15 ತುಂಬಿದ ಕತ್ರೀನಾ!
ಮೇಲಿನ ಶೀರ್ಷಿಕೆ ಓದಿ ಬೆಚ್ಚಿ ಬೀಳಬೇಡಿ, ಗಾಬರಿ ಬೇಡ. ಕತ್ರೀನಾ ಬಾಲಿವುಡ್‌ಗೆ ಎಂಟ್ರಿ ಪಡೆದು ಇದೀಗ 15 ವರ್ಷ ತುಂಬಿತು. ಕತ್ರೀನಾ `ಬೂಮ್’ ಚಿತ್ರದಲ್ಲಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡು ಬಾಲಿವುಡ್ ಗೆ ಡೆಬ್ಯು ಆಗಿದ್ದಳು. ಆದರೆ ಅವಳಿಗೆ ಐಡೆಂಟಿಟಿ ಸಿಕ್ಕಿದ್ದು ಮಾತ್ರ `ಮೈನೆ ಪ್ಯಾರ್ ಕ್ಯೋಂಕಿಯಾ’ ಚಿತ್ರದಿಂದ. ಅದಾಗಿ ಆಕೆ ಹಿಂದಿರುಗಿ ನೋಡಲಿಲ್ಲ. 15 ವರ್ಷಗಳಲ್ಲಿ ಅವಳ ನಟನೆ, ಡ್ಯಾನ್ಸ್, ಭಾವಾಭಿನಯದಲ್ಲಿ ಮೇರುಮಟ್ಟದ ಬದಲಾವಣೆ ಕಾಣಿಸಿದ್ದು ಮಾತ್ರವಲ್ಲದೆ, ಆಕೆಯ ಲುಕ್ಸ್ ನಲ್ಲಿಯೂ ಬೇಕಾದಷ್ಟು ಸುಧಾರಣೆಗಳಾದವು. ಇದರ ಜೊತೆಗೆ ಕತ್ರೀನಾ ಬಾಲಿವುಡ್ ನ ಘಟಾನುಘಟಿಗಳೆನಿಸಿದ ಖಾನ್, ಕಪೂರ್, ಕುಮಾರರ ಜೊತೆ ನಾಯಕಿಯಾಗಿ ಮೆರೆದಳು. ಅದರಲ್ಲಿ ಎಷ್ಟೋ ಜನರೊಂದಿಗೆ ಅವಳ ಹೆಸರು ತಳುಕು ಹಾಕಿಕೊಂಡದ್ದೂ ಉಂಟು! ಇತ್ತೀಚೆಗೆ ಕತ್ರೀನಾ ಅಕ್ಷಯ್ ಕುಮಾರ್ ನೊಂದಿಗೆ `ಸೂರ್ಯವಂಶಿ’ ಚಿತ್ರಕ್ಕೆ ನಾಯಕಿಯಾಗಿ ಬುಕ್ ಆಗಿದ್ದಾಳೆ, ಅಂದ ಹಾಗೆ 2020 ಕತ್ರೀನಾ ಪಾಲಿಗೆ ಶುಭಾರಂಭ ಆಗಿದೆ.
