ಕಥೆ ಹೇಳುವ ಕಲೆಗಾರಿಕೆಯಲ್ಲಿ ಖ್ಯಾತರಾದ ಪಾರ್ವತಿಯವರ ಪರಿಚಯ ಪಡೆಯೋಣವೇ?
ಕಥೆಗಳ ಬಗ್ಗೆ ಸೆಳೆತ
ಮಕ್ಕಳೆಲ್ಲಾ ಬಹಳ ಚಿಕ್ಕವರಿದ್ದಾಗ ಮನೆಯಲ್ಲಿ ಪ್ರೀತಿಯ ಅಜ್ಜಿ ಕಥೆ ಹೇಳುತ್ತಿದ್ದರು. ಅದೂ ಪುರಾಣದ ಕಥೆಗಳು. ಅಲ್ಲಿ ರಾಜ ರಾಣಿಯರು, ಯಕ್ಷಿಣಿಯರು, ದೇವತೆಗಳು, ರಾಕ್ಷಸರು ಎಲ್ಲರೂ ಇರುತ್ತಿದ್ದರು. ರಾತ್ರಿ ಮೂವರು ಸಹೋದರಿಯರಿಗೆ ಅಜ್ಜಿ ಬಹಳ ಸ್ವಾರಸ್ಯವಾಗಿ ಕಥೆ ಹೇಳುತ್ತಿದ್ದರು. ಮಕ್ಕಳು ಅಜ್ಜಿಯ ಮಡಿಲಲ್ಲಿ ಕುಳಿತು ಕಥೆ ಕೇಳುತ್ತಾ ಹಾಗೆಯೇ ನಿದ್ದೆಗೆ ಜಾರಿಬಿಡುತ್ತಿದ್ದರು. ಕಥೆ ಕೇಳಿಸಿಕೊಂಡೇ ಇವರು ಬೆಳೆದದ್ದು. ಬಹಳ ಚಿಕ್ಕಂದಿನಿಂದಲೂ ಇವರಿಗೆ ಓದುವ ಆಸೆ, ಬೆಳೆಯುತ್ತಾ ಅಪ್ಪ ಅಮ್ಮ ತೆಗೆಸಿಕೊಡುವ ಅಮರ ಚಿತ್ರಕಥಾ ಕಾಮಿಕ್ಸ್, ಮಕ್ಕಳ ಪತ್ರಿಕೆಗಳಾದ ಚಂದಮಾಮ, ಬಾಲಮಿತ್ರ, ಚಂಪಕ ಓದುವುದೆಂದರೆ ಬೆಲ್ಲವನ್ನು ಸವಿದಂತೆ! ಒಟ್ಟಾರೆ ಬಹಳ ಚಿಕ್ಕಂದಿನಿಂದಲೂ ಓದುವ ಚಪಲ, ಚಟವೆನ್ನಬಹುದು. ನಂತರ ಗ್ರಂಥಾಲಯಗಳ ಗೆಳೆತನ, ಪುಸ್ತಕಗಳು ಇವರ ಆತ್ಮೀಯ ಗೆಳೆಯರು.
ಬೆಳೆದಂತೆ ಅಪ್ಪ ಅಮ್ಮನ ಜೊತೆ ಚಲನಚಿತ್ರಗಳಿಗೆ ಹೋಗುತ್ತಿದ್ದರು. ಆ ಚಿತ್ರಗಳ ಕಥೆಯನ್ನು ಶಾಲೆಯಲ್ಲಿ ಗೆಳತಿಯರಿಗೆ ಸವಿವರವಾಗಿ ಹೇಳುತ್ತಿದ್ದರು. ಮನೆಯಲ್ಲಿ ಅಕ್ಕಂದಿರಿಗೆ ಹೇಳುತ್ತಿದ್ದರು.
