ಮೊಬೈಲ್ ‌ಸದ್ದು ಮಾಡಿತು. ದೀಪಾ ಸ್ಕ್ರೀನ್‌ ಮೇಲೆ ತನ್ನ ಅಕ್ಕನ ಫೋಟೋ ನೋಡಿ ಏನೋ ಮಹತ್ವದ ವಿಷಯ ಇರಬೇಕು ಎಂದುಕೊಂಡಳು. ಅವಳು ಎಂದೂ ನಿರರ್ಥಕ ವಿಷಯಗಳಿಗೆ ಕಾಲ್ ‌ಮಾಡುತ್ತಿರಲಿಲ್ಲ.

“ಕೋಲಾರದಲ್ಲಿದ್ದ ಪಿತ್ರಾರ್ಜಿತ ಆಸ್ತಿಯನ್ನು ಇಬ್ಬರೂ ಅಣ್ಣಂದಿರು ಸೇರಿ, ನಮ್ಮಿಬ್ಬರ ಸಹಿ ತಾವೇ ಮಾಡಿ, ಆಸ್ತಿಯನ್ನು ಮಾರಿಬಿಟ್ಟಿದ್ದಾರಂತೆ. ನನಗೆ ತುಂಬಾ ಬೇಕಾದ ಅಲ್ಲಿನ ವ್ಯಕ್ತಿಯೊಬ್ಬರು ಫೋನ್‌ ಮಾಡಿ ವಿಷಯ ತಿಳಿಸಿದರು,” ಎಂದು ಹೇಳಿದಳು.

ಅಕ್ಕ ಹೇಳಿದ ವಿಷಯ ಕೇಳಿ ದೀಪಾಳಿಗೆ ಆಘಾತವೇ ಆಯಿತು. ತಂದೆಯ ಚಿತೆಯ ಬೆಂಕಿ ಆರುವ ಮುನ್ನವೇ ಈ ನಿರ್ಧಾರ ಕೈಗೊಂಡಿದ್ದ ಅಣ್ಣ, ಬಹುಶಃ ತಾವೆಲ್ಲರೂ ಹೋಗುವುದನ್ನೇ ಕಾಯುತ್ತಿದ್ದ ಅನಿಸುತ್ತೆ. ಒಂದುವೇಳೆ ಅಪ್ಪನೇ ಮಾರುವ ನಿರ್ಧಾರ ಕೈಗೊಂಡಿದ್ದರೆ ತಮ್ಮೆಲ್ಲರಿಗೂ ಸಮನಾಗಿ ಆಸ್ತಿ ಹಂಚಿಕೆ ಮಾಡುತ್ತಿದ್ದರು. ಆದರೆ ಅವರು ಅಕಾಲಿಕವಾಗಿ ಅಪಘಾತದಲ್ಲಿ ತೀರಿಹೋದರು. ಅಪ್ಪ ಅದೆಷ್ಟೋ ಸಲ ದೀಪಾಗೆ ಹೇಳಿದ್ದರು. ಕೇವಲ ಅವನೊಬ್ಬ ಮಾತ್ರ ಆರ್ಥಿಕವಾಗಿ ಸಂಕಷ್ಟದಲ್ಲಿದ್ದಾನೆ. ಹೀಗಾಗಿ ಅವನಿಗೆ ಆ ಆಸ್ತಿಯಿಂದ ಸಾಕಷ್ಟು ಅನುಕೂಲ ಆಗುತ್ತೆ. ಆದರೆ ಈ ಘಟನೆ ಇದೊಂದೇ ಕುಟುಂಬಕ್ಕೆ ಸಂಬಂಧಿಸಿದ್ದಲ್ಲ. ಪ್ರತಿ ಮನೆಗೂ ಸಂಬಂಧಿಸಿದ್ದಾಗಿದೆ.

