ವಂಶ ಮುಂದುವರಿಯಲು ನಿಸರ್ಗ ತನಗೆ ಗಂಡುಮಗು ಕರುಣಿಸಲಿಲ್ಲ, ಹೆಣ್ಣುಮಗುವನ್ನಷ್ಟೇ ನೀಡಿತು ಎಂಬ ಬಗ್ಗೆ ಶಿವರಾಮ್ ಅವರಿಗೆ ಎಳ್ಳಷ್ಟೂ ಖೇದವಿರಲಿಲ್ಲ. ಮಗಳು ಇಲ್ಲಿ ಮಗ, ಆಗಿರಬಹುದು. ಎಲ್ಲರೂ ತಮ್ಮ ತಮ್ಮ ಅದೃಷ್ಟ ಹೊತ್ತುಕೊಂಡೇ ಭೂಮಿಗೆ ಬಂದಿರುತ್ತಾರೆ. ಇಬ್ಬರಲ್ಲೂ ಭೇದಭಾವ ಮಾಡುವುದನ್ನು ಅವರು ಪಾಪ ಎಂದೇ ಭಾವಿಸುತ್ತಿದ್ದರು. ಆದರೆ ಅವರ ಹೆಂಡತಿ ವನಜಾಕ್ಷಿಗೆ ಮಾತ್ರ ಪುತ್ರನ ಅಪೇಕ್ಷೆಯ ಕನಸು ನನಸಾಗದೇ ಹೋಗಿತ್ತು. ಹೀಗಾಗಿ ಅವರು ಬಾಲ್ಯದಿಂದಲೇ ಮಗಳನ್ನು ಮಗನೆಂಬಂತೆ ಬೆಳೆಸತೊಡಗಿದರು. ವಿಷಯ ಇಷ್ಟೇ ಆಗಿದ್ದರೆ ಏನೂ ತೊಂದರೆಯಾಗುತ್ತಿರಲಿಲ್ಲ. ಆದರೆ ಅವರು ತಮ್ಮ ಅತಿಯಾದ ಪ್ರೀತಿಯಿಂದ ಮಗಳನ್ನು ಹಾಳುಗೆಡವತೊಡಗಿದ್ದರು. ಈ ಕಾರಣದಿಂದ ಆಕೆ ಅಮ್ಮನ ಹಾಗೆ ಮುಂಗೋಪಿ ಹಾಗೂ ಹಠಮಾರಿ ಸ್ವಭಾವದವಳಾಗತೊಡಗಿದ್ದಳು. ಮಗಳ ಈ ಸ್ವಭಾವದ ಕಾರಣದಿಂದ ಆಕೆ ಬಹು ಬೇಗ ಸ್ನೇಹಿತರ ವಲಯದಲ್ಲಿ ಕುಖ್ಯಾತಿ ಪಡೆಯಬಹುದು ಎಂದು ತಂದೆ ಶಿವರಾಮ್ ಅವರಿಗೆ ಸದಾ ಅನಿಸುತ್ತಿತ್ತು. ಪತ್ನಿಗೆ ಈ ಬಗ್ಗೆ ಅದೆಷ್ಟೋ ಬಾರಿ ತಿಳಿಸಿ ಹೇಳಿದರೂ ಅದು ಹೊಳೇಲಿ ಹುಣಿಸೆಹಣ್ಣು ತೊಳೆದಂತೆ ಆಯಿತು.

