ಛತ್ತೀಸ್ ಗಢದಲ್ಲಿ ಕಾಂಗ್ರೆಸ್ ಗುಂಪಿನ ಮೇಲಾದ ನಕ್ಸಲೀಯರ ದಾಳಿಯಲ್ಲಿ ಸಾಕಷ್ಟು ಸಂಖ್ಯೆಯ ನಕ್ಸಲ್ ಯುವತಿಯರಿದ್ದರು. ಅವರು ಬಂದೂಕುಗಳನ್ನು ಹಿಡಿದಿದ್ದು, ಮಹೇಂದ್ರ ಕರ್ಮಾರ ಸಾವಿಗೆ ಉತ್ಸವವನ್ನು ಆಚರಿಸುತ್ತಾ ಅವರ ಶವದ ಮೇಲೆ ಕುಣಿದಾಡಿದರು. ಒರಟಾದ ಕಾಡಿನ ದಾರಿಗಳಲ್ಲಿ ಪೊಲೀಸರಿಂದ ಸತತವಾಗಿ ಹಿಂಬಾಲಿಸಲ್ಪಟ್ಟಿದ್ದರೂ ಈ ಯುವತಿಯರು ನಕ್ಸಲರೊಂದಿಗೆ ಏಕಿದ್ದಾರೆ ಮತ್ತು ಇವರೇಕೆ ಆಯುಧಗಳನ್ನು ಎತ್ತಿಕೊಂಡರು?
ಇದೊಂದು ರೋಮಾಂಚಕ ಕೆಲಸವೆಂದು ಯೋಚಿಸುವುದು ತಪ್ಪು. ಕೈಯಲ್ಲಿ ಬಂದೂಕು ಇದ್ದರೆ ಮಹಿಳೆಗೆ ಅಪಾರ ಶಕ್ತಿ ಸಿಗುತ್ತದೆ. ಆದರೆ ಅವಳಿಗೆ ನಿಜವಾದ ಸುಖವಂತೂ ತನ್ನ ಸಂಸಾರ ಮತ್ತು ಮಕ್ಕಳಿಂದ ಸಿಗುತ್ತದೆ. ನಕ್ಸಲ್ ಪೀಡಿತ ಕ್ಷೇತ್ರಗಳಲ್ಲಿ, ನಕ್ಸಲೀಯರಲ್ಲಿ ಮಹಿಳೆಯರ ಸಂಖ್ಯೆ ಹೆಚ್ಚಾಗುತ್ತಿದೆ. ಆಘಾತಕಾರಿ ವಿಷಯವೆದರೆ ಇವರಲ್ಲಿ ಬಹಳಷ್ಟು ಸುಶಿಕ್ಷಿತರೂ ಇದ್ದಾರೆ.
ಕಾಡಿನಲ್ಲಿದ್ದ ಹಳ್ಳಿಗಳು ಮತ್ತು ನಿವಾಸಗಳು ಹಾಳಾಗತೊಡಗಿ ನಗರೀಕರಣ ಆರಂಭವಾದಾಗ ಪುರುಷರಿಗಿಂತ ಹೆಚ್ಚಾಗಿ ಮಹಿಳೆಯರು ನೋವನ್ನು ಅನುಭವಿಸಿದರು. ಪುರುಷರಿಗೆ ಸಾಮಾನ್ಯವಾಗಿ ಆತ್ಮಗೌರವ ಹಾಳಾಗುತ್ತದೆ. ತಮ್ಮ ಹೆಂಡತಿ, ಮಕ್ಕಳು ಮತ್ತು ಮನೆಯನ್ನು ಉಳಿಸಲಾಗುತ್ತಿಲ್ಲವೆಂದು ಅವರ ಪೌರುಷಕ್ಕೆ ಪೆಟ್ಟು ಬೀಳುತ್ತದೆ. ಆದರೆ ಮಹಿಳೆಯರು ಮತ್ತೆ ಮತ್ತೆ ಪೆಟ್ಟು ಸಹಿಸಿಕೊಳ್ಳಬೇಕಾಗುತ್ತದೆ. ವ್ಯಕ್ತಿಯಂತೂ ಹೋಗುತ್ತಾನೆ. ಅವನಿಗೆ ಆಶ್ರಯ ನೀಡುವ ಮನೆಯೂ ಹೋಗುತ್ತದೆ. ನಗರವಾಸಿಗಳು ಈ ಆದಿವಾಸಿ ಮಹಿಳೆಯರನ್ನು ಚೆನ್ನಾಗಿ ಲೂಟಿ ಮಾಡಿದರು. ಅವರ ಲೈಂಗಿಕ ಶೋಷಣೆಯೂ ಆಯಿತು. ಅವರಿಂದ ಬಿಟ್ಟಿಯಾಗಿ ದುಡಿಸಿಕೊಳ್ಳಲಾಯಿತು.
