ಫೆಮಿನಾ ಮಿಸ್ ಇಂಡಿಯಾ ಸೌಂದರ್ಯ ಸ್ಪರ್ಧೆಯಲ್ಲಿ ಸೈ ಎನಿಸಿಕೊಂಡಿರುವ ರೋಶಿನಿ, ಪರಭಾಷೆಗಳಲ್ಲಿ ಮೊದಲು ಎಂಟ್ರಿ ಪಡೆದು ನಂತರ ತವರಿಗೆ ಮರಳಿದ ಅಪ್ಪಟ ಕನ್ನಡತಿ. ಈಕೆ ಟೈಗರ್ ಗಲ್ಲಿ, ಕವಲು ದಾರಿ ಚಿತ್ರಗಳ ನಂತರ ಯಶಸ್ಸಿನ ಹಾದಿ ಹಿಡಿದಿದ್ದಾಳೆ. ಉಳಿದ ವಿವರಗಳನ್ನು ಅವಳಿಂದಲೇ ಕೇಳೋಣವೇ?
ರೋಶಿನಿ ಪ್ರಕಾಶ್ ಫೆಮಿನಾ ಮಿಸ್ ಇಂಡಿಯಾ ರನ್ನರ್ ಅಪ್, ಎಂಜಿನಿಯರಿಂಗ್ ಪದವೀಧರೆ, ಪರಭಾಷೆಗಳಲ್ಲಿ ನಟಿಸಿರುವ ಹೆಗ್ಗಳಿಕೆ. ದುನಿಯಾ ಸುತ್ತಿ ಬಂದರೂ ರೋಶಿನಿಗೆ ಮೈಸೂರೇ ಅಂದಚೆಂದವಂತೆ.
ಪುಟ್ಟ ಹುಡುಗಿಯಾಗಿದ್ದಾಗಲೇ ತಾನೊಬ್ಬ ತಾರೆಯಾಗಬೇಕೆಂದು ಕನಸು ಕಂಡಿದ್ದಳಂತೆ. ರೋಶಿನಿ ಜೆಸಿಸಿಯಲ್ಲಿ ಎಂಜಿನಿಯರಿಂಗ್ ಫೈನಲ್ ಇಯರ್ ಇರುವಾಗಲೇ ಮಿಸ್ ಇಂಡಿಯಾ ಸ್ಪರ್ಧೆಯಲ್ಲಿ ಭಾಗವಹಿಸಿ ರನ್ನರ್ ಅಪ್ ಆದಳು. ಆಗಲೇ ಸಿನಿಮಾ ಆಫರ್ ಬರಲು ಶುರುವಾಯಿತು. ತೆಲುಗು `ಸಪ್ತಗಿರಿ ಎಕ್ಸ್ ಪ್ರೆಸ್' ಚಿತ್ರದ ಆಫರ್ ಬಂದಾಗ ಅದೇ ಸಮಯಕ್ಕೆ ಆಸ್ಚ್ರೇಲಿಯಾದಲ್ಲಿ ಒಳ್ಳೆಯ ಜಾಬ್ ಸಿಕ್ಕಿತ್ತಾದರೂ ಸಿನಿಮಾ ಆಫರ್ ಒಪ್ಪಿಕೊಂಡಾಗ ಅಪ್ಪ ಅಮ್ಮ ಇಬ್ಬರೂ ಗ್ರೀನ್ ಸಿಗ್ನಲ್ ಕೊಟ್ಟಿದ್ದರಂತೆ. ಎರಡನೇ ಸಿನಿಮಾ `ಟೈಗರ್ ಗಲ್ಲಿ' ನಂತರ `ಕವಲು ದಾರಿ' ಚಿತ್ರ ನಟನಾ ವೃತ್ತಿಗೆ ಹೊಸ ತಿರುವು ತಂದುಕೊಟ್ಟಿತು ಎನ್ನುತ್ತಾಳೆ ರೋಶಿನಿ ಪ್ರಕಾಶ್.
`ಕವಲು ದಾರಿ' ಪುನೀತ್ ರಾಜ್ ಕುಮಾರ್ ಬ್ಯಾನರಿನ ಚಿತ್ರವಾಗಿತ್ತು. ಮಿಡಲ್ ಕ್ಲಾಸ್ ಹುಡುಗಿ ಪಾತ್ರ ಮಾಡಿದ್ದ ರೋಶಿನಿ ಬಹಳ ಸಹಜವಾಗಿ ಆ ಪಾತ್ರ ನಿರ್ವಹಿಸಿದ್ದಳು. ನನ್ನ ಎರಡನೇ ಸಿನಿಮಾ ಪುನೀತ್ ರಾಜ್ ಕುಮಾರ್ ಅವರ ಪ್ರೊಡಕ್ಷನ್ಸ್ ಎಂಬ ಸಂತೋಷ ತಂದಿದೆ. ಅವರ ಮನೆ ಬ್ಯಾನರ್ ನಲ್ಲಿ ಪರಿಚಿತರಾದ ರಕ್ಷಿತಾ, ರಮ್ಯಾ, ಜನಪ್ರಿಯ ತಾರೆಗಳಾಗಿ ಮೆರೆದರು. ನನಗೂ ಅಂತಹ ಅದೃಷ್ಟ ಒದಗಿ ಬರಬಹುದೇನೋ? ಲುಕ್ಸ್, ಲಕ್ ಒಂದೇ ಅಲ್ಲ...... ಅವರಂತೆ ಒಳ್ಳೆಯ ನಟಿಯರೆನಿಸಿಕೊಳ್ಳಬೇಕಿದೆ ಎನ್ನುತ್ತಾಳೆ ರೋಶಿನಿ.
