ಛತ್ತೀಸ್ ಗಢದಲ್ಲಿ ಕಾಂಗ್ರೆಸ್ ಗುಂಪಿನ ಮೇಲಾದ ನಕ್ಸಲೀಯರ ದಾಳಿಯಲ್ಲಿ ಸಾಕಷ್ಟು ಸಂಖ್ಯೆಯ ನಕ್ಸಲ್ ಯುವತಿಯರಿದ್ದರು. ಅವರು ಬಂದೂಕುಗಳನ್ನು ಹಿಡಿದಿದ್ದು, ಮಹೇಂದ್ರ ಕರ್ಮಾರ ಸಾವಿಗೆ ಉತ್ಸವವನ್ನು ಆಚರಿಸುತ್ತಾ ಅವರ ಶವದ ಮೇಲೆ ಕುಣಿದಾಡಿದರು. ಒರಟಾದ ಕಾಡಿನ ದಾರಿಗಳಲ್ಲಿ ಪೊಲೀಸರಿಂದ ಸತತವಾಗಿ ಹಿಂಬಾಲಿಸಲ್ಪಟ್ಟಿದ್ದರೂ ಈ ಯುವತಿಯರು ನಕ್ಸಲರೊಂದಿಗೆ ಏಕಿದ್ದಾರೆ ಮತ್ತು ಇವರೇಕೆ ಆಯುಧಗಳನ್ನು ಎತ್ತಿಕೊಂಡರು?
ಇದೊಂದು ರೋಮಾಂಚಕ ಕೆಲಸವೆಂದು ಯೋಚಿಸುವುದು ತಪ್ಪು. ಕೈಯಲ್ಲಿ ಬಂದೂಕು ಇದ್ದರೆ ಮಹಿಳೆಗೆ ಅಪಾರ ಶಕ್ತಿ ಸಿಗುತ್ತದೆ. ಆದರೆ ಅವಳಿಗೆ ನಿಜವಾದ ಸುಖವಂತೂ ತನ್ನ ಸಂಸಾರ ಮತ್ತು ಮಕ್ಕಳಿಂದ ಸಿಗುತ್ತದೆ. ನಕ್ಸಲ್ ಪೀಡಿತ ಕ್ಷೇತ್ರಗಳಲ್ಲಿ, ನಕ್ಸಲೀಯರಲ್ಲಿ ಮಹಿಳೆಯರ ಸಂಖ್ಯೆ ಹೆಚ್ಚಾಗುತ್ತಿದೆ. ಆಘಾತಕಾರಿ ವಿಷಯವೆದರೆ ಇವರಲ್ಲಿ ಬಹಳಷ್ಟು ಸುಶಿಕ್ಷಿತರೂ ಇದ್ದಾರೆ.
ಕಾಡಿನಲ್ಲಿದ್ದ ಹಳ್ಳಿಗಳು ಮತ್ತು ನಿವಾಸಗಳು ಹಾಳಾಗತೊಡಗಿ ನಗರೀಕರಣ ಆರಂಭವಾದಾಗ ಪುರುಷರಿಗಿಂತ ಹೆಚ್ಚಾಗಿ ಮಹಿಳೆಯರು ನೋವನ್ನು ಅನುಭವಿಸಿದರು. ಪುರುಷರಿಗೆ ಸಾಮಾನ್ಯವಾಗಿ ಆತ್ಮಗೌರವ ಹಾಳಾಗುತ್ತದೆ. ತಮ್ಮ ಹೆಂಡತಿ, ಮಕ್ಕಳು ಮತ್ತು ಮನೆಯನ್ನು ಉಳಿಸಲಾಗುತ್ತಿಲ್ಲವೆಂದು ಅವರ ಪೌರುಷಕ್ಕೆ ಪೆಟ್ಟು ಬೀಳುತ್ತದೆ. ಆದರೆ ಮಹಿಳೆಯರು ಮತ್ತೆ ಮತ್ತೆ ಪೆಟ್ಟು ಸಹಿಸಿಕೊಳ್ಳಬೇಕಾಗುತ್ತದೆ. ವ್ಯಕ್ತಿಯಂತೂ ಹೋಗುತ್ತಾನೆ. ಅವನಿಗೆ ಆಶ್ರಯ ನೀಡುವ ಮನೆಯೂ ಹೋಗುತ್ತದೆ. ನಗರವಾಸಿಗಳು ಈ ಆದಿವಾಸಿ ಮಹಿಳೆಯರನ್ನು ಚೆನ್ನಾಗಿ ಲೂಟಿ ಮಾಡಿದರು. ಅವರ ಲೈಂಗಿಕ ಶೋಷಣೆಯೂ ಆಯಿತು. ಅವರಿಂದ ಬಿಟ್ಟಿಯಾಗಿ ದುಡಿಸಿಕೊಳ್ಳಲಾಯಿತು.
