ಮಳೆಗಾಲ ಒಂದೆಡೆ ನಮಗೆ ಖುಷಿಯ ಸಿಂಚನವನ್ನುಂಟು ಮಾಡಿದರೆ, ಇನ್ನೊಂದೆಡೆ ಭಾರಿ ಮಳೆಯಿಂದಾಗಿ ಮನೆಯಲ್ಲಿ ಆರ್ದ್ರತೆಯ ದುರ್ಗಂಧ ಪಸರಿಸಲಾರಂಭಿಸುತ್ತದೆ. ಅಡುಗೆಮನೆಯಲ್ಲಿರುವ ಆಹಾರ ಪದಾರ್ಥಗಳು ಸರಿಯಾದ ಉಸ್ತುವಾರಿಯಿಲ್ಲದೆ ಬೇಗನೇ ಹಾಳಾಗುತ್ತವೆ. ಲೋಹದ ಪದಾರ್ಥಗಳು ಅಂದರೆ ತವಾ, ಕಡಾಯಿ, ಚಾಕು ಮುಂತಾದವು ತುಕ್ಕು ಹಿಡಿಯುತ್ತವೆ.

1 ಈ ಹವಾಮಾನದಲ್ಲಿ ಭಾರವಾದ ಪರದೆಗಳನ್ನು ತೆಗೆದು ಹಗುರವಾದ ಪೇಸ್ಟಲ್ ಕಲರಿನ ಪರದೆಗಳನ್ನು ಹಾಕಿ.

2 ಕೋಣೆಯಲ್ಲಿ ಕಾರ್ಪೆಟ್‌ ಹಾಸಿದ್ದರೆ ಅದರ ಕೆಳಭಾಗದಲ್ಲಿ ವರ್ತಮಾನ ಪತ್ರಿಕೆಗಳನ್ನು ಹರಡಿ. ಏಕೆಂದರೆ ವರ್ತಮಾನ ಪತ್ರಿಕೆಗಳು ತೇವಾಂಶ ಹೀರಿಕೊಳ್ಳುತ್ತವೆ.

3 ಮಳೆಗಾಲದಲ್ಲಿ ಕಿಟಕಿ ಬಾಗಿಲುಗಳು ಹಿಗ್ಗಿದಂತಾಗಿದ್ದರೆ ಅದರ ಮೇಲೆ ಮೇಣ ಸವರಿ. ಅವು ಸುಲಭವಾಗಿ ಕುಳಿತುಕೊಳ್ಳುತ್ತವೆ. ಮಳೆ ನೀರಿನಿಂದ ಕಿಟಕಿ ಗಾಜುಗಳು ಕೊಳೆಯಾಗಿದ್ದರೆ ವರ್ತಮಾನ ಪತ್ರಿಕೆಯ ಮೇಲೆ ಸ್ವಲ್ಪ ವಿನಿಗರ್‌ ಸಿಂಪಡಿಸಿಕೊಂಡು ಒರೆಸಿ.

4 ಪೀಠೋಪಕರಣಗಳು, ಪುಸ್ತಕದ ರಾಕ್‌ ಗಳು, ಟಿ.ವಿ. ಮುಂತಾದವು ಕಿಟಕಿಯ ಹತ್ತಿರವೇ ಇಟ್ಟಿದ್ದರೆ, ಅವನ್ನು ಕಿಟಕಿಯಿಂದ ಸ್ವಲ್ಪ ದೂರ ಇಡಿ.

5 ಮರದ ಪೀಠೋಪಕರಣಗಳ ಜೊತೆಗೆ ಕಬ್ಬಿಣದ ಕಪಾಟುಗಳಿಂದಲೂ ತೇವಾಂಶದ ದುರ್ಗಂಧ ಬರುತ್ತದೆ. ಹೀಗಾಗಿ ಕಪಾಟಿನಲ್ಲಿ ತಂಪು ಬಟ್ಟೆಗಳನ್ನು ಇಡಲೇಬೇಡಿ. ಯಾವ ದಿನ ಹವಾಮಾನ ಉತ್ತಮವಾಗಿರುತ್ತದೋ, ಆ ದಿನ ಕಪಾಟಿನಿಂದ ಬಟ್ಟೆಗಳನ್ನು ಹೊರತೆಗೆದು ಅದನ್ನು ಹಾಗೆಯೇ ಖಾಲಿಯಾಗಿಡಿ. ಅಲ್ಲಿನ ತೇವಾಂಶ ಕಡಿಮೆಯಾಗುತ್ತದೆ. ಇದರ ಹೊರತಾಗಿ ಕಪಾಟಿನಲ್ಲಿ ದಾರಕ್ಕೆ 10-12 ಚೋಕ್‌ ಗಳನ್ನು ಕಟ್ಟಿಡಿ. ಏಕೆಂದರೆ ಅವು ತೇವಾಂಶ ಹೀರಿಕೊಳ್ಳುತ್ತವೆ. ಓಡೋನಿಲ್ ‌ಅಥವಾ ಕರ್ಪೂರದ ಒಂದೆರಡು ಬಿಲ್ಲೆಗಳನ್ನು ಕೂಡ ಇಡಬಹುದು. ಇದರಿಂದ ತೇವಾಂಶ ನಿವಾರಣೆಯಾಗುತ್ತದೆ ಹಾಗೂ ಕೀಟಾಣುಗಳಿಂದ ಬಟ್ಟೆಗಳ ರಕ್ಷಣೆಯೂ ಆಗುತ್ತದೆ.

