿಂದ ಹೊರ ದಬ್ಬಿದ. ಯೋಚಿಸಬೇಕಾದ ಸಂಗತಿಯೇನೆಂದರೆ ಪ್ರತಿಸಲ ಸೊಸೆಯದ್ದೇ ತಪ್ಪು ಎಂದು ಏಕೆ ಭಾವಿಸಬೇಕು? ಹೆಂಡತಿಯ ಮಾತು ಕೇಳಿ ಅಮ್ಮನಿಗೆ ತೊಂದರೆ ಕೊಡುವುದು ತಪ್ಪು ಎಂದಾದರೆ, ಅಮ್ಮನ ಗೌವರಕ್ಕೆಂದು ಆಕೆಯ ತಪ್ಪು ಮಾತುಗಳ ಬಗ್ಗೆ ಮೌನದಿಂದಿರುವುದು ಸರಿ ಹೇಗಾಗುತ್ತದೆ?

ಎರಡು ಮಾತು ಅತ್ತೆಯವರೊಂದಿಗೆ ನಾನೂ ಕೂಡ ತಾಯಿ. ಅಮ್ಮ ಈ ಜಗತ್ತಿನ ಅತ್ಯಂತ ಪ್ರೀತಿಪಾತ್ರ ವ್ಯಕ್ತಿ ಎನ್ನುವುದು ನನಗೆ ಗೊತ್ತು. ಆಕೆಯದು ಅತಿ ವಿಶಿಷ್ಟ ಅನುಬಂಧ. ಅವಳ ಸಂಪರ್ಕಕ್ಕೆ ಅದ್ಭುತ ಅನುಭವ ದೊರಕುತ್ತದೆ. ಆದರೆ ಇದರರ್ಥ ಅಮ್ಮ ಎಂದೂ ತಪ್ಪು ಮಾಡುವುದಿಲ್ಲ ಎಂದಲ್ಲ. ತಪ್ಪನ್ನು ತಪ್ಪು ಎಂದು ಹೇಳುವುದರಲ್ಲಿ ಯಾವ ಅಪರಾಧ ಅಡಗಿದೆ? ಅದೂ ಕೂಡ ಒಬ್ಬ ಮಗನ ತಾಯಿ, ಅತ್ತೆಯಾದ ಬಳಿಕ ಉದ್ದೇಶಪೂರ್ಕವಾಗಿ ಈ ತಪ್ಪು ಮಾಡುತ್ತಾಳೆ. ಅತ್ತೆಯಾದ ಬಳಿಕ ಅಮ್ಮಂದಿರು ಅತ್ಯಂತ ನಿಸ್ವಾರ್ಥ ಭಾವದಿಂದ ಮಾಡಿದ ಮಮತೆಯ ಮೌಲ್ಯ ಬಯಸುತ್ತಾರೇನೋ? ಅದಕ್ಕಾಗಿ ಅವರಿಗೆ ಅಸುರಕ್ಷತೆಯ ಭಾವನೆ ಉಂಟಾಗುತ್ತಿರಬಹುದು. ಕಹಿ ಸತ್ಯ ಏನೆಂದರೆ, ಅತ್ತೆಯಾದ ಅಮ್ಮಂದಿರು ಸ್ವಾರ್ಥಿಗಳಾಗಿ ಬಿಡುತ್ತಾರೆ. ಅವರಿಗೆ ತಮ್ಮ ಮಗನ ಹೊರತಾಗಿ ಬೇರೇನೂ ಕಾಣಿಸುವುದಿಲ್ಲ. ಸೊಸೆಯಂತೂ ಕಣ್ಣಿಗೆ ಗೋಚರಿಸುವುದೇ ಇಲ್ಲ. ಅವರು ತಮ್ಮ ಸೊಸೆಯಂದಿರನ್ನು ಎದುರಾಳಿ ಎಂದು ತಿಳಿಯುತ್ತಾರೆ. ವೈರಿ ಎಂದು ಭಾವಿಸುತ್ತಾರೆ, ಸೊಸೆ ಮಗನನ್ನು ತನ್ನಿಂದ ಕಿತ್ತುಕೊಳ್ಳುತ್ತಿದ್ದಾಳೆ ಎಂದೇ ಆಕೆ ಭಾವಿಸುತ್ತಾಳೆ.

