ಪಾರ್ಟಿ ಮುಗಿಯುತ್ತಿದ್ದಂತೆಯೇ ರಶ್ಮಿ ಎಂದಿನಂತೆ ಮುಖ ಊದಿಸಿಕೊಂಡು ಗಂಡ ಸಂದೀಪ್ ಮುಂದೆ ಮುಂದೆಯೇ ಹೆಜ್ಜೆ ಹಾಕತೊಡಗಿದಳು. ಕಾರಿನಲ್ಲಿ ಕುಳಿತುಕೊಳ್ಳುತ್ತಿದ್ದಂತೆಯೇ ಆಕೆ ಸಂದೀಪ್ ಮುಂದೆ ಪ್ರಶ್ನೆಗಳ ಸುರಿಮಳೆ ಸುರಿಸತೊಡಗಿದಳು.
“ಸುಧಾ ಭೇಟಿಯಾದಾಗೆಲ್ಲ ನಿಮ್ಮನ್ನು ನೋಡಿ ಅಷ್ಟೊಂದು ಮುಗುಳ್ನಗುವುದು ಏಕೆ? ಪತಿ ರಾಜಶೇಖರ್ ಎದುರಿಗಿದ್ದಾಗ ಮಾತ್ರ ಆಕೆ ಹಲ್ಲು ಕಚ್ಚಿಕೊಂಡು ಕುಳಿತಿರುತ್ತಾಳೆ. ಸ್ನೇಹಾ ನಿಮಗೆ `ಮಿ. ಹ್ಯಾಂಡ್ ಸಮ್’ ಎಂದು ಏಕೆ ಕರೆದರು? ಅವರು ಹಾಗೆ ಕರೆದರೆ ಕರೆಯಲಿ. ಆದರೆ ನೀವು ಆಕೆಯ ಮಾತಿಗೆ ತಲೆಬಾಗಿ, ಹೃದಯದ ಮೇಲೆ ಕೈಯಿಟ್ಟು ನಮಸ್ಕರಿಸುವ ಅಗತ್ಯವಾದರೂ ಏನಿತ್ತು? ನಿಮ್ಮ ಅಸಿಸ್ಟೆಂಟ್ ಸುಜಾತಾ ಇದಾಳಲ್ಲ, ಅವಳ ಬಗೆಗೂ ನನಗೆ ಕೋಪ ಇದೆ. ಒಂದು ಸಲ ಅವಳ ಮನೆಗೆ ಹೋಗಿ ಚೆನ್ನಾಗಿ ಉಗಿದುಬರ್ತೀನಿ. ಆಗಲೇ ಅವಳಿಗೆ ಬುದ್ಧಿ ಬರುತ್ತದೆ. ಗಂಡನನ್ನು ಮನೆಯಲ್ಲಿ ಬಿಟ್ಟು ಒಬ್ಬಳೇ ಬಂದು ಅವರಿಗೆ ಹುಷಾರಿಲ್ಲ ಎಂದು ನೆಪ ಹೇಳುವುದು, ಇಲ್ಲಿ ಇನ್ನೊಬ್ಬರ ಗಂಡನ ಜೊತೆ ಚಕ್ಕಂದ ಆಡೋದು…” ರಶ್ಮಿಯ ಮಾತಿನ ಸರಣಿ ಹಾಗೆಯೇ ಮುಂದುವರಿದಿತ್ತು.