ಪಿತ್ರಾರ್ಜಿತ ಆಸ್ತಿಯಲ್ಲಿ ಹಕ್ಕು

ಹಿಂದಿನ ಕಾಲದಲ್ಲಿ ಅವಿಭಕ್ತ ಕುಟುಂಬಗಳು ಇರುತ್ತಿದ್ದವು. ಹೆಚ್ಚಿನ ಪುರುಷರು ತಮ್ಮ ತಂದೆಯ ಉದ್ಯೋಗ ವೃತ್ತಿಯನ್ನೇ ಮುಂದುವರಿಸಿಕೊಂಡು ಹೋಗುತ್ತಿದ್ದರು. ಹೀಗಾಗಿ ಅಕ್ಕ ತಂಗಿಯರ ವಿವಾಹದಲ್ಲಿ ತಂದೆಯ ಆಸ್ತಿಯಲ್ಲಿ ಬಂದ ಪಾಲನ್ನು ಅವರಿಗೂ ವರದಕ್ಷಿಣೆ ರೂಪದಲ್ಲಿ ಕೊಡುತ್ತಿದ್ದರು. ಮದುವೆಯ ಬಳಿಕ ಅವರ ಪ್ರತಿಯೊಂದು ಕಷ್ಟಸುಖದಲ್ಲಿ ಭಾಗಿಯಾಗುತ್ತಿದ್ದರು ಹಾಗೂ ತಮ್ಮ ಕೈಲಾದ ಮಟ್ಟಿಗೆ ಆರ್ಥಿಕ ಸಹಾಯ ಮಾಡುತ್ತಿದ್ದರು. ಅಷ್ಟೇ ಏಕೆ, ಯಾವುದೇ ಮಹಿಳೆ ಗಂಡನಿಂದ ಬೇರೆಯಾದರೆ ಅಥವಾ ವಿಧವೆಯಾದರೆ ಆಕೆಗೆ ಮತ್ತು ಆಕೆಯ ಮಕ್ಕಳಿಗೆ ಆಶ್ರಯ ಕೊಡುತ್ತಿದ್ದರು. ಇದನ್ನು ಅವರು ತಮ್ಮ ನೈತಿಕ ಕರ್ತವ್ಯವೆಂದು ಭಾವಿಸುತ್ತಿದ್ದರು. ಅವರು ತಮ್ಮ ತಾಯಿ ತಂದೆಯರ ಬಗೆಗೂ ಅಷ್ಟೇ ಜವಾಬ್ದಾರಿ ನಿಭಾಯಿಸುತ್ತಿದ್ದರು. ಹೆಣ್ಣುಮಕ್ಕಳು ಮದುವೆಯಾದ ಬಳಿಕ ತಮ್ಮ ಅತ್ತೆಮನೆಗೆ ಸಮರ್ಪಿತರಾಗುತ್ತಿದ್ದರು. ಆದರೆ ಕಾಲಕ್ರಮೇಣ ಜನರ ಯೋಚನೆಯಲ್ಲಿ ಸಾಕಷ್ಟು ಬದಲಾವಣೆಯಾಯಿತು. ಈಗ ಯುವಕರು ತಮ್ಮ ಕುಟುಂಬ ಉದ್ಯೋಗ ತೊರೆದು ಬೇರೆ ಬೇರೆ ನಗರಗಳಲ್ಲಿ ನೌಕರಿ ಮಾಡತೊಡಗಿದರು. ಒಟ್ಟು ಕುಟುಂಬಗಳು ಚಿಕ್ಕ ಚಿಕ್ಕ ಕುಟುಂಬಗಳಾಗಿ ಪರಿವರ್ತನೆಗೊಂಡವು. ಇದರ ಪರಿಣಾಮ ಎಂಬಂತೆ ಕುಟುಂಬದ ಎಲ್ಲರೂ ಜೊತೆ ಜೊತೆಗಿಲ್ಲ. ಹಾಗಾಗಿ ಅವರವರ ಖರ್ಚು ವೆಚ್ಚಗಳು ಹೆಚ್ಚಾದವು.

