ನಾತಿಚರಾಮಿ’ ಚಿತ್ರದ `ಮಾಯಾವಿ ಮೌನವೇ……’ ಹಾಡಿಗಾಗಿ ರಾಷ್ಟ್ರ ಪ್ರಶಸ್ತಿ ಪಡೆದುಕೊಂಡಿರುವ ಗಾಯಕಿ, ಸಂಗೀತ ಸಂಯೋಜಕಿ ಬಿಂದು ಮಾಲಿನಿ ಅವರಿಗೆ ಶುಭಕೋರುತ್ತಾ ಅವರೊಂದಿಗೆ ಒಂದಿಷ್ಟು ಮಾತುಕಥೆ.

“ನನಗೆ ರಾಷ್ಟ್ರ ಪ್ರಶಸ್ತಿ ಸಿಕ್ಕಾಗ ನಾನೇ ಸಂಯೋಜಕಿಯಾಗಿ, ಗಾಯಕಿಯಾಗಿ ಪಡೆದಂಥ ಪ್ರಶಸ್ತಿ ಎನ್ನುವುದರ ಬಗ್ಗೆ ತುಂಬಾ ಹೆಮ್ಮೆ ಇದೆ!” ಎನ್ನುವ ಬಿಂದು ಕಲಾವಿದರ ಕುಟುಂಬದಲ್ಲಿ ಜನಿಸಿದ ಚೆನ್ನೈ ಮೂಲದವರು.

ಮನೆಯವರೆಲ್ಲ ಕಲಾವಿದರು. ಅಜ್ಜಿ ಜಲತರಂಗ್‌ ನುಡಿಸುವ ಕೆಲವೇ ಕೆಲವು ಮಹಿಳಾ ಕಲಾವಿದರಲ್ಲಿ ಒಬ್ಬರಾಗಿದ್ದರಂತೆ.

“ನನ್ನ ಅಮ್ಮ ವಿಶಾಲಾಕ್ಷಿ ಆಲ್ ಇಂಡಿಯಾ ರೇಡಿಯೋದಲ್ಲಿ ಕರ್ನಾಟಕ ಪ್ರಕಾರದಲ್ಲಿ ನಿಲಯದ ಕಲಾವಿದೆಯಾಗಿದ್ದರು. ನನ್ನ ಆಂಟಿ ಭರತನಾಟ್ಯ ಕಲಾವಿದೆ. ಚಿಕ್ಕಪ್ಪ ಮೃದುಂಗ ವಾದಕರು. ನಾನು ಬೆಳೆದದ್ದು ಕಲಾವಿದರ ವಾತಾವರಣದರಲ್ಲಿ…. ಹಾಗಾಗಿ ಆಸಕ್ತಿ ಬೆಳೆಯಿತು,” ಎಂದು ಹೇಳುವ ಬಿಂದು ಕೂಡ ಅಪರೂಪದ ಕಲಾವಿದೆ.

ಲಲಿತಕಲೆಯಲ್ಲಿ ಪದವೀಧರೆ. ವಿಶುವಲ್ ‌ಕಮ್ಯೂನಿಕೇಶನ್‌ ನಲ್ಲಿ ಎಂ.ಎ. ಅಹಮದಾಬಾದ್‌ ನ್ಯಾಷನಲ್ ಇನ್ಸ್ ಟಿಟ್ಯೂಟ್‌ ಆಫ್ ಡಿಸೈನ್‌ನಲ್ಲಿ ಗ್ರಾಫಿಕ್ಸ್ ಡಿಸೈನ್‌ ಪದವಿ ಪಡೆದುಕೊಂಡಿದ್ದಾರೆ.

ಒಟ್ಟಿನಲ್ಲಿ ಎಲ್ಲ ಕ್ಷೇತ್ರಗಳಲ್ಲೂ ತಮ್ಮನ್ನು ತಾವು ತೊಡಗಿಸಿಕೊಂಡಿರುವ ಬಿಂದು ಚಿಕ್ಕ ವಯಸ್ಸಿನಲ್ಲೇ ಸಂಗೀತ ನೃತ್ಯ ರೂಢಿಸಿಕೊಂಡು ಬಂದಿರುವ ಪ್ರತಿಭೆ.

ಸಂಗೀತದಲ್ಲಿ ಅಪಾರ ಆಸಕ್ತಿ ಹುಟ್ಟಿಕೊಂಡಾಗ ಇವರು ಮಾಡಿದ ಮೊದಲ ಕೆಲಸ ಏನು ಗೊತ್ತೇ…..?

