ಗಂಡ ಮನೆಗೆಲಸದಲ್ಲಿ ಸ್ವಲ್ಪವೂ ನೆರವು ನೀಡುವುದಿಲ್ಲ ಎಂದು ಹೆಂಡತಿಯರು ಸಾಮಾನ್ಯವಾಗಿ ದೂರು ಹೇಳುತ್ತಿರುತ್ತಾರೆ. ಅದು ಸ್ವಲ್ಪ ಮಟ್ಟಿಗೆ ನಿಜ ಕೂಡ. ಮದುವೆಯ ಬಳಿಕ ಹೆಚ್ಚಿನ ಗಂಡಂದಿರು ಮನೆಯ ಹೊರಗಿನ ಜವಾಬ್ದಾರಿಯನ್ನೇನೋ ನಿಭಾಯಿಸುತ್ತಾರೆ. ಆದರೆ ಅಡುಗೆ ಮನೆಯಲ್ಲಿ ಹೆಂಡತಿಗೆ ನೆರವಾಗುವುದೇ ಆಗಿರಬಹುದು ಅಥವಾ ಮನೆ ಸ್ವಚ್ಛತೆಯ ಕೆಲಸವೇ ಇರಬಹುದು, ಹೆಚ್ಚಿನ ಗಂಡಂದಿರು ಏನಾದರೂ ನೆಪ ಹೇಳಿ ಆ ಜವಾಬ್ದಾರಿಯಿಂದ ನುಣುಚಿಕೊಳ್ಳಲು ಪ್ರಯತ್ನಿಸುತ್ತಾರೆ. ಹೇಳಿಕೊಳ್ಳಲು ಗಂಡಹೆಂಡತಿ ಇಬ್ಬರೂ ಗಾಡಿಯ ಎರಡು ಚಕ್ರದ ರೀತಿ. ಆದರೆ ಒಂದೇ ಚಕ್ರದ ಮೇಲೆ ಎಲ್ಲ ಭಾರವನ್ನು ಹೊರಿಸಿದಾಗ ಅದು ಮುಗ್ಗರಿಸುವುದು ಸಹಜ.

ಸಾಮಾನ್ಯವಾಗಿ ಹೆಂಡತಿಯರು ಮನೆಗೆಲಸಗಳಲ್ಲಿ ಅದೆಷ್ಟು ಮುಳುಗಿ ಹೋಗುತ್ತಾರೆಂದರೆ, ಅವರಿಗೆ ತಮಗಾಗಿ ಒಂದು ನಿಮಿಷ ಕೂಡ ವಿನಿಯೋಗಿಸಲು ಆಗುವುದಿಲ್ಲ. ಒಂದು ವೇಳೆ ಅವರಿಗೆ ಮನೆಗೆಲಸಗಳಲ್ಲಿ ಗಂಡನ ಸಹಕಾರ ದೊರೆತರೆ ಕೇವಲ ಕೆಲಸದ ಹೊರೆಯಷ್ಟೇ ಕಡಿಮೆಯಾಗುವುದಿಲ್ಲ. ಬದಲಿಗೆ ಇಬ್ಬರ ನಡುವಿನ ಸಂಬಂಧದಲ್ಲಿ ಇನ್ನಷ್ಟು ಮಾಧುರ್ಯ ಹೆಚ್ಚುತ್ತದೆ.

ಹೀಗೆ ಕೆಲಸ ಹಂಚಿಕೊಳ್ಳಿ

ಮನೆಗೆಲಸಗಳನ್ನು ತುಚ್ಛ ಎಂದು ಭಾವಿಸುವುದನ್ನು ಬಿಟ್ಟು ಕೆಲವು ಕೆಲಸಗಳು ಜವಾಬ್ದಾರಿಗಳನ್ನು ತೆಗೆದುಕೊಂಡು ನಿಮ್ಮ ಗೃಹಜೀವನದ ತೋಟವನ್ನು ನಳನಳಿಸುವಂತೆ ಮಾಡಬಹುದು. ಇಂತಹ ಹಲವು ಕೆಲಸಗಳಿದ್ದು, ಅವನ್ನು ಪರಸ್ಪರ ಹಂಚಿಕೊಂಡು ಮಾಡಬಹುದು.