ಇಡೀ ದೇಶದಲ್ಲಿ ಮನೆಗೆಲಸ ಮಾಡುವ ಮಹಿಳೆಯರು, ಕಟ್ಟಡ ನಿರ್ಮಾಣದಲ್ಲಿ ದುಡಿಯುವ ಮಹಿಳಾ ಕಾರ್ಮಿಕರಲ್ಲಿ ಬಹಳಷ್ಟು ಜನ ಈ ಕಾಡುಗಳಿಂದ ಬಂದ ಆದಿವಾಸಿ ಯುವತಿಯರು. ಅವರು ತಮ್ಮ ಮನೆಗಳಿಂದ ಹೊರಹಾಕಲ್ಪಟ್ಟರು. ಬಹಳಷ್ಟು ಯುವತಿಯರಂತೂ ನಗರವಾಸಿಗಳ ಅಕ್ರಮ ಸಂತಾನಗಳು. ಅವರು ತಮ್ಮ ತಾಯಿಗಾದ ಅನ್ಯಾಯಕ್ಕೆ ಸೇಡು ತೀರಿಸಿಕೊಳ್ಳಲು ಏನು ಬೇಕಾದರೂ ಮಾಡಲು ಸಿದ್ಧರಿದ್ದಾರೆ. ನಕ್ಸಲರ ನಾಯಕರು ಈ ಮಹಿಳೆಯರ ಕೋಪದ ಸಂಪೂರ್ಣ ಲಾಭ ಪಡೆದಿದ್ದಾರೆ. ತಮಗಾದ ಅನ್ಯಾಯಕ್ಕೆ ಪ್ರತೀಕಾರ ಮಾಡಲು ಅವರನ್ನು ಹುರಿದುಂಬಿಸಿದ್ದಾರೆ.
ಮಹಿಳೆಯರನ್ನು ಕ್ರೂರರನ್ನಾಗಿ ಮಾಡುವುದು ಅಪಾಯಕಾರಿ ಎಂದು ಯೋಚಿಸದೆ ಅನೇಕ ಬಾರಿ ಅವರನ್ನು ಅಬಲೆಯರೆಂದು ತಿಳಿದು ಬಲಶಾಲಿಗಳು ಅವರ ಪರವಾಗಿ ಸೇಡು ತೀರಿಸಿಕೊಳ್ಳುತ್ತಾರೆ. ಮಹಿಳೆಯರು ಅತ್ಯಾಚಾರವನ್ನು ಅಸಹಾಯಕರಾಗಿ ಸಹಿಸಿಕೊಳ್ಳುತ್ತಾರೆ. ಆದರೆ ಮುಂದೆ ಅವರಿಗೆ ಮಕ್ಕಳಾದಾಗ ಅವರನ್ನು ಪ್ರತೀಕಾರ ತೆಗೆದುಕೊಳ್ಳಲು ಸಿದ್ಧಪಡಿಸುತ್ತಾರೆ. ಇಡೀ ವಿಶ್ವದಲ್ಲಿ ಜೆಹಾದಿಗಳ ಸಂಖ್ಯೆ ಕಡಿಮೆಯಿಲ್ಲ ಎನ್ನುವುದಾದರೆ ಅದಕ್ಕೆ ಕಾರಣ ಅವರು ಮಹಿಳೆಯರಿಗೆ ಅವಮಾನ ಮಾಡಲಾಗುತ್ತಿರುವ ಮನೆಗಳಿಂದ ಬಂದಿರುತ್ತಾರೆ. ಮಹಿಳೆಯರನ್ನು ಅಬಲೆಯರೆಂದು ತಿಳಿಯಲಾಗುತ್ತಿದೆ. ಸಮಾಜ ಮತ್ತು ಸರ್ಕಾರದ ವಿರುದ್ಧ ಅವರಲ್ಲಿ ವಿಷವೇ ತುಂಬಿದೆ.
