“ಅನನ್ಯಾ, ನಿನ್ನ ಅಮ್ಮ ಫೋನ್ ಮಾಡಿದ್ದಾಳೆ ನೋಡು!” ತಮ್ಮ ಮಗಳು ಸಂಗೀತಾಳಿಂದ ಕಾಲ್ ಬಂದಾಗ ಅಜ್ಜಿ ಕನಕಮ್ಮ 10 ವರ್ಷದ ಮೊಮ್ಮಗಳನ್ನು ಕೂಗಿ ಕರೆದರು. ಅವಳು ಬೇರೆ ಕೋಣೆಯಲ್ಲಿ ಟಿವಿ ನೋಡುತ್ತಾ ಕುಳಿತಿದ್ದಳು. ಮೊಮ್ಮಗಳು ಏನೂ ಉತ್ತರಿಸದಿದ್ದಾಗ ತಾವೇ ಎದ್ದು ಅವಳಿದ್ದ ಕೋಣೆಗೆ ಬಂದು ಅದನ್ನೇ ಮತ್ತೆ ಹೇಳಿದರು.
“ಅಯ್ಯೋ ಹೋಗಜ್ಜಿ…. ಎಷ್ಟು ಸಲ ನಿನಗೆ ಹೇಳೋದು? ಅವರ ಹತ್ತಿರ ಮಾತನಾಡುವಂಥದ್ದು ಏನೂ ಇಲ್ಲ ಅಂತ. ನೀನು ನೋಡಿದ್ರೆ ಮತ್ತೆ ಮತ್ತೆ ಬಂದು ಅವರ ಕಾಲ್ ಬಂದಿದೆ ಅಂತಾನೇ ಇರ್ತೀಯಾ!”
ಕನಕಮ್ಮನಿಗೆ ಮೊಮ್ಮಗಳ ಈ ಉತ್ತರ ಗೊತ್ತಿತ್ತು. ಹಾಗಾಗಿಯೇ ಅವರು ತಮ್ಮ ಕೈಲಿದ್ದ ಮೊಬೈಲ್ ಸ್ಪೀಕರ್ ಆನ್ ಮಾಡಿ ಅನನ್ಯಾಳ ಮಾತು ಮಗಳು ಸಂಗೀತಾಳಿಗೆ ನೇರವಾಗಿ ಕೇಳುವಂತೆ ಮಾಡಿದರು. ಇಲ್ಲದಿದ್ದರೆ ಮಗಳು ತಮ್ಮನ್ನೇ ತಪ್ಪು ತಿಳಿಯುತ್ತಾಳೆಂದೂ, ಮಗಳನ್ನು ತನ್ನ ಬಳಿ ಮಾತನಾಡಲು ಬಿಡಲಿಲ್ಲವೆಂದು ಭಾವಿಸುತ್ತಾಳೆಂದೂ ಅವರಿಗೆ ಗೊತ್ತಿತ್ತು.
ಮಗಳು ಅತ್ತ ಲೈನ್ ಕಟ್ ಮಾಡಿದ ನಂತರ ಅನನ್ಯಾಳ ಮನಸ್ಸಿನ ಭಾವನೆ ಗ್ರಹಿಸಲು ಕೇಳಿದರು, “ಮಗು, ಅವಳು ನಿನ್ನ ತಾಯಿ. ನೀನು ಅವಳ ಹತ್ತಿರ ಮಾತನಾಡಬೇಕು, ಹಾಗೆಲ್ಲ ಕೋಪ ಮಾಡಿಕೊಳ್ಳಬಾರದು.”
ಅವರ ಮಾತು ಪೂರ್ತಿ ಆಗುವ ಮೊದಲೇ ಅನನ್ಯಾ ಸಿಡುಕಿದಳು, “ಥೂ ಹೋಗಜ್ಜಿ….. ಅವರಿಗೆ ನನ್ನ ಮೇಲೆ ಅಷ್ಟು ಪ್ರೀತಿ ಇದ್ದಿದ್ದರೆ ನನ್ನನ್ನು ಬಿಟ್ಟು ಬೇರೆಯವರ ಜೊತೆ ಹಾಗೆ ಹೊರಟುಹೋಗುತ್ತಿದ್ದರೆ…. ಅದೇ ನನ್ನ ಫ್ರೆಂಡ್ ರೇಖಾ ನೋಡು, ಅವಳಮ್ಮ ಸದಾ ಅವಳ ಹತ್ತಿರವೇ ಇರ್ತಾರೆ, ಎಷ್ಟು ಮುದ್ದು ಮಾಡುತ್ತಾರೆ ಗೊತ್ತಾ?