ಟ್ರೋಲರ್ಸ್ ಗೆ ನಾಚಿಕೆ ಆಗಬೇಕು
ಫೇಸ್ ಬುಕ್ ಇದೀಗ ಸೋಶಿಯಲ್ ಮೀಡಿಯಾದಲ್ಲಿ ಲಂಗುಲಗಾಮಿಲ್ಲದ ಕುದುರೆಯಾಗಿದೆ. ಇದರಿಂದಾಗಿ ಯಾರೋ ಬೀದೀಲಿ ಹೋಗೋರು ಇನ್ನಾರದೋ ಬಗ್ಗೆ ಬಾಯಿಗೆ ಬಂದಂತೆ ಪಬ್ಲಿಕ್ ಆಗಿ ಮಾತನಾಡಲು ಅವಕಾಶವಾಗಿದೆ. ಇಲ್ಲಿ ಟ್ರೋಲ್ ಆಗುವವರು ಬಹುತೇಕ ಬಾಲಿವುಡ್ ಸೆಲೆಬ್ರಿಟೀಸ್ ಮತ್ತು ಅವರ ಮನೆಯ ಸದಸ್ಯರಾಗಿರುತ್ತಾರೆ. ಇತ್ತೀಚೆಗೆ ಅಜಯ್ ದೇವಗನ್ ತಮ್ಮ ಮಗಳ ಟ್ರೋಲ್ ಕುರಿತು ಖಾರವಾಗಿ ಪ್ರತಿಕ್ರಿಯಿಸಿದ್ದರು. ಅಸಲಿಗೆ ನಡೆದದ್ದು ಎಂದರೆ, ಇವರ ಮಗಳು ನ್ಯಾಸಾ ತಾತನ ನಿಧನದ ಮಾರನೇ ದಿನ ಪಾರ್ಲರ್ ಗೆ ಹೋಗಿದ್ದಳು. ಅವಳ ಫೋಟೋ ತೆಗೆದು ಫೇಸ್ ಬುಕ್ ಗೆ ಹಾಕಿದರೆ ಯಾರೋ, ಕನಿಷ್ಠ ತಾತನ ತಿಥಿ ಕಾರ್ಯ ಮುಗಿಯುವವರೆಗೂ ಕಾಯದೇ ಪಾರ್ಲರ್ ಗೆ ಹೋಗುವುದೇ ಎಂದು ವ್ಯಂಗ್ಯವಾಡಿದ್ದರು. ಅಜಯ್ ಹೇಳುವುದೆಂದರೆ, ಆ ದಿನವಿಡೀ ಅವಳು ಬಹಳ ದುಃಖದಲ್ಲಿದ್ದಳು. ಅವಳ ಮೂಡ್ ಚೇಂಜ್ ಆಗಲಿ ಎಂದು ನಾನೇ ಪಾರ್ಲರ್ ಗೆ ಕಳುಹಿಸಿದ್ದೆ. ಯಾರಿಗೆ ಅಸಲಿ ವಿಷಯ ಗೊತ್ತಿಲ್ಲವೋ ಅವರು ಹೀಗೆಲ್ಲ ಕಮೆಂಟ್ ಮಾಡದೆ ತೆಪ್ಪಗಿದ್ದರೆ ವಾಸಿ. ಮತ್ತೊಂದು ಮುಖ್ಯ ವಿಷಯ ಎಂದರೆ ಟ್ರೋಲಿಗರಿಗೆ ಹೀಗೆ ಬೇರೆಯವರ ಖಾಸಗಿ ಜೀವನದಲ್ಲಿ ಇಣುಕಿ ನೋಡಲು ಅಧಿಕಾರ ಕೊಟ್ಟವರಾರು?
ಫರ್ಹಾನ್ ಧೂಳೆಬ್ಬಿಸಿದ ತೂಫಾನ್
ನಾಗರಿಕತ್ವದ ಕಾನೂನಿನ ವಿರುದ್ಧ ನಿಂತ ನಂತರ ಫರ್ಹಾನ್ ಅಖ್ತರ್, ಇದೀಗ ತೂಫಾನ್ ತರಹ ಕ್ರಾಂತಿಕಾರಿ ಧೂಳೆಬ್ಬಿಸಲು ತೆರೆ ಮೇಲೆ ಮರಳಿ ಬರುತ್ತಿದ್ದಾನೆ. ತನ್ನ ಮುಂದಿನ `ತೂಫಾನ್’ ಚಿತ್ರದಲ್ಲಿ ಫರ್ಹಾನ್ ತನ್ನ ಮಸ್ಕ್ಯುಲರ್ ಬಾಡಿಯಿಂದ ಅಭಿಮಾನಿಗಳನ್ನು ರಂಜಿಸಲು ಬರುತ್ತಿದ್ದಾನೆ. ಈಗಾಗಲ್ ಜನ ಈ ಚಿತ್ರದ ಯಶಸ್ಸನ್ನು ಈತನ ಹಿಂದಿನ `ಭಾಗ್ ಮಿಲ್ಕಾ ಭಾಗ್’ ಚಿತ್ರಕ್ಕೆ ಹೋಲಿಸಿ ನೋಡುತ್ತಿದ್ದಾರೆ. ಈ ಚಿತ್ರದ ನಿರ್ದೇಶಕರ ಪ್ರಕಾರ ಇದು ಬಾಲಿವುಡ್ ನಲ್ಲಿ ಹೊಸ ಆಯಾಮ ಪಡೆಯಲಿದೆ. ಈ ಬಾಕ್ಸಿಂಗ್ ಡ್ರಾಮಾ ಚಿತ್ರದಲ್ಲಿ ಕಮೆಡಿಯನ್ ಪರೇಶ್ ರಾಮ್ ಸಹ ಪ್ರಧಾನ ಪಾತ್ರ ವಹಿಸಲಿದ್ದಾರೆ. ಈ ತೂಫಾನ್ ಬಾಕ್ಸ್ ಆಫೀಸ್ ನಲ್ಲಿ ಎಷ್ಟು ಧೂಳೆಬ್ಬಿಸಲಿದೆ ಎಂಬುದನ್ನು ಕಾಲವೇ ಹೇಳಬೇಕು.
