ಹೀಗೆ ಪುಟ್ಟಕ್ಕ ಉಟ್ಟು ತೊಟ್ಟರೆ ಅದರಲ್ಲಿ ತಪ್ಪೇನು? ಒಂದು ಪಾಷ್ ಹೋಟೆಲ್ ನಲ್ಲಿ ಯಾವುದೋ ಸಣ್ಣ ಕಿಟಿ ಪಾರ್ಟಿ ನಡೆಯುತ್ತಿತ್ತು. ಅದರಲ್ಲಿ 7-8 ಮಹಿಳೆಯರು ಒಟ್ಟಿಗೆ ಒಂದೆಡೆ ಕುಳಿತಿದ್ದರು. ಸ್ವಾದಿಷ್ಟ ತಿನಿಸುಗಳ ಭೋಜನದ ಜೊತೆ ಸ್ವಾರಸ್ಯಕರ ವಿಷಯಗಳ ಚರ್ಚೆಯೂ ನಡೆಯುತ್ತಿತ್ತು. ಅಡಿಯಿಂದ ಮುಡಿಯವರೆಗೆ ಅಚ್ಚುಕಟ್ಟಾಗಿ ಸಿಂಗರಿಸಿಕೊಂಡಿದ್ದ ಈ ಲಲನಾಮಣಿಗಳನ್ನು ಕಂಡಾಗ, ಇವರು ಇದೀಗ ತಾನೇ ಸೀದಾ ಬ್ಯೂಟಿಪಾರ್ಲರ್ ನಿಂದ ಎದ್ದು ಬಂದಂತಿತ್ತು.
ಪ್ರತಿಯೊಬ್ಬರೂ ಮ್ಯಾಚಿಂಗ್ ಇರುವಂಥ ಆ್ಯಕ್ಸೆಸರೀಸ್ ಜೊತೆಗೆ ಟಿಪ್ ಟಾಪಾಗಿ ಡ್ರೆಸ್ ಮಾಡಿಕೊಂಡಿದ್ದರು. ನೀಟಾಗಿ ಫೈಲ್ ಮಾಡಲಾಗಿದ್ದ ಉಗುರು, ಉಡುಗೆಗೆ ಹೊಂದಿಕೊಳ್ಳುವ ನೇಲ್ ಪಾಲಿಶ್, ಮ್ಯಾಚಿಂಗ್ ಜ್ಯೂವೆಲರಿ, ಮ್ಯಾಚಿಂಗ್ ಸ್ಯಾಂಡಲ್ಸ್, ಮ್ಯಾಚಿಂಗ್ ಮೇಕಪ್ ಸಹ ಇತ್ತು. ಅವರನ್ನು ನೋಡಿದರೆ ಪ್ರತಿಯೊಬ್ಬರೂ ಒಬ್ಬರನ್ನೊಬ್ಬರು ಮೀರಿಸುವ ಹಾಗೆ ಪೈಪೋಟಿಗಿಳಿದು ಸಿಂಗರಿಸಿಕೊಂಡಂತೆ ಕಾಣುತ್ತಿತ್ತು. ಅವಳ ಮೇಕಪ್ ನನ್ನ ಮೇಕಪ್ ಗಿಂತ ಅದು ಹೇಗೆ ಮಿಗಿಲು ಎನ್ನುವಂತೆ ಪ್ರತಿಯೊಬ್ಬರೂ ಒಂದಕ್ಕಿಂತ ಒಂದು ದುಬಾರಿ ಬ್ಯೂಟಿ ಪ್ರಾಡಕ್ಟ್ಸ್ ನ್ನು ಬಳಸಿದ್ದರು.
ಅವರಲ್ಲಿ ಒಬ್ಬಳು ಹೇಳಿದಳು, “ಇವತ್ತಂತೂ ರೆಡಿ ಆಗಲು ನನಗೆ 2 ತಾಸು ಬೇಕಾಯಿತು.”
ಅದನ್ನು ಕೇಳಿಸಿಕೊಂಡ ಮತ್ತೊಬ್ಬಳು ತಕ್ಷಣ, “ನಾನಂತೂ ಇವತ್ತು ಪಾರ್ಲರ್ ಗೆ ಹೋಗಿ ಹೇರ್ ಸ್ಟೈಲ್ ಮಾಡಿಸಿಕೊಂಡು ಬಂದೆ,” ಎಂದಳು.