ಬಹುಶಃ ಇದಕ್ಕಿರಬಹುದು

ಆಕೆ ಅವನಿಗೆ ಜನ್ಮ ನೀಡಿದ್ದಾಳೆ. ಪಾಲನೆ ಪೋಷಣೆ ಮಾಡಿದ್ದಾಳೆ. ಹಾಗೆಂದು ಆಕೆ ಸೊಸೆಯನ್ನು ಬೀದಿಯಿಂದ ಎತ್ತಿಕೊಂಡು ಬಂದಿದ್ದಾಳೆಯೇ? ಸೊಸೆಗೂ ಆಕೆಯ ಅಮ್ಮ ಜನ್ಮ ನೀಡಿದ್ದಾಳೆ. ನಿಮ್ಮ ಮನೆಯ ಗೌರವ ಕಾಪಾಡಲೆಂದು ಆಕೆಗೂ ಚೆನ್ನಾಗಿ ಓದಿಸಿ, ಬೆಳೆಸಿದ್ದಾಳೆ. ಆಕೆಗೆ ಒಂದು ಅವಕಾಶವನ್ನಾದರೂ ಕೊಟ್ಟು ನೋಡಿ.

ಈ ಕಾರಣದಿಂದ ಮಗ ತನ್ನ ಜೀವನ ನಡೆಸುವುದನ್ನು ಬಿಟ್ಟುಬಿಡುತ್ತಾನೆಯೇ? ಸದಾ ಅಮ್ಮನ ಮರ್ಜಿ ಕಾಯುತ್ತಾ ಕುಳಿತಿರಬೇಕಾ? ಅಮ್ಮ ಏನಾದರೂ ತಪ್ಪು ಮಾಡಿದರೆ ಆತ ಬಾಯಿ ಮುಚ್ಚಿಕೊಂಡು ಸುಮ್ಮನೇ ಕುಳಿತಿರಬೇಕಾ?

ಇಬ್ಬಗೆಯ ಮಾನದಂಡ

ಇದು ಘೋರ ಅನ್ಯಾಯ, ಬುದ್ಧಿಯೆಂಬ ಕಿಟಕಿಗೆ ಪರದೆ ಎಳೆಯಲ್ಪಟ್ಟು ಅತ್ತೆಯಂದಿರು ತಾವು ಹಿಂದೊಮ್ಮೆ ಸೊಸೆಯಾಗಿದ್ದ ದಿನಗಳನ್ನು ನೆನಪಿಸಿಕೊಳ್ಳಬೇಕು. ಆಗ ಅವರು ತಮ್ಮ ಪತಿ ಅಮ್ಮನನ್ನಲ್ಲ, ತಮ್ಮ ಬಗೆಗಷ್ಟೇ ಗಮನಹರಿಸಬೇಕು ಎಂದು ಯೋಚಿಸುತ್ತಿದ್ದರು. ನಿಮಗೂ ಮಗಳಿರಬೇಕು ಅಲ್ವಾ? ಒಂದು ವೇಳೆ ಆಕೆಯ ಅತ್ತೆ ಕೂಡ ನೀವು ಹೇಗೆ ವರ್ತಿಸುತ್ತೀರೊ ಹಾಗೆಯೇ ವರ್ತಿಸಿದರೆ ಏನಾಗುತ್ತಿತ್ತು? ನಿಮ್ಮ ಅಳಿಯ ಕೇವಲ ನಿಮ್ಮ ಮಗಳ ಬಗೆಗಷ್ಟೇ ಯೋಚಿಸಬೇಕು ಎಂದು ನೀವು ಭಾವಿಸುತ್ತೀರಿ ಅಲ್ವಾ? ಮಗಳಿಗೊಂದು ಧೋರಣೆ, ಸೊಸೆಗೊಂದು ಧೋರಣೆ ಏಕೆ? ಇದೆಂಥ ನೀತಿ? ಇದೊಂದು ಸಂಬಂಧಗಳ ವಿಚಿತ್ರ ನೀತಿಯಾಗಿದೆ. ನಮ್ಮ ಭಾರತೀಯ ಸಮಾಜದಲ್ಲಿ ಒಂದು ಕಡೆ ಅಮ್ಮ ತನ್ನ ಶಾಸ್ತ್ರ ಹಾಗೂ ಶಸ್ತ್ರಗಳ ಮೂಲಕ ಮಗನನ್ನು ತನ್ನತ್ತ ಎಳೆದುಕೊಳ್ಳುತ್ತಾಳಾದರೆ, ಇನ್ನೊಂದೆಡೆ ಹೆಂಡತಿ ತನ್ನ ವಿಚಾರಗಳಿಂದ ಭಾವನೆಗಳಿಂದ ತನ್ನ ಗುರಿ ಸಾಧಿಸಲು ನೋಡುತ್ತಿರುತ್ತಾಳೆ. ಹೀಗಾಗಿ ಮಗ ಒಂದು ರೀತಿಯಲ್ಲಿ ಇಬ್ಬರಿಗೂ ರಂಗಭೂಮಿಯಂತಾಗುತ್ತಾನೆ.

