ಆ ಮನೆಯಲ್ಲಿ ವಯಸ್ಸಾದ ದಂಪತಿಗಳು ಮಾತ್ರ ವಾಸವಾಗಿದ್ದರು. ಇದ್ದಕ್ಕಿದ್ದಂತೆ ಒಂದು ರಾತ್ರಿ ಒಬ್ಬ ಕಳ್ಳ ಕೈಯಲ್ಲಿ ಭಾರಿ ಚಾಕು ಚೂರಿ ಹಿಡಿದು ಅವರ ಮನೆಗೆ ನುಗ್ಗಿ ಬಂದ.
ಕಳ್ಳ : ಏ ಮುದುಕಿ, ನಿದ್ದೆ ಮಾಡಿದ್ದು ಸಾಕು. ಮೊದಲು ನಿನ್ನ ಒಡವೆ ಬಿಚ್ಚಿಕೊಡು.
ಮುದುಕಿ : ಅಯ್ಯೋ….. ಒಡವೆ ಮಾತ್ರ ಕೇಳಬೇಡಪ್ಪ, ಹಳೇ ಚಿತ್ರಾನ್ನ ಇದೆ. ತಿಂದುಕೊಂಡು ಹೊರಟುಹೋಗು.
ಕಳ್ಳ : ಹೊಟ್ಟೆ ಹಸಿಯುತ್ತಿದೆ, ಇರಲಿ. ಅಂದಹಾಗೆ ನಿನ್ನ ಹೆಸರೇನು?
ಮುದುಕಿ : ನನ್ನ ಹೆಸರು ಲಕ್ಷ್ಮಿದೇವಿ.
ಕಳ್ಳ : ಅಯ್ಯೋ ಲಕ್ಷ್ಮಿಯೇ? ನಮ್ಮಮ್ಮನ ಹೆಸರು ಕೂಡ ಲಕ್ಷ್ಮಮ್ಮ. ಹೋಗು, ನಿನಗೆ ಜೀವದಾನ ಮಾಡಿದ್ದೇನೆ. ಆದರೆ… ಏ ಮುದುಕ, ಮೊದಲು ನಿನ್ನ ಹಳೆ ಪೆಟ್ಟಿಗೆಯಲ್ಲಿರೋ ಹಣ ಇತ್ಯಾದಿ ಕೊಟ್ಟುಬಿಡು! ಇಲ್ಲದಿದ್ದರೆ ಈಗಲೇ ಚೂರಿ ಹಾಕ್ತೀನಿ.
ಮುದುಕ : ನೋಡಪ್ಪ, ಹಣದ ಬದಲು ಈ ಛತ್ರೀನೋ, ವಾಕಿಂಗ್ ಸ್ಟಿಕ್ಕೋ ತಗೋ. ಅಂದಹಾಗೆ ನನ್ನ ಹೆಸರು ಲಕ್ಷ್ಮಿನಾರಾಯಣ. ಎಲ್ಲರೂ ಪ್ರೀತಿಗೆ ನನ್ನ `ಲಕ್ಷ್ಮಿ’ ಅಂತ್ಲೇ ಕರೀತಾರೆ!
ಕಳ್ಳ : !?…!!??? ?
ಒಂದು ಸಲ ಹೆಲಿಕಾಪ್ಟರ್ ಕೆಳಗೆ ಲ್ಯಾಂಡ್ ಆಗಲಾರದೆ, ದೊಡ್ಡ ಹಗ್ಗವನ್ನು ಮೇಲಿನಿಂದ ಇಳಿಬಿಟ್ಟರು. ಅದನ್ನು ಹಿಡಿದು 1-1 ಜನ ನೇತಾಡುತ್ತಾ ಇಳಿಯಬೇಕಾಯಿತು. ಅವರಲ್ಲಿ 10 ಮಂದಿ ಗಂಡಸರು, ಒಬ್ಬಾಕೆ ಸ್ಥೂಲ ಹೆಂಗಸು.
