ಕೇರಳದ ಮೂಲದವಳಾದರೂ ಶಾನ್ವಿ ಓದಿ, ಬೆಳೆದದ್ದು ಉ.ಭಾರತದಲ್ಲಿ. ತೆಲುಗಿನ `ಲವ್ಲಿ’ ಚಿತ್ರದಿಂದ ನಟಿಸಲಾರಂಭಿಸಿದ ಶಾನ್ವಿ `ಚಂದ್ರಲೇಖಾ’ ಮೂಲಕ ಕನ್ನಡದಲ್ಲಿ ಎಂಟ್ರಿ ಪಡೆದಳು. ಹಲವು ನಾಯಕರ ಜೊತೆ ಯಶಸ್ವಿ ಚಿತ್ರಗಳಲ್ಲಿ ನಟಿಸಿರುವ ಶಾನ್ವಿಯ ಮಾತುಗಳಲ್ಲೇ ಆಕೆಯ ಬಗ್ಗೆ ಕೇಳಿ….. ಕನ್ನಡ ಮತ್ತು ತೆಲುಗು ಚಿತ್ರರಂಗದಲ್ಲಿ ಶಾನ್ವಿ ಶ್ರೀವಾಸ್ತವ್ ಹೆಸರು ಚಿರಪರಿಚಿತ. ನಟಿ ಮತ್ತು ಮಾಡೆಲ್ ‌ಆಗಿ ಸಾಕಷ್ಟು ಜನಪ್ರಿಯತೆ ಪಡೆದಿದ್ದಾಳೆ. ಶಾನ್ವಿ ಕೇರಳದ ಮೂಲದವಳಾದರೂ ಹುಟ್ಟಿದ್ದು ವಾರಾಣಸಿಯಲ್ಲಿ. ಬೆಳೆದಿದ್ದು, ಓದಿದ್ದು ಎಲ್ಲವೂ ಉತ್ತರ ಭಾರತದಲ್ಲಿ.

ಬಿ.ಕಾಂ ಪದವಿ ಪಡೆದಿರುವ ಶಾನ್ವಿ ಎಂಟು ವರ್ಷಗಳ ಹಿಂದೆ ತೆಲುಗಿನ `ಲವ್ಲಿ’ ಚಿತ್ರದಲ್ಲಿ ನಟಿಸುವ ಮೂಲಕ ಸಿನಿಮಾ ಜರ್ನಿ ಆರಂಭಿಸಿದಳು. ನಂತರ `ಅಡ್ಡಾ, ರೌಡಿ’ ಚಿತ್ರಗಳಲ್ಲಿ ನಟಿಸಿದಳು.

ಕನ್ನಡಕ್ಕೆ `ಚಂದ್ರಲೇಖಾ’ ಚಿತ್ರದ ಮೂಲಕ ಎಂಟ್ರಿ ಕೊಟ್ಟರೂ ಎಲ್ಲರ ಗಮನ ಸೆಳೆದದ್ದು ನಾಯಕ ಯಶ್‌ ಜೋಡಿಯಾಗಿ ನಟಿಸಿದ್ದ `ಮಾಸ್ಟರ್‌ ಪೀಸ್‌’ ಚಿತ್ರದಲ್ಲಿ.

ಭಲೇ ಜೋಡಿ, ಸುಂದರಾಂಗ ಜಾಣ, ಸಾಹೇಬ್‌, ಮಫ್ತಿ ಚಿತ್ರಗಳಲ್ಲಿ ನಟಿಸಿದ್ದ ಶಾನ್ವಿ ತಾರಕ್‌ ಚಿತ್ರದಲ್ಲಿ ದರ್ಶನ್‌ ಜೊತೆಯಲ್ಲಿ ಗಮನ ಸೆಳೆಯುವಂತಹ ಪಾತ್ರ ನಿರ್ವಹಿಸಿದ್ದಳು.