ಕವಲು ದಾರಿ ನಿರ್ದೇಶಕ ಹೇಮಂತ್ ರಾವ್ ಕೂಡ ಆಡಿಶನ್ ಮಾಡುವಾಗ ರೋಶಿನಿ ತುಂಬಾ ಚೆನ್ನಾಗಿ ನಟಿಸಿದ್ದಳು. ಪಾತ್ರಕ್ಕೆ ಸೂಟ್ ಆಗ್ತಾಳೆ ಎಂದು ಸಂದರ್ಶನವೊಂದರಲ್ಲಿ ಹೇಳಿರೋದುಂಟು.
ಸದ್ಯಕ್ಕೆ ತಮಿಳು, ತೆಲುಗು ಚಿತ್ರಗಳಲ್ಲಿ ನಟಿಸುತ್ತಿರುವ ರೋಶಿನಿ `ಕವಲು ದಾರಿ' ನಂತರ ಹೊಸದೊಂದು ಕನ್ನಡ ಚಿತ್ರದಲ್ಲಿದ್ದಾಳೆ. ಆದರೆ ನಿರ್ದೇಶಕರು ಹೇಳುವವರೆಗೆ ಅದರ ಹೆಸರನ್ನು ಗೌಪ್ಯವಾಗಿಡಬೇಕಂತೆ. ಇಷ್ಟರಲ್ಲಿ ಅವರೇ ಅನೌನ್ಸ್ ಮಾಡಲಿದ್ದಾರಂತೆ. ಈ ಮಧ್ಯೆ `ಜೋಡಿ' ಎನ್ನುವ ತಮಿಳು ಚಿತ್ರದಲ್ಲಿ ನಟಿಸಿ ಬಂದಿರುವ ರೋಶಿನಿ ನನಗೆ ಗ್ಲಾಮರಸ್ ಪಾತ್ರಕ್ಕಿಂತ ಕಂಟೆಂಟ್ ಓರಿಯೆಂಟೆಡ್ ಸಿನಿಮಾಗಳಲ್ಲಿ ನಟಿಸಲು ಇಷ್ಟ ಎನ್ನುತ್ತಾಳೆ. ಅದರಲ್ಲೂ ಮಹಿಳಾ ಪ್ರಧಾನ ಚಿತ್ರಗಳು ಹೆಚ್ಚು ಇಷ್ಟವಂತೆ.
ನಾವು ಯಾವುದೇ ಪಾತ್ರ ಮಾಡಿದರೂ ಪ್ರೇಕ್ಷಕರ ನೆನಪಿನಲ್ಲಿ ಬಹಳ ವರ್ಷಗಳ ಕಾಲ ಉಳಿಯಬೇಕು ಎನ್ನುವ ರೋಶಿನಿ ಇಷ್ಟಪಡುವ ಕಲಾವಿದೆ ಎಂದರೆ ಉಮಾಶ್ರೀ. ಯಾವ ನಟಿಯೇ ಆಗಿರಲಿ, ಅವರು ನಿರ್ವಹಿಸಿದ ಪಾತ್ರ ಇಷ್ಟವಾದರೆ ಅವರೂ ಇಷ್ಟವಾಗುತ್ತಾರೆ ಎನ್ನುತ್ತಾಳೆ ರೋಶಿನಿ. ನಿನಗೆ ಎಂಥ ಪಾತ್ರ ಇಷ್ಟ. ಒಂದಲ್ಲ ಎರಡಲ್ಲ ನೂರಾರು ಡ್ರೀಮ್ ರೋಲ್ಸ್ ಇವೆ. ಯಾವುದೇ ರೋಲ್ ಇಷ್ಟವಾದರೆ ಡೈರಿಯಲ್ಲಿ ಬರೆದಿಡುತ್ತೇನೆ. ರಾಜಕಾರಣಿ ಪಾತ್ರ, ಬಾಕ್ಸರ್ ಕುರಿತಾದ ಬಯೋಪಿಕ್ ಹೀಗೆ ಲಿಸ್ಟ್ ನಲ್ಲಿ ಬೇಕಾದಷ್ಟಿವೆ.