ಆಗ ನನಗೆ ಮದುವೆಯಾಗಿ ಕೆಲವೇ ದಿನಗಳಾಗಿದ್ದವು. ಒಂದು ದಿನ ನಾನು ಬಟಾಣಿ ಆಲೂ ಪನೀರ್‌ ಗ್ರೇವಿ ತಯಾರಿಸುತ್ತಿದ್ದೆ.  ಅತ್ತೆ ಮನೆಯಲ್ಲಿ ಮೊದಲ ಸಲ ಪನೀರ್‌ ಬಳಸಿ ತಯಾರಿಸುತ್ತಿದ್ದೆ, ಹೀಗಾಗಿ ಇದು ಚೆನ್ನಾಗಿ ಬರುತ್ತದೋ ಇಲ್ಲವೋ ಎಂಬ ಆತಂಕವಿತ್ತು, ನಾನು ಕುಕ್ಕರ್‌ ನಲ್ಲಿ ಆಲೂ ಬಟಾಣಿ ಇಟ್ಟು ಕುಕ್ಕರ್‌ ಕೂಗಿದ ನಂತರ ಅತ್ತೆಗೆ ಅದನ್ನು ಆಫ್‌ ಮಾಡಲು ಹೇಳಿ, ನಾನು ಮಹಡಿಯಲ್ಲಿ ಬಟ್ಟೆ ಒಣಗಿಸಲು 2 ಬಕೆಟ್‌ ಹಿಡಿದು ಹೊರಟೆ.

ನಾನು ಮೇಲೆ ಬಟ್ಟೆ ಒಣಗಿಸುತ್ತಿದ್ದಾಗ, 10 ನಿಮಿಷ ಬಿಟ್ಟು ಅತ್ತೆ ಅಲ್ಲಿಗೆ ಬಂದರು. “ಕುಕ್ಕರ್‌ ಕೂಗಿದ ಮೇಲೆ ಒಲೆ ಆರಿಸಿದಿರಾ?” ಎಂದು ಅವರನ್ನು ಕೇಳಿದೆ.

ಅದಕ್ಕೆ ಅವರು, “ಅಯ್ಯೋ… ಮರೆತೇ ಬಿಟ್ಟೆ!” ಎಂದು ಗಾಬರಿಯಿಂದ ಬೇರೇನೋ ಕೆಲಸ ಮಾಡುತ್ತಿದ್ದೆ ಎಂದರು.

ನಾನು ಓಡಿ ಬಂದು ಸತತ ಸೀಟಿ ಕೂಗುತ್ತಿದ್ದ ಕುಕ್ಕರ್‌ ಆಫ್‌ ಮಾಡಿದೆ. ಗ್ರೇವಿ ಕೆಟ್ಟರೆ ಏನು ಮಾಡಲಿ ಎಂದು ಆತಂಕ ವ್ಯಕ್ತಪಡಿಸಿದೆ. ಏಕೆಂದರೆ ಬಟಾಣಿ ಆಲೂ ಅತಿಯಾಗಿ ಬೆಂದು ಮೊಸರಾಗಿರಬಹುದು ಎನಿಸಿತು.

“ನೀನೇನೂ ಯೋಚಿಸಬೇಡಮ್ಮ. ರಾಜೇಶ್‌ ಯಾಕೋ ಅಡುಗೆ ಸರಿ ಇಲ್ಲ ಅಂದ್ರೆ ನಾನೇ ಮಾಡಿದ್ದು ಎಂದು ಅವನಿಗೆ ಹೇಳಿಬಿಡು, ಅವನೇನೂ ನನಗೆ ಹೇಳೋಕ್ಕೆ ಹೋಗೋಲ್ಲ. ಅಕಸ್ಮಾತ್‌ ನಿಮ್ಮ ಮಾವನಿಗೆ ಬಡಿಸುವಾಗ ಅಡುಗೆ ಚೆನ್ನಾಗಿಲ್ಲ ಎಂದರೆ ಆಗ ನೀನೇ ಮಾಡಿದ್ದು ಎಂದು ನಾನು ಹೇಳುತ್ತೇನೆ. ಹೊಸ ಸೊಸೆ ಕೈ ರುಚಿ ಬಗ್ಗೆ ಅವರು ಸಿಡುಕೋದಿಲ್ಲ ಬಿಡು,” ಎಂದು ಸಮಾಧಾನ ಹೇಳಿದರು.

ಅತ್ತೆಯ ಸಪೋರ್ಟ್‌ ಕಂಡು ನನಗೆ ಹೆಮ್ಮೆ ಎನಿಸಿತು. ಎಲ್ಲರಿಗೂ ಇಂಥ ಅತ್ತೆ ಸಿಗಲಿ ಎಂದು ಹಾರೈಸುತ್ತೇನೆ.

ಸುಮತಿ ಶರ್ಮ, ಹಾಸನ.