ಇತ್ತೀಚೆಗೆ ಬಂದ `ಗೀತಾ’ ಚಿತ್ರದಲ್ಲಿ ಶಾನ್ವಿ ಗಣೇಶ್‌ ಜೋಡಿಯಾಗಿ ಎರಡು ವಿಭಿನ್ನ ಶೇಡ್ಸ್ ಗಳಲ್ಲಿ ಕಾಣಿಸಿಕೊಂಡಿದ್ದಳು. `ಗೀತಾ’ ಗೋಕಾಕ್‌ ಚಳುವಳಿಯ ಹಿನ್ನೆಲೆಗೆ ಕನೆಕ್ಟ್ ಆದಂಥ ಕಥೆಯಾಗಿತ್ತು.

ಈಗ `ಅವನೇ ಶ್ರೀಮನ್ನಾರಾಯಣ’ ಚಿತ್ರದ ಮೂಲಕ ಮತ್ತೆ ತೆರೆಯ ಮೇಲೆ ರಂಜಿಸಲು ಬರುತ್ತಿರುವ ಶಾನ್ವಿ ಇಷ್ಟು ದಿನಗಳು ಶೂಟಿಂಗ್‌ ನಲ್ಲಿ ಬಿಝಿಯಾಗಿದ್ದಳು. ಈಗ ಬ್ಯಾಕ್‌ ಟು ಬ್ಯಾಕ್‌ ಸಿನಿಮಾಗಳು ಒಂದೊಂದಾಗಿ ತೆರೆ ಕಾಣುತ್ತಲಿವೆ.

AKP_6409

`ಗೀತಾ’ ಚಿತ್ರದಲ್ಲಿ ರೆಟ್ರೋ ಲುಕ್ಸ್ ನಲ್ಲಿ ಕಾಣಿಸಿದ್ದ ಶಾನ್ವಿ, ಈಗ `ಅವನೇ ಶ್ರೀಮನ್ನಾರಾಯಣ’ ಚಿತ್ರ ಬಿಡುಗಡೆಯಾದ ಮೇಲೆ ನನ್ನ ಲೆವಲ್ಲೇ ಬೇರೆಯಾಗುತ್ತೆ ಎನ್ನುತ್ತಾಳೆ.

ಶಾನ್ವಿ ಗ್ಲಾಮರಸ್‌ ತಾರೆ ಅಂತನಿಸಿದರೂ ಅದಕ್ಕೇ ಅಂಟಿಕೊಳ್ಳದೇ ವಿಭಿನ್ನತೆಗೆ ಹೆಚ್ಚು ಪ್ರಾಶಸ್ತ್ಯ ಕೊಡುತ್ತಾಳೆ. ಗೀತಾ ಚಿತ್ರದಲ್ಲಿ ಎಂಭತ್ತರ ದಶಕದ ಹುಡುಗಿಯರಂತೆ ವೇಷ ಭೂಷಣ, ಹೇರ್‌ ಡ್ರೆಸ್ಸಿಂಗ್‌ ಮಾಡಿಕೊಂಡು ಪಾತ್ರಕ್ಕೆ ಹೊಂದುವಂತೆ ಕಾಣಿಸಿಕೊಂಡಿದ್ದಳು.

“ಹೌದು, ನನಗಿಂತಹ ಪಾತ್ರಗಳು ತುಂಬಾ ಇಷ್ಟ. ಆ ಕಾಲದಲ್ಲಿ ಹುಡುಗಿಯರು ಹೇಗಿರುತ್ತಿದ್ದರೋ ಅದೇ ಪ್ರಕಾರ ಹೇರ್‌ ಬ್ಯಾಂಡ್‌, ಕಣ್ಣಿಗೆ ಕಾಜಲ್, ಉಡುಗೆ ಧರಿಸಿದ್ದೆ. ನಾನು ತುಂಬಾ ಎಂಜಾಯ್‌ ಮಾಡಿದ ಪಾತ್ರವದು,” ಎನ್ನುತ್ತಾಳೆ ಶಾನ್ವಿ.

ಶ್ರೀಮನ್ನಾರಾಯಣ ಚಿತ್ರದ ಬಗ್ಗೆ ಹೇಳು ಎಂದಾಗ ಪಟಪಟ ಉತ್ತರಿಸಿದಳು.

