ಮೇಕಪ್‌ ಅನ್ನೋದು ಈಗ ಟ್ರೆಂಡ್‌ ಆಗಿಬಿಟ್ಟಿದೆ. ಮೇಕಪ್‌ ನಮ್ಮ ಚರ್ಯೆಯನ್ನೇ ಬದಲು ಮಾಡಬಹುದು. ಎಷ್ಟೋ ಬಾರಿ ನಾವು ಸಾಮಾಜಿಕ ಜಾಲತಾಣಗಳಲ್ಲಿ ನೋಡಿರುತ್ತೇವೆ. ಮೇಕಪ್‌ ಮಾಡಿಕೊಂಡ ಹುಡುಗಿಯನ್ನು ಒಪ್ಪಿ ನಂತರ ಅವಳ ಸಹಜ ಸೌಂದರ್ಯಕ್ಕೆ ಮೂರ್ಛೆಹೋದ ಗಂಡಿನ ಪಾಡನ್ನು! ಮಗದೊಂದು ಘಟನೆ, ಆ್ಯಸಿಡ್‌ ದಾಳಿಗೊಳಗಾದ ಯುವತಿಯರಿಗೆ ಮೇಕಪ್ ಮಾಡಿ ಕೊಂಚ ಸಮಯ ಅವರಿಗೆ ಮರಳಿ ಬಂದ ತಮ್ಮ ತಾತ್ಕಾಲಿಕ ಸೌಂದರ್ಯದಿಂದ ಸಂತಸಪಡುವ ಕ್ಷಣಗಳ ಕಂಡು ನಮ್ಮ ಕಣ್ಣಾಲಿಗಳು ತುಂಬಿ ಬರುತ್ತವೆ.

ಮೇಕಪ್‌ ಅಥವಾ ಪ್ರಸಾಧನ ಕ್ಷೇತ್ರ ಇಂದಿನ ಆಧುನಿಕ ಪ್ರಪಂಚದಲ್ಲಿ ಬಹಳವೇ ಮನ್ನಣೆ ಪಡೆಯುತ್ತಿದೆ. ಈ ದಿನಗಳಲ್ಲಿ ಇಂಥ ಮೇಕಪ್‌ ಯಾರಿಗೆ ಬೇಡ ಹೇಳಿ? ಮುಖದ ಮೇಕಪ್‌ ಎಲ್ಲ ಒಂದೇ ಅಂದುಕೊಳ್ಳುವ ಜಮಾನ ಈಗಿಲ್ಲ! ಅದರಲ್ಲೂ ಸ್ಪೆಷಲೈಸೇಷನ್‌ಇರುತ್ತದೆ ಎನ್ನುತ್ತಾರೆ ಈ ಲೇಖನದ ಪ್ರತಿಭೆ ಕೀರ್ತಿ ರಾವ್‌. ಕಣ್ಣು ಮತ್ತು ತುಟಿಯ ಸ್ಪೆಷಲಿಸ್ಟ್ ಎಂದಾಗ ಕೇಳಿ ಕೊಂಚ ದಂಗಾದೆ. ಮುಖ ಇರೋದೇ ಇಷ್ಟು, ಅದರಲ್ಲಿಯೂ ಈ ಭಾಗಗಳಿಗಾಗಿ ವಿಶೇಷ ತರಬೇತಿ ಪಡೆದು ಮೇಕಪ್‌ ಮಾಡೋಷ್ಟು ಜನ ಟ್ರೆಂಡ್ ಮಾಡಿಕೊಂಡಿದ್ದಾರೆ. ಅದಕ್ಕಾಗಿ ವಿಶೇಷ ಕೋರ್ಸ್‌ ಗಳೂ ಬಂದುಬಿಟ್ಟಿವೆ.

