ಕೆಲವು ವರ್ಷಗಳ ಹಿಂದೆ ಸುಪ್ರೀಂ ಕೋರ್ಟ್‌ ಒಂದು ಮಹತ್ವದ ತೀರ್ಪು ನೀಡುವಾಗ 497ನೇ ವಿಧಿ ರದ್ದುಪಡಿಸುವುದರ ಮೂಲಕ ಅನೈತಿಕ ಸಂಬಂಧವನ್ನು ಅಪರಾಧದ ಪಟ್ಟಿಯಿಂದ ತೆಗೆದುಹಾಕಿತು. ಆಗಿನ ಸಿಜೆಐ ದೀಪಕ್‌ ಮಿಶ್ರಾ ಈ ತೀರ್ಪು ನೀಡುತ್ತಾ ವಿವಾಹಬಾಹಿರ ಸಂಬಂಧ ವೈಯಕ್ತಿಕ ವಿಷಯ. ಅದು ವಿಚ್ಛೇದನಕ್ಕೆ ಕಾರಣವಾಗಬಹುದೇ ಹೊರತು, ಅಪರಾಧವಲ್ಲ ಎಂದು ಹೇಳಿದರು.

ದೇಶದ ಅತ್ಯುನ್ನತ ನ್ಯಾಯಾಲಯ ಕೊಟ್ಟ ಈ ತೀರ್ಪು ಭಾರಿ ಚರ್ಚೆಗೆ ಗ್ರಾಸವಾಯಿತು. ಹೆಚ್ಚುತ್ತಿರುವ ವ್ಯಭಿಚಾರ  ಸಮಾಜವನ್ನು ಅಪಹಾಸ್ಯ ಮಾಡುವ ಒಂದು ಪ್ರಯತ್ನವಾಗಿದೆ. ಆದರೆ ಇಲ್ಲಿ ಏಳುವ ಒಂದು ಮುಖ್ಯ ಪ್ರಶ್ನೆಯೆಂದರೆ, ಹೆಚ್ಚುತ್ತಿರುವ ವ್ಯಭಿಚಾರ ಹಾಗೂ ವಿವಾಹ ಬಾಹಿರ ಸಂಬಂಧಕ್ಕೆ ಏನು ಕಾರಣ?

ಮಾನವ ನಾಗರಿಕತೆಯ ವಿಕಾಸದ ಜೊತೆಗೆ ಸಮಾಜ ದೈಹಿಕ ಸಂತೃಪ್ತಿ ಹಾಗೂ ಸೆಕ್ಸ್ ಸಂಬಂಧಗಳ ಗೌರವಕ್ಕೆಂದು ವಿವಾಹ ಸಂಸ್ಥೆಯನ್ನು ಹುಟ್ಟುಹಾಕಿತು. ಮದುವೆಯ ಬಳಿಕ ಗಂಡ ಹೆಂಡತಿಯ ನಡುವೆ ದೈಹಿಕ ಸಂಬಂಧ ಗಾಢವಾಗಿಯೇ ಇರುತ್ತದೆ. ಆದರೆ ಕಾಲಕ್ರಮೇಣ ಲೈಂಗಿಕ ಅನಾಸಕ್ತಿ ಹಾಗೂ ಸಂಗಾತಿಯ ಅಗತ್ಯಗಳ ಬಗ್ಗೆ ಗಮನಕೊಡದೆ ಹೋದರೆ ಅದು ಜಗಳಕ್ಕೆ ಕಾರಣವಾಗಬಹುದು.

ಸಾಮಾನ್ಯವಾಗಿ ಸುಖಿ ದಾಂಪತ್ಯವನ್ನು ಯಾರ ಬಗ್ಗೆ ಹೇಳಲಾಗುತ್ತದೆ ಎಂದರೆ, ಅದರಲ್ಲಿ ಇಬ್ಬರೂ ಉತ್ತುಂಗತೆ ಕಂಡುಕೊಳ್ಳುತ್ತಾರೆ. ಗಂಡ ಹೆಂಡತಿ ಪರಸ್ಪರರನ್ನು ಸಂತೃಪ್ತಗೊಳಿಸುವಲ್ಲಿ ಯಶಸ್ವಿಯಾದರೆ ಅವರ ದಾಂಪತ್ಯ ಸಂಬಂಧದ ಕೆಮಿಸ್ಟ್ರಿ ಬಹಳ ಚೆನ್ನಾಗಿರುತ್ತದೆ.