ಮಹಿಳೆಯರು ಸ್ವಾವಲಂಬಿಯಾಗುತ್ತಿದ್ದಂತೆ ಪುರುಷರು ಅವರ ಬಗ್ಗೆ ಉದಾಸೀನ ಧೋರಣೆ ತಳೆಯಲಾರಂಭಿಸಿದರು. ಹೆಣ್ಣುಮಕ್ಕಳು ಕೂಡ ತಮ್ಮ ಸೋದರರ ಜೊತೆ ದುಡಿಯುತ್ತ ತಮ್ಮ ತಾಯಿ ತಂದೆಯರ ಜವಾಬ್ದಾರಿಯಿಂದ ವಿಮುಖರಾಗಿಲ್ಲ. ಈಗ ವರದಕ್ಷಿಣೆ ಹಾವಳಿ ಕೂಡ ಅಷ್ಟಾಗಿ ಇಲ್ಲ. ಮಹಿಳೆಯರು ಕೂಡ ಸ್ವಾವಲಂಬಿಗಳಾಗಿರುವುದರಿಂದ ಸ್ವಾಭಿಮಾನದ ಪ್ರತೀಕ ಎಂಬಂತೆ ವರದಕ್ಷಿಣೆ ಕೊಡಬಾರದು ಎಂಬ ನಿರ್ಧಾರಕ್ಕೆ ಬದ್ಧರಾಗಿದ್ದಾರೆ. ಇದೆಲ್ಲವನ್ನೂ ಗಮನಿಸಿ ಮಹಿಳೆಯರಿಗೂ ಕೂಡ ಪಿತ್ರಾರ್ಜಿತ ಆಸ್ತಿಯಲ್ಲಿ ಹಕ್ಕು ಇರುವುದು ಅತ್ಯವಶ್ಯಕ ಎನಿಸುತ್ತದೆ.

ಸಮಾನ ಹಕ್ಕು

ವಿವಾಹಿತ ಮಹಿಳೆಯರಿಗೆ ಪಿತ್ರಾರ್ಜಿತ ಆಸ್ತಿಯಲ್ಲಿ ಪುರುಷರಿಗೆ ಸರಿಸಮಾನ ಹಕ್ಕು, 1956ರ ಹಿಂದೂ ಉತ್ತರಾಧಿಕಾರದ ತಿದ್ದುಪಡಿಯ ಬಳಿಕ ದೊರೆಯಿತು. ಆದರೆ ಇದು ಮೂಲತಃ ಪ್ರಭಾವಶಾಲಿ ಎನಿಸಲಿಲ್ಲ. ಸೆಪ್ಟೆಂಬರ್‌, 2005ರ ಉತ್ತರಾಧಿಕಾರ ಅಧಿನಿಯಮದನ್ವಯ ಹೊಸ ಅಧಿನಿಮಯಗಳ ಆಧಾರದ ಮೇಲೆ ಪಿತ್ರಾರ್ಜಿತ ಆಸ್ತಿಯ ಮೇಲೆ ಪುರುಷ ಹಾಗೂ ಮಹಿಳೆಯರಿಗೆ ಸಮಾನ ಹಕ್ಕಿದೆ.

ಇಲ್ಲಿ ಏಳುವ ಪ್ರಶ್ನೆ ಎಂದರೆ, ಈ ಕಾನೂನೇನೋ ಬಂತು. ಆದರೆ ಕುಟುಂಬಗಳು ಇದನ್ನು ಅನುಸರಿಸುತ್ತಿವೆಯೇ? ಇಲ್ಲ, ಖಂಡಿತ ಇಲ್ಲ. ಅಕ್ಕಾ ತಂಗಿ ಅಥವಾ ಮಗಳು ಈ ಅಭಿಲಾಷೆ ಇಟ್ಟುಕೊಂಡು ಮನೆಗೆ ಬಂದರೆ ಪುರುಷರಿಗೆ ಬಹಳ ಕೋಪ ಬರುತ್ತದೆ. ಅವರು ಆಕೆಯ ಹಕ್ಕುಗಳನ್ನು ಹತ್ತಿಕ್ಕಿ ಆಕೆ ಸದಾ ತಮ್ಮ ಬಳಿ ಕೈ ಚಾಚುತ್ತಿರಬೇಕೆಂದು ಅಪೇಕ್ಷಿಸುತ್ತಾರೆ. ಅವಳಿಗೆ ಸಹಾಯ ಮಾಡಿದೆ ಎಂದು ಹೇಳಿಕೊಳ್ಳುವುದರ ಮೂಲಕ ಸಮಾಜದಲ್ಲಿ ಪ್ರಶಂಸೆಗೆ ಪಾತ್ರರಾಗಲು ಇಚ್ಛಿಸುತ್ತಾರೆ.

ಅವಳು ತಮ್ಮ ಮನೆಯಲ್ಲಿ ಹುಟ್ಟಿಯೇ ಇಲ್ಲ ಎಂಬಂತೆ ವರ್ತಿಸುವ ಅವರು, ಮದುವೆಯಾಗುತ್ತಿದ್ದಂತೆ ಈ ಮನೆಯ ಋಣ ಮುಗಿಯಿತು ಎಂದು ಭಾವಿಸುತ್ತಾರೆ.