ನನಗೆ ಬ್ರೇಕ್ ಬೇಕು
ಪಂಕಜ್ ತ್ರಿಪಾಠಿಯಂತೂ ಇತ್ತೀಚೆಗೆ ಪ್ರತಿ ಚಿತ್ರದಲ್ಲೂ ತೊಡಗಿಕೊಂಡೇ ಇದ್ದಾರೆ. ಇವರಿಗೆಂಥ ಬ್ರೇಕ್ ಎಂದು ನೀವು ಯೋಚಿಸುತ್ತಿರಬಹುದು. ಅರೆ, ನಾವು ಆ ಬ್ರೇಕ್ ಬಗ್ಗೆ ಹೇಳುತ್ತಿಲ್ಲ. ಇವರಿಗೆ ವಿಶ್ರಾಂತಿ ಸಿಗಲಿ ಎಂಬುದರ ಬಗ್ಗೆ ಹೇಳುತ್ತಿದ್ದೇವೆ. ಪಂಕಜ್ ಗೆ ಇತ್ತೀಚೆಗೆ ಡಿಮ್ಯಾಂಡೋ ಡಿಮ್ಯಾಂಡು! 2 ಘಳಿಗೆ ಸುಧಾರಿಸಿಕೊಳ್ಳಲಿಕ್ಕೂ ಸಮಯವಿಲ್ಲ. ಅಂಥದ್ದರಲ್ಲಿ ಮನೆಮಂದಿಗೆ ಎಲ್ಲಿಂದ ಟೈಂ ಕೊಡುವುದು? ಇತ್ತೀಚೆಗೆ ಸತತ 40 ದಿನಗಳ ಶೂಟಿಂಗ್ ಶೆಡ್ಯೂಲ್ ಮುಗಿಸಿದ ನಂತರ ತನಗೀಗ ವಿಶ್ರಾಂತಿ ಬೇಕೇ ಬೇಕು ಎಂದಿದ್ದಾರೆ. ಮನೆಯವರ ಮುಖದರ್ಶನ ಆಗಲಿ ಎಂಬುದು ಅವರ ಆಸೆ. ಏನೇ ಆಗಲಿ ಪಂಕಜ್, ಬಾಲಿವುಡ್ ನಲ್ಲಿ ಹೆಸರು ಉಳಿಯಬೇಕು ಎಂದರೆ ವಿಶ್ರಾಂತಿ ಮರೆಯುವುದೇ ಲೇಸು.