2 ವರ್ಷಗಳ ಹಿಂದಷ್ಟೇ ರಶ್ಮಿಯ ಮದುವೆ ಆಗಿತ್ತು. ಸಂದೀಪ್ ನಂತಹ ಸ್ಮಾರ್ಟ್ ಗಂಡನನ್ನು ಪಡೆದು ಆಕೆ ತನ್ನನ್ನು ತಾನು ಧನ್ಯೆ ಎಂದು ಭಾವಿಸಿದ್ದಳು. ಆದರೆ ಕೆಲವೇ ದಿನಗಳಲ್ಲಿ ಆಕೆಯ ಈ ಖುಷಿ ಗಾಳಿಯಲ್ಲಿ ತೇಲಿಹೋಗಿತ್ತು. ತನ್ನ ಗಂಡನ ಸುತ್ತಮುತ್ತ ಯಾರಾದರೂ ಮಹಿಳೆ ಕಂಡುಬಂದರೆ ಸಾಕು, ಆಕೆಯ ಜೀವ ವಿಲಿವಿಲಿ ಒದ್ದಾಡುತ್ತಿತ್ತು. ಅಸುರಕ್ಷತೆಯ ಭಾವನೆಯಿಂದ ಆಕೆ ಒಮ್ಮೊಮ್ಮೆ ಸಂದೀಪ್ ಜೊತೆ ಜಗಳ ಕೂಡ ಆಡುತ್ತಿದ್ದಳು.
ರಶ್ಮಿಯ ಹಾಗೆ ನೀಲಾ ಕೂಡ ತನ್ನ ಪತಿ ರಾಜೇಶನ ಸ್ಮಾರ್ಟ್ ನೆಸ್ ನ್ನು ತನ್ನ ಶತ್ರು ಎಂಬಂತೆ ಕಾಣತೊಡಗಿದ್ದಳು. ಅವನ ಸ್ಮಾರ್ಟ್ ನೆಸ್ ಅವಳ ನೆಮ್ಮದಿಯನ್ನೇ ಕಿತ್ತುಕೊಂಡಿತ್ತು. ರಾಜೇಶ್ ತನ್ನ ಸ್ಮಾರ್ಟ್ ನೆಸ್ ನ ಲಾಭ ಪಡೆಯುತ್ತಿದ್ದಾನೆ ಎಂದು ಅವಳಿಗೆ ಅನಿಸುತ್ತಾ ಇರುತ್ತದೆ. ಅವಿವಾಹಿತೆಯೇ ಆಗಿರಬಹುದು ಅಥವಾ ವಿವಾಹಿತೆ, ಅವನು ಅವರ ಜೊತೆ ಬೆರೆಯಲು ನೋಡುತ್ತಾನೆ.
ತನ್ನ ಪತಿ ಯಾರಾದರೂ ಮಹಿಳೆಯ ಜೊತೆ ಮಾತನಾಡುತ್ತ ನಿಂತಿರುವುದನ್ನು ನೋಡಿದರೆ ಸಾಕು, ಎಲ್ಲರೆದುರೇ ಜಗಳಕ್ಕೆ ನಿಂತು ಬಿಡುತ್ತಾಳೆ. ತನ್ನ ಗೌರವ ಉಳಿಸಿಕೊಳ್ಳಲು ರಾಜೇಶ್ ಈಗ ಯಾರಾದರೂ ಮಹಿಳೆಯರು, `ಹಲೋ ನಮಸ್ಕಾರ’ ಎಂದು ಹೇಳಿದರೂ ಅದಕ್ಕೆ ಪ್ರತಿಕ್ರಿಯೆ ಕೊಡುವುದಿಲ್ಲ. ಹೆಂಡತಿ ಜೊತೆ ಇದ್ದಾಗಲಂತೂ ಅವನು ಬಹಳ ಎಚ್ಚರಿಕೆಯಿಂದ ಇರಬೇಕಾಗುತ್ತದೆ. ನೀಲಾಳ ಆಧಾರರಹಿತ ಸಂದೇಹದ ಗುಣದಿಂದಾಗಿ ರಾಜೇಶನ ಸೋಶಿಯಲ್ ಲೈಫ್ ಹೆಚ್ಚು ಕಡಿಮೆ ಮುಗಿದೇ ಹೋಯಿತು.
