ದಿನ ಹಣ ಕೂಡಿಡುವ ಅಭ್ಯಾಸ ಸಂಕಷ್ಟದ ಕಾಲದಲ್ಲಿ ನೆರವಿಗೆ ಬರುತ್ತದೆ.
ಇದು ಎಂಥವರಿಗೂ ಒಂದು ಪಾಠ ಕಲಿಸುವಂತಹ ವಿಚಾರ. ಮಧ್ಯ ಪ್ರದೇಶದ ಛಿಂದ್ವಾಡಾದ ಶಾಲಾ ಮಕ್ಕಳು 1 ಕೋಟಿ ರೂ. ಕೂಡಿಟ್ಟು ಎಲ್ಲರನ್ನೂ ಅಚ್ಚರಿಯಲ್ಲಿ ಮುಳುಗುವಂತೆ ಮಾಡಿದರು. ಮಕ್ಕಳಲ್ಲಿ ಉಳಿತಾಯ ಮನೋಭಾವ ಹೆಚ್ಚಿಸಲು 2007ರಲ್ಲಿ ಮಧ್ಯಪ್ರದೇಶ ಸರ್ಕಾರ ಅರುಣೋದಯ ಗುಲ್ಲಕ್ ಯೋಜನೆ ಶುರು ಮಾಡಿತ್ತು.
ಇದೇ ತತ್ವವನ್ನು ಎಲ್ಲರೂ ಜೀವನದಲ್ಲಿ ಅಳವಡಿಸಿಕೊಂಡರೆ, ಸಾಕಷ್ಟು ಹಣದ ಉಳಿತಾಯ ಮಾಡಬಹುದು. ಅದಕ್ಕಾಗಿ ಬೇಕಿರುವುದು ಒಂದು ಗೋಲಕ ಅಷ್ಟೆ. ಈಗ ಅದು ಭಾರತೀಯ ಕುಟುಂಬಗಳಿಂದ ದೂರವಾಗುತ್ತಾ ಹೊರಟಿದೆ. ಉಳಿತಾಯದ ಬೇರೆ ಪರ್ಯಾಯಗಳು ತೆರೆದುಕೊಂಡಿರುವುದು ಬ್ಯಾಂಕಿಂಗ್ ಪ್ರಕ್ರಿಯೆಗಳು ಸುಲಭವಾಗಿರುವುದು ಇದಕ್ಕೆ ಕಾರಣ.
ಗೋಲಕ ಕಣ್ಣೆದುರು ಇದ್ದರೆ ಸಾಕು, ಉಳಿತಾಯ ತಂತಾನೇ ಆಗುತ್ತದೆ. ಹೀಗಾಗಿ ಗೋಲಕದ ಮಹತ್ವ ಗೊತ್ತಾಗುತ್ತದೆ. ದೈನಂದಿನ ಉಳಿತಾಯ ಮಾಡುವ ಅಭ್ಯಾಸವನ್ನು ಕಲಿಸುವ ಗೋಲಕ ಎಲ್ಲೆಡೆ ಸಹಜವಾಗಿ ಲಭಿಸುತ್ತದೆ. ಮನೆಯ ಪ್ರತಿಯೊಬ್ಬ ಸದಸ್ಯರೂ ಅಷ್ಟಿಷ್ಟು ಹಣವನ್ನು ಅದಕ್ಕೆ ಹಾಕುವುದರ ಮೂಲಕ ಉಳಿತಾಯವನ್ನು ಹೆಚ್ಚಿಸುತ್ತದೆ.