ಅಡುಗೆಮನೆಯನ್ನು ನಿಮ್ಮ ಲವ್ ಸ್ಪಾಟ್‌ ಆಗಿಸಿಕೊಳ್ಳಿ. ಸಾಮಾನ್ಯವಾಗಿ ಗಂಡಸರು ಅಡುಗೆಮನೆಗೆ ಹೋಗುವ ಹೆಸರಿನಿಂದಲೇ ಹಿಂದೇಟು ಹಾಕುತ್ತಾರೆ. ಆದರೆ ಇಲ್ಲಿ ನೀವು ಹೆಂಡತಿಯ ಜೊತೆಗೆ ಅಡುಗೆ ಮಾಡುವುದರ ಜೊತೆ ಜೊತೆಗೆ ಪ್ರೀತಿಯ ಹೊಸ ರುಚಿಯ ಆನಂದ ಪಡೆದುಕೊಳ್ಳಬಹುದು. ತರಕಾರಿ ಹೆಚ್ಚಿ ಕೊಡುವುದು, ಆಹಾರವನ್ನು ಟೇಬಲ್ ಮೇಲೆ ಜೋಡಿಸುವುದು, ನೀರಿನ ಬಾಟಲ್ ಗಳನ್ನು ತುಂಬಿಸಿ ಫ್ರಿಜ್‌ ನಲ್ಲಿ ಇಡುವುದು, ಸಲಾಡ್‌ ತಯಾರಿಸುವುದು ಮುಂತಾದವುಗಳಲ್ಲಿ ನೀವು ಹೆಂಡತಿಗೆ ನೆರವು ಕೊಡಬಹುದು. ನಿಮ್ಮ ಈ ಪುಟ್ಟ ನೆರವು ಹೆಂಡತಿಯ ಪ್ರಶಂಸೆಗೆ ಪಾತ್ರವಾಗುತ್ತದೆ.

ಎಂದಾದರೊಮ್ಮೆ ಹೆಂಡತಿ ಏಳುವ ಮೊದಲೇ ಚಹಾ/ಕಾಫಿ ತಯಾರಿಸಿ ಹೆಂಡತಿಗೆ ಕೊಡಿ. ನಿಮ್ಮ ಈ ಪ್ರಯತ್ನವನ್ನು ಆಕೆ ದಿನವಿಡೀ ಮರೆಯಳು. ಒಂದು ವೇಳೆ ಹೆಂಡತಿಯ ಆರೋಗ್ಯ ಸರಿಯಿರದಿದ್ದರೆ, ನಿಮಗೆ ಗೊತ್ತಿರುವ ಯಾವುದಾದರೂ ಒಂದು ಬಗೆಯ ತಿಂಡಿಯನ್ನು ಮಾಡಿಕೊಡಿ.

ಗಂಡ ಅಡುಗೆಮನೆಯಲ್ಲಿ ಏನಾದರೂ ಆಹಾರ ತಯಾರಿಸಲು ಅಪೇಕ್ಷಿಸಿದರೆ ಅವರನ್ನು ತಡೆಯಲು ಹೋಗಬೇಡಿ. ಅಡುಗೆಮನೆಯ ವಸ್ತುಗಳನ್ನು ವ್ಯವಸ್ಥಿತವಾಗಿಡಿ. ಪ್ರತಿಯೊಂದು ಡಬ್ಬದ ಮೇಲೂ ಲೇಬಲ್ ಅಂಟಿಸಿಡಿ.

ನಿಮ್ಮ ಹೆಂಡತಿಯ ಹೆಚ್ಚಿನ ಸಮಯ ಬಾಥ್‌ ರೂಮಿನಲ್ಲಿ ಬಟ್ಟೆ ತೊಳೆಯುವುದರಲ್ಲಿಯೇ ಕಳೆದು ಹೋಗುತ್ತಿದ್ದರೆ, ನಿಮಗಾಗಿ ಸ್ವಲ್ಪ ಸಮಯ ಕೊಡದೇ ಇದ್ದಲ್ಲಿ ಅದರ ತಪ್ಪನ್ನು ಅವಳ ಮೇಲಷ್ಟೇ ಹಾಕಬೇಡಿ. ರಜೆಯ ದಿನದಂದು ಅವಳ ಒಂದಿಷ್ಟು ಜವಾಬ್ದಾರಿಯನ್ನು ನೀವು ಕಡಿಮೆ ಮಾಡಬಹುದು. ಬಟ್ಟೆ ಒಣಹಾಕುವುದು, ಇಸ್ತ್ರಿ ಮಾಡುವುದು ಹೀಗೆ ಒಂದಿಷ್ಟು ಕೆಲಸ ಮಾಡಿದರೆ ಅವಳು ಸ್ವಲ್ಪ ರಿಲ್ಯಾಕ್ಸ್ ಆಗಿ ನಿಮಗೆ ಸ್ವಲ್ಪ ಸಮಯ ಕೊಡಬಹುದು.