6 ಕಪಾಟು ತೆರೆಯುತ್ತಿದ್ದಂತೆಯೇ ಸುಗಂಧಮಯ ವಾಸನೆ ಹೊರಸೂಸಬೇಕೆಂದರೆ ಸುಗಂಧ ದ್ರವ್ಯಗಳ ಶೀಶೆಗಳನ್ನು, ಅಗರಬತ್ತಿ, ಸೋಪ್‌ ಗಳ ಖಾಲಿ ಬಾಕ್ಸ್ ಗಳನ್ನು ಬಟ್ಟೆಗಳ ಮಧ್ಯೆ ಇಡಿ.

7 ತೇವಾಂಶದ ಕಾರಣದಿಂದ ಸೋಫಾ ಮುಂತಾದವುಗಳ ದಿಂಬುಗಳು ಹಳದಿ ಬಣ್ಣಕ್ಕೆ ತಿರುಗುತ್ತವೆ. ಹೀಗಾಗದಂತೆ ನೋಡಿಕೊಳ್ಳಲು ಅವಕ್ಕೆ ಪ್ಲಾಸ್ಟಿಕ್‌ ಕವರ್‌ ಹಾಕಿಡಿ. ಇದರಿಂದ ತೇವಾಂಶದ ವಾಸನೆ ಬರುವುದಿಲ್ಲ.

8 ವಾತಾವರಣ ತಿಳಿಯಾಗಿರುವ ದಿನ ಮನೆಯಲ್ಲಿನ ಎಲ್ಲ ಕಿಟಕಿ ಬಾಗಿಲುಗಳನ್ನು ತೆರೆದಿಟ್ಟು. ತಾಜಾ ಗಾಳಿ ಒಳಬರುವಂತೆ ಮಾಡಿ.

9 ಮನೆಯಲ್ಲಿ ಏರ್‌ ಕಂಡೀಷನರ್‌ ವ್ಯವಸ್ಥೆ ಅಳವಡಿಸಿದ್ದಲ್ಲಿ, ವಾರಕ್ಕೆರಡು ಸಲ ಅದರ ಮೆಶ್‌ ನ್ನು ಹೊರತೆಗೆದು ಸ್ವಚ್ಛಗೊಳಿಸಿ.

10 ನಿಮ್ಮ ಮಹತ್ವದ ದಾಖಲೆಗಳು ಅಂದರೆ ಜನ್ಮದಾಖಲೆ, ಪಾಸ್‌ ಪೋರ್ಟ್‌, ಜೀವವಿಮೆ ಪಾಲಿಸಿ ಮುಂತಾದವುಗಳನ್ನು ವಾಟರ್ ಪ್ರೂಫ್‌ ಬಾಕ್ಸ್ ನಲ್ಲಿಡಿ.

11 ಚರ್ಮದ ಉತ್ಪನ್ನಗಳ ಮೇಲೆ ಸ್ವಲ್ಪ ಅಗಸೆ ಎಣ್ಣೆಯನ್ನು ಸವರಿದರೆ, ಅವುಗಳ ಮೇಲೆ ಬೂಷ್ಟು ಬರುವುದು ಕಡಿಮೆಯಾಗುತ್ತದೆ ಹಾಗೂ ಕಾಲಿಗೆ ತಗಲುವುದೂ ಕಡಿಮೆಯಾಗುತ್ತದೆ. ಚಪ್ಪಲಿ ಹಾಗೂ ಶೂಗಳು ಮಳೆಯಲ್ಲಿ ನೆನೆದಿದ್ದರೆ, ಅವುಗಳ ತೇವಾಂಶ ಹೋಗಲಾಡಿಸಲು ಅವನ್ನು ಒಂದು ಪೇಪರ್‌ ನಲ್ಲಿ ಸುತ್ತಿಡಿ.