ಇದರಿಂದಾಗಿ ಪ್ರತಿಯೊಂದು ಧರ್ಮ ಮಹಿಳೆಯರ ಮೇಲೆ ವಿಧವಿಧವಾದ ನಿಯಂತ್ರಣಗಳನ್ನು ಹೇರುತ್ತದೆ. ಏಕೆಂದರೆ ಎಲ್ಲ ಆಡಳಿತಗಾರರಿಗೂ ಗಾಯಗೊಂಡ ಕುಪಿತ ಮಹಿಳೆ ಅಪಾಯಕಾರಿಯೆಂದು ತಿಳಿದಿದೆ. ಆದ್ದರಿಂದ ಧರ್ಮ ಅವರ ಮನಸ್ಸನ್ನಷ್ಟೇ ಅಲ್ಲದೆ, ಕೈ ಕಾಲುಗಳನ್ನೂ ಕತ್ತರಿಸಿ ಅವರನ್ನು ಜೀವಂತ ಶವಗಳನ್ನಾಗಿ ಮಾಡಿಬಿಡುತ್ತದೆ. ಅದರಿಂದ ಅವರು ಪರಂಪರೆಗಳನ್ನು ಹೊತ್ತೂ ಹೊತ್ತೂ ಮುದುಕಿಯರಾಗಿ ರೋಗಪೀಡಿತರಾಗಬೇಕು ಮತ್ತು ನೆಟ್ಟಗೆ ನಿಂತು ಏನಾದರೂ ಮಾಡುವ ಕಲ್ಪನೆಯನ್ನೂ ಮಾಡದಂತಿರಬೇಕು.
ಸೆಕ್ಸ್ ಈಸ್ ನಾಟ್ ಫಾರ್ ಸೇಲ್!
ಸೆಕ್ಸ್ ಅತ್ಯವಶ್ಯ. ಆದರೆ ಯಾವಾಗಲೂ ಅದರ ಪ್ರದರ್ಶನವೇ ಆಗುತ್ತಿದ್ದರೆ ಅದರಲ್ಲಿ ಯಾವ ಆಕರ್ಷಣೆಯೂ ಉಳಿಯುವುದಿಲ್ಲ. ಒಂದು ಕಾಲಕ್ಕೆ ಹಾಲಿವುಡ್ ಸೆಕ್ಸಿ ಸೀನ್ ಗಳಿಗೆ ಪ್ರಖ್ಯಾತಿ ಪಡೆದಿತ್ತು. ಅಲ್ಲಿನ ಚಿತ್ರಗಳು ಭಾರತಕ್ಕೆ ಬಂದಾಗ ಸೆನ್ಸಾರ್ ಕತ್ತರಿಗೆ ಸಿಲುಕಿ ರೆಕ್ಕೆಪುಕ್ಕ ಕಳೆದುಕೊಂಡ ಹಕ್ಕಿಗಳಂತಾಗುತ್ತಿದ್ದವು. ಈಗ ಸೆಕ್ಸ್ ನ ಡೋಸ್ ಕಡಿಮೆ ಮಾಡಲಾಗುತ್ತಿದೆ. ಕಳೆದ ವರ್ಷದ ಟಾಪ್ 20 ಚಿತ್ರಗಳಲ್ಲಿ ಸೆಕ್ಸ್ ನ ಬಳಕೆ ತುಂಬಾ ಕಡಿಮೆಯಿತ್ತು.
