ಹೀಗೆ ಪುಟ್ಟಕ್ಕ ಉಟ್ಟು ತೊಟ್ಟರೆ ಅದರಲ್ಲಿ ತಪ್ಪೇನು? ಒಂದು ಪಾಷ್ ಹೋಟೆಲ್ ನಲ್ಲಿ ಯಾವುದೋ ಸಣ್ಣ ಕಿಟಿ ಪಾರ್ಟಿ ನಡೆಯುತ್ತಿತ್ತು. ಅದರಲ್ಲಿ 7-8 ಮಹಿಳೆಯರು ಒಟ್ಟಿಗೆ ಒಂದೆಡೆ ಕುಳಿತಿದ್ದರು. ಸ್ವಾದಿಷ್ಟ ತಿನಿಸುಗಳ ಭೋಜನದ ಜೊತೆ ಸ್ವಾರಸ್ಯಕರ ವಿಷಯಗಳ ಚರ್ಚೆಯೂ ನಡೆಯುತ್ತಿತ್ತು. ಅಡಿಯಿಂದ ಮುಡಿಯವರೆಗೆ ಅಚ್ಚುಕಟ್ಟಾಗಿ ಸಿಂಗರಿಸಿಕೊಂಡಿದ್ದ ಈ ಲಲನಾಮಣಿಗಳನ್ನು ಕಂಡಾಗ, ಇವರು ಇದೀಗ ತಾನೇ ಸೀದಾ ಬ್ಯೂಟಿಪಾರ್ಲರ್ ನಿಂದ ಎದ್ದು ಬಂದಂತಿತ್ತು.
ಪ್ರತಿಯೊಬ್ಬರೂ ಮ್ಯಾಚಿಂಗ್ ಇರುವಂಥ ಆ್ಯಕ್ಸೆಸರೀಸ್ ಜೊತೆಗೆ ಟಿಪ್ ಟಾಪಾಗಿ ಡ್ರೆಸ್ ಮಾಡಿಕೊಂಡಿದ್ದರು. ನೀಟಾಗಿ ಫೈಲ್ ಮಾಡಲಾಗಿದ್ದ ಉಗುರು, ಉಡುಗೆಗೆ ಹೊಂದಿಕೊಳ್ಳುವ ನೇಲ್ ಪಾಲಿಶ್, ಮ್ಯಾಚಿಂಗ್ ಜ್ಯೂವೆಲರಿ, ಮ್ಯಾಚಿಂಗ್ ಸ್ಯಾಂಡಲ್ಸ್, ಮ್ಯಾಚಿಂಗ್ ಮೇಕಪ್ ಸಹ ಇತ್ತು. ಅವರನ್ನು ನೋಡಿದರೆ ಪ್ರತಿಯೊಬ್ಬರೂ ಒಬ್ಬರನ್ನೊಬ್ಬರು ಮೀರಿಸುವ ಹಾಗೆ ಪೈಪೋಟಿಗಿಳಿದು ಸಿಂಗರಿಸಿಕೊಂಡಂತೆ ಕಾಣುತ್ತಿತ್ತು. ಅವಳ ಮೇಕಪ್ ನನ್ನ ಮೇಕಪ್ ಗಿಂತ ಅದು ಹೇಗೆ ಮಿಗಿಲು ಎನ್ನುವಂತೆ ಪ್ರತಿಯೊಬ್ಬರೂ ಒಂದಕ್ಕಿಂತ ಒಂದು ದುಬಾರಿ ಬ್ಯೂಟಿ ಪ್ರಾಡಕ್ಟ್ಸ್ ನ್ನು ಬಳಸಿದ್ದರು.
ಅವರಲ್ಲಿ ಒಬ್ಬಳು ಹೇಳಿದಳು, ``ಇವತ್ತಂತೂ ರೆಡಿ ಆಗಲು ನನಗೆ 2 ತಾಸು ಬೇಕಾಯಿತು.''
ಅದನ್ನು ಕೇಳಿಸಿಕೊಂಡ ಮತ್ತೊಬ್ಬಳು ತಕ್ಷಣ, ``ನಾನಂತೂ ಇವತ್ತು ಪಾರ್ಲರ್ ಗೆ ಹೋಗಿ ಹೇರ್ ಸ್ಟೈಲ್ ಮಾಡಿಸಿಕೊಂಡು ಬಂದೆ,'' ಎಂದಳು.