ಜೀವವಿಮಾ ವಿಭಾಗ
ಇವರು ಭೌತಶಾಸ್ತ್ರದಲ್ಲಿ ಸ್ನಾತಕೋತ್ತರ ಪದವೀಧರೆ. ನಂತರ ಜೀವವಿಮಾ ವಿಭಾಗದಲ್ಲಿ ಆಫೀಸರ್ ಆಗಿ ಕೆಲಸಕ್ಕೆ ಸೇರಿಕೊಂಡರು. ಆದರೆ ಇವರಿಗೆ ಕಲಿಸುವುದೆಂದರೆ ಬಹಳ ಆಸೆ. ಕೆಲಸಕ್ಕೆ ಸೇರುವ ಮುಂಚೆ ಹೈಸ್ಕೂಲ್ ಮಕ್ಕಳಿಗೆ ಭೌತಶಾಸ್ತ್ರವನ್ನು ಕಲಿಸುತ್ತಿದ್ದರು. ಕಲಿಸುವಿಕೆ ಇವರ ಮೆಚ್ಚಿನ ಕೆಲಸವಾಗಿತ್ತು. ನಿರ್ವಹಿಸುತ್ತಿದ್ದ ಉದ್ಯೋಗದಲ್ಲಿ ಒಳ್ಳೆಯ ಹೆಸರು ಗಳಿಸಿದ್ದರು. ಆದರೆ ವೈಯಕ್ತಿಕ ಕಾರಣಗಳಿಂದಾಗಿ ಹುದ್ದೆಗೆ ರಾಜೀನಾಮೆ ಕೊಡಬೇಕಾಯಿತು. ಸ್ವಯಂ ನಿವೃತ್ತಿ ಪಡೆದರು. ಅಷ್ಟು ದಿನ ಬಿಡುವಿಲ್ಲದೆ ಕೆಲಸ ಮಾಡುತ್ತಿದ್ದ ಇವರಿಗೆ ಈಗೇನು ಮಾಡುವುದು ಎನ್ನುವ ಪ್ರಶ್ನೆ ಎದುರಾದಾಗ ಇವರ ಚಿಕ್ಕಂದಿನ ಒಲವು ಗರಿಗೆದರಿತು.
ಒಳಗಿನ ತುಡಿತ
ಒಳಗೆ ಇದ್ದ ತುಡಿತ ನಾನಿನ್ನು ಅದುಮಿಕೊಂಡಿರಲಾರೆ ಎಂದು ಹೊರಗೆ ಬಂದಿತು. ಆದರೆ ಚಿಕ್ಕಂದಿನಲ್ಲಿ ಅಮರ ಚಿತ್ರಕಥಾ ಕಾಮಿಕ್ಸ್ ಓದುವುದಲ್ಲದೆ ಮತ್ತೇನೂ ಗೊತ್ತಿರಲಿಲ್ಲ. ಉದ್ಯೋಗಸ್ಥ ತಾಯಿಯಾಗಿದ್ದ ಕಾರಣ ಮಕ್ಕಳಿಗೆ ಕಥೆ ಹೇಳಿಯೂ ಅಭ್ಯಾಸವಿರಲಿಲ್ಲ. ಆದರೂ ಅಜ್ಜಿಯ ಹೋಲಿಕೆ ಇರಬಹುದು ಅಥವಾ ಪ್ರೇರಣೆ ಇರಬಹುದು, ಅವರಲ್ಲಿದ್ದ ಸುಪ್ತ ಆಸೆ ಹೊರ ಬಂದಿತು.
ಅವರಿಗೆ ಹೇಳಲು ಇಷ್ಟ, ಆದರೆ ಅದರ ಬಗ್ಗೆ ಸ್ಪಷ್ಟ ಚಿತ್ರಣ ಇರಲಿಲ್ಲ. ಆಗ ಕಥಾಲಯದ ಬಗ್ಗೆ ತಿಳಿದುಬಂದಿತು. ಅಲ್ಲಿ ಕಲಿತು ಶಾಲೆಗಳಲ್ಲಿ, ಗ್ರಂಥಾಲಯಗಳಲ್ಲಿ, ಹುಟ್ಟುಹಬ್ಬದ ಸಮಾರಂಭಗಳಲ್ಲಿ ಕಥೆ ಹೇಳಲು ಪ್ರಾರಂಭಿಸಿದರು.
ಕಥೆ ಕಥೆ ಕಾರಣ
ಈಗ ಅವರೊಬ್ಬ ಹ್ಯಾಸಿ ಕಥೆಗಾರ್ತಿ! ಆಶಾ ಇನ್ಛಿನೈಟ್ ಸಂಸ್ಥೆಯ ಸದಸ್ಯೆ. ಆ ಸಂಸ್ಥೆ ಹೇಳಿಕೊಡು ಸರ್ಕಾರಿ ಶಾಲೆಯ ಮಕ್ಕಳಿಗೆ ಇಂಗ್ಲಿಷ್ ಪಾಠವನ್ನು ಕಥೆಗಳ ಮೂಲಕ ಹೇಳಿಕೊಡುವ ವಿಧಾನವನ್ನು ಮೂಡಿಸಿದ್ದಲ್ಲದೆ, ಅಲ್ಲಿಯ ಮಕ್ಕಳಿಗೆ ಪಾಠ ಹೇಳಿಕೊಡುವುದರಲ್ಲಿಯೂ ಸಹಕರಿಸಿದ್ದಾರೆ. ಈ ಕಥೆಯ ನಾಯಕಿ ಪಾರ್ವತಿ ಈಶ್ವರನ್ ರವರ ಪ್ರಕಾರ ಕಥೆ ಹೇಳುವ ಕಲೆಯಿಂದ ಭಾಷಣ ಕಲೆಯೂ ವರ್ಧಿಸುತ್ತದೆ. ಕಥೆ ಎಲ್ಲರ ಜೀವನದಲ್ಲಿಯೂ ಬಹಳ ಮುಖ್ಯ. ಅದರಲ್ಲಿಯೂ ಮಕ್ಕಳಿಗಂತೂ ಇನ್ನೂ ಸಹಾಯಕ. ಮಕ್ಕಳಲ್ಲಿನ ಪ್ರತಿಭೆ ಹೆಚ್ಚಾಗಿ ಬೆಳೆಯುತ್ತದೆ.