ನಿರಾಸೆಗೊಂಡ ನೀನಾ
`ಸಾಂಡ್ ಕೀ ಆಂಖ್’ ಚಿತ್ರಕ್ಕಾಗಿ ಪ್ರೌಢ ಮಹಿಳೆಯ ಪಾತ್ರಕ್ಕೆ ತನ್ನನ್ನು ಬಿಟ್ಟು ತಾಪಸಿ, ಭೂಮಿಕಾರನ್ನು ಆರಿಸಿಕೊಂಡಾಗ ನೀನಾ ಗುಪ್ತಾಗೆ ನಿರಾಸೆ ಆಗದೆ ಹೋದೀತೇ? ಫೇಸ್ ಬುಕ್ ನಲ್ಲಿ ಆ ಕುರಿತು ಈಕೆ ದುಃಖ ತೋಡಿಕೊಂಡದ್ದೇ ಬಂತು. ನಮ್ಮಂಥ ಪ್ರೌಢ ಮಹಿಳೆಯರ ಪಾತ್ರಗಳನ್ನೇ ನಾಯಕಿಯರಿಗೆ ಕೊಡುವುದಾದರೆ ನಾವೆಲ್ಲಿಗೆ ಹೋಗಬೇಕು? ಇತ್ತೀಚೆಗೆ ಸೂಪರ್ ಸಕ್ಸಸ್ ಎನಿಸಿದ `ಬಧಾಯಿ ಹೋ’ ಚಿತ್ರದಲ್ಲಿ ತನಗೆ ಪಾತ್ರ ಕೊಡದಿದ್ದರೆ ತಾನು ನಿರುದ್ಯೋಗಿ ಆಗಿರುತ್ತಿದ್ದೆ ಎಂದಿದ್ದಾಳೆ. `ಓಲ್ಡ್ ಈಸ್ ಗೋಲ್ಡ್’ ಎಂಬುದೇನೋ ಸರಿ, ಆದರೆ ಬಾಲಿವುಡ್ ಮಾತ್ರ ಅದಕ್ಕೆ ಸೊಪ್ಪು ಹಾಕುವಂಥದ್ದಲ್ಲ. ಪಾಪ, ಈಕೆ ಬೇರೆ ಉಪಾಯ ಹುಡುಕಬೇಕಷ್ಟೆ.
ಇಲ್ಲಿದೆ ಬಾಲಿವುಡ್ ನ ವುಮನ್ ಪವರ್
ಬಿಜೆಪಿ ಸರ್ಕಾರದ ದೌಲತ್ ಗಿರಿಯಲ್ಲಿ ಕೆಲವು ದಿನಗಳಿಂದ ದೇಶದ ಸ್ಥಿತಿ ನಿಯಂತ್ರಣ ತಪ್ಪಿದೆ. ದೇಶದ ಪ್ರತಿ ಪ್ರಜೆಯೂ ಇದಕ್ಕೆ ಬಲಿಯಾಗಿದ್ದಾರೆ. ಹೆಚ್ಚು ಕಡಿಮೆ ಎಲ್ಲರೂ ಅನಗತ್ಯವಾಗಿ ಹೇರಲಾದ ಈ ಕಾನೂನಿನ ವಿರುದ್ಧ ತಮ್ಮ ದನಿ ಎತ್ತಿದರು. ಅದರಲ್ಲೂ ವಿಶೇಷವಾಗಿ ಗಂಭೀರ ಪ್ರಕರಣಗಳ ಕುರಿತಾಗಿ ಮೌನವಹಿಸುವ ಬಾಲಿವುಡ್ ಕೂಡ ಈ ಸಲ ಸುಮ್ಮನೆ ಕೂರಲಿಲ್ಲ. ವಿವಾದಗಳ ಬಗ್ಗೆ ಕಿಂಚಿತ್ತೂ ಚಿಂತಿಸದೆ ತಮ್ಮ ವಿರೋಧ ವ್ಯಕ್ತಪಡಿಸಿದರು. ಈ ನಿಟ್ಟಿನಲ್ಲಿ ಎಲ್ಲರಿಗಿಂತ ಮುಂಚೂಣಿಯಲ್ಲಿರುವವರು ಎಂದರೆ ಬಾಲಿವುಡ್ ನಾಯಕಿಯರು. ಇವರು ಫೇಸ್ ಬುಕ್ ಮಾತ್ರವಲ್ಲದೆ, ರಸ್ತೆಗೂ ಇಳಿದು ತಮ್ಮ ವಿರೋಧ ವ್ಯಕ್ತಪಡಿಸಿದರು. ಇತ್ತೀಚೆಗೆ ದೀಪಿಕಾ ವಿದ್ಯಾರ್ಥಿಗಳ ಸಮರ್ಥನೆಗಿಳಿದು ಎಲ್ಲರನ್ನೂ ಬೆರಗುಗೊಳಿಸಿದಳು. ಸ್ವರಾ, ತಾಪಸಿ, ರಿಚಾ, ಪರಿಣೀತಿ ಸಹ ಈ ನಿಟ್ಟಿನಲ್ಲಿ ಹಿಂದುಳಿಯಲಿಲ್ಲ. ಬಾಲಿವುಡ್ ಕಲಾವಿದರನ್ನು ಆಹ್ವಾನಿಸಿ ಸೆಲ್ಛಿ ತೆಗೆಸಿಕೊಂಡ ಮೋದಿಯವರ ತಂತ್ರ ಇಲ್ಲಿ ಕೆಲಸಕ್ಕೆ ಬರಲಿಲ್ಲ. ಕನಿಷ್ಠ ಬಾಲಿವುಡ್ ನ ವುಮನ್ ಪವರ್ ಇದಕ್ಕೆ ಬೆಂಬಲಿಸಲಿಲ್ಲ.