ಅದಾದ ನಂತರ ಮತ್ತೊಬ್ಬಳು ತನ್ನ ಮೇಕಪ್ ಕಿಟ್ ಕುರಿತು ಹೇಳತೊಡಗಿದರೆ, ಇನ್ನೊಬ್ಬಳು ತನ್ನ ಡ್ರೆಸ್ಸಿಂಗ್ ಟೇಬಲ್ ಎಷ್ಟು ಅಪ್ ಟು ಡೇಟ್ ಆಗಿರುತ್ತದೆ, ಎಂತೆಂಥ ಹೊಸ ಪರ್ಫ್ಯೂಮ್ ಗಳು ಬಂದಿವೆ ಎಂದು ವಿವರಿಸಿದಳು. ಮತ್ತೊಬ್ಬಾಕೆ ಮಾರುಕಟ್ಟೆಗೆ ಬಂದಿರುವ ಹೊಸ ಬ್ಯೂಟಿ ಪ್ರಾಡಕ್ಟ್ಸ್ ಬಗ್ಗೆ ತನಗಿರುವ ಮಾಹಿತಿ ಕುರಿತು ಹೇಳತೊಡಗಿದಳು. ಈ ರೀತಿ ಇಡೀ ಕಿಟಿ ಪಾರ್ಟಿಯ ಟಾಪಿಕ್ ಫ್ಯಾಷನ್, ಮೇಕಪ್, ಗ್ಲಾಮರ್ ಗಳ ರಿಂಗಣದಿಂದ ತುಂಬಿಹೋಯಿತು.
ಅರೆ, ಎಲ್ಲೆಲ್ಲೂ ಫ್ಯಾಷನ್ ವಿಜೃಂಭಿಸುತ್ತಿರುವಾಗ ಇಂಥ ಮಾತುಕಥೆ ಮುಂದುವರಿಯದೆ ಇರುತ್ತದೆಯೇ? ಮಹಿಳೆಯರಿಗೆ ಈ ರೀತಿ ಅಂದವಾಗಿ ಅಲಂಕರಿಸಿಕೊಳ್ಳುವುದು ಅವರ ಜೀವನದ ಒಂದು ಅವಿಭಾಜ್ಯ ಅಂಗವಾಗಿ ಹೋಗಿದೆ, ಇದನ್ನು ಯಾರೂ ಅಲ್ಲಗಳೆಯಲಾರರು. ಸೌಂದರ್ಯ ಹಾಗೂ ಹೆಣ್ಣು ಪರಸ್ಪರ ಪರ್ಯಾಯ, ಪೂರಕ. ಹೀಗಿರುವಾಗ ಹೆಂಗಸರು ಇಂಥ ಶೃಂಗಾರ ಸಿಂಗಾರಗಳಿಗಾಗಿ ತಮ್ಮ ಜೀವನದ ಸುಮಾರು ಶೇ.25ರಷ್ಟು ಭಾಗವನ್ನು ಮೀಸಲಾಗಿಟ್ಟರೆ ಅದರಲ್ಲಿ ತಪ್ಪೇನು? ಈ ಕುರಿತಾಗಿ ಅನಗತ್ಯವಾಗಿ ಬೇರೆಯವರು ಗೊಣಗಬೇಕೇಕೆ? ಹೆಣ್ಣು ಹೀಗೆ ಅಚ್ಚುಕಟ್ಟಾಗಿ ಸಿಂಗರಿಸಿಕೊಳ್ಳುವುದರಲ್ಲಿ ತಪ್ಪಾದರೂ ಏನು?
ಅಲಂಕಾರಹಿತ ಜೀವನ ಅಗತ್ಯವೇ?