ಆ ಹಗ್ಗ ದುರ್ಬಲವಾಗಿತ್ತು. ಒಮ್ಮೆಲೇ 1-1 ಜನರ ಭಾರ ಹೊತ್ತು ಎಲ್ಲರನ್ನೂ ಸುರಕ್ಷಿತವಾಗಿ ಕೆಳಗೆ ಇಳಿಸುವುದು ಸಾಧ್ಯವಿರಲಿಲ್ಲ. ಯಾವ ಕ್ಷಣದಲ್ಲಾದರೂ ಅದು ತುಂಡರಿಸುವ ಸ್ಥಿತಿ ಬಂತು. ಅಷ್ಟು ಜನರಲ್ಲಿ ಕನಿಷ್ಠ ಯಾರಾದರೂ ಒಬ್ಬರು ಹಗ್ಗ ಬಿಟ್ಟು ನೇರವಾಗಿ ಕೆಳಗೆ ದುಮುಕಬೇಕು, ಇಲ್ಲದಿದ್ದರೆ ಭಾರಕ್ಕೆ ಅದು ತುಂಡರಿಸುತ್ತೆ, ಆಗ ಎಲ್ಲರೂ ಪ್ರಾಣ ಕಳೆದುಕೊಳ್ಳಬೇಕಾಗುತ್ತದೆ ಎಂದು ಪೈಲಟ್ ಹೇಳಿದ. ಆದರೆ ಈಗ ಈ ಬಲಿದಾನ ನೀಡುವವರು ಯಾರು? ಈ ಜಿಜ್ಞಾಸೆ ಎಲ್ಲರ ತಲೆ ತಿನ್ನತೊಡಗಿತು. ಆಗ ಆ ಹೆಂಗಸು ಬಹಳ ಭಾವುಕಳಾಗಿ ಹೇಳತೊಡಗಿದಳು, “ನಾನು ನನ್ನ ಸ್ವಇಚ್ಛೆಯಿಂದ ಈ ಹಗ್ಗ ಬಿಟ್ಟು ಕೆಳಗೆ ದುಮುಕಲು ಸಿದ್ಧಳಾಗಿದ್ದೇನೆ, ಏಕೆಂದರೆ ತ್ಯಾಗ ಹೆಣ್ಣಿನ ಹುಟ್ಟುಗುಣ! ಆಕೆ ಪ್ರತಿದಿನ ತನ್ನ ಗಂಡ, ಮಕ್ಕಳು, ಮನೆಯವರಿಗಾಗಿ ತ್ಯಾಗ ಮಾಡುತ್ತಲೇ ಇರುತ್ತಾಳೆ. ಸ್ತ್ರೀಯರು ಅನಾದಿ ಕಾಲದಿಂದಲೂ ಪುರುಷರಿಗಾಗಿ ನಿಸ್ವಾರ್ಥತೆಯಿಂದ ತ್ಯಾಗಗಳನ್ನು ಮಾಡುತ್ತಲೇ ಇದ್ದಾರೆ….” ಎಂದು ಆಕೆ ತನ್ನ ಭಾಷಣ ಮುಗಿಸಿದ್ದೇ ತಡ, ಹುರುಪಿನಿಂದ ಎಲ್ಲಾ ಗಂಡಸರೂ ಎರಡೂ ಕೈ ಬಿಟ್ಟು ಚಪ್ಪಾಳೆ ತಟ್ಟಿದ್ದೂ ತಟ್ಟಿದ್ದೇ!
ಒಬ್ಬ ವ್ಯಕ್ತಿ ಅರ್ಧ ರಾತ್ರಿಯಲ್ಲಿ ರಸ್ತೆ ದಾಟುತ್ತಿದ್ದಾಗ, ಪೊಲೀಸ್ ಪೇದೆಗೆ ಸಿಕ್ಕುಬಿದ್ದ.
ಪೊಲೀಸ್ : ಇಷ್ಟು ತಡವಾಗಿ ಹೋಗಿದೆ… ಈ ಹೊತ್ತಿನಲ್ಲಿ ಇಂಥ ವಾಕಿಂಗ್ ಗೇನು ಕಾರಣ?
ವ್ಯಕ್ತಿ : ಅಯ್ಯೋ ಹೋಗಯ್ಯ! ಆಗ ಕಾರಣ ನನಗೆ ಗೊತ್ತಿದ್ದರೆ ಅದನ್ನು ನನ್ನ ಹೆಂಡತಿಗೆ ಸ್ಪಷ್ಟಪಡಿಸಿ, ಹಾಯಾಗಿ ಮನೆಯಲ್ಲೇ ಮಲಗಿರುತ್ತಿದ್ದೆ ಅಲ್ವೇ?