“ನಾನು ಫೇಸ್ ಬುಕ್ ನಲ್ಲಿ ಅಮ್ಮನ್ನ ಬೇರೆ ಗಂಡಸಿನ ಜೊತೆ ನೋಡಿದಾಗಿನಿಂದ, ನನಗೆ ಅವರನ್ನು ಕಂಡರೆ ಆಗುವುದಿಲ್ಲ! ಅಮೆರಿಕಾದಲ್ಲಿ ಅಮ್ಮ ಅಪ್ಪನ ಜೊತೆ ವಾಸ ಅಂತ ಎಷ್ಟು ಸಂತೋಷಪಟ್ಟಿದ್ದೆ ಗೊತ್ತಾ? ಆದರೆ ಅಮ್ಮ ಅಪ್ಪನ ಜೊತೆ ಜಗಳವಾಡಿಕೊಂಡು ಇಂಡಿಯಾಗೆ ಹೊರಟು ಬಂದಾಗ ಒಂದು ಸಲ ನನ್ನ ಬಗ್ಗೆ ಯೋಚಿಸಲೇ ಇಲ್ಲ….. ನಾನು ಅಪ್ಪನ್ನ ಬಿಟ್ಟು ಇರಲಿಕ್ಕೆ ಸಾಧ್ಯವಾ, ಅದು ನನಗೆ ಇಷ್ಟವಾ ಅಂತ ಕೇಳಲೇ ಇಲ್ಲ…. ಅಪ್ಪ ಕೂಡ ನನ್ನನ್ನು ಒಂದು ಸಲ ತಡೆಯುವ ಪ್ರಯತ್ನ ಮಾಡಲೇ ಇಲ್ಲ….
“ಮತ್ತೆ ಈ ಅಮ್ಮ ಭಾರತಕ್ಕೆ ಬಂದ ಮೇಲೂ ನನ್ನನ್ನು ಬಿಟ್ಟು ದೂರ ಇರಬೇಕು ಅಂತ ಡಿಸೈಡ್ ಮಾಡಿದರೆ, ನನ್ನನ್ನು ಮಗಳಾಗಿ ಯಾಕೆ ಹೆರಬೇಕಿತ್ತು? ನಾನು ನನ್ನ ಫ್ರೆಂಡ್ಸ್ ನೆಲ್ಲ ಅವರ ಅಮ್ಮ ಅಪ್ಪನ ಜೊತೆ ನೋಡಿದಾಗ ಎಷ್ಟು ಬೇಜಾರಾಗುತ್ತೆ ಗೊತ್ತಾ? ಮತ್ತೆ ಅವರೆಲ್ಲ ನನ್ನ ಕಡೆ ಎಷ್ಟು ಸಿಂಪತಿ ತೋರಿಸುತ್ತಾರೆ ಗೊತ್ತಾ? ನಾನೇ ಏನೋ ತಪ್ಪು ಮಾಡಿರುವೆ ಅನ್ನೋ ಹಾಗೆ…
“ಈ ದೊಡ್ಡವರೆಲ್ಲ ಯಾಕೆ ಹೀಗೆ ಮಾಡ್ತಾರಜ್ಜಿ? ಈ ಅಮ್ಮ ಫೋನ್ ಮಾಡಿದಾಗ ನನಗೆ ಏನು ಹೇಳ್ತಾರೆ ಅಂತ ಚೆನ್ನಾಗಿ ಗೊತ್ತು. ಹೇಗಾದರೂ ಮಾಡಿ ಅಮೆರಿಕಾದಲ್ಲಿರೋ ಅಪ್ಪನ್ನ ನಾನು ಆಗಾಗ ಕಾಂಟ್ಯಾಕ್ಟ್ ಮಾಡುತ್ತಿರಬೇಕು. ಪಾಪ ಅಂತ ಒಂದು ದಿನ ಅಪ್ಪ ನನ್ನನ್ನು ಅಮೆರಿಕಾಗೆ ಕರೆಸಿಕೊಳ್ಳಬೇಕು, ಆಗ ಈ ಅಮ್ಮನಿಗೆ ನನ್ನಿಂದ ಪೂರ್ತಿ ಮುಕ್ತಿ ಸಿಗುತ್ತೆ ಅಂತ. ಆಮೇಲೆ ಎಂದಾದರೊಮ್ಮೆ ನನ್ನನ್ನು ನೋಡು ನೆಪದಲ್ಲಿ ಅಲ್ಲಿಗೆ ಬರೋದು…