ಊರ್ವಶಿಯನ್ನು ಬ್ಲಾಕ್ ಮಾಡಿದವರಾರು?
ಕ್ರಿಕೆಟ್ ಗೂ ಬಾಲಿವುಡ್ ಗೂ ಅವಿನಾಭಾವದ ನಂಟು. ಒಮ್ಮೆ ಕ್ರಿಕೆಟರ್ಸ್ ಕುರಿತು ಚಿತ್ರ ತಯಾರಾದರೆ, ಮತ್ತೆ ಇನ್ನೊಮ್ಮೆ ಕ್ರಿಕೆಟರ್ ನಟಿಯ ಜೋಡಿ ಮಿಂಚುತ್ತಿತ್ತು. ಇತ್ತೀಚಿನ ನಂಬಲರ್ಹ ಸುದ್ದಿಗಳ ಪ್ರಕಾರ, ಇಂಡಿಯನ್‌ಕ್ರಿಕೆಟ್ ಟೀಮಿನ ವಿಕೆಟ್ ಕೀಪರ್ ರಿಷ್ ಪಂತ್, ನಟಿ ಊರ್ವಶಿ ರಾತೇಲಾ ಜೊತೆ ಓಡಾಡಿದ ನಂತರ, ಇದೀಗ ಆಕೆಯ ನಂಬರ್ ನ್ನು ತಮ್ಮ ಕಾಂಟ್ಯಾಕ್ಟ್ ಲಿಸ್ಟ್ ನಿಂದ ಬ್ಲಾಕ್ ಮಾಡಿದ್ದಾರಂತೆ! ಏಕೆಂದರೆ ಆಕೆ ಮತ್ತೆ ಮತ್ತೆ ಕಾಲ್ ಮಾಡುತ್ತಾ ಮೆಸೇಜ್ ಕಳುಹಿಸುತ್ತಾ ಕಿತಾಪತಿ ಮಾಡುತ್ತಿದ್ದಳಂತೆ. ಇತ್ತೀಚೆಗೆ ರಿಷಬ್ ತನ್ನ ಗರ್ಲ್ ಫ್ರೆಂಡ್ ಜೊತೆ ಫೇಸ್ ಬುಕ್ ನಲ್ಲಿ ಫೋಟೋ ಅಪ್ ಡೇಟ್ ಮಾಡಿದ್ದರು. ಹೀಗಿರುವಾಗ ಊರ್ವಶಿ ಇಂಥ ಸ್ಟಂಟ್ ಮಾಡಿದ್ದೇಕೆ? ಇಷ್ಟು ಕಾಲ್ಸ್ ನ್ನು ಆಕೆ ನಿರ್ಮಾಪಕರುಗಳಿಗೆ ಮಾಡಿದ್ದಿದ್ದರೆ ಬಹುಶಃ ಕೈಯಲ್ಲಿ ಒಂದಷ್ಟು ಕೆಲಸ ಇರುತ್ತಿತ್ತೇನೋ….. ಇಲ್ಲಿ ಕೆಲಸ ಇಲ್ಲ, ಅವಮಾನ ಮತ್ತೊಂದು ಕಡೆ!