ಪ್ರೇಯಸಿ : ಡಾರ್ಲಿಂಗ್, ಒಂದು ಪಕ್ಷ ನಾನು ನಿನ್ನನ್ನು ಮದುವೆ ಆಗಲಿಲ್ಲ ಅಂತಿಟ್ಕೊ, ಆಗ ನೀನು ಆತ್ಮಹತ್ಯೆ ಮಾಡಿಕೊಳ್ತೀಯಾ?
ಪ್ರಿಯತಮ : ಇದರಲ್ಲಿ ಸಂದೇಹವೇನು ಬಂತು? ಪ್ರತಿಸಲ ನಾನು ಹಾಗೆ ತಾನೇ ಮಾಡೋದು?
ಮಹೇಶ : ನಿನ್ನ ಹೆಂಡತಿಯ ಹಲ್ಲು ನೋವು ಸರಿಹೋಯಿತೋ ಇಲ್ಲವೋ?
ಸುರೇಶ : ಹ್ಞೂಂ, ಡಾಕ್ಟರ್ ಗೆ ತೋರಿಸಿದ ತಕ್ಷಣವೇ ಸರಿಹೋಯಿತು.
ಮಹೇಶ : ಹೌದೇ? ಅದ್ಯಾವುದಪ್ಪ ಅಂಥ ಮದ್ದು?
ಸುರೇಶ : ಅದು ಚಿಕಿತ್ಸೆ ಅಥವಾ ಔಷಧಿಯಿಂದಲ್ಲ, ಡಾಕ್ಟರ್ ಹೇಳಿದ ಮಾತಿನಿಂದ.
ಮಹೇಶ : ಅದೆಂಥ ಮಾತು?
ಸುರೇಶ : ಇದು ವೃದ್ಧಾಪ್ಯದ ಲಕ್ಷಣ ಅಂತಂದ್ರು!
ಒಬ್ಬ ಭಿಕಾರಿ ಭಿಕ್ಷೆ ಬೇಡುವ ಸಲುವಾಗಿ ವಿಶಾಲಾಕ್ಷಮ್ಮನವರ ಮನೆ ಮುಂದೆ ಬಂದು ನಿಂತು ಏನಾದ್ರೂ ಇದ್ರೆ ಕೊಡಿ ಎಂದು ಅಂಗಾಚಿದ.
48ರ ಹರೆಯದ ವಿಶಾಲಕಾಯದ ವಿಶಾಲಾಕ್ಷಮ್ಮ ನಿಧಾನವಾಗಿ ನಡೆದು ಬಂದು ಇವನನ್ನು ಕಂಡು ಚೆನ್ನಾಗಿ ಬೈದರು, “ನಾಚಿಕೆ ಆಗಲ್ವೇನಯ್ಯ ನಿನ್ನ ಜನ್ಮಕ್ಕೆ! ಕಡಿದರೆ 4 ಆಳಾಗುತ್ತಿ, ಏನಾದ್ರೂ ಕೂಲಿನಾಲಿ ಮಾಡ್ಲಿಕ್ಕೆ ಏನು ರೋಗ? ಕೈ ಕಾಲು ಗಟ್ಟಿಯಾಗಿದೆ, ಕಿವಿ ಕೇಳ್ಸುತ್ತೆ, ಕಣ್ಣು ಕಾಣ್ಸುತ್ತೆ, ಚೆನ್ನಾಗಿ ಮಾತನಾಡ್ತೀಯಾ…. ಇನ್ನೇನಯ್ಯ ರೋಗ ನಿಂಗೆ?”