ಶಿವರಾಮ್ ಅವರ ಸಂದೇಹ ನಿರಾಧಾರವಾಗಿಯೇನೂ ಉಳಿಯಲಿಲ್ಲ. ಸುನೀತಾ ಪ್ರಾಥಮಿಕ ಶಾಲೆಯಲ್ಲಿ ಓದುತ್ತಿರುವಾಗಲೇ ಕಾಲೋನಿಯಿಂದ ತಕರಾರುಗಳು ಕೇಳಿ ಬರಲಾರಂಭಿಸಿದ್ದವು. ಸ್ಕೂಲ್ ‌ಬಸ್‌ ನಲ್ಲಿ ತನ್ನ ಸೀಟಿನಲ್ಲಿ ಬೇರೆ ಯಾರೋ ಕುಳಿತಿರುವುದನ್ನು ಸಹಿಸಿಕೊಳ್ಳುವುದು ಆಕೆಯ ಸ್ವಭಾದಲ್ಲೇ ಬಂದಿರಲಿಲ್ಲ. ಹೆಚ್ಚಿನ ಮಕ್ಕಳು ಆಕೆಯಿಂದ ದೂರ ದೂರವೇ ಇರಲು ಪ್ರಯತ್ನಿಸುತ್ತಿದ್ದರು. ಯಾರಾದರೊಬ್ಬರು ಆಕೆಗೆ ಸ್ನೇಹಿತರಾದರೆ, ಅವಳ ಕಠೋರ ಸ್ವಭಾವದ ಕಾರಣದಿಂದ ಅವರ ಸ್ನೇಹ ಬಹುಬೇಗ ತುಂಡರಿಸುತಿತ್ತು. ಅವಳು ಅಭ್ಯಾಸ ಮಾಡುವುದರಲ್ಲಿ ಮುಂದೆ ಇದ್ದಳು. ಆದರೆ ಮುಂಗೋಪಿತನದಿಂದಾಗಿ ಎಲ್ಲರಿಗೂ ಆಕೆ ಜಗಳಗಂಟಿ ಎನಿಸಿಕೊಂಡಿದ್ದಳು. ಎಷ್ಟೋ ಸಲ ಶಿಕ್ಷಕರು ಅವಳಿಗೆ ದಂಡ ಕೂಡ ವಿಧಿಸುತ್ತಿದ್ದರು. ಆದರೆ ಅವಳ ಟೀಚರ್‌ ಗೂ ಕೂಡ ಆಕೆಯ ಸ್ವಭಾವ ಬದಲಿಸಲು ಆಗಿರಲಿಲ್ಲ.

