ಗೀತಾ ಕಾಲೇಜಿನಿಂದ ಬಂದಾಗ ಪ್ರಸಾದ್ ಪೇಪರ್ ಓದುತ್ತಿದ್ದ. ಮಗ ಭರತ್ ಅಲ್ಲೇ ವರಾಂಡದಲ್ಲಿ ತನ್ನ ಆಟದ ಸಾಮಾನುಗಳೊಂದಿಗೆ ಆಡುತ್ತಿದ್ದ. ಅವನ ಸ್ಕೂಲ್ ಯೂನಿಫಾರಂ ಬದಲಿಸಿರಲಿಲ್ಲ. ಮೇಜಿನ ಮೇಲೆ ಹಾಲು ತುಂಬಿದ ಗ್ಲಾಸ್ ಇಡಲಾಗಿತ್ತು.
ಆ ಸ್ಥಿತಿಯಲ್ಲಿ ಮಗನನ್ನು ಕಂಡು ಗೀತಾಗೆ ಕೋಪ ಉಕ್ಕಿ ಬಂತು. ಆದರೆ ಅವಳು ತನ್ನ ಆಕ್ರೋಶ ವ್ಯಕ್ತಪಡಿಸಲಿಲ್ಲ. ಅವಳು ಗಂಡನಿಗೆ ಹೇಳಿದಳು, “ನೋಡಿ, ನೀವು ಪತ್ರಿಕೆ ಓದೋದ್ರಲ್ಲಿ ಮಗ್ನರಾಗಿದ್ದೀರಿ. ಅಲ್ಲಿ ಭರತನ ಹಾಲಿನ ಗ್ಲಾಸನ್ನು ಮುಚ್ಚಿಟ್ಟಿಲ್ಲ. ಅವನು ಕುಡಿದ್ನಾ ಇಲ್ವಾಂತ ಸ್ವಲ್ಪ ಗಮನಿಸಬೇಕು. ಅಲ್ಲದೆ ಅವನ `ಯೂನಿಫಾರಂ’ ಕೂಡ ಬದಲಿಸಿಲ್ಲ.”
ಪ್ರಸಾದ್ ನ ಹಣೆಯಲ್ಲಿ ನೆರಿಗೆಗಳು ಮೂಡಿದವು. ಅವನು ತೀಕ್ಷ್ಣವಾಗಿ ಹೇಳಿದ, “ಇವೆಲ್ಲಾ ನೋಡೋದು ನನ್ನ ಕೆಲಸ ಅಲ್ಲ.”
“ಹಾಗಂದ್ರೆ ಹೇಗೆ? ಎರಡು ದಿನದಿಂದ ಕೆಲಸದವಳು ಬಂದಿಲ್ಲ. ಒಮ್ಮೊಮ್ಮೆ ನಾನು ಕಾಲೇಜಿನಿಂದ ಬರೋದು ಲೇಟಾಗುತ್ತೆ. ಆದರೂ ನಾನೇ ಎಲ್ಲವನ್ನೂ ಮಾಡಬೇಕು,” ಎಂದ ಗೀತಾ ಭರತ್ ಗೆ ಹಾಲು ಕುಡಿಸತೊಡಗಿದಳು.
`ನಾನು ಎಲ್ಲಿಯವರೆಗೆ ಇದೆಲ್ಲಾ ಸಹಿಸಲಿ? ಪ್ರಸಾದ್ ರ ಸ್ವಭಾವ ಬದಲಾಗೋ ಭರವಸೆ ಇಲ್ಲ. ಮದುವೆಯಾಗಿ ಒಂದು ವರ್ಷದವರೆಗೆ ಎಲ್ಲಾ ಚೆನ್ನಾಗಿತ್ತು. ಪ್ರಸಾದ್ ನನ್ನನ್ನು ಎಷ್ಟು ಹೊಗಳ್ತಿದ್ರು. ಮನೆಯಲ್ಲಿ ಸಂತಸ ತುಳುಕಾಡುತ್ತಿತ್ತು. ಈಗ ಕೋಪದ ಕೂಗಾಟಗಳು ಗೋಡೆಗಳನ್ನು ಸೀಳಿ ಹೊರಬರುತ್ತಿವೆ. ಸಂತಸದ ಸುಗಂಧದಿಂದ ಸುವಾಸಿತವಾಗಿದ್ದ ಮನೆ ಈಗ ಪಾಳುಬಿದ್ದಂತಿದೆ. ನಮ್ಮ ಮಗನೂ ಯಾವಾಗಲೂ ಹೆದರಿದಂತಿರುತ್ತಾನೆ.’ ಗೀತಾ ಹೀಗೆಲ್ಲಾ ಯೋಚಿಸುತ್ತಿದ್ದಳು.
ಈಗ ಹೊಗಳಿಕೆಯಂತೂ ಇಲ್ಲ. ಬದಲಿಗೆ ಯಾವಾಗಲೂ ವ್ಯಂಗ್ಯವಾಗಿ ಇಲ್ಲವೇ ಸಿಡುಕಿಕೊಂಡೇ ಪ್ರಸಾದ್ ಮಾತಾಡುತ್ತಾರೆ. ಬಹುಶಃ ನನ್ನ ಯಶಸ್ಸು ಅವರಲ್ಲಿ ಒತ್ತಡ ಹಾಗೂ ಪ್ರತಿಸ್ಪರ್ಧೆ ಉಂಟು ಮಾಡಿರಬೇಕು. ಯಾವಾಗಲೂ ಏನಾದರೂ ವಿವಾದ ನಮ್ಮಿಬ್ಬರ ಮಧ್ಯೆ ಇದ್ದೇ ಇರುತ್ತೆ.
ಮೊದಲಿಗೆ ಜಗಳ ಬರೀ ಬೈದಾಟಕ್ಕೆ ಸೀಮಿತಾಗಿದ್ದುದು ಈಗ ತಳ್ಳಾಟ, ಏಟು, ಒದೆತದವರೆಗೆ ತಲುಪಿದೆ. ಅಂದು ಅಂಥದ್ದೇನೂ ನಡೆದಿರಲಿಲ್ಲ. ನಾನು ಅತ್ತೆಗೆ, ಈಗ ಭರತ್ ಗೆ ಹಾಲು ಕುಡಿಯೋ ಸಮಯ, ನೀವು ಬಿಸ್ಕೆಟ್. ಖಾರದ ಕಡಲೆಬೀಜ ತಿನ್ನಿಸ್ತಾ ಇದ್ದೀರಿ ಅಂದಿದ್ದೆ…. ಆಗ ಪ್ರಸಾದ್‌ಗೆ ಎಷ್ಟು ಕೋಪ ಬಂದಿತ್ತು. ಬಿಸ್ಕೆಟ್, ಕಡಲೆಬೀಜ ಇಟ್ಟಿದ್ದ ಪ್ಲೇಟನ್ನು ಅವರು ಬಿಸಾಡಿದ ರಭಸಕ್ಕೆ ಪ್ಲೇಟ್ ಒಡೆದಿತ್ತು. ಅದರ ಶಬ್ದ ಕೇಳಿ ಪಕ್ಕದ ಮನೆಯ ಆಂಟಿ ಬಂದಿದ್ದರು. ಆಗ ಭರತ್ ಪ್ಲೇಟನ್ನು ಬಿಸಾಡಿದ, ಅದಕ್ಕೆ ಅವನಿಗೆ ಬೈತಿದ್ದೀವೀಂತ ಸುಳ್ಳು ಹೇಳಬೇಕಾಯಿತು.