ಆಕೆಯನ್ನೇ ದುರದುರನೇ ನೋಡಿದ ಭಿಕಾರಿ, “ಅಲ್ಲ ಮೇಡಂ, ನೀವು ನೋಡಿದ್ರೆ ಇಷ್ಟು ಸ್ಮಾರ್ಟ್ ಆಗಿ ಬ್ಯೂಟಿಫುಲ್ ಆಗಿದ್ದೀರಿ. ಬಣ್ಣ ಒಳ್ಳೆ ಲಕಲಕ ಅಂತಿದೆ, ಫಿಗರ್ ನೋಡಿದ್ರೆ ಬಹಳ ಸೂಪರ್ ಆಗಿದೆ, ನಿಮ್ಮದು ಏನು ಮಹಾ ವಯಸ್ಸು? ನೀವು ಏಕೆ ಬೆಂಗಳೂರು, ಮುಂಬೈಗೆ ಹೋಗಿ ಹೊಸ ಸಿನಿಮಾ ಹೀರೋಯಿನ್ ಆಗಬಾರದು? ಈ ತರಹ ಮನೆಯಲ್ಲೇ ಬಿದ್ದಿರುವುದು ನಿಮ್ಮ ಗೆಟಪ್ ಗೆ ಚೆನ್ನಾಗಿಲ್ಲ ಬಿಡಿ….”
ತಕ್ಷಣ ಆಕೆ, “ಇರಪ್ಪ, ಇವತ್ತು ಬೆಳಗ್ಗೆ ಮಾಡಿದ್ದ ಕೇಸರಿಭಾತ್ ತರ್ತೀನಿ,” ಎನ್ನುವುದೇ?
ಫ್ರೌಢ ವಯಸ್ಸು ಮೀರಿದ್ದ ಒಬ್ಬ ವಿಧುರ ಹಾಗೂ ವಿಧವೆ ಒಮ್ಮೆ ಭೇಟಿಯಾಗಿ ಗೆಳೆತನ ಬೆಳೆಸಿಕೊಂಡರು. 5 ವರ್ಷಗಳಲ್ಲಿ ಅವರ ಗೆಳೆತನ ಕ್ರಮೇಣ ಪ್ರೇಮಕ್ಕೆ ತಿರುಗಿತು. ಕೊನೆಗೂ ಒಂದು ದಿನ ಆತ ಆಕೆಯ ಮುಂದೆ ಮದುವೆಯ ಪ್ರಸ್ತಾಪ ಮಾಡಿದ. ಆಕೆಯೂ ಹ್ಞೂಂ ಎಂದಳು.
ಮರುದಿನ ಆತನಿಗೆ ಆಕೆ ತನ್ನ ಪ್ರಸ್ತಾಪಕ್ಕೆ ಏನೆಂದು ಉತ್ತರಕೊಟ್ಟಿದ್ದಳು ಎಂಬುದೇ ಮರೆತುಹೋಯಿತು. ಹ್ಞೂಂ ಎಂದಳೋ ಅಥವಾ ಬೇಡ ಎಂದಳೋ ನೆನಪಿಗೇ ಬರಲಿಲ್ಲ. ಆತ ಅದೇ ವಿಚಾರವಾಗಿ ಬಹಳ ಯೋಚಿಸಿದಾಗಲೂ ಹೊಳೆಯಲೇ ಇಲ್ಲ.
ಹೀಗಾಗಿ ಕೂಡಲೇ ಆತ ಆಕೆಗೆ ಫೋನ್ ಮಾಡಿದ. ನಿನ್ನೆ ತಾನು ನೀಡಿದ ಮದುವೆ ಪ್ರಸ್ತಾಪಕ್ಕೆ ಆಕೆಯ ಉತ್ತರವೇನೆಂದು ಖಚಿತಪಡಿಸಲು ತಿಳಿಸಿದ.
ಅದಕ್ಕೆ ಆಕೆ, “ನೀವು ಫೋನ್ ಮಾಡಿದ್ದು ಒಳ್ಳೇದೇ ಆಯ್ತು, ಥ್ಯಾಂಕ್ಸ್. ಮದುವೆಗೆ ನಾನು ಹ್ಞೂಂ ಅಂದಿದ್ದೇ ಅನ್ನೋದೇನೋ ಸರಿ, ಆದರೆ ಯಾರಿಗೆ ಹಾಗೆ ಹೇಳಿದ್ದೆ ಅನ್ನೋದೇ ಮರೆತುಹೋಗಿದೆಯಲ್ಲ…?”