ರಶ್ಮಿ ಹಾಗೂ ನೀತಾರಂತಹ ಅದೆಷ್ಟೋ ಮಹಿಳೆಯರ ಉದಾಹರಣೆ ನಮಗೆ ನೋಡಲು ಸಿಗುತ್ತದೆ. ಅವರಿಗೆ ಬೇರೆ ಮಹಿಳೆಯರು ತನ್ನ ಗಂಡನ ಕಡೆ ಆಕರ್ಷಿತರಾಗುವುದನ್ನು ಸಹಿಸಲು ಏಕೆ ಆಗುವುದಿಲ್ಲವೆಂದರೆ, ಅವನು ತನಗಿಂತ ಸ್ಮಾರ್ಟ್ ಆಗಿದ್ದಾನೆ ಎಂಬ ಕಾರಣಕ್ಕೆ. ಆದರೆ ತಪ್ಪನ್ನು ಅವರು ಗಂಡನ ಮೇಲೆಯೇ ಹೊರಿಸುತ್ತಾರೆ.
ಸಂದೇಹದ ದುಷ್ಪರಿಣಾಮ
ಒತ್ತಡಗ್ರಸ್ತ ದಾಂಪತ್ಯ ಜೀವನ : ಯಾವುದೇ ಪತಿ ಹೆಂಡತಿ ಮಾಡಿದ ಆಧಾರರಹಿತ ಆರೋಪಗಳನ್ನು ಸಹಿಸಿಕೊಳ್ಳಲಾರ. ಇದರ ಪರಿಣಾಮ ಏನಾಗುತ್ತದೆ ಎಂದರೆ, ಇಬ್ಬರ ನಡುವೆ ಆಗಾಗ ಜಗಳಗಳು ನಡೆಯುತ್ತಲೇ ಇರುತ್ತವೆ. ಇಂತಹ ಸ್ಥಿತಿಯಲ್ಲಿ ದಾಂಪತ್ಯ ಜೀವನದಲ್ಲಿ ಪ್ರೀತಿ ಮತ್ತು ಶಾಂತಿಯ ಸ್ಥಾನವನ್ನು ಒತ್ತಡ ಆರಿಸಿಕೊಂಡು ಬಿಡುತ್ತದೆ.
ಆತ್ಮವಿಶ್ವಾಸದಲ್ಲಿ ಕೊರತೆ : ಗಂಡ ಮತ್ತು ಹೆಂಡತಿ ಇಬ್ಬರೂ ಆತ್ಮವಿಶ್ವಾಸ ಉಳ್ಳವರಾಗಿದ್ದರೆ ಅವರ ಜೀವನ ಖುಷಿಯಿಂದಿರುತ್ತದೆ. ಅವರು ಪರಸ್ಪರರ ಜೊತೆ ನೆಮ್ಮದಿಯ ಜೀವನ ನಡೆಸುತ್ತಾರೆ. ಆದರೆ ಹೆಂಡತಿಯ ಆಧಾರರಹಿತ ಸಂದೇಹ ಗಂಡನ ಆತ್ಮವಿಶ್ವಾಸವನ್ನೇ ಬುಡಮೇಲು ಮಾಡಿಬಿಡುತ್ತದೆ. ತಾನೇನು ತಪ್ಪು ಮಾಡಿದೆ ಎಂದು ಅವನಿಗೆ ಗೊಂದಲವಾಗುತ್ತದೆ. ಹೆಂಡತಿ ಕೂಡ ಬೇರೆ ಮಹಿಳೆಯರಿಗಿಂತ ತಾನು ಕೀಳು ಎಂದು ಭಾವಿಸಿಕೊಳ್ಳುತ್ತ ಖಿನ್ನತೆಗೆ ತುತ್ತಾಗುತ್ತಾಳೆ.
