ಮುಂಬೈನ ಲೋಖಂಡಾಲಾದಲ್ಲಿರುವ ರೆಸ್ಟೋರೆಂಟ್ ವೊಂದರ ಹೆಬ್ಬಾಗಿಲಲ್ಲಿ ಎರಡು ದೊಡ್ಡ ಪಂಜರಗಳಲ್ಲಿ ಕುಳ್ಳಗಿನ ಕೋತಿಗಳನ್ನು ಇರಿಸಲಾಗಿತ್ತು. ಅವು ಗ್ರಾಹಕರನ್ನು ಹೆಚ್ಚು ಆಕರ್ಷಿಸುತ್ತವೆ. ನಾನು ರಾಜ್ಯದ ವನ್ಯಜೀವಿ ರಕ್ಷಣಾ ವಿಭಾಗಕ್ಕೆ ಸೂಚಿಸಿ ತಕ್ಷಣವೇ ಹೋಟೆಲ್ ಮಾಲೀಕನನ್ನು ಬಂಧಿಸಲು ಹೇಳಿದೆ. ಆದರೆ ಆ ಇಲಾಖೆಯವರು ವಿದೇಶಿ ಪ್ರಾಣಿಗಳನ್ನು ಹಾಗೆ ಇರಿಸುವುದರಿಂದ ಯಾವುದೇ ದಂಡ ವಿಧಿಸಬೇಕಾದ ಪ್ರಸಂಗ ಉದ್ಭವಿಸುವುದಿಲ್ಲ ಎಂದು ಹೇಳಿ ಅವರು ಬಂಧಿಸಲು ನಿರಾಕರಿಸಿದರು. ನನಗೆ ಯಾವುದಾದರೂ ಉಪಾಯ ಹೊಳೆಯುವತನಕ ಅವರು ಈ ಅಪರೂಪದ ಪ್ರಾಣಿ ಪಕ್ಷಿಗಳನ್ನು ಹೀಗೆಯೇ ಪ್ರದರ್ಶನ ಮಾಡುತ್ತಲೇ ಇರುತ್ತಾರೆ.
ಕೆಲವು ತಿಂಗಳುಗಳ ಹಿಂದೆ ಪುಣೆಯಲ್ಲಿ ಒಂದು `ಪೆಟ್ ಫೇರ್’ ಆಯೋಜಿಸಲಾಗಿತ್ತು. ಅಲ್ಲಿ ಸುಂದರ ವಿದೇಶಿ ಪಕ್ಷಿಗಳು, ಮೀನುಗಳು ವಿಶೇಷ ತಳಿಯ ನಾಯಿಗಳನ್ನು ಪ್ರದರ್ಶಿಸಲು ಯಾವುದೇ ಅನುಮತಿ ಪಡೆಯಲಾಗಿರಲಿಲ್ಲ. ಆದರೆ ಪೊಲೀಸರು ಮತ್ತು ಅರಣ್ಯ ವಿಭಾಗದವರು ಯಾವುದೇ ಕ್ರಮ ಜರುಗಿಸುವುದಿಲ್ಲ ಏಕೆ? ಏಕೆಂದರೆ ವಿದೇಶಿ ತಳಿಗಳ ಪ್ರಾಣಿಪಕ್ಷಿಗಳಿಗೆ ಯಾವುದೇ ಭಾರತೀಯ ಕಾನೂನು ಅನ್ವಯಿಸದು ಅವರಿಗೆ ಅನಿಮಲ್ ವೆಲ್ ಫೇರ್ ಬೋರ್ಡ್ ಹೊಸ ಚೇರ್ ಮೆನ್ ಅನುಮತಿ ಕೂಡ ಕೊಟ್ಟಿದ್ದರು. ಅಲ್ಲಿನ ಪ್ರಾಣಿಗಳನ್ನು ಮುಕ್ತವಾಗಿ ಅಲ್ಲ, ಕದ್ದು ಮುಚ್ಚಿ ಮಾರಾಟ ಮಾಡಲಾಯಿತು.
