ಕೆಲವು ವರ್ಷಗಳ ಹಿಂದೆ ಸುಪ್ರೀಂ ಕೋರ್ಟ್ ಒಂದು ಮಹತ್ವದ ತೀರ್ಪು ನೀಡುವಾಗ 497ನೇ ವಿಧಿ ರದ್ದುಪಡಿಸುವುದರ ಮೂಲಕ ಅನೈತಿಕ ಸಂಬಂಧವನ್ನು ಅಪರಾಧದ ಪಟ್ಟಿಯಿಂದ ತೆಗೆದುಹಾಕಿತು. ಆಗಿನ ಸಿಜೆಐ ದೀಪಕ್ ಮಿಶ್ರಾ ಈ ತೀರ್ಪು ನೀಡುತ್ತಾ ವಿವಾಹಬಾಹಿರ ಸಂಬಂಧ ವೈಯಕ್ತಿಕ ವಿಷಯ. ಅದು ವಿಚ್ಛೇದನಕ್ಕೆ ಕಾರಣವಾಗಬಹುದೇ ಹೊರತು, ಅಪರಾಧವಲ್ಲ ಎಂದು ಹೇಳಿದರು.
ದೇಶದ ಅತ್ಯುನ್ನತ ನ್ಯಾಯಾಲಯ ಕೊಟ್ಟ ಈ ತೀರ್ಪು ಭಾರಿ ಚರ್ಚೆಗೆ ಗ್ರಾಸವಾಯಿತು. ಹೆಚ್ಚುತ್ತಿರುವ ವ್ಯಭಿಚಾರ ಸಮಾಜವನ್ನು ಅಪಹಾಸ್ಯ ಮಾಡುವ ಒಂದು ಪ್ರಯತ್ನವಾಗಿದೆ. ಆದರೆ ಇಲ್ಲಿ ಏಳುವ ಒಂದು ಮುಖ್ಯ ಪ್ರಶ್ನೆಯೆಂದರೆ, ಹೆಚ್ಚುತ್ತಿರುವ ವ್ಯಭಿಚಾರ ಹಾಗೂ ವಿವಾಹ ಬಾಹಿರ ಸಂಬಂಧಕ್ಕೆ ಏನು ಕಾರಣ?
ಮಾನವ ನಾಗರಿಕತೆಯ ವಿಕಾಸದ ಜೊತೆಗೆ ಸಮಾಜ ದೈಹಿಕ ಸಂತೃಪ್ತಿ ಹಾಗೂ ಸೆಕ್ಸ್ ಸಂಬಂಧಗಳ ಗೌರವಕ್ಕೆಂದು ವಿವಾಹ ಸಂಸ್ಥೆಯನ್ನು ಹುಟ್ಟುಹಾಕಿತು. ಮದುವೆಯ ಬಳಿಕ ಗಂಡ ಹೆಂಡತಿಯ ನಡುವೆ ದೈಹಿಕ ಸಂಬಂಧ ಗಾಢವಾಗಿಯೇ ಇರುತ್ತದೆ. ಆದರೆ ಕಾಲಕ್ರಮೇಣ ಲೈಂಗಿಕ ಅನಾಸಕ್ತಿ ಹಾಗೂ ಸಂಗಾತಿಯ ಅಗತ್ಯಗಳ ಬಗ್ಗೆ ಗಮನಕೊಡದೆ ಹೋದರೆ ಅದು ಜಗಳಕ್ಕೆ ಕಾರಣವಾಗಬಹುದು.
ಸಾಮಾನ್ಯವಾಗಿ ಸುಖಿ ದಾಂಪತ್ಯವನ್ನು ಯಾರ ಬಗ್ಗೆ ಹೇಳಲಾಗುತ್ತದೆ ಎಂದರೆ, ಅದರಲ್ಲಿ ಇಬ್ಬರೂ ಉತ್ತುಂಗತೆ ಕಂಡುಕೊಳ್ಳುತ್ತಾರೆ. ಗಂಡ ಹೆಂಡತಿ ಪರಸ್ಪರರನ್ನು ಸಂತೃಪ್ತಗೊಳಿಸುವಲ್ಲಿ ಯಶಸ್ವಿಯಾದರೆ ಅವರ ದಾಂಪತ್ಯ ಸಂಬಂಧದ ಕೆಮಿಸ್ಟ್ರಿ ಬಹಳ ಚೆನ್ನಾಗಿರುತ್ತದೆ.
ರಾಕೇಶ್ ಹಾಗೂ ಪ್ರತಿಭಾ ಇವರ ಮದುವೆಯಾಗಿ 5 ವರ್ಷ ಆಗಿದೆ. ಅವರಿಗೆ 2 ವರ್ಷದ ಮಗಳಿದ್ದಾಳೆ. ಮಗಳು ಹುಟ್ಟುತ್ತಿದ್ದಂತೆಯೇ ಪ್ರತಿಭಾ ತನ್ನೆಲ್ಲ ಗಮನವನ್ನು ಮಗಳ ಮೇಲೆ ಹರಿಸತೊಡಗಿದಳು. ಗಂಡನ ಸಣ್ಣಪುಟ್ಟ ಅಗತ್ಯಗಳ ಬಗ್ಗೆ ಗಮನಹರಿಸುತ್ತಿದ್ದ ಪ್ರತಿಭಾ ಈಗ ಗಂಡನ ಬಗ್ಗೆ ನಿರ್ಲಕ್ಷ್ಯ ಮಾಡತೊಡಗಿದಳು.