ನಮ್ಮ ಜಗಳಕ್ಕೆ ವಿರಾಮವನ್ನು ಮಗನೇ ಒದಗಿಸುತ್ತಾನೆ. ಜೋರಾಗಿ ಅಳುತ್ತಾ, “ ಅಪ್ಪಾ, ಅಮ್ಮನನ್ನು ಬಿಟ್ಬಿಡು. ಅವರಿಗೆ ಏಟು ಬೀಳುತ್ತೆ”, ಎನ್ನುತ್ತಾನೆ. ನಾವಿಬ್ಬರೂ ಸುಶಿಕ್ಷಿತರು. ಆದರೂ ಅಶಿಕ್ಷಿತರಂತೆ ಕಿತ್ತಾಡುತ್ತೇವೆ. ನಾನೇನು ಮಾಡಲಿ? ನನಗೆ ಏನೂ ಅರ್ಥ ಆಗ್ತಿಲ್ಲ. ಮನೆಗೆ ಎಲ್ಲ ಸಾಮಾನುಗಳನ್ನೂ ನಾನೇ ತರುತ್ತೇನೆ. ಮಗನ ಔಷಧಗಳಿಗೆ, ಸ್ಕೂಲಿನ ಖರ್ಚುಗಳಿಗೆ ನಾನೇ ಕೊಡುತ್ತೇನೆ. ಆದರೂ ಪ್ರಸಾದ್ ಮುಖ ಗಂಟಿಕ್ಕಿಕೊಂಡಿರುತ್ತಾರೆ. ಅಪರೂಪಕ್ಕೆ ನಕ್ಕರೆ ಅದು ಕೃತಕವಾಗಿರುತ್ತದೆ.
ನಮ್ಮ ಜೀವನ ಆಗ ಎಷ್ಟು ಸುಂದರವಾಗಿತ್ತು, ಈಗ ಅದೆಲ್ಲಿ ಮಾಯವಾಯಿತೋ ತಿಳಿದಿಲ್ಲ.
ಹೀಗೇ ಯೋಚಿಸುತ್ತಾ ಗೀತಾ ಮನೆಗೆಲಸಗಳನ್ನು ನಿಭಾಯಿಸಿದಳು. ಮಗನ ಹೋಂವರ್ಕ್ ಮಾಡಿಸಿದಳು. ನಂತರ ಪ್ರಸಾದ್ ಗೆ ಕಾಫಿ ಲೋಟ ಕೊಟ್ಟು, “ತಗೊಳ್ಳಿ ಕಾಫಿ,” ಎಂದಳು.
ಪ್ರಸಾದ್, “ಸರಿ,” ಎಂದಷ್ಟೇ ಹೇಳಿದ.
ರಾತ್ರಿ ಗೀತಾ ಬಂದು, “ಪ್ರಸಾದ್, ಟೇಬಲ್ ಮೇಲೆ ಅಡುಗೆ ಇಟ್ಟಿದ್ದೀನಿ. ಊಟ ಮಾಡ್ಬಿಡಿ,” ಎಂದಳು.
ಪ್ರಸಾದ್ ಬಂದು ಊಟಕ್ಕೆ ಕುಳಿತ. ಹೊರಗೆ ಲಾನ್ ನಲ್ಲಿ ಜೀರುಂಡೆಗಳ ಧ್ವನಿ, ಗಾಳಿಯೊಂದಿಗೆ ಗಿಡಮರಗಳ ಮಾತುಕಥೆ ಕೇಳಿಬರುತ್ತಿತ್ತು.
ಇದ್ದಕ್ಕಿದ್ದಂತೆ ಪ್ರಸಾದ್ ಮುಖ ಸಿಂಡರಿಸಿ ಹೇಳಿದ, “ಪಲ್ಯಕ್ಕೆ ಉಪ್ಪು ಕಡಿಮೆ ಇದೆ. ಹೇಗೆ ತಿನ್ನೋದು?”
ಗೀತಾಳ ಸಹನೆಯ ಕಟ್ಟೆಯೊಡೆಯಿತು. ಮಗನ ಓದು, ಮಾರ್ಕೆಟ್ ಕೆಲಸಗಳು ಮತ್ತು ಮನೆಯ ಸಣ್ಣ ಪುಟ್ಟ ಕೆಲಸಗಳಿಂದ ಅವಳಿಗೆ ಸುಸ್ತಾಗಿತ್ತು. ಅವಳು ರೇಗುತ್ತಾ, “ಉಪ್ಪು ಕಡಿಮೆ ಇದ್ದರೆ ಅಡುಗೆಯವಳಿಗೆ ಹೇಳಿ. ಎಲ್ಲಾ ಜವಾಬ್ದಾರಿ ನಂದೇನಾ? ನೀವೇ ನೋಡ್ತಾ ಇದ್ದೀರಿ. ಕಾಲೇಜಿಂದ ಬಂದ ಮೇಲೆ ನಾನು ಒಂದು ಕ್ಷಣ ನೆಮ್ಮದಿಯಿಂದ ಕೂತಿಲ್ಲ. ನೀವು ಕಾಲೇಜಿಂದ ಬಂದು ಮೊದಲು ಪೇಪರ್ ಓದ್ತೀರಿ. ಆಮೇಲೆ ಬಟ್ಟೆ ಬದಲಿಸಿ ಟಿ.ವಿ. ನೋಡ್ತೀರಿ,” ಎಂದಳು.
ಆಗ ಪ್ರಸಾದ್, “ಚೆನ್ನಾಗಿ ಹೇಳ್ತೀಯ, ಮಕ್ಕಳ ಕೆಲಸ ಎಲ್ಲ ತಾಯಂದಿರೂ ಮಾಡ್ತಾರೆ. ನೀನು ಮಾಡೋದು ಹೊಸ ವಿಷಯವೇನೂ ಅಲ್ಲ,” ಎಂದ.
“ಆದರೆ ಎಲ್ಲ ತಾಯಂದಿರೂ ಕೆಲಸಕ್ಕೆ ಹೋಗಲ್ಲ. ನಾನೂ ಮನುಷ್ಯಳು. ನನಗೂ ಸುಸ್ತಾಗುತ್ತೆ. ನೀವು ಕೊಂಚ ಸಹಾಯ ಮಾಡಬೇಕು,” ಗೀತಾ ಏರಿದ ಧ್ವನಿಯಲ್ಲಿ ಹೇಳಿದಳು.
ಪ್ರಸಾದ್ ಥಟ್ಟನೆ ಮೇಜಿನ ಮೇಲೆ ಚಮಚ ಕುಕ್ಕಿ, “ನಾನು ಸಹಾಯ ಮಾಡಲ್ಲ. ನಿನಗೆ ಮನೆ ಕೆಲಸ ಮಾಡಕ್ಕೆ ಆಗದಿದ್ರೆ ನೌಕರಿ ಬಿಟ್ಟುಬಿಡು,” ಎಂದ.
“ಇಲ್ಲ, ನಾನು ನೌಕರಿ ಬಿಡಲ್ಲ. ಭರತ್ ಚಿಕ್ಕವನಾಗಿದ್ದಾಗ ನಾನು 3 ವರ್ಷ ಉದ್ಯೋಗ ಮಾಡಲಾಗಲಿಲ್ಲ. 1-1 ರೂಪಾಯಿಗೂ ನಿಮ್ಮ ಬಳಿ ಕೈಚಾಚಿ ಭಿಕ್ಷೆ ಬೇಡಬೇಕಾಗಿತ್ತು. ನೀವು ಒಮ್ಮೆ ದುಡ್ಡು ಕೊಟ್ರೆ, ಇನ್ನೊಮ್ಮೆ ದುಡ್ಡು ಕೊಡ್ತಿರಲಿಲ್ಲ. ದುಡ್ಡು ಕೊಡುವಾಗಲೂ ಜಗಳ ಆಡಿಯೇ ಕೊಡ್ತಿದ್ರಿ.”