ಕಾಲೇಜಿನಲ್ಲಿ ಪ್ರವೇಶ ಪಡೆಯುತ್ತಿದ್ದಂತೆಯೇ ಸುನೀತಾಗೆ ಕೀಳರಿಮೆ ಎನಿಸಲಾರಂಭಿಸಿತು. ಅವಳಿಗೆ ಬೋರ್ಡ್‌ ಪರೀಕ್ಷೆಯಲ್ಲಿ ಶೇ.90ರಷ್ಟು ಅಂಕಗಳು ಬಂದಿದ್ದ. ಆದರೆ ಆಕೆಯ ಕ್ಲಾಸ್‌ ನಲ್ಲಿ ಅವಳನ್ನು ಮೀರಿಸುವ ಅನೇಕ ವಿದ್ಯಾರ್ಥಿಗಳು ಇದ್ದರು.  ಕೆಲವರಂತೂ ಶೇ.97ಕ್ಕೂ ಹೆಚ್ಚು ಅಂಕ ಪಡೆದಿದ್ದರು. ಅಂತಹ ವಿದ್ಯಾರ್ಥಿಗಳು ಸಾಕಷ್ಟು ಸ್ಮಾರ್ಟ್‌ ಪ್ರತಿಭಾನ್ವಿತರು ಆಗಿರುವುದರ ಜೊತೆಗೆ ಬೇರೆಯವರೊಂದಿಗೆ ಬೆರೆಯುವ ಸ್ವಭಾವದರಾಗಿದ್ದರು. ಆ ಹುಡುಗ ಹುಡುಗಿಯರು ಭೇದಭಾವ ಮಾಡದೆ ಎಲ್ಲರೊಂದಿಗೆ ಸಹಜ ಹಾಗೂ ಸ್ನೇಹಭಾವದಿಂದ ಇರುತ್ತಿದ್ದರು. ಇದರಿಂದಾಗಿ ಸುನೀತಾಗೆ ಬಹಳ ಸಿಡಿಮಿಡಿ ಉಂಟಾಗುತ್ತಿತ್ತು. ಕಾಲೇಜು ಶುರುವಾದ ಬಳಿಕ ಮೊದಲ ವಾರದಲ್ಲಿಯೇ ಕೆಲವು ಹುಡುಗರು ಯಾವುದೊ ನೆಪದಲ್ಲಿ ಸುನೀತಾಳೊಂದಿಗೆ ನಿಕಟತೆ ಬೆಳೆಸಿಕೊಳ್ಳಲು ಪ್ರಯತ್ನಿಸಿದಾಗ, ಸುನೀತಾ ಅವರನ್ನು ಛೀಮಾರಿ ಹಾಕಿ ದೂರ ಓಡಿಸಿದ್ದಳು. ಜೊತೆಗೆ ರಾಗಿಂಗ್‌ ಆರೋಪ ಹೊರಿಸಿ ದೂರು ನೀಡುವುದಾಗಿ ಬೆದರಿಕೆ ಕೂಡ ಹಾಕಿದ್ದಳು. ದೂರು ಕೊಟ್ಟರೆ ತಮ್ಮ ಭವಿಷ್ಯ ಅಂಧಕಾರವಾಗುವುದೆಂದು ಹೆದರಿ ಆಕೆಯ ಬಳಿ ಸುಳಿಯಲು ಹಿಂದೇಟು ಹಾಕತೊಡಗಿದರು. ಸಹಪಾಠಿಗಳು ಆಕೆಯನ್ನು `ಮುಂಗೋಪಿ ಸುನೀತಾ’ ಎಂದೇ ಕರೆಯಲು ಶುರು ಮಾಡಿಬಿಟ್ಟರು. 3 ವರ್ಷ ಕಾಲೇಜಿನಲ್ಲಿ ಓದಿಯೂ ಅವಳ ಸ್ವಭಾವದಲ್ಲಿ ಕಿಂಚಿತ್ತೂ ಬದಲಾವಣೆಯಾಗಲಿಲ್ಲ. ಅವಳೊಂದಿಗೆ ಗೆಳೆತನ ಮಾಡುವುದನ್ನು ಯಾರೂ ತಮ್ಮ ಅದೃಷ್ಟ ಎಂದು ಭಾವಿಸಲಿಲ್ಲ. ಶಿವರಾಮ್ ತಮ್ಮ ಇಳಿ ವಯಸ್ಸನ್ನು ಗಮನದಲ್ಲಿಟ್ಟುಕೊಂಡು ಸುನೀತಾಳ ವಿವಾಹವನ್ನು ಬೇಗನೇ ಮಾಡಿ ಮುಗಿಸಬೇಕು ಎಂದುಕೊಂಡಿದ್ದರು. ಆದರೆ ಹೆಂಡತಿ ವನಜಾಕ್ಷಿ ಮಾತ್ರ ಅದಕ್ಕೆ ಅಡ್ಡಗಾಲು ಹಾಕುತ್ತಿದ್ದರು. ಅವರ ಹಠಕ್ಕೆ ಪ್ರತಿಯಾಗಿ ಸುನೀತಾ ಎಂಬಿಎ ಮಾಡಿ ಬಹುರಾಷ್ಟ್ರೀಯ ಕಂಪನಿಯೊಂದರಲ್ಲಿ ಫೈನಾನ್ಸ್ ಎಗ್ಸಿಕ್ಯೂಟಿವ್ ‌ಹುದ್ದೆಯ ನೌಕರಿ ಪಡೆದಿದ್ದಳು. ಕಂಪನಿಯಲ್ಲಿ ಕೆಲಸ ಶುರು ಮಾಡುತ್ತಿದ್ದಂತೆಯೇ ತನ್ನ ಸ್ವಭಾವದಲ್ಲಿ ಬದಲಾವಣೆ ಮಾಡಿಕೊಳ್ಳಬೇಕೆಂದು ಆಕೆಗೆ ಅನಿಸತೊಡಗಿತು. ಕಾಲೇಜಿಗಿಂತ ಇಲ್ಲಿ ಟೀಮ್ ವರ್ಕ್‌ ಗೆ ಹೆಚ್ಚು ಮಹತ್ವವಿತ್ತು. ಮಾತೇ ಆಡದೇ ಮುಖ ಊದಿಸಿಕೊಂಡು ಕೂತಿರುವುದರಿಂದ ಕೆಲಸ ಆಗುವಂತಿರಲಿಲ್ಲ. ಹೀಗಾಗಿ ಸುನೀತಾ ನಗುತ್ತ ಮಾತಾಡುವುದನ್ನು ಕಲಿತುಕೊಂಡಳು. ಆದರೆ ಅವಳ ಗರ್ವ ಮಾತ್ರ ಎಳ್ಳಷ್ಟೂ ಕಡಿಮೆಯಾಗಿ ಇರಲಿಲ್ಲ. ಹೀಗಾಗಿ ಸಹೋದ್ಯೋಗಿಗಳು ಮತ್ತು ಅಧೀನ ಕೆಲಸಗಾರರು ಸಾಕಷ್ಟು ಅಂತರ ಕಾಪಾಡಿಕೊಳ್ಳುವುದರಲ್ಲಿಯೇ ತಮ್ಮ ಜಾಣತನವಿದೆಯೆಂದು ಭಾವಿಸಿದ್ದರು. ಯಾವಾಗ ಮೇಡಂ ತಮ್ಮ ಮೇಲೆ ಕೆಂಗಣ್ಣು ಬೀರಬಹುದೆಂದು ಅವರು ಸದಾ ಜಾಗೃತರಾಗಿರುತ್ತಿದ್ದರು. ಇತ್ತ ಸುನೀತಾಳ ವಿವಾಹದ ವಯಸ್ಸು ಮೀರುತ್ತ ಹೊರಟಿತ್ತು. ಶಿವರಾಮ್ ಅವರಿಗೂ ಮಗಳ ಬಗ್ಗೆ ಯೋಚಿಸಿ ಯೋಚಿಸಿ ನಿದ್ದೆ ಮಾಯವಾಗಿಬಿಟ್ಟಿತ್ತು. ಮದುವೆಯ ಬಗ್ಗೆ ಮಾತುಕಥೆ ನಡೆಸುತ್ತಿದ್ದಾಗೆಲ್ಲ ತಾಯಿಮಗಳು ಏನಾದರೊಂದು ಷರತ್ತು ಹಾಕಿ ಮದುವೆ ವಿಷಯ ಮುಂದೂಡುತ್ತಿದ್ದರು.