ಟಿಕೆಟ್ ಕೌಂಟರ್ ಗಳೆದುರು ಮಹಿಳೆಯರೇ ಈಗ ಹೆಚ್ಚಾಗಿ ಕ್ಯೂನಲ್ಲಿ ನಿಂತಿರುತ್ತಾರೆ ಎಂಬ ಅರಿವು ಬಾಲಿವುಡ್ ನವರಿಗೆ ಗೊತ್ತಾಗಿಬಿಟ್ಟಿದೆ. ಪುರುಷರು ಯಾವ ರೀತಿಯ ಚಿತ್ರಗಳನ್ನು ಇಷ್ಟಪಡುತ್ತಾರೆ ಎಂಬುದನ್ನು ಈಗ ಮಹಿಳೆಯರೇ ನಿರ್ಧರಿಸುತ್ತಾರೆ. ಅವರಿಗೆ ರೊಮಾನ್ಸ್ ಮತ್ತು ರೋಮಾಂಚನ ಇಷ್ಟವಾಗುತ್ತದೆ ಹೊರತು ಮುಕ್ತ ಸೆಕ್ಸ್ ಸೀನ್ ಗಳಲ್ಲ. ಇಂಟರ್ ನೆಟ್ ಮುಖಾಂತರ ಅವರಿಗೆ ಇದೆಲ್ಲ ಸಿಗುತ್ತಿರುವಾಗ ಅವರು ದುಬಾರಿ ಟಿಕೆಟ್ ಬೆಲೆ ತೆತ್ತು ಥಿಯೇಟರ್ ನಲ್ಲಿ ನಗ್ನ ಹುಡುಗಿಯ ದೇಹ ನೋಡಲು ಏಕೆ ಬರುತ್ತಾರೆ?
ವಾಸ್ತವದಲ್ಲಿ ಸೆಕ್ಸ್ಸ ನೈಸರ್ಗಿಕ ಅವಶ್ಯಕತೆ. ಆದರೆ ಎಲ್ಲಿಯವರೆಗೆ ಇದನ್ನು ಆಪ್ತತೆಯ ಭಾವದಿಂದ ಪ್ರಸ್ತುತಪಡಿಸಲಾಗುತ್ತದೋ, ಅಲ್ಲಿಯವರೆಗೆ ಮಾತ್ರ ಅದು ರುಚಿಸುತ್ತದೆ. ಒಂದು ವೇಳೆ ಇದನ್ನು ತೋರಿಕೆಗೆಂಬಂತೆ, ಹಣ ಗಳಿಕೆಯ ಸೂತ್ರವಾಗಿ ಬಳಸಿಕೊಂಡಾಗ ಅದು ಹೇಸಿಗೆ ಹುಟ್ಟಿಸುತ್ತದೆ.
ಅಂದಹಾಗೆ, ಇಂದಿನ ಧಾವಂತದ ಜೀವನಶೈಲಿ, ಮಕ್ಕಳಾಗುವ ಭಯ, ಏಡ್ಸ್ ಭೀತಿ, ಮಹಿಳೆಯರ ಹೆಚ್ಚುತ್ತಿರುವ ಹಕ್ಕುಗಳು ಸ್ತ್ರೀ-ಪುರುಷರ ಸಂಬಂಧಗಳ ಬಗ್ಗೆ ಹೊಸ ವ್ಯಾಖ್ಯೆಯನ್ನೇ ಬರೆದಿವೆ. ಹಾಸಿಗೆಗಿಂತ ಹೆಚ್ಚಿನ ಖುಷಿ ಈಗ ರೆಸ್ಟೋರೆಂಟ್ ಗಳಲ್ಲಿ ಚಹಾ ಕಾಫಿ ಹೀರುತ್ತ ಜಗತ್ತಿನ ವಿಷಯಗಳನ್ನು ಹರಟುವುದರಲ್ಲಿ ಸಿಗುತ್ತದೆ. ಅಲ್ಲಿ ಸ್ತ್ರೀಪುರುಷರು ತಮ್ಮ ದೇಹವನ್ನಲ್ಲ, ಬುದ್ಧಿಯನ್ನು ಪ್ರಸ್ತುತಪಡಿಸುತ್ತಾರೆ.