ಮೇಕಪ್‌ ಅಂದರೆ ಕಪ್ಪಗಿರುವವರನ್ನು ಬೆಳ್ಳಗೆ ಮಾಡುವುದು ಎಂಬೋದು ಬಹಳ ಜನರ ಅಭಿಪ್ರಾಯ. ಆದರೆ ಅದು ತಪ್ಪು. ಫೀಚರ್ಸ್ ನ ಎನ್‌ ಹಾನ್ಸ್ ಮಾಡೋದು ಮೇಕಪ್‌! ಮದುವೆ ಅನ್ನೋದು ಪ್ರತಿ ಹೆಣ್ಣಿನ ಬಾಳಿನಲ್ಲೂ ಒಂದು ಕನಸು. ಆ ಸಮಯದಲ್ಲಿ ಮತ್ತಷ್ಟು ಚಂದ ಕಾಣಬೇಕೆಂಬ ಆಸೆ ಮೈದೋರುವುದು ವಯಸ್ಸಿನ ಸಹಜ ಆಸೆಯೇ ಹೌದು.

ಬದಲಾದ ಈ ಕಾಲಮಾನದಲ್ಲಿ ಹದಿಹರೆಯದವರ ಮನದಲ್ಲಿ ಹಲವಾರು ರೀತಿಯ ಕಾನ್‌ ಸೆಪ್ಟ್ ಗಳು ಬಂದಿರುವುದು ಸ್ವಾಗತಾರ್ಹವೇ ಸರಿ. ಇದೊಂದು ಜೀವನಪರ್ಯಂತ ನೆನಪಿನಲ್ಲಿ ಉಳಿಯುವಂಥದ್ದು. ಪ್ರೀ ವೆಡ್ಡಿಂಗ್‌ ಫೋಟೋ ಶೂಟ್‌ ಗಳು ಸರ್ವೇಸಾಮಾನ್ಯವಾಗಿವೆ. ನಂತರ ನಡೆಯುವ ಮೆಹಂದಿ, ಸಂಗೀತ, ವರಪೂಜೆ, ಮದುವೆ, ಆರತಕ್ಷತೆ, ನಂತರದ ಸತ್ಯನಾರಾಯಣ ಪೂಜೆ, ಬೀಗರ ಔತಣ. ಅಬ್ಬಾ….! ಮದುವೆ ಅನ್ನೋದು ಇವತ್ತಿನ ದಿನಗಳಲ್ಲಿ ದುಡ್ಡು ಖರ್ಚು ಮಾಡಿದಷ್ಟೂ ವೈಭವೋಪೇತವಾಗಿರುತ್ತದೆ. ಅಂತಹ ಸಮಯದಲ್ಲಿ ಮುಖ್ಯ ಆಕರ್ಷಣೆ ಮದುಮಕ್ಕಳು. ಅದರಲ್ಲೂ ಹೆಣ್ಣು ಸೌಂದರ್ಯಪ್ರಿಯಳು. ಹೊತ್ತು ಹೊತ್ತಿಗೂ ಒಂದೊಂದು ಅಲಂಕಾರದ ಒಡವೆ, ಸೀರೆ, ಅದರ ಜೊತೆ ಜೊತೆಗೆ ಈ ಪ್ರಸಾಧನ ಪ್ರಾಮುಖ್ಯತೆ ಪಡೆಯುತ್ತದೆ!

ಪಾರ್ಲರ್‌ ಮೇಕಪ್‌ ಗೂ ಸ್ಟುಡಿಯೋ ಮೇಕಪ್‌ ಗೂ ಬಹಳವೇ ವ್ಯತ್ಯಾಸವಿದೆ. ಪಾರ್ಲರ್‌ ಮೇಕಪ್‌ ನವರನ್ನು ಬ್ಯೂಟಿಷಿಯನ್ಸ್ ಎಂದರೆ, ಸ್ಟುಡಿಯೋ ಮೇಕಪ್‌ ನವರನ್ನು ಆರ್ಟಿಸ್ಟ್ ಎನ್ನುತ್ತಾರೆ. ಪಾರ್ಲರ್‌ ನವರು ಫೌಂಡೇಶನ್‌ ನಿಂದ ಪ್ರಾರಂಭಿಸಿ ಕನ್ಸೀಲರ್, ಕಾಂಪ್ಯಾಕ್ಟ್. ಬ್ಲಶ್‌, ಕಾಜಲ್, ಲಿಪ್‌ ಸ್ಟಿಕ್‌ ಬಳಸುತ್ತಾ ಮುಖದ ಸೌಂದರ್ಯವನ್ನು ಹೆಚ್ಚಿಸುತ್ತಾರೆ. ಇದು ಕೆಲವು ಗಂಟೆಗಳ ಕಾಲ ಮುಖದ ಮೇಲೆ ಉಳಿಯುತ್ತದೆ. ಅದೂ ಒಳ್ಳೆಯ ಪಾರ್ಲರ್‌ ಗಳಿದ್ದರೆ ಅಥವಾ ಮದುವೆಗಾಗಲೆಂದೇ ಇವರು ಸ್ಪೆಷಲೈಸ್ಡ್ ಪಾರ್ಲರ್‌ ಗಳಲ್ಲಿ.