“ಹಿಂದೂಸ್ಥಾನಿ ಸಂಗೀತ ನನ್ನನ್ನು ಅಪಾರವಾಗಿ ಸೆಳೆದಿತ್ತು. ಹಾಗಾಗಿ ಗುರುಗಳ ಹುಡುಕಾಟ ಶುರುವಾಯಿತು. ಪ್ರಾರಂಭದಲ್ಲಿ ಯಾರೂ ಸಿಗಲಿಲ್ಲ. ಒಳ್ಳೆಯ ಗುರು ಸಿಗುವವರೆಗೂ ಕಲಿಯುವುದಿಲ್ಲ ಅಂದುಕೊಂಡಿದ್ದೆ. ಕಡೆಗೂ ಸಿಕ್ಕಿದರು. “ಕೋಲ್ಕತಾದಲ್ಲಿ ಹಿರಿಯ ಕಲಾವಿದರಾದ ಉಸ್ತಾದ್‌ ಅಬ್ದುಲ್ ‌ರಶೀದ್‌ ಖಾನ್‌ ರವರ ಬಳಿ ಶಿಷ್ಯೆಯಾಗಿ ಸೇರಿಕೊಂಡ ಮೇಲೆ ನಾನು ಹೊಸ ಬದುಕನ್ನೇ ಕಂಡುಕೊಂಡೆ,” ಹೀಗೆ ಹೇಳುವ ಬಿಂದು ಮಾಲಿನಿ ಸಾಕಷ್ಟು ಮ್ಯೂಸಿಕ್‌ ಆಲ್ಬಂ ತಂದಿದ್ದಾರೆ. ಕಬೀರ್‌ ಉತ್ಸವದಲ್ಲಿ ಅಕ್ಕಮಹಾದೇವಿಯ ವಚನಗಳನ್ನು ಹಾಡಲು ಸಿದ್ಧತೆ ನಡೆಸಿದ್ದಾರೆ.

ಬಿಂದು ಮಾಲಿನಿ ಎಂಬ ಹೆಸರಿನಲ್ಲಿಯೇ ಸಂಗೀತದ ಸೌಂದರ್ಯವಿದೆ. ಇವರ ಕಲಿಕೆಯ ವಿಸ್ತಾರ ದೊಡ್ಡದು. ಚಿತ್ರಕಲೆ, ನೃತ್ಯ, ಸಂಗೀತ, ಭರತನಾಟ್ಯ ಕಳರಿಪಟ್ಟು, ರಂಗಭೂಮಿ, ಗ್ರಾಫಿಕ್ಸ್ ಡಿಸೈನ್ಸ್….. ಇಷ್ಟೆಲ್ಲಾ ಕರಗತವಾಗಿ ಕಲಿತಿದ್ದರೂ ಮನಸ್ಸು ಮಾತ್ರ ಸಂಗೀತದತ್ತಲೇ ವ್ಯಾಪಿಸಿರುತ್ತದೆ ಎಂಬುದು ಇವರ ಮಾತುಗಳಿಂದ ಸ್ಪಷ್ಟವಾಗುತ್ತದೆ.

ಪ್ರಾರಂಭದಲ್ಲಿ ಸಂಗೀತ ಅವರೊಳಗಿದ್ದರೂ ಆ ಕ್ಷೇತ್ರದಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳಲು ಮನಸ್ಸು ಒಪ್ಪಿರಲಿಲ್ಲ. ಎಲ್ಲವನ್ನೂ ಮಾಡಬೇಕೆಂಬ ಹಂಬಲದಲ್ಲಿ ಒಂದು ಕ್ಷೇತ್ರಕ್ಕೆ ಮನಸ್ಸು ಸೀಮಿತವಾಗಿರಲಿಲ್ಲ. ಹಾಗಾಗಿ ಕರ್ನಾಟಕ ಸಂಗೀತದಲ್ಲಿ ಆಸಕ್ತಿ ಕಡಿಮೆಯಾದರೂ ಇಷ್ಟಪಡುವುದು ಕಡಿಮೆಯಾಗಿಲ್ಲವಂತೆ. ಆದರೆ ಒಲವು ಮಾತ್ರ ಹಿಂದೂಸ್ಥಾನಿ ಸಂಗೀತದತ್ತ ಹೆಚ್ಚು ವಾಲಿತಂತೆ.

ದ.ರಾ. ಬೇಂದ್ರೆ, ಶರೀಫ್‌, ಬಸಣ್ಣ ಇವರ ವಚನ ಗೀತೆಗಳಿಗೆ ಸಂಗೀತ ಸಂಯೋಜಿಸಬೇಕೆಂಬ ಆಸೆಯಂತೆ.

ಇವರು ಸಂಗೀತ ಸಂಯೋಜಿಸಿದ್ದ ತಮಿಳಿನ `ಅರುವಿ’ ಚಿತ್ರದ ಹಾಡುಗಳು ಸಾಕಷ್ಟು ಜನಪ್ರಿಯಗೊಂಡಿವೆ.

ಹೊಸತನದಿಂದ ರೂಪುಗೊಂಡ ರಾಷ್ಟ್ರಪ್ರಶಸ್ತಿ ಪಡೆದಿರುವ `ನಾತಿಚರಾಮಿ’ ಚಿತ್ರ ಬಿಂದುಮಾಲಿನಿ ಸಂಗೀತ ಸ್ಪರ್ಶದಿಂದ ಹೊಸ ರೂಪ ಪಡೆಯಿತು ಎಂದೇ ಹೇಳಬಹುದು.

ಕನ್ನಡ ಸಿನಿಮಾರಂಗ ಇಂತಹ ಪ್ರತಿಭೆಯನ್ನು ಹೆಚ್ಚು ಹೆಚ್ಚು ಬಳಸಿಕೊಳ್ಳಲಿ ಎಂದು ಆಶಿಸೋಣ. ಆಲ್ ದಿ ಬೆಸ್ಟ್ ಬಿಂದು ಮಾಲಿನಿ!

ಸರಸ್ವತಿ

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