ಮಕ್ಕಳ ಮೇಲೂ ದುಷ್ಪರಿಣಾಮ : ಮಕ್ಕಳ ಸೂಕ್ತ ಬೆಳವಣಿಗೆಗೆ ತಂದೆತಾಯಿಗಳ ಮಾರ್ಗದರ್ಶನ ಹಾಗೂ ಹೊಂದಾಣಿಕೆ ಅತ್ಯಗತ್ಯ. ಆದರೆ ಸತತ ಸಂದೇಹದ ಕಾರಣದಿಂದಾಗಿ ಗಂಡಹೆಂಡತಿ ಇಬ್ಬರೂ ಸದಾ ದೂರ ದೂರ ಇರುತ್ತಿದ್ದರೆ, ಮಕ್ಕಳ ಜೊತೆ ಬೆರೆಯುವ ಅವಕಾಶ ಸಿಗದೇ ಹೋಗಬಹುದು. ಇದು ಅವರ ಮನಸ್ಸಿನ ಮೇಲೆ ದುಷ್ಪರಿಣಾಮ ಉಂಟು ಮಾಡಬಹುದು.
ಸಾಮಾಜಿಕ ಅನುಬಂಧದ ಕೊರತೆ : ನಿರರ್ಥಕ ಸಂದೇಹ ಗಂಡನನ್ನು ಯಾವುದೇ ಸಭೆ ಸಮಾರಂಭಗಳಿಗೆ ಹೋಗುವುದನ್ನು ತಡೆಯುತ್ತದೆ. ಯಾವುದೇ ಮಹಿಳೆ ತನ್ನನ್ನು ನೋಡಿ ನಗುವುದು, ಮನೆಯಲ್ಲಿ ಅದು ಅಲ್ಲೋಲಕಲ್ಲೋಲ ಸೃಷ್ಟಿಸಬಹುದು ಎಂಬ ಕಾರಣಕ್ಕೆ ಅವನು ಹೆದರಬಹುದು. ಅದೇ ರೀತಿ ಹೆಂಡತಿ ಕೂಡ ಸಭೆ ಸಮಾರಂಭಗಳಿಗೆ ಹೋಗಲು ಹಿಂದೇಟು ಹಾಕಬಹುದು. ಗಂಡ ಹ್ಯಾಂಡ್ ಸಮ್ ಆಗಿರುವುದು ಅವಳ ದೃಷ್ಟಿಯಲ್ಲಿ ಹೊಸ ಸಮಸ್ಯೆ ಸೃಷ್ಟಿಸುವಂಥದು ಎಂಬಂತೆ ಭಾಸವಾಗುತ್ತದೆ.
ಸುಳ್ಳಿನ ಆಸರೆ ಪಡೆಯುವ ಗಂಡ : ಸಂದೇಹದ ಕಾರಣದಿಂದ ಕೆಲವು ಪತ್ನಿಯರು ಗಂಡನನ್ನು ಆಫೀಸಿನ ತನಕ ಹಿಂಬಾಲಿಸಬಹುದು. ಅಲ್ಲಿ ಅವನು ಯಾವ ಮಹಿಳಾ ಸಹೋದ್ಯೋಗಿಗೆ ಹೆಚ್ಚು ಮಹತ್ವ ಕೊಡುತ್ತಾನೆ, ಯಾರ ಜೊತೆ ನಗುತ್ತಾ ಮಾತನಾಡುತ್ತಾನೆ, ತನ್ನ ಸೆಕ್ರೆಟರಿ ಜೊತೆ ಎಷ್ಟೊತ್ತು ಇರುತ್ತಾನೆ ಎಂಬ ವಿಷಯಗಳನ್ನು ಆಕೆ ಗಂಡನಿಂದ ಮಾತು ಮಾತಿನಲ್ಲೇ ಪಡೆಯುತ್ತಿರುತ್ತಾಳೆ. ಪತ್ನಿಯ ನಡವಳಿಕೆಯಿಂದ ಬೇಸತ್ತು ಕೊನೆಗೆ ಪತಿ ಸುಳ್ಳಿನ ಆಶ್ರಯ ಪಡೆಯುತ್ತಾನೆ.