ರಾಕೇಶ್‌ ಹಾಗೂ ಪ್ರತಿಭಾ ಇವರ ಮದುವೆಯಾಗಿ 5 ವರ್ಷ ಆಗಿದೆ. ಅವರಿಗೆ 2 ವರ್ಷದ ಮಗಳಿದ್ದಾಳೆ. ಮಗಳು ಹುಟ್ಟುತ್ತಿದ್ದಂತೆಯೇ ಪ್ರತಿಭಾ ತನ್ನೆಲ್ಲ ಗಮನವನ್ನು ಮಗಳ ಮೇಲೆ ಹರಿಸತೊಡಗಿದಳು. ಗಂಡನ ಸಣ್ಣಪುಟ್ಟ ಅಗತ್ಯಗಳ ಬಗ್ಗೆ ಗಮನಹರಿಸುತ್ತಿದ್ದ ಪ್ರತಿಭಾ ಈಗ ಗಂಡನ ಬಗ್ಗೆ ನಿರ್ಲಕ್ಷ್ಯ ಮಾಡತೊಡಗಿದಳು.

ಯಾವಾಗಲಾದರೊಮ್ಮೆ ರಾಕೇಶ್‌ ತನ್ನ ಪ್ರೀತಿ ಹಾಗೂ ದೈಹಿಕ ಆಸೆಯ ಬಗ್ಗೆ ಹೇಳಿದರೆ ಆಕೆ, “ನಿನಗಂತೂ ಸದಾ ಅದರದ್ದೇ ಧ್ಯಾನ,” ಎಂದು ಹೇಳಿ ಅವನ ಆಸೆಗೆ ತಣ್ಣೀರು ಎರಚುತ್ತಿದ್ದಳು. ಮಹಿಳೆಯರ ಈ ತೆರನಾದ ವರ್ತನೆ ನಿರ್ಲಕ್ಷ್ಯ ಧೋರಣೆ ಬೇರೆ ಮಹಿಳೆಯರ ಜೊತೆ ಸಂಬಂಧ ಹೊಂದಲು ಕುಮ್ಮಕ್ಕು ಕೊಡುತ್ತದೆ.

ರುಚಿಕರ ಊಟ ಮಾಡಿದ ಬಳಿಕ ಮತ್ತೆ ಏನನ್ನೂ ತಿನ್ನುವ ಇಚ್ಛೆ ಉಂಟಾಗುವುದಿಲ್ಲವೇ, ಅದೇ ರೀತಿ ಸಮಾಗಮದಿಂದ ಸಂತೃಪ್ತರಾದ ಗಂಡ ಹೆಂಡತಿ ಬೇರೆಡೆ ಗಮನಹರಿಸುವುದಿಲ್ಲ. ದಾಂಪತ್ಯ ಜೀವನದಲ್ಲಿ ಸುಖವಾಗಿರಲು ಗಂಡ ಹೆಂಡತಿ ತಮ್ಮ ಲೈಂಗಿಕ ಅಗತ್ಯಗಳ ಬಗ್ಗೆ ಗಮನಹರಿಸಬೇಕು. ಸಾಮಾನ್ಯವಾಗಿ ಗಂಡನೇ ಮೊದಲು ಸರಸ ಸಲ್ಲಾಪಕ್ಕೆ ಮುಂದಾಗುತ್ತಾನೆ. ಹೆಂಡತಿ ಕೂಡ ಒಮ್ಮೊಮ್ಮೆ ನಾನು ಮೊದಲು ಎನ್ನಬೇಕು. ಗಂಡ ಹೆಂಡತಿಯರಲ್ಲಿ ಯಾರೇ ಶುರು ಮಾಡಿದರೂ, ಪರಸ್ಪರರ ಸಂತೃಪ್ತಿಯ ಬಗ್ಗೆ ಕಾಳಜಿ ಹೊಂದಿದ್ದರೆ ವಿವಾಹಬಾಹಿರ ಸಂಬಂಧದಿಂದ ದಾಂಪತ್ಯವನ್ನು ರಕ್ಷಿಸಿಕೊಳ್ಳಬಹುದು.

