ಕ್ರಿಸ್ಪಿ ಕ್ಯಾಶ್ಯೂ ಕ್ರಾಕರ್ಸ್

ಸಾಮಗ್ರಿ : 250 ಗ್ರಾಂ ಗೋಡಂಬಿ, ಅರ್ಧ ಕಪ್‌ಕಡಲೆಹಿಟ್ಟು, 4 ಚಮಚ ಅಕ್ಕಿಹಿಟ್ಟು, ರುಚಿಗೆ ತಕ್ಕಷ್ಟು ಉಪ್ಪು, ಖಾರ, ಪುಡಿಮೆಣಸು, ಚಾಟ್‌ ಮಸಾಲ, ತುಸು ಕಸೂರಿಮೇಥಿ, ಅರಿಶಿನ ಕರಿಯಲು ಎಣ್ಣೆ, ತುಸು ತುಪ್ಪ.

ವಿಧಾನ : ಮೊದಲು ತುಪ್ಪದಲ್ಲಿ ಗೋಡಂಬಿಯನ್ನು ಹುರಿದು ಒಂದು ಬೇಸನ್ನಿಗೆ ಹಾಕಿಡಿ. ಇದಕ್ಕೆ ಕಡಲೆಹಿಟ್ಟು, ಅಕ್ಕಿಹಿಟ್ಟು, ಉಪ್ಪು, ಖಾರ, ಅರಿಶಿನ ಸೇರಿಸಿ ನೀರು ಚಿಮುಕಿಸುತ್ತಾ ಪಕೋಡ ಹದಕ್ಕೆ ಕಲಸಿಕೊಳ್ಳಿ. ನಂತರ ತುಸು ತುಪ್ಪ ಹಾಕಿ ಜಿಡ್ಡಾಗಿಸಿ. ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿಕೊಂಡು ಬಿಡಿಬಿಡಿಯಾಗಿ ಗೋಡಂಬಿ ಕರಿಯಿರಿ. ನಂತರ ಇದನ್ನು ಬಟರ್‌ ಪೇಪರ್‌ ಮೇಲೆ ಹರಡಿ ಹೆಚ್ಚುವರಿ ಎಣ್ಣೆ ಹೋಗಲಾಡಿಸಿ. ಆಮೇಲೆ ಇದರ ಮೇಲೆ ಚಿಟಕಿ ಉಪ್ಪು, ಮೆಣಸು, ಕಸೂರಿಮೇಥಿ, ಚಾಟ್‌ ಮಸಾಲ ಉದುರಿಸಿ ಚೆನ್ನಾಗಿ ಬೆರೆತುಕೊಳ್ಳುವಂತೆ ಮಾಡಿ, ಸವಿಯಲು ಕೊಡಿ.

ಸ್ವೀಟ್ಸಾರ್ಪಂಚ್

AA-sweet-&-sour-punch

ಸಾಮಗ್ರಿ : 100 ಗ್ರಾಂ ಬೆಟ್ಟದ ನೆಲ್ಲಿಕಾಯಿ, 150 ಗ್ರಾಂ ಹುಣಿಸೇಹಣ್ಣು, 1 ಸಣ್ಣ ಬೀಟ್‌ ರೂಟ್‌, 250 ಗ್ರಾಂ ಬೆಲ್ಲ, 4-5 ದೊಡ್ಡ ಚಮಚ ಪುಡಿಸಕ್ಕರೆ, ರುಚಿಗೆ ತಕ್ಕಷ್ಟು ಹುರಿದು ಪುಡಿ ಮಾಡಿದ ಜೀರಿಗೆ, ಇಂಗು (ಡ್ರೈ ರೋಸ್ಟೆಡ್‌), ಓಮ, ಬ್ಲ್ಯಾಕ್‌ ಸಾಲ್ಟ್, ತುಸು ರೀಫೈಂಡ್‌ ಎಣ್ಣೆ.