“ಯಾಕೆ ಅಂದ್ರೆ ಅಮೆರಿಕಾದಲ್ಲಿ ವಾಸಿಸಬೇಕು ಅಂತ್ಲೇ ಈ ಅಮ್ಮ ಒಬ್ಬ ಎನ್‌ಆರ್‌ಐನ ಮದುವೆ ಆಗಿರೋದು… ನನಗೆ ಫೋನ್ ಮಾಡಿದಾಗೆಲ್ಲ ಅಮ್ಮ ಕೇಳೋದು ಒಂದೇ ಪ್ರಶ್ನೆ, ನಾನು ಅಪ್ಪನ ಬಳಿ ಮಾತನಾಡಿದೆನಾ? ಅವರು ಯಾವಾಗ ನನ್ನನ್ನು ಅಮೆರಿಕಾಗೆ ಕರೆಸಿಕೊಳ್ಳುತ್ತಾರೆ ಅಂತ… ಆದರೆ ಅಜ್ಜಿ, ನನಗೆ ಆ ಅಪ್ಪನ ಬಳಿ ಹೋಗಲಿಕ್ಕೂ ಇಷ್ಟ ಇಲ್ಲ. ನಾನು ಸದಾ ನಿನ್ನ, ತಾತನ ಬಳಿಯೇ ಇರ್ತೀನಿ. ಆ ಅಮ್ಮ ಅಪ್ಪ ಯಾರೂ ನನ್ನನ್ನು ಪ್ರೀತಿ ಮಾಡಲ್ಲ….. ಅಮ್ಮ, ಐ ಹೇಟ್ ಯೂ…. ಐ ಹೇಟ್ ಯೂ!” ಮಾತು ಮುಗಿಸುವಷ್ಟರಲ್ಲಿ ಅನನ್ಯಾ ಬಿಕ್ಕಿ ಬಿಕ್ಕಿ ಅಳುತ್ತಾ ಅಜ್ಜಿ ತೊಡೆಯಲ್ಲಿ ತಲೆಯೂರಿದಳು.
ಒಂದೇ ಉಸಿರಿನಲ್ಲಿ ಅಜ್ಜಿ ಬಳಿ ತನ್ನ ದುಃಖ ತೋಡಿಕೊಂಡಿದ್ದರಿಂದ ಅನನ್ಯಾಳಿಗೆ ಬಿಕ್ಕಳಿಕೆ ಮಧ್ಯೆ ಕೆಮ್ಮು ಹೆಚ್ಚಿತು. ಕನಕಮ್ಮನಿಗೆ ಮೊಮ್ಮಗಳ ಮೇಲೆ ವಾತ್ಸಲ್ಯ ಉಕ್ಕಿ ಬಂದು ಅವಳ ತಲೆ, ಬೆನ್ನು ನೇವರಿಸುತ್ತಾ ಸಮಾಧಾನಗೊಳ್ಳುವಂತೆ ಹೇಳಿದರು. ಇಷ್ಟೆಲ್ಲ ಗಂಭೀರ ಸಮಸ್ಯೆಗಳನ್ನು ಎದುರಿಸಿದ ಈ ಮಗು ಇಷ್ಟು ಚಿಕ್ಕ ವಯಸ್ಸಿಗೇ ಎಷ್ಟು ಪರಿಪಕ್ವಗೊಂಡಿದೆ ಎಂದು ನಿಟ್ಟುಸಿರಿಟ್ಟರು.
ಅನನ್ಯಾಳ ಮಾತುಗಳನ್ನು ಕೇಳಿಸಿಕೊಂಡ ಅಜ್ಜಿ ಕನಕಮ್ಮ ಆಳವಾದ ಚಿಂತೆಗೆ ಈಡಾದರು. ಸಂಗೀತಾ ಮತ್ತು ಸಂದೀಪ್ 1 ವರ್ಷದಿಂದ ಫೇಸ್ ಬುಕ್ ಫ್ರೆಂಡ್ಸ್ ಆಗಿದ್ದರು. ಎಲ್ಲೋ ಅಮೆರಿಕಾದಲ್ಲಿರುವ ಆ ಹುಡುಗ ಸಂದೀಪನ ನಡತೆ ಹೇಗೋ ಏನೋ…. ಆನ್ ಲೈನ್ ಚ್ಯಾಟಿಂಗ್ ಗೆ ಮರುಳಾಗಿ ಮದುವೆಯವರೆಗೂ ಎಳೆಯುವುದು ಬೇಡ ಎಂದು ಮಗಳು ಸಂಗೀತಾಳಿಗೆ ಎಷ್ಟು ಹೇಳಿದರೂ ಅವಳು ಕೇಳಲಿಲ್ಲ. ತನ್ನ ಹಠವೇ ತನ್ನದು ಎಂಬಂತೆ ಅವನನ್ನು ಮದುವೆಯಾದಳು.