ಮಗು ಹುಟ್ಟಿದ ಬಳಿಕ ಸೆಕ್ಸ್ ಬಗ್ಗೆ ಉದಾಸೀನತೆ ತೋರಬೇಡಿ. ಅದೇ ದಾಂಪತ್ಯ ಜೀವನದ ಆಧಾರಸ್ತಂಭ. ದೈಹಿಕ ಸಂಬಂಧ ಎಷ್ಟು ಮಧುರವಾಗಿರುತ್ತೊ, ಭಾವನಾತ್ಮಕ ಪ್ರೀತಿಯೂ ಅಷ್ಟೇ ಮಧುರವಾಗಿರುತ್ತದೆ. ಹೆಂಡತಿ ಸಮಾಗಮದ ಬಗ್ಗೆ ಅನಾಸಕ್ತಿ, ನಿರ್ಲಕ್ಷ್ಯ ಧೋರಣೆ ತಳೆದರೆ ಗಂಡ ಸುಖದ ಲಾಲಸೆಯಿಂದ ಬೇರೆ ಕಡೆ ಮುಖ ಮಾಡುತ್ತಾನೆ. ಗಂಡನಿಂದ ಸುಖದ ಅಪೇಕ್ಷೆ ಈಡೇರದಿದ್ದಾಗ ಹೆಂಡತಿ ಕೂಡ ಈ ಹೆಜ್ಜೆ ಇಟ್ಟರೂ ಹೇಳಲಾಗದು. ಅದರ ದುಷ್ಪರಿಣಾಮವೆಂಬಂತೆ ದಾಂಪತ್ಯ ಜೀವನದಲ್ಲಿ ಬಿರುಕು ಮೂಡಲಾರಂಭಿಸುತ್ತದೆ.

ಬದಲಾವಣೆ ಸ್ವಾಭಾವಿಕ

IB137231-137231144429360-SM335864

ಮನೋತಜ್ಞರ ಪ್ರಕಾರ, ಸಂಬಂಧದಲ್ಲಿ ಈ ಬದಲಾವಣೆ ಸ್ವಾಭಾವಿಕ. ವೈವಾಹಿಕ ಜೀವನದ ಆರಂಭದಲ್ಲಿ ದಂಪತಿಗಳ ನಡುವೆ ಪ್ರೀತಿಯ ಅಗಾಧ ಸೆಳೆತ ಇರುತ್ತದೆ. ಕಾಲಕ್ರಮೇಣ ಅದು ಕಡಿಮೆಯಾಗುತ್ತಾ ಹೋಗುತ್ತದೆ. ಅದೇ ಸಂಬಂಧದಲ್ಲಿ ಘರ್ಷಣೆಯನ್ನುಂಟು ಮಾಡುತ್ತದೆ.

ಆರ್ಥಿಕ, ಕೌಟುಂಬಿಕ ಹಾಗೂ ಮಕ್ಕಳ ತೊಂದರೆಗಳು ಈ ಘರ್ಷಣೆಗೆ ಇನ್ನಷ್ಟು ಕುಮ್ಮಕ್ಕು ಕೊಡುತ್ತವೆ. ಸಂಬಂಧದಲ್ಲಿನ ಈ ಬಿಕ್ಕಟ್ಟು ಶಮನಗೊಳಿಸಲು ಗಂಡ ಹೆಂಡತಿ ಹೊರಗಡೆ ಶಾಂತಿ ಹುಡುಕಲು ಪ್ರಯತ್ನ ಪಡುತ್ತಾರೆ. ಯಾರಿಗೆ ತಮ್ಮ ವೈವಾಹಿಕ ಜೀವನದ ಆರಂಭಿಕ ದಿನಗಳ ರೋಮಾಂಚನ ಉಂಟು ಮಾಡುತ್ತೊ, ಅದೇ ವಿವಾಹಬಾಹಿರ ಸಂಬಂಧಗಳಿಗೆ ದಾರಿ ಮಾಡಿಕೊಡುತ್ತದೆ.

ಒಂದು ಸಮೀಕ್ಷೆಯಿಂದ ತಿಳಿದು ಬಂದ ಸಂಗತಿಯೆಂದರೆ, ಬೇರೆ ಬೇರೆ ಜನರಿಗೆ ಈ ತೆರನಾದ ಸಂಬಂಧ ಏರ್ಪಡಲು ಬೇರೆ ಬೇರೆ ಕಾರಣಗಳಿವೆ. ಒಬ್ಬರಿಗೆ ಭಾವನಾತ್ಮಕ ಹೊಂದಾಣಿಕೆ, ಮತ್ತೊಬ್ಬರಿಗೆ ಲೈಂಗಿಕ ಜೀವನದ ಬಗ್ಗೆ ಅತೃಪ್ತಿ ಇರುತ್ತದೆ. ಇನ್ನು ಕೆಲವರಿಗೆ ಸಂಗಾತಿಯ ಯಾವುದೊ ಒಂದು ಚಟದ ಬಗ್ಗೆ ಬೇಸರವಿರುತ್ತದೆ.