ಮುಕ್ತ ವಹಿವಾಟು
ಕಳೆದ ವರ್ಷ ಬೆಂಗಳೂರಿನ ಒಂದು ಮನೆಯಲ್ಲಿ ವಿದೇಶಿ ತಳಿಯ 3 ಹೆಬ್ಬಾವುಗಳು ಸಿಕ್ಕಿದ್ದವು. ಅರಣ್ಯ ವಿಭಾಗದವರು ಅವು ವಿದೇಶೀ ತಳಿಗಳು, ಅವನ್ನು ಇಟ್ಟುಕೊಂಡರೆ ಯಾವುದೇ ಅಪರಾಧ ಆಗುವುದಿಲ್ಲ ಎಂದು ಹೇಳಿ ಯಾವುದೇ ಕ್ರಮ ಜರುಗಿಸಲಿಲ್ಲ. ಬಳಿಕ ಅದರ ಮಾಲೀಕ ಹೆಬ್ಬಾವುಗಳನ್ನು ಕಾಡಿನಲ್ಲಿ ಬಿಟ್ಟು ಬಂದ.
ಉತ್ತರ ಪ್ರದೇಶದ ಒಬ್ಬ ವ್ಯಕ್ತಿ ಆಫ್ರಿಕಾದ ಪಿಟ್ ವೈಪರ್ ಹಾವು ಕಚ್ಚಿದ್ದರಿಂದ ಸತ್ತು ಹೋದ. ಬಹುಶಃ ಅವನು ಆ ಹಾವನ್ನು ಹೊರದೇಶದಿಂದ ಕದ್ದು ತಂದಿರಬಹುದು. ಯಾವುದೇ ವನ್ಯಜೀವಿ ಮಾರಾಟಗಾರನ ಹತ್ತಿರ ಹೋಗಿ, ಅವನ ಬಳಿ ಅಪರೂಪದ ತಳಿಯ ಹಲವು ಪ್ರಕಾರಗಳು ನೋಡಲು ಸಿಗುತ್ತವೆ. ನೆಟ್ ನಲ್ಲೂ ಕೂಡ ಸಾವಿರಾರು ಬಗೆಯ ಬಣ್ಣಬಣ್ಣದ ಅಪರೂಪದ ವನ್ಯಜೀವಿಗಳು ಮಾರಾಟಕ್ಕೆ ಲಭ್ಯವಿರುತ್ತವೆ.
ಮೆಕ್ಸಿಕೊ, ಆಫ್ರಿಕಾ, ದಕ್ಷಿಣ ಆಫ್ರಿಕಾದಿಂದ ಅಪರೂಪದ ವನ್ಯಜೀವಿಗಳು ಭಾರತದ ಕಸ್ಟಮ್ಸ್ ದಾಟಿ ಮಾರುಕಟ್ಟೆ ತಲುಪುತ್ತಿವೆ. ಅವನ್ನು ಸಾಮಾನ್ಯವಾಗಿ ಬೇರೆ ಸಾಮಗ್ರಿಗಳನ್ನು ತುಂಬಿದ ಕಂಟೇನರ್ ನಲ್ಲಿ ಹಾಕಿ ಸಾಗಿಸಲಾಗುತ್ತದೆ. ಅವನ್ನು ತೆರೆದು ನೋಡುವುದು ಅಸಾಧ್ಯದ ಕೆಲಸ.
ಕಸ್ಟಮ್ಸ್ ನವರೂ ಶಾಮೀಲು
ಒಬ್ಬ ಮಹಿಳಾ ಕಸ್ಟಮ್ಸ್ ಅಧಿಕಾರಿ ಕೂಡ ಕಳ್ಳತನದಿಂದ ಪ್ರಾಣಿಗಳನ್ನು ಸಾಗಿಸುವವರ ಜೊತೆ ಸೇರಿಕೊಂಡಿದ್ದಳು. ಆಕೆಯ ಪಾರ್ಟ್‌ನರ್ ಥೈಲ್ಯಾಂಡ್ ನಲ್ಲಿದ್ದ. ನನ್ನ ದೂರಿನ ಮೇರೆಗೆ ಆಕೆಯನ್ನು ಬೇರೊಂದು ಕಡೆಗೆ ವರ್ಗಾಯಿಸಲಾಯಿತು. ಅಲ್ಲಿಯೂ ಕೂಡ ಆಕೆ ಪಾರ್ಟನರ್ ಜೊತೆ ಸೇರಿ ಕಳ್ಳಸಾಗಣೆ ವ್ಯವಹಾರದಲ್ಲಿ ಶಾಮೀಲಾಗಿದ್ದಳು. ವೈಲ್ಡ್ ಲೈಫ್ ಕ್ರೈಮ್ ಬ್ಯೂರೊ ಅಂತೂ ಕೇವಲ ಕಾನೂನು ಬದಲಿಸುವ ಬಗ್ಗೆ ಹೇಳುತ್ತಿರುತ್ತದೆ. `ವೈಲ್ಡ್ ಲೈಫ್ ಪ್ರೊಟೆಕ್ಷನ್ ಆ್ಯಕ್ಟ್ 1972′ ಬದಲಿಸಲು ಜಯರಾಮ್ ರಮೇಶ್, ಸುನೀತಾ ನಾರಾಯಣ್ ಹಾಗೂ ಈಗ ಡಾ. ರಾಜೇಶ್ ಗೋಪಾಲ್ ಏನನ್ನೂ ಮಾಡಲು ಆಗಿಲ್ಲ. ಅದೇ ರೀತಿ ಸಾಫ್ಟ್ ಶೆಲ್ಡ್ ಆಮೆಗಳು ವಿಶೇಷ ತಳಿಯ ಹಲ್ಲಿಗಳು, ಲ್ಯಾಂಬರ್ಡ್, ಗೋಸುಂಬೆ ಮುಂತಾದವು ಭಾರತದಲ್ಲಿ ಮುಕ್ತವಾಗಿ ಮಾರಾಟ ಆಗುತ್ತಿರುತ್ತವೆ. ಆದರೂ ಯಾರೂ ಏನೂ ಮಾಡಲು ಆಗುವುದಿಲ್ಲ.