ವರ್ಷ ಕಳೆಯುವಷ್ಟರಲ್ಲಿ ಪುಟ್ಟ ಮಗು ಅನನ್ಯಾ ಹುಟ್ಟಿದ್ದಳು. ಮಗು ಹುಟ್ಟಿದ ಸಂದರ್ಭದಲ್ಲಿ ಕನಕಮ್ಮ ಮಗಳ ಬಾಣಂತನಕ್ಕೆಂದು ಅಮೆರಿಕಾಗೆ ಹೋಗಿದ್ದರು. ಅವರ ಮನೆಯಲ್ಲಿ ಶ್ರೀಮಂತಿಕೆಯ ಸಕಲ ಸೌಲಭ್ಯಗಳಿದ್ದರೂ ಪ್ರತಿ ಕ್ಷಣ ಏನಾದರೊಂದು ಕಲಹ ಕಾದಿರುತ್ತಿತ್ತು. ಏಕೆಂದರೆ ಸಂದೀಪನ ದುರಭ್ಯಾಸಗಳು ಮಿತಿ ಮೀರಿತ್ತು. ಮನೆಗೆಲಸ ಮಾಡುತ್ತಾ ಸಂಬಳವಿಲ್ಲದೆ ಮನೆ ಸಂಭಾಳಿಸುವ ಹೆಣ್ಣು ಮಾತ್ರ ಅವನಿಗೆ ಹೆಂಡತಿಯಾಗಿ ಬೇಕಿತ್ತೇ ಹೊರತು, ಅವಳನ್ನು ಜೀವನ ಸಂಗಾತಿಯಾಗಿ ನೋಡುವ ಹಾಗಲ್ಲ. ಹೀಗೆ ಗಂಡ ಹೆಂಡಿರ ಜಗಳ ಉಂಡು ಮಲಗಿದರೂ ಮುಂದುವರಿಯುತ್ತಲೇ ಇತ್ತು. ಅನನ್ಯಾಳಿಗೆ 4 ವರ್ಷ ತುಂಬುವಷ್ಟರಲ್ಲಿ ಮಗಳು ಸಂಗೀತಾ ಮೊಮ್ಮಗಳನ್ನು ಕರೆದುಕೊಂಡು ಅಜ್ಜಿ ಕನಕಮ್ಮನ ಬಳಿಗೆ ಬೆಂಗಳೂರಿಗೆ ಶಾಶ್ವತವಾಗಿ ಬಂದಿಳಿದಳು. ಅಲ್ಲಿಗೆ 4 ವರ್ಷದ ದಾಂಪತ್ಯ ಮುಗಿದಿತ್ತು. ಆದರೆ ಅಮೆರಿಕಾದ ಸುಖ ಸೌಲಭ್ಯಗಳ ಮುಂದೆ ಭಾರತದಲ್ಲಿ ಕೆಲಸಕ್ಕೆ ಸೇರಿ ಸಿಗುವ ಸೌಲಭ್ಯ ಮಿಗಿಲು ಎನಿಸಲು ಸಾಧ್ಯವೇ? ಸಂಗೀತಾ ಇಲ್ಲಿ ಪ್ರತಿಯೊಂದು ವಿಷಯಕ್ಕೂ ಮೊಸರಿನಲ್ಲಿ ಕಲ್ಲು ಹುಡುಕತೊಡಗಿದಳು.
1 ವರ್ಷ ಇಲ್ಲಿ ಕಳೆಯುವಷ್ಟರಲ್ಲಿ ಅವಳಿಗೆ ಒಂದು ಯುಗ ಕಳೆದಂತಾಗಿತ್ತು. ಹೀಗಾಗಿ ಮತ್ತೆ ಹಿರಿಯರ ಅನುಮತಿ ಪಡೆಯದೆ ಅವಳು ಒಬ್ಬ 40+ ಬಿಸ್ ನೆಸ್ ವುಮೆನ್ ಜೊತೆ ಮರುಮದುವೆ ಆದಳು. ತನ್ನೊಂದಿಗೆ ರೆಡಿಮೇಡ್ ಮಗಳನ್ನು ಕರೆತರುವುದಿಲ್ಲ ಎಂದು ಒಪ್ಪಿದಾಗ ಮಾತ್ರ ಆ ವಿಧುರ ಇವಳನ್ನು ಮದುವೆಯಾಗಿ ಅಮೆರಿಕಾಗೆ ಕರೆದೊಯ್ಯಲು ಒಪ್ಪಿದ್ದ.