ವಿಧಾನ : ಒಂದು ನಾನ್‌ ಸ್ಟಿಕ್‌ ಪ್ಯಾನ್‌ ಗೆ ತುಸು ಎಣ್ಣೆ ಹಾಕಿ ಬಿಸಿ ಮಾಡಿ. ಮೊದಲು ಬೀಜ ತೆಗೆದ ನೆಲ್ಲಿ, ತುರಿದ ಬೀಟ್‌ ರೂಟ್ ಇದಕ್ಕೆ ಹಾಕಿ ಲಘುವಾಗಿ ಬಾಡಿಸಿಕೊಂಡು ಮಿಕ್ಸಿಯಲ್ಲಿ ಪೇಸ್ಟ್ ಮಾಡಿ. ನಂತರ ಅದೇ ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿಕೊಂಡು, ಪೇಸ್ಟ್ ಹಾಕಿ ಮಂದ ಉರಿಯಲ್ಲಿ ಬಾಡಿಸಿ. ಅದೇ ಸಮಯದಲ್ಲಿ ಬಿಸಿ ನೀರಿಗೆ ಬೆಲ್ಲ ಹಾಕಿ ಕರಗಿಸಿ. ಇದರಲ್ಲಿ ಹುಣಿಸೆ ನೆನೆಹಾಕಿ ಕಿವುಚಿ, ತಿಳಿ ಬೇರ್ಪಡಿಸಿ. ಇದನ್ನು ಬಾಣಲೆಗೆ ಬೆರೆಸಿ ಚೆನ್ನಾಗಿ ಕುದಿ ಬರುವಂತೆ ಮಾಡಿ. 2 ನಿಮಿಷ ಬಿಟ್ಟು ಉಳಿದೆಲ್ಲ ಮಸಾಲೆ ಹಾಕಿ ಚೆನ್ನಾಗಿ ಕೆದಕಿ, ಗಟ್ಟಿ ಆದ ನಂತರ ಕೆಳಗಿಳಿಸಿ. ತುಸು ಕೈಗೆ ತೆಗೆದುಕೊಳ್ಳುವ ಹದಕ್ಕೆ ಬಂದ ಮೇಲೆ ಚಿತ್ರದಲ್ಲಿರುವಂತೆ ಉಂಡೆ ಕಟ್ಟಿ, ಪುಡಿ ಸಕ್ಕರೆಯಲ್ಲಿ ಹೊರಳಿಸಿ, 1-2 ಗಂಟೆ ಬಿಟ್ಟು ನಂತರ ಸವಿಯಲು ಕೊಡಿ.

ಸ್ವೀಟ್ಟಿಕ್ಕಿ

AA-Meeti-tikiya-(13)

ಸಾಮಗ್ರಿ : 2 ಕಪ್‌ ಮೈದಾ, 2 ಕಪ್‌ ಸಣ್ಣ ರವೆ, 2 ಕಪ್‌ ಪುಡಿಸಕ್ಕರೆ, ಅರ್ಧ ಚಮಚ ಏಲಕ್ಕಿ ಪುಡಿ, ಕರಿಯಲು ರೀಫೈಂಡ್‌ ಎಣ್ಣೆ, ತುಸು ತುಪ್ಪ.

ವಿಧಾನ : ಒಂದು ಬಾಣಲೆಯಲ್ಲಿ ಲಘುವಾಗಿ ರವೆ ಹುರಿದು, ಬೇಸನ್ನಿಗೆ ಹಾಕಿಡಿ. ಇದಕ್ಕೆ ಮೈದಾ, ಪುಡಿಸಕ್ಕರೆ, ಏಲಕ್ಕಿ ಹಾಕಿ ಚೆನ್ನಾಗಿ ಬೆರೆಸಿಕೊಳ್ಳಿ. ಇದಕ್ಕೆ ತುಸು ನೀರು ಸಿಂಪಡಿಸಿ ಮೃದುವಾಗಿ ಕಲಸಿಡಿ. ಇದಕ್ಕೆ ಧಾರಾಳ ತುಪ್ಪ ಹಾಕಿ ನಾದಿಕೊಂಡು ನೆನೆಯಲು ಬಿಡಿ. ಇದರಿಂದ ಸಣ್ಣ ಉಂಡೆ ಮಾಡಿ, ಚಪ್ಪಟೆಯಾಗಿ ತಟ್ಟಿಕೊಂಡು, ಕಾದ ಎಣ್ಣೆಯಲ್ಲಿ ಕರಿಯಿರಿ. ಇದನ್ನು ಪೇಪರ್ ಮೇಲೆ ಹರಡಿ, ಹೆಚ್ಚುವರಿ ಎಣ್ಣೆ ಹೋಗಲಾಡಿಸಿ ನಂತರ ಡಬ್ಬಕ್ಕೆ ತುಂಬಿಸಿ, ಮಕ್ಕಳು ಬಯಸಿದಾಗ ಸವಿಯಲು ಕೊಡಿ.