ತನ್ನ ನಿಲುವು ದೃಢಪಡಿಸಿಕೊಂಡ ನಟ
ಇತ್ತೀಚಿನ ಒಂದು ಸಂದರ್ಶನದಲ್ಲಿ ನಟ ವಿಕ್ರಾಂತ್ ಮೆಸ್ಸಿ ಹೇಳಿದ್ದೆಂದರೆ, ಆತ ಕಿರುತೆರೆಗಾಗಿ ನಟಿಸುತ್ತಿದ್ದಾಗ, ಯಾವಾಗ ಹಿರಿತೆರೆಗೆ ಹೋಗುವೆನೋ ಎಂದು ಕನಸು ಕಾಣುತ್ತಿದ್ದನಂತೆ. ಆದರೆ ಜನ ಆತನಿಗೆ ಅಂಥ ಕನಸು ಕಾಣುವುದನ್ನು ಬಿಟ್ಟುಬಿಡು ಎನ್ನುತ್ತಿದ್ದರಂತೆ. ಆದರೆ ಈಗ ಅಂಥ ಜನರಿಗೆ ಸರಿಯಾದ ಖಡಕ್ ಉತ್ತರ ಸಿಕ್ಕಿದೆ. ಇಂದು ವಿಕ್ರಾಂತ್ ಹಲವು ಹಿಟ್ ಚಿತ್ರಗಳೊಂದಿಗೆ ವೆಬ್ ಸೀರೀಸ್ ನಲ್ಲೂ ಮಿಂಚುತ್ತಿದ್ದಾನೆ. ಇಷ್ಟು ಮಾತ್ರವಲ್ಲ, ಈತನನ್ನು ಗಮನದಲ್ಲಿರಿಸಿಕೊಂಡೇ ಈಗ ಪಾತ್ರ ಸೃಷ್ಟಿಸಲಾಗುತ್ತಿದೆಯಂತೆ. ಸೈಡ್ ರೋಲ್ ನಿಂದ ಲೀಡ್ ರೋಲ್ ವರೆಗೂ ತಲುಪಿರುವ ವಿಕ್ರಾಂತ್ ಇದೀಗ `ಛಪಾಕ್’ ಚಿತ್ರದ ನಂತರ ತಾಪಸಿ ಪನ್ನು ಜೊತೆ `ಹಸೀನ್ ದಿಲ್ ರುಬಾ’ ಚಿತ್ರದಲ್ಲಿ ಕಾಣಿಸಲಿದ್ದಾನೆ. ಗುಡ್ ಜಾಬ್ ವಿಕ್ರಾಂತ್!
ಸೀಕ್ವೆನ್ಸ್ ಬಯೋಪಿಕ್ಸ್ ವರ್ಷ
ಈ ಹೊಸ ವರ್ಷದಲ್ಲಿ ಹಳೆಯ ಹಿಟ್ ಚಿತ್ರಗಳ ಸೀಕ್ವೆನ್ಸ್ ಹಾಗೂ ಹಲವು ಬಯೋಪಿಕ್ಸ್ ಪ್ರೇಕ್ಷಕರಿಗೆ ಸಿಗಲಿದೆ. `ಹಂಗಾಮಾ-2, ಸ್ಟ್ರೀಟ್ ಡ್ಯಾನ್ಸರ್’ ಸರದಿಯಲ್ಲಿ ನಿಂತಿವೆ. `ಗುಂಜನ್ ಸಕ್ಸೇನಾ, 1983, ತೈವಿ’ ಬಯೋಪಿಕ್ಸ್ ನಲ್ಲಿ ಮುಂದಾಗಿವೆ. ಇದರರ್ಥ ಪ್ರತಿ 2 ತಿಂಗಳಿಗೊಮ್ಮೆ ಸೀಕ್ವೆನ್ಸ್, ಬಯೋಪಿಕ್ ನಿಮಗೆ ಗ್ಯಾರಂಟಿ. ಅಂದಹಾಗೆ ಈ ವರ್ಷ ಐತಿಹಾಸಿಕ ಚಿತ್ರಗಳಿಗೆ ಬರವಿಲ್ಲ. ಇತ್ತೀಚೆಗಷ್ಟೆ ಅಕ್ಷಯ್ ಕುಮಾರ್ ನ `ಪೃಥ್ವಿರಾಜ್ ಚೌಹಾನ್’ ಅನೌನ್ಸ್ ಆಗಿದೆ. ಎಷ್ಟೇ ವಿವಾದಗಳಿರಲಿ, ಬಾಲಿವುಡ್ ಐತಿಹಾಸಿಕ ಚಿತ್ರ ಮಾಡದೆ ಬಿಡುವುದಿಲ್ಲ.
ಸೈಫ್ ಗೆ ಹಿಡಿದಿದೆಯೇ ಜಾನಿಯ ಹುಚ್ಚು!