ಮಹಿಳೆಯರ ಬಗ್ಗೆ ಅಸಡ್ಡೆ

ಭಾರತೀಯ ಸಂಸ್ಕೃತಿಯಲ್ಲಿ ಮಹಿಳೆಯರ ಬಗ್ಗೆ ಅಷ್ಟೊಂದು ಒಳ್ಳೆಯ ಅಭಿಪ್ರಾಯವಿಲ್ಲ. ಸಾಮಾಜಿಕ ಪರಂಪರೆಯ ಆಳದಲ್ಲಿ ಸ್ತ್ರೀ ದ್ವೇಷ ಅಡಗಿ ಕೂತಿದೆ. ಈ ಪರಂಪರೆ ಪೀಳಿಗೆಯಿಂದ ಪೀಳಿಗೆಗೆ ಮಹಿಳೆಯರನ್ನು ಗುಲಾಮ ಗಿರಿಗಿಂತ ಕಡೆ ಎಂಬಂತೆ ಕಾಣುತ್ತವೆ. ಹೆಣ್ಣುಮಕ್ಕಳು ಪ್ರತಿಯೊಂದು ಅವಶ್ಯಕತೆಗಳಿಗೂ ಬೇರೆಯವರನ್ನು ಅವಲಂಬಿಸುವಂತೆ ಮಾಡಿವೆ. ಯಾವ ಮಹಿಳೆ ತನ್ನದೇ ಆದ ರೀತಿಯಲ್ಲಿ  ಜೀವಿಸಲು ಪ್ರಯತ್ನಿಸುತ್ತಾಳೊ, ಪರಂಪರೆಗಳನ್ನು ತೊಡೆದು ಹಾಕಲು ನಿರ್ಧರಿಸುತ್ತಾಳೊ, ಅವಳನ್ನು ಸಮಾಜ ಚಾರಿತ್ರ್ಯಹೀನ ಎಂಬ ಹೆಸರಿನಿಂದ ಕರೆಯುತ್ತದೆ. ಗಂಡನಿಗೆ ಮನೆಯಲ್ಲಿ ಒಳ್ಳೆಯ ವ್ಯವಸ್ಥೆ, ಹೆಂಡತಿಯ ಸಮಯ ಹಾಗೂ ಒಳ್ಳೆಯ ಸಮೃದ್ಧ ಊಟ, ನೆಮ್ಮದಿದಾಯಕ ವಾತಾವರಣ ಹಾಗೂ ದೇಹತೃಪ್ತಿ ಬೇಕು. ಆದರೆ ಪತಿ ಅವಳ ಸುಖ ಸೌಲಭ್ಯ ಮತ್ತು ದೈಹಿಕ ಅಗತ್ಯಗಳ ಬಗ್ಗೆ ಅಷ್ಟೊಂದು ಗಮನ ಕೊಡುವುದಿಲ್ಲ. ಹೆಂಡತಿ ತನ್ನ ಗಂಡನ ನೈಸರ್ಗಿಕ ಇಚ್ಛೆಗಳನ್ನೆಲ್ಲ ಈಡೇರಿಸುತ್ತಿರಬೇಕು ಎಂದು ಅಪೇಕ್ಷಿಸಲಾಗುತ್ತದೆ.

ಮನೋತಜ್ಞರ ಪ್ರಕಾರ, ವಿವಾಹಬಾಹಿರ ಸಂಬಂಧಗಳನ್ನು ತಡೆಯಲು ಕೆಲವು ಸಂಗತಿಗಳನ್ನು ಗಮನದಲ್ಲಿಡಬೇಕಾಗುತ್ತದೆ. ಸಂಬಂಧದಲ್ಲಿ ಬಿಸುಪು ಕಡಿಮೆಯಾದರೆ, ಹಳೆಯ ಬಟ್ಟೆ ತೆಗೆದು ಹೊಸ ಬಟ್ಟೆ ತಂದಂತೆ ಸಂಬಂಧ ಬದಲಿಸುವುದು ಸಮಸ್ಯೆಗೆ ಪರಿಹಾರವಲ್ಲ. ಸಂಗಾತಿಯನ್ನು ಅರಿತುಕೊಳ್ಳಲು ಹಲವು ಮಾರ್ಗಗಳಿವೆ. ಮಾತುಕತೆಯ ಮೂಲಕ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದಾಗಿದೆ. ಸಮಾಗಮದ ಹೊಸ ಹೊಸ ವಿಧಾನಗಳನ್ನು ಕಂಡುಕೊಂಡು ಪರಸ್ಪರರ ದೈಹಿಕ ಸಂತೃಪ್ತಿಯ ಮೂಲಕ ವಿವಾಹ ಬಾಹಿರ ಸಂಬಂಧಗಳಿಂದ ದಾಂಪತ್ಯ ರಕ್ಷಿಸಿಕೊಳ್ಳಬಹುದಾಗಿದೆ.