ವ್ಯರ್ಥವಾಗುವ ಶಕ್ತಿ

ಅತ್ತೆ ಸೊಸೆಯ ನಡುವೆ ಪ್ರತ್ಯಕ್ಷ ರೂಪದಲ್ಲಿ ಭಾವನಾತ್ಮಕ ರೂಪದಲ್ಲಿ ವಿವಾದ ಆಗುತ್ತಾ ಇರುತ್ತದೆ. ಮಗ 2 ಭಾಗಗಳಲ್ಲಿ ವಿಂಗಡಿಸಲ್ಪಡುತ್ತಾನೆ. ಬುದ್ಧಿ  ಬಳಸಿಕೊಳ್ಳದೆಯೇ ತನ್ನ ಅಮ್ಮನಿಗೆ ಬೆಂಬಲ ಕೊಡುತ್ತಿರುತ್ತಾನೆ. ಏಕೆಂದರೆ ಅವನಿಗೆ ಅಮ್ಮನ ಹಾಲಿನ ಋಣ ತೀರಿಸಬೇಕಿರುತ್ತದೆ. ಇಂತಹ ಅದೆಷ್ಟು ಪುತ್ರರಿರುತ್ತಾರೊ, ಅವರ ಜೀವನದ ಅದೆಷ್ಟೊ ಗುಣಮಟ್ಟದ ಸಮಯ ಅವರಿಬ್ಬರ ಸಮತೋಲನ ಕಾಯ್ದುಕೊಳ್ಳಲು ವ್ಯರ್ಥವಾಗಿ ಹೋಗುತ್ತದೆ.

