`ಆರೋಗ್ಯಕ್ಕೂ ಅಡುಗೆ ಮನೆಗೂ ನಿಕಟ ಸಂಬಂಧ ಇದೆ,’ ಎನ್ನುವ ಮಾತು ಸತ್ಯ. ಅಡುಗೆಮನೆಯಲ್ಲಿ ಕೇವಲ ರುಚಿಕರ ಆಹಾರವಷ್ಟೇ ತಯಾರಾಗುವುದಿಲ್ಲ. ಇಡೀ ಕುಟುಂಬದ ಆರೋಗ್ಯ ಹಾಗೂ ದೀರ್ಘಾಯುಷ್ಯ ಕೂಡ ಅಡುಗೆಮನೆಯನ್ನೇ ಅವಲಂಬಿಸಿದೆ. ಅಡುಗೆಮನೆಯ ವಾತಾವರಣ ಚೆನ್ನಾಗಿದ್ದಾರೆ ಮಾತ್ರ ಆರೋಗ್ಯ ಹಾಗೂ ರುಚಿಯ ಸಂಬಂಧವನ್ನು ಬಹಳ ವರ್ಷಗಳ ಕಾಲ ಕಾಪಾಡಿ ಕೊಂಡು ಹೋಗಬಹುದು. ಅದಕ್ಕಾಗಿ ವಿದ್ಯುತ್ ಉಪಕರಣಗಳು ಸರಿಯಾಗಿ ಕಾರ್ಯ ನಿರ್ವಹಿಸುತ್ತಿರಬೇಕು. ಪಾತ್ರೆಗಳು ಸಮರ್ಪಕವಾಗಿರಬೇಕು, ಕ್ರಿಮಿಕೀಟಗಳ ಹಾವಳಿ ಇರಬಾರದು.
ವಿದ್ಯುತ್ ಉಪಕರಣಗಳ ಸೂಕ್ತ ನಿರ್ವಹಣೆ
ಎಲೆಕ್ಟ್ರಾನಿಕ್ಸ್ ಅಪ್ಲೆಯನ್ಸಸ್ ಅಥವಾ ವಿದ್ಯುತ್ ಉಪಕರಣಗಳಿಲ್ಲದೆ ಇಂದಿನ ಆಧುನಿಕ ಅಡುಗೆಮನೆಯನ್ನು ಕಲ್ಪಿಸಿಕೊಳ್ಳಲು ಆಗದು. ಆದರೆ ಇದಕ್ಕಾಗಿ ಕಡಿಮೆ ವಿದ್ಯುತ್ ಬಳಸುವಂತಹ ಉಪಕರಣಗಳನ್ನು ಬಳಸಬೇಕು. ಅಡುಗೆಮನೆಯಲ್ಲಿ ವಿದ್ಯುತ್ ಮುಖಾಂತರ ನಡೆಯುವ ಮಿಕ್ಸಿ, ಓವನ್, ಟೋಸ್ಟರ್, ಕಾಫಿ ಮೇಕರ್, ಮೈಕ್ರೊವೇವ್ ಮುಂತಾದವುಗಳನ್ನು ಬಳಸಿದ ಬಳಿಕ ಅವನ್ನು ಮುಚ್ಚಿಡಬೇಕು. ಅವು ಸ್ವಯಂಚಾಲಿತ ಬಂದ್ ಆಗುತ್ತವೆ ಎಂದು ತಿಳಿಯಬೇಡಿ. ಅವನ್ನು ಮೇನ್ ಪ್ಲಗ್ ನಿಂದ ಪ್ರತ್ಯೇಕಗೊಳಿಸಿ.
ಫ್ರಿಜ್ ನ್ನು ಮೇಲಿಂದ ಮೇಲೆ ತೆಗೆಯಬೇಡಿ. ಮೇಲಿಂದ ಮೇಲೆ ಬಾಗಿಲು ತೆರೆಯುತ್ತಿದ್ದರೆ ವಿದ್ಯುತ್ ಹೆಚ್ಚು ಖರ್ಚಾಗುತ್ತದೆ.
ಆಹಾರವನ್ನು ತಯಾರಿಸಲು ಅಥವಾ ಬಿಸಿ ಮಾಡಲು ಓವನ್ ಬದಲು ಮೈಕ್ರೊವೇವ್ ನ್ನು ಬಳಸಿ. ಆಹಾರ ಬಿಸಿ ಮಾಡಲು ಇದು ಒಳ್ಳೆಯ ಉಪಕರಣ. ಆದರೆ ಮೈಕ್ರೋವೇವ್ ನಲ್ಲಿ ಗಾಜಿನ ಉಪಕರಣಗಳನ್ನು ಬಳಸುವುದು ಸೂಕ್ತ.
