ಧರ್ಮದ ಗ್ರಾಹಕರು ಅಂದರೆ ಭಕ್ತರು ದೇವಸ್ಥಾನಗಳಿಗೆ ಬರದೇ ಇದ್ದರೆ ಏನಾಯ್ತು? ಹೈಟೆಕ್ ಪೂಜಾರಿಗಳು ಅದಕ್ಕೂ ಒಂದು ಹೆಜ್ಜೆ ಮುಂದೆ ಹೋಗಿ ಆನ್ ಲೈನ್ ಪೂಜೆಯ ನೆಪದಲ್ಲಿ ಗ್ರಾಹಕರ ಜೇಬಿಗೆ ಕನ್ನ ಹಾಕುತ್ತಿದ್ದಾರೆ.
ಅಭಿವೃದ್ಧಿ ಹೊಂದಿದ ದೇಶಗಳಿಗೆ ಹೋಲಿಸಿದರೆ ಭಾರತ ಹಿನ್ನಡೆ ಸಾಧಿಸುತ್ತಿದೆ. ಆದರೆ ಪೂಜಾರಿ ಪುರೋಹಿತರು ಮಾತ್ರ ಧರ್ಮದ ಹೆಸರಿನಲ್ಲಿ ಭಕ್ತರನ್ನು ಲೂಟಿ ಮಾಡುವಲ್ಲಿ ಮುಂಚೂಣಿಯಲ್ಲಿದ್ದಾರೆ.
1991ರ ಬಳಿಕ ದೇಶದಲ್ಲಿ ಉದಾರೀಕರಣ ನೀತಿ ಹಾಗೂ ಖಾಸಗೀಕರಣದ ಪವರ್ ಶುರುವಾಯಿತು. ಇದರಿಂದ ಜನರು ಉದ್ಯೋಗಕ್ಕಾಗಿ ವಿದೇಶಗಳಿಗೆ ಹೋದರು. ಉದ್ಯೋಗಾವಕಾಶಗಳು ಹೇರಳವಾಗಿ ಹೆಚ್ಚಾದವು. ಆ ಕಾರಣದಿಂದ ಪೂಜಾರಿ ಪುರೋಹಿತರ ಪೂಜಾ ಕೈಂಕರ್ಯಗಳಿಗೆ ಹಣ ಕಾಣಿಕೆಗಳ ಹರಿವು ಕಡಿಮೆಯಾಯಿತು. ಆಗ ಪೂಜಾರಿ ಪುರೋಹಿತರಿಗೆ ಹೊಳೆದದ್ದು ಆನ್ ಲೈನ್ ದರ್ಶನ, ಆರತಿ, ಪೂಜೆ ಪುನಸ್ಕಾರ, ಪಿಂಡದಾನ, ತರ್ಪಣ, ಶ್ರಾದ್ಧದಂತಹ ವಿಧಾನಗಳು. ಸ್ಕೈಪ್, ಗೂಗಲ್, ಫೇಸ್ ಬುಕ್, ಚಾಟ್ ನಂತಹ ಅಪ್ಲಿಕೇಶನ್ ನೊಂದಿಗೆ ಸಂಪರ್ಕಗೊಂಡಿರುವ ಈ ಪೂಜಾರಿಗಳು ಆನ್ ಲೈನ್ ಮೂಲಕ ಜೇಬು ಕತ್ತರಿಸುವಲ್ಲಿ ನಿಪುಣರಾಗಿದ್ದಾರೆ.