ಹಳಸುತ್ತಿರುವ ಸಂಬಂಧ

ಪಿತ್ರಾರ್ಜಿತ ಆಸ್ತಿಯಲ್ಲಿ ಸ್ತ್ರೀ ಪುರುಷರಿಗೆ ಸಮಾನ ಹಕ್ಕು ಕಾನೂನಿನ್ವಯ ಕುಟುಂಬದ ಸಂಬಂಧದಲ್ಲಿ ಸಾಕಷ್ಟು ಮನಸ್ತಾಪಗಳು ಉಂಟಾಗುತ್ತಿವೆ. ಯಾವ ಕೆಲಸವನ್ನು ಪುರುಷ ತನ್ನ ನೈತಿಕ ಕರ್ತವ್ಯ ಎಂದು ಭಾವಿಸಿ ಮಾಡುತ್ತಿದ್ದನೋ ಈಗ ಕಾನೂನಿನ ಭಯದಿಂದ ಅದನ್ನೂ ಮಾಡುತ್ತಿಲ್ಲ. ಏಕೆಂದರೆ ಪುರುಷ ಪ್ರಧಾನ ದೇಶದಲ್ಲಿ ಪುರುಷರ ಮಾನಸಿಕತೆಯಲ್ಲಿ ಆಮೆ ನಡಿಗೆಯ ರೀತಿಯಲ್ಲಿ ಬದಲಾವಣೆ ಆಗುತ್ತಿದೆ. ನೈತಿಕ ಕರ್ತವ್ಯವೆಂದು ಭಾವಿಸುವ ಪುರುಷರಷ್ಟೇ ಕಾನೂನಿನ ಪಾಲನೆ ಮಾಡುತ್ತಿದ್ದಾರೆ.

ಸಂಬಂಧದಲ್ಲಿ ಮನಸ್ತಾಪ ಉಂಟಾಗಲು ಮುಖ್ಯ ಕಾರಣ ಹೆಣ್ಣು, ಹೊನ್ನು, ಮಣ್ಣು ಎಂಬುದು ಎಲ್ಲರಿಗೂ ಗೊತ್ತೇ ಇದೆ. ಇಂದಿನ ಆಧುನಿಕ ಯುಗದಲ್ಲಿ ಕಾನೂನು ರೂಪುಗೊಂಡ ಬಳಿಕ ಹೆಣ್ಣುಮಕ್ಕಳಿಗೆ ಆಸ್ತಿಯಲ್ಲಿ ಪಾಲು ಕೊಡುವ ಜವಾಬ್ದಾರಿ ಏನೋ ಹೆಚ್ಚಿತು. ಆದರೆ ಅವರ ಆರ್ಥಿಕ ಸುರಕ್ಷತೆ ಗೌಣವಾಗಿಬಿಟ್ಟಿತು.

ಈಗಲೂ ಪುರುಷರು ತಮ್ಮ ತಾಯಿ ತಂದೆಯರಿಗಾಗಿ ಆರ್ಥಿಕವಾಗಿ ಅಥವಾ ದೈಹಿಕವಾಗಿ ಏನೂ ಮಾಡದಿದ್ದರೂ ಪಿತ್ರಾರ್ಜಿತ ಆಸ್ತಿಯಲ್ಲಿ ಮಾತ್ರ ತಮ್ಮದೇ ಸಂಪೂರ್ಣ ಹಕ್ಕು ಎಂದು ಭಾವಿಸುತ್ತಾರೆ. ಮಗಳು ತಮ್ಮ ತಾಯಿ ತಂದೆಯರಿಗಾಗಿ ಜೀವನವಿಡೀ ಏನೇ ಮಾಡಿದರೂ ಆಸ್ತಿಯ ವಿಷಯ ಬಂದಾಗ, ಅಣ್ಣ ತಮ್ಮಂದಿರ ರಕ್ತ ಕುದಿಯತೊಡಗುತ್ತದೆ. ಈ ನಿಟ್ಟಿನಲ್ಲಿ ಅವಳು ಕೋರ್ಟ್‌ ಕಟ್ಟೆ ಹತ್ತುವುದು ದೂರದ ಮಾತೇ ಸರಿ.