ವಿದ್ಯುತ್ ಉಪಕರಣಗಳ ಸ್ವಚ್ಛತೆಯ ಬಗ್ಗೆ ಗಮನಕೊಡಿ. ಟೋಸ್ಟರ್ ನಲ್ಲಿ ಬ್ರೆಡ್ ಬಿಸಿ ಮಾಡಿದ್ದರೆ ಅಥವಾ ಸ್ಯಾಂಡ್ ವಿಚ್ ತಯಾರಿಸಿ ಕೊಂಡಿದ್ದರೆ ಬಳಿಕ ಅದನ್ನು ಮೃದುವಾದ ಬಟ್ಟೆಯಿಂದ ಸ್ವಚ್ಛಗೊಳಿಸಿ. ಮಿಕ್ಸಿ ಅಥವಾ ಹ್ಯಾಂಡ್ ಬ್ಲೆಂಡರ್ ನ್ನು ಕೂಡ ತಕ್ಷಣವೇ ಸ್ವಚ್ಛಗೊಳಿಸಿಡಿ.
ಅಡುಗೆಮನೆಯಲ್ಲಿ ಲೈಟ್ ನ ವ್ಯವಸ್ಥೆ ಸರಿಯಾಗಿರಲಿ. ಅಡುಗೆ ಮಾಡುವಾಗ ಎಗ್ಸಾಸ್ಟ್ ಫ್ಯಾನ್ ಅಥವಾ ಚಿಮಣಿಯ ಬಳಕೆಯನ್ನು ಅವಶ್ಯ ಮಾಡಿ. ಏಕೆಂದರೆ ಒಗ್ಗರಣೆಯ ವಾಸನೆ ಹೊರಗೆ ಹೋಗಬೇಕು. ಕಾಲಕಾಲಕ್ಕೆ ಅವನ್ನು ಕೂಡ ಸ್ವಚ್ಛಗೊಳಿಸುತ್ತ ಇರಬೇಕು.
ಪಾತ್ರೆಗಳ ಆಯ್ಕೆ ಮತ್ತು ಸ್ವಚ್ಛತೆ
ಅಡುಗೆಮನೆಯನ್ನು ಪರಿಸರಸ್ನೇಹಿ ಆಗಿ ಮಾಡಲು ಸೂಕ್ತ ಪಾತ್ರೆಗಳ ಆಯ್ಕೆ ಹಾಗೂ ಅವುಗಳ ಸ್ವಚ್ಛತೆ ಅತ್ಯಂತ ಅವಶ್ಯ. ಆರೋಗ್ಯ ತಜ್ಞರ ಪ್ರಕಾರ ಹೊಟ್ಟೆಯ ಸೋಂಕಿನಿಂದ ರಕ್ಷಿಸಿಕೊಳ್ಳಲು ಅಡುಗೆಮನೆಯಲ್ಲಿ ಸ್ವಚ್ಛತೆ ಅತ್ಯಂತ ಅವಶ್ಯ. ಸಿಂಕ್ ನಲ್ಲಿ ಹೆಚ್ಚು ಹೊತ್ತು ಮುಸುರೆ ಪಾತ್ರೆಗಳಿದ್ದರೆ, ಮಿಕ್ಸಿ, ಗ್ರೈಂಡರ್ ಗಳಲ್ಲಿ ಉಳಿದ ಆಹಾರ ಕಣಗಳಿಂದ ಕೀಟಾಣುಗಳು ಜನ್ಮ ತಳೆಯುತ್ತವೆ. ಅವೇ ಹಲವು ರೋಗಗಳಿಗೆ ಕಾರಣವಾಗುತ್ತವೆ.
ಮಾರುಕಟ್ಟೆಯಲ್ಲಿ ಹಲವು ಬಗೆಯ ಉಪಕರಣಗಳು ಲಭ್ಯವಿವೆ. ಪಾತ್ರೆಗಳು ಯಾವುದೇ ಆಗಿರಬಹುದು. ಆದರೆ ಅವು ಸ್ವಚ್ಛ ಆಗಿರಬೇಕಾದುದು ಮುಖ್ಯ. ಹುಳಿ, ಪಲ್ಯ ಹಾಗೂ ಇತರೆ ಪದಾರ್ಥಗಳನ್ನು ತಯಾರಿಸಲು ಅಲ್ಯುಮಿನಿಯಂ ಪಾತ್ರೆಗಳು ಸೂಕ್ತವಲ್ಲ. ತವಾ ಹಾಗೂ ಕಬ್ಬಿಣದ ಅಗಲವಾದ ಪಾತ್ರೆಗಳನ್ನು ಬಳಸಿ.