ಇದರರ್ಥ ಸ್ಪಷ್ಟವಾಗಿ ಪುರೋಹಿತರು ಎಲ್ಲಾ ರೀತಿಯಲ್ಲೂ ಪೂಜೆ ಪುನಸ್ಕಾರವನ್ನು ಖಾಯಂ ಆಗಿಟ್ಟುಕೊಂಡು ಜನರನ್ನು ಮೋಸಗೊಳಿಸಲು ಪ್ರಯತ್ನಿಸುತ್ತಿದ್ದಾರೆ. ಆಶ್ಚರ್ಯದ ಸಂಗತಿಯೆಂದರೆ, ಸರ್ಕಾರಗಳು ಕೂಡ ಈ ನಿಟ್ಟಿನಲ್ಲಿ ಸಹಾಯ ಸಹಕಾರ ನೀಡುತ್ತಿರುವುದು. ಅವರಿಗೆ ಮತ್ತಷ್ಟು ಗ್ರಾಹಕರ ಜೇಬಿಗೆ ಕತ್ತರಿ ಹಾಕಲು ಅವಕಾಶ ಕೊಡುತ್ತಿದೆ. ಸಾವಿನ ಬಳಿಕ ಮನುಷ್ಯನಿಗೆ ಯಾವುದೇ ಅಸ್ತಿತ್ವ ಇರುವುದಿಲ್ಲ. ಆದರೂ ಆನ್ ಲೈನ್ ಪೂಜೆಯ ಪ್ಯಾಕೇಜ್ ಹೆಸರಿನಲ್ಲಿ ಲೈವ್ ಪಿಂಡ ಪ್ರದಾನದ ಮುಖಾಂತರ ಮೋಕ್ಷ ದೊರಕಿಸಿಕೊಡು ದಂಧೆ ಭಾರಿ ಜೋರಾಗಿ ನಡೆಯುತ್ತಿದೆ.
ಪ್ರಸಿದ್ಧ ದೇವಸ್ಥಾನಗಳ ಆರತಿ ಹಾಗೂ ದರ್ಶನವನ್ನು ಆನ್ ಲೈನ್ ನಲ್ಲಿ ತೋರಿಸಿ ಆಧುನಿಕ ಪುರೋಹಿತರು ತಮ್ಮ ಜೇಬು ಭರ್ತಿ ಮಾಡಿಕೊಳ್ಳುವಲ್ಲಿ ನಿರತರಾಗಿದ್ದಾರೆ. ಇಂದಿನ ಸ್ಥಿತಿಯಲ್ಲಿ ಆನ್ ಲೈನ್ ಪೂಜೆಯ ಆಫರ್ ಕೊಡುವ ಪುರೋಹಿತರು ಹಾಗೂ ಪೂಜಾರಿಗಳಿಂದ ದೂರ ಇರುವುದೇ ಒಳ್ಳೆಯದು.
ಲೈವ್ ಪಿಂಡ ಪ್ರದಾನ
ಕೆಲವು ತಿಂಗಳುಗಳ ಹಿಂದೆ ಪ್ರಯಾಗ್ ರಾಜ್ (ಹಿಂದೆ ಅಲಹಾಬಾದ್)ನಲ್ಲಿ ಕೆಲವು ಪುರೋಹಿತರು ಲೈವ್ ಪಿಂಡ ಪ್ರದಾನದ ಕಾರ್ಯ ಮಾಡಿಸಿದರು. ಅನುಷ್ಠಾನದ ಸಮಯದಲ್ಲಿ ಒಬ್ಬ ವ್ಯಕ್ತಿ ಮೊಬೈಲ್ ಹಿಡಿದು ನಿಲ್ಲುತ್ತಾನೆ. ಅದರಲ್ಲಿ ಎಲ್ಲ ವಿಧಿ ವಿಧಾನಗಳನ್ನೂ ತೋರಿಸಲಾಗುತ್ತದೆ. ದೂರದ ದೇಶದಲ್ಲಿ ಕುಳಿತ ವ್ಯಕ್ತಿ ಸುಲಭವಾಗಿ ಅದನ್ನೆಲ್ಲ ವೀಕ್ಷಿಸುತ್ತಾನೆ. ಅದಕ್ಕೆ ಬದಲಿಯಾಗಿ ಆ ವ್ಯಕ್ತಿಯಿಂದ ಬಹು ದೊಡ್ಡ ಮೊತ್ತ ಇವರ ಖಾತೆಗೆ ಸೇರ್ಪಡೆ ಆಗಿರುತ್ತದೆ.