“ಸಾಕು ಸಾಕು! ಬಹಳ ವಾದ ಮಾಡ್ತೀಯ. ಇವತ್ತು ಮತ್ತೆ ಜಗಳ ಶುರು ಮಾಡ್ದೆ.”
“ನಾನಲ್ಲ, ನೀವೇ ಜಗಳ ಆಡ್ತಿರೋದು.”
“ಈಗ ನನ್ನ ಪಾಡಿಗೆ ನನ್ನನ್ನು ಬಿಡು.”
“ನಾನೆಲ್ಲಿ ಹಿಡ್ಕೊಂಡಿದ್ದೀನಿ?” ಎನ್ನುತ್ತಾ ಗೀತಾ ಹೊರಟಳು. ಅವಳು ಮಾತಾಡದೆ ಊಟ ಮಾಡಿ ಉಳಿದದ್ದನ್ನು ಫ್ರಿಜ್ ನಲ್ಲಿ ಇಟ್ಟು ಮಗನ ಪಕ್ಕ ಮಲಗಿಕೊಂಡಳು.
ಭರತ್ ಅಪ್ಪ ಅಮ್ಮನ ಜಗಳದ ಬಗ್ಗೆ ಅರಿಯದೆ ನಿದ್ದೆ ಮಾಡುತ್ತಿದ್ದ. ಗೀತಾ ಮಗನ ತಲೆಗೂದಲಲ್ಲಿ ಕೈಯಾಡಿಸುತ್ತಾ ಯೋಚಿಸತೊಡಗಿದಳು, `ನನ್ನ ಮಗ ಎಷ್ಟು ಮುಗ್ಧನಾಗಿದ್ದಾನೆ. ನಮ್ಮ ಜಗಳದಿಂದ ಅವನು ಹಾಳಾಗದಿದ್ರೆ ಸಾಕು. ನಾವಿಬ್ರೂ ಜಗಳ ಆಡಿದಾಗ ಬಹಳ ದುಃಖಿತನಾಗುತ್ತಾನೆ. ಮನೆಯಿಂದ ಹೊರಗೆ ಹೋಗೋಕೆ ನಾಚಿಕೆಯಾಗುತ್ತೆ. ಅಕ್ಕಪಕ್ಕದವರು ದುರುಗುಟ್ಟಿಕೊಂಡು ನೋಡುತ್ತಾರೆ. ಮನೆಯಲ್ಲಿ ಶಾಂತಿ ನೆಲೆಸೋಕೆ ಒಂದೇ ದಾರಿ ಪ್ರಸಾದ್ ಗೆ ಉತ್ತರ ಕೊಡದೇ ಇರೋದು.’
ಅಂದು ರಾತ್ರಿ ಕೋಣೆಯೊಳಗೆ ಗಾಳಿ ಜೋರಾಗಿ ಬೀಸುತ್ತಿತ್ತು. ಗೀತಾಳ ಮನದಲ್ಲಿ ಕಳೆದುಹೋದ ಘಟನಾವಳಿಗಳು ಮೂಡುತ್ತಿದ್ದವು. ಅವಳು ನಿದ್ರಿಸಲು ಬಯಸಿದಳು. ಆದರೆ ನಿದ್ದೆ ಬರುತ್ತಿರಲಿಲ್ಲ. ಗೀತಾ ಪ್ರಸಾದ್ ರದು ಪ್ರೇಮವಿವಾಹ. ಆದರೆ ಕೆಲವು ತಿಂಗಳುಗಳ ಬಳಿಕ ಆಸೆಗಳು, ಉತ್ಸಾಹಗಳು. ಮರೀಚಿಕೆಯಂತಾಯಿತು. ಸುತ್ತಮುತ್ತ ಸಂತೋಷದಿಂದಿರುವ ದಂಪತಿಗಳನ್ನು ನೋಡುವಾಗ ಅವಳ ಹೃದಯ ಪ್ರೀತಿಗಾಗಿ ಚಡಪಡಿಸುತ್ತಿತ್ತು. ಒಂದು ಸಫಲ ದಾಂಪತ್ಯ ಜೀವನವನ್ನು ಏಕೆ ನಡೆಸಲಾಗುತ್ತಿಲ್ಲ? ಮದುವೆಗೆ ಮುಂಚೆ ಪ್ರಸಾದ್ ಅವಳ ಹೆಸರನ್ನು ಹಗಲೂರಾತ್ರಿ ಜಪಿಸುತ್ತಿದ್ದ. ಅವಳು ಪಿಎಚ್‌ಡಿ ಮಾಡುತ್ತಿದ್ದಾಗ ಅವನೇ ಮದುವೆಗೆ ಪ್ರಪೋಸ್ ಮಾಡಿದ. ಸುಂದರ ಹಾಗೂ ಸ್ಮಾರ್ಟ್ ಆಗಿದ್ದ ಪ್ರಸಾದ್ ನನ್ನು ಕಂಡು ಅವಳ ಹೃದಯ ಪಾಚಿಯ ಮೇಲೆ ಜಾರಿದ ಕಾಲಿನಂತೆ ಜಾರಿಬಿಟ್ಟಿತು. ಇದ್ದಿಲಿಗಿಂತಲೂ ಹೆಚ್ಚು ಕಪ್ಪಗಿದ್ದ ಅವನ ಮನಸ್ಸಿನ ಮುಂದೆ ಅವನ ಸುಂದರ ಶರೀರದಿಂದೇನು ಪ್ರಯೋಜನ?
ಒಂದು ವೇಳೆ ವಿಚ್ಛೇದನ ಪಡೆಯದಿದ್ದರೆ ನಮ್ಮ ಜಗಳಗಳನ್ನು ಕೊನೆಗಾಣಿಸಬೇಕು. ಏಕೆಂದರೆ ಮಗುವಿನ ಜೀವನ ಹಾಳಾಗಬಾರದು. ಸಂತಸದ ಅಲೆಗಳು ಹಿಂದೆಯೇ ಉಳಿದವು. ಅದಕ್ಕೆ ಕಾರಣ ನಾವಿಬ್ಬರೇ. ಈ ವಿಚಾರ ಗೀತಾಳ ಮನದಲ್ಲಿ ಸುಂಟರಗಾಳಿಯಂತೆ ಮೂಡಿದಾಗ ಅವಳು ಎದ್ದು ಮಂಚದಲ್ಲಿ ಕುಳಿತಳು.
ಇನ್ನು ಮುಂದೆ ತಾನು ಪ್ರಸಾದ್ ಜೊತೆ ಎಂದಿಗೂ ವಾದ ಮಾಡಬಾರದು ಎಂದು ನಿರ್ಧರಿಸಿದಳು. ತಾನು ವಾದ ಮಾಡುವುದರಿಂದಲೇ ಪ್ರಸಾದ್ ತನ್ನಿಂದ ದೂರ ಉಳಿದಿರಬೇಕು.
ಇದ್ದಕ್ಕಿದಂತೆ ಅವಳ ದೃಷ್ಟಿ ಕಿಟಕಿಯಿಂದಾಚೆ ಹೋದಾಗ ಬೆಳಕಾಗಿರುವುದು ಕಂಡಿತು. ಪ್ರಕೃತಿಯಲ್ಲಿ ಒಂದು ಹೊಸ ಸ್ಛೂರ್ತಿ, ಹೊಸ ಚೇತನ ತುಂಬಿತ್ತು. ಆದರೆ ಗೀತಾಗೆ ರಾತ್ರಿಯಿಡೀ ನಿದ್ದೆಯಿಲ್ಲದ್ದರಿಂದ ಬಹಳ ಸುಸ್ತಾಗಿತ್ತು. ತಲೆ ಭಾರವಾಗಿತ್ತು, ಅವಳು ಮತ್ತೆ ಮಲಗಿಕೊಂಡಳು.