ಸ್ಟುಡಿಯೋ ಮೇಕಪ್‌ ನಲ್ಲಿ ಮಾಯಿಶ್ಚರೈಸ್‌ ಮಾಡಿದ ಮೇಲೆ ಸನ್‌ ಸ್ಕ್ರೀನ್‌ ನಿಂದ ಪ್ರೊಟೆಕ್ಟ್ ಮಾಡಬೇಕು. ಆಗ ಚರ್ಮದಲ್ಲಿನ ಸಣ್ಣ ಸಣ್ಣ ರಂಧ್ರಗಳೂ ಮುಚ್ಚಿಕೊಳ್ಳುತ್ತವೆ. ಇದೀಗ ಪ್ರಸಾಧನ ಕಲಾವಿದೆಯ ಕಲಾ ಕೌಶಲತೆ ತೆರೆದುಕೊಳ್ಳುತ್ತದೆ. ಇದೊಂದು ಕಲೆಯೇ ಹೌದು. ಮುಖದ ಮೇಲೆ ಮೇಕಪ್‌ ಬಹುಕಾಲ ಉಳಿಯಲು ಮೇಕಪ್‌ ಕಲಾವಿದರ ಬಳಿ ಮಾಡಿಸಿಕೊಳ್ಳುವುದು ಉತ್ತಮ! ಈ ಕಲಾವಿದರು ತಮ್ಮ ನೈಪುಣ್ಯತೆಯಿಂದ ಮುಖದಲ್ಲಿರುವ ಹಲವಾರು ಸಣ್ಣ ಪುಟ್ಟ ನ್ಯೂನತೆಗಳನ್ನು ಬಹು ದೊಡ್ಡ ಮಟ್ಟದಲ್ಲಿ ಗುರುತಿಸದಷ್ಟು ಮೇಕಪ್‌ ನ ಸಹಾಯದಿಂದ ಮರೆಮಾಚುತ್ತಾರೆ.

 

 