ಇತ್ತೀಚಿನ ವರ್ಷಗಳಲ್ಲಿ ನಾನ್ ಸ್ಟಿಕ್ ಉಪಕರಣಗಳು ಹೆಚ್ಚು ಚಾಲ್ತಿಯಲ್ಲಿವೆ. ಆ ಪಾತ್ರೆಗಳಲ್ಲಿ ಪದಾರ್ಥಗಳು ಅಂಟಿಕೊಳ್ಳುವುದಿಲ್ಲ ಹಾಗೂ ಕರಕಲಾಗುವುದಿಲ್ಲ. ಅಷ್ಟೇ ಅಲ್ಲ, ಅತ್ಯಂತ ಕಡಿಮೆ ಎಣ್ಣೆಯಲ್ಲಿ ಆಹಾರ ಸಿದ್ಧವಾಗುತ್ತದೆ. ಆದರೆ ಇಂತಹ ಪಾತ್ರೆಗಳ ಕೋಟಿಂಗ್ ಬಿಟ್ಟುಕೊಳ್ಳಲು ಶುರು ಮಾಡಿದ ನಂತರ ಅವುಗಳ ಬಳಕೆ ನಿಲ್ಲಿಸಬೇಕು. ಏಕೆಂದರೆ ಆ ಅಂಶ ಆಹಾರದಲ್ಲಿ ಸೇರಿಬಿಡುತ್ತದೆ. ಅದು ಆರೋಗ್ಯಕ್ಕೆ ಅಪಾಯಕಾರಿಯಾಗಿ ಪರಿಣಮಿಸಬಹುದು.
ಯೂನಿವರ್ಸಿಟಿ ಆಫ್ ಕ್ಯಾಲಿಫೋರ್ನಿಯಾದ ರೀಪ್ರೊಡಕ್ಟಿವ್ ಹೆಲ್ತ್ ಅಂಡ್ ಎನ್ ಯರ್ನ್ ಮೆಂಟ್ ಪ್ರೋಗ್ರಾಮ್ ನ ಮುಖ್ಯಸ್ಥ ಡಾ. ಟ್ರೆಸೊಬುಡಸ್ಕಾ ಹೇಳುವುದೇನೆಂದರೆ, ನಾನ್ ಸ್ಟಿಕ್ ಪಾತ್ರೆಗಳಲ್ಲಿ ತಯಾರಿಸಿದ ಆಹಾರ ಸೇವನೆಯಿಂದ ಮಹಿಳೆಯರಲ್ಲಿ ಟೆಫ್ಲಾನ್ ನ ಪ್ರಮಾಣ ಹೆಚ್ಚುತ್ತಾ ಹೋಗುತ್ತದೆ. ಅದರಿಂದ ಗರ್ಭ ಧರಿಸಲು ಸಮಸ್ಯೆಯಾಗುತ್ತದೆ. ಅದರ ಜೊತೆಗೆ ಥೈರಾಯ್ಡ್ ಹಾಗೂ ಕ್ಯಾನ್ಸರ್ ನಂತಹ ರೋಗಗಳ ಅಪಾಯ ಹೆಚ್ಚುತ್ತದೆ.
ನಾನ್ ಸ್ಟಿಕ್ ಉಪಕರಣಗಳನ್ನು ಬಳಸುವಾಗ ಸ್ವಲ್ಪ ಗಮನಿಸಿ. ಅದರಲ್ಲಿ ಏನನ್ನೂ ಹಾಕದೇ ನೇರವಾಗಿ ಒಲೆಯ ಮೇಲೆ ಬಿಸಿ ಮಾಡಬೇಡಿ. ಪಾತ್ರೆಯ ಮೇಲ್ಮೈ ಕಳಚುತ್ತಿದ್ದರೆ ಅದನ್ನು ಬಳಸದಿರುವುದೇ ಒಳ್ಳೆಯದು.