ಕಿತ್ತುಹೋದ ಮೌಲ್ಯಗಳನ್ನು ಬಿಟ್ಟುಬಿಡಿ ಅತ್ತೆಯಂದಿರೆ, ನಿಮ್ಮ ಈ ಕೊಳೆತು ಹೋದ ಮೌಲ್ಯಗಳನ್ನು ಕಿತ್ತು ಬಿಸಾಡಿ. ಒಂದು ವೇಳೆ ನೀವು ಬದಲಾಗದಿದ್ದರೆ ನಿಮ್ಮ ವಿರುದ್ಧ ಬಂಡಾಯ ಏಳುವುದನ್ನಂತೂ ನೀವು ನೋಡುತ್ತೀರಿ. ನಿಮ್ಮ ಸೊಸೆ ಬಂಡಾಯ ಏಳಲು ಕಾರಣರಾಗಬೇಡಿ. ನಿಮ್ಮ ಮುಕ್ತಿಗಾಗಿ ನೀವೇ ಸ್ವತಃ ದಾರಿ ಕಂಡುಕೊಳ್ಳಿ. ಒಬ್ಬ ಮಹಿಳೆ ಹಾಗೂ ಅಮ್ಮನ ಯೋಚನೆಯನ್ನು ನೀವು ಮೈಗೂಡಿಸಿಕೊಳ್ಳಬೇಕಾಗುತ್ತದೆ. ಅದಕ್ಕಾಗಿ ನೀವು ಸೊಸೆಯ ತಾಯಿಯ ಪಾತ್ರ ವಹಿಸಬೇಕಾಗುತ್ತದೆ. ನೀವು ನಿಮ್ಮೊಳಗಿನ ಸೃಜನಶೀಲತೆಯನ್ನು ಜಾಗೃತಗೊಳಿಸಬೇಕಾಗುತ್ತದೆ. ಅದು ಕೇವಲ ಮಕ್ಕಳು, ಗಂಡ ಹಾಗೂ ಕುಟುಂಬಕ್ಕಷ್ಟೇ ಸೀಮಿತವಾಗದಿರಲಿ, ಬೇರೆ ಮನೆಯಿಂದ ಬಂದ ಆ ಮಗಳಿಗೂ ನೀವು ತಾಯಿಯಾಗಬೇಕು.

ಇವು ಕಾರಣಗಳು

ಅಂದಹಾಗೆ ನಮ್ಮ ದೇಶದಲ್ಲಿ ತಾಯಿಯ ಪ್ರೀತಿಯನ್ನು ಅನಾವಶ್ಯಕವಾಗಿ ಹಾಗೂ ಅತಿರಂಜಿತವಾಗಿ ವರ್ಣಿಸಲಾಗುತ್ತದೆ. ಅಮ್ಮನಾಗುವುದು ಶುದ್ಧ ಜೈವಿಕ ಪಾತ್ರವಾಗಿದೆ. ಅದು ಪ್ರಾಣಿಗಳಲ್ಲಾಗಿರಬಹುದು ಅಥವಾ ಮನುಷ್ಯರಲ್ಲಿ. ಯಾವುದೇ ದೇಶದಲ್ಲಿ, ಯಾವುದೇ ಧರ್ಮದಲ್ಲಿ, ಯಾವುದೇ ಜಾತಿಯಲ್ಲಿ ಆಕೆ ಮಗುವನ್ನು ಗರ್ಭದಲ್ಲಿ ಹೊತ್ತುಕೊಂಡು, ಹೊತ್ತ ಬಳಿಕ ಅಕ್ಕರೆಯಿಂದ ಪಾಲನೆ ಪೋಷಣೆ ಮಾಡುತ್ತಾಳೆ. ಎಲ್ಲಿಯವರೆಗೆ ಮಗು ತನ್ನ ಕಾಲ ಮೇಲೆ ತಾನು ನಿಲ್ಲುವುದಿಲ್ಲಿ ಅಲ್ಲಿಯವರೆಗೆ ಹಾಗೂ ಸ್ವಯಂ ಆಹಾರ ಸೇವನೆ ಮಾಡುವ ತನಕ ಹಗಲು ರಾತ್ರಿ ಅದರ ಆಗುಹೋಗುಗಳನ್ನು ಗಮನಿಸುತ್ತಿರುತ್ತಾಳೆ. ಪ್ರಾಣಿಗಳಲ್ಲಿ ಮಾತೃತ್ವ ಹೆಚ್ಚು ಸಂಯಮಿತ ಹೆಚ್ಚು ಸಮತೋಲಿತ, ಹೆಚ್ಚು ವ್ಯಾವಹಾರಿಕವಾಗಿರುತ್ತದೆ. ಅವುಗಳಲ್ಲಿ ಒಂದು ಸ್ವಾಭಾವಿಕ ಸ್ನೇಹ ಹಾಗೂ ಕಾರುಣ್ಯ ಇರುತ್ತದೆ ಮತ್ತು ಸ್ವಾಭಾವಿಕ ಉಪೇಕ್ಷೆ ಕೂಡ ಇರುತ್ತದೆ. ಅದು ಮನುಷ್ಯರಿಗೆ ಕ್ರೂರತೆಯ ಪರ್ಯಾಯವಾಗಿದೆ.

