ಕೊರೋನಾದ ಹಾವಳಿ ಕಡಿಮೆಯಾದರೂ ಅದರ ಪಾರ್ಶ್ವ ಪರಿಣಾಮಗಳು ಇನ್ನೂ ಹಾಗೆಯೇ ಇವೆ. ಅದರಿಂದಾಗಿ ನಿರುದ್ಯೋಗ ಸಮಸ್ಯೆ ಹಾಗೂ ಖಿನ್ನತೆಯಂತಹ ಮಾನಸಿಕ ಸಮಸ್ಯೆಗಳು ವ್ಯಕ್ತಿ ವ್ಯಕ್ತಿಗಳ ನಡುವೆ ಅಂತರ ಹೆಚ್ಚಿಸುವಂತೆ ಮಾಡಿವೆ. ಏನನ್ನಾದರೂ ಹೊಸದಾಗಿ ಯೋಚಿಸಬೇಕೆನ್ನುವ ಉತ್ಸಾಹವನ್ನು ಕುಂದಿಸಿಬಿಟ್ಟಿವೆ. ಇಂತಹದರಲ್ಲಿ ಹಬ್ಬಗಳ ಸೀಸನ್ ಹೊಸ ಹುರುಪು ಹಾಗೂ ನವ ಕಿರಣಗಳನ್ನು ಹೊತ್ತು ತಂದಿದೆ.
ಅಂದಹಾಗೆ ಈಗ ಜನರಿಗೆ ಹಬ್ಬ ಆಚರಿಸಲು ಕೂಡ ಭೀತಿ ಉಂಟಾಗುತ್ತಿದೆ. ಹಬ್ಬಗಳೆಂದರೆ ಒಬ್ಬರು ಇನ್ನೊಬ್ಬರ ಮನೆಗೆ ಹೋಗುವುದು, ಭೇಟಿಯಾಗುವುದು, ಶಾಪಿಂಗ್ ಮಾಡುವುದು ಹೀಗೆ ಏನೆಲ್ಲ ಚಟುವಟಿಕೆಗಳು ಇದ್ದೇ ಇರುತ್ತವೆ. ಆದರೆ ಕೊರೋನಾದ ಭೀತಿಯ ನಡುವೆ ಇದೆಲ್ಲ ಮಾಡುವುದು ರೋಗ ಹರಡಬಹುದೆಂಬ ಭೀತಿ ಹೆಚ್ಚಿಸುತ್ತದೆ. ಆದರೆ ಹೆದರಿಕೊಂಡು ನಾವು ನಮ್ಮ ಹಳೆಯ ಉತ್ಸವಗಳನ್ನು ಆಚರಿಸುವ ಅವಕಾಶ ತಪ್ಪಿಸಿಕೊಳ್ಳಬಾರದು. ಹಬ್ಬಗಳು ನಮ್ಮನ್ನು ಪರಸ್ಪರರ ಪ್ರೀತಿಯ ಅನುಬಂಧದಲ್ಲಿ ಬೆಸೆಯುತ್ತವೆ. ಪ್ರೀತಿ ಹೆಚ್ಚಿಸಲು ಕಾರಣವಾಗುತ್ತದೆ. ಜೀವನದಲ್ಲಿ ಉತ್ಸಾಹ, ಹುಮ್ಮಸ್ಸನ್ನು ತೆಗೆದುಕೊಂಡು ಬರುತ್ತವೆ.
ಇಂತಹದರಲ್ಲಿ ಜೀವನದಲ್ಲಿ ಮತ್ತೊಮ್ಮೆ ಸಕಾರಾತ್ಮಕತೆ ಹಾಗೂ ಖುಷಿಯನ್ನು ತರಲು ಹಬ್ಬವನ್ನು ಆಚರಿಸಲು ಭೀತಿಯನ್ನು ಸ್ವಲ್ಪ ಬದಿಗೊತ್ತಿ ಹಾಗೂ ಹೊಸ ರೀತಿಯಲ್ಲಿ ಹಬ್ಬವನ್ನು ಆಚರಿಸಿ.
ದೂರವಿದ್ದೂ ಹತ್ತಿರವಾಗಿ....