ಹಾಗಾಗಿ ಫೋಟೋ, ವಿಡಿಯೋಗಳಲ್ಲಿ ಬಹಳ ಉತ್ತಮ ಫಲಿತಾಂಶ ದೊರಕುತ್ತದೆ. ಪಿಗ್ಮೆಂಟೇಶನ್‌, ಪಿಂಪಲ್ಸ್, ಅನ್‌ ಈವೆನ್‌ ಸ್ಕಿನ್‌, ಈ ತರಹದ್ದನ್ನೆಲ್ಲಾ ಕಲರ್‌ ಕರೆಕ್ಟರ್‌ ನ ಸಹಾಯದಿಂದ ಸರಿ ಮಾಡಿಕೊಳ್ಳುತ್ತಾರೆ. ನಂತರ ಫೌಂಡೇಶನ್‌. ಇಲ್ಲಿಂದ ಮುಂದೆ ಟಿ ಝೋನ್‌ ಹೈಲೈಟ್‌ ಮಾಡುವ ಸಮಯ. (ಅಂದರೆ ಹಣೆಯ ಅಡ್ಡಭಾಗದಿಂದ ಮೂಗು ಹಾಗೂ ಗಲ್ಲದವರೆವಿಗೂ). ಈಗ ಕಾಂಟೂರಿಂಗ್‌! ಇಲ್ಲಿ ದಪ್ಪಗಿರುವ ಮೂಗನ್ನು ಸಣ್ಣ ಮಾಡೋದು, ಗುಂಡಗಿರುವ ಮುಖವನ್ನು ಕೊಂಚ ಓವಲ್ ಮಾಡೋದು… ಇಂತಹ ಬದಲಾವಣೆಗಳು ಈ ಹಂತದಲ್ಲಿ ನಡೆಯುತ್ತದೆ. ಹೆಚ್ಚಿನ ಬದಲಾವಣೆಗಳಾದ ಈ ಸಮಯದಲ್ಲಿ ಮುಖದ ಲುಕ್ ಇಮ್ಮಡಿಯಾಗುತ್ತದೆ. ಮುಖದ ಜೊತೆ ಜೊತೆಗೆ ಕತ್ತು ಮತ್ತು ಭುಜಗಳೂ ಸೇರುತ್ತವೆ. ಆದರೆ ಸಾಮಾನ್ಯವಾಗಿ ನಾವು ಮುಖಕ್ಕೆ ಉಪಯೋಗಿಸಿದ ಆ ದುಬಾರಿ ವರ್ಧಕಗಳನ್ನು ಇತರೆಡೆ ಉಪಯೋಗಿಸುವುದಿಲ್ಲ! ಇಲ್ಲಿ ನಾವು ಮ್ಯಾಕ್‌ ಕಂಪನಿಯದ್ದನ್ನೇ ಉಪಯೋಗಿಸುತ್ತೇವೆ. ಕೆಲವು ಸೆಲೆಬ್ರೆಟಿಗಳ ಇಚ್ಛೆಯ ಮೇರೆಗೆ ಅವರಿಗೆ ಬೇಕಾಗುವಂಥ ಸೇವೆ ನೀಡುತ್ತೇವೆ ಎನ್ನುತ್ತಾರೆ ಕೀರ್ತಿ ರಾವ್‌.

ಚರ್ಮದ ಬಣ್ಣಕ್ಕೆ ಹೊಂದಿಕೊಳ್ಳುವಂತಹ ಲೂಸ್‌ಪೌಡರ್‌ ನ ಬಳಸುವಿಕೆಯನ್ನು ಮಾಡಿದಾಗ ಮೇಕಪ್‌ ಸೀಲ್ ‌ಆಗುತ್ತದೆ. ನಂತರ ಕಾಜಲ್, ಲಿಪ್‌ ಸ್ಟಿಕ್‌, ಬ್ಲಶರ್‌ ಗಳಿಂದ ಮುಖದ ಚಂದ ಹೆಚ್ಚುವುದರಲ್ಲಿ ಸಂದೇಹವಿಲ್ಲ. ಹಾಗಾಗಿ ಇಲ್ಲಿ ಉಪಯೋಗಿಸೋದು ಹೈ ಡೆಫ್‌ ನೇಶನ್‌ ಮೇಕಪ್‌ ಅರ್ಥಾತ್‌ ಕಣ್ಣಿನ ಸೌಂದರ್ಯವನ್ನು ಹೆಚ್ಚಿಸುವ ಪ್ರಸಾಧನಗಳದ್ದೊಂದು ವೇಶಿಷ್ಟ್ಯ! ಈ ಭಾಗಕ್ಕೆ ಒಂದು ಥರ ಅಲ್ಲ, ತರಹೇವಾರಿ ಇರುತ್ತದೆ. ಹಲವಾರು ಶೇಡ್‌ ಗಳು, ಕಟ್‌ ಕ್ರೀಜ್‌, ಓಮ್ಬ್ರೆ, ಕಾರ್ನರ್ಸ್ ಡಾರ್ಕ್‌ ಶೇಡ್‌, ಮಧ್ಯೆ ವೈಟ್‌ ಕಲರ್‌ ನಿಂದ ಹೈಲೈಟ್‌ ಮಾಡೋದು. ಇಲ್ಲಿ ನಾವು ಕಲರ್ಸ್ ನಲ್ಲಿ ಆಟವಾಡಬಹುದು ಎನ್ನುತ್ತಾರೆ ಬಹಳ ಆಸೆ ಕಂಗಳಿಂದ. ಅಂದರೆ ಕಲೆ ಇಲ್ಲಿ ಅಭಿವ್ಯಕ್ತವಾಗುತ್ತದೆ.