 

ನನ್ನ ಗೆಳತಿ ಲಲಿತಾಳಿಗೆ 1-1 ಗಂಡು, ಹೆಣ್ಣುಮಕ್ಕಳು. ಲಲಿತಾಳ ಪರಿವಾರ ಮೊದಲಿನಿಂದ ಬೆಂಗಳೂರಿನಲ್ಲೇ ಸೆಟಲ್ ಆಗಿತ್ತು. ಅವಳ ಮಗ ಸಂದೀಪ್‌ ಒಬ್ಬ ತೆಲುಗು ಹುಡುಗಿಯನ್ನು ಪ್ರೇಮಿಸಿದ್ದ. ಆ ಹುಡುಗಿಯ ಆಫೀಸ್‌ ಇವನ ಆಫೀಸ್‌ ಬಳಿಯೇ ಇತ್ತು. ಅವರಿಬ್ಬರೂ ಸಾಪ್ಟ್ ವೇರ್‌ ಎಂಜಿನಿಯರ್ಸ್‌, ಬಿ.ಇ. ವ್ಯಾಸಂಗಕ್ಕಾಗಿ ಹುಡುಗಿ ಬೆಂಗಳೂರಿಗೆ ಬಂದು ಇಲ್ಲೇ ಸೆಟಲ್ ಆಗಿದ್ದಳು. ಸಂದೀಪ್‌ ಅದೇ ಹುಡುಗಿಯನ್ನು ಮದುವೆ ಆಗುವುದಾಗಿ ಹಠ ಹೂಡಿದ್ದ.

ಮೊದ ಮೊದಲು ಲಲಿತಾ ದಂಪತಿ ಈ ರೀತಿ ವಿಭಿನ್ನ ಸಂಪ್ರದಾಯದ 2 ಕುಟುಂಬಗಳ ನಡುವಿನ ಮದುವೆ ಸರಿಹೋಗುವುದಿಲ್ಲ ಎಂದು ಅದನ್ನು ಬಲವಾಗಿ ವಿರೋಧಿಸಿದರು.ಆದರೆ ಸಂದೀಪ್‌ ಬಿಲ್ ‌ಕುಲ್ ‌ಅವಳನ್ನೇ ಮದುವೆ ಆಗುವುದಾಗಿ ಹೇಳಿಬಿಟ್ಟ. ಕೊನೆಗೆ ಲಲಿತಾ ತಾನೇ ಪತಿಗೆ ತಿಳಿಹೇಳಿ, ಹುಡುಗಿ ಮುಂದೆ ನಮ್ಮ ಮನೆಗೇ ಬರುತ್ತಾಳೆ, ಹೀಗಾಗಿ ನಮ್ಮ ಸಂಪ್ರದಾಯವನ್ನೇ ಕಲಿಯುತ್ತಾಳೆ ಎಂದು ಹೇಗೋ ಒಪ್ಪಿಸಿದಳು. ಮಗ ಸೊಸೆ ಸಂತೋಷವಾಗಿರುವುದು ಮುಖ್ಯ, ನಮ್ಮ ಆಸೆಗಾಗಿ ಅವನನ್ನು  ಒತ್ತಾಯಿಸುವುದು ಬೇಡ ಎಂದು ಹೇಳಿದಳು. ಮಗ ಅದನ್ನೇ ನೆಪವಾಗಿಸಿ, ರೆಜಿಸ್ಟರ್‌ ಮ್ಯಾರೇಜ್‌ ಆಗಿ ಬೇರೆ ಹೋದರೆ ಎಂಬ ಆತಂಕವಿತ್ತು. ಹಿರಿಯರು ಒಪ್ಪಿದ ಮೇಲೆ ಇವರು ಹುಡುಗಿಯ ತವರೂರು ಹೈದರಾಬಾದಿಗೆ ಹೋಗಿ ಕೇವಲ ಕೆಲವೇ ಆಪ್ತರ ಸಮ್ಮುಖದಲ್ಲಿ ಮದುವೆ ಮುಗಿಸಿಕೊಂಡು ಬಂದರು. ನಂತರ ಲಲಿತಾ ಇಲ್ಲಿ ಬೆಂಗಳೂರಿನಲ್ಲಿ ಎಲ್ಲಾ ನೆಂಟರು, ಫ್ರೆಂಡ್ಸ್ ನ್ನು ಕರೆದು ಅದ್ಧೂರಿಯಾಗಿ ಆರತಕ್ಷತೆ ನಡೆಸಿದಳು. ಅಲ್ಲಿಗೆ ಬಂದವರು ಯಾರದೂ ಆಕ್ಷೇಪಣೆ ಇರಲಿಲ್ಲ. ನಾವೆಲ್ಲ ಹಾರ್ದಿಕವಾಗಿ ಸಪೋರ್ಟ್ ಮಾಡಿದೆ. ಇದೀಗ ಲಲಿತಾ ಮಗ, ಸೊಸೆ, ಮೊಮ್ಮಗಳ ಜೊತೆ ಸುಖೀ ಜೀವನ ನಡೆಸುತ್ತಿದ್ದಾಳೆ. ಈ ಅಡ್ಜಸ್ಟ್ ಮೆಂಟ್‌ ಎಲ್ಲಕ್ಕಿಂತ ಮುಖ್ಯವಲ್ಲವೇ?

ವಾಸಂತಿ ಪ್ರಸಾದ್‌, ಬೆಂಗಳೂರು.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