ಕ್ರಮೇಣ ದೊಡ್ಡವಳಾಗ ತೊಡಗಿದಂತೆ ಅಮ್ಮ ತನ್ನನ್ನು ಬಿಟ್ಟು ಹೊಸ ಅಂಕಲ್ ಜೊತೆ ಅಮೆರಿಕಾಗೆ ಏಕೆ ಹೋದಳು ಎಂದು ಅನನ್ಯಾಳಿಗೆ ಸ್ಪಷ್ಟ ಚಿತ್ರಣ ಮೂಡತೊಡಗಿತು. ಅಮ್ಮ ಕ್ರಮೇಣ ತನ್ನನ್ನು ಭೇಟಿಯಾಗಲು ಬರುವುದನ್ನೇ ಕಡಿಮೆ ಮಾಡಿದಾಗ, ಅವಳಿಗೆ ಒಳಗುಟ್ಟು ಅರಿವಾಯಿತು. ತನ್ನ ಸ್ಥಿತಿ ಬಗ್ಗೆ ಅವಳ ಅಸಹಾಯಕತೆ, ಕೆಟ್ಟ ಕೋಪ ಬರತೊಡಗಿತು. ತಾನು ತಾಯಿ ತಂದೆ ಇಬ್ಬರಿಗೂ ಬೇಡದ ಕೂಸು ಎಂಬ ಕೀಳರಿಮೆ, ಅಜ್ಜಿ ತಾತಂದಿರ ಮೇಲೆ ಆಕ್ರೋಶವಾಗಿ ತೋರತೊಡಗಿದಳು.
ತಾನಾಯಿತು, ತನ್ನ ಪಾಡಾಯಿತು ಎಂದು ಶಾಲೆಯಿಂದ ಬಂದವಳೆ ಕೋಣೆ ಸೇರಿಕೊಳ್ಳುತ್ತಿದ್ದಳು. ಅಜ್ಜಿ ತಾವಾಗಿ ಇವಳ ಕೋಣೆಗೆ ಬಂದು ಊಟ ತಿಂಡಿ ಸರಬರಾಜು ಮಾಡಬೇಕಿತ್ತು. ಇವಳಿಗೆ ಮನಸ್ಸು ಬಂದರೆ ತಿನ್ನುತ್ತಿದ್ದಳು, ಇಲ್ಲದಿದ್ದರೆ ಅದು ಹಾಗೇ ಬಿದ್ದಿರುತ್ತಿತ್ತು. ಮಾರನೇ ದಿನ ಕೆಲಸದವಳು ನೋಡಿ ತೆಗೆದಿಡಬೇಕಷ್ಟೆ. ತನ್ನ ಗೆಳತಿಯರ ಜೊತೆ ಸದಾ ಹೊರಗೆ ಇರುವುದನ್ನೇ ಅವಳು ಬಯಸುತ್ತಿದ್ದಳು.
ಸಮಾಜದಲ್ಲಿ ಇತರರೊಂದಿಗೆ ಸದಾ ಒರಟಾಗಿ ವ್ಯವಹರಿಸುವಳು. ಶಾಲೆಯಲ್ಲೂ ಶಿಕ್ಷಕರ ಬಳಿ ಸದಾ ಒಂದಿಲ್ಲೊಂದು ರೀತಿಯಲ್ಲಿ ಅವಿಧೇಯಳಾಗಿ ನಡೆದುಕೊಂಡು ಪ್ರತಿ ವಾರ ಡೈರಿಯಲ್ಲಿ ದೂರು ಬರೆಸಿಕೊಂಡು ಬರುತ್ತಿದ್ದಳು. ಪೇರೆಂಟ್ಸ್ ಮೀಟಿಂಗ್ ಗೆ ಕನಕಮ್ಮ ಹೋದಾಗೆಲ್ಲ, ಅವಳ ವಿರುದ್ಧ ದೂರು ಕೇಳಿ ಸಾಕಾಗಿತ್ತು.
ಮೊಮ್ಮಗಳನ್ನು ಕೂರಿಸಿಕೊಂಡು ಹಾಗಲ್ಲ ಹೀಗೆ, ಆ ರೀತಿ ನಡೆದುಕೊಳ್ಳಬೇಡ ಎಂದು ಪರಿಪರಿಯಲ್ಲಿ ಹೇಳಿದರೂ ಯಾವುದಕ್ಕೂ ಹ್ಞೂಂ, ಉಹ್ಞೂಂ ಎನ್ನದೆ ತಲೆ ತಗ್ಗಿಸಿಕೊಂಡು ಕುಳಿತಿರುವಳು. ಮತ್ತೆ ಯಥಾಪ್ರಕಾರ ಅದೇ ಕಥೆ. ಆ ಕಾಲೋನಿಯ ಜನ ಸಹ ಆಗಾಗ ಇವರ ಬಳಿ ಬಂದು ಅನನ್ಯಾ ಬಗ್ಗೆ ದೂರು ನೀಡುತ್ತಿದ್ದರು. ಅವಳ ವ್ಯವಹಾರ ಮಿತಿ ಮೀರಿದಾಗ, ಕನಕಮ್ಮ ಮೊಮ್ಮಗಳನ್ನು ಒಬ್ಬ ಕೌನ್ಸಿಲರ್ ಬಳಿ ಕರೆದೊಯ್ದರು. ಕನಕಮ್ಮ ಅವರ ಬಳಿ ತಮ್ಮ ಮನೆಯ ಕಂತೆ ಪುರಾಣ ಹೇಳಿಕೊಂಡರು.