ಆದರೆ ಮಲಗಿದರೆ ಏನು ಪ್ರಯೋಜನ? ಶಾಂತಿ, ನೆಮ್ಮದಿ ಇದ್ದರೆ ತಾನೇ ನಿದ್ದೆ ಬರುತ್ತದೆ? ತಪ್ಪು ಅವಳದೇ ಆಗಿತ್ತು. ಪ್ರಸಾದ್ ನ ಸೌಂದರ್ಯಕ್ಕೆ ಮರುಳಾಗಿದ್ದಳು. ಎಷ್ಟು ಹುಡುಗರು ಅವಳಿಗಾಗಿ ಪ್ರಾಣ ಬಿಡುತ್ತಿದ್ದರು. ಆದರೆ ಅವಳು ನದಿಯಂತೆ ಪ್ರಸಾದ್ ನತ್ತ ಹರಿದುಹೋದಳು. ಒಬ್ಬ ಮುದ್ದು ಮಗನಿದ್ದರೂ ತನಗೆ ಉಂಟಾಗಿರುವ ಸ್ಥಿತಿ ಬಹಳ ಬೇಸರ ತರಿಸುತ್ತದೆ. ಆದರೂ ಈಗ ತಾನು ಸುಖಕ್ಕಾಗಿ ಹಾತೊರಯುವುದಿಲ್ಲ. ಅವಳು ಎದ್ದು ಒಂದು ಕಪ್ ಕಾಫಿ ಕೊಡುವಂತೆ ಪ್ರಸಾದ್ ನನ್ನು ಕೇಳಬೇಕೆಂದುಕೊಂಡಳು. ಆದರೆ ಅವನೇನಾದರೂ ಆಗಲ್ಲ ಎಂದುಬಿಟ್ಟರೆ ಎಂದು ಯೋಚಿಸಿ ತಾನೇ ಮಾಡಿಕೊಂಡು ಕುಡಿದಳು. ನಂತರ ಮಗನನ್ನು ಶಾಲೆಗೆ ಸಿದ್ಧಗೊಳಿಸಿ ಕಾಲೋನಿಯ ಗೇಟ್ ವರೆಗೆ ಹೋದಳು. ಮಗನನ್ನು ಬಸ್ ಹತ್ತಿಸಿ ಬಂದಳು. ಆಮೇಲೆ ಸ್ವಲ್ಪ ಹೊತ್ತು ವರಾಂಡದಲ್ಲಿ ಕುಳಿತಳು. ಆಗಲೇ ಪ್ರಸಾದ್ ಬಂದು, “ನಾನಿಂದು ಬೇಗನೆ ಹೋಗಬೇಕು. ಸ್ಪೆಶಲ್ ಕ್ಲಾಸ್ ಇದೆ. ಬೇಗನೆ ತಿಂಡಿ ಕೊಡು,” ಎಂದ.
ಗೀತಾ ತಿಂಡಿ ಮಾಡಲು ಆಗಲ್ಲ ಎಂದು ಹೇಳಬೇಕೆಂದುಕೊಂಡಳು. ಆದರೆ ಅದಕ್ಕೂ ಗಲಾಟೆ ಮಾಡುತ್ತಾರೆಂದುಕೊಂಡು, “ಏನ್ಮಾಡ್ಲಿ? ಚಪಾತಿ ತಿಂತೀರೋ, ಉಪ್ಪಿಟ್ಟು ಮಾಡ್ಲೋ?”
“ಅದನ್ನೂ ಕೇಳಬೇಕೆ?”
“ನನಗೆ ಬಹಳ ತಲೆನೋವು. ಅದಕ್ಕೇ ಕೇಳ್ತಾ ಇರೋದು.”
“ನಿನಗಂತೂ ಯಾವಾಗಲೂ ತಲೆನೋ. ತಿಂಡಿ ಮಾಡೋದು ಒಂದೇ ನಿನ್ನ ಕೆಲಸ. ಅದಕ್ಕೂ ಏನಾದರೂ ನೆಪ ಹೇಳ್ತೀಯ. ಇರ್ಲಿ ಬಿಡು. ನಾನೇ ಮಾಡ್ಕೋತೀನಿ,” ಪ್ರಸಾದ್ ಹೇಳಿದ.
ಅದನ್ನು ಕೇಳಿ ಗೀತಾ ಸುಮ್ಮನಾದಳು. ದಿನ ಜೇನಿನಂತೆ ಸಿಹಿಯಾಗಿ ಮಾತಾಡುತ್ತಿದ್ದ ಪ್ರಸಾದ್ ಇವರೇನಾ ಎಂದು ಅವಳಿಗೆ ಆಶ್ಚರ್ಯವಾಯಿತು. ಬೆಳಗ್ಗೆ ಬಾಹುಬಂಧನದಿಂದ ಬಿಡುತ್ತಲೇ ಇರಲಿಲ್ಲ. ಬಲವಂತವಾಗಿ ಬಿಡಿಸಿಕೊಂಡು ಮನೆಗೆಲಸ ಮಾಡಿ ಕಾಲೇಜಿಗೆ ಹೋಗುತ್ತಿದ್ದಳು. ಒಮ್ಮೊಮ್ಮೆ ನಾವಿಬ್ರೂ ಇಂದು ರಜೆ ಹಾಕಿಬಿಡೋಣ. ಎಲ್ಲಾದ್ರೂ ಸುತ್ತಾಡೋಣ ಮಜವಾಗಿ ಕಾಲ ಕಳೆಯೋಣ ಅನ್ನುತ್ತಿದ್ದರು. ಈಗ ಇಷ್ಟು ಕಠಿಣವಾಗಿ ಮಾತಾಡ್ತಾರೆ…
ಗೀತಾ ಏನೂ ಉತ್ತರಿಸದೆ ಬೇಗನೆ ತಿಂಡಿ ತಯಾರಿಸಿ ಮೇಜಿನ ಮೇಲಿಟ್ಟಳು. ತಾನೂ ಬೇಗ ಸಿದ್ಧಳಾಗಿ ಟಿಫನ್ ತಿಂದು ಹೊರಟಳು. ಅವಳು ಕಾಲೇಜಿಗೆ ತನ್ನ ಕಾರಿನಲ್ಲಿ ಹೋಗುತ್ತಿದ್ದಳು. ಪ್ರಸಾದ್ ಗೆ ಕ್ಯಾಂಪಸ್ ನಲ್ಲೇ ಮನೆ ಇದ್ದುದರಿಂದ ನಡೆದೇ ಹೋಗುತ್ತಿದ್ದ.
ಅಂದು ಗೀತಾಗೆ ಏನನ್ನಿಸಿತೋ ಕಾಲೇಜಿಗೆ ಹೋಗಿ ಹುಶಾರಿಲ್ಲವೆಂದು ರಜೆ ಪಡೆದು ಮನೆಗೆ ಬಂದಳು. ನಂತರ ಪ್ರಸಾದ್ ನ ಕಾಲೇಜಿಗೆ ಹೋಗಿ ಪ್ರೊಫೆಸರ್ ಗಳೊಂದಿಗೆ ಅವನ ಬಗ್ಗೆ ವಿಚಾರಿಸಿದಳು.