ಕೀರ್ತಿ ರಾವ್‌ ಈ ಕಣ್ಣಿನ ಅಲಂಕಾರದಲ್ಲಿ ವಿಶೇಷ ಪ್ರಾವಿಣ್ಯತೆಯನ್ನು ಪಡೆದಿದ್ದಾರೆ. ಹಾಫ್‌ ಸ್ಮೋಕಿ ವಿಧಾನದಲ್ಲಿ ಬ್ರಿಕ್‌, ಬ್ರೌನ್‌, ಆರೆಂಜ್‌ ಕಲರ್‌ ಗಳಿಂದ ಕಣ್ಣಿಗೆ ಬೇಸ್‌ ಕೊಟ್ಟು ಐ ಲೈನರ್‌ ಹಚ್ಚು ಜಾಗದಲ್ಲಿ ಮರ್ಜ್‌ ಮಾಡುತ್ತಾರೆ. ಇನ್ನು ಫುಲ್ ಸ್ಮೋಕ್‌ ನಲ್ಲಿ ಕ್ರೀಸ್‌ ಸಂಪೂರ್ಣವಾಗಿ ಕಪ್ಪಿರುತ್ತದೆ. ವೈಟ್‌ ಕಾಜಲ್ (ಬಹಳಷ್ಟು ಜನಕ್ಕೆ ತಿಳಿದಿಲ್ಲ)ನ್ನು ಹಚ್ಚುವುದರಿಂದ ಕಣ್ಣುಗಳು ದೊಡ್ಡದಾಗಿ ಅಗಲವಾಗಿ ಅಂದವಾಗಿ ಕಾಣುತ್ತದೆ. ಇದು ಬಹಳ ಅಪರೂಪ!

ಇನ್ನು ತುಟಿಗಳದ್ದೊಂದು ವಿಶೇಷ. ಅದಕ್ಕೆ ಶೇಪ್‌ ಇದ್ದರೆ ಒಂಥರ, ಇಲ್ಲದಿದ್ದರೆ ಶೇಪ್‌ ಕೊಟ್ಟು ಮ್ಯಾಚಿಂಗ್‌ ಕಲರ್‌ ನಿಂದ ಬಣ್ಣ ತುಂಬುತ್ತಾರೆ. ನಂತರ ಕಿವಿಗಳನ್ನೂ ಕೂಡಾ ಫೌಂಡೇಶನ್‌ ನಿಂದ ರೆಡಿ ಮಾಡುತ್ತಾರೆ.