ಮಹಿಳೆಯರು ತಾವು ಇತರರಿಗಿಂತ ಅತ್ಯಂತ ಸೌಂದರ್ಯವತಿಯರಾಗಿ ಹೆಚ್ಚು ಆಕರ್ಷಕವಾಗಿ ಕಂಡುಬರಬೇಕೆಂದು ಬಯಸುವುದರಲ್ಲಿ ಎರಡು ಮಾತಿಲ್ಲ. ಹೀಗಾಗಿ ಅವರು ತಮ್ಮ ಸೌಂದರ್ಯ ಹೆಚ್ಚಿಸಿಕೊಳ್ಳಲು ಅನೇಕಾನೇಕ ವಿಧಾನಗಳನ್ನು ಅನುಸರಿಸುತ್ತಿರುತ್ತಾರೆ. ಸುಂದರವಾಗಿ ಸಿಂಗರಿಸಿಕೊಂಡು, ಟಿಪ್ ಟಾಪಾಗಿ ಕಂಡುಬರಲು ಅವರು ಎಷ್ಟು ಹಣ ಬೇಕಾದರೂ ಖರ್ಚು ಮಾಡಲು ಹಿಂಜರಿಯುವುದಿಲ್ಲ. ಈ ಕಾರಣದಿಂದಲೇ ಅವರು ತಮ್ಮ ಶಾಪಿಂಗ್ ನಲ್ಲಿ ಸದಾ ಹೊಸ ಹೊಸ ಉಡುಗೆ, ಬಟ್ಟೆಬರೆ, ಜ್ಯೂವೆಲರಿ, ಸೌಂದರ್ಯ ಪ್ರಸಾಧನಗಳು, ಫುಟ್ ವೇರ್, ವಿವಿಧ ಆ್ಯಕ್ಸೆಸರೀಸ್ ಇತ್ಯಾದಿಗಳಿಗೆ ಹೆಚ್ಚಿನ ಮಹತ್ವ ಕೊಡುತ್ತಾರೆ. ಇಂದಿನ ಆಧುನಿಕ ಯುವತಿಯರಂತೂ ಮೇಕಪ್ ರಹಿತ ಜೀವನವನ್ನು ಊಹಿಸಿಕೊಳ್ಳಲಿಕ್ಕೂ ಇಷ್ಟಪಡುವುದಿಲ್ಲ. ಈ ಕಾರಣದಿಂದಲೇ ತರಕಾರಿ ಹಣ್ಣು ಕೊಳ್ಳುವಾಗ ತಮ್ಮ ಗಂಟಲು ನೋಯಿಸಿಕೊಂಡು ಚೌಕಾಸಿ ಮಾಡುವ ಮಧ್ಯಮ ವರ್ಗದ ಮಹಿಳಾಮಣಿಗಳು, ತಮ್ಮ ಮೇಕಪ್ ಸಾಮಗ್ರಿ, ಸೀರೆ ಡ್ರೆಸ್ ಮೆಟೀರಿಯಲ್ಸ್, ಜ್ಯೂವೆಲರಿ, ಫುಟ್ ವೇರ್ ಗಳ ಶಾಪಿಂಗ್ ನಲ್ಲಿ ಮಾತ್ರ ಎಂದೂ ಸಮಯ ವ್ಯರ್ಥ ಮಾಡದೆ, ಕ್ಷಣಮಾತ್ರದಲ್ಲಿ ಅವನ್ನು ಕೊಳ್ಳಲೇಬೇಕೆಂದು ನಿರ್ಧರಿಸಿಬಿಡುತ್ತಾರೆ. ಕೆಲವರಿಗಂತೂ ಈ ಕ್ರೇಜ್ ಎಷ್ಟರಮಟ್ಟಿಗೆ ಇರುತ್ತದೆಂದರೆ, ಮಾರುಕಟ್ಟೆಗೆ ಬಂದ ಪ್ರತಿಯೊಂದು ಹೊಸ ಪ್ರಾಡಕ್ಟನ್ನೂ ಟ್ರೈ ಮಾಡದೆ ಇರಲಾರರು. ಅಂತೂ ಎಲ್ಲಾ ಹೊಸ ವಸ್ತುಗಳನ್ನೂ ಬಳಸಿ ನೋಡೀಬೇಕೆಂಬ ಹಂಬಲ ಉಕ್ಕುತ್ತದೆ. ನೆರೆಹೊರೆ, ಫ್ರೆಂಡ್ಸ್, ಸಹೋದ್ಯೋಗಿಗಳ ಒಡನಾಟದ ಪರಿಣಾಮವಾಗಿ, `ಅವಳು ಕೊಂಡಿದ್ದಾಳೆಂದ ಮೇಲೆ ನಾನೇಕೆ ಕೊಳ್ಳಬಾರದು?' ಎಂಬ ಆಲೋಚನೆ ಸಹ ಆಧುನಿಕ ಯುವತಿಯರನ್ನು ಮೇಲಿಂದ ಮೇಲೆ ಮೇಕಪ್ ಸಾಮಗ್ರಿಗಳನ್ನು ಕೊಳ್ಳಲು ಪ್ರೇರೇಪಿಸುತ್ತದೆ, ಜೊತೆಗೆ ಆ ನಿಟ್ಟಿನಲ್ಲಿ ಮಾರ್ಕೆಟ್‌ಸರ್ವೆ ಕೂಡ ನಡೆಯುತ್ತಿರುತ್ತದೆ.