ಸುನೀತಾಗೆ 36 ತುಂಬಿದ, ಅವಳ ಕೂದಲು ಕೂಡ ಬೆಳ್ಳಗಾಗತೊಡಗಿದಾಗ ತಾಯಿಮಗಳು ಒಂದಿಷ್ಟು ಹೊಂದಾಣಿಕೆ ಮಾಡಿಕೊಂಡರು. ಬೆಂಗಳೂರಿನ ಕೇಂದ್ರೀಯ ವಿದ್ಯಾಲಯವೊಂದರಲ್ಲಿ ಗಣಿತ ಶಿಕ್ಷಕರಾಗಿದ್ದ ಅನಿಲ್ ‌ಜೊತೆ ಸುನೀತಾಳ ವಿವಾಹವಾಯಿತು. ಅನಿಲ್ ‌ಸರ್ಕಾರಿ ವಸತಿಗೃಹದಲ್ಲಿ ತಮ್ಮ ವಿಧವೆ ಅತ್ತಿಗೆ ಹಾಗೂ ಅಣ್ಣನ ಮಗಳ ಜೊತೆಗೆ ವಾಸವಾಗಿದ್ದರು. ಪ್ರಥಮ ರಾತ್ರಿಯಂದು ಒಂದು ಘಟನೆ ನಡೆಯಿತು.

“ನಿಮ್ಮ ಅತ್ತಿಗೆ ಕಡೆಯಿಂದ ಪುರಸತ್ತು ದೊರಕಿತಾ? ಇದಕ್ಕೂ ಅವರಿಂದ ಪರ್ಮಿಶನ್‌ ತೆಗೆದುಕೊಂಡು ಬಂದ್ರಾ ಅಥವಾ ಅದಿನ್ನೂ ಬಾಕಿ ಇದೆಯಾ?” ಸುನೀತಾಳ ಬಾಯಿಂದ ಈ ಮಾತು ಕೇಳಿ ಆನಿಲ್ ನ ಮುಖ ಒಮ್ಮೆಲೆ ಕ್ರೋಧತಪ್ತವಾಯಿತು. ಆಕೆಯನ್ನು ಹಿಡಿದುಕೊಂಡು ಕೆನ್ನೆಗೆ ರಪರಪ ಎಂದು ಬಾರಿಸಬೇಕೆಂದುಕೊಂಡ. ಆದರೆ ಏನೋ ಯೋಚಿಸಿ ತನ್ನನ್ನು ತಡೆದುಕೊಂಡ.

“ಈ ರೀತಿ ಅರ್ಥವಿಲ್ಲದ ಮಾತುಗಳನ್ನಾಡಲು ನಿನಗೆ ನಾಚಿಕೆ ಆಗೋದಿಲ್ವಾ? ಯಾವ ಅತ್ತಿಗೆ ನನ್ನನ್ನು ಬಾಲ್ಯದಿಂದಲೇ ಅಮ್ಮನ ಹಾಗೆ ಪೋಷಿಸಿದರೊ, ಅವರ ಬಗ್ಗೆ ಇಂತಹ ಕೀಳು ಮಾತುಗಳು…..”