ಧರ್ಮದಿಂದ ಪುರೋಹಿತರು ಧನ್ಯ
ಪೂಜಾರಿ ಪುರೋಹಿತರು ದೈವ ಭೀತಿಯುಳ್ಳವರಾಗಿ ಜನರಿಂದ ಹಣ ವಸೂಲಿ ಮಾಡುತ್ತಲೇ ಇರುತ್ತಾರೆ. ಆದರೆ ನಿಜವಾದ ಸಮಸ್ಯೆ ಇರುವುದು ಓದುಬರಹ ಬಲ್ಲ ಹಣವಂತ ಭಕ್ತರದ್ದು. ಯಾರ ಜೇಬು ಭರ್ತಿಯಾಗಿರುತ್ತೊ, ಅವರು ಧರ್ಮ ಭಯದಿಂದ ಹಣ ಕೊಡುತ್ತಿರುತ್ತಾರೆ. ಆ ಶ್ರೀಮಂತ ವ್ಯಕ್ತಿಗಳನ್ನು ನೋಡಿ ಬಡ ನಾಗರಿಕರು ಕೂಡ ಪೂಜಾರಿಗಳ ಪಾದಕ್ಕೆ ಶರಣಾಗುತ್ತಾರೆ.
ಇತ್ತೀಚಿನ ಆನ್ ಲೈನ್ ಪಿಂಡ ಪ್ರದಾನ ಉದಾಹರಣೆಗಳನ್ನು ಗಮನಿಸಿ. ಜೈಪುರ್ ನ ಶೈಲೇಂದ್ರ ಎಂಬುವರು ಪ್ರಯಾಗರಾಜ್ ನ ಪುರೋಹಿತ ವಿಜಯ ಪಾಂಡೆಗೆ 21,000 ಪಾವತಿಸಿದರು. ಅದೇ ರೀತಿ ಇನ್ನೂ ಹಲವು ಭಕ್ತಾದಿಗಳು ಆನ್ ಲೈನ್ ಪೂಜೆ ಮಾಡಿಸಿದರು. ಬೇರೆ ಯಾವುದೇ ಕೆಲಸ ಮಾಡದ ಈ ಪುರೋಹಿತರು ಧರ್ಮ ಕರ್ಮದ ಹೆಸರಿನಲ್ಲಿ ಓದುಬರಹ ಬಲ್ಲ ಭಕ್ತಾಧಿಗಳಿಗೆ ಧರ್ಮದ ಭಯ ತೋರಿಸಿ ಅವರನ್ನು ಬಕ್ರಾ ಮಾಡುತ್ತಿದ್ದಾರೆ.
ಆಫರ್ ಗೆ ಸರ್ಕಾರಿ ಮೊಹರು
ಮಧ್ಯ ಪ್ರದೇಶದ ಉಜ್ಜಯಿನಿಯಲ್ಲಿರುವ ಮಹಾಕಾಲ ಮಂದಿರದಲ್ಲಿ ದರ್ಶನ ಹಾಗೂ ಆರತಿಗೆ ಆನ್ ಲೈನ್ ಬುಕಿಂಗ್ ನ ಸುದ್ದಿಗಳು ಬಂದಿದ್ದ. ಆ ಬಳಿಕ ಶೀಘ್ರ ದರ್ಶನ ಕೌಂಟರ್ ನಿಂದ 250ರ ಪಾಸು ಪಡೆಯಲು ನಿರ್ದೇಶಿಸಲಾಗಿತ್ತು.
ಅದೇ ರೀತಿ ಉತ್ತರ ಪ್ರದೇಶದ ಲಖನೌನಲ್ಲಿ ಕಾಳಿ ಮಂದಿರದಲ್ಲಿ 2018ರಲ್ಲಿ 2100 ರೂ.ಗಳ ಬುಕಿಂಗ್ ಶುರು ಮಾಡಲಾಗಿತ್ತು. ಅದೇ ರೀತಿ ಪುಷ್ಕರದ ಬ್ರಹ್ಮ ದೇವಾಲಯದಲ್ಲಿ 5,100 ರೂ.ಗಳ ಆನ್ ಲೈನ್ ಮೊತ್ತ ಹಾಕಿ ಅಭಿಷೇಕ ಮಾಡಿಸುವ ಘೋಷಣೆ ಮಾಡಲಾಗಿತ್ತು. ಅಲ್ಲಿ ಜಮೆಯಾಗುವ ಮೊತ್ತವನ್ನು ದೇವಾಲಯದ ಅಭಿವೃದ್ಧಿಗೆ ಬಳಸುವುದಾಗಿ ಹೇಳಲಾಗಿತ್ತು. ಅಂದಹಾಗೆ ಈ ನಿರ್ಣಯ ತೆಗೆದುಕೊಳ್ಳುವಾಗ ಆಡಳಿತ ಚುಕ್ಕಾಣಿ ಸರ್ಕಾರಿ ಸಮಿತಿಯ ಬಳಿ ಇತ್ತು. ಅದರ ಅಧ್ಯಕ್ಷರು ಜಿಲ್ಲಾ ಕಲೆಕ್ಟರ್ ಆಗಿದ್ದರು.