ಗಂಡ ಟಿ.ವಿ. ನೋಡುವಾಗ ಕೆಲವು ತರಕಾರಿಗಳನ್ನು ಅವರ ಮುಂದೆ ತಂದಿಟ್ಟು ಹೆಚ್ಚಲು ಹೇಳಬಹುದು.

ನಿಮ್ಮ ಕೈತೋಟದಲ್ಲಿರುವ ಪುಟ್ಟ ಪುಟ್ಟ ಸಸಿಗಳಿಗೆ ನೀರು ಹಾಕುವ ಕೆಲಸವನ್ನು ಪತಿಗೆ ವಹಿಸಿಕೊಡಬಹುದು.

ನಿಮ್ಮ ಮನೆಯಲ್ಲಿ ಸಾಕುಪ್ರಾಣಿಗಳಿದ್ದರೆ, ಅವನ್ನು ಮುಂಜಾನೆ ಸಂಜೆ ಹೊರಗೆ ಸುತ್ತಾಡಿಸುವ ಜವಾಬ್ದಾರಿ ಪತಿಗೆ ಕೊಡಿ.

ಮಕ್ಕಳಿಗೆ ಓದಿಸುವಾಗ ಪತಿಯ ಆಸಕ್ತಿಯ ಕೆಲವು ವಿಷಯಗಳನ್ನು ಅವರಿಗೆ ಕೊಡಿ. ಇನ್ನುಳಿದ ವಿಷಯಗಳ ಜವಾಬ್ದಾರಿ ನೀವು ತೆಗೆದುಕೊಳ್ಳಿ.

ಗಂಡ ಹಾಗೂ ಮನೆಯ ಇತರೆ ಸದಸ್ಯರಿಗೆ ಕೆಲವು ಕೆಲಸಗಳ ಜವಾಬ್ದಾರಿ ನೀಡಿ. ಹೀಗೆ ಮಾಡುವುದರಿಂದ ನಿಮ್ಮ ಮೇಲಿನ ಹೊರೆ ಕಡಿಮೆಯಾಗುತ್ತದೆ. ಸ್ನಾನದ ಬಳಿಕ ಒದ್ದೆ ಚವೆಲ್ ‌ನ್ನು ಒಣಹಾಕುವುದು, ತಮ್ಮ ಬಟ್ಟೆಗಳನ್ನು ತಾವೇ ಮಡಚಿ ಇಟ್ಟುಕೊಳ್ಳಲು ಹೇಳಬಹುದು.

ನೀವು ಯಾವುದೇ ಕಾರಣಕ್ಕೂ ಧೈರ್ಯ ಕಳೆದುಕೊಳ್ಳಬೇಡಿ. ಅವರು ಕ್ರಮೇಣ ಕೆಲಸ ಮಾಡಿಕೊಡಬಹುದು. ಕೆಲವು ಕೆಲಸಗಳಲ್ಲಾದರೂ ಪತಿಯ ಸಹಕಾರ ಸಿಕ್ಕೇ ಸಿಗುತ್ತೆ.

ಗಂಡನೇ ಆಗಿರಬಹುದು, ಹೆಂಡತಿಯೇ ಆಗಿರಬಹುದು, ಮನೆ ಇಬ್ಬರದ್ದೂ ಆಗಿದೆ. ಹಾಗೆಯೇ ಜವಾಬ್ದಾರಿ ಕೂಡ ಇಬ್ಬರದ್ದೂ ಆಗಿದೆ. ಆಗಲೇ ವೈವಾಹಿಕ ಜೀವನದ ಗಾಡಿ ಸುಲಭವಾಗಿ ಸಾಗುತ್ತದೆ.

ಪ್ರತಿನಿಧಿ

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