ಪ್ರಾಣಿಗಳೇ ಮೇಲು

ಪ್ರೀತಿಯ ಮಹಿಮೆಯನ್ನು ಕೊಂಡಾಡುತ್ತಾ ನಾವು ಎಲ್ಲೋ ಒಂದು ಕಡೆ ಸ್ವಾರ್ಥಿ ಹಾಗೂ ನಿಷ್ಕರುಣಿಗಳು, ಪ್ರೀತಿ ರಹಿತರು ಆಗಿಬಿಡುತ್ತೇವೆ. ಈಗ ಪ್ರಾಣಿಗಳನ್ನೇ ನೋಡಿ, ಎಲ್ಲಿಯವರೆಗೆ ಮರಿ ತನ್ನ ಕಾಲ ಮೇಲೆ ನಿಂತುಕೊಳ್ಳಲು ಆಗುವುದಿಲ್ಲವೋ ಅಲ್ಲಿಯವರೆಗೆ ತಾಯಿ ಅದರ ಬಗ್ಗೆ ಕಾಳಜಿ ವಹಿಸುತ್ತದೆ. ಅದಕ್ಕೆ ಪ್ರತಿಯಾಗಿ ಅದಕ್ಕೆ ಬೇರೇನೂ ಬೇಕಿಲ್ಲ. ಅದೆಷ್ಟು ಪವಿತ್ರ ಮಮತೆಯದು!

ಮಾನವ ಶಿಶು ತನ್ನ ತಾಯಿಯ ಮೇಲೆ ಅವಲಂಬಿಸುವುದು ಜೈವಿಕ ಕಾರಣಗಳಿಂದಲ್ಲ, ಸಾಮಾಜಿಕ ಕಾರಣಗಳಿಂದ. ಆ ಒಂದು ಪ್ರಯಾಣ ಓದುವುದು, ಬರೆಯುವುದು ದೊಡ್ಡವನಾಗುವುದು, ಮದುವೆ ಮಾಡುವುದು ಹಾಗೂ ಇನ್ನೂ ಏನೇನೊ ಜೀವನದಾದ್ಯಂತ ನಡೆಯುತ್ತಿರುತ್ತವೆ.

ಈ ಇಡೀ ಪ್ರಕ್ರಿಯೆಯ ಸಂದರ್ಭದಲ್ಲಿ ಅವನಲ್ಲಿ ಮಾನಸಿಕ ಹಾಗೂ ಮನೋವೈಜ್ಞಾನಿಕ ಸಂಸ್ಕಾರಗಳು ಹೇಗೆ ಆಳವಾಗಿ ಬೇರೂರುತ್ತವೆಯೆಂದರೆ, ಆತ ತನ್ನ ತಾಯಿ ತಂದೆಗೆ ಹಾಗೂ ಆ ತಾಯಿ ತಂದೆಯರು ಅವನ ಜೀವನದ ವಾಸ್ತವವಾಗುತ್ತಾರೆ. ಅಮ್ಮ ಅಪ್ಪನ ಅಗತ್ಯಕ್ಕಿಂತ ಹೆಚ್ಚು ಪ್ರೀತಿ ಹಾಗೂ ಸಂರಕ್ಷಣೆ ಮಗುವಿನ ಉಸಿರನ್ನೇ ತಡೆಹಿಡಿಯುತ್ತದೆ. ಸಂದರ್ಭ ಬಂದಾಗ ಆತ ತನ್ನ ಹೆಂಡತಿಯ ಜೊತೆಗೂ ಹೊಂದಾಣಿಕೆ ಮಾಡಿಕೊಳ್ಳಬೇಕಾಗುತ್ತದೆ.