ಅದಾದ ನಂತರ ಮತ್ತೊಬ್ಬಳು ತನ್ನ ಮೇಕಪ್ ಕಿಟ್ ಕುರಿತು ಹೇಳತೊಡಗಿದರೆ, ಇನ್ನೊಬ್ಬಳು ತನ್ನ ಡ್ರೆಸ್ಸಿಂಗ್ ಟೇಬಲ್ ಎಷ್ಟು ಅಪ್ ಟು ಡೇಟ್ ಆಗಿರುತ್ತದೆ, ಎಂತೆಂಥ ಹೊಸ ಪರ್ಫ್ಯೂಮ್ ಗಳು ಬಂದಿವೆ ಎಂದು ವಿವರಿಸಿದಳು. ಮತ್ತೊಬ್ಬಾಕೆ ಮಾರುಕಟ್ಟೆಗೆ ಬಂದಿರುವ ಹೊಸ ಬ್ಯೂಟಿ ಪ್ರಾಡಕ್ಟ್ಸ್ ಬಗ್ಗೆ ತನಗಿರುವ ಮಾಹಿತಿ ಕುರಿತು ಹೇಳತೊಡಗಿದಳು. ಈ ರೀತಿ ಇಡೀ ಕಿಟಿ ಪಾರ್ಟಿಯ ಟಾಪಿಕ್ ಫ್ಯಾಷನ್, ಮೇಕಪ್, ಗ್ಲಾಮರ್ ಗಳ ರಿಂಗಣದಿಂದ ತುಂಬಿಹೋಯಿತು.
ಅರೆ, ಎಲ್ಲೆಲ್ಲೂ ಫ್ಯಾಷನ್ ವಿಜೃಂಭಿಸುತ್ತಿರುವಾಗ ಇಂಥ ಮಾತುಕಥೆ ಮುಂದುವರಿಯದೆ ಇರುತ್ತದೆಯೇ? ಮಹಿಳೆಯರಿಗೆ ಈ ರೀತಿ ಅಂದವಾಗಿ ಅಲಂಕರಿಸಿಕೊಳ್ಳುವುದು ಅವರ ಜೀವನದ ಒಂದು ಅವಿಭಾಜ್ಯ ಅಂಗವಾಗಿ ಹೋಗಿದೆ, ಇದನ್ನು ಯಾರೂ ಅಲ್ಲಗಳೆಯಲಾರರು. ಸೌಂದರ್ಯ ಹಾಗೂ ಹೆಣ್ಣು ಪರಸ್ಪರ ಪರ್ಯಾಯ, ಪೂರಕ. ಹೀಗಿರುವಾಗ ಹೆಂಗಸರು ಇಂಥ ಶೃಂಗಾರ ಸಿಂಗಾರಗಳಿಗಾಗಿ ತಮ್ಮ ಜೀವನದ ಸುಮಾರು ಶೇ.25ರಷ್ಟು ಭಾಗವನ್ನು ಮೀಸಲಾಗಿಟ್ಟರೆ ಅದರಲ್ಲಿ ತಪ್ಪೇನು? ಈ ಕುರಿತಾಗಿ ಅನಗತ್ಯವಾಗಿ ಬೇರೆಯವರು ಗೊಣಗಬೇಕೇಕೆ? ಹೆಣ್ಣು ಹೀಗೆ ಅಚ್ಚುಕಟ್ಟಾಗಿ ಸಿಂಗರಿಸಿಕೊಳ್ಳುವುದರಲ್ಲಿ ತಪ್ಪಾದರೂ ಏನು?
ಅಲಂಕಾರಹಿತ ಜೀವನ ಅಗತ್ಯವೇ?