ಅವನು ತನ್ನ ಮಾತುಗಳನ್ನು ಇನ್ನೂ ಮುಂದುವರಿಸಬೇಕೆನ್ನುವಷ್ಟರಲ್ಲಿ,

“ನಿಮ್ಮದು ಇದೇ ರಾಗವಾಯಿತು. ನಿಶ್ಚಿತಾರ್ಥವಾದಾಗಿನಿಂದ ನಿಮ್ಮ ಬಾಯಿಂದ ಅತ್ತಿಗೆ ಹಾಗೂ ಅವರ ಮಗಳ ಬಗೆಗೆ ಕೇಳಿ ಕೇಳಿ ನನಗೆ ಸಾಕಾಗಿ ಹೋಗಿದೆ,” ಎಂದು ಹೇಳಿ ಸುನೀತಾ ಹಾಸಿಗೆಯ ಮೇಲೆ ಉರುಳಿಬಿಟ್ಟಳು. ಅವಳೊಂದಿಗೆ ಸಮಾಗಮ ನಡೆಸುವುದಿರಲಿ, ಅನಿಲ್ ‌ಅವಳ ಕಡೆ ತಿರುಗಿ ಕೂಡ ನೋಡಲಿಲ್ಲ. ಅವನು ಅಲ್ಲಿಯೇ ಸಮೀಪದಲ್ಲಿದ್ದ ಸೋಫಾ ಮೇಲೆ ಮಲಗಿಬಿಟ್ಟ. ಇದರಿಂದ ಸುನೀತಾಳ ಅಹಂಗೆ ಮತ್ತಷ್ಟು ಪೆಟ್ಟು ಬಿತ್ತು. ನಿಶ್ಚಿತಾರ್ಥ ಸಮಯದಲ್ಲಿ ಸುನೀತಾ ತನ್ನನ್ನು ಹೈದರಾಬಾದ್‌ ನಿಂದ ಬೆಂಗಳೂರಿಗೆ ವರ್ಗಾಯಿಸಿಕೊಳ್ಳುವುದಾಗಿಯೂ, ಒಂದು ವೇಳೆ ಅದು ಸಾಧ್ಯವಾಗದಿದ್ದಲ್ಲಿ, ಕಂಪನಿಗೆ ರಾಜೀನಾಮೆ ನೀಡಿ, ಬೆಂಗಳೂರಿನಲ್ಲಿಯೇ ಹೊಸದೊಂದು ಕಂಪನಿಗೆ ಸೇರುವುದಾಗಿ ಮಾತುಕೊಟ್ಟಿದ್ದಳು.

ಅನಿಲ್ ‌ಗೆ ಬೆಂಗಳೂರಿನಲ್ಲಿ ಬಹಳಷ್ಟು ಗೆಳೆಯರಿದ್ದಾರೆ, ಅವರು ಮನೆಗೆ ಬಂದಾಗೆಲ್ಲ ಅದು ಇದು ಅಂತಾ ಮಾಡಿಕೊಡಲು ನೀನು ಸುಸ್ತಾಗಿ ಹೋಗ್ತೀಯಾ ಅಂತ ಸುನೀತಾಳ ತಾಯಿ ಆಕೆಗೆ ಹೆದರಿಸಿಬಿಟ್ಟರು. ಆ ಕಾರಣದಿಂದ ಸುನೀತಾ ಅನಿಲ್ ‌ಗೆ ನಿಮ್ಮ ನೌಕರಿಯನ್ನು ಹೈದರಾಬಾದ್‌ ಗೆ ವರ್ಗಾಯಿಸಿಕೊಳ್ಳಿ ಎಂದು ಒತ್ತಾಯಿಸಿದ್ದಳು. ಆದರೆ ಅನಿಲ್ ‌ಹೈದರಾಬಾದ್‌ನಲ್ಲಿ ಅಂತಹ ಯಾವುದೇ ಪೋಸ್ಟ್ ಗಳು ಇಲ್ಲ, ಹಾಗಾಗಿ ಅಲ್ಲಿಗೆ ನನ್ನ ವರ್ಗ ಆಗುವುದು ಸಾಧ್ಯವಿಲ್ಲವೆಂದು ಸುನೀತಾಗೆ ತಿಳಿವಳಿಕೆ ಹೇಳಿದ. ಆದರೆ ಆ ಮಾತಿಗೆ ಸುನೀತಾ ಒಪ್ಪಲಿಲ್ಲ. ಹೀಗಾಗಿ ಅವಳ ಹಠಮಾರಿತನದ ಬುದ್ಧಿಯಿಂದಾಗಿ ಅನಿಲ್ ‌ಗೆ ಕೋಪ ಬಂತು.ಅನಿಲ್ ‌ನ ಅತ್ತಿಗೆ ಸುನೀತಾಗೆ ತಿಳಿವಳಿಕೆ ನೀಡಲು ಹೋದಾಗ, ಸುನೀತಾ ಹೇಳಿದಳು, “ಗಂಡನನ್ನು ಬಿಟ್ಟರೆ ಎರಡನೇ ಮದುವೆಗೆ ನೂರಾರು ಹುಡುಗರು ಸಿಗಬಹುದು. ಆದರೆ ಒಳ್ಳೆಯ ಆದಾಯದ ಮಲ್ಟಿ ನ್ಯಾಷನಲ್ ಕಂಪನಿಯ ನೌಕರಿ ಎಲ್ಲೆಂದರಲ್ಲಿ ಯಾವಾಗಬೇಕೆಂದರವಾಗ ಸಿಗುವುದಿಲ್ಲ!”