`ಹನಿ ಹನಿ ಕೂಡಿದರೆ ಹಳ್ಳ’ ಎಂಬ ಮಾತು ಗೋಲಕಕ್ಕೆ ಸರಿಯಾಗಿ ಅನ್ವಯಿಸುತ್ತದೆ. ಅದಕ್ಕೆ ದಿನ 10-20 ರೂ. ಹಾಕಿದರೂ ನಮ್ಮ ಜೇಬಿಗೆ ಅಷ್ಟೇನೂ ವ್ಯತ್ಯಾಸ ಬೀಳುವುದಿಲ್ಲ. ಬ್ಯಾಂಕಿಗೆ ಹೋಗಿ ಹಣ ಕಟ್ಟಿ ಬರಬೇಕೆಂಬ ಧಾವಂತ ಇರುವುದಿಲ್ಲ. ಮಕ್ಕಳಿಗಾಗಿ ಹವ್ಯಾಸಕ್ಕೆಂದು ಪಿಗ್ಗಿ ಬ್ಯಾಂಕ್ ತಂದುಕೊಡುವ ಪೋಷಕರು ಒಂದು ವೇಳೆ ತಮಗೂ ಒಂದು ಗೋಲಕ ತಂದು ಮನೆಯಲ್ಲಿಟ್ಟರೆ ಒಂದು ವರ್ಷದಲ್ಲಿ ಅದೆಷ್ಟೋ ಸಾವಿರ ರೂ. ಉಳಿಸಬಹುದು.
ಗೋಲಕದ ವಿಶೇಷತೆ
ಮಣ್ಣಿಂದ ಅಥವಾ ಪ್ಲಾಸ್ಟಿಕ್ ನಿಂದ ತಯಾರಿಸಿದ ಗೋಲಕ 10-20 ರೂ.ಗಳಲ್ಲಿ ಸಿಗುತ್ತದೆ. ಅದರಲ್ಲಿ ಒಂದು ವರ್ಷದಲ್ಲಿ ಅದೆಷ್ಟೋ ಸಾವಿರ ರೂ.ಗಳನ್ನು ಕೂಡಿಡಬಹುದು. ಅದಕ್ಕೆ ಹೇಗೆ ಸಿದ್ಧತೆ ಮಾಡಿಕೊಳ್ಳಬೇಕು.
ಸ್ವಲ್ಪ ನೋಡಿ : ಮೊದಲು ಒಂದು ಗೋಲಕ ಖರೀದಿಸಿ. ನಿಮಗೆ ಕಂಡು ಬರುವ ಒಂದು ಸ್ಥಳದಲ್ಲಿ ಅದನ್ನು ಇಡಿ. ಅದರಲ್ಲಿ ನಿಯಮಿತವಾಗಿ 10 ರೂ. ನಿಂದ 100 ರೂ. ತನಕ ನಿಮಗೆ ಸಾಧ್ಯವಾದಷ್ಟು ಮೊತ್ತವನ್ನು ಹಾಕಿ. ಉಳಿತಾಯಕ್ಕಾಗಿ ನಿಮ್ಮ ದುಂದು ವೆಚ್ಚಕ್ಕೆ ಸ್ವಲ್ಪ ಕಡಿವಾಣ ಹಾಕಿ. ತೀರಾ ಅವಶ್ಯವಿದ್ದರೆ ಮಾತ್ರ ಗೋಲಕವನ್ನು ಒಡೆದು ಹಣ ತೆಗೆದುಕೊಳ್ಳಬಹುದು. ಇಲ್ಲದಿದ್ದರೆ ಅದರಲ್ಲಿ ಹಣ ಹಾಕುತ್ತಲೇ ಇರಿ. ಒಂದು ದೊಡ್ಡ ಮೊತ್ತ ಅದರಲ್ಲಿ ಜಮೆಯಾಗಿರುತ್ತದೆ.