ಸಾವಿನ ಬಳಿಕ ಭಯ
ಅಂದಹಾಗೆ ಹಿಂದೂ ಧರ್ಮಶಾಸ್ತ್ರಗಳು ಜನರಲ್ಲಿ ಅದೆಷ್ಟು ಭಯ ಹುಟ್ಟುಹಾಕಿವೆ ಎಂದರೆ, ಸಾವಿನ ಬಳಿಕದ ಧರ್ಮ ಕರ್ಮಗಳ ಬಗ್ಗೆ ಯೋಚಿಸಿಯೇ ಅನೇಕರಿಗೆ ಭಯ ಆಗುತ್ತದೆ. ಸತ್ತ ವ್ಯಕ್ತಿಗೆ ಆತನ ಸಂಬಂಧಿಕರು ಅಗ್ನಿ ಸಂಸ್ಕಾರ ಮಾಡದೇ ಹೋದರೆ ಆತನಿಗೆ ಮುಕ್ತಿ ದೊರಕುವುದಿಲ್ಲ ಎಂದೆಲ್ಲ ಧರ್ಮಗ್ರಂಥಗಳು ಹೇಳುತ್ತವೆ.
ಪುರೋಹಿತ ವರ್ಗದವರು ಇದಕ್ಕೊಂದು ವಿನಾಯಿತಿ ಕೊಟ್ಟಿದ್ದಾರೆ. ಸಂಬಂಧಿಕರಾರೂ ಇಲ್ಲದೇ ಇದ್ದಾಗ ಬ್ರಾಹ್ಮಣ ವ್ಯಕ್ತಿ ಅಂತಿಮ ಸಂಸ್ಕಾರ ನಡೆಸಬಹುದು. ಅದರಿಂದ ಮೃತ ವ್ಯಕ್ತಿಗೆ ಮೋಕ್ಷ ದೊರಕುವಲ್ಲಿ ಯಾವುದೇ ಅಡಚಣೆ ಆಗುವುದಿಲ್ಲ. ಗರುಡ ಪುರಾಣ ಸ್ಮೃತಿ ಪುರಾಣದಲ್ಲೂ ಪುರೋಹಿತರ ಮುಖಾಂತರ ಮೋಕ್ಷ ದೊರಕಿಸುವ ಬಗ್ಗೆ ಉಲ್ಲೇಖವಿದೆ.
ಸಾವಿನ ಬಳಿಕ ಮೋಕ್ಷ ದೊರಕಿಸಿ ಕೊಡಲು ಭಾರತದ ಪ್ರಸಿದ್ಧ ಧಾರ್ಮಿಕ ನಗರಗಳ ಹೈಟೆಕ್ ಪೂಜಾರಿಗಳ ಜೊತೆಗೆ ಹಲವು ವೆಬ್ ಸೈಟ್ ಮತ್ತು ಮೊಬೈಲ್ ಆ್ಯಪ್ ಗಳು ಚಾಲ್ತಿಯಲ್ಲಿದ್ದು, ಈ ತೆರನಾದ ಕಂದಾಚಾರಗಳನ್ನು ಹೆಚ್ಚಿಸುತ್ತಿವೆ.