ಆಕೆಯ ಮಾತು ಕೇಳಿ ಅತ್ತಿಗೆ ದುಃಖಿತರಾದರು ಮತ್ತು ಅನಿಲ್ ವಿವಶನಾಗಿ ಮೌನಕ್ಕೆ ಮೊರೆಹೋದ.

“ನನ್ನ ಪ್ರಕಾರ ಅನಿಲ್ ‌ಹಾಗೂ ಅವನ ಅತ್ತಿಗೆ ನಡುವೆ ಏನೋ ಅಕ್ರಮ ಸಂಬಂಧ ಇದೆ. ಹೀಗಾಗಿ ಆಕೆ ಅನಿಲ್ ‌ನನ್ನು ಇಲ್ಲಿಗೆ ಬರಲು ತಡೆಯುತ್ತಿದ್ದಾಳೆ. ಅನಿಲ್ ‌ಅಷ್ಟೊಂದು ಹಠಮಾರಿ ಅನಿಸುವುದಿಲ್ಲ,” ಎಂದು ಹೇಳಿ ಸುನೀತಾಳ ಅಮ್ಮ ಆಕೆಯ ಮನಸ್ಸಿನಲ್ಲಿ ಸಂದೇಹದ ಬೀಜ ಬಿತ್ತಿದಳು.

“ಕೇವಲ ಸಂದೇಹದ ಆಧಾರದ ಮೇಲೆ ನಿನ್ನ ವೈವಾಹಿಕ ಜೀವನವನ್ನು ಹಾಳು ಮಾಡಿಕೊಳ್ಳಬೇಡ,” ಎಂದು ಶಿವರಾಮ್ ಅವರು ಎಷ್ಟು ಹೇಳಿದರೂ ಆಕೆ ಮಾತ್ರ ಕಿವಿಗೆ ಹಾಕಿಕೊಳ್ಳಲಿಲ್ಲ. ಹಣ ಹಾಗೂ ಹುದ್ದೆಯ ಅಮಲು ಆಕೆಯ ವಿವೇಕದ ಮೇಲೆ ಪರದೆ ಎಳೆದುಬಿಟ್ಟಿತ್ತು. ಆಕೆ ಅನಿಲ್ ‌ಗೆ ವಿಚ್ಛೇದನದ ನೋಟಿಸ್‌ ಕಳಿಸಿಯೇಬಿಟ್ಟಳು.