ಬೆಂಗಳೂರಿನ ಸವಿತಾ, ಗೋಲಕದಲ್ಲಿ ದಿನ 50 ರೂ. ಅಥವಾ 100 ರೂ. ಹಾಕುತ್ತಿದ್ದರು. ವರ್ಷದ ಕೊನೆಗೆ ಗೋಲಕದಲ್ಲಿ 23,000 ರೂ. ಜಮೆಗೊಂಡಿತ್ತು. ಅದನ್ನು ಹೊಸ ವರ್ಷದ ವೊದಲ ದಿನ ಫಿಕ್ಸ್ಡ್ ಡೆಪಾಸಿಟ್ ಮಾಡಿದರು. ಅವರ ಉತ್ಸಾಹ ಈಗ ಇನ್ನಷ್ಟು ಹೆಚ್ಚಾಯಿತು. ಮುಂದಿನ ವರ್ಷ ಗೋಲಕದಲ್ಲಿ ಕೂಡಿಟ್ಟ ಹಣದಿಂದ ಉತ್ತರ ಭಾರತ ಪ್ರವಾಸ ಹೋಗುವುದೆಂದು ನಿರ್ಧರಿಸಿ ಯಥಾ ರೀತಿಯಲ್ಲಿ 50-100 ರೂ. ದಿನ ಹಾಕತೊಡಗಿದರು. ಈ ವಿಷಯ ಅವರ ಪತಿಗೆ ಗೊತ್ತಾಗಿ ಅವರೂ ಕೂಡ ದಿನ ಒಂದಿಷ್ಟು ಮೊತ್ತ ಹಾಕತೊಡಗಿದರು. ಅವರು ಹಣ ಹಾಕುತ್ತಿದ್ದ ಗೋಲಕಗಳ ಸಂಖ್ಯೆ 5 ಆಗಿದ್ದರೆ, ಅದರಲ್ಲಿನ ಒಟ್ಟು ಮೊತ್ತ 40,000 ರೂ. ದಾಟಿತ್ತು. ಆ ಮೊತ್ತವನ್ನು ಆಧಾರವಾಗಿಟ್ಟುಕೊಂಡು ಉತ್ತರ ಭಾರತದ ಪ್ರವಾಸಕ್ಕೆ ಹೊರಡಲು ಸಿದ್ಧತೆ ಮಾಡಿಕೊಂಡರು. ಅವರು ಗೋಲಕದಲ್ಲಿ ಹಣ ಹಾಕದೇ ಇದ್ದಿದ್ದರೆ ಅವರಿಗೆ ಉತ್ತರ ಭಾರತದ ಪ್ರವಾಸ ಮಾಡಲು ಆಗುತ್ತಲೇ ಇರಲಿಲ್ಲ.
ಯಾವುದೇ ದುಬಾರಿ ವಸ್ತು ತೆಗೆದುಕೊಳ್ಳಬೇಕಿದ್ದರೆ ಅಥವಾ ಯಾವುದಾದರೂ ಮುಖ್ಯ ಉದ್ದೇಶಕ್ಕೆ ಗೋಲಕದಲ್ಲಿ ಹಣ ಸಂಗ್ರಹಿಸಲು ಆರಂಭಿಸಿದರೆ, ಇಷ್ಟು ಹಣ ಹೇಗೆ ಕೂಡಿತು ಎಂದು ನಮಗೇ ಆಶ್ಚರ್ಯವಾಗುತ್ತದೆ. ಗೋಲಕದಲ್ಲಿ ಹಣ ಕೂಡಿಡುತ್ತಾ ಹೋದರೆ, ನಾವು ಯಾವುದೇ ಗೃಹೋಪಯೋಗಿ ವಸ್ತು ಕೊಂಡುಕೊಳ್ಳುವುದು ಅಸಾಧ್ಯವೇನಲ್ಲ.
ಗೋಲಕದಲ್ಲಿ ಹಣ ಹಾಕಲು ಹೆಚ್ಚು ವಿಚಾರ ಮಾಡಬೇಕಾದ ಅಗತ್ಯವೇನಿಲ್ಲ. ಅನಾವಶ್ಯಕ ಖರೀದಿಗೆ ವೆಚ್ಚ ಮಾಡುತ್ತಿದ್ದ ಹಣವನ್ನು ಇಲ್ಲಿ ಕೂಡಿಟ್ಟರೆ, ಮಹತ್ವದ ವಸ್ತುವೊಂದರ ಖರೀದಿಗೆ ಬಹಳ ನೆರವಾಗುತ್ತದೆ. ಗೋಲಕ ಎಂತಹ ಒಂದ ಅಕೌಂಟ್ ಎಂದರೆ ಅದನ್ನು ತೆರೆಯಲು ಯಾವುದೇ ದಾಖಲೆಗಳ ಅಗತ್ಯವಿಲ್ಲ. ಅದರ ನಿರ್ವಹಣೆ ಕೂಡ ನಿಮ್ಮ ಕೈಯಲ್ಲಿಯೇ ಇರುತ್ತದೆ.