ಆತ್ಮಹತ್ಯೆಯ ಪರಿಸ್ಥಿತಿ : ಮುಂಬೈನ ಮಾಜಿ ಸೈನಿಕ ಓಂಪ್ರಕಾಶ್ ರ ಪತ್ನಿಗೆ ತನ್ನ ಪತಿ ಯಾವುದೊ ಮಹಿಳೆಯ ಜೊತೆ ಅನೈತಿಕ ಸಂಬಂಧ ಹೊಂದಿದ್ದಾರೆಂಬ ಗುಮಾನಿ ಇತ್ತು. ಹೆಂಡತಿಯ ಈ ಆಧಾರರಹಿತ ಸಂದೇಹ ನಿವಾರಿಸಲು ಅವರು ಬಹಳ ಪ್ರಯತ್ನ ಮಾಡಿದರು. ಆದರೆ ಅವಳ ಸಂದೇಹ ಮಾತ್ರ ನಿವಾರಣೆಯಾಗಲಿಲ್ಲ. ಕೊನೆಗೊಮ್ಮೆ ಅವರು ತಮಗೆ ತಾವೇ ಗುಂಡು ಹೊಡೆದುಕೊಂಡು ತಮ್ಮ ಜೀವನ ಕೊನೆಗೊಳಿಸಿದರು.
ಗಂಡ ಅಥವಾ ಹೆಂಡತಿ ಇಬ್ಬರಲ್ಲಿ ಯಾರಿಗಾದರೂ ಸಂದೇಹ ಬಂದುಬಿಟ್ಟರೆ ಅದು ಕುಟುಂಬದ ಸಾಮರಸ್ಯ ಕಲಕಿ ನರಕ ಮಾಡುವುದಂತೂ ಸತ್ಯ. ಮನಸ್ಸಿನಲ್ಲಿ ಸಂದೇಹ ಮೊಳಕೆಯೊಡೆಯಲು ಆರಂಭಿಸಿದರೆ ಹೆಂಡತಿ ಈ ಸಂಗತಿಗಳನ್ನು ಗಮನದಲ್ಲಿ ಇಟ್ಟುಕೊಳ್ಳಬೇಕು :
ಒಬ್ಬ ಸ್ಮಾರ್ಟ್ ಪತಿಯನ್ನು ಪಡೆದು ಹೆಂಡತಿ ಖುಷಿ ಪಡಬೇಕು. ಅಂತಹ ವ್ಯಕ್ತಿ ತನ್ನನ್ನು ಇಷ್ಟಪಟ್ಟಿದ್ದಾನೆಂದರೆ, ನಿಸ್ಸಂದೇಹವಾಗಿಯೂ ಆತನಲ್ಲಿ ಏನಾದರೂ ವಿಶೇಷತೆ ಇದ್ದೇ ಇರಬೇಕು. ಈ ಸಂಗತಿಯನ್ನು ಮನಸ್ಸಿನಲ್ಲಿಟ್ಟುಕೊಂಡರೆ, ಆಕೆ ತನ್ನನ್ನು ಯಾರಿಗಿಂತೋ ಕಡಿಮೆ ಎಂದು ಭಾವಿಸುವುದಿಲ್ಲ. ಗಂಡ ಬೇರೆ ಯಾವುದೇ ಮಹಿಳೆಯ ಜೊತೆ ಮಾತನಾಡಿದರೂ ಆಕೆಗೆ ಏನೂ ಅನ್ನಿಸುವುದೇ ಇಲ್ಲ. ಗಂಡ ಹ್ಯಾಂಡ್ ಸಮ್ ಆಗಿದ್ದಾನೆಂದು ಕೀಳರಿಮೆ ಹೊಂದುವುದಕ್ಕಿಂತ ಹೆಂಡತಿ ತನ್ನ ಸೌಂದರ್ಯಕ್ಕೆ ಮೆರುಗು ಕೊಡಲು ಪತ್ರಿಕೆಗಳ ಹಾಗೂ ಯೂಟ್ಯೂಬ್ ನ ನೆರವು ಪಡೆದುಕೊಳ್ಳಬಹುದು.