ಮಹಿಳೆಯರು ತಾವು ಇತರರಿಗಿಂತ ಅತ್ಯಂತ ಸೌಂದರ್ಯವತಿಯರಾಗಿ ಹೆಚ್ಚು ಆಕರ್ಷಕವಾಗಿ ಕಂಡುಬರಬೇಕೆಂದು ಬಯಸುವುದರಲ್ಲಿ ಎರಡು ಮಾತಿಲ್ಲ. ಹೀಗಾಗಿ ಅವರು ತಮ್ಮ ಸೌಂದರ್ಯ ಹೆಚ್ಚಿಸಿಕೊಳ್ಳಲು ಅನೇಕಾನೇಕ ವಿಧಾನಗಳನ್ನು ಅನುಸರಿಸುತ್ತಿರುತ್ತಾರೆ. ಸುಂದರವಾಗಿ ಸಿಂಗರಿಸಿಕೊಂಡು, ಟಿಪ್ ಟಾಪಾಗಿ ಕಂಡುಬರಲು ಅವರು ಎಷ್ಟು ಹಣ ಬೇಕಾದರೂ ಖರ್ಚು ಮಾಡಲು ಹಿಂಜರಿಯುವುದಿಲ್ಲ. ಈ ಕಾರಣದಿಂದಲೇ ಅವರು ತಮ್ಮ ಶಾಪಿಂಗ್ ನಲ್ಲಿ ಸದಾ ಹೊಸ ಹೊಸ ಉಡುಗೆ, ಬಟ್ಟೆಬರೆ, ಜ್ಯೂವೆಲರಿ, ಸೌಂದರ್ಯ ಪ್ರಸಾಧನಗಳು, ಫುಟ್ ವೇರ್, ವಿವಿಧ ಆ್ಯಕ್ಸೆಸರೀಸ್ ಇತ್ಯಾದಿಗಳಿಗೆ ಹೆಚ್ಚಿನ ಮಹತ್ವ ಕೊಡುತ್ತಾರೆ. ಇಂದಿನ ಆಧುನಿಕ ಯುವತಿಯರಂತೂ ಮೇಕಪ್ ರಹಿತ ಜೀವನವನ್ನು ಊಹಿಸಿಕೊಳ್ಳಲಿಕ್ಕೂ ಇಷ್ಟಪಡುವುದಿಲ್ಲ. ಈ ಕಾರಣದಿಂದಲೇ ತರಕಾರಿ ಹಣ್ಣು ಕೊಳ್ಳುವಾಗ ತಮ್ಮ ಗಂಟಲು ನೋಯಿಸಿಕೊಂಡು ಚೌಕಾಸಿ ಮಾಡುವ ಮಧ್ಯಮ ವರ್ಗದ ಮಹಿಳಾಮಣಿಗಳು, ತಮ್ಮ ಮೇಕಪ್ ಸಾಮಗ್ರಿ, ಸೀರೆ ಡ್ರೆಸ್ ಮೆಟೀರಿಯಲ್ಸ್, ಜ್ಯೂವೆಲರಿ, ಫುಟ್ ವೇರ್ ಗಳ ಶಾಪಿಂಗ್ ನಲ್ಲಿ ಮಾತ್ರ ಎಂದೂ ಸಮಯ ವ್ಯರ್ಥ ಮಾಡದೆ, ಕ್ಷಣಮಾತ್ರದಲ್ಲಿ ಅವನ್ನು ಕೊಳ್ಳಲೇಬೇಕೆಂದು ನಿರ್ಧರಿಸಿಬಿಡುತ್ತಾರೆ. ಕೆಲವರಿಗಂತೂ ಈ ಕ್ರೇಜ್ ಎಷ್ಟರಮಟ್ಟಿಗೆ ಇರುತ್ತದೆಂದರೆ, ಮಾರುಕಟ್ಟೆಗೆ ಬಂದ ಪ್ರತಿಯೊಂದು ಹೊಸ ಪ್ರಾಡಕ್ಟನ್ನೂ ಟ್ರೈ ಮಾಡದೆ ಇರಲಾರರು. ಅಂತೂ ಎಲ್ಲಾ ಹೊಸ ವಸ್ತುಗಳನ್ನೂ ಬಳಸಿ ನೋಡೀಬೇಕೆಂಬ ಹಂಬಲ ಉಕ್ಕುತ್ತದೆ. ನೆರೆಹೊರೆ, ಫ್ರೆಂಡ್ಸ್, ಸಹೋದ್ಯೋಗಿಗಳ ಒಡನಾಟದ ಪರಿಣಾಮವಾಗಿ, `ಅವಳು ಕೊಂಡಿದ್ದಾಳೆಂದ ಮೇಲೆ ನಾನೇಕೆ ಕೊಳ್ಳಬಾರದು?’ ಎಂಬ ಆಲೋಚನೆ ಸಹ ಆಧುನಿಕ ಯುವತಿಯರನ್ನು ಮೇಲಿಂದ ಮೇಲೆ ಮೇಕಪ್ ಸಾಮಗ್ರಿಗಳನ್ನು ಕೊಳ್ಳಲು ಪ್ರೇರೇಪಿಸುತ್ತದೆ, ಜೊತೆಗೆ ಆ ನಿಟ್ಟಿನಲ್ಲಿ ಮಾರ್ಕೆಟ್ಸರ್ವೆ ಕೂಡ ನಡೆಯುತ್ತಿರುತ್ತದೆ.