ಇಂತಹ ಅದ್ಭುತ ಮಾಹಿತಿಗಳನ್ನು ನೀಡಿದವರು ಸ್ಟುಡಿಯೋ ಮೇಕಪ್‌ ಆರ್ಟಿಸ್ಟ್ ಕೀರ್ತಿ ರಾವ್‌! ಬಿಎ ಪದವಿಯೊಟ್ಟಿಗೆ ಫ್ಯಾಷನ್ ಡಿಸೈನಿಂಗ್‌, ಅನಿಮೇಶನ್‌ ಕೋರ್ಸ್‌ ಗಳನ್ನು ಮಾಡಿರುವರು. ವಿಶೇಷವಾಗಿ ಶಾಲಾ ಮಕ್ಕಳಿಗೆ ಜಾನಪದ ಹಾಗೂ ದೇಶಭಕ್ತಿ ಪ್ರಧಾನ ನೃತ್ಯಗಳನ್ನು ಸತತವಾಗಿ 13 ವರ್ಷಗಳ ಕಾಲ ಹೇಳಿಕೊಟ್ಟಿರುವರು. ಮನೆಯ ಹತ್ತಿರವೇ ಇದ್ದ ಇನ್‌ ಸ್ಟಿಟ್ಯೂಟ್‌ ನಲ್ಲಿ ಕೆಲವು ಕೋರ್ಸ್‌ ಗಳನ್ನು ಮಾಡುತ್ತಿದ್ದಾಗಲೇ ಮಲೇಷಿಯಾದಲ್ಲಿ ನೆಲೆಸಿರುವ ಹೆಸರಾಂತ ಮೇಕಪ್‌ ಆರ್ಟಿಸ್ಟ್ ಕಣ್ಣನ್‌ ರವರು ನಡೆಸುವ ವರ್ಕ್‌ ಶಾಪ್‌ ಇರೋದು ತಿಳಿದದ್ದೇ ತಡ, ಅಲ್ಲಿಗೆ ದೌಡಾಯಿಸಿದರು. ಅವರ ಬಳಿ ಮಾಸ್ಟರ್ಸ್ ಕ್ಲಾಸ್‌ ತರಬೇತು ಪಡೆದು ಬಹಳವಾಗಿ ಇಂಪ್ರೂವ್ ‌ಮೆಂಟ್‌ ಕಂಡರು.ಇದುವರೆವಿಗೂ ಆಗಿದ್ದು ಅವರ ತರಬೇತಿನಂತೆ. ಒಟ್ಟಿನಲ್ಲಿ ನನ್ನ ಈ ಎಲ್ಲ ಬೆಳವಣಿಗೆಗೆ ಮುಖ್ಯ ಸ್ಛೂರ್ತಿದಾಯಕರು ಅಂದರೆ ನನ್ನ ಕಸಿನ್‌ ಲಕ್ಷ್ಮಿ ಪಿ. ಶೆಟ್ಟಿ. ಇವರೂ ಕೂಡಾ ಅನುಪಮಾ ಗೌಡ, ಆಶ್ರಿತಾ ರಂಗನಾಥ್‌ ರಂತಹ ಸೆಲೆಬ್ರೆಟಿಗಳಿಗೆ ಮೇಕಪ್‌ ಆರ್ಟಿಸ್ಟ್.

ಇವತ್ತಿನ ಟೆಕ್ನಾಲಜಿಯಲ್ಲಿ ಯೂ ಟ್ಯೂಬ್‌ ನೋಡಿ ಕಲಿಯಬಹುದು. ಏನೇ ಕಲಿತರೂ ಪ್ರಾಕ್ಟಿಕಲ್ ಗೆ ಬಂದಾಗ ಸ್ವಂತಿಕೆ ಕ್ರಿಯೇಟಿವಿಟಿಯೇ ಮುಖ್ಯವಾಗುತ್ತದೆ. ಆಗಲೇ ಅದು ಯೂನಿಕ್‌ ಆಗಿ ಕಾಣುತ್ತದೆ. ಹಾಗಾದಾಗ ಮಾತ್ರ ನಮ್ಮ ಬ್ರ್ಯಾಂಡ್‌ ಅನ್ನೋದು ಇರುತ್ತೆ. ಈಗ್ಗೆ ಮೂರು ವರ್ಷದಿಂದಲೂ ಈ ಕ್ಷೇತ್ರದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿರುವ ಇವರು 700ಕ್ಕೂ ಮೇಲ್ಪಟ್ಟು ಮದುಮಕ್ಕಳಿಗೆ ಅಲಂಕಾರ ಮಾಡಿರುವರು.