ಫೋರ್ಪ್ಲೇಯಿಂದ ಉತ್ತುಂಗತೆ

ಹೆಸರಾಂತ ಫ್ಯಾಷನ್‌ ಪತ್ರಿಕೆಯೊಂದರ ಪ್ರಕಾರ, ಮಹಿಳೆಯರ ಉತ್ತುಂಗ ಸುಖದ ಬಗ್ಗೆ ಹಲವು ಸತ್ಯಾಂಶಗಳು ಹೊರಬಂದಿವೆ. ಈ ಆನ್‌ ಲೈನ್‌ ಸಮೀಕ್ಷೆಯಲ್ಲಿ 18 ರಿಂದ 40 ವರ್ಷದೊಳಗಿನ 2900 ಮಹಿಳೆಯರು ಪಾಲ್ಗೊಂಡಿದ್ದರು. ಅವರಲ್ಲಿ ಶೇ.67ರಷ್ಟು ಮಹಿಳೆಯರು ಫೇಕ್‌ ಆರ್ಗ್ಯಸಂ ಅಂದರೆ ತಮಗೆ ಪೂರ್ಣ ಖುಷಿ ದೊರೆತಿದೆ ಎಂದು ನಾಟಕ ಮಾಡುತ್ತಾರಂತೆ. ಶೇ.72ರಷ್ಟು ಮಹಿಳೆಯರು ಹೇಳುವುದೇನೆಂದರೆ, ಗಂಡ ಆರ್ಗ್ಯಸಂ ತಲುಪಿದ ಬಳಿಕ ತಮ್ಮ ಉತ್ತುಂಗ ಸುಖದ ಬಗ್ಗೆ ಗಮನಹರಿಸುವುದಿಲ್ಲ ಎಂದು ಹೇಳುತ್ತಾರೆ. ಈ ಸಮೀಕ್ಷೆಯಿಂದ ಗೊತ್ತಾಗುವ ಸಂಗತಿಯೇನೆಂದರೆ, ಬಹಳಷ್ಟು ಗಂಡ ಹೆಂಡತಿಯರು ದೈಹಿಕ ಸಂಬಂಧದಲ್ಲಿ ಉತ್ತುಂಗ ಸುಖದ ತನಕ ತಲುಪುದೇ ಇಲ್ಲ.

ಸಂಗಾತಿಗಳಿಬ್ಬರೂ ಪರಸ್ಪರರ ಸುಖದ ಬಗ್ಗೆ ಗಮನಹರಿಸಿದರೇ ಉತ್ತುಂಗತೆ ತಲುಪಬಹುದು. ಅದಕ್ಕೆ ದೈಹಿಕ ಸಿದ್ಧತೆಯ ಜೊತೆಗೆ ಮಾನಸಿಕ ಸಿದ್ಧತೆ ಕೂಡ ಅಗತ್ಯ. ಅದು ಪರಸ್ಪರರ ಸಹಕಾರವನ್ನು ಅವಲಂಬಿಸಿದೆ. ಸಮಾಗಮದ ಸಂದರ್ಭದಲ್ಲಿ ಕೋಣೆಯ ವಾತಾವರಣ ಚೆನ್ನಾಗಿರಬೇಕು. ಜೊತೆಗೆ ಪರಸ್ಪರರ ಛೇಡಿಸುವಿಕೆ ಕೂಡ ಅಗತ್ಯ.

ಮತ್ತೊಂದು ಸಂಗತಿ, ಸಮಾಗಮದ ಸಮಯದಲ್ಲಿ ಮನೆಯ ಸಮಸ್ಯೆಗಳ ಪ್ರಸ್ತಾಪ ಬೇಡ. ದೂರು ಹೇಳುವುದು ಕಿರಿಕಿರಿಯಾಗಿ ಪರಿಣಮಿಸುತ್ತದೆ. ಹೊಸ ಜಾಗ, ಹೊಸ ವಿಧಾನ ಕೂಡ ನಿಮ್ಮ ದಾಂಪತ್ಯಕ್ಕೆ ಚೇತರಿಕೆ ಕೊಡಬಹುದು. ಹಾಗಾಗಿ ಆಗಾಗ ಪ್ರವಾಸ ಯೋಜನೆ ರೂಪಿಸಿ.

ಜಿ. ಮಲ್ಲಿಕಾ

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