ಪರಸ್ಪರ ಹೊಂದಾಣಿಕೆಯಿಂದ ವಿಚ್ಛೇದನ ಸಿಗುತ್ತಿದ್ದಂತೆಯೇ, ಸುನೀತಾಳಿಗೆ ತನ್ನ ಸ್ಥಿತಿ ಮಾತ್ರ ಸೂತ್ರ ಕಳೆದುಕೊಂಡ ಗಾಳಿಪಟದಂತೆ ಆಗಿದೆ ಎಂಬುದು ಅನುಭವಕ್ಕೆ ಬರತೊಡಗಿತು. ಕ್ರಮೇಣ ಅವಳಿಗೆ ಅಮ್ಮನ ಒತ್ತಡಕ್ಕೆ ಮಣಿದು ಹಾಗೂ ತನ್ನ ಅಹಂನಿಂದಾಗಿ ತಾನು ವಿಚ್ಛೇದನ ಪಡೆಯುವಲ್ಲಿ ಆತುರ ತೋರಿದೆ ಎಂದು ಅನಿಸತೊಡಗಿತು. ಈಗ ಎಲ್ಲರೂ ತನ್ನ ಮೇಲೆ ಅಧಿಕಾರ ಚಲಾಯಿಸಲು ಮುಗಿಬೀಳುತ್ತಿದ್ದಾರೆ ಎಂದು ಆಕೆಗೆ ಅನಿಸತೊಡಗಿತು. ಎರಡನೇ ಮದುವೆಗಾಗಿ ಆಕೆಗಿಂತ 2 ವರ್ಷ ಚಿಕ್ಕವನಾದ ಚಂದ್ರಕಾಂತನ ಸಂಬಂಧ ಬಂದಾಗ ಆಕೆ ಏನು ವಿಚಾರ ಮಾಡಿ ಹ್ಞೂಂ ಅಂದಳೊ ಏನೋ, ಅಂದಹಾಗೆ ಅವನ ಕುರಿತಾದ ಅಪೂರ್ಣ ಮಾಹಿತಿ ಅವಳಿಗೆ ಅಪಾಯಕಾರಿಯಾಗಿ ಪರಿಣಮಿಸಿತು.

ಆಕೆಯ ನಿರಾಕರಣೆಯ ನಡುವೆಯೂ ಚಂದ್ರಕಾಂತ ಪ್ರಥಮ ರಾತ್ರಿಯಂದು ಆಕೆಯ ಮೇಲೆ ಹೇಗೆ ದಾಳಿ ಮಾಡಿದನೆಂದರೆ, ನೋವಿನಿಂದ ಆಕೆ ತತ್ತರಿಸಿಹೋದಳು. ಆಕೆ ಈ ಅವಮಾನವನ್ನು ಮೌನವಾಗಿಯೇ ಸಹಿಸಿಕೊಂಡಳು. ಏನೇ ಆದರೂ ಸರಿ ತನ್ನ ಪ್ರಯತ್ನದಿಂದ ಅವನ ಮನಸ್ಸನ್ನು ಬದಲಿಸುವುದಾಗಿ ಆಕೆ ಮನದಲ್ಲಿಯೇ ಪಣತೊಟ್ಟಳು. ಈ ಸಲ ನಾನು ಸಂಯಮದಿಂದ ಕಾರ್ಯಪ್ರವೃತ್ತಳಾಗ್ತೀನಿ. ಸಂಬಂಧ ಮುರಿದುಕೊಳ್ಳಲು ಆತುರ ತೋರುವುದಿಲ್ಲ ಎಂದು ಮನದಲ್ಲಿಯೇ ನಿರ್ಧರಿಸಿದಳು.