ಕಾಲಕಾಲಕ್ಕೆ ಬರುವ ಹಬ್ಬಗಳು ಎಂತಹ ಸಂದರ್ಭಗಳಾಗಿರುತ್ತವೆಯೆಂದರೆ, ಅವು ಸಂಬಂಧದಲ್ಲಿ ಮಾಧರ್ಯ ತರಲು ನೆರವಾಗುತ್ತವೆ. ಆದರೆ ಕೊರೋನಾದ ಭೀತಿಯಿಂದಾಗಿ ನಾವು ಹಬ್ಬಗಳ ಆನಂದ ಪಡೆಯುತ್ತೇವೆ, ಇಲ್ಲವೇ ಎನ್ನುವುದರ ಬಗ್ಗೆ ಸಂದೇಹ ಮನೆ ಮಾಡಿದೆ. ಕೆಲವರಂತೂ ಮನೆಯಿಂದ ಹೊರಗೆ ಬರಲು ಇಷ್ಟಪಡುವುದಿಲ್ಲ. ಇಂತಹ ಸ್ಥಿತಿಯಲ್ಲಿ ನೀವು ವರ್ಚುವಲ್ ಮೀಟಿಂಗ್ ಮುಖಾಂತರ ನಮ್ಮವರ ಜೊತೆ ನೇರ ಸಂಪರ್ಕ ಪಡೆಯಬಹುದು. ನೀವು ಲ್ಯಾಪ್ ಟಾಪ್ ಅಥವಾ ಮೊಬೈಲ್ ನಲ್ಲಿ ವರ್ಚುವಲ್ ಮೀಟಿಂಗ್ ಮಾಡಬಹುದು. ಗ್ರೂಪ್ ಚಾಟ್ ಮಾಡಬಹುದು. ಝೂಮ್ ಮೀಟಿಂಗ್ ಅಥವಾ ವಾಚ್ಸ್ ಆ್ಯಪ್ ಕಾಲ್ ಮೂಲಕ ಸಂಪರ್ಕ ಪಡೆಯಬಹುದು. ಹಬ್ಬದ ಸೊಗಸನ್ನು ಕಣ್ತುಂಬಿಸಿಕೊಳ್ಳುತ್ತಾ ಸಂಬಂಧಿಕರು ಹಾಗೂ ಸ್ನೇಹಿತರಿಗೆ ನಿಮ್ಮ ವಿಡಿಯೋ ಹಾಗೂ ಫೋಟೋಗಳನ್ನು ಶೇರ್ ಮಾಡಿ. ಮಕ್ಕಳಿಗೂ ಪರಸ್ಪರ ಮಾತನಾಡಿಸಲು ಅವಕಾಶ ಕೊಡಿ. ಆಗ ನಿಮಗೆ ದೂರ ಇರುವುದರ ಅನುಭವ ಇರುವುದಿಲ್ಲ.
ಮನೆಯ ಕಲಾತ್ಮಕ ಅಲಂಕಾರ
ನೀವು ಮಾರುಕಟ್ಟೆಗೆ ಹೋಗಿ ಅಲಂಕಾರದ ಸಾಮಗ್ರಿಗಳನ್ನು ತರುವುದಕ್ಕಿಂತ ನಿಮ್ಮ ಕೈಯಾರೆ ತಯಾರಿಸಿದ ವಸ್ತುಗಳಿಂದಲೇ ಮನೆಯ ಅಂದ ಹೆಚ್ಚಿಸಬಹುದು. ರಾಂಪ್ಸ್, ರಂಗೋಲಿ, ತೋರಣ, ಮೇಣದ ಬತ್ತಿಗಳು, ಪೇಂಟ್ ಮಾಡಿದ ಸುಂದರ ದೀಪಗಳು ಹೀಗೆ ಏನೆಲ್ಲ ಸಿದ್ಧಪಡಿಸಬಹುದು. ನೀವು ಮಕ್ಕಳನ್ನು ಕೂಡ ಇದರಲ್ಲಿ ತೊಡಗಿಸಬಹುದು. ಈ ತೆರನಾದ ಚಟುವಟಿಕೆಗಳ ವಿಡಿಯೋಗಳು ನಮಗೆ ಯೂಟ್ಯೂಬ್ ಚಾನೆಲ್ ಗಳಲ್ಲಿ ದೊರಕುತ್ತವೆ. ಅವನ್ನು ನೋಡಿ ನಿಮ್ಮ ಕಲಾತ್ಮಕತೆಯನ್ನು ಇನ್ನಷ್ಟು ಅಪ್ ಡೇಟ್ ಮಾಡಿಕೊಳ್ಳಬಹುದು.
ಸ್ವಚ್ಛತೆ ಹಾಗೂ ಪೇಂಟಿಂಗ್
ಹಬ್ಬಕ್ಕೂ ಮುನ್ನ ಮನೆಯ ಸ್ವಚ್ಛತೆ ಹಾಗೂ ಬಣ್ಣ ಹೊಡೆಸುವ ಪದ್ಧತಿ ಮೊದಲಿನಿಂದಲೂ ನಡೆದುಕೊಂಡು ಬಂದಿದೆ. ಅದರಿಂದ ಮನೆಯು ಸ್ವಚ್ಛವಾಗುತ್ತದೆ ಹಾಗೂ ಪ್ರತಿವರ್ಷ ಮನೆಗೆ ಹೊಸ ಲುಕ್ ದೊರಕುತ್ತದೆ. ಕೊರೋನಾದಿಂದಾಗಿ ನೀವು ಹೊರಗಿನಿಂದ ಕೆಲಸಗಾರರನ್ನು ಕರೆಸಲು ಇಷ್ಟಪಡದಿದ್ದರೆ, ಮನೆಯ ಎಲ್ಲ ಸದಸ್ಯರು ಸೇರಿ ಈ ಎಲ್ಲ ಕೆಲಸಗಳನ್ನು ಮಾಡಿ ಮುಗಿಸಬಹುದು.