ಯಾರೋ ಹೆಚ್ಚು ಪರಿಚಯವಿಲ್ಲದ ಮಹಿಳೆಯೊಬ್ಬಳು ತುಟಿಗೆ ಬಳಿದಿರುವ ಹೊಸ ಬಗೆಯ ಲಿಪ್ ಸ್ಟಿಕ್ ನ್ನು ಕಂಡು ಅನಾಯಾಸವಾಗಿ ಆಕೆಯ ಬಳಿ ಬಂದು, ಅದನ್ನು ಕೊಂಡದ್ದು ಎಲ್ಲಿ, ಅದರ ಶೇಡ್ ನಂಬರ್ ಏನು ಎಂದು ವಿಚಾರಿಸಲು ಹಿಂಜರಿಯುವುದಿಲ್ಲ. ಇದರಲ್ಲಿ ಅಂಥ ತಪ್ಪೇನೂ ಇಲ್ಲಿವೆನಿಸುತ್ತದೆ, ತಮ್ಮನ್ನು ತಾವು ಸುಂದರವಾಗಿ ಪ್ರಸ್ತುತಪಡಿಸಿಕೊಳ್ಳಬೇಕೆನಿಸುವ ಸ್ತ್ರೀಯರು ಅದಕ್ಕಾಗಿ ಪಡುವ ಯಾವ ಪ್ರಯಾಸವೂ ಅಪ್ರಯೋಜಕವಲ್ಲ.
ಮೌಲಿಕ ಹಕ್ಕು
ಇಂದಿನ ಆಧುನಿಕ ದಿನಗಳಲ್ಲಿ ಸುಂದರವಾಗಿ ಕಂಗೊಳಿಸಲು ಯುವಕರೇ ಧಾವಿಸಿ ಬೋಟಾಕ್ಸ್ ಟ್ರೀಟ್ಮೆಂಟ್ ಹಾಗೂ ಪಾರ್ಲರ್ಸಿಟ್ಟಿಂಗ್ಸ್ ಗೆ ಸಂಕೋಚಪಡುವುದಿಲ್ಲ ಎಂದಿರುವಾಗ, ಹೆಂಗಸರೇಕೆ ಈ ನಿಟ್ಟಿನಲ್ಲಿ ಹಿಂದುಳಿಯಬೇಕು? ಏಕೆಂದರೆ ಸುಂದರವಾಗಿ ಕಂಗೊಳಿಸುವುದು ಹಾಗೂ ಚಂದದ ಸಿಂಗಾರ ಮಾಡಿಕೊಳ್ಳುವುದು ಅವರ ಮೌಲಿಕ ಹಕ್ಕಾಗಿದೆ. ಅವರ ಈ ಮೌಲಿಕ ಹಕ್ಕನ್ನು ಅವರಿಂದ ಕಿತ್ತುಕೊಳ್ಳುವ ಹಕ್ಕು ಯಾರಿಗೂ ಇಲ್ಲ.