ಬಹಳಷ್ಟು ಮನೆಗಳಲ್ಲಿ ಸ್ಲ್ಯಾಬ್ ಗಳ ಮೇಲೆ ನೇರವಾಗಿ ರೊಟ್ಟಿ ಅಥವಾ ಚಪಾತಿಗಳನ್ನು ಲಟ್ಟಿಸಲಾಗುತ್ತದೆ. ಇದು ಒಳ್ಳೆಯದಲ್ಲ, ಹಾಗೆ ಮಾಡಲೇಬೇಕಿದ್ದರೆ ಅದನ್ನು ಚೆನ್ನಾಗಿ ಸ್ವಚ್ಛಗೊಳಿಸಿ ಮಾಡಿ.
ಊಟದ ಮೇಜಿನ ಮೇಲೆ ನೀವು ಊಟದ ಸಿದ್ಧತೆಯಲ್ಲಿದ್ದರೆ, ಎಲ್ಲ ಲೈಟ್ ಗಳನ್ನು ಹಾಕಬೇಡಿ. ಮೇಜಿನ ಮೇಲೆ ಬೀಳುವ ಒಂದು ಲೈಟಿನ ಪ್ರಯೋಗ ಮಾಡಿ ಸಾಕು. ಯಾವಾಗಲಾದರೊಮ್ಮೆ ಕ್ಯಾಂಡಲ್ ಡಿನ್ನರ್ ಕೂಡ ಮಾಡಿ. ಇದರಿಂದ ವಿದ್ಯುತ್ ಉಳಿತಾಯ ಆಗುತ್ತದೆ.
ಡಿಸ್ಪೋಸೆಬಲ್ ಪೇಪರ್ ನ್ಯಾಪಿಕಿನ್ಸ್ ಬದಲು ಬಟ್ಟೆಯ ನ್ಯಾಪ್ ಕಿನ್ಸ್ ಬಳಸಿ.
– ನೀರಜಾ ಕುಮಾರ್
ಒಂದಿಷ್ಟು ಸಲಹೆಗಳು
ಪಾತ್ರೆ ತೊಳೆಯುವಾಗ ಹೆಚ್ಚು ನೀರು ವ್ಯರ್ಥ ಮಾಡಬೇಡಿ. ಪಾತ್ರೆಗಳಲ್ಲಿರುವ ಮುಸುರೆಯನ್ನು ಹೊರತೆಗೆದು ಬಳಿಕ ಸ್ವಚ್ಛಗೊಳಿಸಿ.
ಪ್ಲಾಸ್ಟಿಕ್ ಪ್ಯಾಕ್ಡ್, ಹಣ್ಣುಗಳು ಮತ್ತು ತರಕಾರಿಗಳನ್ನು ತರುವ ಬದಲು ಬಿಡಿಬಿಡಿಯಾಗಿ ಒಳ್ಳೆಯ ಗುಣಮಟ್ಟದ್ದನ್ನು ಆಯ್ಕೆ ಮಾಡಿ. ಬಳಿಕ ತೂಕ ಹಾಕಿಸಿ. ಫ್ರಿಜ್ ನಲ್ಲಿ ಹಣ್ಣು ಮತ್ತು ತರಕಾರಿಗಳನ್ನು ಇಡಲು ರೀ ಯೂಸೆಬಲ್ ಬ್ಯಾಗ್ಸ್ ಬಳಸಿ.
ಆದಷ್ಟು ಸಾವಯವ ತರಕಾರಿಗಳನ್ನು ತನ್ನಿ.
ಪಂಚೆ, ದುಪ್ಪಟ್ಟಾಗಳನ್ನು ಬಳಸಿ ಬಿಸಾಡುವ ಬದಲು ಅವುಗಳಿಂದ ಸಣ್ಣಸಣ್ಣ ಬ್ಯಾಗ್ಸ್ ಹೊಲಿದಿಟ್ಟುಕೊಳ್ಳಿ. ಅವುಗಳಲ್ಲಿ ಹಣ್ಣು ತರಕಾರಿಗಳನ್ನು ಹಾಕಿಡಿ.
ಅಳಿದುಳಿದ ಆಹಾರ ಹಾಗೂ ಹಣ್ಣುತರಕಾರಿಗಳ ಸಿಪ್ಪೆಗಳನ್ನು ಕಸದ ಬುಟ್ಟಿಗೆ ಹಾಕುವ ಬದಲು ನಿಮ್ಮ ತೋಟದ ಸಸಿಗಳಿಗೆ ಗೊಬ್ಬರ ತಯಾರಿಸಲು ಬಳಸಿ.