ಸಿಹಿಸಿಹಿ ಕರಿಗಡುಬು

AA-coconut-gujhiya-(10)

ಸಾಮಗ್ರಿ : 1 ಕಪ್‌ ಮೈದಾ, ಅರ್ಧ ಕಪ್‌ ಪುಡಿಸಕ್ಕರೆ, 1-2 ಗಿಟುಕು ಕೊಬ್ಬರಿ ತುರಿ, ಅರ್ಧ ಕಪ್‌ ಡ್ರೈ ಫ್ರೂಟ್ಸ್ (ಗೋಡಂಬಿ, ದ್ರಾಕ್ಷಿ, ಬಾದಾಮಿ, ಪಿಸ್ತಾ), ತುಸು ಏಲಕ್ಕಿ ಪುಡಿ, ಕರಿಯಲು ರೀಫೈಂಡ್‌ ಎಣ್ಣೆ.

ವಿಧಾನ : ಮೈದಾಗೆ ಚಿಟಕಿ ಅರಿಶಿನ, ತುಸು ನೀರು ಬೆರೆಸಿ ಮೃದು ಪೂರಿ ಹಿಟ್ಟು ಕಲಸಿ, ತುಪ್ಪ ಹಾಕಿ ಚೆನ್ನಾಗಿ ನಾದಿ ನೆನೆಯಲು ಬಿಡಿ. ಕೊಬ್ಬರಿ ತುರಿಗೆ ಪುಡಿಸಕ್ಕರೆ, ಏಲಕ್ಕಿ, ತುಪ್ಪದಲ್ಲಿ ಹುರಿದ ದ್ರಾಕ್ಷಿ, ಗೋಡಂಬಿ, ತುಸು ಗಸಗಸೆ ಹಾಕಿ ಮಿಶ್ರಣ ಕಲಸಿಡಿ. ಮೈದಾ ಕಣಕದಿಂದ ಸಣ್ಣ ಉಂಡೆ ಮಾಡಿ, ಪುಟ್ಟ ಪೂರಿಗಳಾಗಿ ಲಟ್ಟಿಸಿ, ಕಡುಬಿನ ಅಚ್ಚಿನಲ್ಲಿ ಹರಡಿ. ಇದಕ್ಕೆ 2-3 ಚಮಚ ಕೊಬ್ಬರಿ ಮಿಶ್ರಣ ಹಾಕಿ, ತುದಿ ಒತ್ತಿಕೊಂಡು, ಕಡುಬನ್ನು ಎಣ್ಣೆಗೆ ಹಾಕಿ ಹೊಂಬಣ್ಣ ಬರುವಂತೆ ಕರಿಯಿರಿ. ಬೇಕಾದಾಗ ಕ್ರಿಸ್ಪಿ ಗೋಡಂಬಿ ಕ್ರಾಕರ್ಸ್‌ ಜೊತೆ ಸವಿಯಿರಿ.

ಓಟ್ಸ್ ಲಡ್ಡು

AA-Oats-laddu-(1)

ಸಾಮಗ್ರಿ : 250 ಗ್ರಾಂ ಪ್ಲೇನ್‌ ಓಟ್ಸ್, 1 ಕಪ್‌ ತುರಿದ ಬೆಲ್ಲ, ಅರ್ಧ ಕಪ್‌ ತುಪ್ಪದಲ್ಲಿ ಹುರಿದ ಅಖರೋಟ್‌ ಸಹಿತ ಡ್ರೈ ಫ್ರೂಟ್ಸ್, ಅರ್ಧ ಸೌಟು ತುಪ್ಪ.

ವಿಧಾನ : ಪ್ಯಾನ್‌ ಬಿಸಿ ಮಾಡಿಕೊಂಡು ಓಟ್ಸ್ ನ್ನು ಡ್ರೈ ರೋಸ್ಟ್ ಮಾಡಿ ಒಂದು ಬೇಸನ್ನಿಗೆ ಹಾಕಿಡಿ. ಇದಕ್ಕೆ ಅಖರೋಟ್‌ ಸಹಿತ ಡ್ರೈ ಫ್ರೂಟ್ಸ್ ಹಾಕಿಡಿ. ಇದು ತಣ್ಣಗಾದ ನಂತರ ಮಿಕ್ಸಿಯಲ್ಲಿ ಪುಡಿ ಮಾಡಿ. ಈಗ ಪ್ಯಾನಿಗೆ ಬೆಲ್ಲ ಹಾಕಿ, ಮಂದ ಉರಿಯಲ್ಲಿ ಕರಗಲು ಬಿಡಿ. ನಂತರ ತುಪ್ಪ, ಓಟ್ಸ್ ಮಿಶ್ರಣ ಸೇರಿಸುತ್ತಾ ನಿಧಾನವಾಗಿ ಬೆರೆತುಕೊಳ್ಳುವಂತೆ ಮಾಡಿ. ಕೊನೆಯಲ್ಲಿ ದ್ರಾಕ್ಷಿ ಸೇರಿಸಿ. ಕೆಳಗಿಳಿಸಿ ಆರಿದ ನಂತರ ಉಂಡೆ ಕಟ್ಟಿ ಲಡ್ಡು ಮಾಡಿ.