ಅಕ್ಕ ತಂಗಿಗೆ ಆಸ್ತಿಯಲ್ಲಿ ಪಾಲು ಸಿಗುವುದು ದೂರದ ಮಾತು. ಅಣ್ಣ ತನ್ನ ಒಡಹುಟ್ಟಿದ ತಮ್ಮನಿಗೇ ಆಸ್ತಿ ಕೊಡಲು ತಕರಾರು ತೆಗೆಯುತ್ತಾನೆ.

ಮಾನಸಿಕತೆಯಲ್ಲಿ ಬದಲಾವಣೆ

ಇದರಲ್ಲಿ ಅಣ್ಣ ತಮ್ಮಂದಿರದಷ್ಟೇ ತಪ್ಪಿಲ್ಲ. ಅಕ್ಕ ತಂಗಿಯರದ್ದು ಕೂಡ ಸಾಕಷ್ಟು ತಪ್ಪಿದೆ. ಮದುವೆಯ ಬಳಿಕ ಹೆಣ್ಣುಮಕ್ಕಳು ತಮ್ಮ ಅಣ್ಣಂದಿರಿಂದ ತವರು ಮನೆಯ ಮದುವೆ/ಮುಂಜಿ ಸಮಾರಂಭಗಳಲ್ಲಿ ಸಾಕಷ್ಟು ಮೊತ್ತ ವಸೂಲಿ ಮಾಡುತ್ತಾರೆ. ಆಸ್ತಿಯಲ್ಲೂ ಹಕ್ಕು ಬಯಸುತ್ತಾರೆ. ವಾಸ್ತವದಲ್ಲಿ ಅವಳು ತನ್ನ ಅಣ್ಣನಿಗಿಂತಲೂ ಆರ್ಥಿಕವಾಗಿ ಶ್ರೀಮಂತಳು.

ಈ ಎಲ್ಲ ಸ್ತುಸ್ಥಿತಿಯನ್ನು ಗಮನಿಸಿದಾಗ ಕಾನೂನಿನಗಿಂತ ಮುಖ್ಯವಾಗಿ ತಂದೆಯೇ ತನ್ನ ಗಂಡು ಮಕ್ಕಳು ಹಾಗೂ ಹೆಣ್ಣುಮಕ್ಕಳಿಗೆ ಆಸ್ತಿಯಲ್ಲಿ ಸಮಪಾಲು ಬರೆದುಕೊಡಬೇಕು. ಅದನ್ನು ಉಯಿಲು ಪತ್ರದಲ್ಲಿ ನಮೂದಿಸಬೇಕು. ಇದರಿಂದ ಅನಧಿಕೃತವಾಗಿ ಯಾರ ಹಕ್ಕನ್ನು ಯಾರೂ ಕಿತ್ತುಕೊಳ್ಳರು.

ಕಾನೂನುಕ್ರಮದಲ್ಲಿ ಸ್ತ್ರೀ ಪುರುಷರ ಮಾನಸಿಕತೆಯಲ್ಲಿ ಬದಲಾವಣೆ ಬಂದಿದೆ. ಹಣಕ್ಕಿಂತ ಸಂಬಂಧಕ್ಕೆ ಹೆಚ್ಚು ಮಹತ್ವ ಕೊಟ್ಟು ನೈತಿಕತೆಯ ಆಧಾರದ ಮೇಲೆ ಪಿತ್ರಾರ್ಜಿತ ಆಸ್ತಿಯ ಹಂಚಿಕೆ ಆಗಬೇಕು. ಇದಕ್ಕಿಂತಲೂ ತಂದೆ ತಾಯಿ ತಮ್ಮ ಮಕ್ಕಳಲ್ಲಿ ಪರಸ್ಪರರ ಬಗ್ಗೆ ಗೌರವ ಹಾಗೂ ಪ್ರೀತಿ ತೋರಿಸುವ ಸಂಸ್ಕಾರ ರೂಢಿಸಿದ್ದಲ್ಲಿ ಅದೇ ಈ ಸಮಸ್ಯೆಗೆ ಪರಿಹಾರವಾಗುತ್ತದೆ.

ಕೆ. ಸುಧಾ ಪ್ರಸಾದ್

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