ನನ್ನ ಪಕ್ಕದ ಮನೆಯಲ್ಲಿ ವಾಸಿಸುವ ಸುಧಾಕರ್‌ ಅವರ ಪತ್ನಿ ರಶ್ಮಿ ಅವರನ್ನು ಯಾಕೆ ಬಿಟ್ಟುಹೋದರೆಂದರೆ, ಅವರು ಆಫೀಸಿನಿಂದ ಬಂದ ನಂತರ ಅವರ ಅಮ್ಮ ಮಗ, ತಮ್ಮೊಂದಿಗೇ ಕುಳಿತುಕೊಳ್ಳಬೇಕೆಂದು ಹಠ ಹಿಡಿಯುತ್ತಾರೆ. ಸುಧಾಕರ್ ಅಮ್ಮನ ಪ್ರೀತಿಯಲ್ಲಿ ಮುಳುಗಿ ಅವರು ಹೇಳಿದಂತೆಯೇ ಕೇಳತೊಡಗಿದರು. ಇದರ ಪರಿಣಾಮ ಏನಾಯಿತೆಂದರೆ, ಅವರ ಹೆಂಡತಿ  ತವರಿಗೆ ಹೊರಟುಹೋದಳು.

“ನೀವು `ಮಮ್ಮಾಸ್‌ ಬಾಯ್‌’  ನೀವು ನಿಮ್ಮ ಅಮ್ಮನ ಜೊತೆಗೇ ಇರಿ. ನಿಮಗೆ ನನ್ನ ಅವಶ್ಯಕತೆಯಾದರೂ ಏನಿದೆ?” ಎಂದು ಹೇಳುತ್ತ ಮನೆಯಿಂದ ಹೋಗಿಬಿಟ್ಟಳು.

ಆತ್ಮ ಪ್ರೀತಿ ಇಂತಹ ಅದೆಷ್ಟೋ ಪ್ರಕರಣಗಳು ನಿಮ್ಮ ಕಿವಿಗೆ ಬೀಳುತ್ತಿರುತ್ತವೆ. ಪ್ರೀತಿ ಯಾರ ಬಗೆಗೇ ಆಗಲಿ, ಅದು ಸ್ವಾರ್ಥಿಯಾಗಿರುತ್ತದೆ. ಅಮ್ಮನ ಪ್ರೀತಿ ವಿಶಿಷ್ಟ ಪ್ರಕಾರದ್ದಾಗಿರುತ್ತದೆ ಎಂದು ಯೋಚಿಸುವುದು ಮೂರ್ಖತನವೇ ಆಗಿರುತ್ತದೆ. ಪ್ರತಿಯೊಂದು ಬಗೆಯ ಪ್ರೀತಿ ಕೊನೆಗೊಮ್ಮೆ ಆತ್ಮ ಪ್ರೀತಿಯೇ ಆಗಿರುತ್ತದೆ.

`ನನ್ನ ಮಗ….’ ಈ ಅಭಿವ್ಯಕ್ತಿಯಲ್ಲಿ ಹೆಚ್ಚು ಒತ್ತು ಸಿಗುವುದು `ನನ್ನ’ ಮೇಲೆಯೇ. ಮಗ ಎನ್ನುವುದು ಸುಪ್ತವಾಗಿರುತ್ತದೆ.