ಪುದೀನಾ ನಿಪ್ಪಟ್ಟು

AA-Pudina-matari-(1)

ಸಾಮಗ್ರಿ : 1 ಕಪ್‌ ಮೈದಾ, ಅರ್ಧ ಕಪ್‌ ರವೆ, 1 ಕಪ್‌ ಹೆಚ್ಚಿದ ಪುದೀನಾ, ರುಚಿಗೆ ತಕ್ಕಷ್ಟು ಉಪ್ಪು, ಮೆಣಸು, ಜೀರಿಗೆ, ಓಮ, ಇಂಗು, ಲವಂಗ, 4 ಚಮಚ ತುಪ್ಪ, ಕರಿಯಲು ಎಣ್ಣೆ.

ವಿಧಾನ : ಒಂದು ಚಿಕ್ಕ ಬಾಣಲೆಯಲ್ಲಿ ತುಸು ಎಣ್ಣೆ ಬಿಸಿ ಮಾಡಿ ಇಂಗು ಹಾಕಿ ಕೆದಕಿ ಕೆಳಗಿಳಿಸಿ. ನಂತರ ಓಮ, ಜೀರಿಗೆ, ಮೆಣಸು, ಲವಂಗ ಹಾಕಿ ಪುಡಿ ಮಾಡಿ. ಒಂದು ಬೇಸನ್ನಿಗೆ ಮೈದಾ, ತುಸು ಹುರಿದ ರವೆ, ಉಪ್ಪು, ಜೀರಿಗೆ ಮಿಶ್ರಣ, ಇಂಗು, ಪುದೀನಾ ಇತ್ಯಾದಿ ಸೇರಿಸಿ. ಇದಕ್ಕೆ ಬಿಸಿ ನೀರು ಚಿಮುಕಿಸಿ ಕೋಡುಬಳೆ ಮಿಶ್ರಣದಂತೆ ಮಾಡಿ, ತುಪ್ಪ ಹಾಕಿ ನಾದಿಕೊಳ್ಳಿ. ಸಣ್ಣ ಉಂಡೆ ಮಾಡಿ, ಪುಟ್ಟ ಪುಟ್ಟದಾಗಿ ಲಟ್ಟಿಸಿ, ಕಾದ ಎಣ್ಣೆಯಲ್ಲಿ ಕರಿದು ತೆಗೆಯಿರಿ.

ಕ್ಯಾರೆಟ್ರವೆ ಕೇಕ್

AA-carrot-cake-(7)

ಸಾಮಗ್ರಿ : 1 ಕಪ್‌ ರವೆ, ಅರ್ಧ ಕಪ್‌ ಕೆಂಪು ಬಣ್ಣದ ಕ್ಯಾರೆಟ್‌ ತುರಿ, ಅರ್ಧ ಕಪ್‌ ಮೊಸರು, 1 ಕಪ್‌ ಪುಡಿಸಕ್ಕರೆ, ಚಿಟಕಿ ಬೇಕಿಂಗ್ ಪೌಡರ್‌, 4-5 ಅಖರೋಟ್‌ ಚೂರು, ಅರ್ಧ ಸೌಟು ತುಪ್ಪ, ಅರ್ಧ ಸಣ್ಣ ಚಮಚ ಗುಲಾಬಿಜಲ, ಒಂದಿಷ್ಟು ಚೆರ್ರಿ, ಟೂಟಿಪ್ರಟಿ.