ಮೈಸೂರಿನ ರಶ್ಮಿ 10 ವರ್ಷಗಳ ಹಿಂದೆ ಗೋಲಕ ತೆರೆದಾಗ ಅದರಲ್ಲಿ 58,000 ರೂ. ಜಮೆಗೊಂಡಿತ್ತು. ಗಂಡ ಹೆಂಡತಿ ಇಬ್ಬರೂ ಸೇರಿ ಮಗಳ ಮುಖಾಂತರ ಹಾಕಿದ ಮೊತ್ತವದು. ಅದೇ ಮೊತ್ತವನ್ನು ಅವರು ಎಫ್.ಡಿ ಮಾಡಿದರು. ಅದು ಈಗ 1 ಲಕ್ಷ ರೂ ಆಗುವಷ್ಟು ಮಟ್ಟಕ್ಕೆ ಬಂದು ನಿಂತಿದೆ. ಇದೆಲ್ಲ ಸಾಧ್ಯವಾದದ್ದು ಗೋಲಕದಿಂದ!
ತುರ್ತು ಖರ್ಚುಗಳಿಗಾಗಿ ಗೋಲಕ ಬಹಳ ಉಪಯುಕ್ತ ಎಂಬಂತೆ ಸಾಬೀತಾಗುತ್ತದೆ. ಹೊತ್ತಲ್ಲದ ಹೊತ್ತಿನಲ್ಲಿ ನಗದು ಬೇಕಿದ್ದರೆ ಗೋಲಕ ನಿಮಗೆ ಎಟಿಎಂ ಥರ ನೆರವಿಗೆ ಬರುತ್ತದೆ. ಗೋಲಕ ಒಡೆಯುವುದರಿಂದ ನಿಮ್ಮ ಉಳಿತಾಯ ಉದ್ದೇಶಕ್ಕೆ ಯಾವುದೇ ಭಂಗ ಉಂಟಾಗುವುದಿಲ್ಲ. ನಿಮ್ಮ ಉಳಿತಾಯ ಉದ್ದೇಶ ಈಡೇರಿಕೆಯ ಕಾಲ ಸನ್ನಿಹಿತವಾದಾಗಲೇ ಗೋಲಕ ಒಡೆದು ಹಣ ಪಡೆದಕೊಳ್ಳಿ. ಆ ಬಳಿಕ ಇನ್ನೊಂದು ದೊಡ್ಡ ಉದ್ದೇಶಕ್ಕೆ ಹಣ ಸಂಗ್ರಹಿಸಲು ಆರಂಭಿಸಿ. ಒಂದೊಳ್ಳೆ ಉದ್ದೇಶಕ್ಕೆ ಮನೆಯ ಎಲ್ಲ ಸದಸ್ಯರೂ ಸೇರಿ ಗೋಲಕದಲ್ಲಿ ಹಣ ಹಾಕಬೇಕು. ಅದಕ್ಕೂ ಒಳ್ಳೆಯ ಉಪಾಯವೆಂದರೆ ಮನೆಯ ಎಲ್ಲ ಸದಸ್ಯರೂ ಪ್ರತ್ಯೇಕ ಗೋಲಕ ಹೊಂದಿ ತಮ್ಮ ತಮ್ಮ ಅನುಕೂಲದ ರೀತಿಯಲ್ಲಿ ಹಣ ಹಾಕುತ್ತಾ ಹೋಗಬೇಕು. ಹಾಗಾದರೆ ತಡ ಏಕೆ, ಇವತ್ತೇ ಒಂದು ಗೋಲಕ ಖರೀದಿಸಿ ತೆಗೆದುಕೊಂಡು ಬನ್ನಿ. ಅದರ ಮೇಲೆ ಒಂದು ನಿರ್ದಿಷ್ಟ ದಿನಾಂಕ ಹಾಕಿ. ಅದರಲ್ಲಿ ಹಣ ಹಾಕಲು ಶುರು ಮಾಡಿ. ನೀವು ಗುರುತು ಮಾಡಿದ ದಿನಾಂಕದಂದು ತೆರೆದು ನೋಡಿ, ನೀವೇ ಚಕಿತರಾಗುವಿರಿ!
– ಭಾರ್ಗವಿ