ಸಿನಿಮಾಗಳಲ್ಲಿ 23 ನಿಮಿಷದ ಸೆಕ್ಸಿ ದೃಶ್ಯ ಚರ್ಚೆಯಾಗಬಹುದು, ಆದರೆ ರಸ್ತೆಯಲ್ಲಿ ಭಾರಿ ವೇಗದಲ್ಲಿ ಓಡುವ ಗಾಡಿಗಳು, ಕಾಡಿನಲ್ಲಿ ಶರವೇಗದಲ್ಲಿ ಧಾವಿಸುವುದು, ಭರಭರನೇ ಪರ್ವತ ಏರುವುದು ಹಾಗೂ ಭಾರಿ ಭದ್ರತೆಯ ಬ್ಯಾಂಕೊಂದನ್ನು ಲೂಟಿ ಮಾಡುವ ದೃಶ್ಯಗಳನ್ನು ನೋಡುವ ಮಜವೇ ಬೇರೆಯಾಗಿರುತ್ತದೆ. ಇವೇ ಇಡೀ ಚಿತ್ರವನ್ನು ಆವರಿಸಿಕೊಂಡರೂ ಹೇಳಲಿಕ್ಕಾಗದು.`ಡರ್ಟಿ ಪಿಕ್ಚರ್’ನಲ್ಲಿ ವಿದ್ಯಾ ಬಾಲನ್ ಸಾಕಷ್ಟು ಬೋಲ್ಡ್ ಆಗಿ ನಟಿಸಿದ್ದಳು. ಆದರೆ ಆ ಸಿನಿಮಾ ನಡೆದದ್ದು `ಸೆಕ್ಸ್ ಈಸ್ ನಾಟ್ ಫಾರ್ ಸೇಲ್’ ಎಂಬ ಸಂದೇಶ ಸಾರಿದ್ದರಿಂದ. ವಿದ್ಯಾ ಬಾಲನ್ ಳ ಸೆಕ್ಸಿ ಸೀನ್ ಗಳ ಹೊರತಾಗಿಯೂ ಚಿತ್ರದಲ್ಲಿ ಆಕೆಗೆ ಪ್ರಿಯಕರ ದೊಕರಲಿಲ್ಲ, ಪ್ರಸಿದ್ಧಿಯೂ ಹೊಂದಲಿಲ್ಲ, ಆಕೆ ಸೌಂದರ್ಯವತಿಯಾಗಿಯೂ ಗೋಚರಿಸಲಿಲ್ಲ. ಸಿನಿಮಾದ ಈ ಸೆಕ್ಸಿ ಧರ್ಮದ ಬಣ್ಣವೇ ಉಡುಗಿ ಹೋಯಿತು.
ಸಿನಿಮಾಗಳಲ್ಲಿ ಚರ್ಚೆಯಾಗುವಷ್ಟರ ಮಟ್ಟಿಗೆ ಸೆಕ್ಸ್ ಜೀವನದಲ್ಲಿ ಅಷ್ಟೊಂದು ಮಹತ್ವ ಹೊಂದಿಲ್ಲ. ಅದರ ಮೇಲೆ ನಿರ್ಬಂಧ ಹೇರಿರುವುದೇ ಹೆಚ್ಚು. ಹೀಗಾಗಿ ಅದರ ಬಗ್ಗೆ ಒಂದಿಷ್ಟು ಉತ್ಸುಕತೆ ಉಳಿದಿರುತ್ತದೆ. ಒಂದುವೇಳೆ ಈ ನಿರ್ಬಂಧ ಇರದೇ ಹೋಗಿದ್ದರೆ, ಅಂತಹ ಸಿನಿಮಾಗಳನ್ನೇ ಬಿಡಿ, ಪೋಸ್ಟರ್ ಗಳನ್ನು ಕೂಡ ಯಾರೂ ಉಚಿತವಾಗಿಯೂ ನೋಡಲು ಇಷ್ಟಪಡುತ್ತಿರಲಿಲ್ಲ.