ಅವರು ವಿಷಯವನ್ನು ಸೂಕ್ಷ್ಮವಾಗಿ ಗ್ರಹಿಸಿ, ಅನನ್ಯಾಳನ್ನು ಕೂರಿಸಿಕೊಂಡು 100 ತರಹ ಪ್ರಶ್ನಿಸಿದರು. ಅವಳ ಬಳಿ ಜೋರು ನಡೆಯದು ಎಂದು ಅನೇಕ ವಿಧವಾಗಿ ನಯವಾದ ಮಾತುಗಳಲ್ಲೇ ತಿಳಿಹೇಳಿದರು.
ಕೌನ್ಸಿಲರ್ ಗೆ ಫೀಸ್ ತೆತ್ತಿದ್ದೇ ಬಂತು, ಅನನ್ಯಾಳ ಮೇಲೆ ಅವರ ಮಾತಿನ ಪರಿಣಾಮವೇನೂ ಆಗಲಿಲ್ಲ. ಅದಾರ ಮೇಲೆ ಅನನ್ಯಾ ಅಜ್ಜಿಯನ್ನೇ ಎಮೋಶನಲ್ ಬ್ಲಾಕ್ ಮೇಲ್ ಮಾಡತೊಡಗಿದಳು. ಅಜ್ಜಿ ಎಷ್ಟೋ ಸಮಾಧಾನ ಹೇಳಿದರೂ, “ನನಗೇ ಯಾಕೆ ಹೀಗೆಲ್ಲ ನಡೆಯಬೇಕು ಅಜ್ಜಿ? ಅಮ್ಮ ಅಪ್ಪ ಇಬ್ಬರೂ ನನ್ನನ್ನು ಹೇಟ್ ಮಾಡುವಂಥ ಪಾಪ ನಾನೇನು ಮಾಡಿದ್ದೇನೆ? ಪ್ರತಿ ಸಲ ನನಗೇ ಎಲ್ಲರೂ ಬುದ್ಧಿವಾದ ಹೇಳುವುದೇಕೆ? ನನ್ನನ್ನು ನನ್ನ ಪಾಡಿಗೆ ಬಿಟ್ಟು ಬಿಡಿ….. ಇಲ್ಲದಿದ್ದರೆ ಎಲ್ಲಾದರೂ ಹೋಗಿ ಸತ್ತು ಹೋಗ್ತೀನಿ!” ಎಂದು ತಲೆ ಚಚ್ಚಿಕೊಳ್ಳುತ್ತಾ, ಊಟತಿಂಡಿ ಬಿಟ್ಟು ತನ್ನ ಕೋಣೆ ಸೇರಿ ಬಾಗಿಲು ಹಾಕಿಕೊಳ್ಳುವಳು.
ಅಪರಿಪಕ್ವ ವಯಸ್ಸಾದ ಕಾರಣ ತನ್ನ ಈ ಸ್ಥಿತಿಗೆ ಅಜ್ಜಿ ಖಂಡಿತಾ ಕಾರಣಳವಲ್ಲ, ತನ್ನ ಈ ಕೆಟ್ಟ ವ್ಯವಹಾರದಿಂದ ಅಜ್ಜಿಗೆ ಎಷ್ಟು ನೋವಾಗಬಹುದೆಂಬ ಕಲ್ಪನೆಯೂ ಅವಳಿಗಿರಲಿಲ್ಲ. ಈ ವಿಷಯದಲ್ಲಿ ಅಜ್ಜಿ ಎಷ್ಟು ಅಸಹಾಯಕರು ಎಂದೂ ಅವಳಿಗೆ ತಿಳಿಯುತ್ತಿರಲಿಲ್ಲ.