12 ನಿರಂತರ ತೇವಾಂಶದಿಂದ ಬಾಥ್‌ ರೂಮಿನಿಂದ ವಿಚಿತ್ರ ಬಗೆಯ ವಾಸನೆ ಹೊರಹೊಮ್ಮುತ್ತದೆ. ಹೀಗಾಗಿ ರಾತ್ರಿ ಹೊತ್ತು ಬಾಥ್‌ ರೂಮಿನಲ್ಲಿ ಬ್ಲೀಚಿಂಗ್‌ ಪೌಡರ್‌ ಸಿಂಪಡಿಸಿ, ಮುಂಜಾನೆ ಪೊರಕೆಯಿಂದ ಸ್ವಚ್ಛಗೊಳಿಸಿ. ಬಾಥ್‌ ರೂಮ್ ಸ್ವಚ್ಛಗೊಂಡು ಫಳಫಳ ಹೊಳೆಯುತ್ತದೆ. ಜೊತೆಗೆ ದುರ್ವಾಸನೆಯೂ ಬರದು. ಬ್ಲೀಚಿಂಗ್‌ ಪೌಡರ್‌ ನ್ನು ಅಡುಗೆಮನೆಯ ನೆಲ ಹಾಗೂ ಸಿಂಕ್ ಸ್ವಚ್ಛಗೊಳಿಸಲು ಕೂಡ ಬಳಸಬಹುದು.

13 ಈ ಹವಾಮಾನದಲ್ಲಿ ತವಾ, ಚಾಕು, ಕಡಾಯಿ ಮುಂತಾದವುಗಳನ್ನು ತೊಳೆದಾಗ ತುಕ್ಕು ಹಿಡಿಯುತ್ತದೆ. ಹೀಗಾಗಿ ಅವನ್ನು ತೊಳೆದು ಒರೆಸಿದ ಬಳಿಕ ಅವುಗಳ ಮೇಲೆ ಸ್ವಲ್ಪ ಎಣ್ಣೆ ಸವರಿ. ಆಗ ತುಕ್ಕು ಹಿಡಿಯುವುದಿಲ್ಲ.

14 ಮನೆಯನ್ನು ಸುವಾಸನಾಭರಿತವಾಗಿಡಲು ಹತ್ತಿಯ ತುಂಡನ್ನು ನಿಮಗಿಷ್ಟವಾಗುವ ಸುಗಂಧ ದ್ರವ್ಯದಲ್ಲಿ ಅದ್ದಿ ಅದನ್ನು ಟ್ಯೂಬ್ ಲೈಟ್‌ ಮೇಲಿಡಿ. ಟ್ಯೂಬ್‌ ಲೈಟ್‌ ಆನ್‌ ಆದಾಗ ಕೋಣೆಯ ತುಂಬಾ ಮಧುರ ಸುವಾಸನೆ ಹರಡಿಕೊಳ್ಳುತ್ತದೆ.

15 ನೊಣ ಹಾಗೂ ಸೊಳ್ಳೆಗಳಿಂದ ನಿಮ್ಮನ್ನು ರಕ್ಷಿಸಿಕೊಳ್ಳಿ. ಮನೆಯ ವಾತಾರಣ ಸುಗಂಧಮಯವಾಗಲು ಹಾಗೂ ನೊಣ ಸೊಳ್ಳೆಗಳಿಂದ ರಕ್ಷಿಸಿಕೊಳ್ಳಲು ಮನೆಯಲ್ಲಿ ಹರ್ಬಲ್ ಸ್ಪ್ರೇಯೊಂದನ್ನು ತಯಾರಿಸಿಕೊಳ್ಳಿ. 2 ಲೀಟರ್‌ ನೀರಿನಲ್ಲಿ ಅರ್ಧ ಕಿಲೋದಷ್ಟು ಬೇವಿನ ಸೊಪ್ಪು ಹಾಗೂ 5 ಗ್ರಾಂನಷ್ಟು ಕರ್ಪೂರ ಹಾಕಿಕೊಂಡು ಪಾತ್ರೆಗೆ ಮುಚ್ಚಳ ಹಾಕಿ ಕುದಿಸಿ. ಕುದಿಸಿದ ನೀರು ಅರ್ಧದಷ್ಟು ಪ್ರಮಾಣಕ್ಕೆ ಬಂದಾಗ ಕೆಳಗೆ ಇಳಿಸಿ ಆರಲು ಬಿಡಿ. ನಂತರ ಅದರಲ್ಲಿ ಕೆಲವು ಹನಿ ಎಸಿನ್ಶಿಯಲ್ ಆಯಿಲ್ ‌ಹಾಕಿ ಸ್ಪ್ರೇ ಶೀಶೆಯಲ್ಲಿ ತುಂಬಿ ಅದನ್ನು ಸ್ಪ್ರೇ ಮಾಡಿದಾಗ ಸುವಾಸನೆಯೂ ಹೊರಹೊಮ್ಮುತ್ತದೆ ಹಾಗೂ ಸೊಳ್ಳೆ ನೊಣಗಳ ಉಪಟಳ ಕಡಿಮೆಯಾಗುತ್ತದೆ.

ರಮಾಮಣಿ

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