ಪೂಜಾರಿಗಳ ಜೊತೆ ಸರ್ಕಾರ
2016ರಲ್ಲಿ ಸರ್ಕಾರ ಅಂಚೆ ಇಲಾಖೆ ಮೂಲಕ ದೇಶದ ಆಯ್ದ ಅಂಚೆ ಕಛೇರಿಗಳಿಂದ ಗಂಗಾಜಲವನ್ನು ಮಾರಾಟ ಮಾಡುವ ಬಗ್ಗೆ ಘೋಷಣೆ ಮಾಡಿತ್ತು. ದೇಶದ ಯಾವುದೇ ಭಾಗದ ವ್ಯಕ್ತಿ ಆನ್ ಲೈನ್ ಮುಖಾಂತರ ಗಂಗೋತ್ರಿಯಿಂದ ಗಂಗಾಜಲವನ್ನು ತರಿಸಿಕೊಳ್ಳುವುದು ಈ ವ್ಯವಸ್ಥೆ. ಆ ಸಂದರ್ಭದಲ್ಲಿ ಪಾಟ್ನಾದಲ್ಲಿ ನಡೆದ ಒಂದು ಕಾರ್ಯಕ್ರಮದಲ್ಲಿ ಅಂಚೆ ಇಲಾಖೆ ನಮ್ಮ ಹಳೆಯ ಸಂಸ್ಥೆ. ಗಂಗೆ ನಮ್ಮ ಸರ್ವೋಚ್ಛ ಆಸ್ಥೆ. ಸಂಸ್ಥೆಯ ಸಹಕಾರದಿಂದ ಗಂಗೆಯ ಆಸ್ಥೆಯನ್ನು ಮನೆ ಮನೆಗೆ ತಲುಪಿಸುವಂತಾಗಬೇಕು, ಎಂದು ಘೋಷಿಸಲಾಯಿತು.
ಬಿಜೆಪಿ ಸರ್ಕಾರಗಳಿರುವ ರಾಜ್ಯಗಳು ಧಾರ್ಮಿಕ ಯಾತ್ರೆಗಳಿಗೆ, ಕಾರ್ಯಕ್ರಮಗಳಿಗೆ ಕೋಟಿ ಕೋಟಿ ಹಣ ವೆಚ್ಚ ಮಾಡಲಾಗುತ್ತಿದೆ. ಹರಿಯಾಣ ಸರ್ಕಾರ ಗೀತಾ ಮಹೋತ್ಸವಕ್ಕೆ 100 ಕೋಟಿ ರೂ. ಖರ್ಚು ಮಾಡಿತು. ಕೇಂದ್ರ ಸರ್ಕಾರ ಕುಂಭಮೇಳಕ್ಕೆ 1,150 ಕೋಟಿ ರೂ. ನೀಡಿತ್ತು. ಉತ್ತರ ಪ್ರದೇಶದ ಯೋಗಿ ಸರ್ಕಾರ 2019ರ ಅರ್ಧ ಕುಂಭಮೇಳಕ್ಕೆ 2500 ಕೋಟಿ ರೂ. ಮಂಜೂರಾತಿ ನೀಡಿತ್ತು. ಮಧ್ಯಪ್ರದೇಶದ ಸರ್ಕಾರ ದೇಶದ ಜೊತೆ ಜೊತೆಗೆ ವಿದೇಶದ ಧಾರ್ಮಿಕ ಯಾತ್ರೆಗಳಿಗೂ ಹಣ ನೀಡುತ್ತದೆ.
ಇದೆಲ್ಲದರ ಮಧ್ಯೆ ಪಂಜಾಬ್ ನ ಕಾಂಗ್ರೆಸ್ ಸರ್ಕಾರ ತೀರ್ಥಯಾತ್ರೆ ಯೋಜನೆ ಬಂದ್ ಮಾಡಿ ಒಂದು ಒಳ್ಳೆಯ ಉದಾಹರಣೆ ಪ್ರಸ್ತುತಪಡಿಸಿತು. ಬೇರೆ ರಾಜ್ಯ ಸರ್ಕಾರಗಳು ಇದನ್ನು ಅನುಸರಿಸುವಂತಾಗಬೇಕು. ಕಷ್ಟಪಟ್ಟು ಗಳಿಸಿದ ಹಣವನ್ನು ಈ ಕಂದಾಚಾರಿಗಳು ಲೂಟಿ ಹೊಡೆಯುವಂತಾಗಬಾರದು. ಪೂಜಾರಿ ಪುರೋಹಿತರು ಆರಂಭಿಸಿದ ಈ ಆನ್ ಲೈನ್ ಪೂಜಾ ಕರ್ಮಕಾಂಡಗಳಿಂದ ಜನರು ಎಚ್ಚರದಿಂದ ಇರಬೇಕು.
– ಮನೀಷ್