ಕನಕಮ್ಮ ತಮ್ಮ ಕೈಲಾದ ಪ್ರಯತ್ನ ಬಿಡುತ್ತಿರಲಿಲ್ಲ. ತಾವಿಬ್ಬರೂ ಅಜ್ಜಿ ತಾತಾ ಆಗಿ ಅವಳನ್ನು ಚಿಕ್ಕ ಮಗುವಾಗಿದ್ದಾಗಿನಿಂದಲೂ ನೋಡಿಕೊಳ್ಳುತ್ತಿದ್ದೇವೆ. ಎಷ್ಟೋ ಅನಾಥ ಮಕ್ಕಳಿಗೆ ಹಿಂದೂ ಮುಂದೂ ಯಾರೂ ಇರುವುದಿಲ್ಲ. ಅಂಥವರು ಯಾರಿಗೂ ಬೇಡದವರಾಗಿ ಅನಾಥಾಶ್ರಮದಲ್ಲಿ ಬೆಳೆದು ಸಮಾಜದಲ್ಲಿ ಗಣ್ಯ ವ್ಯಕ್ತಿಗಳಾಗಿಲ್ಲವೇ ಎಂದೆಲ್ಲ ಉದಾಹರಿಸುತ್ತಿದ್ದರು.
ಇದಕ್ಕೆ ವಿತಂಡವಾದ ಮಾಡುತ್ತಾ ಅನನ್ಯಾ, ತಾನು ಮೊದಲಿನಿಂದಲೂ ಅನಾಥಾಶ್ರಮದಲ್ಲೇ ಬೆಳೆದಿದ್ದರೆ ಚೆನ್ನಾಗಿರುತ್ತಿತ್ತು. ಕನಿಷ್ಠ ಆಗ ತನಗೆ ತನ್ನ ತಾಯಿ ತಂದೆ ಇದ್ದಾರೆ, ಅವರಿಗೆ ತಾನು ಬೇಡದವಳು ಎಂಬ ವಿವರ ಗೊತ್ತಾಗದೆ ಬೆಳೆಯುತ್ತಿದ್ದೆ ಎನ್ನುವಳು.
ಅನನ್ಯಾಳ ಈ ಪರಿಯ ವ್ಯವಹಾರದಿಂದ ಕನಕಮ್ಮ ಬಹಳ ನೊಂದುಕೊಳ್ಳುವರು. ಆಗೆಲ್ಲ ಅವರಿಗೆ ಮಗಳು ಸಂಗೀತಾ ಮೇಲೆ ಬಹಳ ಕೋಪ ಬರುತ್ತಿತ್ತು. ಎರಡನೇ ಮದುವೆಗೆ ಒಪ್ಪುವ ಮೊದಲು ಹೆತ್ತ ತಪ್ಪಿಗಾದರೂ ಒಮ್ಮೆ ಮಗಳ ಬಗ್ಗೆ ಅವಳು ಯೋಚಿಸಬಾರದಿತ್ತೇ? ಹೆತ್ತ ಮಗಳ ಬಗ್ಗೆ ಅಷ್ಟಾದರೂ ಜವಾಬ್ದಾರಿ ಬೇಡವೇ? ಮಗಳು ಮಾಡಿದ ತಪ್ಪಿಗೆ ಈಗ ಮೊಮ್ಮಗಳು, ವಯಸ್ಸಾದ ಅಜ್ಜಿ ತಾತಾ ಕಷ್ಟಪಡಬೇಕಿದೆ. ಮಗಳಿಗಾಗಿ ತಾನು ಎಷ್ಟಾದರೂ ಹಣ ಖರ್ಚು ಮಾಡಲು ತಯಾರು, ಆದರೆ ತನ್ನ ಬಳಿ ಇರಿಸಿಕೊಳ್ಳಲಾರೆ ಎಂದಷ್ಟೇ ಸಂಗೀತಾ ಹೇಳುವಳು. ಮಗಳು ಹಾಗೇ ಬಹಳ ಕಷ್ಟ ಕೊಡುತ್ತಿದ್ದರೆ ಅವಳನ್ನು ಬೋರ್ಡಿಂಗ್ ಶಾಲೆಗೆ ಹಾಕಿಬಿಡೋಣ ಎನ್ನುವಳು.
ಹಿಂದಿನ ಕಾಲದಲ್ಲಿ ಮಕ್ಕಳನ್ನು ಸಾಕಲಿಕ್ಕೂ ಇಂದಿನ ಆಧುನಿಕ ಕಾಲದಲ್ಲಿ ಮಕ್ಕಳನ್ನು ಸಾಕಲಿಕ್ಕೂ ಅಜಗಜಾಂತರ ವ್ಯತ್ಯಾಸವಿದೆ ಎಂಬುದು ಸಂಗೀತಾಳಿಗೆ ಗೊತ್ತಿಲ್ಲವೇ? ಅದೂ ಇಂಥ ವಾತಾವರಣದಲ್ಲಿ ಅತಿ ಸೂಕ್ಷ್ಮ ಮನಸ್ಸಿನ ಅನನ್ಯಾಳಂಥ ಹುಡುಗಿಯೊಂದಿಗೆ ಹೆಣಗುವುದು ಸುಸೂತ್ರವಾಯಿತೇ?