ಹೆಣ್ಣುಮಕ್ಕಳು ಹೊರೆಯಲ್ಲ!
ಬಿಹಾರದಂತಹ ಹಿಂದುಳಿದ ರಾಜ್ಯದಲ್ಲಿ ಹರಿಯಾಣ, ಪಂಜಾಬ್ ನಂತಹ ಲಿಂಗ ಭೇದದ ರೋಗ ಪಸರಿಸಲಾರಂಭಿಸಿದೆ. 2001ರಲ್ಲಿ 1000ಕ್ಕೆ 942 ಸ್ತ್ರೀಯರಿದ್ದರು. ಅದೇ 2011ರಲ್ಲಿ ಅದು 935ಕ್ಕೆ ಇಳಿದಿದೆ. ಅಲ್ಲಿನ 6 ಜಿಲ್ಲೆಗಳ ಸ್ಥಿತಿಯಂತೂ ಅತ್ಯಂತ ಭೀಕರ. ಅಲ್ಲಿ 876 ರಿಂದ 900ರ ತನಕ ಮಾತ್ರ ಇದೆ.
ದೊಡ್ಡ ದೊಡ್ಡ ಮಹಾನಗರಗಳಲ್ಲಿ ಮಾತ್ರ ಲಭ್ಯವಾಗುತ್ತಿದ್ದ ಲಿಂಗಪತ್ತೆ ಸಾಧನಗಳು ಈಗ ಪುಟ್ಟಪುಟ್ಟ ಹಳ್ಳಿಗಳ ತನಕ ತಲುಪಿವೆ. ಇವುಗಳ ಸೌಲಭ್ಯವನ್ನು ಮಹಿಳೆಯರು ಚಾಚೂ ತಪ್ಪದೇ ಪಡೆದುಕೊಳ್ಳುತ್ತಿದ್ದಾರೆ. ಎಂಥದೇ ಪರಿಸ್ಥಿತಿಯಲ್ಲೂ ತಮಗೆ 1ಕ್ಕಿಂತ ಹೆಚ್ಚು ಹೆಣ್ಣು ಸಂತಾನ ಆಗಬಾರದು ಎನ್ನುವುದು ಅವರ ನಿರ್ಧಾರ. ಗಂಡು ಮಕ್ಕಳು 2 ಅಥವಾ 3 ಕೂಡ ಆಗಬಹುದು.
ಮಗ ಮಗಳ ನಡುವಿನ ಭೇದಭಾವವನ್ನು ಎಷ್ಟೇ ತೆಗಳಿದರೂ ಅದರ ಹಿಂದೆ ಹತ್ತು ಹಲವು ಕಾರಣಗಳಿವೆ. 1 ಅಥವಾ 2 ಹೆಣ್ಣು ಮಕ್ಕಳನ್ನು ಹೊಂದಿರುವವರು ಭಾರಿ ಅಸುರಕ್ಷತೆಯ ಭಾವನೆಯಿಂದ ಸುತ್ತುವರಿದಿರುತ್ತಾರೆ. ಮೊದಲು ಬಾಲ್ಯದಲ್ಲಿ ಅವರನ್ನು ಪೋಷಿಸುವುದು ಕಠಿಣವಾಗುತ್ತದೆ. ನಂತರ ಮದುವೆಯಾದ ಬಳಿಕ ಪೋಷಕರಿಗೆ ಏಕಾಂಗಿತನದ ಅನುಭೂತಿ ಕಾಡತೊಡಗುತ್ತದೆ. ತಮ್ಮ ಪುತ್ರಿಯರ ಯಶಸ್ಸಿನ ಬಗ್ಗೆ ಅವರಿಗೆ ಎಷ್ಟೇ ಹೆಮ್ಮೆಯಿದ್ದರೂ, ಮದುವೆಯ ಬಳಿಕ ಅವರು ತಮ್ಮ ಗಂಡ ಮನೆ ಮಕ್ಕಳು ಅಂತ ಮಗ್ನರಾಗಿಬಿಟ್ಟರೆ ತಂದೆತಾಯಿ ಮರೆತೇಹೋಗುತ್ತಾರೆ.
ಗಂಡು ಮಕ್ಕಳನ್ನು ಓದಲೆಂದು ಹೊರಗೆ ಕಳಿಸಲು ಅವರಿಗೆ ಯಾವುದೇ ಅಂಜಿಕೆ ಅಳುಕು ಉಂಟಾಗುವುದಿಲ್ಲ. ಆದರೆ ಹೆಣ್ಣುಮಕ್ಕಳನ್ನು ಕಳುಹಿಸಬೇಕೆಂಬ ವಿಚಾರ ಬರುತ್ತಿದ್ದಂತೆ ಅವರಿಗೆ ದುಃಖದ ಕಟ್ಟೆಯೊಡೆಯುತ್ತದೆ. ಜೊತೆಗೆ ಸುರಕ್ಷತೆಯ ಪ್ರಶ್ನೆಯೂ ಎದುರಾಗುತ್ತದೆ. ದೂರದ ಊರಿನಲ್ಲಿರುವ ತಮ್ಮ ಮಗಳ ಜೊತೆಗೆ ಏನು ಘಟಿಸಬಹುದೆಂಬ ಆತಂಕ ಅವರಲ್ಲಿ ಸದಾ ಮನೆ ಮಾಡಿರುತ್ತದೆ.
ಎಷ್ಟೆಲ್ಲ ವೈಜ್ಞಾನಿಕ ಶೈಕ್ಷಣಿಕ ಪ್ರಗತಿಯ ನಡುವೆಯೂ ನಮ್ಮ ಪದ್ಧತಿಗಳು ಮಾತ್ರ ಇನ್ನೂ ಬದಲಾಗಿಲ್ಲ. ಅವು ಈಗಲೂ ಹಳೆಯ ಕಾಲದ್ದೇ ಆಗಿವೆ. ನಮ್ಮ ಮಾಧ್ಯಮಗಳು ಕೂಡ ಪರಂಪರೆಯ ಹೆಸರಿನಲ್ಲಿ ಮಹಿಳೆಯರನ್ನು ಮತ್ತಷ್ಟು ಕೆಸರಿಗೆ ದೂಡುವ ಕೆಲಸ ಮಾಡುತ್ತಿವೆ.
ಬಿಹಾರದಲ್ಲಿ ಆಧುನಿಕ ಚಿಕಿತ್ಸಾ ಸೌಲಭ್ಯಗಳು ಬರುವ ತನಕ ಪುರುಷ ಮಹಿಳೆಯರ ಅನುಪಾತ ಸರಿಯಾಗಿಯೇ ಇತ್ತು. ಆದರೆ ಈಗ ಪರಿಸ್ಥಿತಿ ವಿಕೋಪಕ್ಕೆ ಹೋಗಿದೆ. ಏಕೆಂದರೆ ಸ್ವತಃ ತಾಯಂದಿರು ಸಹ ಒಂದೇ ಒಂದು ಹೆಣ್ಣುಮಗುವನ್ನು ಕೂಡ ಹೊರೆ ಎಂದು ಭಾವಿಸತೊಡಗಿದ್ದಾರೆ. ಹಾಗೆ ನೋಡಿದರೆ, ಅವರು ಗಂಡು ಮಕ್ಕಳಿಗಿಂತ ಹೆಚ್ಚು ನೆಮ್ಮದಿ ಕೊಡುತ್ತಾರೆ. ಒಬ್ಬ ಮಹಿಳೆಗೆ ಸೊಸೆಯನ್ನು ನಿಭಾಯಿಸುವುದಕ್ಕಿಂತ ಒಬ್ಬ ಅಳಿಯನನ್ನು ನಿಭಾಯಿಸುವುದು ಹೆಚ್ಚು ಕಷ್ಟಕರವಾಗಿ ಪರಿಣಮಿಸುವುದಿಲ್ಲ. ಆದರೂ ಅವರಿಗೆ ಮನಸ್ಸು ಒಪ್ಪುವುದಿಲ್ಲ.