ಕೆಲವು ಅಮೆರಿಕನ್ ಗೆಳೆಯರು ಭಾರತೀಯ ಮಿತ್ರರೊಂದಿಗೆ ಕುಳಿತು ಹರಟೆ ಹೊಡೆಯುತ್ತಿದ್ದರು. ಯಾವ ರೀತಿ ಭಾರತೀಯ ಡಾಕುಗಳು ಶ್ರೀಮಂತರ ಕುಟುಂಬದ ಸದಸ್ಯರನ್ನು ಅಪಹರಿಸಿ, ಹಣ ಕೊಡದಿದ್ದರೆ ಅವರನ್ನು ಬಿಡುವುದೇ ಇಲ್ಲ ಎಂದು ಬೆದರಿಸುತ್ತಾರೆ, ಎಂದೆಲ್ಲ ಮಾತನಾಡಿಕೊಳ್ಳುತ್ತಿದ್ದರು.
ಆಗ ಅಮೆರಿಕನ್ ಗೆಳೆಯರು, ತಮ್ಮಲ್ಲಿ ಬೇರೆಯೇ ಆದ ಪದ್ಧತಿ ಇದೆ ಎಂದರು. ಅಲ್ಲಿನ ಡಾಕುಗಳು ಅಮೆರಿಕನ್ ಅಳಿಯಂದಿರ ಅತ್ತೆಯವರನ್ನು ಕಿಡ್ ನ್ಯಾಪ್ ಮಾಡುತ್ತಾರಂತೆ. ನಂತರ ಅಳಿಯನಿಗೆ ಫೋನ್ ಮಾಡಿ, ತೆಪ್ಪಗೆ ಇಷ್ಟು ಕೋಟಿ ಡಾಲರ್ ಕೊಟ್ಟರೆ ಸರಿ, ಇಲ್ಲದಿದ್ದರೆ ಈಗಲೇ ನಿಮ್ಮ ಮನೆಗೆ ನಿಮ್ಮತ್ತೆಯನ್ನು ಕಳುಹಿಸಿಬಿಡುತ್ತೇವೆ ಎಂದು ಬೆದರಿಸುತ್ತಾರಂತೆ!
ಇಬ್ಬರು ಗೆಳತಿಯರು ವಾಯುವಿಹಾರಕ್ಕೆ ಹೊರಟಿದ್ದರು. ಸಾಕಷ್ಟು ದೂರ ನಡೆದಾಗ ಎದುರಿಗಿನ ಅಪಾರ್ಟ್ ಮೆಂಟ್ ನ 4ನೇ ಮಹಡಿಯ ಬಾಲ್ಕನಿಯಿಂದ ಒಬ್ಬಾಕೆ ಗೋಗರೆಯುತ್ತಿದ್ದ ಗಂಡನ ಮಾತನ್ನು ಕೇಳಿಸಿಕೊಳ್ಳದೆ ಅವನನ್ನು ತಳ್ಳಿಬಿಟ್ಟಳು. ಆತ ನೇರವಾಗಿ ಕಸದ ತೊಟ್ಟಿಗೆ ಬಿದ್ದು ಮೂಳೆ ಮುರಿದುಕೊಂಡ.
ವಿಮಲಾ : ನೀನು ಏನೇ ಹೇಳು, ಬೆಂಗಳೂರಿನ ಮಹಿಳೆಯರು ಬಹಳ ದುಂದುವೆಚ್ಚ ಮಾಡ್ತಿದ್ದಾರೆ.
ಶ್ಯಾಮಲಾ : ಅದು ಹೇಗೆ ಹೇಳ್ತೀಯಾ?
ವಿಮಲಾ : ಇದನ್ನು ನೋಡು, ಮುಂದಿನ 10-15 ವರ್ಷ ಆ ಗಂಡ ಅನ್ನುವ ಪ್ರಾಣಿ ಆಕೆ ಮಾತು ಕೇಳಿಕೊಂಡು ತೆಪ್ಪಗೆ ಇರ್ತಿದ್ದ. ಈಕೆ ನೋಡಿದ್ರೆ ಅವನನ್ನು ಇಷ್ಟು ಬೇಗ ಕಸದ ಬುಟ್ಟಿಗೆ ಎಸೆಯುವುದೇ?