“ಒಂದೊಳ್ಳೆ ಸಿನಿಮಾದಲ್ಲಿ ನಾನಿದ್ದೀನಲ್ಲ ಎನ್ನುವುದೇ ಒಂದು ಖುಷಿ! ರಕ್ಷಿತ್‌ ಶೆಟ್ಟಿ ಜೊತೆ ಇಷ್ಟು ಬೇಗ ನಟಿಸುವ ಅವಕಾಶ ಸಿಗುತ್ತದೆ ಅಂತ ಅಂದುಕೊಂಡಿರಲಿಲ್ಲ. ಇದೊಂದು ಸ್ಪೆಷಲ್ ಸಿನಿಮಾ. ಚಿತ್ರದ ಕಥೆ, ಮೇಕಿಂಗ್‌ ಸ್ಟೈಲ್‌, ನಿರೂಪಣೆ, ಲೊಕೇಶನ್ ಎಲ್ಲ ಅದ್ಭುತ.

“ನನ್ನ ಪಾತ್ರದ ಹೆಸರು ಲಕ್ಷ್ಮಿ. ಇಲ್ಲಿಯವರೆಗೂ ನಾನಿಂತಹ ಪಾತ್ರ ಮಾಡಿಲ್ಲ. ತುಂಬಾ ಡಿಫರೆಂಟಾಗಿದೆ. ಲಕ್ಷ್ಮೀ ಬುದ್ಧಿವಂತೆ. ಮೆಚೂರ್ಡ್‌ ಕ್ಯಾರೆಕ್ಟರ್‌, ದ್ವಿಚಕ್ರ ಲೂನಾ ಮೇಲೆ ಕಾಣಿಸಿಕೊಳ್ಳುವೆ. ನನ್ನ ಜೊತೆ ಅದೂ ಕೂಡ ಜರ್ನಿಯಲ್ಲಿ ವಿಶೇಷ ಪಾತ್ರ ವಹಿಸುತ್ತದೆ.

DSC03449

“ರಕ್ಷಿತ್‌ ಶೆಟ್ಟಿ ಬಗ್ಗೆ ಹೇಳಬೇಕೆಂದರೆ ಸಿನಿಮಾ ಬಗ್ಗೆ ಪ್ಯಾಶನ್‌ ಇರುವಂತಹ ನಟ, ನಿರ್ದೇಶಕ, ನಿರ್ಮಾಪಕ.

“ಅವನೇ ಶ್ರೀಮನ್ನಾರಾಯಣ ಬಗ್ಗೆ ತುಂಬಾನೆ ನಿರೀಕ್ಷೆ ಇದೆ. ಬಹುಭಾಷಾ ಚಿತ್ರವಾಗಿ ಅದು ತೆರೆ ಕಾಣುತ್ತಿದೆ,”

ಹೀಗೆ ಹೇಳುವ ಶಾನ್ವಿ, ಬರೀ ಸ್ಟಾರ್‌ ಗಳ ಜೊತೆಗಷ್ಟೇ ನಟಿಸಬೇಕೆಂಬ ಆಸೆ ನನಗಿಲ್ಲ. ಒಳ್ಳೆಯ ಪಾತ್ರ, ಕಥೆ ತುಂಬಾ ಮುಖ್ಯ ಎನ್ನುವ ಶಾನ್ವಿ, ಡಿಸೆಂಬರ್‌ ಎಂಟರಂದು ತನ್ನ ಹುಟ್ಟುಹಬ್ಬ ಆಚರಿಸಿಕೊಂಡು ಅಭಿಮಾನಿಗಳಿಂದ ಪ್ರೀತಿಯ ಹಾರೈಕೆ ಪಡೆದುಕೊಂಡಿದ್ದಾಳೆ.

ಆಲ್ ದಿ ಬೆಸ್ಟ್ ಶಾನ್ವಿ!

– ಜಾಗೀರ್‌ ದಾರ್‌

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