ಎಷ್ಟೋ ಹೆಣ್ಣುಮಕ್ಕಳು ಇವರು ಮಾಡಿದ ಮೇಕಪ್‌ ನ ಫೈನಲ್ ಟಚ್‌ ನ್ನು ಕನ್ನಡಿಯಲ್ಲಿ ಕಂಡು ಅತ್ತಿದ್ದೂ ಉಂಟು! ನಾನೂ ಇಷ್ಟು ಚಂದ ಕಾಣ್ತೀನಾ! ಆಗ ಅವರಲ್ಲಿನ ಆ ಮುಗ್ಧ ಭಾವ ಸಂತೃಪ್ತಿಯ ಸಂತೋಷ ಕಂಡಾಗ ನನಗೆ ಉತ್ತರ ಸಿಗುತ್ತದೆ. ನನ್ನ ಶ್ರಮಕ್ಕೆ ಸಾರ್ಥಕತೆ ಲಭಿಸುತ್ತದೆ ಎನ್ನುತ್ತಾರೆ. ಹಾಗೇ ಫ್ಯಾಷನ್‌ ಶೋಗಳಲ್ಲಿ ಒಟ್ಟೊಟ್ಟಿಗೆ ಅಷ್ಟು ಮಾಡೆಲ್ಸ್ ಗೂ ಮೇಕಪ್‌ ಮಾಡುವುದರಲ್ಲೂ ಪರಿಣಿತರು. ಹಿರಿತೆರೆ ಹಾಗೂ ಕಿರುತೆರೆಗಳಲ್ಲಿ ಖ್ಯಾತನಾಮರಾದ ಮಜಾ ಟಾಕೀಸ್‌ ನ ರೆಮೋ, ಹರ್ಷಿಕಾ ಪೂಣಚ್ಚ, ಸೋನಿಕಾ ಗೌಡಾ ಹೀಗೇ ಹಲರಿಗೇ ಇವರೇ ಮೇಕಪ್‌ ಆರ್ಟಿಸ್ಟಚ್. ಆದಾಗ್ಯೂ ರಿಮೋ ಅವರ ಮೇಲೆ ವಿಶೇಷ ಅಭಿಮಾನ ಇವರಿಗೆ. ತಾವು ಬೆಳೆಯೋದರ ಜೊತೆಗೆ ತಮ್ಮೊಂದಿಗೆ ಇರುವವರನ್ನು ಬೆಳೆಸುವ ಸ್ವಭಾವ ರೆಮೋ ಮೇಡಂರವರದ್ದು. ಒಟ್ಟಿನಲ್ಲಿ ಮೇಕಪ್‌ ಪೂರ್ಣಗೊಂಡಾಗ ಅವರ ಖುಷಿಯಲ್ಲಿ ನನ್ನ ಖುಷಿ ಕಾಣೋದೇ ನನಗೆ ಖುಷಿ ಎನ್ನುತ್ತಾರೆ ಕೀರ್ತಿ ರಾವ್‌!

ಧನುರ್ಮಾಸ, ಆಶಾಢಮಾಸಗಳಲ್ಲಿ ಹೆಚ್ಚು ಕೆಲಸವಿರುವುದಿಲ್ಲ. ಆಗ ಸ್ವಲ್ಪ ವಿರಾಮದ ಸಮಯ. ಆ ಸಮಯದಲ್ಲಿ ಸರ್ಟಿಫಿಕೇಟ್‌ಕೋರ್ಸ್‌ ಗಳನ್ನು ಮಾಡುತ್ತಾರೆ. ಸೆಲ್ಫ್ ಗ್ರೂಮಿಂಗ್‌ (ನನಗೆ ನಾನು ಹೇಗೆ ತಯಾರಾಗೋದು) ಎಂಬುದರ ಬಗ್ಗೆ ವಿಶೇಷವಾಗಿ ತರಗತಿಗಳನ್ನು ತೆಗೆದುಕೊಳ್ಳುತ್ತಾರೆ. ಒಂದು ದಿನದ್ದು ಹಾಗೂ ಒಂದು ತಿಂಗಳ ಕೋರ್ಸ್‌ ಗಳಿವೆ. ಎಲ್ಲರಿಗೂ ಹೇಳಿಕೊಡು ನೀವು ನಿಮ್ಮ ಕಲಿಕಾ ಅವಧಿಯಲ್ಲಿ ಯಾರ ಮೇಲೆ ಟ್ರಯಲ್ ಮಾಡ್ತಿದ್ರಿ ಎಂದಾಗ ನಗುತ್ತಾ ನುಡಿದರು, ಅಮ್ಮ, ಅಕ್ಕ ಹಾಗೂ ಅಪಾರ ಸ್ನೇಹಿತೆಯರು.