ಚಂದದ ಸಿಂಗಾರ ಮಾಡಿಕೊಳ್ಳುವುದಕ್ಕಾಗಿ ಮಹಿಳೆಯರು ಹೊಸ ಹೊಸ ವಿಧಾನಗಳು, ಟ್ರೀಟ್ ಮೆಂಟ್ ಹಾಗೂ ಮೇಕಪ್ ಸಾಮಗ್ರಿಗಳನ್ನು ಕೊಳ್ಳುವ ಪರಿಪಾಠವೇನೂ ಇಂದು ನಿನ್ನೆಯ ವಿಷಯವಲ್ಲ. ಪ್ರಾಚೀನ ಕಾಲದಲ್ಲಿ ರಾಣಿ ಮಹಾರಾಣಿಯರಿಂದ ಹಿಡಿದು ದಾಸಿಯರು, ಸಾಮಾನ್ಯ ಮಹಿಳೆಯರು ಸಹ ತಮ್ಮ ಯೋಗ್ಯತಾನುಸಾರ ಶೃಂಗಾರ ಮಾಡಿಕೊಳ್ಳುತ್ತಿದ್ದರು. ಆಗಿನ ಕಾಲದಲ್ಲೆಲ್ಲ ಈಗಿನಂತೆ ಬ್ಯೂಟಿ ಪ್ರಾಡಕ್ಟ್ಸ್ ಎಲ್ಲಿ ಸಿಗುತ್ತಿತ್ತು? ಹೀಗಾಗಿ ತಮ್ಮ ತುಟಿಗಳಿಗೆ ಬಣ್ಣ ತುಂಬಲು ಅವರು ಕೆಂಗುಲಾಬಿಯ ದಳಗಳನ್ನು ಬಳಸಿದರೆ ಬೇರೆ ಉದ್ದೇಶಗಳಿಗೆ ಗುಲಾಬಿಜಲ, ಹಾಲು, ಸ್ನಾನದ ನೀರಿಗೆ ಸುಗಂಧ ದ್ರವ್ಯ ಇತ್ಯಾದಿ ಬಳಸುತ್ತಿದ್ದರು.
ಹೆಚ್ಚುವ ಆತ್ಮವಿಶ್ವಾಸ
ಯಾವ ಸ್ತ್ರೀಯರು ಅಚ್ಚುಕಟ್ಟಾಗಿ ಸಿಂಗರಿಸಿಕೊಂಡು, ತಮ್ಮ ಸೌಂದರ್ಯವನ್ನು ಗೌರಯುತವಾಗಿ ಪ್ರದರ್ಶಿಸ ಬಯಸುತ್ತಾರೋ, ಅವರಲ್ಲಿ ಸಹಜವಾಗಿಯೇ ಆತ್ಮವಿಶ್ವಾಸ ಹೆಚ್ಚುತ್ತದೆ. ಅವರು ನಾಲ್ಕಾರು ಜನ ಸೇರಿರುವ ಸಭೆ ಸಮಾರಂಭಗಳಲ್ಲಿ ತಾವು ಆಕರ್ಷಣೆಯ ಕೇಂದ್ರಬಿಂದುವಾಗಿದ್ದೇವೋ ಅಥವಾ ಎಲ್ಲರ ದೃಷ್ಟಿಯೂ ತಮ್ಮ ಮೇಲೆ ನೆಟ್ಟಿದೆ ಎಂಬ ಅನುಭವ ಪಡೆದಾಗ, ತಾನಾಗಿ ಹೆಮ್ಮೆ ಮೂಡುತ್ತದೆ, ಆತ್ಮವಿಶ್ವಾಸ ತುಂಬಿಬರುತ್ತದೆ. ಈ ಆತ್ಮವಿಶ್ವಾಸ ಅವರ ನಡೆನುಡಿ, ಆಚಾರವಿಚಾರ, ಹಾವಭಾವ, ಕೆಲಸ ನಿರ್ವಹಿಸುವ ವಿಧಾನಗಳಲ್ಲಿಯೂ ಗೋಚರಿಸುತ್ತದೆ. ಸೌಂದರ್ಯಕ್ಕೆ ಯಾರನ್ನಾದರೂ ಕಟ್ಟಿಹಾಕುವ ಶಕ್ತಿ ಇದೆ ಎಂದಾದರೆ, ಮುಖ್ಯವಾಗಿ ತನ್ನ ಸಂಗಾತಿಯನ್ನು, ಆಗ ಅದನ್ನು ಶಾಶ್ವತವಾಗಿ ಉಳಿಸಿಕೊಳ್ಳಲು ಹೆಣ್ಣು ಹಿಂಜರಿಯಬೇಕೇಕೆ? ಯಾವ ಗಂಡನಿಗೆ ತಾನೇ ತನ್ನ ಹೆಂಡತಿ ಇತರರಿಗಿಂತ ಸುಂದರವಾಗಿ, ಸ್ಮಾರ್ಟ್ ಆಗಿರಬೇಕು, ನಾಲ್ವರಲ್ಲಿ ಎದ್ದು ಕಾಣಿಸುವಂತಿರಬೇಕೆಂದು ಆಸೆ ಇರುವುದಿಲ್ಲ? ಹಾಗೊಂದು ವೇಳೆ ಇಲ್ಲ ಎಂದುಕೊಂಡರೆ, ಯಾರಿಗಾದರೂ ಹೆಂಡತಿಯನ್ನು ಪರಿಚಯಿಸುವಾಗ ಗಂಡನ ಮುಖದಲ್ಲಿ ಅನಗತ್ಯವಾಗಿ ಹೆಮ್ಮೆ ಮೂಡುವುದೇಕೆ? ಸುಂದರ ಪತ್ನಿ ಸಂಗಾತಿಯಾಗಿದ್ದಾಳೆಂದರೆ ಯಾವ ಪತಿಗೆ ತಾನೇ ಸಮಾಜದಲ್ಲಿ ಗೌರವಾದರ ಹೆಚ್ಚದು? ಆತನ ಪತ್ನಿಯ ಸಲುವಾಗಿಯಾದರೂ, ಇತರ ಗಂಡಸರು ಆತನ ಒಡನಾಟ ಬಯಸುತ್ತಾರೆ ಎಂದರೆ ಉತ್ಪ್ರೇಕ್ಷೆಯಲ್ಲ. ಆದರೆ ತಾನು ನಾಲ್ವರ ಮಧ್ಯೆ ಆಕರ್ಷಣೆಯ ಕೇಂದ್ರಬಿಂದುವಾಗಿರಬೇಕು ಎಂದು ಯಾವ ಮಹಿಳೆ ತಾನೇ ಬಯಸದೆ ಇರಬಲ್ಲಳು? ಒಬ್ಬ ಸಾಧಾರಣ ರೂಪಿನ ಹೆಣ್ಣು ಸಹ ತನ್ನ ಬಣ್ಣ, ಮೈಕಾಂತಿ ಇನ್ನಷ್ಟು ಹೊಳಪು ಪಡೆಯಲಿ ಎಂದು ಫೇರ್ ನೆಸ್ ಕ್ರೀಂ ಬಳಸುತ್ತಾಳೆ. ಕಡಲೆಹಿಟ್ಟು, ಅರಿಶಿನ, ಚಂದನ, ಗುಲಾಬಿಜಲ ಬೆರೆಸಿ ಮುಖದ ಅಂದ ಹೆಚ್ಚಿಸುತ್ತಾಳೆ. ಅವಳು ತನ್ನ ಸೌಂದರ್ಯ ಸಂವರ್ಧನೆಗಾಗಿ ಎಷ್ಟು ಕಷ್ಟಪಡುತ್ತಾಳೋ, ತನ್ನ ಅಡುಗೆ ತಯಾರಿಯಲ್ಲಿ ಅಷ್ಟು ಕಷ್ಟಪಡಲಾರಳೇನೋ?
ಹೀಗಾಗುವುದು ಸಹ ಸ್ವಾಭಾವಿಕವೇ ಸರಿ. ಏಕೆಂದರೆ ನಿಮ್ಮ ಆಕರ್ಷಣೆ ಯಾರನ್ನೋ ಚುಂಬಕದಂತೆ ಸೆಳೆಯುತ್ತಿದೆ ಎಂದರೆ ಅಥವಾ ಯಾವುದೇ ಸಭೆ ಸಮಾರಂಭ, ಪಾರ್ಟಿಗಳಲ್ಲಿ ನಿಮ್ಮ ಸೌಂದರ್ಯ ಎಲ್ಲರ ಪ್ರಶಂಸೆಗೆ ಒಳಗಾಗಿದೆ ಎಂದರೆ ನಿಮ್ಮ ಆತ್ಮಸಾಕ್ಷಿಯಾಗಿ ಹೇಳಿ, ನಿಮಗೆ ಹೆಮ್ಮೆ ಎನಿಸದೇ? ಹೀಗಾಗಿ ಸೌಂದರ್ಯ ಸಂವರ್ಧನೆಗಾಗಿ ಮಾಡುವ ಲಕ್ಷಾಂತರ ಖರ್ಚು ದುಬಾರಿಯೂ ಅಲ್ಲ, ನಿಷ್ಟ್ರಯೋಜಕವೂ ಅಲ್ಲ!
– ಸುಮನಾ ಮೂರ್ತಿ.