ಅವಳು ಪ್ರೊ. ಶ್ರೀನಿವಾಸ್ ಗೆ ಹಲೋ ಹೇಳಿ ನಂತರ, “ಸಾರ್, ಈಚೆಗೆ ಪ್ರಸಾದ್ ಎಲ್ಲಾದಕ್ಕೂ ಬಹಳ ಸಿಡುಕುತ್ತಾರೆ. ಅವರಿಗೆ ಏನಾಗಿದೇಂತ ಗೊತ್ತಿಲ್ಲ. ಕಾಲೇಜಿನಲ್ಲಿ ಏನಾದರೂ ಟೆನ್ಶನ್ ಇದೆಯಾ? ನನಗಂತೂ ಅವರು ಏನೂ ಹೇಳೋದಿಲ್ಲ,” ಏಂದಳು.
ಶ್ರೀನಿವಾಸ್ ನಕ್ಕರು, “ಅಂಥದ್ದೇನಿಲ್ಲ, ಪ್ರಸಾದ್ ಯಾವಾಗಲೂ ಇಂಟರ್ ನೆಟ್ ನಲ್ಲಿ ವ್ಯಸ್ತರಾಗಿರುತ್ತಾರೆ. ಇಲ್ಲಿನ ವಾತಾರವಣವಂತೂ ಖಂಡಿತಾ ನಾರ್ಮಲ್ ಆಗಿದೆ,” ಎಂದರು.
ಗೀತಾ ದಿನೇಶ್ ರನ್ನೂ ಕೇಳಿದಳು. ಅವರೂ ಸಹ ಪ್ರಸಾದ್ ಲ್ಯಾಪ್ ಟಾಪ್ ನಲ್ಲಿ ಇಂಟರ್ ನೆಟ್ ನಲ್ಲಿ ಬಿಜಿಯಾಗಿರುತ್ತಾರೆ ಎಂದರು.
ಆಗ ಗೀತಾ ಪ್ರಸಾದ್ ಗೆ ಕಾಲೇಜಿನಲ್ಲಿ ಯಾವುದೇ ರೀತಿಯ ಟೆನ್ಶನ್ ಇಲ್ಲವೆಂದು ತಿಳಿಯಿತು. ಮನೆಯಲ್ಲೂ ಅವಳು ಪ್ರತಿಯೊಂದು ಅಲ್ಮೇರಾ ತೆಗೆದು ನೋಡಿದಳು. ಆದರೆ ಏನೂ ಉಪಯೋಗವಾಗಲಿಲ್ಲ.
ಆ ದಿನದ ಬಳಿಕ ಗೀತಾ ವಾದ ವಿವಾದ, ಜಗಳ ಇತ್ಯಾದಿಗಳಿಗೆ ಅವಕಾಶ ಕೊಡಲಿಲ್ಲ. ಮಗ ಭರತ್ ನನ್ನು ಮೊದಲಿಂದಲೂ ಚೆನ್ನಾಗಿ ಗಮನಿಸುತ್ತಿದ್ದಳು. ಈಗ ಪ್ರಸಾದ್ ನನ್ನೂ ಗಮನಿಸಿಕೊಳ್ಳಲು ಶುರುಮಾಡಿದಳು.
ಬದಲಾದ ಅವಳ ವರ್ತನೆಯನ್ನು ಕಂಡು ಒಂದು ದಿನ ಪ್ರಸಾದ್ ಕೇಳಿದ, “ಒಣಗಿದ ಈ ನದಿಯಲ್ಲಿ ಪ್ರವಾಹ ಹೇಗೆ ಬಂತು?”
ಗೀತಾ ನಗುತ್ತಾ ಉತ್ತರಿಸಿದಳು, “ಮಂಜಿನ ನೀರ್ಗಲ್ಲುಗಳು ಕರಗುತ್ತಿವೆ. ಹೀಗಾಗಿ ಪ್ರವಾಹ ಬರಲೇಬೇಕು. ಈಗ ನಾನು ಮಂಜಿನಲ್ಲಿ ಸಿಕ್ಕಿಬಿದ್ದ ಮೀನಲ್ಲ. ನನ್ನ ನಾಲ್ಕೂ ದಿಕ್ಕಿನಲ್ಲಿ ನೀರೇ ನೀರು. ಗೊತ್ತಾ?” ಎಂದು ಗೀತಾ ಪ್ರಸಾದ್ ನ ಕೊರಳನ್ನು ಬಳಸಿ ಪ್ರೀತಿಯಿಂದ ಮುತ್ತು ಕೊಟ್ಟಳು.
ಕೋಪ ಮತ್ತು ಶುಷ್ಕತನದ ಜಾಗದಲ್ಲಿ ಒಮ್ಮೆಗೇ ಪ್ರೀತಿಯು ಮತ್ತೆ ಸುರಿದಾಗ ಪ್ರಸಾದ್ ಆಶ್ಚರ್ಯಚಕಿತನಾಗಿ ಗೀತಾಳನ್ನೇ ನೋಡತೊಡಗಿದ. ನಂತರ ಹೇಳಿದ, “ನಿನಗೇನಾಗಿದೆ? ಇದ್ದಕ್ಕಿದ್ದಂತೆ ಈ ಬದಲಾವಣೆ ಹೇಗೆ?”
“ಬದಲಾವಣೆಯಂತೂ ಆಗಲೇಬೇಕು. ಮನೆಯಲ್ಲಿ ಪ್ರೀತಿಪ್ರೇಮ, ಸುಖ ಶಾಂತಿಯ ವಾತಾವರಣ ಇರಲೇಬೇಕು,” ಎಂದು ಹೇಳಿ ಮತ್ತೆ ಗಂಡನಿಗೆ ಮುತ್ತಿಕ್ಕಿದಳು.
ಪ್ರಸಾದ್ ಪ್ರೀತಿಯಿಂದ ಅವಳ ಕೈಗಳನ್ನು ದೂರ ತಳ್ಳುತ್ತಾ, “ಇರಲಿ ಬಿಡು. ನಾನು ಸ್ವಲ್ಪ ಓದಿಕೊಳ್ಳಬೇಕು. ಕಂಪ್ಯೂಟರ್ ರೂಮಿಗೆ ಹೋಗ್ತೀನಿ,” ಎಂದ.
“ಇದೆಲ್ಲಾ ಏನು? ಯಾವಾಗಲೂ ಕಂಪ್ಯೂಟರ್ ರೂಮಿನಲ್ಲಿ ಕೂತಿರ್ತೀರಿ.”
“ಪಾಠ ಹೇಳಬೇಕಾದರೆ ಓದಲೇಬೇಕು. ಇಂಟರ್ ನೆಟ್ ಗಿಂತಾ ಚೆನ್ನಾಗಿ ಎಲ್ಲೂ ಓದೋಕಾಗಲ್ಲ,” ಎಂದು ಹೇಳಿದ ಪ್ರಸಾದ್‌ತನ್ನ ಕಂಪ್ಯೂಟರ್ ರೂಮಿಗೆ ಹೋದ. ಗೀತಾ ಬೆಡ್ ರೂಮಿಗೆ ಹೋದಳು.
ಕಂಪ್ಯೂಟರ್ ರೂಮ್ ಡ್ರಾಯಿಂಗ್ ರೂಮಿಗೆ ಹೊಂದಿಕೊಂಡಿತ್ತು. ಅದರಲ್ಲಿ ಇನ್ನೊಂದು ಬೆಡ್ ರೂಮ್ ಇತ್ತು. ಮಧ್ಯದಲ್ಲಿ ಒಂದು ಪಡಸಾಲೆ ಇತ್ತು. ಪಡಸಾಲೆಯ ಒಂದು ಬಾಗಿಲು ಹೊರಗಿನ ವರಾಂಡದತ್ತ, ಇನ್ನೊಂದು ಹಾಲ್ ನತ್ತ ತೆರೆಯುತ್ತಿತ್ತು.