ನಿಮ್ಮ ಪತಿಯ ಸುತ್ತಲೂ ಸುತ್ತು ಮಹಿಳೆಯರನ್ನು ಕಂಡು ಮುಖ ಊದಿಸಿಕೊಳ್ಳುವುದಕ್ಕಿಂತ ಪತಿಯನ್ನು ಮನದಲ್ಲೇ ನಿಂದಿಸುವುದಕ್ಕಿಂತ ನೀವು ಅವರ ಜೊತೆ ಸೇರಿ ನಗುತ್ತ ಮಾತನಾಡಲು ಪ್ರಯತ್ನಿಸಿ. ಆಗ ನಿಮಗೆ ಅವರು ಕೌಟುಂಬಿಕ ಸ್ನೇಹಿತೆಯರಂತೆ ಭಾಸವಾಗಬಹುದು.
ಸಂದೇಹದಿಂದ ಸುತ್ತುವರಿದು ಹೆಂಡತಿಯ ಗಂಡನ ಮಹಿಳಾ ಮಿತ್ರರ ಬಗ್ಗೆ ಮಾಹಿತಿ ಕೊಡುವವರ ಸ್ನೇಹ ಬೆಳೆಸುವುದಕ್ಕಿಂತ ಒಳ್ಳೊಳ್ಳೆ ಪತ್ರಿಕೆ, ಜ್ಞಾನವರ್ಧಕ ವೆಬ್ ಸೈಟ್ ಹಾಗೂ ವಾಟ್ಸ್ ಆ್ಯಪ್ ನಲ್ಲಿ ಹಳೆಯ ಸ್ನೇಹಿತರ ಸಂಪರ್ಕದಲ್ಲಿರಿ.
ನಿಮ್ಮಲ್ಲಿರುವ ವೈಶಿಷ್ಟ್ಯತೆಗಳನ್ನು ಗುರುತಿಸಿಕೊಂಡು ಅವುಗಳನ್ನು ಕಾರ್ಯರೂಪಕ್ಕೆ ತರಲು ಪ್ರಯತ್ನಿಸಿ. ನಿಮಗೆ ಒಳ್ಳೆಯ ಅಡುಗೆ ಮಾಡಲು ಬರುತ್ತಿದ್ದರೆ, ಗಂಡನ ಸ್ನೇಹಿತರು ಹಾಗೂ ಪರಿಚಯದವರು ಮನೆಗೆ ಬಂದಾಗ ಅವರಿಗೆ ಹೊಸ ಹೊಸ ಡಿಶೆಸ್ ಮಾಡಿ ಬಡಿಸಬಹುದು. ನಿಮ್ಮ ಕೈರುಚಿ ಉತ್ಕೃಷ್ಟ ಮಟ್ಟದಲ್ಲಿದ್ದರೆ, ಅವರು ನಿಮ್ಮ ಬಗ್ಗೆ ಚರ್ಚೆ ಮಾಡದೆ ಇರಲಾರರು. ನಿಮ್ಮ ಕಂಠ ಸುಮಧುರವಾಗಿದ್ದರೆ ಬೇರೆ ಬೇರೆ ಸಮಾರಂಭಗಳಲ್ಲಿ ಹಾಡು ಹಾಡಿ ನಿಮ್ಮ ವಿಶೇಷತೆ ಪ್ರಸ್ತುತಪಡಿಸಬಹುದು.
ಅದೇ ರೀತಿ ಹೆಂಡತಿಯ ಸಂದೇಹಾಸ್ಪದ ನಡವಳಿಕೆಯನ್ನು ಎದುರಿಸಲು ಗಂಡ ಕೆಳಕಂಡ ಸಂಗತಿಗಳ ಬಗ್ಗೆ ಗಮನಹರಿಸಬೇಕು.