ಯಾವಾಗಲಾದರೊಮ್ಮೆ ರಾಕೇಶ್ ತನ್ನ ಪ್ರೀತಿ ಹಾಗೂ ದೈಹಿಕ ಆಸೆಯ ಬಗ್ಗೆ ಹೇಳಿದರೆ ಆಕೆ, ``ನಿನಗಂತೂ ಸದಾ ಅದರದ್ದೇ ಧ್ಯಾನ,'' ಎಂದು ಹೇಳಿ ಅವನ ಆಸೆಗೆ ತಣ್ಣೀರು ಎರಚುತ್ತಿದ್ದಳು. ಮಹಿಳೆಯರ ಈ ತೆರನಾದ ವರ್ತನೆ ನಿರ್ಲಕ್ಷ್ಯ ಧೋರಣೆ ಬೇರೆ ಮಹಿಳೆಯರ ಜೊತೆ ಸಂಬಂಧ ಹೊಂದಲು ಕುಮ್ಮಕ್ಕು ಕೊಡುತ್ತದೆ.
ರುಚಿಕರ ಊಟ ಮಾಡಿದ ಬಳಿಕ ಮತ್ತೆ ಏನನ್ನೂ ತಿನ್ನುವ ಇಚ್ಛೆ ಉಂಟಾಗುವುದಿಲ್ಲವೇ, ಅದೇ ರೀತಿ ಸಮಾಗಮದಿಂದ ಸಂತೃಪ್ತರಾದ ಗಂಡ ಹೆಂಡತಿ ಬೇರೆಡೆ ಗಮನಹರಿಸುವುದಿಲ್ಲ. ದಾಂಪತ್ಯ ಜೀವನದಲ್ಲಿ ಸುಖವಾಗಿರಲು ಗಂಡ ಹೆಂಡತಿ ತಮ್ಮ ಲೈಂಗಿಕ ಅಗತ್ಯಗಳ ಬಗ್ಗೆ ಗಮನಹರಿಸಬೇಕು. ಸಾಮಾನ್ಯವಾಗಿ ಗಂಡನೇ ಮೊದಲು ಸರಸ ಸಲ್ಲಾಪಕ್ಕೆ ಮುಂದಾಗುತ್ತಾನೆ. ಹೆಂಡತಿ ಕೂಡ ಒಮ್ಮೊಮ್ಮೆ ನಾನು ಮೊದಲು ಎನ್ನಬೇಕು. ಗಂಡ ಹೆಂಡತಿಯರಲ್ಲಿ ಯಾರೇ ಶುರು ಮಾಡಿದರೂ, ಪರಸ್ಪರರ ಸಂತೃಪ್ತಿಯ ಬಗ್ಗೆ ಕಾಳಜಿ ಹೊಂದಿದ್ದರೆ ವಿವಾಹಬಾಹಿರ ಸಂಬಂಧದಿಂದ ದಾಂಪತ್ಯವನ್ನು ರಕ್ಷಿಸಿಕೊಳ್ಳಬಹುದು.
ಮಗು ಹುಟ್ಟಿದ ಬಳಿಕ ಸೆಕ್ಸ್ ಬಗ್ಗೆ ಉದಾಸೀನತೆ ತೋರಬೇಡಿ. ಅದೇ ದಾಂಪತ್ಯ ಜೀವನದ ಆಧಾರಸ್ತಂಭ. ದೈಹಿಕ ಸಂಬಂಧ ಎಷ್ಟು ಮಧುರವಾಗಿರುತ್ತೊ, ಭಾವನಾತ್ಮಕ ಪ್ರೀತಿಯೂ ಅಷ್ಟೇ ಮಧುರವಾಗಿರುತ್ತದೆ. ಹೆಂಡತಿ ಸಮಾಗಮದ ಬಗ್ಗೆ ಅನಾಸಕ್ತಿ, ನಿರ್ಲಕ್ಷ್ಯ ಧೋರಣೆ ತಳೆದರೆ ಗಂಡ ಸುಖದ ಲಾಲಸೆಯಿಂದ ಬೇರೆ ಕಡೆ ಮುಖ ಮಾಡುತ್ತಾನೆ. ಗಂಡನಿಂದ ಸುಖದ ಅಪೇಕ್ಷೆ ಈಡೇರದಿದ್ದಾಗ ಹೆಂಡತಿ ಕೂಡ ಈ ಹೆಜ್ಜೆ ಇಟ್ಟರೂ ಹೇಳಲಾಗದು. ಅದರ ದುಷ್ಪರಿಣಾಮವೆಂಬಂತೆ ದಾಂಪತ್ಯ ಜೀವನದಲ್ಲಿ ಬಿರುಕು ಮೂಡಲಾರಂಭಿಸುತ್ತದೆ.