ಸುಖಿ ಕುಟುಂಬದ ಆಧಾರವೇ ಮಧುರ ಸಂಬಂಧವಾಗಿರುತ್ತದೆ. ಮದುವೆಯ ಬಳಿಕ ಪ್ರತಿಯೊಬ್ಬ ತಾಯಿಗೂ ತನ್ನ ಮಗ ಬದಲಾಗಿದ್ದಾನೆ, ಅವನೀಗ ಹೆಂಡತಿಯ ಮಾತನ್ನಷ್ಟೇ ಕೇಳುತ್ತಾನೆ ಎಂದೆನಿಸುತ್ತದೆ. ಇಂತಹ ಸ್ಥಿತಿಯಲ್ಲಿ ಅಮ್ಮ ತನ್ನ ಮಗ ಅಥವಾ ಸೊಸೆಗೆ ಕಟುವಾಗಿ ಮಾತನಾಡತೊಡಗಿದಾಗ, ಸಂಬಂಧದಲ್ಲಿ ಕಹಿ ಉಂಟಾಗುವುದು ಸಹಜವೇ ಆಗಿದೆ. ಮನೆಯಲ್ಲಿ ಸೊಸೆ ಎಷ್ಟೇ ಒಳ್ಳೆಯಳಾಗಿದ್ದರೂ ಅತ್ತೆಯ ಸ್ವಭಾವ ತನ್ನ ಸೊಸೆಯನ್ನು ಇತರರೊಂದಿಗೆ ಹೋಲಿಸಿ ನೋಡುವುದಾಗಿರುತ್ತದೆ. ಈ ಕಾರಣದಿಂದಾಗಿಯೂ ಮನೆಯಲ್ಲಿ ಜಗಳಗಳು ಆಗುತ್ತಿರುತ್ತವೆ.

ರಿಲೇಶನ್‌ ಶಿಪ್‌ ಕೌನ್ಸೆಲರ್‌ ಗಳು ಈ ಬಗ್ಗೆ ಹೀಗೆ ಹೇಳುತ್ತಾರೆ, “ನಾನು ಕೇವಲ ಅತ್ತೆಯನ್ನಷ್ಟೇ ತಪ್ಪಿತಸ್ಥೆ ಎಂದು ನಿರ್ಧರಿಸಲಾರೆ. ನಾನಂತೂ ಸಮಸ್ಯೆಯ ಮೂಲದ  ಬಗ್ಗೆ ಮಾತಾಡ್ತೀನಿ. ನೀವು ಹೃದಯದ ಮೇಲೆ ಕೈ ಇಟ್ಟುಕೊಂಡು ಹೇಳಿ, ಮದುವೆಯಾದ ಮೇಲೆ ಇದೆಲ್ಲ ಏಕಾಗುತ್ತದೆ? ಮದುವೆಯಾದ ಬಳಿಕ ಮಹಿಳೆ ಒಮ್ಮೆ ಅತ್ತೆಯಾಗಿ, ಮತ್ತೊಮ್ಮೆ ಸೊಸೆಯಾಗಿ, ಇನ್ನೊಮ್ಮೆ ನಾದಿನಿಯಾಗಿ, ಮತ್ತೊಮ್ಮೆ ಹೆಂಡತಿಯಾಗಿ ಎಂತಹ ಪರಿಸ್ಥಿತಿ ಉದ್ಭವಿಸಿಬಿಡುತ್ತದೆಂದರೆ, ಅಂತಹ ಸ್ಥಿತಿಯಲ್ಲಿ ಒಂದೆಡೆ ಇರುವುದು ಕಷ್ಟಕರವಾಗಿ ಪರಿಣಮಿಸುತ್ತದೆ. ಅದರ ತಪ್ಪನ್ನೆಲ್ಲ ಪುರುಷನ ತಲೆಗೇಕೆ ಕಟ್ಟಲಾಗುತ್ತದೆ? ನೀವೆಲ್ಲ ಹೇಳುತ್ತೀರಿ, ಪುತ್ರಿಯರು ಒಳ್ಳೆಯವರೆಂದು. ನಾನೂ ಕೂಡ ಪುತ್ರಿಯರು ಒಳ್ಳೆಯವರೆಂದೇ ಹೇಳುತ್ತೇನೆ. ಆದರೆ ಇದೇ ಒಳ್ಳೆಯ ಮನಸ್ಸಿನ ಪುತ್ರಿಯರು ಒಳ್ಳೆಯ ಅತ್ತೆ, ಒಳ್ಳೆಯ ಸೊಸೆ, ಒಳ್ಳೆಯ ಪತ್ನಿಯರಾಗುತ್ತಾರೆಯೇ? ಹಾಗೆ ನೋಡಿದರೆ ಕುಟುಂಬ ಒಡೆದು ಚೂರಾಗಲು ಮಹಿಳೆಯರ ಪರಸ್ಪರ ಹೊಂದಾಣಿಕೆಯ ಕೊರತೆ ಹಾಗೂ ಮನೆಯಲ್ಲಿನ ಮಹಿಳೆಯರ ಕೆಟ್ಟ ಸ್ವಭಾವ ಹಾಗೂ ಸಂಬಂಧಗಳಲ್ಲಿ ಅತಿ ಹೆಚ್ಚಿನ ಅಪೇಕ್ಷೆಗಳೇ ಕಾರಣ.”