ಇನ್‌ ಸ್ಟ್ರಾ ಗ್ರಾಮ್ ನಲ್ಲಿ ಆ್ಯಕ್ಟಿವ್ ‌ಆಗಿರುವ ಇವರಿಗೆ ಅತಿಯಾದ ಪ್ರಚಾರ ಸಿಗೋದು ಇಲ್ಲಿಂದಲೇ. ಇಷ್ಟೆಲ್ಲಾ ಇದ್ದರೂ ಟಿಕ್‌ ಟಾಕ್ ನಲ್ಲಿ ಬಹಳ ಆಸಕ್ತಿ. ಅತಿ ಹೆಚ್ಚು ಟಿಕ್‌ ಟಾಕ್‌ ಗಳಿಗೆ ಪ್ರತಿಕ್ರಿಯೆ ಬಂದಿದೆ. 2-3 ಮಿಲಿಯನ್ಸ್ ಸಾವಿರಗಟ್ಟಲೆ ಲೈಕ್ಸ್ ದೊರೆತಿರುವುದು ಖುಷಿಯ ಸಂಗತಿ. ರೆಮೋ, ಹರ್ಷಿಕಾ ಪೂಣಚ್ಚರವರಲ್ಲಿಯೂ ಟಿಕ್‌ ಟಾಕ್‌ ಮಾಡಿದ್ದಾರೆ.

ಇವರ ಸ್ಟುಡಿಯೋ ಬೆಂಗಳೂರಿನ ಶ್ರೀನಿವಾಸ ನಗರದಲ್ಲಿದೆ. ಸಂಪಾದನೆಗಿಂತ ಇದೊಂದು ನನ್ನ ಪ್ಯಾಷನ್‌ ಹಾಗೂ ಆಸಕ್ತಿ. ಹಾಗಂತ ಉಚಿತವಾಗೇನಿಲ್ಲ. ಏಕೆಂದರೆ ಉಪಯೋಗಿಸೋ ಎಲ್ಲಾ ಪ್ರಸಾಧನಗಳೂ ಹೊರದೇಶದ್ದು, ಅಷ್ಟೇ ದುಬಾರಿ. ಜೊತೆಗೆ ಅದನ್ನು ಬಳಸುವ ಪರಿಯೂ ಹಾಗೇ ಇರಬೇಕು.

ಒಟ್ಟಿನಲ್ಲಿ ಮದುವೆ ಆದಮೇಲೆ ಪತಿ ಶ್ರೀಧರ್‌ ರವರ ಪ್ರೋತ್ಸಾಹದಿಂದ ಈ ಕ್ಷೇತ್ರಕ್ಕೆ ಕಾಲಿಟ್ಟಿರುವರು. ತಾಯಿ ತಂದೆ, ಅತ್ತೆ ಮಾವನವರ ಬೆಂಬಲವಿದೆ. ಇವರ ಆಶೀರ್ವಾದದಿಂದ ಕರ್ನಾಟಕ ಚಿತ್ರ ರಸಿಕರ ಸಂಘದಿಂದ 2019ರ ಬೆಸ್ಟ್ ಮೇಕಪ್‌ ಆರ್ಟಿಸ್ಟ್ ಪ್ರಶಸ್ತಿ ಲಭಿಸಿದೆ. ಈ ಕ್ಷೇತ್ರದಲ್ಲಿ ಕಲಿಯುವ, ಬೆಳೆಯುವ ಆಸೆ ಬಹಳವಿದೆ. ಜೀವನದಲ್ಲಿ ಸಮಯ ಇದೆ. 3ನೇ ತರಗತಿ ಓದುತ್ತಿರುವ ಮಗ ಸಮರ್ಥನ ಬೆಳವಣಿಗೆಯೊಟ್ಟಿಗೆ ತಾವು ಈ ಕ್ಷೇತ್ರದಲ್ಲಿ ಬೆಳೆಯುವ ಆಸೆಯನ್ನು ವ್ಯಕ್ತಪಡಿಸಿದ್ದಾರೆ. ಇವರ ಭವಿಷ್ಯ ಉಜ್ವಲವಾಗಲಿ! ಗೃಹಶೋಭಾ ಪರವಾಗಿ ಆಲ್ ದಿ ಬೆಸ್ಟ್ ಕೀರ್ತಿ ರಾವ್‌!

ಸವಿತಾ ನಾಗೇಶ್

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