ಬಾಲಿವುಡ್ ನ ಛೋಟೆ ನವಾಬ್ ಎನಿಸಿರುವ ಸೈಫ್ ಅಲಿಖಾನ್ ಗೆ ಜಾನಿಯ ಹುಚ್ಚು ಏರಿದಾಗೆಲ್ಲ ಆತನ ಚಿತ್ರಗಳು ಹಿಟ್ ಎನಿಸಿವೆ. `ಲವ್ ಆಜ್ ತಕ್’ ಚಿತ್ರದಿಂದ ಶುರುವಾದ ಇದು `ಜಾನಿ ಜಾನೆಮನ್’ ಚಿತ್ರದ ಪೋಸ್ಟರ್ ಫೇಸ್ ಬುಕ್ ಗೆ ಬಂದಂತೆ, ಅದರಲ್ಲಿ ಸೈಫ್ ನ ಪೇಜ್ ಬಲು ಫನ್ನಿ ಎನಿಸಿದೆ. ಹಲವಾರು ವರ್ಷಗಳ ಬಳಿಕ ಈ ಚಿತ್ರದಲ್ಲಿ ಆತ ತಬ್ಬು ಜೊತೆ ನಟಿಸುತ್ತಿದ್ದರೆ, ಪೂಜಾ ಬೇಡಿಯ ಮಗಳು ಅಲಿಯಾಳ ಜೊತೆಯಲ್ಲೂ ಇಲ್ಲಿ ಕುಣಿದಿದ್ದಾನೆ. ಜಾನೆಮನ್ ಅಲಿ, ಈ ಜಾನಿಯ ಹುಚ್ಚು ಬೆಳ್ಳಿತೆರೆಗಷ್ಟೇ ಸೀಮಿತವಾಗಿರಲಿ, ಇಲ್ಲದಿದ್ದರೆ ಕರೀನಾ ಮಾರಿಯಾದಾಳು!
ಬಾಕ್ಸ್ ಆಫೀಸ್ ಗಾಗಿ ಕುಬೇರ ಆಗುತ್ತಿರುವ ಅಕ್ಷಯ್
ಆಹಾ, ಈ ಕಿಲಾಡಿ ಕುಮಾರನ ಸಾಹಸಗಳಿಗೆ ಎಣೆಯಿಲ್ಲ. ಚಿತ್ರಗಳಲ್ಲಿ ಸಂಪಾದನೆಗಾಗಿ ಆತ ಆಡುತ್ತಿರುವ ಆಟಗಳನ್ನು ಖಾನ್ ತ್ರಯರೂ ಆಡಲಾರರು. ಕಳೆದ ವರ್ಷ ಬಾಕ್ಸ್ ಆಫೀಸ್ ಗಾಗಿ ಈತ ತನ್ನೊಬ್ಬನ ಶ್ರಮದಿಂದಾಗಿ ಬಾಲಿವುಡ್ ಗೆ 700 ಕೋಟಿಗೂ ಅಧಿಕ ಆದಾಯ ಗಳಿಸಿಕೊಟ್ಟಿದ್ದಾನೆ. ಅದರಲ್ಲೂ `ಹೌಸ್ ಫುಲ್’ ಚಿತ್ರ ಹೊರತುಪಡಿಸಿ ನೋಡಿದರೆ, ಅಕ್ಷಯ್ ತನ್ನ ಯಾವುದೇ ಯಶಸ್ವೀ ಚಿತ್ರದ ಸೀಕ್ವೆನ್ಸ್ ಸಹ ಮಾಡಿಲ್ಲ. ಪ್ರತಿ ಚಿತ್ರದಲ್ಲೂ ಈತ ಹೊಸ ಹೊಸ ಪಾತ್ರಗಳಲ್ಲೇ ಮಿಂಚಿದ್ದಾನೆ. ಇದೆಂಥ ಆಟ ಕಿಲಾಡಿ ಕುಮಾರ್….. ಇದನ್ನು ತುಸು ಬೇರೆ ನಾಯಕರಿಗೂ ಕಲಿಸಿದರೆ, ಬಾಲಿವುಡ್ ನಲ್ಲಿ ಫ್ಲಾಪ್ ಶೋ ಎಂಬುದು ಇರುವುದೇ ಇಲ್ಲವಲ್ಲ!