ಯೋಚಿಸಿ ನೋಡಿ

ಮಹಿಳೆಯರಲ್ಲಿ ಎಷ್ಟು ಜಗಳಗಳಿರುತ್ತವೆ, ಪುರುಷರಲ್ಲಿ ಅಷ್ಟೊಂದು ಇರುವುದಿಲ್ಲ. 2 ಬೇರೆ ಬೇರೆ ಮನೆಗಳಿಂದ ಬಂದವರು ಒಂದೇ ಛಾವಣಿಯಡಿ ಭೇಟಿಯಾದಾಗ, ಅವರ ಯೋಚನೆಗಳಲ್ಲಿ ವ್ಯತ್ಯಾಸ ಇರುವುದು ಸಹಜವೇ ಆಗಿದೆ. ಒಂದು ವೇಳೆ ಅತ್ತೆ ತನ್ನ ಮಟ್ಟದಲ್ಲಿ ಮನಸ್ಸಿನಲ್ಲಿ ಮೊದಲೇ ಹೊಸ ಸಂಬಂಧದ ಆರಂಭ ಪ್ರೀತಿ ಹಾಗೂ ಸ್ನೇಹಭಾವದೊಂದಿಗೆ ಮಾಡಬೇಕೆಂದು ನಿರ್ಧರಿಸಿದರೆ, ಆ ಸಂಬಂಧ ನಿಜಕ್ಕೂ ಬಲಿಷ್ಠವಾಗುತ್ತದೆ. ಸೊಸೆ ಹೊಸ ಯುಗದ ಯುವತಿ ಎಂಬ ವಿಷಯವನ್ನು ನೀವು ಮನಸ್ಸಿನಲ್ಲಿಟ್ಟುಕೊಳ್ಳಬೇಕು. ಆಗ ಮಗಳಿಗೊಂದು ನ್ಯಾಯ ಹಾಗೂ ಸೊಸೆಗೊಂದು ನ್ಯಾಯ ಆಗಬಾರದು ಅಲ್ಲವೇ?

ನಾಟಕ ನಿಲ್ಲಿಸಿ

ನೀವು ಸ್ತ್ರೀ ಆಗಿರುವುದರ ತಪ್ಪು ಲಾಭ ಪಡೆದುಕೊಳ್ಳುವುದನ್ನು ನಿಲ್ಲಿಸಿ ಮತ್ತು ಕಣ್ಣೀರನ್ನು ಅಸ್ತ್ರ ಆಗಿಸಿಕೊಳ್ಳಬೇಡಿ. ಪ್ರಾಮಾಣಿಕತೆಯಿಂದ  ವಿರೋಧ ಮಾಡುವುದು ಒಳ್ಳೆಯದು. ಆದರೆ ಪೂರ್ವಾಗ್ರಹ ಪೀಡಿತರಾಗಿ ಕೇವಲ ಸೊಸೆಗೆ ಮಾತ್ರವಲ್ಲ, ಒಬ್ಬ ಮಹಿಳೆಗೆ ಮಾನಸಿಕ ಹಿಂಸೆ ಕೊಟ್ಟರೆ ನೀವು ಕ್ಷಮೆಗೆ ಅರ್ಹಳಲ್ಲ. ಹೀಗಾಗಿ ನಿಮ್ಮ ಮಾನಸಿಕತೆಯನ್ನು ಬದಲಿಸಿಕೊಳ್ಳುವ ಅಗತ್ಯವಿದೆ.

ಮಾನಸಾ 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