ಕಾರಣವಿಲ್ಲದೆ ಹೆಂಡತಿ ಸಂದೇಹ ವ್ಯಕ್ತಪಡಿಸಿದರೆ ನಿಮ್ಮನ್ನು ನೀವು ನಿಯಂತ್ರಣದಲ್ಲಿಟ್ಟುಕೊಳ್ಳಿ. ಕೋಪದಲ್ಲಿ ಕೂಗಿ ಉತ್ತರ ಕೊಡುವುದರಿಂದ ಗಂಡ ತನಗೆ ಯಾವುದೇ ಮಹತ್ವ ಕೊಡಲು ಇಚ್ಛಿಸುವುದಿಲ್ಲ ಎಂದೆನಿಸಬಹುದು. ಒಂದು ವೇಳೆ ಹೆಂಡತಿ ಎಲ್ಲರೆದುರು ಜಗಳ ಶುರು ಮಾಡಿದರೆ, ಆಗ ಸ್ವಲ್ಪ ಮೌನವಾಗಿದ್ದು ಬಳಿಕ ಅವಳಿಗೆ ತಿಳಿಹೇಳಿ ಹಾಗೂ ನಾನು ಎಲ್ಲರೆದುರು ನಿನ್ನನ್ನು ಅವಮಾನ ಮಾಡಲು ಇಚ್ಛಿಸುವುದಿಲ್ಲ ಎಂದು ಮನರಿಕೆ ಮಾಡಿ ಕೊಡಿ. ಸಂದೇಹದಿಂದ ಸುತ್ತುವರೆದ ಹೆಂಡತಿಗೆ ಗಂಡನಿಂದ ದೊರೆತ ಗೌರವ ಅವಳ ದೃಷ್ಟಿಕೋನ ಬದಲಾಗಲು ಸಹಾಯ ಮಾಡಬಹುದು.
ಹೆಂಡತಿಯನ್ನು ಹೊಗಳಲು ಜಿಪುಣತನ ತೋರಿಸಬೇಡಿ. ಆಕೆ ಹೊಸ ಡ್ರೆಸ್ ಧರಿಸಿ ಹೊರಗೆ ಹೊರಟಿದ್ದರೆ ನಿಮ್ಮ ಹೊಗಳಿಕೆಯ ಎರಡು ಮಾತು ಹೊರಡಲಿ.
ದೈಹಿಕ ಸೌಂದರ್ಯವೊಂದೇ ಎಲ್ಲವೂ ಅಲ್ಲ, ಹೆಂಡತಿಯ ಕೆಲವು ವಿಶೇಷ ಗುಣಗಳನ್ನು ಪ್ರಶಂಸೆ ಮಾಡುತ್ತಾ, ಇಂತಹ ವಿಶೇಷತೆಯನ್ನು ನಾನು ಬೇರಾವ ಸುಂದರ ಮಹಿಳೆಯಲ್ಲೂ ಕಂಡಿಲ್ಲ ಎಂದು ಹೇಳಿ.
ಕಾಲಕಾಲಕ್ಕೆ ಹೆಂಡತಿಯ ಜೊತೆ ಹೊರಗೆ ಹೋಗುವ ಕಾರ್ಯಕ್ರಮ ಹಾಕಿಕೊಳ್ಳಿ. ವಾರಂತ್ಯದಲ್ಲಿ ಯಾವುದಾದರೂ ವಿಶೇಷತೆ ಇರುವ ಹೋಟೆಲಿನಲ್ಲಿ ಊಟ ಅಥವಾ ಸಮೀಪದ ಸ್ಥಳಕ್ಕೆ ಒನ್ ಡೇ ಪ್ರವಾಸ ಮಾಡಿಕೊಂಡು ಬನ್ನಿ. ಅಲ್ಲಿನ ಸ್ಮರಣಾರ್ಹ ಫೋಟೊಗಳನ್ನು ಫೇಸ್ ಬುಕ್ ಗೆ ಹಾಕಿ ಇಲ್ಲಿ ವಾಟ್ಸ್ ಆ್ಯಪ್ ನ ಸ್ಟೇಟಸ್ ಗೆ ಹಾಕಿ. ಅದರ ಕ್ಯಾಪ್ಶನ್ `ಮೈ ಲವ್ಲಿ ವೈಫ್ ಅಂಡ್ ಐ’ ಎಂದಿರಲಿ.
– ಮಧು ಶರ್ಮ