ದೆಹಲಿಯ ಆಡಳಿತ ಕೇಂದ್ರದ ಸಮೀಪವೇ ಅಪರೂಪದ ಪ್ರಾಣಿಪಕ್ಷಿಗಳು ಸಿಗುತ್ತವೆ. ಇಗುವಾನಾ ರೂ. 18,000ಕ್ಕೆ, ಟ್ಯಾರಂಟ್ಯೂಲಾ 16,000 ರೂ.ಗಳಿಗೆ, ಗೋಸುಂಬೆ 12,000 ರೂ.ಗಳಿಗೆ ಸಿಗುತ್ತವೆ. ದೆಹಲಿಯಲ್ಲಿ ಮುಖ್ಯ ವನ್ಯಜೀವಿ ಅಧಿಕಾರಿಯ ಕಾರ್ಯಾಲಯವಿದೆ. ಅಲ್ಲಿ ಇಬ್ಬರು ಇನ್ ಸ್ಪೆಕ್ಟರ್ ಗಳಿದ್ದಾರೆ. ಆದರೆ ಅವರೆಂದೂ ಹೊರಗೆ ಹೋಗುವುದಿಲ್ಲ. ನನಗೇನೂ ಬೇಕೋ ಅದನ್ನು ನಾನು ಖರೀದಿಸಬಹುದು. ಮೆಹರೌಲಿಯಲ್ಲಿ ಒಬ್ಬ ವ್ಯಕ್ತಿಗೆ ರಾಜಕಾರಣಿಗಳ ಜೊತೆ ಒಳ್ಳೆಯ ಸಂಬಂಧವಿದೆ. ಆದರೆ ಕಾನೂನಿನಲ್ಲಿರುವ ಲೋಪದೋಷದಿಂದಾಗಿ ಯಾವಾಗಲೂ ತಪ್ಪಿಸಿಕೊಳ್ಳುತ್ತಾನೆ. ದೇಶ ಅಂತಾರಾಷ್ಟ್ರೀಯ ಒಪ್ಪಂದಗಳಿಗೆ ಸಹಿ ಹಾಕುವುದರ ಮೂಲಕ ಅಪರೂಪದ ವನ್ಯ ಜೀವಿಗಳನ್ನು ಸಂರಕ್ಷಿಸ ಬೇಕೆಂದು ಪ್ರಯತ್ನ ಮಾಡುತ್ತದೆ. ಆದರೆ ನಮ್ಮ ಅಧಿಕಾರಿಗಳು ಮಾತ್ರ ಅದನ್ನು ಅನುಷ್ಠಾನಕ್ಕೆ ತರುವುದು ಅರ್ಥವಿಲ್ಲದ ಸಂಗತಿ ಎಂದು ಭಾವಿಸುತ್ತಾರೆ. ಜಗತ್ತಿನಾದ್ಯಂತದ ಅಪರೂಪದ ಜೀವಿಗಳನ್ನು ನಾಶಗೊಳಿಸುವಲ್ಲಿ ಅಮೆರಿಕಾ, ಚೀನಾದ ಬಳಿಕ ಭಾರತ 3ನೇ ಸ್ಥಾನದಲ್ಲಿದೆ.
– ಮೇನಕಾ ಗಾಂಧಿ