ಇಡೀ ದೇಶದಲ್ಲಿ ಮನೆಗೆಲಸ ಮಾಡುವ ಮಹಿಳೆಯರು, ಕಟ್ಟಡ ನಿರ್ಮಾಣದಲ್ಲಿ ದುಡಿಯುವ ಮಹಿಳಾ ಕಾರ್ಮಿಕರಲ್ಲಿ ಬಹಳಷ್ಟು ಜನ ಈ ಕಾಡುಗಳಿಂದ ಬಂದ ಆದಿವಾಸಿ ಯುವತಿಯರು. ಅವರು ತಮ್ಮ ಮನೆಗಳಿಂದ ಹೊರಹಾಕಲ್ಪಟ್ಟರು. ಬಹಳಷ್ಟು ಯುವತಿಯರಂತೂ ನಗರವಾಸಿಗಳ ಅಕ್ರಮ ಸಂತಾನಗಳು. ಅವರು ತಮ್ಮ ತಾಯಿಗಾದ ಅನ್ಯಾಯಕ್ಕೆ ಸೇಡು ತೀರಿಸಿಕೊಳ್ಳಲು ಏನು ಬೇಕಾದರೂ ಮಾಡಲು ಸಿದ್ಧರಿದ್ದಾರೆ. ನಕ್ಸಲರ ನಾಯಕರು ಈ ಮಹಿಳೆಯರ ಕೋಪದ ಸಂಪೂರ್ಣ ಲಾಭ ಪಡೆದಿದ್ದಾರೆ. ತಮಗಾದ ಅನ್ಯಾಯಕ್ಕೆ ಪ್ರತೀಕಾರ ಮಾಡಲು ಅವರನ್ನು ಹುರಿದುಂಬಿಸಿದ್ದಾರೆ.
ಮಹಿಳೆಯರನ್ನು ಕ್ರೂರರನ್ನಾಗಿ ಮಾಡುವುದು ಅಪಾಯಕಾರಿ ಎಂದು ಯೋಚಿಸದೆ ಅನೇಕ ಬಾರಿ ಅವರನ್ನು ಅಬಲೆಯರೆಂದು ತಿಳಿದು ಬಲಶಾಲಿಗಳು ಅವರ ಪರವಾಗಿ ಸೇಡು ತೀರಿಸಿಕೊಳ್ಳುತ್ತಾರೆ. ಮಹಿಳೆಯರು ಅತ್ಯಾಚಾರವನ್ನು ಅಸಹಾಯಕರಾಗಿ ಸಹಿಸಿಕೊಳ್ಳುತ್ತಾರೆ. ಆದರೆ ಮುಂದೆ ಅವರಿಗೆ ಮಕ್ಕಳಾದಾಗ ಅವರನ್ನು ಪ್ರತೀಕಾರ ತೆಗೆದುಕೊಳ್ಳಲು ಸಿದ್ಧಪಡಿಸುತ್ತಾರೆ. ಇಡೀ ವಿಶ್ವದಲ್ಲಿ ಜೆಹಾದಿಗಳ ಸಂಖ್ಯೆ ಕಡಿಮೆಯಿಲ್ಲ ಎನ್ನುವುದಾದರೆ ಅದಕ್ಕೆ ಕಾರಣ ಅವರು ಮಹಿಳೆಯರಿಗೆ ಅವಮಾನ ಮಾಡಲಾಗುತ್ತಿರುವ ಮನೆಗಳಿಂದ ಬಂದಿರುತ್ತಾರೆ. ಮಹಿಳೆಯರನ್ನು ಅಬಲೆಯರೆಂದು ತಿಳಿಯಲಾಗುತ್ತಿದೆ. ಸಮಾಜ ಮತ್ತು ಸರ್ಕಾರದ ವಿರುದ್ಧ ಅವರಲ್ಲಿ ವಿಷವೇ ತುಂಬಿದೆ.
ಇದರಿಂದಾಗಿ ಪ್ರತಿಯೊಂದು ಧರ್ಮ ಮಹಿಳೆಯರ ಮೇಲೆ ವಿಧವಿಧವಾದ ನಿಯಂತ್ರಣಗಳನ್ನು ಹೇರುತ್ತದೆ. ಏಕೆಂದರೆ ಎಲ್ಲ ಆಡಳಿತಗಾರರಿಗೂ ಗಾಯಗೊಂಡ ಕುಪಿತ ಮಹಿಳೆ ಅಪಾಯಕಾರಿಯೆಂದು ತಿಳಿದಿದೆ. ಆದ್ದರಿಂದ ಧರ್ಮ ಅವರ ಮನಸ್ಸನ್ನಷ್ಟೇ ಅಲ್ಲದೆ, ಕೈ ಕಾಲುಗಳನ್ನೂ ಕತ್ತರಿಸಿ ಅವರನ್ನು ಜೀವಂತ ಶವಗಳನ್ನಾಗಿ ಮಾಡಿಬಿಡುತ್ತದೆ. ಅದರಿಂದ ಅವರು ಪರಂಪರೆಗಳನ್ನು ಹೊತ್ತೂ ಹೊತ್ತೂ ಮುದುಕಿಯರಾಗಿ ರೋಗಪೀಡಿತರಾಗಬೇಕು ಮತ್ತು ನೆಟ್ಟಗೆ ನಿಂತು ಏನಾದರೂ ಮಾಡುವ ಕಲ್ಪನೆಯನ್ನೂ ಮಾಡದಂತಿರಬೇಕು.