ಪ್ರಸಾದ್ ಇಂಟರ್ ನೆಟ್ ನಲ್ಲಿ ಕೆಲಸ ಮಾಡುವಾಗಲೆಲ್ಲಾ ರೂಮನ್ನು ಲಾಕ್ ಮಾಡಿಕೊಂಡಿರುತ್ತಿದ್ದ. ಆದರೆ ಅಂದು ಬಾಗಿಲು ಸುಮ್ಮನೆ ಮುಚ್ಚಲಾಗಿತ್ತು. ಮಗನನ್ನು ಮಲಗಿಸಿ ನಿಧಾನವಾಗಿ ಪ್ರಸಾದ್ ನ ಕೋಣೆಗೆ ಬಂದು ಸದ್ದಿಲ್ಲದೆ ಅವನ ಹಿಂದೆ ನಿಂತಳು. ಅವಳಿಗೆ ತನ್ನ ಕಣ್ಣನ್ನೇ ನಂಬಲಾಗಲಿಲ್ಲ. ಪ್ರಸಾದ್ ಇಂಟರ್ ನೆಟ್ ನಲ್ಲಿ ಚಾಟಿಂಗ್ ವೆಬ್ ಸೈಟ್ ತೆರೆದು ಒಂದೊಂದಾಗಿ ತನ್ನ ಗರ್ಲ್ ಫ್ರೆಂಡ್ ಗಳ ಪತ್ರಗಳನ್ನು ಓದುವುದರಲ್ಲಿ ಮಗ್ನನಾಗಿದ್ದ. ಬಹುಶಃ ಕಾಲೇಜಿನಲ್ಲೂ ಲ್ಯಾಪ್ ಟಾಪ್ ನಲ್ಲಿ ಹೀಗೇ ಮಾಡುತ್ತಿದ್ದಿರಬಹುದು. ಆದರೆ ಗೀತಾಗೆ ಇವೆಲ್ಲಾ ತಿಳಿದಿರಲಿಲ್ಲ.
ಪ್ರಸಾದ್ ಗೆ ಗೀತಾ ರೂಮಿನೊಳಗೆ ಬಂದಿದ್ದು, ತನ್ನ ಹಿಂದೆ ನಿಂತಿದ್ದು ಸದ್ದಿಲ್ಲದೆ ನಿಂತಿದ್ದು ತಿಳಿಯಲಿಲ್ಲ. ಗೀತಾ ಸದ್ದಿಲ್ಲದೆ ಉಸಿರು ಬಿಗಿಹಿಡಿದು ಹಿಂದಿನಿಂದ ಎಲ್ಲವನ್ನೂ ಓದತೊಡಗಿದಳು. ಒಂದಲ್ಲ, ಎರಡಲ್ಲ ಎಷ್ಟೊಂದು ಗರ್ಲ್ ಫ್ರೆಂಡ್ ಗಳೊಂದಿಗೆ ಪ್ರಸಾದ್ ಲಲ್ಲೆ ಹೊಡೆಯುತ್ತಿದ್ದ. ಕಡೆಗೆ ಅವನು 25 ವರ್ಷದ ಸ್ಮಿತಾಳನ್ನು ಮಲ್ಲೇಶ್ವರದ ಕಾಫಿ ಡೇಗೆ ಭಾನುವಾರ ಬೆಳಗ್ಗೆ ಬರಲು ಆಮಂತ್ರಿಸಿದ.
ಆಮಂತ್ರಣವನ್ನು ಓದಿ ಗೀತಾ ತನ್ನ ಕಣ್ಣುಗಳನ್ನೇ ನಂಬಲಾಗಲಿಲ್ಲ. ಅವಳು ನಿಧಾನವಾಗಿ ರೂಮಿಗೆ ವಾಪಸ್ ಬಂದು ಪ್ರಸಾದ್ ತನ್ನ ಜೀವನದೊಂದಿಗೆ ಎಷ್ಟು ಆಟವಾಡುತ್ತಿದ್ದಾರೆ, ಎಷ್ಟೊಂದು ಹುಡುಗಿಯರೊಂದಿಗೆ ಲಲ್ಲೆ ಹೊಡೆಯುತ್ತಿದ್ದಾರೆ ಎಂದು ಯೋಚಿಸತೊಡಗಿದಳು. ನಾನು ಇವರಿಗೆ ಇನ್ನು ಮುಂದೆ ಹೀಗೆ ಮಾಡಲು ಬಿಡುವುದಿಲ್ಲ. ನಾಳೆ ಇವರನ್ನು ಕಾಫಿಡೇನಲ್ಲಿ ರೆಡ್ ಹ್ಯಾಂಡ್ ಆಗಿ ಹೀಡೀತೀನಿ, ಎಂದು ನಿರ್ಧರಿಸಿದಳು.
ಅಂದು ರಾತ್ರಿ ಪ್ರಸಾದ್ ಗೆ ಇಷ್ಟವಾದ ಪೂರಿ ಸಾಗು, ಗಸಗಸೆ ಪಾಯಸ ಮಾಡಿಕೊಟ್ಟಳು. ಗೀತಾಳ ಬದಲಾದ ವರ್ತನೆ ಕಂಡು ಪ್ರಸಾದ್ ಗೆ ಆಶ್ಚರ್ಯವಾಗಿತ್ತು. ಅವನು ಪಾಯಸವನ್ನು ಸವಿಯುತ್ತಾ ಗೀತಾಳನ್ನು ಹೊಗಳಿದ. ಗೀತಾ ಥ್ಯಾಂಕ್ಸ್ ಹೇಳಿ ನಕ್ಕಳು. ಅವಳ ಮನದಲ್ಲಿ ಗೊಂದಲವಿತ್ತು. ಆದರೆ ಅದನ್ನು ಪ್ರಕಟಗೊಳಿಸಲಿಲ್ಲ.
ಮರುದಿನ ಭಾನುವಾರವಾಗಿತ್ತು. ಪ್ರಸಾದ್ ಸ್ಮಿತಾಳನ್ನು ಭೇಟಿಯಾಗಲು ಕಾಫಿಡೇಗೆ ಹೋಗಬೇಕಿತ್ತು. ಅವನು ಯಾವುದೊ ಹಾಡನ್ನು ಗುನುಗುಟ್ಟುತ್ತಾ ಡ್ರೆಸ್ ಮಾಡಿಕೊಂಡ ನಂತರ ಗೀತಾಗೆ ಪ್ರೊ.ಶ್ರೀನಿವಾಸ್ ಮನೆಗೆ ಹೋಗುತ್ತೇನೆಂದು ಹೇಳಿಹೋದ. ಮಗ ಭರತ್ ತಾನೂ ಅಪ್ಪನೊಂದಿಗೆ ಬರುತ್ತೇನೆಂದು ಹಟ ಹಿಡಿದ. ಸಂಜೆ ಅವನನ್ನು ಸುತ್ತಾಡಿಸುತ್ತೇನೆಂದು ಪ್ರಸಾದ್ ಸಮಾಧಾನಪಡಿಸಿದ.
ಪ್ರಸಾದ್ ಹೊರಟ ನಂತರ ಗೀತಾ ಭರತ್ ನನ್ನು ಪಕ್ಕದ ಮನೆಯಲ್ಲಿ ಬಿಟ್ಟು ಕೆಲಸದವಳಿಗೆ ಮಧ್ಯಾಹ್ನ ಬರಲು ಹೇಳಿದಳು. ಪ್ರಸಾದ್ ಸ್ಕೂಟರ್ ತೆಗೆದುಕೊಂಡು ಹೋಗಿದ್ದ. ಅವನು ಗೀತಾಳನ್ನು ಕಾರ್ ಬೇಕೆಂದು ಕೇಳಲಿಲ್ಲ. ಇದರಿಂದ ಗೀತಾಳಿಗೆ ತನ್ನ ಉದ್ದೇಶ ಸಾಧಿಸಿಕೊಳ್ಳಲು ಅನುಕೂಲವಾಯಿತು.