ಯುವ ಜನಾಂಗಕ್ಕೂ ತಮ್ಮ ಉದ್ಯೋಗ ಕ್ಷೇತ್ರದಲ್ಲಿ ಸ್ವಾರಸ್ಯಕರವಾಗಿ ಹೇಳುವ ರೀತಿಯಿಂದ ವ್ಯಾಪಾರ ವ್ಯವಹಾರಗಳಲ್ಲೂ ಜನರ ಮನಸ್ಸನ್ನು ಗೆಲ್ಲಲು ಸಾಧ್ಯ. ಕಥೆ ಹೇಳುವ ಕಲೆ ಪ್ರತಿಯೊಬ್ಬರ ಜೀವನದಲ್ಲಿ ಬಹಳ ಮುಖ್ಯ. ಇದಕ್ಕೆ ವಯಸ್ಸಿನ ಮಿತಿ ಇಲ್ಲ. ನೀವು ಹೇಳುವುದನ್ನು ಕೇಳುಗರ ಮನಮುಟ್ಟುವಂತೆ ಹೇಳುವುದು ಬಹಳ ಮುಖ್ಯವಾಗುತ್ತದೆ. ಮನಸ್ಸಿನಲ್ಲಿರುವುದನ್ನು ಸರಿಯಾದ ರೀತಿಯಲ್ಲಿ ವ್ಯಕ್ತಪಡಿಸುವುದೂ ಒಂದು ಕಲೆಯೇ. ಒಟ್ಟಾರೆ ಮಕ್ಕಳಿಂದ ಹಿಡಿದು ಯುವಕರು, ಮುದುಕರವರೆಗೂ ಕಥೆ ಬಹಳ ಮುಖ್ಯ ಪಾತ್ರ ವಹಿಸುತ್ತದೆ.
ಕಥೆ ಮತ್ತು ಅಭಿನಯ
ಪಾರ್ವತಿ ನಿಜಕ್ಕೂ ಅಭಿನಯ ಚತುರೆ. ಅವರು ಕಥೆ ಹೇಳುತ್ತಿದ್ದರೆ ಆ ಪಾತ್ರವೇ ನಮ್ಮ ಕಣ್ಮುಂದೆ ಬಂದು ನಿಲ್ಲುತ್ತದೆ. ಕೇಳುಗರ ಗಮನ ಸೆಳೆಯುವುದರಲ್ಲಿ ಅವರು ನಿಷ್ಣಾತರು. ಕಥೆ ಹೇಳುವ ಕಲೆ ಅವರಿಗೆ ಬಹಳ ಚೆನ್ನಾಗಿ ಸಾಧಿಸಿದೆ. ಮಕ್ಕಳಿಂದ ಹಿರಿಯರವರೆಗೂ, ಅವರು ಎಲ್ಲರ ಗಮನ ಸೆಳೆಯಬಲ್ಲರು. ಇಂತಹ ಪ್ರತಿಭೆ ನಿಜಕ್ಕೂ ಅಪರೂಪವೇ ಸರಿ. ಕಥೆ ಹೇಳುವಾಗ ಅವರ ತನ್ಮಯತೆ. ಪಾತ್ರ ತಲ್ಲೀನತೆ ನಮ್ಮನ್ನು ಹೊಸ ಲೋಕಕ್ಕೆ ಕರೆದೊಯ್ಯುತ್ತದೆ. ಮಕ್ಕಳಿಗಂತೂ ಇವರಿಂದ ಕಥೆ ಕೇಳುವುದು ಬೆಲ್ಲವನ್ನು ಸವಿದಂತೆ. ಬರಿಯ ಅಭಿನಯವಷ್ಟೇ ಅಲ್ಲ, ಇವರು ಕಥೆಗೆ ಅಗತ್ಯವಾದ ಪ್ರಾಪ್ ಗಳನ್ನೂ ಸಹ ಉಪಯೋಗಿಸುತ್ತಾರೆ. ಇವರ ಧ್ವನಿ ಮತ್ತು ಧ್ವನಿಯ ಬದಲಾವಣೆ ನಿಜಕ್ಕೂ ಆಶ್ಚರ್ಯ ಮೂಡಿಸುತ್ತದೆ. ಒಮ್ಮೆ ಇವರು ಹೇಳುವ ಕಥೆಯನ್ನು ಖಂಡಿತ ಎಲ್ಲರೂ ಕೇಳಲೇ ಬೇಕು!
– ಮಂಜುಳಾ ರಾಜ್