ಇತ್ತ ಚಂದ್ರಕಾಂತ ಮನೆಯನ್ನೇ ಬಾರ್‌ ಮಾಡಿಕೊಂಡುಬಿಟ್ಟಿದ್ದ. ತನಗೆ ಬೇಕೆನಿಸಿದಾಗೆಲ್ಲ ಒಂದೊಂದು ಪೆಗ್‌ ಹಾಕುತ್ತಲೇ ಇದ್ದ. ಒಂದು ವಾರದ ಬಳಿಕ ಅವನು ಕೆಲಸಕ್ಕೆ ಹೋದಾಗ ಮ್ಯಾನೇಜರ್‌ ಜೊತೆ ಜಗಳವಾಡಿದ. ಅಸಭ್ಯತನದ ವರ್ತನೆಯ ಕಾರಣದಿಂದ ಅವನ ನೌಕರಿ ಹೊರಟುಹೋಯಿತು. ವಿಶ್ವ ಆರ್ಥಿಕ ಮುಗ್ಗಟ್ಟಿನ ಕಾರಣದಿಂದ ಅವನಿಗೆ ಬೇರೆ ನೌಕರಿ ಕೂಡ ಸಿಗಲಿಲ್ಲ. ಅವನು ಮನೆಯಲ್ಲೇ ಕುಳಿತು ಹೆಂಡತಿಯ ಹಣದಲ್ಲಿ ಮೋಜು ಮಾಡತೊಡಗಿದ. ಹಿಂದಿನ ಸಲದಂತೆ ಈ ಸಲ ಕೂಡ ಅಮ್ಮ ವಿಚ್ಛೇದನ ಪಡೆದು ಚಂದ್ರಕಾಂತನಿಂದ ಮುಕ್ತಿ ಪಡೆದುಕೊಳ್ಳಲು ಸಲಹೆ ನೀಡಿದಾಗ ಸುನೀತಾ ಒಮ್ಮೆಲೆ ಕೆಂಡಾಮಂಡಲವಾದಳು, “ಅಮ್ಮ, ಈಗ್ಲಾದರೂ ನಿಮ್ಮ ಈ ದುರ್ಬುದ್ಧಿಯನ್ನು ನಿಲ್ಲಿಸಿ. ಎಂಥ ಕಟುಕ ಹೃದಯ ಅಮ್ಮ ನಿಮ್ದು? ಜನ ತಿಳಿವಳಿಕೆ ಹೇಳಿ ತಮ್ಮ ಮಗಳ ಒಡೆಯುತ್ತಿರುವ ಮನೆಯನ್ನು ಒಗ್ಗೂಡಿಸಲು ಪ್ರಯತ್ನಿಸುತ್ತಾರೆ.

“ನೀವು ನೋಡಿದರೆ ನನ್ನೊಳಗಿನ ಅಹಂನ್ನು ಬೇರುಸಹಿತ ನಾಶ ಮಾಡುವುದನ್ನು ಬಿಟ್ಟು ಅದಕ್ಕೆ ನೀರೆರೆದು ಪೋಷಿಸುತ್ತಿದ್ದೀರಿ. ಅದರ ಪರಿಣಾಮ ನಿಮ್ಮ ಕಣ್ಮುಂದೆಯೇ ಇದೆ. ನಾನು ನಿಮ್ಮ ಮಾತು ಕೇಳಿ, ಚೆನ್ನಾಗಿಯೇ ನಡೆದುಕೊಂಡು ಹೊರಟಿದ್ದ ಮೊದಲ ಮದುವೆಯನ್ನು ಮುರಿದುಕೊಂಡೆ.

“ಈಗ ಈ ಮದುವೆಯನ್ನೂ ಕೂಡ ಮುರಿಯಲು ಹೊರಟಿದ್ದೀರಾ? ನಾನು ಸಕಾಲಕ್ಕೆ ಅಪ್ಪನ ಮಾತು ಕೇಳಿದ್ದರೆ ನನಗೆ ಖಂಡಿತ ಈ ದಯನೀಯ ಸ್ಥಿತಿ ಬರುತ್ತಿರಲಿಲ್ಲ. ಅನಿಲ್ ‌ಜೊತೆಗೆ ಸುಖವಾಗಿ ಸಂಸಾರ ಮಾಡಿಕೊಂಡಿರುತ್ತಿದ್ದೆ.

“ನನ್ನ ತಪ್ಪಿಗೆ ಪ್ರಾಯಶ್ಚಿತ್ತವೆಂದರೆ ನಾನು ಹೇಗಾದರೂ ಮಾಡಿ ಚಂದ್ರಕಾಂತನನ್ನು ದಾರಿಗೆ ತರಬೇಕು, ಈ ಮದುವೆಯನ್ನು ಯಾವುದೇ ಕಾರಣಕ್ಕೂ ಛಿದ್ರಗೊಳಿಸಲು ಬಿಡಬಾರದು. ಈಗ ನನಗೆ ನಿಮ್ಮ ಬೊಗಳೆ ಸಲಹೆಯ ಅಗತ್ಯವಿಲ್ಲ. ಇನ್ಮುಂದೆ ಇಂತಹ ಸಲಹೆ ತೆಗೆದುಕೊಂಡು ನನ್ಮುಂದೆ ಬರಬೇಡಿ!” ಎಂದಳು.

ಮಗಳ ಮಾತು ಕೇಳಿ ಅಮ್ಮ ವನಜಾಕ್ಷಿ ದಿಗ್ಮೂಢರಾದರು. ಶಿವರಾಮ್ ಮಾತ್ರ ನೆಮ್ಮದಿಯ ನಿಟ್ಟುಸಿರುಬಿಟ್ಟರು.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