ಕಾಫಿಡೇಗೆ ಹೋದ ಗೀತಾ ಸದ್ದಿಲ್ಲದೆ ಪ್ರಸಾದ್ ನ ಹಿಂದಿನ ಸೀಟಿನಲ್ಲಿ ಕುಳಿತುಕೊಂಡಳು. ಅವಳು ಮುಖಕ್ಕೆ ಸೆರಗು ಹೊದ್ದಿದ್ದು, ಪ್ರಸಾದ್ ಮತ್ತು ಸ್ಮಿತಾರ ಮಾತುಗಳನ್ನು ಕೇಳಿಸಿಕೊಳ್ಳತೊಡಗಿದಳು.
“ನೀವು ಬಹಳ ಸುಂದರವಾಗಿದ್ದೀರಿ ಸ್ಮಿತಾಜಿ.”
“ನೀವೇನು ಕಡಿಮೆ ಇಲ್ಲ. ನೀವು ಚೆನ್ನಾಗಿದ್ದೀರಿ! ನನಗೆ `ನೀವು’ ಅನ್ಬೇಡಿ `ನೀನು’ ಅನ್ನಿ.”
“ಆಯ್ತು,”
“ಥ್ಯಾಂಕ್ಸ್,” ಎಂದು ಸ್ಮಿತಾ ಮಲ್ಲಿಗೆ ಬಿರಿದಂತೆ ನಕ್ಕಳು.
“ನೀನ್ಯಾಕೆ ಇದುವರೆಗೆ ಮದುವೆಯಾಗಿಲ್ಲ?”
“ಈಗ ನಿಮ್ಮನ್ನು ಮದುವೆಯಾಗಬೇಕು ಪ್ರಸಾದ್.”
“ನನ್ನನ್ನು ಹೇಗೆ ಮದುವೆಯಾಗ್ತೀಯಾ? ನನಗೆ ಈಗಾಗಲೇ ಮದುವೆಯಾಗಿದೆ.”
“ಇದೇನು ಹೇಳ್ತಿದ್ದೀರಿ? ನಿಮಗೆ ಮದುವೆ ಆಗಿದೇಂತ ನನಗೆ ಹೇಳಲೇ ಇರಲಿಲ್ಲ.”
“ನೀನು ಕೇಳಲಿಲ್ಲ, ನಾನು ಹೇಳಲಿಲ್ಲ. ನಾನು ನಿನ್ನನ್ನು ಒಬ್ಬ ಲವರ್ ನಂತೆ ತಿಳಿದು ಲವ್ ಮಾಡ್ತೀನಿ.”
ಪ್ರಸಾದ್ ಮತ್ತು ಸ್ಮಿತಾರ ಒಂದೊಂದು ಮಾತು ಗೀತಾಳ ಕಿವಿಗಳಲ್ಲಿ ಕಾದ ಸೀಸ ಹೊಯ್ದಂತಾಗಿತ್ತು. ಎದ್ದು ಸ್ಮಿತಾಳ ಬಳಿ ಹೋಗಿ ಕೆನ್ನೆಗೆ ಎರಡೇಟು ಕೊಡಬೇಕೆಂದು ಗೀತಾಗೆ ಅನ್ನಿಸಿತು. ಪ್ರಸಾದ್ ಸ್ಮಿತಾಳ ಕೈಯನ್ನು ಚುಂಬಿಸಿದಾಗ ಗೀತಾ ಸಮತೋಲನ ಕಳೆದುಕೊಂಡು ಸ್ಮಿತಾಳ ಬಳಿ ಹೋಗಿ ಅವಳ ಕೆನ್ನೆಗೆ ಎರಡೇಟು ಬಿಗಿದಳು.
ಪ್ರಸಾದ್ ಕಕ್ಕಾಬಿಕ್ಕಿಯಾದ. ಅವನು ತಡವರಿಸುತ್ತಾ, “ಗೀತಾ ನೀ….ನೀನು ಇ….ಇಲ್ಲಿಗೆ ಹೇಗೆ ಬಂದೆ ಯಾವಾಗ ಬಂದೆ?” ಎಂದ.
“ನೀವು ಬಂದಾಗಲೇ ಬಂದೆ,” ಗೀತಾ ಜೋರಾಗಿ ಹೇಳಿದಳು.
ಪ್ರಸಾದ್ ನ ಬಾಯಿಂದ ಮಾತೇ ಹೊರಡಲಿಲ್ಲ. ಗೀತಾ ಅವನ ಕೈಹಿಡಿದು, “ಪ್ರಸಾದ್, ನೀವು ಯಾವುದೇ ಗರ್ಲ್ ಫ್ರೆಂಡ್ ನ್ನು ಇಟ್ಟುಕೊಳ್ಳುವಂತಿಲ್ಲ. ನೀವು ಇವಳನ್ನು ಬಿಡಬೇಕು. ಹೀಗೆಲ್ಲಾ ಫ್ಲರ್ಟ್ ಮಾಡೋದು ಇನ್ನು ಸಾಕು. ಬೇಗ ಎದ್ದು ನನ್ನ ಜೊತೆ ಮನೆಗೆ ಬನ್ನಿ. ಅಲ್ಲೇ ತೀರ್ಮಾನ ಮಾಡೋಣ,” ಎಂದು ಹೇಳಿ ಪ್ರಸಾದ್ ನನ್ನು ಬಲವಂತವಾಗಿ ಕರೆದುಕೊಂಡು ಹೊರಟಳು.
ಮನೆ ತಲುಪಿದ ನಂತರ ಅವಳು ಅಡುಗೆಯವಳು ಬಂದಿದ್ದನ್ನು ಕಂಡು ಟೀ ಮಾಡಿಸಿಕೊಂಡು ಕುಡಿದಳು. ನಂತರ ಡ್ರಾಯಿಂಗ್ ರೂಮಿಗೆ ಹೋಗಿ ಸೋಫಾದಲ್ಲಿ ಕೂತಳು. ಅಡುಗೆಯವಳ ಎದುರಿಗೆ ಜಗಳ ಆಡುವುದು ಅವಳಿಗೆ ಇಷ್ಟ ಇರಲಿಲ್ಲ.
ಆಗ ಪ್ರಸಾದ್ ಗೆ ಗೀತಾಳನ್ನು ಎದುರಿಸುವಷ್ಟು ಸಾಹಸ ಇರಲಿಲ್ಲ. ಅವನು ಮುಖ ಸಪ್ಪೆ ಮಾಡಿಕೊಂಡು ಗೀತಾಳ ಎದುರಿಗೆ ಬಂದು ಕುಳಿತ.