ವಿಧಾನ : ರವೆಯನ್ನು ಜಿಡ್ಡಿಲ್ಲದೆ ಹುರಿಯಿರಿ. ಒಂದು ದೊಡ್ಡ  ಸ್ಟೀಲ್ ‌ಬಟ್ಟಲಿಗೆ ಮೊಸರು ಹಾಕಿಡಿ. ಇದಕ್ಕೆ ತುರಿದ ಕ್ಯಾರೆಟ್ ಬೆರೆಸಿರಿ. ಬೇರೊಂದು ಬಟ್ಟಲಿಗೆ ರವೆ, ಬೇಕಿಂಗ್‌ ಪೌಡರ್‌, ಸಕ್ಕರೆ, ಚೆರ್ರಿ, ಟೂಟಿಫ್ರೂಟಿ, ಅಖರೋಟಿನ ಚೂರು ಬೆರೆಸಿಡಿ. ಆಮೇಲೆ ಇದಕ್ಕೆ ಮೊಸರಿನ ಮಿಶ್ರಣ, ಕರಗಿದ ತುಪ್ಪ, ಗುಲಾಬಿ ಜಲ ಬೆರೆಸಿಕೊಳ್ಳಿ. ಕೇಕ್‌ ಟಿನ್ನಿಗೆ ತುಪ್ಪ ಸವರಿಕೊಂಡು ಈ ಮಿಶ್ರಣವನ್ನು ಹದವಾಗಿ ಹರಡಿರಿ. ಇದನ್ನು 2500 ಶಾಖದಲ್ಲಿ 20 ನಿಮಿಷ ಬೇಕ್‌ ಮಾಡಿ ಅಥವಾ ಕುಕ್ಕರ್‌ ನಲ್ಲಿ ಕೇಕ್‌ ಟಿನ್‌ ಇರಿಸಿ 40-45 ನಿಮಿಷ (ವೆಯ್ಟ್ ಹಾಕದೆ) ಮಂದ ಉರಿಯಲ್ಲಿ ಬೇಯಿಸಿ. ತುಸು ಆರಿದ ನಂತರ ಚಿತ್ರದಲ್ಲಿರುವಂತೆ ಕತ್ತರಿಸಿ ಸವಿಯಲು ಕೊಡಿ.

ಪೀನಟ್ಸ್ ಚಾಕೋ ನೆಸ್ಟ್

AA-peanut-choco-nest-(15)

ಸಾಮಗ್ರಿ : 200 ಗ್ರಾಂ ಕಡಲೆಬೀಜ, 4-5 ದೊಡ್ಡ ಚಮಚ ಶ್ಯಾವಿಗೆ, ಅರ್ಧ ಸೌಟು ತುಪ್ಪ, 1 ಚಮಚ ಗಸಗಸೆ, ಅರ್ಧ ಕಪ್‌ ಹಾಲು, 5-6 ಚಾಕಲೇಟ್‌ ಬಿಸ್ಕತ್ತು.

ವಿಧಾನ : ಜಿಡ್ಡಿಲ್ಲದೆ ಕಡಲೆಬೀಜ ಹುರಿದು, ಅದರ ಸಿಪ್ಪೆ ಬೇರ್ಪಡಿಸಿ, ಮಿಕ್ಸಿಯಲ್ಲಿ ಪುಡಿ ಮಾಡಿ. ಶ್ಯಾವಿಗೆಯನ್ನು ತುಪ್ಪದಲ್ಲಿ ಹುರಿಯಿರಿ. ನಂತರ ಅದೇ ಬಾಣಲೆಯಲ್ಲಿ ಇನ್ನಷ್ಟು ತುಪ್ಪ ಬಿಸಿ ಮಾಡಿ. ಕಡಲೆಬೀಜದ ಪುಡಿ ಹಾಕಿ 1-2 ನಿಮಿಷ ಬಾಡಿಸಿ. ಹಾಲು ಬೆರೆಸಿ ಮಂದ ಉರಿಯಲ್ಲಿ ಕೆದಕಬೇಕು. ಇದಕ್ಕೆ ಗಸಗಸೆ ಹಾಕಿ ಕೆದಕಿ ಕೆಳಗಿಳಿಸಿ. ಆರಿದ ಮೇಲೆ ಇದರಿಂದ ಸಣ್ಣ ಸಣ್ಣ ಉಂಡೆ ಮಾಡಿ. ಬಿಸ್ಕತ್ತನ್ನು ಪುಡಿ ಮಾಡಿ ತುಸು ಬಿಸಿ ಹಾಲಿಗೆ ಬೆರೆಸಿಡಿ. ಈ ಉಂಡೆಗಳನ್ನು ಅದರಲ್ಲಿ ಅದ್ದಿರಿ. ನಂತರ ಶ್ಯಾವಿಗೆಯಲ್ಲಿ ಹೊರಳಿಸುತ್ತಾ ನೆಸ್ಟ್ ಆಕಾರ ಕೊಡಿ. ಈ ಚಾಕೋ ನೆಸ್ಟ್ ಸೆಟ್‌ ಆಗಲು 10-12 ನಿಮಿಷ ಫ್ರಿಜ್‌ ನಲ್ಲಿರಿಸಿ, ನಂತರ ಹೊರತೆಗೆದು ಅರ್ಧ ಗಂಟೆ ಬಿಟ್ಟು ಸವಿಯಲು ಕೊಡಿ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