ಮಕ್ಕಳನ್ನು ಅರಿತುಕೊಂಡು ಅವರನ್ನು ಸಾಕುವುದು ಕೇವಲ ಅವರ ಹೆತ್ತವರಿಂದ ಮಾತ್ರ ಸಾಧ್ಯ ಎಂದು ಯಾರೋ ಸರಿಯಾಗೇ ಹೇಳಿದ್ದಾರೆ. ಹೆತ್ತ ತಾಯಿ ತಂದೆ ಈ ರೀತಿ ಅನಿವಾರ್ಯವಾಗಿ ಬೇರೆಯಾಗಬೇಕಾದಾಗ, ಇಬ್ಬರಲ್ಲಿ ಒಬ್ಬರ ಬಳಿ ಈ ಮಕ್ಕಳು ಬೆಳೆಯುವುದೇ ಸರಿ. ಹೇಗಾದರೂ ಸರಿ, ಅವರು ತಮ್ಮ ಮಕ್ಕಳೆಂಬ ಮೋಹಕ್ಕೆ ಅವರಿಗೆ ಒಂದಿಷ್ಟು ಸಮಯ ನೀಡುವರು. ಇಲ್ಲದಿದ್ದರೆ ಆ ಮಕ್ಕಳು ದಾರಿ ತಪ್ಪುವ ಸಾಧ್ಯತೆಯೇ ಹೆಚ್ಚು.
ಯಾವ ತಾಯಿ ತಂದೆಯರು ತಮ್ಮ ಮಕ್ಕಳ ಬಾಲ್ಯದಲ್ಲೇ ಯಾವುದೋ ನೆಪವಾಗಿ ಬೇರೆಯಾಗಿ ಹೋದರೆ, ಅವರು ದೊಡ್ಡವರಾದ ಮೇಲೆ ಸಾಮಾನ್ಯ ವ್ಯಕ್ತಿತ್ವದವರ ಬದಲು ಸದಾ ಒತ್ತಡತ್ಕೆ ಸಿಲುಕು, ಆತ್ಮವಿಶ್ವಾಸ ರಹಿತ, ಅಪರಾಧಿ ಪ್ರವೃತ್ತಿಯವರಾಗುತ್ತಾರೆ. ಮಕ್ಕಳು ತಮ್ಮ ತಾಯಿ ತಂದೆ ಬಳಿ ಎಷ್ಟು ಶಿಸ್ತುಬದ್ಧರಾಗಿ ಬೆಳೆಯುತ್ತಾರೋ ಇತರರ ಬಳಿ ಅಷ್ಟೇ ನಿರ್ಲಕ್ಷ್ಯವಾಗಿ ಬೆಳೆಯುತ್ತಾರೆ. ಅತಿ ಸ್ವೇಚ್ಛೆಯ ಸ್ವಭಾವ ಮೈಗೂಡಿಸಿಕೊಳ್ಳುತ್ತಾರೆ. ಯಾರಾದರೂ ತಮಗೆ ಸದಾ ಅತಿ ಪ್ರೀತಿ, ಅಕ್ಕರೆ ತೋರುತ್ತಾ ತಾವು ಬಯಸಿದ್ದನ್ನೆಲ್ಲಾ ಈಡೇರಿಸಲಿ ಎಂದು ಆಶಿಸುತ್ತಾರೆ. ಏನೇ ಆಗಲಿ, ತಾಯಿ ತಂದೆ ತಮ್ಮ ಸ್ವಾರ್ಥದ ಸಲುವಾಗಿ ಮಕ್ಕಳನ್ನು ತೊರೆದು ಹೊರಟು ಹೋದರೆ, ಯಾರು ಎಷ್ಟೇ ಚೆನ್ನಾಗಿ ಸಾಕಿದರೂ ಆ ಮಕ್ಕಳು ಮಂಕಾಗುತ್ತಾರೆ.
ಇದನ್ನೆಲ್ಲ ಅರ್ಥ ಮಾಡಿಕೊಂಡು ಅನನ್ಯಾ ಡಿಗ್ರಿಗೆ ಬರುವ ಹೊತ್ತಿಗೆ ಅಜ್ಜಿ ತಾತಾ ಕಣ್ಮುಚ್ಚಿದ್ದರು. ಅನನ್ಯಾ ನಿಜ ಅರ್ಥದಲ್ಲಿ ಈಗ ಅನಾಥಳಾಗಿದ್ದಳು.