ಅಡುಗೆಯವಳು ಹೋದನಂತರ ಗೀತಾ ಪ್ರಸಾದ್ ನ ಎದುರಿಗೆ ನಿಂತಳು ಮತ್ತು ಮಂದ ಸ್ವರದಲ್ಲಿ ಕೇಳಿದಳು. “ಇದೆಲ್ಲಾ ಏನು ಪ್ರಸಾದ್? ನೀವು ಒಬ್ಬ ತಂದೆ, ಒಬ್ಬ ಗಂಡ, ಒಬ್ಬ ಲೆಕ್ಚರರ್ ಆಗಿದ್ದೀರಿ. ಆದರೆ ಪೋಕರಿಗಳು, ಲಫಂಗರ ತರಹ ಇಂಟರ್ ನೆಟ್ ನಲ್ಲಿ ಹುಡುಗಿಯರ ಜೊತೆ ಚಾಟಿಂಗ್ ಮಾಡ್ತೀರಿ. ನಿಮಗೆ ಮಾನ ಮರ್ಯಾದೆ, ಗೌರವ ಯಾವುದೂ ಇಲ್ಲ. ಯಾಕೆ ಈ ರೀತಿ ಮಾಡ್ತಿದ್ದೀರಿ?” ಎಂದು ಕೇಳಿ ಸ್ವಲ್ಪ ಹೊತ್ತು ಅವನನ್ನೇ ನೋಡುತ್ತಿದ್ದಳು. ಪ್ರಸಾದ್ ಉತ್ತರಿಸಲಿಲ್ಲ.
ಗೀತಾ ಕೋಪದಿಂದ ಎದ್ದು ಹೊರನಡೆದಳು. ಸಂಜೆಯವರೆಗೂ ಇದೇ ವಾತಾವರಣವಿತ್ತು. ಮಗನೂ ಒಮ್ಮೆ ಅಪ್ಪನ ಬಳಿ, ಒಮ್ಮೆ ಅಮ್ಮನ ಬಳಿ ಹೋಗಿ ಮಾತನಾಡಿಸಲು ಪ್ರಯತ್ನಿಸುತ್ತಿದ್ದ. ಒಮ್ಮೊಮ್ಮೆ ಟಿವಿಯ ಮುಂದೆ ಕಲ್ಲಿನ ಮೂರ್ತಿಯಂತೆ ಕೂತಿರುತ್ತಿದ್ದ. ಆಗಾಗ್ಗೆ ಅಪ್ಪ ಅಮ್ಮನ ಬಳಿ ಹೋಗಿ, “ಏನಾಗಿದೆ ನಿಮ್ಮಿಬ್ಬರಿಗೂ? ಯಾಕೆ ಮಾತಾಡ್ತಿಲ್ಲ? ಇವತ್ತು ಭಾನುವಾರ. ನನ್ನ ಜೊತೆ ಯಾಕೆ ಆಡ್ತಿಲ್ಲ?” ಎಂದು ಕೇಳುತ್ತಿದ್ದ.
ಇದ್ದಕ್ಕಿದ್ದಂತೆ ಅಮ್ಮನ ಬಳಿ ಹೋಗಿ ಅವಳಿಗೆ ತೆಕ್ಕೆಬಿದ್ದು ಅವಳ ಗಲ್ಲ ಹಿಡಿದು ಕೇಳಿದ, “ಮಮ್ಮಿ, ಅಪ್ಪ ನಿನಗೆ ಮತ್ತೆ ಹೊಡೆದ್ರಾ? ನಿಜ ಹೇಳು ಅಪ್ಪ ಕೆಟ್ಟೋರು. ನಾವು ಅವರನ್ನು ಬಿಟ್ಟುಬಿಡೋಣ. ಬೇರೆ ಮನೆಗೆ ಹೋಗೋಣ.”
ಗೀತಾ ಮೌನವಾಗಿದ್ದಳು. ಅವಳು ಪ್ರಸಾದ್ ನಿಂದ ಉತ್ತರ ನಿರೀಕ್ಷಿಸುತ್ತಿದ್ದಳು. ಪ್ರಸಾದ್ ಸಂಜೆ ಭಾರವಾದ ಹೆಜ್ಜೆಗಳನ್ನು ಇಡುತ್ತಾ ಗೀತಾಳ ಬಳಿ ಬಂದ. ನಂತರ ಅವಳ ಕೈಗಳನ್ನು ತನ್ನ ಕೈಗಳಲ್ಲಿ ತೆಗೆದುಕೊಂಡು ಹೇಳಿದ, “ಪ್ಲೀಸ್, ನನ್ನನ್ನು ಕ್ಷಮಿಸು ಗೀತಾ. ನನಗೆ ಬಹಳ ಬೇಸರವಾಗಿತ್ತು.”
“ಯಾಕೆ ಬೇಸರವಾಗಿತ್ತು?” ಗೀತಾ ಕೈಗಳನ್ನು ಬಿಡಿಸಿಕೊಳ್ಳುತ್ತಾ ಕೇಳಿದಳು.
“ಏಕೆಂದರೆ ನಿನ್ನ ಸ್ವಭಾವ ಬಹಳ ಸೂಕ್ಷ್ಮವಾಗಿರುತ್ತದೆ. ನಿನ್ನಲ್ಲಿ ಬಹಳ ಅಹಂ ಇದೆ. ಪ್ರತಿಯೊಂದಕ್ಕೂ ನೀನು ವಾದ ಮಾಡ್ತೀಯ. ಮಾತುಮಾತಿಗೂ ತವರು ಮನೆಯವರ ಸಪೋರ್ಟ್ ತಗೋತೀಯ.”
“ಸರಿ, ನನ್ನ ಸ್ವಭಾವ ಒರಟು. ನನ್ನದು ತಪ್ಪಾಗಿದೆ. ಆದರೆ ನೀವು ಬಹಳ ಕೆಟ್ಟ ದಾರಿ ಹಿಡಿದು ನಿಮ್ಮ ಚಾರಿತ್ರ್ಯ, ನಿಮ್ಮ ಗೌರವಾನ ಮಣ್ಣುಪಾಲು ಮಾಡಿದ್ದೀರಿ. ನೀವು ಸ್ವತಃ ಹಾಳಾಗುತ್ತಿದ್ದೀರಿ, ನಿಮ್ಮನ್ನು ನೋಡಿ ಮಗನೂ ಅದೇ ದಾರಿ ಹಿಡೀತಾನಷ್ಟೆ.”
ಪ್ರಸಾದ್ ಕೈ ಜೋಡಿಸಿ ಕ್ಷಮೆ ಯಾಚಿಸುತ್ತಾ “ಪ್ಲೀಸ್ ಗೀತಾ, ನನ್ನನ್ನು ಕ್ಷಮಿಸು. ಇನ್ನು ಮುಂದೆ ಇಂತಹ ತಪ್ಪು ಮಾಡಲ್ಲ,” ಎಂದ.
ಗೀತಾ ಹತ್ತಿರ ಬಂದು ಮೆಲ್ಲಗೆ ಹೇಳಿದಳು, “ಆಯ್ತು, ಕ್ಷಮಿಸಿದ್ದೀನಿ. ಆದರೆ ಒಂದು ಷರತ್ತು. ನೀವು ಮೊದಲಿನಂತಾಗಬೇಕು.” ಪ್ರಸಾದ್ ತನಗೊಂದು, ಗೀತಾಗೊಂದು ಕಪ್ ಕಾಫಿ ಮಾಡಿ ತಂದು, “ಕ್ಷಮಿಸಿದ್ದಕ್ಕೆ ಥ್ಯಾಂಕ್ಸ್. ತಗೋ ಕಾಫಿ ಕುಡಿ,” ಎಂದ.
ನಂತರ ಇಬ್ಬರೂ ಹಳೆಯದನ್ನು ಮರೆಯಲು ಪ್ರಯತ್ನಿಸುತ್ತಾ ಕಾಫಿ ಕುಡಿಯತೊಡಗಿದರು.
ಭರತ್ ಕೇರಂ ಬೋರ್ಡ್ ನಲ್ಲಿ ಆಟವಾಡುತ್ತಿದ್ದ. ಅಪ್ಪ ಅಮ್ಮನೂ ತನ್ನೊಂದಿಗೆ ಆಡುತ್ತಾರೆಂದು ಆಸೆಯಿಂದಿದ್ದ.